ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರಿನ ಸುದ್ದಿ ಕೊಡಿ ಸ್ವಾಮೀ : ಗಿರೀಶ್ ಜಮದಗ್ನಿ

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಗಿರೀಶ್ ಜಮದಗ್ನಿ, ಸಿಂಗಪುರ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕಳೆದ ಸುಮಾರು ಹದಿನೈದು ವರ್ಷಗಳಿಂದ ಕನ್ನಡ ಅಂತರ್ಜಾಲ ಮತ್ತು ಬ್ಲಾಗ್ ತಾಣಗಳನ್ನು ಜಾಲಾಡುತ್ತಲೇ ಬಂದಿದ್ದೇನೆ. ದಿನದಿಂದ ದಿನಕ್ಕೆಅಂತರ್ಜಾಲದಲ್ಲಿ ಸಾವಿರಾರು ಕನ್ನಡ ಪುಟಗಳು ಸೇರ್ಪಡೆಯಾಗುತ್ತಿರುವುದನ್ನ ಕಂಡು ಬಹಳ ಖುಷಿ ಪಟ್ಟಿದ್ದೇನೆ ಕೂಡ.

ಆದರೆ, ಅಂತರ್ಜಾಲದಲ್ಲಿ ಕನ್ನಡದ ಇಲ್ಲಿಯವರೆಗಿನ ಪಯಣ ಅಷ್ಟೊಂದು ಸುಗಮವಾಗಿಲ್ಲ. ಕಣ್ಣ ಮುಂದೆಯೇ ಹುಟ್ಟಿ, ಅಂಬೆಗಾಲಿಟ್ಟು, ನೋಡನೋಡುತ್ತಲೇ ಬೃಹತ್ತಾಗಿ ಬೆಳೆದು ಅಪಾರ ಓದುಗ ಅಭಿಮಾನಿಗಳನ್ನು ಹೊಂದಿರುವ ಬೆರಳೆಣಿಕೆಯಷ್ಟು ತಾಣಗಳನ್ನು ಕಂಡಿದ್ದೇನೆ. ಆದರೆ, ವೈಭವೋಪೇತ ಪ್ರಾರಂಭ ಕಂಡು, ಅಪಾರ ಭರವಸೆ ಹುಟ್ಟಿಸಿ, ಮಧ್ಯದಲ್ಲೇ ದಾರಿತಪ್ಪಿ ಹೇಳ ಹೆಸರಿಲ್ಲದಂತೆ ಕಾಣೆಯಾದ ಅಸಂಖ್ಯಾತ ಆನ್‌ಲೈನ್ ಪೋರ್ಟಲ್ ಮತ್ತು ಬ್ಲಾಗ್‌ಗಳನ್ನೂ ನೋಡಿದ್ದೇನೆ. ಇದರ ಬಗ್ಗೆ ಬಹಳಷ್ಟು ಬಾರಿ ಚಿಂತಿಸಿದ್ದೂ ಇದೆ.

ಪೋರ್ಟಲ್ ಮತ್ತು ಬ್ಲಾಗ್‌ಗಳ ಸಫಲತೆ ಮತ್ತು ಜನಪ್ರಿಯತೆಯನ್ನು ಅವು ಗಳಿಸುವ "ಹಿಟ್"(ಪುಟ ದರ್ಶನ)ಗಳಿಂದ ಅಳೆಯುವ ಪರಿಪಾಠವಿದೆ. ಅದನ್ನು ಗಳಿಸುವ ಧಾವಂತದಲ್ಲಿ ಮಾಡುವ ಎಡವಟ್ಟುಗಳೇ ವೆಬ್ ಪೋರ್ಟಲ್‌ಗಳ ಅಳಿವಿಗೆ ಕಾರಣವಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ನಾ ಮುಂದೆ ಹೇಳುವ ಬೇಕು-ಬೇಡಗಳೆಲ್ಲವೂ ಒಬ್ಬ ಅನಿವಾಸಿ ಕನ್ನಡಿಗನ ದೃಷ್ಟಿಯಿಂದ ನೋಡಿದ್ದು. ಎಲ್ಲರಿಗೂ ಇದು ಸಮ್ಮತವಾಗಬೇಕಿಲ್ಲ.

Kannada online survey 2014 : My expectations - Girish Jamadagni

ಜಾಹೀರಾತು ಮಿತವಾಗಿದ್ದರೆ ಹಿತ : ಸುದ್ದಿ, ಸಮಾಚಾರಗಳನ್ನು ಹೊಂದಿರುವ ಅಂತರ್ಜಾಲ ಪೋರ್ಟಲ್‌ಗಳ ಅಸ್ತಿತ್ವ ಮತ್ತು ಆಡಳಿತ ಬಹುತೇಕವಾಗಿ ಅವು ಗಳಿಸುವ ಜಾಹೀರಾತಿನ ಆದಾಯವನ್ನು ಆಧರಿಸುತ್ತವೆ. ಆದುದರಿಂದ, ಜಾಹೀರಾತುಗಳು ಓದುಗರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡಿದರೂ ಅವುಗಳನ್ನು ಸಂಪೂರ್ಣವಾಗಿ ಕೈಬಿಡಿ ಎಂದು ಹೇ(ಕೇ)ಳುವುದು ಸಮಂಜಸವಲ್ಲ. ಆದರೆ ಪುಟದ ಮುಕ್ಕಾಲು ಭಾಗವನ್ನು ಜಾಹೀರಾತುಗಳೇ ಆಕ್ರಮಿಸಿ, ಲೇಖನಕ್ಕಾಗಿ ಹುಡುಕಾಡುವಂತೆ ಆದರೆ ಅದು ಬಹು ದೊಡ್ಡ ಅನಾನುಕೂಲವೇ ಸರಿ. ಜಾಹೀರಾತುಗಳು ಹಿತ ಮಿತವಾಗಿದ್ದಲ್ಲಿ ಎಲ್ಲರಿಗೂ ಸೌಖ್ಯ.

ಇತ್ತೀಚೆಗೆ ಸಣ್ಣ-ಪುಟ್ಟ ಅಸಂಬದ್ಧ ಸುದ್ದಿಗಳನ್ನೆಲ್ಲಾ ವೈಭವೀಕರಿಸಿ, ರೋಚಕವಾಗಿ ಹೇಳುವ ಕೆಟ್ಟ ಚಾಳಿ ಟಿ.ವಿ. ಮತ್ತು ಇತರ ಮಾಧ್ಯಮಗಳಲ್ಲಿ ವಿಕಾರವಾಗಿ ಬೆಳೆದಿದೆ. ಕನ್ನಡ ಅಂತರ್ಜಾಲ ಪೋರ್ಟಲ್‌ಗಳು ಕೂಡ ಇದರಿಂದ ಹೊರತಾಗಿಲ್ಲದಿರುವುದು ದುರದೃಷ್ಟಕರ. ಸುದ್ದಿಯನ್ನು ದ್ವಂದ್ವಾರ್ಥ ಅಥವಾ ರೋಚಕ ಟೈಟಲ್‌ನೊಂದಿಗೆ ಬಿಂಬಿಸಿದರೆ ಸಾಕಷ್ಟು "ಪುಟ-ದರ್ಶನ"ವಾಗುತ್ತದೇನೋ ನಿಜ. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ. ವಸ್ತುನಿಷ್ಠ, ಕೇಂದ್ರೀಕೃತ ವರದಿಗಳಿಗೆ ಈಗಲೂ ಸಾಕಷ್ಟು ಓದುಗರಿದ್ದಾರೆ.

ಬರವಣಿಗೆಯಲ್ಲಿ ಸ್ವಂತಿಕೆ ಇರಲಿ : ಕನ್ನಡ ಅಂತರ್ಜಾಲ ಪತ್ರಿಕೆಗಳಲ್ಲಿ ವರದಿಗಾರರಿರುವುದಿಲ್ಲ, ತರ್ಜುಮೆಗಾರರು ಮಾತ್ರ ಇರುತ್ತಾರೆ ಎನ್ನುವ ಮಾತು ಬಹಳ ಪ್ರಚಲಿತ. ಕೆಲವು ಅಂತರ್ಜಾಲ ಕನ್ನಡ ಪತ್ರಿಕೆಗಳನ್ನು ನೋಡಿದರೆ ಈ ಆಕ್ಷೇಪಣೆ ಸರಿಯೇನೋ ಅನಿಸುತ್ತದೆ. ರಾಷ್ಟ್ರಮಟ್ಟದ ಆನ್‌ಲೈನ್ ಆಂಗ್ಲ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಸುದ್ದಿ ಸೃಷ್ಟಿಸುವ ಪ್ರಕ್ರಿಯೆ ನಡೆಯುತ್ತಿದೆ. ಸುದ್ದಿ ಬೇರೆಲ್ಲಿಯೋ ಆಗಲೇ ಲಭ್ಯವಿದ್ದಾಗ ಅದನ್ನು ಯಥಾವತ್ತಾಗಿ ತಮ್ಮ ಪುಟಗಳಲ್ಲಿ ಲಗಾಯಿಸುವ ಬೆಳವಣಿಗೆ ಒಳ್ಳೆಯದಲ್ಲವೇನೋ ಎಂದೆನಿಸುತ್ತದೆ. ಆನ್‌ಲೈನ್ ಪತ್ರಿಕೆಗಳಲ್ಲಿನ ಸಂಪನ್ಮೂಲ (ಸುದ್ದಿ ಸಂಗ್ರಹಣೆ, ವರದಿಗಾರರು, ಇತರ) ಕೊರತೆಯನ್ನು ಒಪ್ಪೋಣ. ಆದರೆ ಸುದ್ದಿ, ವಿಷಯಗಳ ಪದಶಃ ಪುನರಾವರ್ತನೆ ಬೇಡ ಅಲ್ಲವೆ? [ದೆಹಲಿ ಅತ್ಯಾಚಾರದ ಬಗ್ಗೆ ಗಿರೀಶ್ ಲೇಖನ]

ನಮ್ಮೂರಿನ ಸುದ್ದಿ ಕೊಡಿ ಸ್ವಾಮಿ : ನನ್ನಂತೆ, ಅನಿವಾಸಿ ಕನ್ನಡಿಗರು ಕನ್ನಡ ತಾಣಗಳಿಗೆ ಭೇಟಿ ನೀಡುವುದು ಕರ್ನಾಟಕ ಮತ್ತು ಕನ್ನಡದ ಜೊತೆಗಿನ ತಮ್ಮ ನಂಟನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು. ಹಾಗಾಗಿ ಅಂತರ್ಜಾಲದ ಕನ್ನಡ ಪುಟಗಳಲ್ಲಿ ನಾವು ತಡಕಾಡುವುದು ವಿಶೇಷವಾಗಿ ಕರ್ನಾಟಕದ ಬಗೆಗಿನ ಸುದ್ದಿಗಳಿಗೆ ಮತ್ತು ಕನ್ನಡ ಸಾಹಿತ್ಯದ ವಿಷಯಗಳಿಗೆ. ರಾಷ್ಟ್ರೀಯ ಮಟ್ಟದ ವಿಷಯಗಳಿಗೆ ಸಾಕಷ್ಟು ಸುದೃಢವಾದ ಕನ್ನಡ ಅಂತರ್ಜಾಲ ಪತ್ರಿಕೆಗಳಿರುವಾಗ, (ಸಂಪನ್ಮೂಲಗಳ ಕೊರತೆಯಿರುವ) ಇತರ ಕನ್ನಡ ಅಂತರ್ಜಾಲ ಪತ್ರಿಕೆಗಳು ಕರ್ನಾಟಕದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಸುದ್ದಿಗಳಿಗೆ, ಆಗು ಹೋಗುಗಳಿಗೆ ಒತ್ತುಕೊಟ್ಟರೆ ನಮಗೆಲ್ಲಾ ಓದಲು ಸಂತಸ.

ಸಾಹಿತ್ಯ ವಿಭಾಗಕ್ಕೆ ಮರುಜೀವ : ಎಲ್ಲದರಲ್ಲೂ ವೈವಿಧ್ಯತೆಯನ್ನೇ ಬಯಸುವ ನನ್ನಂತಹ ಓದುಗರು, ಕನ್ನಡ ಅಂತರ್ಜಾಲ ಪತ್ರಿಕೆಗಳಲ್ಲೂ ವಿವಿಧ ವಿಷಯಗಳಿಗೆ ಬೇಟೆಯಾಡುತ್ತೇವೆ. ಮೊದಮೊದಲು ಯುವ ಲೇಖಕರ ಲೇಖನ, ಕವನಗಳ ಕೃಷಿಗೆ ನೀರೆರೆದು, ಚಿಮ್ಮುಮಣೆಯಾಗಿದ್ದ ಕೆಲವು ಅಂತರ್ಜಾಲ ಪತ್ರಿಕೆಗಳು ಈಗಂತೂ ಸಾಹಿತ್ಯದ ಬಗೆಗೆ ವಿಮುಖ ಧೋರಣೆ ತಳೆದಿವೆ. ಇದು ಬದಲಾಗಬೇಕು. ಯುವ ಬರಹಗಾರರ ಅರ್ಹ ಕಥೆ, ಕವನ, ಲೇಖನಗಳನ್ನು ತಮ್ಮ ಅಂತರ್ಜಾಲ ಪುಟಗಳಲ್ಲಿ ಪ್ರಕಟಿಸುವುದಕ್ಕೆ ಮರುಚಾಲನೆ ನೀಡಬೇಕು. ಅಲ್ಲದೇ, ಅನಿವಾಸಿ ಬರಹಗಾರರಿಗೆ ಕರ್ನಾಟಕದ ವಿವಿಧ ವಾರಪತ್ರಿಕೆಗಳು, ದಿನಪತ್ರಿಕೆಗಳು, ಸಂಘ ಸಂಸ್ಥೆಗಳು ವರ್ಷದಲ್ಲಿ ಆಗಾಗ ನಡೆಸುವ ಸಾಹಿತ್ಯ ಸ್ಪರ್ಧೆಗಳ ವಿವರ ಒಂದೇ ಜಾಗದಲ್ಲಿ ದೊರೆಯುವಂತಾದರೆ ಬಹಳ ಉಪಯೋಗವಾಗುತ್ತದೆ. [ಗಿರೀಶ್ ಜಮದಗ್ನಿ ಸಣ್ಣಕಥೆ ಅಪಶಕುನಿಗಳು]

ಹಾಗೆಯೆ, ವಾಣಿಜ್ಯ ಮತ್ತು ಉದ್ಯಮದಲ್ಲಿ ಆಸಕ್ತಿ ಇರುವ ಅನಿವಾಸಿ ಕನ್ನಡಿಗರಿಗೆ ಬಂಡವಾಳ ಹೂಡಿಕೆ ಮತ್ತು ಅದಕ್ಕೆ ಕರ್ನಾಟಕದಲ್ಲಿರುವ ಅವಕಾಶಗಳ ಮಾಹಿತಿಗಳನ್ನು ಕ್ರಮವಾಗಿ ನೀಡುತ್ತ ಬಂದರೆ ಹೆಚ್ಚು ಹೆಚ್ಚು ಅನಿವಾಸಿಯರು ಭಾರತದಲ್ಲಿ ಹಣ ಹೂಡುವಂತಾಗುತ್ತದೆ ಕೂಡ. ಕರ್ನಾಟಕದ ಉದಯೋನ್ಮುಖ ಕಲಾವಿದರ (ಸಂಗೀತ, ನಾಟಕ, ಜಾನಪದ ಕಲೆ, ಇತರ ಲಲಿತಕಲೆಗಳು) ವಿವರಗಳು ಒಂದೇ ತಾಣದಲ್ಲಿ ಲಭ್ಯವಾದರೆ ಅನಿವಾಸಿ ಕನ್ನಡ ಸಂಘಗಳಿಗೆ ಕನ್ನಡ ಕಲಾವಿದರನ್ನು ಹುಡುಕುವ ಕಾರ್ಯದಲ್ಲಿ ಸಹಾಯವಾಗುತ್ತದೆ.

ಅಶ್ಲೀಲ ಚಿತ್ರಗಳಿಗೆ ನಿರ್ಬಂಧ : ಕೆಲವು ಕನ್ನಡ ಅಂತರ್ಜಾಲ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಅಶ್ಲೀಲ ಚಿತ್ರಗಳ ಕಾರಣದಿಂದ ಮನೆಯಲ್ಲಿದ್ದಾಗ ಮಕ್ಕಳ ಮತ್ತು ಕಚೇರಿಯಲ್ಲಿ ಸಹೋದ್ಯೋಗಿಗಳ ಕಣ್ಣು ತಪ್ಪಿಸಿ ಓದಬೇಕಾದ ದುಸ್ಥಿತಿ ಬಂದಿದೆ. ವಯಸ್ಕರ ಲೇಖನಗಳಿಗೆ ಮಾತ್ರ ವಯಸ್ಸಿನ ದೃಢೀಕರಣ ಬಯಸುವ (ಮೆಚ್ಚತಕ್ಕ) ಕ್ರಮವಿದ್ದರೂ, ಅಶ್ಲೀಲ ಚಿತ್ರಗಳಿಗೆ ಈ ರೀತಿಯ ಪ್ರಕ್ರಿಯೆಯಿಲ್ಲ. ಅಂತಹ ವಸ್ತುಗಳನ್ನೂ ಬಯಸುವ ಓದು(ನೋಡು)ಗರ ವರ್ಗವೇ ಇರುವುದರಿಂದ, ಅಶ್ಲೀಲ ಚಿತ್ರಗಳನ್ನು ಮುಖಪುಟದಲ್ಲಿ ಕಣ್ಣಿಗೆ ರಾಚುವಂತೆ ಹಾಕದೇ ನಿರ್ಬಂಧಿತ ಒಳಗಿನ ಪುಟಗಳಲ್ಲಿ ಹಾಕುವುದು ಒಳ್ಳೆಯದಲ್ಲವೆ?

ಇನ್ನು ಬ್ಲಾಗ್ ವಿಷಯ : ಕಳೆದ ಹತ್ತು ವರ್ಷಗಳಲ್ಲಿ ಮುಕ್ತ ಮತ್ತು ವೆಚ್ಚವಿಲ್ಲದ ಬ್ಲಾಗ್‌ಗಳು ಅಸಂಖ್ಯಾತ ಕನ್ನಡ ಬರಹಗಾರರನ್ನು ಸೃಷ್ಟಿಸಿದೆ. ಅದಕ್ಕೋ ಏನೋ ಈಗ ಓದುಗರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ. ಬರಹಗಾರರ ಸಂಖ್ಯೆ ಹೆಚ್ಚಾಗಿದ್ದು ಸ್ವಾಗತಾರ್ಹವೇ. ಆದರೆ ಮನಸ್ಸಿಗೆ ಬಂದದ್ದೆಲ್ಲಾ ಬರೆದು, ಬರೆದದ್ದೆಲ್ಲಾ ಸಾಹಿತ್ಯ ಎಂದು ಬೀಗಿದವರೇ ಹೆಚ್ಚು. ಭದ್ರ ಬುನಾದಿಯಿಲ್ಲದ ಯಾವ ಕಟ್ಟಡವೂ ಹೆಚ್ಚು ದಿನ ಬಾಳಲಾರದು. ಅದಕ್ಕೇ ಕನ್ನಡ ಬ್ಲಾಗ್ ಜಗತ್ತು ಯಾಕೋ 'ನಿಧಾನ ಅವಸಾನ' ಕಾಣುತ್ತಿದೆ ಎಂದೆನಿಸುತ್ತದೆ.

ಸ್ವಲ್ಪ ವರ್ಷಗಳ ಹಿಂದೆ ಬರೆಯುವ ಆಸಕ್ತಿಯಿರುವರೆಲ್ಲರೂ ಒಂದಕ್ಕಿಂತ ಹೆಚ್ಚು ಬ್ಲಾಗ್ ಖಾತೆ ತೆರೆದು ಸಕ್ರಿಯರಾಗಿದ್ದರು. ಬ್ಲಾಗ್‌ಗಳು ಅವರ ದೈನಂದಿನ ಚಟುವಟಿಕೆಗಳ ಡೈರಿಯೂ ಆಗಿತ್ತು, ಪ್ರತಿಷ್ಠೆಯ ಸಂಕೇತವೂ ಆಗಿತ್ತು. ಆದರೆ ಕ್ರಮೇಣ ಅವರ ಬ್ಲಾಗ್‌ಗಳಲ್ಲಿ ಹೊಸ ವಿಷಯಗಳ ಬಗೆಗಿನ ಬರೆವಣಿಗೆ ಮಾಯವಾಗಿ, ಏಕತಾನತೆ ಸಾಮಾನ್ಯವಾಗಿ, ಸ್ವಂತಿಕೆಯ ಖಜಾನೆಯೂ ಬರಿದಾಗಿ, ಅಥವಾ ಬ್ಲಾಗ್‌ಗಳನ್ನು ನಿಯತವಾಗಿ ಅಪ್‌ಡೇಟ್ ಮಾಡಲಾಗದೆ ಎಷ್ಟೋ ಬರಹಗಾರರು ಬ್ಲಾಗ್‌ ಬರೆಯುವುದನ್ನೇ ನಿಲ್ಲಿಸಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಕೆಲವು ಬದ್ಧ ಬರಹಗಾರರು ಹಲವು ಹೊಸ ವಿಷಯಗಳ ಬಗ್ಗೆ ವರುಷಗಳಿಂದ ಬರೆಯುತ್ತಾ ಬಂದಿದ್ದಾರೆ. ಅವರದೇ ಆದ ಓದುಗ ವರ್ಗವನ್ನೂ ಹೊಂದಿದ್ದಾರೆ. ಅಂತಹ ಬ್ಲಾಗ್‌ಗಳನ್ನು ವಿಶ್ಲೇಷಿಸಿದರೆ ಕನ್ನಡ ಬ್ಲಾಗ್‌ಗಳ ಯಶಸ್ಸಿನ ಸೂಕ್ತ ಸೂತ್ರಗಳು ಸಿಗಬಹುದೇನೋ!

ಎಲ್ಲಾ ವಯೋಮಾನದ, ಪ್ರಪಂಚದ ನಾನಾ ಮೂಲೆಗಳಲ್ಲಿರುವ ಓದುಗರ ಎಲ್ಲ ಅಭಿರುಚಿ, ಆಸೆ, ಆಕಾಂಕ್ಷೆಗಳನ್ನು ಪೂರೈಸುವುದು ಅಂತರ್ಜಾಲ ಪತ್ರಿಕೆ ನಿರ್ವಾಹಕರಿಗೆ ದಿನನಿತ್ಯದ ಸವಾಲೇ ಸರಿ. ಆದರೆ, ಸದಾ ಏನಾದರೂ ಹೊಸದನ್ನು ನೀಡಬೇಕೆಂಬ ಸಂಕಲ್ಪದಿಂದ ಶ್ರಮಿಸುವ ಕನ್ನಡ ಅಂತರ್ಜಾಲ ಪತ್ರಿಕೆಗಳಿಗೆ ಇದು ಕಷ್ಟ ಸಾಧ್ಯ! ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳು ಕುಣಿದಾಡುತ್ತಿರುವ ಈ ಸುವರ್ಣ ಯುಗ ಇಲ್ಲಿಗೇ ನಿಲ್ಲದೆ ಬೆಳೆಯುತ್ತಲೇ ಇರಲೆಂದು ಎಲ್ಲ ಕನ್ನಡಿಗರ ಮತ್ತು 'ನೆಟ್ಟಿಗ'ರ ಆಶಯ ಕೂಡ!

English summary
My expectations from Kannada Online - a survey. Girish Jamadagni from Singapore, feels Kannada portals should keep a on irritating ads, sensual pictures, translated stories. Kannada portals should be read by all age groups. He also wants to read district, taluk level news from Karnataka and literary field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X