ಕೇರಳ ಸಿಎಂ ಆಗಿ ಇಂದು ವಿ.ಡಿ ಸತೀಶನ್ ಪ್ರಮಾಣವಚನ; ಸಚಿವ ಸಂಪುಟದಲ್ಲಿ ವೆಣುಗೋಪಾಲ್ ಬಣ ಮೇಲುಗೈ
ಕೇರಳ ವಿಧಾನಸಭೆ ಚುನಾವಣೆಗಳಲ್ಲಿ 140 ರಲ್ಲಿ 102 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಬಹುಮತ ಗಳಿಸಿದೆ. ಈ ಗೆಲುವು ದಾಖಲಿಸಿ ಸುಮಾರು ಎರಡು ವಾರಗಳ ಬಳಿಕ ನಿಯೋಜಿತ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ನೇತೃತ್ವದ 21 ಸದಸ್ಯರ ಸಂಪುಟ ಇಂದು ಸೋಮವಾರ (ಮೇ 18) ಅಧಿಕಾರ ಸ್ವೀಕರಿಸಲಿದೆ.
ಸಿಎಂ ಆಗಿ ಪ್ರದಗ್ರಹಣ ಮಾಡಲಿರುವ ವಿ.ಡಿ.ಸತೀಶನ್ ಸೇರಿದಂತೆ 14 ಮಂದಿ ಹೊಸ ಸಚಿವರು ಸಂಪುಟದಲ್ಲಿದ್ದಾರೆ. ಆದರೆ, ನಿನ್ನೆ ಭಾನುವಾರ ಘೋಷಿಸಿದ ಪಟ್ಟಿ ಪ್ರಕಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಾಮನಿರ್ದೇಶಿತರೇ ಸಚಿವ ಸಂಪುಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇವರು ಸಿಎಂ ಸ್ಥಾನದ ಆಕಾಂಕ್ಷಿ ಎನ್ನಲಾಗಿತ್ತು. ಆದರೆ ಆ ಪಟ್ಟ ಸತೀಶನ್ ಅವರ ಪಾಲಾಯಿತು.

ಸಿಎಂ ಬಳಿ ಹಣಕಾಸು ಖಾತೆ, ಕೆಸಿವಿ ಬಣಕ್ಕೆ ಪ್ರಮುಖ ಖಾತೆಗಳು
ಹಣಕಾಸಿನ ಸವಾಲುಗಳಿರುವ ಸರ್ಕಾರದಲ್ಲಿ ರಾಜ್ಯ ಹಣಕಾಸು ಖಾತೆ ಸಿಎಂ ಸತೀಶನ್ ಅವರ ಬಳಿಯೇ ಉಳಿಸಿಕೊಳ್ಳಲಾಗಿದೆ. ಪ್ರಮುಖ ಗೃಹ ಮತ್ತು ವಿಚಕ್ಷಣಾ ಖಾತೆಗಳು ಪ್ರತಿಸ್ಪರ್ಧಿ ರಮೇಶ್ ಚೆನ್ನಿತ್ತಲ ಅವರಿಗೆ ಸಿಕ್ಕಿವೆ. ಕಾಂಗ್ರೆಸ್‌ನ ಹೆಚ್ಚಿನ ಪ್ರಮುಖ ಖಾತೆಗಳು ಕೆ.ಸಿ. ವೇಣುಗೋಪಾಲ್ ಬಣಕ್ಕೆ ಸಿಕ್ಕಿವೆ.
ಗುಂಪು ನಿಷ್ಠೆ ಕಾರಣ, ಕಾಂಗ್ರೆಸ್ ಹಲವು ಹಿರಿಯ ಶಾಸಕರನ್ನು ನಿರ್ಲಕ್ಷಿಸಿ ನಾಲ್ವರು ಹೊಸಬರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಮೈತ್ರಿಕೂಟದ ಉತ್ತಮ ಪ್ರದರ್ಶನವು ಪಕ್ಷದೊಳಗೆ ಕೆಲ ವಾರಗಳ ತೀವ್ರ ಲಾಬಿ ಬಳಿಕ ಸತೀಶನ್ ಅವರಿಗೆ ಸಿಎಂ ಸ್ಥಾನ ಸಿಕ್ಕಿತು. ಹೀಗಾಗಿ ಬಣಗಳಾಗಿ ಗುರುತಿಸಿಕೊಳ್ಳುಂತಾಯಿತು.
ಮಿತ್ರ ಪಕ್ಷಗಳಿಗೆ ಮಂತ್ರಿ ಸ್ಥಾನ ಹಂಚಿಕೆ ಆಗಿದ್ದೆಷ್ಟು?
ಮೈತ್ರಿ ಪಕ್ಷಗಳ ಪೈಕಿ 22 ಸದಸ್ಯರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಐದು ಸಚಿವ ಸ್ಥಾನಗಳನ್ನು ಪಡೆದಿದ್ದರೆ, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಜಾಕೋಬ್), ಆರ್‌ಎಸ್‌ಪಿ ಮತ್ತು ಸಿಎಂಪಿ ತಲಾ ಒಂದೊಂದು ಸಚಿವ ಸ್ಥಾನ ಗಳಿಸಿವೆ. ಐಯುಎಂಎಲ್‌ನ ಐವರು ನಾಮನಿರ್ದೇಶಿತರ ಹೆಸರನ್ನು ಘೋಷಿಸಿದ ರಾಜ್ಯಾಧ್ಯಕ್ಷ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಲ್, 2011-2016 ರ ಯುಡಿಎಫ್ ಆಡಳಿತದಲ್ಲಿ ಪಕ್ಷವು ನಿರ್ವಹಿಸಿದ್ದ ಖಾತೆಗಳನ್ನೇ ಮುಂದುವರಿಸಲಿದೆ ಎಂದು ತಿಳಿಸಿದರು.
ಹಿಂದಿನ ಯುಡಿಎಫ್ ಸರ್ಕಾರಗಳಲ್ಲಿ ಐಯುಎಂಎಲ್ ಕೈಗಾರಿಕೆ, ಶಿಕ್ಷಣ, ಲೋಕೋಪಯೋಗಿ, ಮಾಹಿತಿ ತಂತ್ರಜ್ಞಾನ ಮತ್ತು ಸ್ಥಳೀಯ ಸ್ವ-ಸರ್ಕಾರದಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿತ್ತು. ಭಾನುವಾರ ಸಂಜೆ, ಸತೀಶನ್ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರಿಗೆ ಹಸ್ತಾಂತರಿಸಿದರು.













Click it and Unblock the Notifications