ವಿಲಾಸ್ ರಾವ್ ದೇಶಮುಖ್ ರಾಜೀನಾಮೆ?
ಮುಂಬೈ, ಡಿ. 1 : ಮುಂಬೈ ಭಯೋತ್ಪಾದನೆ ಮೂರನೇ ತಲೆದಂಡ ಸಾಧ್ಯತೆ ಹೆಚ್ಚಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಇಂದು ತಮ್ಮ ಸ್ಥಾನ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚೌಹಾಣ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಚೌಹಾಣ್ ಮುಂದಿನ 48 ಗಂಟೆಯೊಳಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಭಾರಿ ಒತ್ತಡದ ನಡುವೆಯೂ ಮಾಧ್ಯಮಗೋಷ್ಠಿ ನಡೆಸಿದ ವಿಲಾಸ್ ರಾವ್ ದೇಶಮುಖ್, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರಿಗೆ ರಾಜೀನಾಮೆ ಕುರಿತು ಚರ್ಚಿಸಲಾಗಿದೆ. ಮುಂದಿನ ಕ್ರಮ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಅವಕರು ಹೇಳಿದರು. ವಿಲಾಸ್ ರಾವ್ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ದೆಹಲಿ ಮತ್ತು ಗುರಾತಿನಲ್ಲೂ ದಾಳಿ ನಡೆದಿತ್ತು. ಈ ಘಟನೆಗೆ ನೈತಿಕ ಹೊಣಿ ಹೊತ್ತು ಅಲ್ಲಿನ ಬಿಜೆಪಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದರೆ ಎಂದು ದೇಶಮುಖ್ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಮಾತನಾಡಿ, ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರಿಗೆ ಯೋಗ್ಯತೆ ಇಲ್ಲ ಹೇಳಿದ್ದಾರೆ. ಮುಂಬೈ ದಾಳಿ ಸರ್ಕಾರದ ವೈಫಲ್ಯಕ್ಕೆ ನೇರ ಕಾರಣವಾಗಿದೆ ಎಂದು ಪ್ರತಿಪಕ್ಷಗಳು ಟೀಕೆಗಳ ಸುರಿಮಳೆ ಸುರಿಸಿದ್ದವು. ಕಾಂಗ್ರೆಸ್ ಕಾರ್ಯಕಾರಣಿಯಲ್ಲೂ ದೇಶಮುಖ್ ಅವರ ಕಾರ್ಯ ವೈಖರಿಗೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸರ್ಕಾರದ ವೈಫಲ್ಯ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಭಾರಿ ಪರಿಣಾಮ ಬೀರುವ ಸಂಭವವಿದೆ. ಆದ್ದರಿಂದ ಶಿವರಾಜ್ ಪಾಟೀಲ್, ವಿಲಾಸ್ ರಾವ್ ದೇಶಮುಖ್, ಹಾಗೂ ಆರ್ ಆರ್ ಪಾಟೀಲ್ ತಮ್ಮ ಸ್ಥಾನ ತೆರವುಗೊಳಿಸಬೇಕು ಎನ್ನುವ ನಿರ್ಧಾರಕ್ಕೆ ಕಾರ್ಯಕಾರಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು. ಸೋನಿಯಾ ಗಾಂಧಿ ಕೂಡಾ ರಾಜೀನಾಮೆಗೆ ಸಮ್ಮತಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications