• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಮುಳುಗಿದ ಸಂಸ್ಕೃತಿಯ ನೆನೆದು..

By Staff
|

1966ರಲ್ಲಿ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನುಮೋದನೆ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ದಂಡಾವತಿ ನೀರಾವರಿ ಯೋಜನೆ, ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೆನೆಗುದಿಗೆ ಬಿದ್ದು, 43 ವರುಷಗಳ ತರುವಾಯ ಮತ್ತೆ ಜೀವ ಪಡೆದುಕೊಂಡಿದೆ. 1950 ಎಕರೆಯಷ್ಟು ರೈತರ ಜಮೀನನ್ನು ಈ ಯೋಜನೆ ಸ್ವಾಹಾ ಮಾಡಲಿದೆ. ದಿಕ್ಕೆಟ್ಟ ರೈತರೆಲ್ಲರು ದಂಗೆ ಎದ್ದಿದ್ದಾರೆ. ನೀರು ಕುತ್ತಿಗೆ ಮಟ್ಟ ಬಂದಾಗಿದೆ. ಏನಾಗುತ್ತೋ? ಈ ಯೋಜನೆ ಇನ್ನೆಷ್ಟು ರೈತರನ್ನು ಬಲಿ ತೆಗೆದುಕೊಳ್ಳಲಿದೆಯೋ? ಒಂದು ಅಣೆಕಟ್ಟು ಹಲವು ಸಂಸ್ಕೃತಿಗಳನ್ನು ಹಾಳುಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ರೈತರ ಕಣ್ಣೀರ ಕಥೆ ಇಲ್ಲಿದೆ.

* ಶ್ರೀನಿಧಿ ಡಿ.ಎಸ್.

ಕೊಕ್ಕನಗುಡ್ಡಕ್ಕೆ ಬೈಲಿಗೆ ರಾಮನ ದೋಣಿಯಲ್ಲಿ ಹೋಗುತ್ತಿದ್ದರು ಅವರೆಲ್ಲ. ಒಟ್ಟು 7 ಜನ. ಧರೇಮನೆ ಶ್ರೀಧರಣ್ಣ ಮತ್ತು ಅವರ ಸಹೋದ್ಯೋಗಿಗಳು 4 ಜನ , ಶ್ರೀಧರಣ್ಣನ ತಮ್ಮ ಹಾಗೂ ನಾಲ್ಕನೇ ಕ್ಲಾಸು ಓದುವ ಮಗ, ಮತ್ತೆ ದೋಣಿ ರಾಮ. ಶ್ರೀಧರಣ್ಣ ಊರು ಬಿಟ್ಟು 12 ವರ್ಷವಾಗಿದೆ. ದೂರದ ಊರೊಂದಲ್ಲಿ ಏನೋ ಕೆಲಸ ಮಾಡಿಕೊಂಡಿದ್ದಾರೆ. ಹಾಗಂತ ಊರ ಕಡೆ ಬರುವುದನ್ನ ಬಿಟ್ಟಿಲ್ಲ. ತಾವು ಬರುವುದಲ್ಲದೇ ತಮ್ಮ ಜೊತೆಗೆ ಕೆಲಸ ಮಾಡುವ ಸ್ನೇಹಿತರನ್ನು ಕರೆದುಕೊಂಡು ಬರುತ್ತಾರೆ, ಹತ್ತಿರದ ಗುಡ್ಡ, ಬೆಟ್ಟ ಕಾಡು ಮೇಡು ಸುತ್ತುತ್ತಾರೆ. ಅವರಲ್ಲಿ ಯಾರಾದರೂ ತಾವು ತಿರುಗಾಡಿದ ಜಾಗಗಳ ಬಗ್ಗೆ ಪೇಪರಿನಲ್ಲಿ ಬರೆಯುತ್ತಾರೆ.

ಅಪ್ಪ ಅಲ್ಲಿ ಇಲ್ಲಿ ತಿರುಗಲು ಹೋಗುವ ಬಗ್ಗೆ ಮಗನಿಗೆ ಬಲು ಅಚ್ಚರಿ. ಉಳಿದವರ ಹಾಗೆ ರಜೆ ಬಂದರೆ ಮನೆಯಲ್ಲೇ ಇರದೆ ಯಾಕೆ ಊರೂರು ಸುತ್ತಬೇಕು? ಅಪ್ಪನ ಬಳಿ ಹೀಗೇ ಕೇಳಿದ್ದಕ್ಕೆ ಅವರೇನೋ ಉದ್ದುದ್ದ ಮಾತಾಡಿದ್ದರು ಒಮ್ಮೆ. ಅವನಿಗೇನೂ ಅರ್ಥವಾಗದೇ ಸುಮ್ಮನಿದ್ದು ಬಿಟ್ಟಿದ್ದ. ಕುತೂಹಲ ಅವನಿಗೆ, ಏನಿರುತ್ತದೆ ಇವರೆಲ್ಲ ಹೋಗುವ ಕಡೆಗೆ, ತಾನೂ ಹೋಗಿ ನೋಡಬೇಕು ಅನ್ನುವ ಆಸೆ ಹುಟ್ಟಿಕೊಂಡಿತ್ತು. ಈ ಬಾರಿ ಅಪ್ಪ ಎಲ್ಲಿಗಾದರೂ ಹೊರಗಡೆ ಹೊರಟರೆ ನನ್ನನ್ನೂ ಕರೆದುಕೊಂಡು ಹೋಗೆಂದು ಹಠ ಮಾಡಬೇಕು ಅಂತ ತೀರ್ಮಾನ ಮಾಡಿಯಾಗಿತ್ತು ಅವನು.

ಅಕ್ಟೋಬರು ರಜೆಯಲ್ಲಿ ನಿಟ್ಟೂರಿಗೆ ಹೋಗಿಯಾಯಿತು, ಎಂದಿನ ಹಾಗೆ. ನಿಟ್ಟೂರು ಹೊಸನಗರ ತಾಲೂಕಲ್ಲಿದೆ, ಕೊಲ್ಲೂರಿನಿಂದ 30 ಕಿಲೋಮೀಟರು. ಇನ್ನು 3 ದಿನದೊಳಗೆ ಅವರ ಸ್ನೇಹಿತರು ಬರುತ್ತಾರಂತೆ, ಎಲ್ಲೋ ಹೊಳೆ ಮಧ್ಯ ಇರುವ ಹಕ್ಕಿಗಳೇ ಇರುವ ಗುಡ್ಡಕ್ಕೆ ಹೋಗುತ್ತಾರೆ ಅಂತೆಲ್ಲ ಮಾತಾಡಿಕೊಳ್ಳುವುದು ಗೊತ್ತಾಯಿತು ಅವನಿಗೆ. ಅಪ್ಪನ ಬಳಿ ಹಠ ಮಾಡಿದರೆ ಈಗಲೇ ಮಾಡಬೇಕು, ಮಾಮಂದಿರು ಬಂದ ಮೇಲೆ ಮಾಡಿದರೆ ಮರ್ಯಾದೆ ಹೋಗುತ್ತದೆ ಅನ್ನುವುದು ಎಣಿಕೆ. ಮೆಲ್ಲನೆ ಹೋಗಿ, ಅಪ್ಪಾ ನಾನೂ ಬರುತ್ತೇನೆ ನಾಡಿದ್ದು ಅಂದ ಮೆಲ್ಲಗೆ. ಅವರು ಯಾವ ರೀತಿಯ ವಿರೋಧವನ್ನೂ ತೋರದೆ, ಹುಂ ಬಾ ಅಂದು ಬಿಟ್ಟಿದ್ದು ನೋಡಿ ನಿರಾಸೆಯಾಯಿತು, ತನಗೆ ಹಠ ಮಾಡುವ ಅವಕಾಶ ಸಿಗಲಿಲ್ಲ ಅಂತ.

ಹಾಡಿಕೈ ಬಳಿ ರಾಮನ ದೋಣಿ ಹತ್ತಿಯಾಯಿತು. ಹೋದ ಬಾರಿ ಏಪ್ರಿಲ್ ನಲ್ಲಿ ಇಲ್ಲಿ ಗದ್ದೆ ಇತ್ತಲ್ಲ, ಅಲ್ಲಿ ಈಗ ನೋಡಿದರೆ ನೀರು ನಿಂತು ದೊಡ್ಡ ಸಮುದ್ರವೇ ಆಗಿ ಬಿಟ್ಟಿದೆ. ಪುಟ್ಟ ಹುಡುಗನನ್ನ ಮಧ್ಯ ಹಾಕಿ ಎಲ್ಲ ಅಕ್ಕ ಪಕ್ಕ ಕಾಲು ಹಾಕಿ ಕೂತರು. ನೋಡ್ರಾ ಮಾಣಿ, ಹೊಳಿ ನೀರಿಗ್ ಕೈ ಗೀ ಹಾಕ್ಬೇಡಿ ಮತ್ತೆ ಜಾಗ್ರತಿ, ದೋಣಿ ವಲಿತದೆ, ಗೊತಾಯ್ತಾ? ಅಂದ ಸ್ವಲ್ಪ ಜೋರಾಗೇ ಹೇಳಿದ ರಾಮ. ಇವನಿಗೆ ರೇಗಿ ಹೋಯಿತು. ನಾನೇನು ಸಣ್ಣ ಹುಡುಗ ಅಲ್ಲ, ಅಷ್ಟೂ ಗೊತಾಗದೇ ಇರುವುದಕ್ಕೆ ಎಲ್ಲ ನಕ್ಕರು. ತನ್ನ ಅಪ್ಪನೂ ತನ್ನ ಸಹಾಯಕ್ಕೆ ಬರದೇ ಮತ್ತೂ ಕಿರಿಕಿರಿ ಅನಿಸಿತು ಅವನಿಗೆ.

ದೋಣಿ ಹೊರಡುವಾಗ ಖುಷಿ ಅನಿಸಿತ್ತು ಹುಡುಗನಿಗೆ. ಮುಂದೆ ಮುಂದೆ ಹೋದಂತೆಲ್ಲಾ ದಿಗಿಲಾಗತೊಡಗಿತು. ಎಲ್ಲಿ ನೋಡಿದರು ಬರಿಯ ನೀರೇ ನೀರು. ಅಲ್ಲಲ್ಲಿ ಮೇಲೆ ಬಂದ ಮರದ ಅವಶೇಷಗಳು. ರಾಮ ಬಹಳ ಚಾಕಚಕ್ಯತೆಯಿಂದ ಹುಟ್ಟು ಹಾಕುತ್ತಿದ್ದ. ಇನ್ನು 5 ಕಿಲೋಮೀಟರು ಹುಟ್ಟು ಹಾಕಬೇಕು ಅಂತ ಅಪ್ಪ ಸೀತಾರಾಮ ಮಾಮನ ಬಳಿ ಹೇಳುತಿದ್ದರು. ಇಲ್ಲಿ ಹೊಳೆಯ ಹಾಗೆ ನೀರು ಕೆಳಗೆ ಹರಿಯುತ್ತಿಲ್ಲ, ಸಮುದ್ರದ ಹಾಗೆ ಅಲೆಗಳಿಲ್ಲ, ಕೆರೆಯೋ, ಅದೂ ಅಲ್ಲ. ಸಣ್ಣನೆ ಧ್ವನಿಯಲ್ಲಿ ಕೇಳಿದ, ಎಷ್ಟ್ ಆಳ ಇದೆ ಇದು ಅಂತ. ಚಿಕ್ಕಪ್ಪ , ಸಟ್ಟನೆ ಹೇಳಿದರು, 300 ಫೀಟಾದ್ರು ಇದೆ ಅಂದು ಬಿಟ್ಟರು. ಯಪ್ಪಾ! ಗೊಮ್ಮಟೇಶ್ವರ, ಐವತ್ತು ಚಿಲ್ಲರೆ ಅಡಿ ಎತ್ತರ, ಆ ಮೂರ್ತಿಯೇ ಅಷ್ಟೆತ್ತರ ಅಂದರೆ ತನ್ನ ಕಾಲ ಕೆಳಗಿನ ಆಳ ಎಷ್ಟಿರಬಹುದು? ಸಿಕ್ಕಾಪಟ್ಟೆ ಹೆದರಿಕೆ ಆಗ ತೊಡಗಿತು. ಅಪ್ಪನ ಶರಟನ್ನ ಮೆಲ್ಲನೆ ಹಿಡಕೊಂಡ. ಅಪ್ಪನಿಗೆ ಮಗನ ಹೆದರಿಕೆ ಗೊತ್ತಾಯ್ತು , ಹತ್ತಿರಕ್ಕೆ ಎಳೆದುಕೊಂಡು ಕಥೆ ಹೇಳಲು ಶುರು ಮಾಡಿದರು.

ಈಗ ನೀನೇನು ನೋಡುತ್ತಿದ್ದೀಯಲ್ಲ, ಈ ನೀರ ರಾಶಿ, ಇದರ ಕೆಳಗೆ ಒಂದು ಕಾಲದಲ್ಲಿ ಹನ್ನಾರ ಅನ್ನುವ ದೊಡ್ಡ ಊರಿತ್ತು. ಬ್ರಿಟೀಷರು ಶರಾವತಿ ನದಿಗೆ ಬಹಳ ಹಿಂದೆ ಮಡೆನೂರು- ಹಿರೇಭಾಸ್ಕರ ಅಣೆಕಟ್ಟು ಕಟ್ಟಿದರು. ಆ ಸಮಯದಲ್ಲಿ ನಿಂತ ನೀರು, ಅರ್ಧ ಹನ್ನಾರವನ್ನು ನುಂಗಿ ಬಿಟ್ಟಿತು, ಊರು ಚಿಕ್ಕದಾಯಿತು. ಹನ್ನಾರ ಸೀಮೆ ಒಂದು ಕಾಲಕ್ಕೆ ಬಹಳ ಪ್ರಖ್ಯಾತಿ ಪಡೆದಿತ್ತು, ಸಾಗರ ಪೇಟೆಯಷ್ಟೇ ದೊಡ್ಡ ಊರಾಗಿತ್ತಂತೆ ಇದು. ದೇವಸ್ಥಾನ, ಶಾಲೆ, ಅಂಗಡಿ ಎಲ್ಲ ಇತ್ತು. ಕಲೆಕ್ಟರು ಇತ್ಯಾದಿ ದೊಡ್ಡ ಮನುಷ್ಯರೆಲ್ಲ ಬಂದು ಉಳಿದುಕೊಳ್ಳುವ ಊರಾಗಿತ್ತು.

ಇಷ್ಟಕ್ಕೇ ಸಾಕಾಗಲಿಲ್ಲ ಅಂತ ಲಿಂಗನ ಮಕ್ಕಿ ಅಣೆಕಟ್ಟು ಕಟ್ಟಿದರು ಈಗೊಂದು ನಲವತ್ತು ವರ್ಷಗಳ ಕೆಳಗೆ. ಈ ಅಣೆಕಟ್ಟೆ, ಉಳಿದರ್ಧ ಊರನ್ನು ಮುಳುಗಿಸಿ ಬಿಟ್ಟಿತು. ಒಂದು ಊರನ್ನ ಮಾತ್ರವಲ್ಲ, ಜಾಲ ಅನ್ನುವ ಇನ್ನೊಂದು ಪೇಟೆ, ಬೆನ್ನಟ್ಟಿ, ಮಳಲಿ ಹೀಗೆ ಹಲವು ಊರುಗಳು ಈ ನೀರ ಅಡಿಯಲ್ಲಿ ಕರಗಿ ಹೋಗಿವೆ. ಬೆನ್ನಟ್ಟಿ ಜಾತ್ರೆಗೆ ಹೋದ ನೆನಪು ನಂಗೆ ಇನ್ನೂ ಇದೆ, ಅಲ್ಲಿಯ ದೇವಿಯ ಜಾತ್ರೆ ಒಂದು ತಿಂಗಳ ಕಾಲ ನಡೆಯುತ್ತಿತ್ತು, ನಮಗೆಲ್ಲ ಆ ಜಾತ್ರೆಗೆ ಹೋಗಿ ಬರುವುದೆಂದರೆ ಭಾರೀ ದೊಡ್ಡ ಸಂಭ್ರಮ ಆವಾಗ.. ಜಾಲ ಎನ್ನುವ ಬೆಟ್ಟಗುಡ್ಡಗಳಿಂದ ಕೂಡಿದ ಊರು ಈಗ ನೀರ ನಡುವಿನ ಪುಟ್ಟ ದ್ವೀಪಗಳ ಸಮೂಹವಾಗಿವೆ. ಮನೆಯಿಂದ ಕಳ್ಳ ಬಿದ್ದು ಈಜಿಕೊಂಡು ಬಂದ ಎಮ್ಮೆಗಳ ಅಡಗುತಾಣ. ಸಾಗರ, ಹೊಸನಗರ ತಾಲೂಕಿನ ಅರ್ಧ ಪಾಲು ಈ ನೀರಿನೊಳಗೆ ಮುಳುಗಿದೆ. ಮರಬೀಡೀ ಸೀಮೆ ಕೂಡ ನೀರುಪಾಲೇ ಆಗಿದೆ. ಎಷ್ಟೊ ಸಾವಿರಗಟ್ಟಲೆ ಎಕರೆ ಅಡಿಕೆ ತೋಟಗಳು, ಗದ್ದೆ, ಎಲ್ಲ ನಾಶವಾಗಿದೆ. ಹೊಸ ತೋಟ ಗದ್ದೆ ಮತ್ತೆ ಮಾಡಿ ಮೊದಲ ಹಂತಕ್ಕೇ ತರಲು ಎಷ್ಟೋ ಸಮಯ ಬೇಕಾಯಿತು. ಕೆಲವರು ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ.

ಅಲ್ಲೊಂದು ಉದ್ದನೆಯ ಸತ್ತ ಮರ ಕಾಣುತ್ತಿದೆಯಲ್ಲ, ಕವೆಯಾಕೃತಿಯದ್ದು, ಅದರೆ ಕೆಳಗಡೆಯೇ ಹನ್ನಾರ ರಾಮೇಶ್ವರ ಸ್ವಾಮಿಯ ದೇವಸ್ಥಾನವಿದ್ದಿದ್ದು. ಮುಳುಗಡೆಯಾಗುವ ಸಂದರ್ಭದಲ್ಲಿ ಇಲ್ಲಿಂದ ಎತ್ತಿ ನಿಟ್ಟೂರಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಅಂಗಡಿ ಸಾಲುಗಳಿದ್ದವು. ನಾನು ಹನ್ನಾರ ಪೇಟೆ ಮುಳುಗುವಾಗ ನಿನ್ನಷ್ಟು ದೊಡ್ಡವನಾಗಿದ್ದೆ, ಊರಿಗೇ ಊರೇ ಹೊರಟು ನಿಂತಿತ್ತು, ನೀರು ದಿನದಿಂದ ದಿನಕ್ಕೆ ಮೇಲೇರುತ್ತಿತ್ತು. ಎಲ್ಲರಿಗೂ ಊರು ಬಿಟ್ಟು ಹೋಗುವ ಬೇಜಾರು , ಆದರೆ ಹೋಗದೇ ವಿಧಿಯಿಲ್ಲ.

ಅಪ್ಪ, ಅವರೆಲ್ಲ ಎಲ್ಲಿಗೆ ಹೋದರು? ಇಷ್ಟು ಹೊತ್ತು ಸುಮ್ಮನಿದ್ದವನು ಮಾತಾಡಿದ. ಎಲ್ಲರಿಗೂ ಬೇರೆ ಕಡೆ ಜಮೀನು ನೀಡಿದ್ದರು, ಶಿರಸಿಯ ಕಡೆಗೆ, ಶಿವಮೊಗ್ಗ, ಸೊರಬದ ಕಡೆಗೆ, ಇಲ್ಲೇ ಸ್ವಲ್ಪ ದೂರದೂರುಗಳಿಗೆ ಹೋಗಿ ಮನೆ ತೋಟ ಮಾಡಿಕೊಂಡರು ಹೆಚ್ಚಿನವರು. ಇನ್ನು ಕೆಲವರು ದುಡ್ಡು ತೆಗೆದುಕೊಂಡು ಎತ್ತಲೋ ಹೋದರು.

ನಮ್ಮ ಅಜ್ಜನ ಮನೆ, ಹೆಗ್ಗಳ ಮನೆ ಅಂತ, ಅದೂ ಲಿಂಗನ ಮಕ್ಕಿ ಅಣೆಕಟ್ಟಿನಲ್ಲೇ ಮುಳುಗಿತು. ಅಲ್ಲಿ ನಾವು ದೋಣಿ ಹತ್ತಿದೆವಲ್ಲ ಹಾಡಿಕೈ, ಅಲ್ಲಿಂದ 2 ಕಿಲೋಮೀಟರಾಗಬಹುದು ಅಷ್ಟೇ, ಅಲ್ಲಿತ್ತು. ಸುಮಾರು 60 ಅಂಕಣದ ದೊಡ್ಡ ಮನೆ, ಇಷ್ಟಿಷ್ಟು ದೊಡ್ಡ ತೊಲೆಗಳು, ಮನೆ ಸುತ್ತ ತೋಟ, ಅಪ್ಪೆ ಮಿಡಿ ಮಾವಿನ ಮರ, ಎಲ್ಲ ಇತ್ತು. ಮನೆಯ ತೊಲೆ ಕಳಚಿ ಸಾಧ್ಯವಾದಷ್ಟನ್ನ ಸಾಗಿಸಿದರು, ನೀರಲ್ಲಿ ತೇಲಿ ಬಿಟ್ಟು ಮುಂದೆಲ್ಲೋ ಹಿಡಿಯುವ ಸಾಹಸ ಮಾಡಿದರು, ಉಳಿದವನ್ನ ಹಾಗೇ ಬಿಟ್ಟರು. ಅಪ್ಪೆ ಮಿಡಿಯ ಮರವೊಂದು ಇವತ್ತಿಗೂ ಹಾಗೆಯೇ ಉಳಿದಿದೆ, ಅಲ್ವೇನೋ? ಕೃಷ್ಣ ಚಿಕ್ಕಪ್ಪ ಹುಂ ಅಂತ ತಲೆಯಾಡಿಸಿದರು.

ಕರೆಂಟು ಜಗತ್ತಿಗೆ ಕೊಡುವ ಆತುರದಲ್ಲಿ ನಾವೆಲ್ಲ ನಮ್ಮ ಜಮೀನು, ನೆಲ ಕಳೆದು ಕೊಂಡೆವು, ನಮ್ಮ ಪುಣ್ಯಕ್ಕೆ ನಮಗಿಲ್ಲೇ ಜಾಗ ಸಿಕ್ಕಿತು, ಹತ್ತಿರದಲ್ಲೇ. ಆದರೆ ಮೊದಲಿನ ಹಂತಕ್ಕೆ ಬರಲು ಇನ್ನು ಸಾಧ್ಯವಾಗಿಲ್ಲ. ಇಷ್ಟೆಲ್ಲ ಮಾಡಿದರೂ, ನಮ್ಮಗಳ ಮನೆಗೆಲ್ಲ ಇನ್ನೂ ವಿದ್ಯುತ್ ಬಂದಿಲ್ಲ, ಅದೇನೋ ಅನ್ನುತಾರಲ್ಲ, ದೀಪದ ಬುಡ ಕತ್ತಲೆ ಅಂತ, ಹಾಗಾಗಿದೆ ನಮ್ಮ ಕಥೆ ಅಂದರು ಚಿಕ್ಕಪ್ಪ. ದೂರದಲ್ಲೊಂದು ಅರ್ಧ ಮುಳುಗಿದ ಯಾವುದೋ ಜಾತಿಯ ಮರ, ಅದರ ಎಲೆಗಳ ಆಕೃತಿ ಸೇಬಿನ ಹಣ್ಣಿನಂತೆ ಕಾಣಿಸಿತು. ಹೆಚ್ಚಿನೆಲ್ಲ ನೀರಲ್ಲಿ ಇದ್ದ ಮರಗಳು ಸತ್ತು ಹೋಗಿದ್ದರೂ , ಈ ಮರ ಹೇಗೆ ಬದುಕಿದೆ ಅನ್ನುವುದು ಅಂದಾಜಾಗಲಿಲ್ಲ. ಯಾಕೋ ಅದನ್ನ ಕೇಳೋಕೆ ಹೋದರೆ ನಗಾಡಿಯಾರು ಎಂದು ಸುಮ್ಮನಾದ. ಸೀತಾರಾಮ ಮಾಮ ಅವರ ಕ್ಯಾಮರಾದಲ್ಲಿ ಆ ಮರದ ಫೋಟೋ ತೆಗೆದರು, ಆದರೆ ಅದಕ್ಕೂ ಮುನ್ನ ಅದರ ಚಿತ್ರ ಜೀವನದುಕ್ಕಕ್ಕೂ ನೆನಪಿರುವ ಹಾಗೆ ಅನವ ಚಿತ್ತ ಭಿತ್ತಿಯಲ್ಲಿ ಕೂತು ಬಿಟ್ಟಿತ್ತು.

ಅಲ್ಲಿಂದ ಮುಂದೆ ಕೊಕ್ಕನ ಗುಡ್ಡಕ್ಕೆ ಹೋಗಿ, ಅಲ್ಲಿನ ಹಕ್ಕಿಗಳನ್ನೆಲ್ಲ ನೋಡಿದರು ಎಲ್ಲರೂ, ಶ್ರೀಧರಣ್ಣನ ಮಗ ಸಣ್ಣವನಾಗಿದ್ದಕ್ಕಾಗಿ, ಅಲ್ಲಿನ ಶಿಂಗೇ ಮಟ್ಟಿಯ ಮೇಲೆ ಹತ್ತಿ ಹಕ್ಕಿಗಳ ಮೊಟ್ಟೇ ಮರಿಗಳನ್ನ ನೋಡುವ ಭಾಗ್ಯವೂ ಲಭಿಸಿತು. ಹಕ್ಕಿಗಳ ಹಿಕ್ಕೆಯಿಂದ ಹುಟ್ಟಿದ ಟೊಮೇಟೋ ಗಿಡಗಳನ್ನ ನೋಡಿ ಅಬ್ಬ ಅನಿಸಿತು! ಅಂಗಡಿಯಲ್ಲಿ ದುಡ್ದು ಕೊಳ್ಳುವ ವಸ್ತು ಇಲ್ಲಿ ಹೀಗೆ ಬೆಳೆದಿದೆಯಲ್ಲ ಅಂತ. ಅಲ್ಲಿಂದ ವಾಪಾಸು ಬರುವಾದ ಚಿಕ್ಕಪ್ಪ ಹೇಳುತಿದ್ದರು, ಈಗಲೂ ಬೇಸಿಗೆ ಕಾಲದಲ್ಲಿ ಲಿಂಗನ ಮಕ್ಕಿಯ ನೀರು ಕಡಿಮೆಯಾದಾಗ ಬಂದರೆ ಮುಳುಗಿ ಹೋದ ಊರಿನ ಅವಶೇಷಗಳನ್ನ ಆರಾಮಾಗಿ ನೋಡಬಹುದು. ಅಪ್ಪ ಮತ್ತು ಉಳಿದವರೆಲ್ಲ ಮುಂದಿನ ವರುಷ ಬರಬೇಕಾಯಿತು ಹಾಗಾದರೆ ಅಂತ ಮಾತಾಡಿಕೊಳ್ಳುತಿದ್ದರು.

ಸ್ವಲ್ಪ ದೂರ ಬರುವಷ್ಟರಲ್ಲೇ, ಮೋಡ ಕಟ್ಟಿ ರಪರಪನೆ ಮಳೆ ರಾಚತೊಡಗಿತು. ಆ ಮಳೆಯಲ್ಲಿ ನೆನೆಯುತ್ತ ಕೂತಿದ್ದ ಆ ಹುಡುಗ, ತನಗೆ ಅಪ್ಪ ಹೇಳಿದ ಈ ಕಥೆಗಳೆಲ್ಲ ಸರಿಯಾಗಿ ಅರ್ಥವಾದ ಮೇಲೆ ಉಳಿದವರಿಗೂ ಹೇಳುತ್ತೇನೆ, ಮತ್ತು ಅಪ್ಪನ ಹಾಗೆಯೇ ತಿರುಗಾಟ ಮಾಡುತ್ತಾ ತನ್ನ ಸ್ನೇಹಿತರನ್ನೂ ಮುಂದೊಂದು ದಿನ ಇಲ್ಲಿಗೆ ಕರೆದುಕೊಂಡು ಬರುತ್ತೇನೆಂದು ನಿರ್ಧರಿಸಿದ.

ಈ ಸುದ್ದಿಯನ್ನು ಓದಿರಿ

ಕಗ್ಗಂಟಾದ ದಂಡಾವತಿ ಯೋಜನೆ ಶಂಕುಸ್ಥಾಪನೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more