• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲ್ಲಿ ಯಾರೂ ಶೇಕ್ ಸ್ಪಿಯರ್ ಆಗಬೇಕಾಗಿಲ್ಲ-ಅಬ್ದುಲ್ ಲತೀಫ್

By ಅಬ್ದುಲ್ ಲತೀಫ್ ಸಯ್ಯದ್, ರಿಯಾದ್, ಸೌದಿ ಅರೇ
|

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಅಬ್ದುಲ್ ಲತೀಫ್ ಸಯ್ಯದ್, ರಿಯಾದ್, ಸೌದಿ ಅರೇಬಿಯಾ. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಅಂತರ್ಜಾಲ ಅಕ್ಷಯ ಪಾತ್ರೆಯಂತೆ. ಎಲ್ಲವೂ ಲಭ್ಯ. ಅಂತರ್ಜಾಲದಲ್ಲಿ ಸಿಗದ ವಸ್ತುವಿಲ್ಲ, ಅಪ್ಪ ಅಮ್ಮನನ್ನು ಬಿಟ್ಟು. ಎಲ್ಲವೂ ಬೆರಳ ತುದಿಯಲ್ಲಿ. ತಂತ್ರಜ್ಞಾನಗಳ ರಾಜ ಅಂತರ್ಜಾಲ ಎಂದು ಯಾರಾದರೂ ಹೇಳಿದರೆ ಅದರಲ್ಲಿ ಉತ್ಪ್ರೇಕ್ಷೆ ಕಾಣುವುದು ಬೇಡ. ಅಂತರ್ಜಾಲ ನಮ್ಮ ಬದುಕನ್ನು ಹಸನಾಗಿಸಿದೆ, ಶ್ರೀಮಂತಗೊಳಿಸಿದೆ. ಅಂತರ್ಜಾಲವನ್ನು ಲೀಲಾಜಾಲವಾಗಿ ಉಪಯೋಗಿಸುವವರ ಉನ್ಮಾದಕತೆ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅಂತರ್ಜಾಲದಿಂದ ಅವರನ್ನು ಸ್ವಲ್ಪ ಸಮಯ ಹೊರಗಿಟ್ಟರೂ ನೀರಿನಿಂದ ಹೊರಕ್ಕೆ ಜಿಗಿದ ಮೀನು ಅವರ ಅವಸ್ಥೆ. ಆದರೆ ಈ ವೈಜ್ಞಾನಿಕ ಆವಿಷ್ಕಾರದ ಪ್ರಯೋಜನ ನಾವು ತಿಳಿದಷ್ಟು ಜನ ಪಡೆದಿಲ್ಲ, ವಿಶೇಷವಾಗಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಕನ್ನಡಿಗರು. ಕಾರಣ?

ಭಾಷೆ. ಎಲ್ಲಾ ತಂತ್ರಜ್ಞಾನಗಳ ಭಾಷೆಯಂತೆ ಅಂತರ್ಜಾಲದಲ್ಲೂ ಆಂಗ್ಲ ಭಾಷೆಯದೇ ಪಾರುಪತ್ಯ. ನಮ್ಮ ಜನರಿಗೆ ಆಂಗ್ಲ ಭಾಷೆ ಅಷ್ಟಕ್ಕಷ್ಟೇ. ನಮ್ಮ ನಾಲಗೆಯ ಮೇಲೆ ನಿಲುಕದು, ಮತಿಯ ಮೇಲೂ ಸುಲಭವಾಗಿ ಕೂರದು. ಆದರೆ ಅಂತರ್ಜಾಲದ ಸದುಪಯೋಗ ಪಡಿಸಿಕೊಳ್ಳಲು ಆಂಗ್ಲ ಭಾಷೆಯ ಔದಾರ್ಯ ಬೇಕಿಲ್ಲ. ಯಾರೂ ಶೇಕ್ಸ್ ಪಿಯರ್ ಆಗಬೇಕಿಲ್ಲ. ಕನ್ನಡ ವಲಯದಲ್ಲಿ ಅಂತರ್ಜಾಲವನ್ನು ಸಮೂಹ ಮತ್ತು ಜನಪ್ರಿಯ ಮಾಧ್ಯಮವನ್ನಾಗಿ ಮಾಡುವತ್ತ ಕನ್ನಡಿಗರ ಮತ್ತು ವಿಶೇಷವಾಗಿ ಈ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಉದ್ಯಮಿ, ತಂತ್ರಜ್ಞ, ಮತ್ತು ಅನುಭವಿ ಜನರ ಪಾತ್ರ ಮಹತ್ತರವಾದುದು.

ಅಂತರ್ಜಾಲದಲ್ಲಿ ಕನ್ನಡದ ಪ್ರಾಮುಖ್ಯತೆ ಮತ್ತು ದಯನೀಯ ಎನ್ನಬಹುದಾದ ಸ್ಥಿತಿಯ ಅವಲೋಕನ ಮಾಡಿದರೆ, ನಮಗೆ ಗೋಚರವಾಗೋದು ಈ ಮಾಧ್ಯಮದ ಬಗೆಗೆ ಜನರಲ್ಲಿರುವ ಅಜ್ಞಾನ. ಈ ಅಜ್ಞಾನದ ಬೇರಿರೋದು ತಂತ್ರಜ್ಞಾನ ಎಂದರೆ ಬೆಚ್ಚಿ ಬೀಳೋ ಮನೋಭಾವ, ಅದರಲ್ಲೂ ಕಂಪ್ಯೂಟರ್ ಎಂದ ಕೂಡಲೇ ಹಾವನ್ನು ಕಂಡ ಹಾಗಿನ ವರ್ತನೆ. ನನಗೆ ಪರಿಚಯವಿರುವ ಮಿತ್ರರಿಗೆ ಈಗಲೂ ಕಂಪ್ಯೂಟರ್ ಒಂದು ಅಲರ್ಜಿ. ಇಂಟರ್ನೆಟ್ ಎಂದರೆ ಒಂದೋ ಅದರಲ್ಲಿರೋದೆಲ್ಲಾ ಸುಳ್ಳು ಅಥವಾ ಅದರ ಬಗೆಗೆಗಿನ ಸಂಪೂರ್ಣ ಅಜ್ಞಾನ.

ನೆಟ್ ಸಂಪರ್ಕ ಕೈಗೆಟಕುವಂತಿರಬೇಕು : ಮೊದಲಿಗೆ, ಕಂಪ್ಯೂಟರ್ ಸಾಕ್ಷರತೆಯ ಸಂಪೂರ್ಣ ಉಪಯೋಗವಾಗುವಂತೆ ಜನರಿಗೆ ತರಬೇತಿ ಕೊಡುವುದು. ಒಬ್ಬನಿಗೆ ತನ್ನ ಹೆಸರನ್ನು ಬರೆಯಲು, ಓದಲು ಬಂದರೆ ಸಾಕು ಅವನು ಸಾಕ್ಷರ ಎಂದು ಪರಿಗಣಿಸುವಂಥ ಸಾಕ್ಷರತೆ ಅಲ್ಲ. ಕಂಪ್ಯೂಟರ್ ತರಬೇತಿ ನಂತರ ಕಂಪ್ಯೂಟರ್ ಕೊಳ್ಳುವ ಸಾಮರ್ಥ್ಯವೂ ಬರಬೇಕು. ಅಂತರ್ಜಾಲದ ಸಂಪರ್ಕ ಸುಲಭ ಮತ್ತು ಕೈಗೆಟುಕುವಂತಿರಬೇಕು. ಈ ಕೆಲಸವನ್ನ ಸಂಘ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ. ಈ ಅಭಿಯಾನದ ಜವಾಬ್ದಾರಿಯನ್ನೂ ಸರಕಾರ ಸಂಪೂರ್ಣ ವಹಿಸಿಕೊಳ್ಳಬೇಕು. ಇದರೊಂದಿಗೆ ಮತ್ತೊಂದು ಕಡೆ ಕನ್ನಡದಲ್ಲಿ ಅಂತರ್ಜಾಲದ ಕೃಷಿ ರಭಸವಾಗಿ, ಉತ್ಸಾಹದಾಯಕವಾಗಿ ನಡೆಯಬೇಕು.

ಭಾಷೆಯ ಮೇಲಿನ ಅಭಿಮಾನ ಡಾಲರ್ ಗಳಿಕೆಯ ವ್ಯಾಮೋಹವನ್ನು ಮೀರಿ ನಿಲ್ಲಬೇಕು. ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತೀಯರು ವಿಶ್ವಸ್ಥರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ ಅವರ ಸಂಖ್ಯೆ ಮಾತ್ರ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಹಾಸ್ಯಾಸ್ಪದ. ಈ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡಿಗರೂ ಇದ್ದಾರೆ. ಆದರೆ ಕನ್ನಡ ಅಂತರ್ಜಾಲದಲ್ಲಿ ಮಾತ್ರ ಅವರ ಸಾಧನೆ ಹೇಳಿಕೊಳ್ಳುವಷ್ಟಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಕಂಪ್ಯೂಟರ್ ಅನ್ನು ಗಣಕ ಯಂತ್ರ ಎಂದೂ, ಕೀ ಬೋರ್ಡ್ ಅನ್ನು ಕೀಲಿ ಮಣೆ ಎಂದು ನಾಮಕರಣ ಮಾಡುವುದರಿಂದ ಆಗುವ ಪ್ರಯೋಜನ ಅಷ್ಟಕ್ಕಷ್ಟೇ. ಇಂಜಿನಿಯರ್ ಶಬ್ದವನ್ನು ಕನ್ನಡ ಭಾಷೆಯಲ್ಲಿ ಅಭಿಯಂತರ ಎಂದು ಕನ್ನಡೀಕರಿಸಿ ಬಿಟ್ಟರೆ ಕನ್ನಡದ ವೈಭವ ಮೆರೆಯೋದಿಲ್ಲ.

ಕನ್ನಡ ಹುಡುಕಿದರೆ ಸಂಕಟ : ಅಂತರ್ಜಾಲದಿಂದ ಜನರಿಗೆ ಆಗುವ ಪ್ರಯೋಜನದ ಕುರಿತು ಹೆಚ್ಚು ತಲೆ ಕೆರೆದುಕೊಳ್ಳಬೇಕಿಲ್ಲ. ಅಂತರ್ಜಾಲದಿಂದ ಜನರಿಗೆ ಮಾಹಿತಿ, ಜ್ಞಾನ ಸುಲಭವಾಗಿ ಸಿಗುವಂತಾಗಬೇಕು. ಆಂಗ್ಲ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಗೂಗ್ಲೀಕರಿಸಿದರೆ ಕ್ಷಣಗಳಲ್ಲೇ ಹತ್ತಾರು ಸಾವಿರ ಪುಟಗಳು ತೆರೆದುಕೊಳ್ಳುತ್ತವೆ. ಕನ್ನಡ ಭಾಷೆಯಲ್ಲಿ ಯಾವುದಾದರೂ ವಿಷಯದ ಬಗ್ಗೆ ಗೂಗ್ಲೀಕರಿಸಿ ನೋಡಿ. ಸಂಕಟ ತೋರುತ್ತದೆ. ಇದಕ್ಕೆ ಕಾರಣ ಕನ್ನಡ ಭಾಷೆಯಲ್ಲಿ ಬರಹದ ಕೊರತೆ. ಒಂದು ಕಡೆ ಓದುವರು ಇಲ್ಲ ಎಂದು ಬರೆಯುವವರು ಕಡಿಮೆ, ಮತ್ತೊಂದು ಕಡೆ ಓದುವುದಕ್ಕೆ ಏನೂ ಇಲ್ಲ ಎಂದು ಅಂತರ್ಜಾಲದ ಕಡೆ ನಿರಾಸಕ್ತಿ ತೋರಿಸುವ ಜನಸಮೂಹ.

ಈ ಈರ್ವರ ಮಧ್ಯೆ ಅಂತರ್ಜಾಲದಲ್ಲಿ ಕನ್ನಡದ ಶೋಚನೀಯ ಸ್ಥಿತಿ. ಓದುವ ಜನರಿಗೆ ಆಸಕ್ತಿದಾಯಕವಾದದ್ದನ್ನು ನೀಡಿದರೆ ಓದುಗರಲ್ಲಿ ಉತ್ಸಾಹ ತೋರುತ್ತದೆ. ಆಂಗ್ಲ ಭಾಷೆ ಬಲ್ಲವರು ಆಂಗ್ಲ ತಾಣಗಳಿಂದ ಪಡೆಯುವ ಲಾಭವನ್ನೇ ಕನ್ನಡಿಗನೂ ಪಡೆಯಬೇಕು. ಅಂದರೆ ವೈದ್ಯಕೀಯ, ತಂತ್ರಜ್ಞಾನ, ಸಾಹಿತ್ಯ, ಮುಂತಾದ ಹತ್ತು ಹಲವು ಕ್ಷೇತ್ರಗಳ ಬಗ್ಗೆ ವೆಬ್ ತಾಣಗಳು ಆರಂಭವಾಗಬೇಕು. ಉದಾಹರಣೆಗೆ, ನಾವು ಈಗ ಮೊದಲಿನಂತಲ್ಲ. ಆಧುನಿಕ ಬದುಕು ನಮ್ಮಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಊಟ, ಉಡುಗೆ, ನಡುಗೆ ಎಲ್ಲದರಲ್ಲೂ ಸ್ವಲ್ಪ ವಿಶೇಷವಾದದ್ದನ್ನು ಬಯಸುತ್ತಿದ್ದೇವೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಗೊಬ್ಬರ, ಕೀಟನಾಶಕಗಳ ವಿಪರೀತ ಉಪಯೋಗಿಸಿದ ಕಾರಣ ನಮ್ಮ ಆಹಾರ ​​ಕಲುಷಿತಗೊಂಡಿದೆ.

ಎಲ್ಲ ಮಾಹಿತಿ ಕನ್ನಡದಲ್ಲೇ ಸಿಗಲಿ : ಮೊದಲು ಸೇಬನ್ನು ತೊಳೆದು ಸಿಪ್ಪೆ ಸಮೇತ ತಿನ್ನಬೇಕು ಎನ್ನುತ್ತಿದ್ದರು. ಈಗ ಉಲ್ಟಾ. ಸಿಪ್ಪೆ ತೆಗೆದು ತಿನ್ನಬೇಕಂತೆ. ಏಕೆಂದರೆ ಸೇಬು ಫಳ ಫಳ ಹೊಳೆಯಲು ಮೇಣವನ್ನ ತಿಕ್ಕುತ್ತಾರಂತೆ. ಇಂಥ ಅಧ್ವಾನಗಳನ್ನು ಹೊಟ್ಟೆಗೆ ಹಾಕಿಕೊಂಡ ಮನುಷ್ಯ ಮಿತಿಮೀರಿದ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್ ಗಳ ಕಾರಣ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾನೆ. ಇಂಥ ಅವಘಡಗಳಿಂದ ಪಾರಾಗುವುದು ಹೇಗೆ ಎಂದು ವಿಸ್ತೃತವಾಗಿ ತಿಳಿಹೇಳಲು ಅವನ ವೈದ್ಯರಿಗೆ ಸಮಯವಿಲ್ಲ. ಸರತಿಯಲ್ಲಿ ನಿಂತ ಇತರೆ ರೋಗಿಗಳ ಮೇಲೆ, ಅವರ ಜೇಬುಗಳ ಮೇಲೆ ವೈದ್ಯನ ಕಳ್ಳ ಕಣ್ಣು. ಅಂತರ್ಜಾಲದಲ್ಲಿ ಅವನಿಗೆ ಮಾಹಿತಿ ತನ್ನ ಮಾತೃ ಭಾಷೆಯಲ್ಲಿ ಸಿಗೊಲ್ಲ. ಕನ್ನಡದಲ್ಲಿ ವೈದ್ಯಕೀಯ ತಾಣಗಳ ಪಟ್ಟಿ ನಮ್ಮಿಂದ ಮಾಡಲು ಸಾಧ್ಯವೇ?

ನಾವು ಆಂಗ್ಲ ಭಾಷೆಗಳಲ್ಲಿ ಕಾಣುವ ತಾಣಗಳನ್ನೇ ಕನ್ನಡದಲ್ಲೂ ಮಾಡಬಹುದು. ಆದರೆ ಅದರಿಂದ ಬರುವ ಲಾಭ ಸ್ವಲ್ಪ ತಡವಾಗಿ ಬರಬಹುದು. ಉದ್ಯೋಗ ಅರಸುವ ಯುವಜನರಿಗೆ ಹಲವು ವಿಷಯಗಳ ಕುರಿತ ಮಾಹಿತಿ ಕನ್ನಡ ತಾಣದಿಂದ ಸಿಗುವಂತಾಗಬೇಕು. ಯಾವ ಯಾವ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವುದರಿಂದ ಹಿಡಿದು, ‘ಬಯೋ ಡೇಟಾ' ಬರೆಯೋದು ಹೇಗೆ, ಸಂದರ್ಶನಕ್ಕೆ ಹೋಗುವಾಗ ಧರಿಸಬೇಕಾದ ಉಡುಗೆ, ನಡೆ...ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ನಮ್ಮ ಯುವಜನರಿಗೆ ಸಿಗುವಂತಾಗಬೇಕು. ಕಾರನ್ನೋ ಅಥವಾ ಬೆಲೆಬಾಳುವ ಮೋಬೈಲ್ ಅನ್ನೋ ಕೊಳ್ಳುವ ಮೊದಲು ಅಂತರ್ಜಾಲದಲ್ಲಿ ಅದರ ಬಗೆಗೆ ಮಾಹಿತಿ ಸಿಗಬೇಕು.

'ವಿಷ'ವಿದೆಯೇ ಹೊರತು ವಿಷಯದ ಶ್ರೀಮಂತಿಕೆಯಿಲ್ಲ : ಒಟ್ಟಿನಲ್ಲಿ ಕನ್ನಡ ಭಾಷೆಯಲ್ಲಿ ಬರಹಗಳು, ತಾಣಗಳು ಹೆಚ್ಚಾಗಬೇಕು. ಕನ್ನಡದ ಮೇಲಿನ ಅಭಿಮಾನ, ಕನ್ನಡಿಗರಿಗೆ ಪ್ರಯೋಜನವಾಗಲಿ ಎನ್ನುವ ಮನೋಭಾವ ನಮ್ಮಲ್ಲಿ ಜಾಗೃತವಾಗಬೇಕು. ಬ್ಲಾಗ್ ಗಳು ಹೆಚ್ಚಬೇಕು. ಈಗ ನಮಗೆ ಕಾಣಲು ಸಿಗುತ್ತಿರುವ ಬ್ಲಾಗ್ ಗಳಲ್ಲಿ ‘ವಿಷ'ದ ಪ್ರಮಾಣ ಅಧಿಕವೇ ಹೊರತು ವಿಷಯದ ಶ್ರೀಮಂತಿಕೆ ಅಲ್ಲ. ತಮಗೆ ತೋಚಿದ್ದನ್ನು ಗೀಚಿ ಇದೇ ದೇಶಪ್ರೇಮ ಎಂದು ಮೆರೆಯುವವರ ಸಂಖ್ಯೆ ಹೇರಳ ಬ್ಲಾಗ್ ವಲಯದಲ್ಲಿ. ಬ್ಲಾಗ್ ಆರಂಭಿಸೋದು ಪುಕ್ಕಟೆ ಎಂದ ಮಾತ್ರಕ್ಕೆ ತಮಗೆ ತೋಚಿದ ರೀತಿಯಲ್ಲಿ ಉಪಯೋಗಿಸುವುದಲ್ಲ.

ಜನರಿಗೆ ದಿನನಿತ್ಯ ಉಪಯೋಗವಾಗುವ ನೂರೆಂಟು ವಿಷಯಗಳ ಕುರಿತು, ತಮ್ಮ ಅನುಭವಗಳ ಆಧಾರದ ಮೇಲೆ ಬರೆದು ಕನ್ನಡದ ಸೇವೆ ಮಾಡಬಹುದು. ಜನರನ್ನು ಜಾತಿ ಧರ್ಮಗಳ ವಿಷವರ್ತುಲದೊಳಕ್ಕೆ ಸಿಕ್ಕಿಸಿ, ಕೆಲಸಕ್ಕೆ ಬಾರದ, ಹಳಸಿದ ಚರಿತ್ರೆಯ ಜಾಡನ್ನು ಹಿಡಿದು ಜನರ ಮನಸ್ಸನ್ನು ಹುತ್ತವಾಗಿಸುವ ಪ್ರಯತ್ನದ ಕಡೆ ಉತ್ಸಾಹ, ಆಸಕ್ತಿ ಹರಿಸೋದನ್ನು ಬಿಟ್ಟು ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯದ ಕಡೆ ಎಲ್ಲರೂ ತೀವ್ರ ಗಮನ ಹರಿಸಿ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರೆ ಅಂತರ್ಜಾಲದಲ್ಲಿ ಕನ್ನಡ ಮಿನುಗುವಂತೆ ಮಾಡಬಹುದು. [ಟ್ವಿಟ್ಟರ್ | ಫೇಸ್ ಬುಕ್]

English summary
What are my expectations from Kannada online? Results of the Survey conducted by No 1 Kannada portal http://kannada.oneindia.com/: Abdul Latif Syed, Riyad (Saudi Arabia) feels every content available in English should be available in Kannada on the internet. What is the contribution for this by Kannadigas?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X