• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!

By ಶೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ಮಾತು ಕಥೆ ಒಂದು ನಾಯಿಯ ಸುತ್ತ. ಹತ್ತರಿಂದ ಹದಿನಾಲ್ಕು ವರ್ಷ ಬದುಕಿರುವ ಶ್ವಾನದ ಬಗ್ಗೆ ಮಾತು. ಯಾವ ರೀತಿ finger print ಎಂಬುದು ಇಬ್ಬರು ಮನುಷ್ಯರಲ್ಲಿ ಒಂದೇ ರೀತಿ ಇರುವುದಿಲ್ಲವೋ ಹಾಗೆ ಎರಡು ನಾಯಿಗಳ ಮೂಗು ಒಂದೇ ರೀತಿ ಇರೋಲ್ಲ.

ಮನುಷ್ಯನಿಗೂ ನಾಯಿಗೂ ಇರುವ ಬಾಂಧವ್ಯ ಕನಿಷ್ಠ ಅಂದ್ರೂ 14 ಸಾವಿರ ವರ್ಷಗಳಷ್ಟಂತೆ. ಇನ್ನೊಂದು ಕಡೆ ಹೇಳ್ತಾರೆ ಕ್ರಿ.ಪೂ 326ರಲ್ಲೇ ಮನುಷ್ಯನಿಗೆ ಶ್ವಾನದೊಡನೆ ಬಾಂಧವ್ಯ ಇತ್ತು ಎನ್ನುತ್ತಾರೆ. ಬಡವನ ಮನೆ ಜೇಡಕ್ಕೂ ಸಿರಿವಂತರ ಮನೆ ನಾಯಿಗೂ ಊಟಕ್ಕೇನೂ ಕೊರತೆ ಇಲ್ಲವಂತೆ. ಇದೆಲ್ಲಾ ಬಿಡಿ, ಶ್ವಾನಕ್ಕೋ ಸಿನಿಮಾಕ್ಕೂ ಇರೋ ನಂಟಿನ ಬಗ್ಗೆ ಒಂದಷ್ಟು ವಿಷಯ ನೋಡೋಣ.

ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ!

ಜಗ್ಗೇಶ್ ಸಿನಿಮಾದ 'ಬೌ ಬೌ ಬಿರಿಯಾನಿ' ಗೊತ್ತಾ? ಒಂದು ಪ್ಲೇಟಿಗೆ ಹನ್ನೆರಡೇ ರೂಪಾಯಿ ಎಂದಾಗ ಖುಷಿಯಾಗಿ ಮೂಗುಮಟ್ಟ ತಿಂದು ಬೀದಿಯಲ್ಲಿ ಹಾದು ಬರುವಾಗ ನಾಯಿಯಂತೆ ಬೊಗುಳುವಂತೆ ಆಗುತ್ತದೆ. ಯಾರೋ ಹೇಳಿದ ಮೇಲೆ ಅರಿವಾಗುತ್ತೆ ಅದು ನಾಯಿ ಮಾಂಸದ ಬಿರಿಯಾನಿ ಅಂತ. ಮುಂದೇನು ಅಂತ ನನಗೂ ಗೊತ್ತಿಲ್ಲ!

ಭಕ್ತ ಕುಂಬಾರ ಅಂಗಡಿಯಲ್ಲಿ ನಿಂತು ಮಡಕೆ ವ್ಯಾಪಾರ ಮಾಡುವ ಸಮಯದಲ್ಲಿ ಅವನ ಅಂಗಡಿಗೆ ನಾಯಿಯೊಂದು ನುಗ್ಗಿ ಅವನ ಬುತ್ತಿಯನ್ನು ಕಚ್ಚಿಕೊಂಡು ಹೋಗುತ್ತದೆ. ಕುಂಬಾರ ಅದರ ಹಿಂದೆಯೇ ಓಡಿ, ಆ ಬುತ್ತಿಯನ್ನು ಬಿಚ್ಚಿ ರೊಟ್ಟಿಯನ್ನು ನಾಯಿಗೆ ತಿನ್ನುವಂತೆ ಅಣಿಮಾಡಿಕೊಳ್ಳುವುದೇ ಅಲ್ಲದೆ, ತಟ್ಟೆಯಲ್ಲಿ ನೀರನ್ನೂ ತಂದು ಉಣಿಸುವ ದೃಶ್ಯ ವಿಶೇಷವಾಗಿದೆ.

ಪ್ರೊಫೆಸರ್ ಸಾಕಿದ ಲಾಸಿಯ ನಾಯಿ ಪಾಡು!

ಪಕ್ಕದ ಮನೆಯ ಸಂಗೀತಗಾರನಿಗೆ ಬುದ್ದಿ ಕಲಿಸಲು ತೆನಾಲಿರಾಮ (ನರಸಿಂಹರಾಜು) ಕರಿನಾಯಿಯನ್ನು ಬಿಳೀ ನಾಯಿಯನ್ನಾಗಿ ಮಾಡುವ ಯತ್ನ ಬಲು ಸೊಗಸು. ಗಣೇಶನ ಮದುವೆ ಚಿತ್ರದಲ್ಲಿ ನಾಯಕ ಗಣೇಶ ಒಂದು ನಾಯಿಗೆ 'ರಮಣಮೂರ್ತಿ' ಅಂತ ವಠಾರದ owner'ನ ಹೆಸರಿಟ್ಟು ಕರೆಯೋ ದೃಶ್ಯ ಸಕತ್ ಮಜಾ! ಭೂಲೋಕದಲ್ಲಿ ಯಮರಾಜ ಸಿನಿಮಾದ 'ಭೈರಾ ತಗಲ್ಕೋ' ನೆನಪಿದೆಯಾ? ಜಯಂತಿ ಅಭಿನಯದ ಶ್ರೀಮಂತನ ಮಗಳು ಹಾಡು?

ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?

ಮನುಷ್ಯನಿಗೂ ನಾಯಿಗೂ ಇರೋ ಬಾಂಧವ್ಯದ ಬಗ್ಗೆ ವ್ಯಂಗ್ಯಭರಿತವಾಗಿಯೂ ಹೇಳುತ್ತಾರೆ. ಕೆಲವರನ್ನು ಕಂಡರೆ ನಾಯಿಗೆ ಏನೋ ಪ್ರೀತಿ. ಎಲ್ಲಿದ್ದರೂ ಬಂದು ಕಚ್ಚುತ್ತೆ! ಒಂದು ಕಾಲಕ್ಕೆ ಹದಿನಾಲ್ಕು ಇಂಜೆಕ್ಷನ್ ಇದ್ದಿದ್ದು ಈಗ ಎರಡಕ್ಕೆ ಇಳಿದಿದೆಯಂತೆ. ರಾತ್ರಿ ವೇಳೆಗೆ ಬಸ್ ಇಳಿದು ಮನೆಗೆ ಬರುವ ಹಾದಿಯಲ್ಲಿ ಎಷ್ಟೋ ಸಾರಿ ಈ ಬೀದಿ ನಾಯಿಗಳು ನಮ್ಮೊಡನೆ ಯುದ್ಧಕ್ಕೇ ಬರುತ್ತವೆ. ಕರೀ ನಾಯಿಯಾದರಂತೂ ಇನ್ನೂ ದಿಗಿಲು. ಬೀದಿಯಲ್ಲೇ ಮಲಗಿರೋ ನಾಯಿಯನ್ನು ಮೆಟ್ಟಿ ಕಚ್ಚಿಸಿಕೊಂಡವರೇ ಬಹಳ. ರಾತ್ರಿ ವೇಳೆ ಒಂದು ನಾಯಿ ಬೊಗಳಿದರೆ ಅದೊಂದು ರೀತಿ ಪ್ರತಿಧ್ವನಿಯಂತೆ ಮತ್ತೊಂದು ಮಗದೊಂದು ಅಂತ ಎಲ್ಲೆಲ್ಲೂ ಬೊಗಳುವಿಕೆಯೇ ಕೇಳಿಸುತ್ತದೆ.

ಇಷ್ಟಕ್ಕೂ ಈ ನಾಯಿಗಳು ಬೊಗಳೋದಾದ್ರೂ ಏತಕ್ಕೆ? ಸಿಂಪಲ್, ಮಗು ಅಳೋದಾದ್ರೂ ಏತಕ್ಕೆ? ಅಷ್ಟೇ ವಿಷಯ! ತನಗೆ ಬೇಜಾರಾದಾಗ, ತನ್ನ ಕಡೆ ಯಾರೂ ಗಮನ ಕೊಡುತ್ತಿಲ್ಲ ಎಂದಾಗ, ಯಾರಾದರೂ ಮನೆಯ ಸುತ್ತಮುತ್ತ ಬಂದರು ಎಂದಾಗ ಹೀಗೆ ಏನೆಲ್ಲಾ ಕಾರಣಗಳಿಗೆ ಬೊಗಳುತ್ತವೆ.

ನಾಯಿಗಳಲ್ಲಿ ಎಷ್ಟು ಬಗೆಯ ನಾಯಿಗಳು ಇವೆ ಎಂದರೆ World canine organization ಅವರು 343 ಬಗೆ ಎನ್ನುತ್ತಾರೆ. ಎಲ್ಲ ರೀತಿಯ ನಾಯಿಗಳು ಎಲ್ಲ ದೇಶಗಳಲ್ಲೂ ಇರುವುದಿಲ್ಲ. ಕನ್ನಡದಲ್ಲೇ ಹೇಳೋದಾದ್ರೆ ಬೇಟೆ ನಾಯಿ, ಕಜ್ಜಿ ನಾಯಿ, ಜೂಲ್ ನಾಯಿ ಅಂತೆಲ್ಲಾ ಹೇಳಬಹುದು. ಅದನ್ನೇ ಆಂಗ್ಲದಲ್ಲಿ ಹೇಳಿದರೆ ಅವು ಶ್ರಿಮದ್ಗಾಂಭೀರ್ಯ ತೋರಿಸಿದಂತೆ ಕೇಳುತ್ತದೆ "hound, pomeranian, chihuahua, labrador ಅಂತ ಹೇಳ್ಕೊಂತಾ ಹೋಗಬಹುದು.

ಮನೆಯ ಮಕ್ಕಳು ಕಾಲೇಜು ಮತ್ತು ನಂತರದ ಜೀವನಕ್ಕೆ ಮನೆ ಬಿಟ್ಟು ತೆರಳಿದರು ಎಂದರೆ ಮನೆಯಲ್ಲಿ ಉಳಿಯೋದು ಗಂಡ ಹೆಂಡತಿ ಮಾತ್ರ. ಬೇಸರ ಕಳೆಯಲೆಂದು 'empty nesters' ಒಂದು ನಾಯಿಯನ್ನು ಕೊಂಡು ತರುವುದು ಇಂಥಾ ಸಮಯದಲ್ಲಿ ಸಾಮಾನ್ಯ. ಕೆಲವರ ಮನೆಗಳಲ್ಲಿ ಮಕ್ಕಳೇ ಇಲ್ಲದೆ ಮೂರು ನಾಲ್ಕು ನಾಯಿಗಳು ಇರುವುದನ್ನೂ ಕಂಡಿದ್ದೇನೆ. ಸರ್ವೇ ಸಾಮಾನ್ಯ ಎಂದರೆ ಮಕ್ಕಳೊಂದಿಗೆ ಒಂದು ನಾಯಿಯೂ ಆ ಮನೆಯ ಸದಸ್ಯನಾಗಿ ಬೆಳೆಯೋದು. ಹೀಗೆ ಬೆಳೆವ ಆ ನಾಯಿ ಹೊರಗಿನಿಂದ ಬಂದ ಮನೆಯ ಸದಸ್ಯರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸುತ್ತದೆ ಎಂದರೆ ಹೇಳಲು ಸಾಧ್ಯವಿಲ್ಲ.

ನಾಯಿಯ ಯಜಮಾನರು ತಮ್ಮ ಮನೆಯ ನಾಯಿಯ ಬಗ್ಗೆ ಮಾತನಾಡುವಾಗ "ಅವನು, ಅವಳು" ಎಂದೇ ಸಂಬೋಧಿಸುತ್ತಾರೆ. ಅದನ್ನು ಪ್ರಾಣಿ ಎಂದು ಕಾಣುವುದಿಲ್ಲ. ಮಳೆ ಇರಲಿ, ಗಾಳಿ ಇರಲಿ, ಚಳಿ ಇರಲಿ ಆ ನಾಯಿಯನ್ನು ಹೊರಗೆ ಓಡಾಡಿಸಲು ಕರೆದೊಯ್ಯಲೇ ಬೇಕು. ಹಾಗೆ ನಡೆದಾಡುವಾಗಲೇ ಆ ನಾಯಿಯ ಮಲ-ಮೂತ್ರ ವಿಸರ್ಜನೆಯೂ ನಡೆಯುತ್ತದೆ. ಈ ದೇಶದಲ್ಲಿ ಶ್ವಾನ ಪಾಲಕರು ಈ ರೀತಿ ವಾಕಿಂಗ್ ಹೋಗುವ ಮುನ್ನ ಕೈಯಲ್ಲೊಂದು ಪ್ಲಾಸ್ಟಿಕ್ cover ಕೂಡ ಕೊಂಡೊಯ್ಯುತ್ತಾರೆ. ಬೀದಿಯಲ್ಲಿ ಆದ ಮಲವನ್ನು ಬಳಿದು ತರಲು. ಅದೇ ರೀತಿ ವಾಕಿಂಗ್ ಹಾದಿಯಲ್ಲೂ ಹಲವು ಬಾರಿ ಇಂಥಾ ಪ್ಲಾಸ್ಟಿಕ್ ಕವರ್ ಇಟ್ಟಿರುವ ಡಬ್ಬಗಳನ್ನು ಕಾಣಬಹುದು.

ಇಲ್ಲಿ ಎಲ್ಲರೂ ಹೀಗೆಯೇ ಮಾಡುತ್ತಾರೆ ಅಂತಲ್ಲ. ಹಲವರು ಬೇಕಾದ್ದು ಕಡೆ ಮಾಡ್ಕೋ ಅನ್ನೋ ಬೇಜವಾಬ್ದಾರಿಯನ್ನು ತೋರುತ್ತಾರೆ. ಎಷ್ಟೇ ಆಗಲಿ ಮನುಷ್ಯರಷ್ಟೇ ನೋಡಿ. ಮತ್ತೆ ಕೆಲವರು ತಮ್ಮ ನಾಯಿಗಳಿಗೆ 'potty training' ಮಾಡಿಸಿರುತ್ತಾರೆ. ಮನೆಯಲ್ಲಿ ಮುಗಿಸಿಕೊಂಡೇ ಹೊರಗೆ ಕರೆದು ತರುತ್ತಾರೆ.

ಶ್ವಾನ ಹೊಂದಿರುವ ಮನೆಯ ಜನ ಹಲವು ದಿನ ಎಲ್ಲೋ ಹೋಗಬೇಕಾಗುತ್ತದೆ ಎಂದಾಗ ತಮ್ಮ ನಾಯಿಯನ್ನು ನೋಡಿಕೊಳ್ಳಲು ಯಾರಿಗಾದರೂ ಒಪ್ಪಿಸಿ ಹೋಗುತ್ತಾರೆ. ಬೇಬಿ ಸಿಟ್ಟಿಂಗ್ ರೀತಿ dog sitting ನಡೆಯುತ್ತದೆ. ಮನೆಗೆ ಬಂದು ನೋಡಿಕೊಳ್ಳುವುದು, ಅಥವಾ dog sitting ಜಾಗದಲ್ಲೇ ನೋಡಿಕೊಳ್ಳುವುದು ಅಂತೆಲ್ಲಾ ಸೌಲಭ್ಯಗಳಿವೆ. ಹಲವು ಬಾರಿ ತಮ್ಮ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಲೂ ಇಂಥಾ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಅದಕ್ಕೆಂದೇ dog walkers ಸಿಗುತ್ತಾರೆ.

ನಮ್ಮ ಮನೆಯ ಹಿಂದೆ ಒಬ್ಬಾತ ಇದ್ದಾನೆ. ಪ್ರತಿವಾರ ತನ್ನ ನಾಯಿಗೆ haircut, ಉಗುರು ಕತ್ತರಿಸುವಿಕೆ, ಅಂತೆಲ್ಲಾ ಮಾಡುತ್ತಾ ಇರುತ್ತಾನೆ. ಮನೆಯಲ್ಲಿ ನಾಯಿ ಇದ್ದವರಿಗೆ dog grooming ಅನ್ನೋದು ಗೊತ್ತಿರಬೇಕು, ಇಲ್ಲ ಎಂದರೆ ಅದಕ್ಕೆಂದೇ ಹೊರಗೆ ಕರೆದುಕೊಂಡು ಹೋಗಬೇಕಾಗುತ್ತದೆ.

ಯಾವುದೇ ಇಬ್ಬರು ಸಾಮಾನ್ಯವಾಗಿ ನಿಂತು ಮಾತನಾಡುತ್ತಾ ಸ್ನೇಹಿತರಾಗೋದಕ್ಕೂ, ಆ ಇಬ್ಬರೂ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಸ್ನೇಹವಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಆ ಸಮಯದಲ್ಲಿ ನಾಯಿ ಒಂದು catalyst ಮಾತ್ರ.

ತಮ್ಮ ನಾಯಿ ಹೊರಗೆ ಓಡಿಹೋಗದೇ ಇರಲಿ, ಮತ್ಯಾರನ್ನೋ ಕಚ್ಚದೇ ಇರಲಿ ಅಂತ ತಮ್ಮ ಮನೆಯ ಸುತ್ತಲೂ ಕಾಂಪೌಂಡ್ ಹಾಕಿಕೊಳ್ಳುತ್ತಾರೆ. ಆದರೆ ಕೆಲವರು invisible fence ಕೂಡ ಹಾಕುತ್ತಾರೆ. ಉಳ್ಳವರು ಶಿವಾಲಯವ ಮಾಡುವರು ಬಿಡಿ. ಮನೆಯ ಶ್ವಾನ ಓಡಲು ಹೋದರೆ ಆ ಬೇಲಿಯ ಕರೆಂಟ್ ತಾಗಿ ಕುಯ್ ಎಂದು ವಾಪಸ್ ಓಡಿಬರುತ್ತದೆ. ಈ ವಿದ್ಯುತ್ ಶಾಕ್'ನಿಂದ ಪ್ರಾಣಕ್ಕೆ ಹಾನಿ ಇರುವುದಿಲ್ಲ.

ಲಗ್ಗೇಜ್ ಚೆಕ್-ಇನ್ ಮಾಡುವ ರೀತಿ ತಮ್ಮ ನಾಯಿಯನ್ನು cageನಲ್ಲಿ ಹಾಕಿ ವಿಮಾನದಲ್ಲಿ ಚೆಕ್-ಇನ್ ಮಾಡಬಹುದು. ಈಚೆಗೆ ಒಂದು ಪ್ರಸಂಗದಲ್ಲಿ ಚೆಕ್-ಔಟ್ ಮಾಡುವಾಗ ನೋಡಿದರೆ ನಾಯಿ ಪಾಪ ಸತ್ತೇ ಹೋಗಿತ್ತು. ಮತ್ತೊಮ್ಮೆ, ಎರಡು ವಿಮಾನ ಬದಲಿಸುವಾಗ ಮತ್ತಿನ್ಯಾವುದೋ ದೇಶಕ್ಕೆ ರವಾನೆಯಾಗಿತ್ತು.

ಪ್ರಾಣಿಗಳು ಎಂದ ಮೇಲೆ ಅವುಗಳನ್ನು ಕ್ರೀಡೆಗೆ ಬಳಸೋದು ಸರ್ವೇ ಸಾಮಾನ್ಯ. ಕೋಳಿ ಜಗಳ, ಬುಲ್ ಫೈಟ್'ನಂತೆಯೇ dog fighting ಕೂಡ ಇದೆ. ಇದು ಒಂದು ಕ್ರೂರ ಕ್ರೀಡೆ. ಕಾನೂನು ವಿರುದ್ಧವಾದ ಈ ಕ್ರೀಡೆ ಬಹಳಾ ಹೆಸರುವಾಸಿ ಅಂತ ಕೇಳಿದ್ದೇನೆ. ಕಾನೂನಿನ ಕಣ್ಣಿಗೆ ತಪ್ಪು ಎನ್ನುವುದು ಯಾವುದು ಜನಪ್ರಿಯವಲ್ಲ ಹೇಳಿ?

ಕೃಷ್ಣನನ್ನೂ ಕಳೆದುಕೊಂಡ ಪಾಂಡವರಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿ ಎಲ್ಲವನ್ನೂ ತೊರೆದು ಸ್ವರ್ಗಾರೋಹಣ ಮಾಡಲು ತೆರಳಿದಾಗ ಅವರೊಡನೆ ಒಂದು ನಾಯಿಯೂ ಜೊತೆಗೂಡಿತ್ತು. ನಾಲ್ವರು ಪಾಂಡವರು ಮತ್ತು ದ್ರೌಪದಿ ನೆಲಕ್ಕುರುಳಿದಾಗ ಕೊನೆಗುಳಿದಿದ್ದು ಧರ್ಮರಾಯ ಮತ್ತು ಶ್ವಾನ. ಆ ಸಮಯದಲ್ಲಿ ಧರ್ಮರಾಯನನ್ನು ಕರೆದೊಯ್ಯಲು ರಥ ಬರುತ್ತದೆ. ನಾಯಿಯನ್ನೋ ಕರೆದುಕೊಂಡು ಬರುತ್ತೇನೆ ಎಂದಾಗ ನಾಯಿಗೆ ಸ್ವರ್ಗದಲ್ಲಿ ಜಾಗವಿಲ್ಲ ಎಂಬ ಉತ್ತರ ಬರುತ್ತದೆ. ನಾವು ಹೊರಟಾಗಿನಿಂದ ಈ ನಾಯಿ ಜೊತೆಗಿದೆ. ಇದಕ್ಕೆ ಸ್ವರ್ಗದಲ್ಲಿ ಜಾಗ ಇಲ್ಲ ಎಂದರೆ ಆ ಸ್ವರ್ಗ ನನಗೂ ಬೇಡ ಎನ್ನುತ್ತಾನೆ ಧರ್ಮರಾಯ.

ಮನುಜನ ಬಾಳಿನಲ್ಲಿ ನಾಯಿಯ ಪಾತ್ರ ಅಂತೇನೋ ಅಂದೆ ಆದರೆ ನಮ್ಮ ಮನೆಯಲ್ಲಿ ನಾಯಿ ಇಲ್ಲ! ನನಗೆ ಭಯ ಇಲ್ಲ ಸ್ವಲ್ಪ ಹೆದರಿಕೆ ಅಷ್ಟೇ. ನಿಮಗೆ?

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
The human-canine bond can be traced back 15,000 years, ever since humans began living in groups. We can see man living examples how man develops bond with beloved pet. Srinath Bhalle recalls many such incidents from Kannada movies too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X