NEET 2026: 'ನೀಟ್'ನ್ನು ನೀಟಾಗಿಸುವುದನ್ನೇ ಮರೆತ ನರೇಂದ್ರ ಮೋದಿ ಸರ್ಕಾರ: ರಾಜೀವ್ ಹೆಗಡೆ ಬರಹ

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇತ್ತೀಚೆಗೆ ನಡೆಸಿದ್ದ 'ನೀಟ್ 2026' (NEET Exam 2026) ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ ತಪ್ಪಿತಸ್ಥರನ್ನು ಬಂಧಿಸುವಲ್ಲಿ ನಿರತವಾಗಿದೆ. ಇತ್ತ ಈ ವಿಚಾರವನ್ನು ರಾಜಕೀಯಗೊಳಿಸಿ ಲಾಭ ಪಡೆಯಲಾಗುತ್ತಿದೆ. ಸಿಬಿಐ ತನಿಖೆ, ಅಕ್ರಮ ಶುರುವಾಗುವುದು ಎಲ್ಲಿಂದ? ರಾಜಕೀಯ ಇನ್ನಿತರ ಪ್ರಮುಖ ಅಂಶಗಳ ಕುರಿತು ಪತ್ರಕರ್ತ, ಗ್ಲ್ಯಾನ್ಸ್ ಅಸೋಸಿಯೇಟ್ ಎಡಿಟರ್ 'ರಾಜೀವ್ ಹೆಗಡೆ' ಅವರ ಫೇಸ್‌ಬುಕ್ ಬರಹ ಇಲ್ಲಿದೆ.

'ಕಳೆದ ಒಂದು ವಾರದಿಂದ ದೇಶದೆಲ್ಲೆಡೆ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವು ಸದ್ದು ಮಾಡುತ್ತಿದೆ. ಪ್ರತಿಯೊಬ್ಬರೂ ತಮಗೆ ಮನಸ್ಸಿಗೆ ತೋಚಿದ ರೀತಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಬಹುತೇಕರಿಗೆ ಈ ವಿಚಾರದಲ್ಲಿ ಪರಿಹಾರಕ್ಕಿಂತ, ಪ್ರಚಾರದ ಅಗತ್ಯವಿದೆ. ʼನೀಟ್‌ʼನ್ನು ಕುಲಗೆಡಿಸಲು ʼಪರಿಶ್ರಮʼ ಪಡುತ್ತಿರುವವರೆಲ್ಲರೂ ರಾಜಕೀಯ ಹಿತವಚನ ನೀಡುತ್ತಿದ್ದಾರೆ. ಆದರೆ ʼನೀಟ್‌ʼ ಎನ್ನುವ ವ್ಯವಸ್ಥೆಯು ಎಷ್ಟು ನೀಟಾಗಿ ಶಿಕ್ಷಣದ ಮಾಫಿಯಾ ಆಗಿ ಬದಲಾಗಿದೆ ಎನ್ನುವ ಮೂಲ ವಿಚಾರಕ್ಕೆ ಯಾರೂ ಕೈ ಹಾಕುತ್ತಿಲ್ಲ.

NEET 2026 Paper Leak

ಅಂದಹಾಗೆ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳು ಇದೇ ಮೊದಲಲ್ಲ. ಪರೀಕ್ಷೆ ಆರಂಭವಾದ ವರ್ಷದಿಂದ ಇವತ್ತಿನವರೆಗೆ ಬರೋಬ್ಬರಿ ಹನ್ನೊಂದು ಬಾರಿ ಈ ವಿಚಾರಗಳು ಮುನ್ನೆಲೆಗೆ ಬಂದಿವೆ. ಕೇವಲ ಎರಡು ವರ್ಷ ಮಾತ್ರ ಬಹುತೇಕ ಸುಸೂತ್ರವಾಗಿ ಈ ಪರೀಕ್ಷೆ ನಡೆದಿದೆ. ಉಳಿದೆಲ್ಲ ಸಂದರ್ಭಗಳಲ್ಲಿ ಸಿಬಿಐವರೆಗೆ ಪ್ರಕರಣಗಳು ಹೋಗಿವೆ. ವಿಚಿತ್ರವೆಂದರೆ ಬರೋಬ್ಬರಿ ಹತ್ತು ಬಾರಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲೇ ಈ ಘಟನೆ ನಡೆದಿದೆ. ಹಾಗೆಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಕಠಿಣ ಪರೀಕ್ಷಾ ಅಕ್ರಮ ತಡೆ ಕಾನೂನು ರಚನೆಯಾದ ಬಳಿಕವೂ ಅಕ್ರಮ ಮರುಕಳಿಸಿದೆ' ಎಂದಿದ್ದಾರೆ.

Karnataka Weather: ರಾಜ್ಯಾದ್ಯಂತ ಧಾರಾಕಾರ ಮಳೆ ಎಚ್ಚರಿಕೆ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ನೆನ್ನೆ ಮಳೆಗೆ 3 ಸಾವು
Karnataka Weather: ರಾಜ್ಯಾದ್ಯಂತ ಧಾರಾಕಾರ ಮಳೆ ಎಚ್ಚರಿಕೆ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ನೆನ್ನೆ ಮಳೆಗೆ 3 ಸಾವು

'ವಿಶ್ವಗುರು ಆಗುತ್ತೇನೆ ಎಂದು ಹೊರಟವರಿಗೆ ಇದೊಂದು ಸಣ್ಣ ವಿಚಾರವನ್ನು ಸರಿಪಡಿಸುವುದು ಖಂಡಿತವಾಗಿಯೂ ದೊಡ್ಡ ವಿಚಾರವಲ್ಲ. ವಿಷಯ ಏನೆಂದರೆ ಈ ಅಕ್ರಮಗಳ ಫಲಾನುಭವಿಗಳು ದೊಡ್ಡವರಿರುವದರಿಂದ ಪರಿಹಾರ ಕ್ರಮಗಳ ಬಗ್ಗೆ ಮೇಲಿನಿಂದ ಕೆಳಗಿನವರೆಗೆ ಯಾರಿಗೂ ಆಸಕ್ತಿಯಿಲ್ಲ.

ಈ ವಿಚಾರದಲ್ಲಿ ಮೋದಿಯನ್ನು ಎಳೆದು ತರುವುದಕ್ಕೆ ಕೆಲವರಿಗೆ ಬೇಸರವಾಗಬಹುದು. ಆದರೆ ದೇಶದ ಅಭಿವೃದ್ಧಿಯ ಹೊಗಳಿಕೆಯನ್ನು ಸ್ವೀಕರಿಸುವ ಮೋದಿ, ಈ ವೈಫಲ್ಯವನ್ನು ಒಪ್ಪಿಕೊಳ್ಳಲೇಬೇಕು.
ವಿದೇಶಕ್ಕೆ ಹೋಗುವರಿಗೆ ನಿರ್ಬಂಧ ಎನ್ನುವ ಸುದ್ದಿಗೆ ಖುದ್ದು ಪ್ರಧಾನಿಯೇ ಸ್ಪಷ್ಟನೆ ನೀಡುತ್ತಾರೆ. ವಿದೇಶದಲ್ಲಿದ್ದರೂ ಪೋಸ್ಟ್‌ ಮಾಡಿ, ತಮ್ಮ ಕಾಳಜಿ ತೋರುತ್ತಾರೆ. ಆದರೆ ಈ ದೇಶದಲ್ಲೇ ಹಗಲಿರುಳು ಓದಿದ 22 ಲಕ್ಷ ಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನು ಮೋದಿ ಮಾಡಲೇ ಇಲ್ಲ. ಪರೀಕ್ಷಾ ಪೇ ಚರ್ಚಾ ಮೂಲಕ ಮನಗೆದ್ದ ಮೋದಿ, ಇಲ್ಲಿ ಮೌನವಹಿಸುವುದು ಉಚಿತವಲ್ಲ.

ಧರ್ಮೇಂದ್ರ ಪ್ರಧಾನ್ ದರ್ಪದ ಮಾತುಗಳು

ಇನ್ನೊಂದೆಡೆ ಧರ್ಮೇಂದ್ರ ಪ್ರಧಾನ್‌ ಎನ್ನುವ ಶಿಕ್ಷಣ ಸಚಿವರ ಮಾತುಗಳು ಕೂಡ ನಮ್ಮ ಮಧು ಬಂಗಾರಪ್ಪರ ದರ್ಪಕ್ಕಿಂತ ವಿಭಿನ್ನವಾಗಿರಲಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪಾಲಕರ ಕನಸಿನ ಜೊತೆ ಆಟವಾಡಿದ ಕೇಂದ್ರ ಸರ್ಕಾರವು, ಸಣ್ಣ ಕ್ಷಮೆಯನ್ನೂ ಕೇಳದೇ ಮರು ಪರೀಕ್ಷೆಯನ್ನು ಸ್ವಾಗತಿಸುತ್ತಿದೆ. ಮರುಪರೀಕ್ಷೆಗೆ ಶುಲ್ಕ ತೆಗೆದುಕೊಳ್ಳುತ್ತಿಲ್ಲ ಎನ್ನುವುದನ್ನೇ ದೊಡ್ಡ ಸಾಧನೆ ಎನ್ನುವ ಮಟ್ಟಿಗೆ ಎನ್‌ಟಿಎ ಹಾಗೂ ಕೇಂದ್ರ ಸರ್ಕಾರ ಪ್ರಚಾರ ಮಾಡುತ್ತಿದೆ. ಪೆಟ್ರೋಲ್‌ ದರ ಏರಿಕೆಗೆ ಇರಾನ್‌-ಅಮೆರಿಕ ಯುದ್ಧ ಕಾರಣವಿರಬಹುದು. ಉದ್ಯೋಗ ಕಡಿತಕ್ಕೆ ಎಐ ನೆಪವಾಗಿರಬಹುದು. ಇವೆಲ್ಲ ಸಂದರ್ಭಗಳಲ್ಲಿ ಮೋದಿಯ ನಿಲುವನ್ನು ಸಮರ್ಥಿಸಲು ಹತ್ತಾರು ಮಾರ್ಗಗಳು ಸಿಗಬಹುದು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಮಾತ್ರ, ಸಮರ್ಥನೆಗೆ ಒಂದಂಶವೂ ಸಿಗುವುದಿಲ್ಲ. ಬದಲಾಗಿ ಈ ವೈಫಲ್ಯಕ್ಕೆ ನೇರವಾಗಿ ನರೇಂದ್ರ ಮೋದಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ' ಎಂದು ವಿಶ್ಲೇಷಿಸಿದ್ದಾರೆ.

SSLC: ಮಗನಿಗೆ 55% ಅಂಕ, ವಿಶೇಷ ಕೇಕ್ ಕತ್ತರಿಸಿದ ಸಂಭ್ರಮಿಸಿದ ಕುಟುಂಬ; ನೆಟ್ಟಿಗರಿಂದ ಭಾರೀ ಮೆಚ್ಚುಗೆ
SSLC: ಮಗನಿಗೆ 55% ಅಂಕ, ವಿಶೇಷ ಕೇಕ್ ಕತ್ತರಿಸಿದ ಸಂಭ್ರಮಿಸಿದ ಕುಟುಂಬ; ನೆಟ್ಟಿಗರಿಂದ ಭಾರೀ ಮೆಚ್ಚುಗೆ

'ರಾಹುಲ್ ಗಾಂಧಿ‌‌ ಹೇಳಿದಂತೆ ಈ ವಿಚಾರದಲ್ಲಿ ಸಚಿವರು ತಲೆದಂಡ ಅಥವಾ ಬಹಿರಂಗ ಕ್ಷಮೆಯಾಚನೆ ಅತ್ಯಗತ್ಯವಾಗಿದೆ. ನಾವು ಕಳೆದ ಹತ್ತು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಎರಡು ಅಂಶಗಳನ್ನು ಸಾಮಾನ್ಯವಾಗಿ ಗಮನಿಸುತ್ತಿದ್ದೇವೆ. ಸೋರಿಕೆ ಹಾಗೂ ಕೋಚಿಂಗ್‌ ಕೇಂದ್ರಗಳ ನಂಟು, ಬಳಿಕ ಸಿಬಿಐನಿಂದ ಆರೋಪಿಗಳ ಬಂಧನ. ಇದು ಸರ್ವೇ ಸಾಮಾನ್ಯವಾಗಿ ಕಳೆದೊಂದು ದಶಕದಿಂದ ಚಾಚು ತಪ್ಪದೇ ನಡೆಯುತ್ತಿದೆ. ಆದರೆ ಈ ವಿಷ ಸರ್ಪದ ಮೂಲ ಎಲ್ಲಿದೆ ಎನ್ನುವುದು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಹಾಗೂ ಎನ್‌ಟಿಎನಲ್ಲಿ ಕುಳಿತಿರುವ ಪ್ರತಿಯೊಬ್ಬರಿಗೂ ತಿಳಿದಿದೆ. ಆ ವಿಚಾರಕ್ಕೆ ಕೈ ಹಾಕುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಕೋಚಿಂಗ್ ಮಾಫಿಯಾ, ಸಿಬಿಐ ತನಿಖೆ

ನೀಟ್‌ ಸೇರಿ ಈ ದೇಶದಲ್ಲಿನ ಪ್ರತಿಯೊಂದು ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಮೂರು ಪ್ರಮುಖ ಅಂಶಗಳಿವೆ. ಪ್ರಶ್ನೆ ಪತ್ರಿಕೆ ರಚಿಸುವ ವ್ಯವಸ್ಥೆಯಿಂದ ಸೋರಿಕೆ, ಕೋಚಿಂಗ್‌ ಮಾಫಿಯಾದಿಂದ ವಿತರಣೆ ಹಾಗೂ ದುಷ್ಟ ಪಾಲಕರಿಂದ ಖರೀದಿ. ಕಳೆದ ಹತ್ತು ವರ್ಷಗಳಲ್ಲಿ ಮಧ್ಯದಲ್ಲಿನ ಕೋಚಿಂಗ್‌ ಮಾಫಿಯಾದ ವಿತರಣೆ ವ್ಯವಸ್ಥೆಯ ಕೊನೆಯ ಕೆಲವು ಕೊಂಡಿಗಳನ್ನು ಬಲಿಪಶು ಮಾಡಿ, ಜನರನ್ನು ಮಂಗ ಮಾಡುವ ಕೆಲಸವನ್ನು ಸಿಬಿಐ ವ್ಯವಸ್ಥಿತವಾಗಿ ಮಾಡುತ್ತಿದೆ. ಬದಲಾಗಿ ಈ ದುಷ್ಟ ವ್ಯವಸ್ಥೆಗೆ ನಡುಕು ಹುಟ್ಟಿಸುವ ಕೆಲಸವನ್ನೇ ಮಾಡುತ್ತಿಲ್ಲ. ಹೊಸ ಕಾನೂನಿನ ರಚನೆಯಾಗಿದ್ದರೂ, ಅದರ ಸದ್ಬಳಕೆ ಆಗುತ್ತಿಲ್ಲ.

ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ: ಎನ್‌ಟಿಎ ಮೇಲೆ ಅನುಮಾನ

ವಿಷಯ ತಜ್ಞರಿಂದ ಪ್ರಶ್ನೆ ಪತ್ರಿಕೆ ರಚನೆಯಾದ ಬಳಿಕ ಅತ್ಯಂತ ಸುರಕ್ಷಿತವಾಗಿ ಮುದ್ರಣಕ್ಕೆ ಹೋಗುತ್ತದೆ. ಎಲ್ಲ ಭದ್ರತಾ ನಿಯಮಗಳನ್ನು ಹೊಂದಿರುವ ಮುದ್ರಣ ಘಟಕದಿಂದ ನೇರವಾಗಿ ನಿಯಮಬದ್ಧವಾಗಿ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಘಟಕಕ್ಕೆ ತಲುಪುತ್ತವೆ. ಈ ಹಂತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಬಳಿಕ ಕೋಚಿಂಗ್‌ ಮಾಫಿಯಾ ಹಾಗೂ ದುಷ್ಟ ಪಾಲಕರಿಂದ ಎಲ್ಲ ರೀತಿಯ ದುರುಪಯೋಗ ನಡೆಯುತ್ತದೆ. ಒಟ್ಟಿನಲ್ಲಿ ಈ ಅಕ್ರಮದ ಆರಂಭವು ಎನ್‌ಟಿಎಯ ಸುತ್ತಲಿನಿಂದಲೇ ನಡೆಯಬೇಕು. ಎನ್‌ಟಿಎಯೊಳಗಿನವರೇ ಅಕ್ರಮದಲ್ಲಿ ಭಾಗಿಯಾಗದೇ ಪ್ರತಿವರ್ಷವೂ ವ್ಯವಸ್ಥಿತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವೇ ಇಲ್ಲ.

Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?
Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?

ಭರವಸೆ ಬೇಡ, ಬದಲಾವಣೆ ಬೇಕು

ಸುಮ್ಮನೇ ಚುನಾವಣೆ ಬಂದಾಗ ಭಾಷಣ ಮಾಡಿ ಸುಳ್ಳು ಭರವಸೆ ನೀಡುವುದಕ್ಕಿಂತ ಕೆಲ ಸಣ್ಣ ಬದಲಾವಣೆ ಮಾಡಿಬಿಡಿ. ಅದರಿಂದ ಯಾವುದೇ ಗೊಂದಲವಿರುವುದಿಲ್ಲ. ಅಂದ್ಹಾಗೆ ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ನೀಟ್‌ ನಡೆಯಲಿದೆ ಎಂದು ʼಧರ್ಮಪರʼ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಉವಾಚಿಸಿದ್ದಾರೆ. ಆದರೆ ಈ ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನುವುದು ನೀಟ್‌ಗೆ ಸೀಮಿತವಾಗಿಲ್ಲ. ಹೀಗಾಗಿ ಇಂತಹದೊಂದು ಸಣ್ಣ ಬದಲಾವಣೆ ಮಾಡಲು ಸಾಧ್ಯವೇ ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶೀಲಿಸಬಹುದಾಗಿದೆ.

ಇಚ್ಛಾಶಕ್ತಿಯೇ ಪರಿಹಾರ ಮಾರ್ಗ

ಈ ದೇಶದಲ್ಲಿ ಬಜೆಟ್‌ ಮಂಡನೆ ಮಾಡುವಾಗ ವಿಶೇಷವಾದ ಕ್ವಾರಂಟೈನ್‌ ಜೀವನಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳು ಹೋಗುತ್ತಾರೆ. ಬಜೆಟ್‌ ಪುಸ್ತಕ ರಚನೆಯಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ಪ್ರತ್ಯೇಕ ಕಚೇರಿಯಲ್ಲಿ ಕೂರಿಸಿ, ಪುಸ್ತಕ ಮುದ್ರಣ ಮಾಡಲಾಗುತ್ತದೆ.

ಅವರನ್ನು ಡಿಜಿಟಲ್‌ ಲೋಕದಿಂದಲೂ ಹೊರಗಿಡಲಾಗುತ್ತದೆ. ಮನೆಯಲ್ಲಿ ಸಾವಾದಾಗಲೂ ಹೋಗದೇ ಕರ್ತವ್ಯ ನಿಷ್ಠೆ ಮೆರೆದ ಅಧಿಕಾರಿಗಳ ಬಗ್ಗೆ ವಿರೋಚಿತ ಸುದ್ದಿಗಳನ್ನು ಕೂಡ ಓದಿದ್ದೇವೆ. ಇದೇ ರೀತಿ ಈ ದೇಶದಲ್ಲಿ ನಡೆಯುವ ಪ್ರತಿ ಪರೀಕ್ಷೆಗೂ ಮಾಡಬೇಕಿದೆ. ಏಳನೇ ತರಗತಿಯ ಬೋರ್ಡ್‌ ಪರೀಕ್ಷೆಯಿಂದ ಯುಪಿಎಸ್‌ಸಿ ಪರೀಕ್ಷೆವರೆಗೆ ಎಲ್ಲವೂ ಆಯಾ ಕುಟುಂಬಕ್ಕೆ ಬಜೆಟ್‌ನಷ್ಟೇ ಪ್ರಮುಖ ಹಾಗೂ ಆದ್ಯತೆಯ ವಿಚಾರವಾಗಿರುತ್ತದೆ' ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ತಯಾರಿಕೆ ಸುಲಭ

ಡಿಜಿಟಲ್‌ ಲೋಕದಲ್ಲಿ ಹಿಂದಿನಂತೆ ಪ್ರಶ್ನೆ ಪತ್ರಿಕೆ ತಯಾರಿಗೆ ತಿಂಗಳುಗಟ್ಟಲೇ ತಯಾರಿಬೇಕಿಲ್ಲ. ಇಂದಿನ ಎಐ ಹಾಗೂ ತಾಂತ್ರಿಕ ಜಗತ್ತಿನ ಸಹಾಯದಿಂದ ಪರೀಕ್ಷೆಗೆ ಒಂದು ದಿನದ ಹಿಂದೆಯೇ ಬೇಕಾದಷ್ಟು ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಬಹುದು. ವಿಷಯ ತಜ್ಞರನ್ನು ಪರೀಕ್ಷೆಗೆ ಒಂದೆರಡು ದಿನವಿರುವ ಮುನ್ನ ಕರೆಯಿಸಿಕೊಂಡು, ಕ್ವಾರಂಟೈನ್‌ ಮಾಡಬೇಕು.

ಪರೀಕ್ಷೆ ಮುಗಿಯುವರೆಗೆ ಈ ವಿಷಯ ತಜ್ಞರು ಆ ಕಚೇರಿಯಿಂದ ಹೊರ ಹೋಗಕೂಡದು ಹಾಗೂ ಅವರಿಗೆ ಜಗತ್ತಿನ ಸಂಪರ್ಕವಿರಕೂಡದು. ಹಾಗೆಯೇ ಆ ವ್ಯವಸ್ಥೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಹಿರಿ, ಕಿರಿಯ ಅಧಿಕಾರಿಗೂ ಇದು ಅನ್ವಯವಾಗಬೇಕು. ಇವತ್ತಿನ ಸರ್ಕಾರಿ ವ್ಯವಸ್ಥೆಯಲ್ಲಿ ದೇಶದ ಯಾವುದೇ ಮೂಲೆಗೆ ಪ್ರಶ್ನೆ ಪತ್ರಿಕೆಗಳನ್ನು ಒಂದು ನಿಮಿಷದಲ್ಲಿ ಕೊಡಬಹುದು. ಬಹುತೇಕ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್‌ ಹಾಗೂ ಮುದ್ರಣ ವ್ಯವಸ್ಥೆಯಿದೆ. ಅಷ್ಟಕ್ಕೂ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ವಿಶೇಷವಾದ ತಂತ್ರಜ್ಞಾನದ ಅಗತ್ಯವಿಲ್ಲ. ಅಲ್ಲೇನೂ ದೇಶದ ಗೌಪ್ಯತೆಯ ಚಿಹ್ನೆಗಳನ್ನು ಬಳಸುವುದಿಲ್ಲ.

ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು ಎನ್ನುವುದಷ್ಟೇ ಎಲ್ಲರ ಆದ್ಯತೆ ಆಗಬೇಕು. ಈ ಹಂತದಲ್ಲಿ ಕೆಲವು ನಿಮಿಷಗಳ ಕಾಲ ವಿಳಂಬವಾಗಬಹುದು. ಅದನ್ನೇ ೧೫ ನಿಮಿಷಗಳ ಹೆಚ್ಚುವರಿ ಸಮಯವೆಂದು ಪರಿಗಣಿಸಬಹುದಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಆಗಮಿಸಿದ ಕೂಡಲೇ ಪರೀಕ್ಷಾ ಕೇಂದ್ರವಾರು ಪಾಸ್‌ವರ್ಡ್‌ ಮೂಲಕ ಪ್ರಶ್ನೆ ಪತ್ರಿಕೆ ತೆರೆದು ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಹಂಚಬಹುದು. ಮುಂದಿನ ವರ್ಷದ ನೀಟ್‌ಗೆ ಈ ಮುದ್ರಣ ಬಿಟ್ಟು ಉಳಿದಿರುವುದನ್ನು ಪಾಲಿಸಬಹುದು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಇರುವುದರಿಂದ ಆ ಹಂತದಲ್ಲಿ ಸೋರಿಕೆ ಅಥವಾ ಇನ್ಯಾವುದೇ ಸಮಸ್ಯೆ ಬರದು.

ಬೆಂಗಳೂರು-ಮುಂಬೈಗೆ ಹೊಸ ನೇರ ರೈಲಿಗೆ ಗ್ರೀನ್ ಸಿಗ್ನಲ್; ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲ್ ಕಾರಿಡಾರಿಗೆ ಬೇಡಿಕೆ
ಬೆಂಗಳೂರು-ಮುಂಬೈಗೆ ಹೊಸ ನೇರ ರೈಲಿಗೆ ಗ್ರೀನ್ ಸಿಗ್ನಲ್; ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲ್ ಕಾರಿಡಾರಿಗೆ ಬೇಡಿಕೆ

ಪರೀಕ್ಷಾ ಘಟಕಕ್ಕೆ ಮುದ್ರಣ ಯಂತ್ರ ಕೊಡಿ

ಒಂದೊಮ್ಮೆ ಸಣ್ಣ ತಾಂತ್ರಿಕ ಸಮಸ್ಯೆಯಾದರೂ ಅದನ್ನು ಅಲ್ಲಿಯೇ ಸ್ಥಳೀಯವಾಗಿ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಅಕ್ರಮಗಳು ನಡೆಯದಂತೆ ಮಾಡಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿಸಿಟಿವಿ ಮಾಡುವ ಸರ್ಕಾರಕ್ಕೆ, ಇದೇನು ದೊಡ್ಡ ಸಮಸ್ಯೆಯಾಗದು. ಪ್ರತಿ ಪರೀಕ್ಷಾ ಘಟಕಕ್ಕೂ ಮುದ್ರಣ ಯಂತ್ರ ಕೊಡಬೇಕು ಎನ್ನುವ ನಾಟಕವಾಡಿ, ಅದಕ್ಕೆ ಆರ್ಥಿಕ ವೆಚ್ಚದ ಕಥೆ ಹೇಳಬಹುದು. ಆದರೆ ಇಂದಿನ ಕಾಲದಲ್ಲಿ ಮುದ್ರಣ ಯಂತ್ರಗಳು ಕೂಡ ಬಾಡಿಗೆಗೆ ಸಿಗುತ್ತವೆ. ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಈ ಕ್ರಮವನ್ನು ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ.
ಇದು ಪರೀಕ್ಷೆಗೆ ಸಂಬಂಧಿಸಿದ ವಿಚಾರ. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆಯ ಇನ್ನೆರಡು ಮಜಲುಗಳಿವೆ.

ಮೊದಲನೇಯದ್ದು ಕೋಚಿಂಗ್‌ ಮಾಫಿಯಾ ಹಾಗೂ ಎರಡನೇಯದ್ದು ದುಷ್ಟ ಪಾಲಕರು. ಲಂಚವನ್ನು ಪಡೆಯುವುದು ಎಷ್ಟು ಅಪರಾಧವೋ, ಅದೇ ರೀತಿ ಲಂಚ ಕೊಡುವುದು ಕೂಡ ಅಪರಾಧ ಎಂದು ಭ್ರಷ್ಟಾಚಾರ ತಡೆ ಕಾಯ್ದೆ ಹೇಳುತ್ತದೆ. ಹಾಗೆಯೇ ಇಲ್ಲಿಯೂ ಪ್ರಶ್ನೆ ಪತ್ರಿಕೆ ಹಂಚುವುದರ ಜೊತೆಗೆ ಖರೀದಿಸುವುದು ಕೂಡ ದೊಡ್ಡ ಅಪರಾಧ ಎನ್ನುವುದನ್ನು ಸಿಬಿಐ ಹಾಗೂ ಇತರ ತನಿಖಾ ಸಂಸ್ಥೆಗಳು ಮಾಡಿ ತೋರಿಸಬೇಕಿದೆ. ಕೋಚಿಂಗ್‌ ಮಾಫಿಯಾ ಹಾಗೂ ನೀಟ್‌ ಬಗ್ಗೆ ಇನ್ನೊಂದು ಲೇಖನ ಬರೆಯುತ್ತೇನೆ. ಆದರೆ ನೀಟ್‌ ಹೆಸರು ಹೇಳಿಕೊಂಡು ಕೋಚಿಂಗ್‌ ಮಾಫಿಯಾ ಮಾಡುತ್ತಿರುವ ನಾಟಕಕ್ಕೆ ಸಿಬಿಐ ಸರಿಯಾಗಿಯೇ ಉತ್ತರ ನೀಡಬೇಕಿದೆ. ಕೋಚಿಂಗ್‌ ಕೇಂದ್ರಗಳಿಗೆ ನಡುಕ ಹುಟ್ಟಿಸದಿದ್ದರೆ, ಇಂತಹ ಸೋರಿಕೆಗಳು ನಡೆಯುತ್ತಲೇ ಇರುತ್ತವೆ. ಏಕೆಂದರೆ ನಮ್ಮ ಸರ್ಕಾರದ ನಿಯಮಗಳನ್ನು ನಿರ್ಧರಿಸುವ ಮಟ್ಟಿಗೆ ಅವರು ಬೆಳೆಯುತ್ತಿದ್ದಾರೆ.

ಪ್ರಶ್ನೆ ಪತ್ರಿಕೆ ಖರೀದಿಸುವವರಿಗೆ ಜೈಲು

ಹಾಗೆಯೇ ಲಕ್ಷಗಟ್ಟಲೇ ಕೊಟ್ಟು ಪ್ರಶ್ನೆ ಪತ್ರಿಕೆ ಖರೀದಿಸುವ ಪ್ರತಿಯೊಬ್ಬ ಪ್ರೀತಿಪಾತ್ರ ಪಾಲಕರನ್ನು ಜೈಲಿಗೆ ಅಟ್ಟಬೇಕು. ಇವರಿಂದಲೇ ಇಂದು ಬಡಪಾಯಿ ಮಕ್ಕಳು ಬೀದಿಗೆ ಬರುತ್ತಿದ್ದಾರೆ. ಈ ದುಡ್ಡಿರುವವರ ಜಗತ್ತಿನಲ್ಲಿ ಬಡ ಮಕ್ಕಳು ಸ್ಪರ್ಧಿಸದ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲೋ ಒಂದೆರಡು ರಣರೋಚಕ ಕಥೆಗಳು ಮಾಧ್ಯಮದಲ್ಲಿ ಬರಬಹುದು. ಆದರೆ ಈ ಭ್ರಷ್ಟ ವ್ಯವಸ್ಥೆಯಿಂದ ಬಡ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ದೂರವಾಗುವ ಕಾಲ ಬರುತ್ತಿದೆ. ಬಡವರು ಹಾಗೂ ಮಧ್ಯಮ ವರ್ಗಕ್ಕೆ ಅನ್ಯಾಯವಾಗಬಾರದು ಎನ್ನುವ ಕಾರಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ಬಂದವು. ಆದರೆ ಅದನ್ನೇ ಉದ್ಯಮವಾಗಿಸಿಕೊಂಡ ವ್ಯವಸ್ಥೆಯು, ಅದೇ ಬಡ ಮಕ್ಕಳು ಬೀದಿಗೆ ಬರುವಂತೆ ಮಾಡಿವೆ.

ಕೊನೆಯದಾಗಿ: ನೀಟ್‌ ಅವ್ಯವಸ್ಥೆಗೆ ಮೋದಿ ಕಾರಣವಿರಬಹುದು ಎನ್ನುವ ಕಾರಣಕ್ಕೆ ವ್ಯವಸ್ಥೆಯನ್ನೇ ರದ್ದು ಮಾಡಿ ಎನ್ನುವುದು ಮೂರ್ಖತನ. ಹಾಗೆಯೇ ನೀಟ್‌ ಗೊಂದಲದಿಂದ ಜೀವತೆತ್ತ ಬಡ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು ಕೂಡ ಅಷ್ಟೇ ಪೆದ್ದುತನ. ಒಟ್ಟಾರೆ ಈ ರಾಜಕೀಯ ದುಷ್ಟ ವ್ಯವಸ್ಥೆಯು ನಮ್ಮ ಬಡ ವಿದ್ಯಾರ್ಥಿಗಳ ರಕ್ತ ಹೀರುತ್ತಿದೆ. ಈ ಯುವ ಪಡೆಯು ನಿಮ್ಮ ವಿರುದ್ಧ ನಿಲ್ಲುವ ಮೊದಲು, ವ್ಯವಸ್ಥೆಯನ್ನು ಕಾನೂನಿನ ಪುಸ್ತಕದ ಬದಲಾಗಿ ಇಚ್ಛಾಶಕ್ತಿಯ ಮೂಲಕ ಸರಿಪಡಿಸಿ. ನೀಟ್‌ ಸೇರಿ ಎಲ್ಲ ಪರೀಕ್ಷಾ ವ್ಯವಸ್ಥೆಯನ್ನು ನೀಟಾಗಿ ಮಾಡಿ. ಇಲ್ಲವಾದಲ್ಲಿ ನಿಮಗೆ ರೈಟ್‌ ಹೇಳುವ ಕಾಲ ಹತ್ತಿರವಾಗಬಹುದು' ಎಂದು ಅವರು ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಗೆ ಅನೇಕರು ಕಾಮೆಂಟ್‌ಗಳನ್ನು ಮಾಡಿ ನೀಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+