ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಭಯೋತ್ಪಾದನೆ- ಒಂದಿಷ್ಟು ಒಳಚಿತ್ರಗಳು

By Staff
|
Google Oneindia Kannada News

Terrorist attack on Mumbai, known and unknown
26ನೇ ನವೆಂಬರ್ 2008ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಭಾರತದ ಇತಿಹಾಸದ ಪುಟಗಳಲ್ಲಿ ಅತ್ಯಂತ ಕರಾಳ ದಿನವಾಗಿ ದಾಖಲಾಗಿಹೋಗಿದೆ. ಉಗ್ರರು ನಮಗರಿವಿಲ್ಲದಂತೆ ನುಸುಳಿ ನಮ್ಮ ಬುಡಕ್ಕೇ ಬಾಂಬಿಡುತ್ತಿದ್ದಾರೆ. ಕಮಾಂಡೋಗಳು ತಮ್ಮ ತಾಕತ್ತೇನು ಎಂದು ತೋರಿಸಿದ್ದಾರೆ. ರಾಜಕಾರಣಿಗಳು ತಮ್ಮ 'ಎಂದಿನ ಕೆಲಸ'ವನ್ನು ನೈಜತೆಯಿಂದ ಮಾಡುತ್ತಿದ್ದಾರೆ. ಇಡೀ ದೇಶವನ್ನೇ ಅಲ್ಲಾಡಿಸಿರುವ ಆ ಘಟನೆಯ ಬಿಡಿಬಿಡಿ ಚಿತ್ರಗಳು ನಿಮಗಾಗಿ.

* ಶ್ರೀನಿಧಿ ಡಿ.ಎಸ್., ಬೆಂಗಳೂರು

ಮುಂಬೈ ಬೆಂದು ಹೋಗಿದೆ. ನರಳಿದೆ. ಎಲ್ಲಿ ನೋಡಿದರೂ ಮುಂಬೈ ಭಯೋತ್ವಾದಕ ದಾಳಿಗಳದೇ ಸುದ್ದಿ. ಇಲ್ಲಿಯ ತನಕದ ಎಲ್ಲ ದಾಳಿಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದ ಕಾರಣಕ್ಕೆ, ಇಂದಿಗೂ ದೇಶದ ಜನತೆ ಈ ಆಘಾತದಿಂದ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಿಂದ ಆಯ್ದ ತಾಜ್, ನಾರೀಮನ್ ಹೌಸ್ ಮತ್ತು ಹೋಟೆಲ್ ಒಬೆರಾಯ್ ಟ್ರೈಡೆಂಟ್ ಗಳಲ್ಲಿ ಸತ್ತವರ ಸಂಬಂಧಿಗಳ, ಜೀವದ ಆಸೆ ತೊರೆದು ಹೋರಾಡಿದ ಧೀರ ಕಮಾಂಡೋಗಳ ಅನುಭವಗಳ ತುಣುಕುಗಳು ಮತ್ತು ಇತರ ಹಿಮ್ಮಾಹಿತಿಗಳು ನಿಮ್ಮ ಮುಂದೆ.
***

ತಾಜ್ ಹೋಟೇಲು ಈ ಭಯೋತ್ಪಾದನೆಯ ದಾಳಿಯಲ್ಲಿ ಉಳಿದುಕೊಳ್ಳಲು ಮುಖ್ಯ ಕಾರಣ ಅದರ ವಾಸ್ತುಶಿಲ್ಪ. ಬೇರಾವುದೇ ಕಟ್ಟಡವಾಗಿದ್ದರೂ ಭಸ್ಮವಾಗಿಬಿಡುತ್ತಿತ್ತು ಅನ್ನುತ್ತಾರೆ ಮುಂಬೈ ಅಗ್ನಿಶಾಮಕ ದಳದ ಡೆಪ್ಯುಟಿ ಚೀಫ್ ಪಿ.ಡಿ.ಕರ್ಗುಪ್ಪಿಕರ್. ಇಡಿಯ ಹೋಟೇಲನ್ನು ಧ್ವಂಸ ಮಾಡುವುದು ಉಗ್ರಗಾಮಿಗಳ ಉದ್ದೇಶವಾಗಿತ್ತು. ಅವರ ಈ ಪ್ಲಾನ್ ಗೆ ಅಡ್ಡಿ ಮಾಡಿದ್ದು ಅಲ್ಲಿನ ಕಲ್ಲಿನ ಗಟ್ಟಿ ಗೋಡೆಗಳು ಮತ್ತು ಅಗ್ನಿ ನಿರೋಧಕ ಬಾಗಿಲುಗಳು. ಗ್ರನೇಡುಗಳನ್ನು ಪದೇ ಪದೇ ಸ್ಫೋಟಿಸಿದರೂ ತಾಜ್ ಗಟ್ಟಿ ನಿಂತಿತ್ತು. ಹಾಗಿಲ್ಲದಿದ್ದರೆ, ಖಂಡಿತವಾಗಿಯೂ ಇಡಿಯ ಕಟ್ಟಡ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಭಯೋತ್ಪಾದಕ ದಾಳಿಗೆ ನಾಮಾವಶೇಷವಾದಂತೆ, ಬೂದಿಗೆ ಬದಲಾಗುತ್ತಿತ್ತು.
***

ಶ್ರೀವರ್ಧಂಕರ್ 58 ವರ್ಷದ, ಮುಂಬೈನ ನಾಗರಿಕ. ತಾಜ್ ನೊಳಕ್ಕೆ ನುಗ್ಗಿದ ಉಗ್ರರಲ್ಲೊಬ್ಬ ಇವರ ಬಳಿ ಬಂದವನೇ, ಚೂರಿಯೊಂದನ್ನು ತೆಗೆದು, ಕುತ್ತಿಗೆಯನ್ನೇ ಸೀಳಿದ. ಇತರ ಶವಗಳ ಮಧ್ಯೆ ರಕ್ತದ ಹೊಳೆಯಲ್ಲಿ ಬಿದ್ದಿದ್ದ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇವರ ಮನೆಯವರಿಗೆ ವರ್ಧಂಕರ್ ಎಲ್ಲಿದ್ದಾರೆ ಅಂತಲೇ ಗೊತ್ತಿಲ್ಲ, ಕೊನೆಗೆ ಆಸ್ಪತ್ರೆಯಲ್ಲಿ ಆಪರೇಶನ್ ಆದ ಮೇಲೆ, ಚೇತರಿಸಿಕೊಂಡು ವೈದ್ಯರ ಸಹಕಾರದಿಂದ ಬರವಣಿಗೆ ಮೂಲಕ ಕುಟುಂಬಸ್ಥರಿಗೆ ಇವರ ಸುದ್ದಿ ತಿಳಿಯಿತು. ಕುತ್ತಿಗೆ ಸೀಳಿದ ಕಾರಣ ಇನ್ನೂ ಹದಿನೈದು ದಿನ ಮಾತು ವಾಪಸ್ ಬರುವುದಿಲ್ಲ.
***

ತಾಜ್ ರಕ್ಷಣೆಗೆ ನುಗ್ಗಿದ ಎನ್.ಎಸ್.ಜಿ. ಕಮಾಂಡೋಗಳ ಬಳಿ ತಾಜ್ ಹೋಟೇಲಿನ ಪ್ಲಾನ್ ಕೂಡ ಇರಲಿಲ್ಲ. ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಲೇ ತಮಗೆ ಒಂದು ಗಂಟೆ ಬೇಕಾಯಿತು ಅನ್ನುತ್ತಾರೆ ಎನ್.ಎಸ್.ಜಿ.ಕಮಾಂಡೋ ದೇವೇಂದ್ರ. ಪ್ರತಿ ಫ್ಲೋರಿಗೂ ನುಗ್ಗಿ- ಎಲ್ಲ ರೂಮುಗಳನ್ನೂ ಹುಡುಕಿ- ಭಯೋತ್ಪಾದಕರ ನಾಶ ಮಾಡುವಷ್ಟರಲ್ಲಿ 60 ತಾಸು ಕಳೆದಿತ್ತು. ಭಯೋತ್ಪಾದಕರು ಎಲ್ಲ ವ್ಯವಸ್ಥೆಗಳನ್ನು ಬಲ್ಲವರಾಗಿದ್ದು, ರೂಮಿಂದ ರೂಮಿಗೆ ಒಂದು ಮಹಡಿಯಿಂದ ಮತ್ತೊಂದಕ್ಕೆ ಆರಾಮಾಗಿ ಓಡಾಡುತ್ತಿದ್ದರು. ಎಲ್ಲೋ ಕತ್ತಲಿಂದ ಕಾಲ ಬುಡಕ್ಕೇ ಗ್ರೆನೇಡ್ ಬಂದು ಬೀಳುತ್ತಿತ್ತು. ಇಂತಹ ಸಂದರ್ಭದಲ್ಲೇ ಮೇಜರ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದು. ದೇವೇಂದ್ರ ಹೇಳುತ್ತಾರೆ,"ಅದೆಷ್ಟೋ ಗಂಟೆಗಳ ನಂತರವೂ ತಾಜ್ ಒಳಗೇ ಇದ್ದ ನನಗೆ, ಹಗಲೋ ರಾತ್ರಿಯೋ ತಿಳಿಯದಂತಹ ಪರಿಸ್ಥಿತಿ ಇತ್ತು, ಆರನೇ ಫ್ಲೋರಿನ ರೂಮುಗಳಲ್ಲಿ ಸೊಂಟದವರೆಗೆ ನೀರು ತುಂಬಿಕೊಂಡಿತ್ತು, ಆ ನೀರಲ್ಲೆ ಹೆಣಗಳು ತೇಲುತ್ತಿದ್ದವು". ಉಗ್ರರು ಸುಸ್ತು ಹೊಡೆದು ಹೋಗಿದ್ದಾರೆ ಎನ್ನುವುದು ಗೊತ್ತಾದ ಕೂಡಲೇ ಎನ್.ಎಸ್.ಜಿ ಕಮಾಂಡೋಗಳು ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರಂತೆ. ಗುಂಡಿನ ಮೊರೆತ ಕೇಳಲಾಗದೇ ಒಬ್ಬ ಉಗ್ರ ಕಿರುಚಿದನಂತೆ "ರಬ್ಬಾ ರೆಹಮ್ ಕರ್" ಅಂತ! ಇದೊಂದು ಅತ್ಯಂತ "ಡೆಡ್ಲೀ ಬೆಕ್ಕು ಇಲಿ ಆಟ" ಆಗಿತ್ತು ಎನ್ನುತ್ತಾರೆ ದೇವೇಂದ್ರ.
***

ಲೆಯೋಪೋಲ್ಡ್ ಕೆಫೆಯಲ್ಲಿ ಪೀರ್ ಭಾಷಾ ಮತ್ತು ಚಾಂದ್ ಭಾಷಾ ಕಳೆದ 10-15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಅಣ್ಣತಮ್ಮಂದಿರು. ಊಟದ ಸಮಯ ಅಂತ ತಮ್ಮ ಚಾಂದ್ ಒಳಗೆ ಅಡುಗೆ ಮನೆಯಲ್ಲಿ ಊಟ ಮಾಡುತ್ತಿದ್ದಾಗಲೇ ಹೊರಗೆ ಗುಂಡಿನ ಮೊರೆತ ಕೇಳಿಸಿತು. ಅಡುಗೆ ಮನೆಯಲ್ಲೇ ಬಹಳಷ್ಟು ಹೊತ್ತು ಕೂತಿದ್ದ ಚಾಂದ್ ಹೊರಗೆ ಬರುವಷ್ಟರಲ್ಲಿ ಅಲ್ಲಿನ ಪರಿಸರದ ಚಿತ್ರಣವೇ ಬದಲಾಗಿ ಹೋಗಿತ್ತು. ಅಣ್ಣ ಎಲ್ಲೂ ಕಾಣಿಸಲಿಲ್ಲ. ಆತನ ಮೊಬೈಲ್ ರಿಂಗಾಗುತ್ತಿದೆ, ಎತ್ತುತ್ತಿಲ್ಲ. ಅದೆಷ್ಟೋ ಹೊತ್ತಿನ ಹೊತ್ತಿನ ನಂತರ ಮೊಬೈಲ್ ರಿಸೀವ್ ಆಯಿತು. ಫೋನೆತ್ತಿದಾತ, "ನಾನು ಆಸ್ಪತ್ರೆಯೊಂದರಲ್ಲಿ ಮಲಗಿಸಿಟ್ಟ ಹೆಣದ ಕಿಸೆಯಿಂದ ಈ ಫೋನೆತ್ತಿ ಮಾತನಾಡುತ್ತಿದ್ದೇನೆ, ನೀವು ಯಾರು" ಅಂತ ಕೇಳಿದನಂತೆ!
***

ತಾಜ್ ಹೋಟೇಲಿನ ಬಿಡುಗಡೆಗೆ ಯತ್ನಿಸಿದ ಕಮಾಂಡೋಗಳಲ್ಲಿ ಒಬ್ಬಾತ ಒಂದಿಬ್ಬರು ಭಯೋತ್ಪಾದಕರನ್ನು ಕೊಂದು, ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡು, ತನ್ನ ಕೆಲಸ ಮುಗಿಸಿ, ಮನೆಗೆ ಹೋದ. ನಾರೀಮನ್ ಹೌಸ್ ನಲ್ಲಿ ಮತ್ತೂ ಕೆಲಸ ಮುಂದುವರೆದಿತ್ತು. ಸಾಮಾನ್ಯ ನಾಗರಿಕನಂತೆ ಸಿವಿಲ್ ಡ್ರೆಸ್ ನಲ್ಲಿ ಬಂದು ನಿಂತು ಈತನೂ ಆ ಕಾರ್ಯಾಚರಣೆ ನೋಡುತ್ತಿದ್ದ. ಸುತ್ತಲಿನ ಜನಕ್ಕೆ ಆತ ಮತ್ತೊಬ್ಬ ದಾರಿಹೋಕ, ಅಷ್ಟೆ!
***

ಮುಂಬೈ ಭಯೋತ್ಪಾದನೆಯನ್ನು ಬಂಡವಾಳವಾಗಿಸಿಕೊಳ್ಳಲು ಹೊರಟ ರಾಜಕಾರಣಿಗಳ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ತಿರುಗಿ ಬಿದ್ದಿದ್ದಾರೆ. ಮೇಜರ್ ಸಂದೀಪ್ ನ ತಂದೆ ಉನ್ನಿಕೃಷ್ಣನ್ ಮನೆ ಬಾಗಿಲಿಗೆ ಬಂದ ಕೇರಳದ ಮುಖ್ಯಮಂತ್ರಿಯನ್ನೇ ಉಗಿದು ಕಳುಹಿಸಿದ್ದಾರೆ, ಗೃಹ ಮಂತ್ರಿಗೆ ಗೇಟ್ ಒಳಕ್ಕೆ ಬರಲೂ ಆಗಲಿಲ್ಲ. ಆ ದರಿದ್ರ ಮುಖ್ಯಮಂತ್ರಿ, ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತ, ಸಂದೀಪ್ ಇಲ್ಲದೇ ಹೋಗಿದ್ದರೆ ಆ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ ಎಂಬಂತಹ ಕೀಳು ಮಾತುಗಳನ್ನಾಡುತ್ತಾರೆ. ಮುಂಬೈ ನಗರದ ತುಂಬ ಬೇರೆ ಬೇರೆ ಪಕ್ಷಗಳ ಬ್ಯಾನರುಗಳು ತುಂಬಿಕೊಳ್ಳುತ್ತಿವೆ. ಹುತಾತ್ಮರಿಗೆ ಶೋಕ ವ್ಯಕ್ತಪಡಿಸಲು. ಸಾಮಾನ್ಯ ಜನರ ಒಬ್ಬೇ ಒಬ್ಬನ ಚಿತ್ರವಿಲ್ಲ ಅದರಲ್ಲಿ. ಕೇವಲ ಮೂರು ಟಾಪ್ ಕಾಪ್ ಗಳು ಮಾತ್ರ ಅವುಗಳಲ್ಲಿ ತುಂಬಿಕೊಂಡಿದ್ದಾರೆ. ನರೇಂದ್ರ ಮೋದಿಯಂತಹ ಮುತ್ಸದ್ದಿ, ಇನ್ನೂ ಕಾರ್ಯಾಚರಣೆ ಮುಗಿಯುವುದರೊಳಗೇ ಮುಂಬೈಗೆ ಬಂದುಬಿಡುತ್ತಾರೆ! -ಧಿಕ್ಕಾರ ಇವರಿಗೆಲ್ಲ.
***

ಮಹಾರಾಷ್ಟ್ರದ, ಇನ್ನೇನು ಮಾಜಿ ಆಗುವ ಸಾಧ್ಯತೆ ಇರುವ ವಿಲಾಸ್ ರಾವ್ ದೇಶ್ ಮುಖ್ ತನ್ನ ಮಗ ರಿತೀಶ್ ಮತ್ತು ರಾಮ್ ಗೋಪಾಲ್ ವರ್ಮಾರನ್ನು ಕರೆದುಕೊಂಡು ತಾಜ್ ವೀಕ್ಷಣೆಗೆ ತೆರಳುತ್ತಾರೆ. ಅದೇನದು ಪ್ರೇಕ್ಷಣೀಯ ಸ್ಥಳವೇ? ಆ ಮನುಷ್ಯ ಇನ್ನಾರು ತಿಂಗಳಿಗೆ ಇದೇ ವಸ್ತು ಇಟ್ಟುಕೊಂಡು ಚಿತ್ರ ಮಾಡುತ್ತಾನೆ. ಉರಿವ ಮನೆಯ ಗಳ ಹಿರಿಯುವ ಇಂಥವರೆನ್ನಲ್ಲ ಏನು ಮಾಡಬೇಕು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X