ಲೇಟ್ ಆಗಿ ಹೋಗೋದು ಬರೋದು ನಮ್ rightಉ!

ನಾವು ಪ್ರತಿ ಸಲ ಹೇಳಿದ ಟೈಮಿಗೇ ಬರೋದು ಅಂತ ಯಾರಾದರೂ ಹೇಳಿದ್ರೆ ಅದು ಸುಳ್ಳು! ಅದರಲ್ಲೂ ಭಾರತೀಯ ಹೇಳಿದರಂತೂ ಸ್ವಲ್ಪ ಹೆಚ್ಚೇ ಅನುಮಾನ ಪಡಬೇಕಾಗುತ್ತದೆ. ದಿನಕ್ಕೊಮ್ಮೆಯಾದರೂ ಈ ಪದ ಕೇಳಿಸದೇ ಇರದು ನಮ್ಮ ಜೀವನದಲ್ಲಿ!

ಇದು ಹೇಗಾಗಬಹುದು ಎಂದರೆ, ಎಲ್ಲೋ ಒಂದು ಕಡೆ ಹೋಗಬೇಕು ಅಂದಾಗ, ಎಲ್ಲಾ ಸಿದ್ದವಾದ ಮೇಲೆ ಒಂದು ಯೋಚನೆ "ನಾವು ಇಷ್ಟು ಬೇಗ ಹೋದರೆ, ಅವರೇ ಸಿದ್ದ ಇಲ್ಲದಿದ್ದರೆ? ಸುಮ್ನೆ ಹೋಗಿ ಅಲ್ಲಿ ಕೂತ್ಕೊಂಡ್ ಏನು ಮಾಡೋದು? ಕಾಫಿ ಕುಡಿದು ಹೋಗೋಣ" ಅಂತ chair'ಗೆ ಒರಗಿದರೋ ಮುಗೀತು! ಅಲ್ಲಿಂದ ಇನ್ನೊಂದು ಘಂಟೆಗೇ ಎದ್ದು ಹೊರಡೋದು! ತಡ ಆಯ್ತಲ್ಲಾ?

ಕೆಲವರು ಸದಾ on time. ಅವರನ್ನು ಕೇಳಿದ್ರೆ ಹೀಗೂ ಹೇಳಬಹುದು "ನಾನು ಯಾವತ್ತೂ ಲೇಟ್ ಬಂದಿಲ್ಲ. ಹೇಳಿದ ಸಮಯಕ್ಕೆ ಬರ್ತೀನಿ ಅಥವಾ ಮುಂಚೆ ಬರ್ತೀನಿ. ಆದರೆ ತಡವಾಗಿ ಎಂದೂ ಬಂದಿಲ್ಲ. ನಾನು ಹುಟ್ಟಿದ್ದು ಏಳು ತಿಂಗಳಿಗೆ. ಈ ವಿಷಯದಲ್ಲೂ ನಾನು ಲೇಟ್ ಮಾಡಿಲ್ಲ, ಗೊತ್ತಾ?" ಇದು ಒಂದು ಸ್ವಲ್ಪ extreme case. ಬಿಟ್ಟು ಬಿಡಿ!

Coming late is our birth right

ನಮ್ಮ ಮನೆಯ ಎದುರಿಗೇ ಸ್ಕೂಲ್ ಬಸ್ ಬರುತ್ತೆ. ಮೊದಲಿಗೆ ಪ್ರೈಮರಿ ತರಗತಿಗಳ ಬಸ್. ಕೆಲವೊಮ್ಮೆ ಮಕ್ಕಳು ಆ ಬಸ್ ಮಿಸ್ ಮಾಡಿಕೊಂಡು ಮತ್ತೆ ಮನೆಗೆ ಹೋದಾಗ ಅಪ್ಪ-ಅಮ್ಮ ಅವರನ್ನು ತಮ್ಮ ಕಾರಿನಲ್ಲಿ ಸ್ಕೂಲಿಗೆ ಡ್ರಾಪ್ ಮಾಡಿ ಬರುತ್ತಾರೆ. ಈವರೆಗೂ ನಾ ಕಂಡಂತೆ, ಬಸ್ ಮಿಸ್ ಮಾಡಿಕೊಂಡವರೆಲ್ಲಾ ನಮ್ಮ ದೇಸೀ ಮಕ್ಕಳೇ!

ಈಗಲಿಂದಲೇ ನಮ್ಮ ದೇಸಿ ಮಕ್ಕಳು ಲೇಟ್ ಆಗಿ ತಲುಪುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಅನ್ನಬೇಡಿ. ಅಪ್ಪ-ಅಮ್ಮ ಮಾಡೋ ತಪ್ಪು ಮಕ್ಕಳಲ್ಲಿ ಮುಂದುವರೆಯುತ್ತದೆ ಎಂಬೋದಕ್ಕೆ ಇದೂ ಒಂದು ಉದಾಹರಣೆ. ದೊಡ್ಡವರೇ ಏಳೋದು ಲೇಟ್ ಮಾಡಿದಾಗ ಮಕ್ಕಳನ್ನು ಎಬ್ಬಿಸೋದು ಯಾರು?

ಈ ಲೇಟ್ ಅನ್ನೋದು ಯಾವ ಯಾವ ಹಂತದಲ್ಲಿ ಹೇಗೆ ಹೇಗೆ ಅನ್ನೋದರ ಬಗ್ಗೆ ಸುಮ್ಮನೆ ನೋಡೋಣ.

Coming late is our birth right

Bachelor ಮಹಾಶಯರ ಕಥೆ ಹೀಗಿರಬಹುದು.

"ಹೆಂಡ್ರಿಲ್ಲಾ, ಮಕ್ಕಳಿಲ್ಲಾ ನಿನಗೇನೋ ಬೇಗ ಬರೋಕ್ಕೆ?"

"ಇಲ್ಲಾ ಆಂಟೀ, ನಿನ್ನೆ ಫ್ರೆಂಡ್ಸ್ ಜೊತೆ movieಗೆ ಹೋಗಿದ್ದೆ. ಆಮೇಲೆ ಊಟ... ಲೈಟಾಗಿ ಪಾರ್ಟಿ ಅಂತ ಮನೆಗೆ ಬಂದಾಗ ಬೆಳಿಗ್ಗೆ ನಾಲ್ಕು ಘಂಟೆ. ಆಗ ಮಲಗಿದ್ದು ನೋಡೀ, ಸಂಜೆ ನಾಲ್ಕಕ್ಕೆ ಎಚ್ಚರ ಆಗಿದ್ದು! ಆಮೇಲೆ ಕಾಫಿ, ತಿಂಡಿ, ಶೇವ್, ಸ್ನಾನ ಇರುತ್ತಲ್ಲ... ಅದಕ್ಕೆ ಸ್ವಲ್ಪ ಲೇಟಾಯ್ತು (ರಾತ್ರಿ ಹತ್ತು ಘಂಟೆ ಅಷ್ಟೇ)!"

ಹೊಸತಾಗಿ ಮದುವೆಯಾದವರ ಕಥೆ:

"ಓಹೋಹೋ, ಎಲ್ರೂ ನೋಡ್ರಪ್ಪಾ, ಕೊನೆಗೂ ಜೋಡಿ ಹಕ್ಕಿಗಳು ಬಂದ್ರೂ! ಯಾಕೆ ಇಷ್ಟು ಲೇಟು?" "ಬೆಳಿಗ್ಗೆ ಎದ್ದಿದ್ದು ಲೇಟ್ ಆಯ್ತು. ಆಮೇಲೆ brunch. ವಾಟ್ಸಾಪ್, ಫೇಸ್ಬುಕ್ ಅಂತ ಆಗಿ ಸ್ನಾನ ಮಾಡಿ ಶಾಪಿಂಗ್ ಹೋದ್ವಿ. ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದ್ವಿ. ಜಾಸ್ತಿ ಲೇಟ್ ಆಗಿಲ್ಲಾ ತಾನೇ?"

"ಇಲ್ಲ, ಇಲ್ಲ ಬನ್ನಿ ಪರವಾಗಿಲ್ಲ. ಜಸ್ಟ್ ಮೂರು ಘಂಟೆ ತಡ ಆಗಿದೆ ಅಷ್ಟೇ!"

Coming late is our birth right

ಪುಟ್ಟ ಮಗುವಿನ ಅಪ್ಪ-ಅಮ್ಮ:

"ಲೇಟ್ ಆಯ್ತು ಸಾರಿ! ನಮ್ಮ ಪಾಪು ಬೆಳಿಗ್ಗೆಯಿಂದ cranky ಆಗಿದ್ಲು. ಏನೋ ಕೊಸಕೊಸ. ಕೊನೆಗೆ ಅವಳನ್ನ ಮಲಗಿಸೋಷ್ಟರಲ್ಲಿ ಮಧ್ಯಾಹ್ನ ಮೂರು ಘಂಟೆ. ಅವಳು ಏಳೋವರೆಗೂ ನಮಗೂ ರೆಡಿ ಆಗ್ಲಿಕ್ಕೆ ಆಗ್ಲಿಲ್ಲ. ಎಲ್ಲಿ ಶಬ್ದ ಆದ್ರೆ ಎದ್ದು ಅಳ್ತಾಳೋ ಅಂತ!"

"ಪರವಾಗಿಲ್ಲ ಬನ್ನಿ, ಚಿಕ್ಕ ಮಕ್ಕಳು ಅಂದ್ರೆ ಇವೆಲ್ಲಾ ಮಾಮೂಲಿ... ಬನ್ನಿ ಬನ್ನಿ."

ಪುಟ್ಟ ಮಕ್ಕಳ ಅಪ್ಪ-ಅಮ್ಮ :

"ಈ ಇಬ್ಬರನ್ನ ರೆಡಿ ಮಾಡೋಷ್ಟರಲ್ಲಿ ಸಾಕು ಸಾಕಾಯ್ತು. ಇವಳು ಈ ಕಡೆ ಓಡಿದ್ರೆ, ಅವನು ಆ ಕಡೆ! ಅವನು ಜುಟ್ಟು ಎಳೀತಾನೆ ಅಂತ ಇವಳು ಗಲಾಟೆ. ಅವನು ಚಾಕೋಲೇಟ್ ಕೊಡಲಿಲ್ಲ ಇಂತ ಇವನು ಅಳು. ಇನ್ನು ಇವರೋ ಏನೂ ಹೆಲ್ಪ್ ಮಾಡಲ್ಲಾ. ಅವರಾಯ್ತು ಅವರ ಕ್ರಿಕೆಟ್ ಆಯ್ತು. ಎಲ್ಲಾ ಸಿದ್ದ ಆಗಿ ಹೊರಡೋಣ್ವಾ ಅಂದ್ರೆ ಇವರು ಸೋಫಾ ಮೇಲೇ ಕೂತು ನಿದ್ದೆ. 'ಹೋರಾಡೋಣ್ವಾ' ಅನ್ನೋ ಅಷ್ಟು ಸಿಟ್ಟು ಬಂತು."

"ಇರ್ಲಿ ಬಿಡಿ . . . ನಮಗೂ ಅರ್ಥವಾಗುತ್ತೆ. ಇಲ್ಲೂ ಯಾಕೆ ಜಗಳ?"

ದೊಡ್ಡ ಮಕ್ಕಳ ಅಪ್ಪ-ಅಮ್ಮ:

"ನಿಮಗೇನ್ರೀ ಲೇಟ್ ಬರೋ ಅಂಥಾ sceneಉ?" "ಎಲ್ಲ ರೆಡಿ ಆಗಿದ್ವಿ! ಆಮೇಲೆ ನೋಡಿದ್ರೆ ನಮ್ಮಿಬ್ಬರ ಡ್ರೆಸ್ ಮ್ಯಾಚ್ ಆಗ್ತಿರ್ಲಿಲ್ಲ. ಮತ್ತೆ change of dress. ಆಗ ಹೊರಗೆ ಹೋಗಿದ್ದ ಮಗಳು ವಾಪಸ್ ಬಂದ್ಲು! ಅವಳನ್ನ ಬಿಟ್ಟು ಹೇಗೆ ಬರೋದು ಅಂತ ಅವಳು ರೆಡಿ ಆಗಿ ಬರೋಷ್ಟರಲ್ಲಿ ಇಷ್ಟು ಹೊತ್ತಾಯ್ತು! ಆರಾಮವಾಗಿ ರೆಡಿ ಆಗ್ತಿದ್ಲು. ದೊಡ್ಡ ಮಕ್ಕಳು ಅಂದ ಮೇಲೆ ಜೋರು ಮಾಡೋದೂ ಸರಿ ಹೋಗೋಲ್ಲ ನೋಡಿ" "ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ತಕ್ಕಂತೆ adjust ಮಾಡ್ಕೋಬೇಕು ಬಿಡಿ... ಬನ್ನಿ"

ಇನ್ನೂ ಸ್ವಲ್ಪ ದೊಡ್ಡವರು:

"ಯಾಕೆ ಅಂಕಲ್ - ಆಂಟಿ ಇಷ್ಟು ಲೇಟು?" "ಎಲ್ಲ ಸಿದ್ದ ಆಗಿದ್ವಿ . . . ಮೊಮ್ಮಗಳು ಮನೆಯಲ್ಲೇ ಇದ್ಲಲ್ಲಾ . . . ಆಫೀಸಿನಿಂದ ಮಗಳು ಬಂದು ಕೂಸನ್ನು ಕರ್ಕೊಂಡ್ ಹೋಗೋದು ಲೇಟಾಯ್ತು . . . ಟ್ರಾಫಿಕ್'ನಲ್ಲಿ ಸಿಕ್ಕಿಹಾಕಿಕೊಂಡೆ ಅಂದ್ಲು. ಏನ್ ಮಾಡೋದು ?" "ಪರವಾಗಿಲ್ಲ ಬಿಡಿ. ನೀವು ಬಂದಿದ್ದು ನಮಗೆ ಖುಷಿಯಾಯ್ತು"

ನಂತರದ ಜೆನೆರೇಷನ್:

"ನಿಧಾನ ನಿಧಾನ . . . ಆರಾಮಾಗಿ ಬನ್ನಿ... "ಸ್ವಲ್ಪ ಲೇಟ್ ಆಯ್ತಪ್ಪಾ . . . ಮುಂಚಿನ ಹಾಗೆ ಈಗ ಬೇಗ ಹೆಜ್ಜೆ ಇಡೋಕ್ಕಾಗಲ್ಲಾ! ಒಂದೊಂದು ಕೆಲಸಾನೂ ಟೈಮ್ ತೊಗೊಳತ್ತೆ. ಮಂಡಿ ನೋವು ಜಾಸ್ತಿ ಆಗಿಬಿಟ್ಟಿದೆ" . . . "ನೀವು ಬಂದಿದ್ದೆ ನಮ್ಮ ಸೌಭಾಗ್ಯ . . . ಲೇಟ್ ಆದ್ರೆ ಏನು ಬಿಡಿ. ಸೋಫಾ ಮೇಲೆ ಕೂಡಿ. ಊಟ ಹಾಕೊಂಡ್ ಬರ್ತೀನಿ. . ." "ಸರಿಯಪ್ಪಾ. . . ಅನ್ನ ಬೇಡಾ . . ಎಣ್ಣೇ ಪದಾರ್ಥ ಬೇಡ . . . ಸ್ವೀಟು ಬೇಡವೇ ಬೇಡ . . . "

ಮುಂದ? . . . ಇಷ್ಟೆಲ್ಲಾ 'ಲೇಟ್' ಜೀವನ ನಡೆಸೋದ್ರಿಂದ್ಲೇ ಇರಬೇಕು ಹೋದ ಮೇಲೆ ಹೆಸರ ಹಿಂದೆ 'ಲೇಟ್' ಅಂತ ಹಾಕೋದು!

ಪ್ರೇಮ ನಿವೇದನೆಗೆ ಲೇಟ್ ಮಾಡಬೇಡಿ . . . ತಪ್ಪೊಪ್ಪಿಗೆಗೆ ಲೇಟ್ ಮಾಡದಿರಿ . . . ಮಹತ್ವದ ನಿರ್ಧಾರಗಳಿಗೆ ಲೇಟ್ ಮಾಡದಿರಿ. ಹೊರದೇಶದಲ್ಲಿರೋ ನಾವು ಕೆಲವೊಮ್ಮೆ ಕೆಲವೊಂದು ನಿರ್ಧಾರಗಳಿಗೆ ತಡ ಮಾಡುತ್ತೇವೆ. ಆದರೆ ಅದು ತಡ ಅಂತ ಅರ್ಥವಾಗೋದು ನಮಗೆ ಪ್ರಿಯರಾದವರು ದಡ ಸೇರಿದ್ದಾರೆ ಎಂದು ಅರಿತ ಮೇಲೆಯೇ!

ಸಿಕ್ಕಾಪಟ್ಟೆ ಟೆನ್ಷನ್ ಮಾಡ್ಕೋಬೇಡಿ . . . serious ಆಗಬೇಡಿ! ಹೇಳಿ ಕೇಳಿ ಜೀವನ ನವರಸಾಯನ...

ಲೇಟಾಗಿ ಬರುವವರೆಲ್ಲಾ ಸಬೂಬು ಹೇಳ್ತಾರೆ ಅನ್ನೋ ಮಾತು ಸುಳ್ಳು. . . ಎಲ್ಲರ ಜೀವನದಲ್ಲೂ ಏನೆಲ್ಲಾ ನಡೆಯುತ್ತಿರುತ್ತೆ. 'ಯಾಕೆ ಲೇಟು?' ಅಂತ ಕೇಳೋ ಪ್ರಶ್ನೆಗೆ ಉತ್ತರ ಹೇಳೋದಕ್ಕೆ ಸಾಧ್ಯವಾಗದೆ ಇರಬಹುದು. ಆಗ ಏನೋ ಒಂದು ಹೇಳಿ ತಪ್ಪಿಸಿಕೊಳ್ತಾರೆ. ಅಷ್ಟೇ!

ಜೀವನದಲ್ಲಿ ಹಲವೊಮ್ಮೆ ಲೇಟ್ ಆಗಬಹುದು, ಆದರೆ ಲೇಟ್ ಮಾಡೋದೇ ಜೀವನ ಆಗಬಾರದು. ಲೇಟ್ ಆಗಿ ಬಸ್ ತಪ್ಪಿದರೆ ಇನ್ನೊಂದು ಬಸ್ ಸಿಗಬಹುದು ಆದರೆ ಅವಕಾಶ ತಪ್ಪಿದರೆ ಮತ್ತೊಮ್ಮೆ ಅವಕಾಶ ನಿಮ್ಮ ಬಾಗಿಲು ತಟ್ಟದೇ ಹೋಗಬಹುದು. ಎಚ್ಚರವಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+