ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮರ್ಶಕಿ ನಾಪತ್ತೆ, ಪ್ರಕರಣ ಇನ್ನಷ್ಟು ನಿಗೂಢ

By * ಶಾಮ್
|
Google Oneindia Kannada News

Who is she?
ಕನ್ನಡ ಮಾಧ್ಯಮಲೋಕದ ಆಗುಹೋಗುಗಳ ಮತ್ತು ಅದರ ತಪ್ಪು ಒಪ್ಪು ಬೆಪ್ಪುಗಳ ಎಕ್ಸರೇ ತೆಗೆಯುತ್ತಿದ್ದ ವಿಮರ್ಶಕಿ ಎಂಬ ಬ್ಲಾಗ್ ಏಪ್ರಿಲ್ 25ರಿಂದ ಸುಮ್ಮನಾಗಿದೆ. 'ಅನಿರ್ದಿಷ್ಟ ಕಾಲಾವಧಿಯ ವಿರಾಮಕ್ಕೆ ಪೂರ್ಣವಿರಾಮ' ಎಂದು ತನ್ನ ಕಡೆಯ ಸಂಪಾದಕೀಯ ಬರವಣಿಗೆಯಲ್ಲಿ ಋಜು ಹಾಕಿರುವ ವಿಮರ್ಶಕಿ ಏಕಾಏಕಿ ಸಂಸಾರ ತೊರೆದು ಎಲ್ಲಿಗೆ ಹೋದಳೋ ಎಂಬುದು ದಟ್ಸ್ ಕನ್ನಡದ ಒಂದು ಬ್ಲಾಗ್ ಸದನ ಕುತೂಹಲವಾಗಿರುತ್ತದೆ. ಆಕೆ ಬರೆದಿಟ್ಟು ಹೋಗಿರುವ ಇಂಟರ್ ನೆಟ್ ಚೀಟಿಯನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಮುದ್ರಿಸಲಾಗಿದೆ. ಓದಿ.

ಮಧ್ಯ ವಯಸ್ಕ ವಿಮರ್ಶಕಿ ಬೇಸಿಗೆ ಪ್ರವಾಸಕ್ಕೆಂದು ಕುಲುಮನಾಲಿಗೆ ಹೋದಳಾ? ವಿಶ್ರಾಂತಿಗೆಂದು ಪ್ರಕೃತಿ ಚಿಕಿತ್ಸಾಲಯಕ್ಕೇನಾದರೂ ಅಡ್ಮಿಟ್ ಆದಳಾ? ಅಥವಾ ಹೆರಿಗೆ ರಜೆ ಪಡೆದು ತೌರ ಮನೆ ಬಸ್ಸು ಹತ್ತಿದಳಾ? ಏನೂ ಗೊತ್ತಿಲ್ಲ. ಈ ಪ್ರಶ್ನೆಗಳನ್ನು ಇಟ್ಟುಕೊಂಡು ಪತ್ತೆದಾರಿ ಕೆಲಸ ಮಾಡುವ ಕೆಲಸ ಮಾಧ್ಯಮ ಲೋಕದ ಲೋಕಾಯುಕ್ತರುಗಳಿಗೆ ಬಿಟ್ಟ ವಿಚಾರಗಳಾಗಿವೆ - ಸಂಪಾದಕ.

***

ವಿಮರ್ಶಕಿ ಬ್ಲಾಗ್ ಗೆ ವಿರಾಮ. ಆದಷ್ಟೂ ವಸ್ತುನಿಷ್ಠವಾಗಿ ಪತ್ರಿಕಾರಂಗದ ಓರೆಕೋರೆ, ಒಳಿತುಗಳನ್ನು ವಿಮರ್ಶಿಸುವ ಈ ಕೆಲಸಕ್ಕೆ ಒಂದು ವರ್ಷವೂ ಆಗಿಲ್ಲ. ಎಪ್ಪತ್ತಾರು ಸಾವಿರ ಹಿಟ್‌ಗಳನ್ನು ಪಡೆದ ಈ ಅನಾಮಿಕ ಬ್ಲಾಗ್‌ಗೆ ಕೊಂಚ ಸ್ವಘೋಷಿತ ವಿರಾಮ. ಕಾರಣ? ಅನಾಮಿಕ ಬ್ಲಾಗ್‌ಗಳನ್ನು ಹೂಳೆತ್ತುವವರ ಭಯವಲ್ಲ; ಕೆಲವು ಪತ್ರಕರ್ತರ ಕುತ್ಸಿತ ಕಾಮೆಂಟ್‌ಗಳೂ ಅಲ್ಲ; ಸಮಯದ ಅಭಾವವೂ ಅಲ್ಲ. ಎಷ್ಟೆಂದು ಬರೆಯಲಿ ಎಂಬ ಹತಾಶೆಯೂ ಅಲ್ಲ.

ಇಂಥದ್ದೊಂದು ಪ್ರಯತ್ನದಿಂದ ಪತ್ರಕರ್ತರ ಮತ್ತು ಪತ್ರಿಕೆಗಳ ಹಲವು ಗಟ್ಟಿ ಮೂಢನಂಬಿಕೆಗಳನ್ನು, ಅವರ ನೀತಿ ನಿಲುವುಗಳು, ಆಚರಣೆ, ವಿಚಾರಗಳಲ್ಲಿನ ವೈರುಧ್ಯಗಳನ್ನು ಬೆಳಕಿಗೆ ತರುವುದೇ ವಿಮರ್ಶಕಿಯ ಉದ್ದೇಶವಾಗಿತ್ತು. ವ್ಯಕ್ತಿಗತ ಟೀಕೆಗಿಂತ ವಿಷಯಾಧಾರಿತ ವಿಮರ್ಶೆಯೇ ಮುಖ್ಯವಾಗಿತ್ತು. ಸುದ್ದಿ ವಿಮರ್ಶೆಗೆ ಇನ್ನೂ ಹಲವು ಬ್ಲಾಗ್‌ಗಳಿವೆ. ಅವುಗಳು ಇನ್ನೂ ಮುಂದುವರಿದಿವೆ; ಸ್ವಾಗತ!

ವಿಮರ್ಶಕಿಯ ಈ ವಿರಾಮ ಮಧ್ಯಂತರವೂ ಅಲ್ಲ; ಹತ್ತು ತಿಂಗಳುಗಳಲ್ಲಿ 175 ಬ್ಲಾಗ್‌ಗಳನು ಬರೆಯುವುದು ದೊಡ್ಡದೇನಲ್ಲ; ಆದರೆ ಒಬ್ಬರೇ ಕೂತು ಈ ಎಲ್ಲ ಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ವಿಮರ್ಶೆ ಮಾಡುವುದಿದೆಯಲ್ಲ, ಅದಕ್ಕಿಂತ ಇನ್ನೊಂದು ಸಂಕಟ ಇನ್ನೊಂದಿಲ್ಲ. ಒಂದೇ ವಿಷಯವನ್ನು ಎಲ್ಲ ಪತ್ರಿಕೆಗಳೂ ಹೇಗೆ ಬರೆದಿವೆ ಎಂದು ಗಮನಿಸುವಾಗ ಎಷ್ಟೆಲ್ಲ ಸಲ ಓದಿದ್ದನ್ನೇ ಓದಬೇಕು, ಪಿಡಿಎಫ್ ಪುಟಗಳನ್ನು ತಿರುವಬೇಕು…

ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಗಳು ನನ್ನ ವಿಮರ್ಶೆಗೆ ತುಂಬಾ ಸಹಕಾರಿಯಾಗಿವೆ. ಅವುಗಳ ಈ ಪೇಪರ್‌ಗಳು ತುಂಬಾ ಯೂಸರ್ ಫ್ರೆಂಡ್ಲಿ. ಆದರೆ ಸಂಯುಕ್ತ ಕರ್ನಾಟಕ, ಹೊಸದಿಗಂತ, ಉದಯವಾಣಿ, ಕನ್ನಡಪ್ರಭಗಳ ಪಿಡಿಎಫ್ ಪ್ರತಿಗಳನ್ನು ತಿರುವಿ ಹಾಕುವುದೆಂದರೆ, ಮಣಭಾರದ ತಗಡುಗಳನ್ನು ತಿರುವಿದ ಹಾಗೆ. ಒಂದು ಪತ್ರಿಕೆಯ ಎಲ್ಲ ಪುಟಗಳನ್ನು ಓದಲು ಕನಿಷ್ಟ ಒಂದು ಗಂಟೆ ಬೇಕಾಗುತ್ತದೆ. ದಿನವೊಂದಕ್ಕೆ ಆರು ಗಂಟೆ ಕಳೆದರೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ತಿರುವಿ ಹಾಕುವುದು ಅಸಾಧ್ಯ.

ಅದಕ್ಕೇ ವಿಮರ್ಶಕಿಯು ರ್‍ಯಾಂಡಮ್ ಆಗಿ ವಿಮರ್ಶೆಗಳನ್ನು ಬರೆದಿದ್ದಿದೆ. ಅದರಲ್ಲೂ ಸರಸರನೆ ತೆರೆದುಕೊಳ್ಳುವ ವಿಜಯಕರ್ನಾಟಕದ ಪುಟಗಳು ಸಲೀಸಾಗಿ ಟೀಕೆಗೆ ಪಕ್ಕಾದವು. ಹೊರತು ವಿಜಯ ಕರ್ನಾಟಕವನ್ನೇ ಟಾರ್ಗೆಟ್ ಮಾಡಲು ಹೊರಟವಳು ನಾನಲ್ಲ. ಇನ್ನು ಕನ್ನಡಪ್ರಭ, ಹೊಸದಿಗಂತವನ್ನು ಮನೆಗೇ ತರಿಸುತ್ತಿದ್ದೇನೆ. ಅದಕ್ಕೇ ನೀವು ಪತ್ರಿಕೆಯಲ್ಲಿ ಉದಯವಾಣಿ ಮತ್ತು ಸಂಯುಕ್ತ ಕರ್ನಾಟಕದ ಬಗ್ಗೆ ಅತಿ ಕಡಿಮೆ ಟೀಕೆಗಳನ್ನು ಕಂಡಿದ್ದೀರಿ. ಪತ್ರಿಕೆಗಳು ವಿಮರ್ಶಕಿಯಿಂದ ಇವತ್ತು ತಪ್ಪಿಸಿಕೊಳ್ಳಬಹುದು; ನಾಳೆ? ಆದ್ದರಿಂದ ಈ ಪತ್ರಿಕೆಗಳು ತಮ್ಮ ಪಿಡಿಎಫ್ ಪ್ರತಿಗಳ ಗಾತ್ರವನ್ನು ಚಿಕ್ಕದು ಮಾಡುವ ಮತ್ತು ಇಮೇಜ್ ವ್ಯೂ ಕೊಡುವ ಸವಲತ್ತನ್ನು ಒದಗಿಸಿದರೆ ಓದುಗರು ನಿರಾಳವಾಗುತ್ತಾರೆ; ಹಿಟ್ ಸಂಖ್ಯೆ ಏರುತ್ತದೆ.

ವಿಮರ್ಶಕಿಯ ಈ ಟೆಕ್ನಿಕಲ್ ಸಮಸ್ಯೆಯೂ (ಪಿಡಿಎಫ್ ಗಾತ್ರ) ವಿಮರ್ಶಕಿಯ ಆಲಸ್ಯಕ್ಕೆ ಕಾರಣ. ಸಾಫ್ಟ್ ಕಾಪಿಯನ್ನು ಪ್ರಕಟಿಸಬೇಕೆಂದರೆ ಅದನ್ನು ಇಮೇಜ್ ಮಾಡಬೇಕು; ಅದೂ ಚಿಕ್ಕ ಗಾತ್ರದಲ್ಲಿದ್ದರೂ ಸ್ಪಷ್ಟವಾಗಿ ಕಾಣುವಂತಿರಬೇಕು. ಇದೆಲ್ಲ ಮಾಡಿದ ಮೇಲೆ ತಪ್ಪಾಗದಂತೆ ಬ್ಲಾಗ್ ಬರೆದು ಅದನ್ನು ಪ್ರಕಟಿಸಬೇಕು… ಒಂದು ವರ್ಷ ಈ ಕೆಲಸವನ್ನು ಹೇಗೆ ಮಾಡಿದೆ ಎಂದು ನನಗೇ ಅಚ್ಚರಿಯಾಗುತ್ತದೆ.

ಅದೇನೇ ಇರಲಿ, ಹಲವರು ಬ್ಲಾಗಿನ ಬಗ್ಗೆ ಅತ್ಯಂತ ಸಹಜ ಅಭಿಮಾನ ಪ್ರಕಟಿಸಿದ್ದಾರೆ. ಹಲವರು ನೇರವಾಗಿ ತಮ್ಮ ಹೆಸರು ಹಾಕಿಕೊಂಡೇ ಪ್ರತಿಕ್ರಿಯಿಸಿದ್ದಾರೆ. ನಾನು ಅನಾಮಿಕಳು ಎಂಬ ಬೇಸರ ತೋರದೆ ಬೆಂಬಲಿಸಿದ್ದಾರೆ. ಅವರಿಗೆಲ್ಲ ನನ್ನ ತುಂಬು ಹೃದಯದ ಧನ್ಯವಾದಗಳು.

ನನ್ನ ಕಾಮೆಂಟ್‌ಗಳಿಗೆ ಬೇಸರಿಸದೆ ಅವನ್ನೆಲ್ಲ ಸಾಕಷ್ಟು ಬಾರಿ ತಮ್ಮ ಸಂಪಾದಕೀಯ ಸಭೆಯಲ್ಲಿ ಚರ್ಚಿಸಿದ ಎಲ್ಲ ಪತ್ರಿಕೆಗಳ (ಮುಖ್ಯವಾಗಿ ನನಗೆ ಗೊತ್ತಿರುವಂತೆ ಕನ್ನಡಪ್ರಭ, ಪ್ರಜಾವಾಣಿ, ಹೊಸದಿಗಂತ) ಸಂಪಾದಕರುಗಳಿಗೆ ನನ್ನ ವಂದನೆಗಳು. ಮುಂದೆ ಇಂಥ ಎಲ್ಲ ಲೋಪಗಳನ್ನು ಆಯಾ ಪತ್ರಿಕೆಗಳಿಗೇ ನೇರವಾಗಿ ತಿಳಿಸುವ ಯೋಚನೆಯಿದೆ. ಸಮಯಾವಕಾಶ ಇದ್ದರೆ..

ವಿಮರ್ಶಕಿ ಯಾರು? ಕನಿಷ್ಟ ಮೂವರು ಪತ್ರಕರ್ತರು ನನಗೆ ಈ ಮೈಲ್ ಮಾಡಿ ನಾನೇ ವಿಮರ್ಶಕಿ ಅಂತ ಚರ್ಚೆ ಶುರುವಾಗಿದೆ, ನಿನ್ನ ಬ್ಲಾಗಿನಲ್ಲಿ ಕ್ಲಾರಿಫಿಕೇಶನ್ ಕೊಡು" ಎಂದು ವಿನಂತಿಸಿದ್ದರು. ನಾನು ಈವರೆಗೂ ಕೊಟ್ಟಿರಲಿಲ್ಲ. ಅವರಲ್ಲಿ ಇಬ್ಬರು ಈಗಲೂ ವೃತ್ತಿಯಲ್ಲಿದ್ದಾರೆ. ಮೂರನೆಯವರು ಹವ್ಯಾಸಿ ಪತ್ರಕರ್ತರು. ಅವರಾರೂ ಅಲ್ಲ ಎಂದಷ್ಟೆ ಇಲ್ಲಿ ಸ್ಪಷ್ಟೀಕರಣ ಕೊಡಬಹುದು.

ಮೂಲತಃ ಬೆಂಗಳೂರಿನವಳಾದ ನಾನು ಇತ್ತೀಚೆಗೆ ಒಂದು ಕಂಪೆನಿಯಲ್ಲಿ ಮಾಧ್ಯಮ ವಿಭಾಗವನ್ನು ನೋಡಿಕೊಳ್ಳುತ್ತಿದ್ದೇನೆ. ನನ್ನ 8 ಎಂಬಿ ವಿಸ್ತಾರದ ಬ್ಯಾಂಡ್‌ವಿಡ್ತಿನಲ್ಲಿ ಅನೇಕ ಪತ್ರಿಕೆಗಳನ್ನು ದಿನಾಲೂ ಓದುತ್ತೇನೆ. (ಆದರೂ ಪಿಡಿಎಫ್ ಪ್ರತಿಗಳ ಬಗ್ಗೆ ಕಾಮೆಂಟ್ ಮಾಡಿರೋದು ರೆಗ್ಯುಲರ್ ಗ್ರಾಹಕರ ಬಗ್ಗೆ; ಅದು ನನ್ನ ಮನೆಯಲ್ಲಾದ ಅನುಭವ). ಮೊದಲು ಕಳಿಸಿದ ಈ ಮೈಲಿಗೆ ಹಲವರು ಪ್ರತಿಕ್ರಿಯಿಸಿ ವರದಿಗಾರರಾಗಿ ಮಾಹಿತಿ ನೀಡಿದ್ದಾರೆ. ನೀಡುತ್ತಿದ್ದಾರೆ. ಮುಖ್ಯತಃ ನನ್ನ ಕೆಲವು ಮಿತ್ರೆಯರು, ಮಿತ್ರರು ಮಾಧ್ಯಮದಲ್ಲಿ ಇದ್ದುದರಿಂದ ಅವರೆಲ್ಲರೂ ಹಂಚಿಕೊಂಡ ಅನುಭವವನ್ನು ನನ್ನದೇ ಅನುಭವ ಎಂಬಂತೆ ಬಿಂಬಿಸಿದ್ದೂ ಇದೆ.

ಇಂದಿನ ಕಾರ್ಪೋರೇಟ್ ಯುಗದಲ್ಲಿ ಕನ್ನಡ ಪತ್ರಿಕೆಗಳು ಬಾಲಿಶವಾಗೇನೂ ಇಲ್ಲ. ಟಿವಿ ಚಾನೆಲ್‌ಗಳಲ್ಲಿ ಬರುವ ಹಾಸ್ಯಾಸ್ಪದ ಧಾರಾವಾಹಿಗಳಂತೆ ಸುದ್ದಿಗಳು ಇಮ್ಮೆಚ್ಯೂರ್ ಆಗಿರುವುದಿಲ್ಲ. ಅಷ್ಟರಮಟ್ಟಿಗೆ ಕನ್ನಡ ಪತ್ರಿಕೆಗಳು ಎಷ್ಟೋ ವಾಸಿ. ಇಷ್ಟಾಗಿಯೂ ಒಂದು ಸಮಷ್ಟಿ ದೃಷ್ಟಿಕೋನದ ಕೊರತೆ ಇದ್ದೇ ಇದೆ. ಅದನ್ನೆಲ್ಲ ಮೀರಿ ನಿಜಕ್ಕೂ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ವಸ್ತುನಿಷ್ಠ ಮತ್ತು ಸಮಚಿತ್ತದ ವರದಿಗಳನ್ನು ಪ್ರಕಟಿಸಿದರೆ ಅದಕ್ಕಿಂತ ಬೇರೆ ಕ್ರಾಂತಿ ಇದೆಯೆ?

ಮಿರ್ಚಿಯೆಂಬ ಹೆಸರಿನಲ್ಲಿ ಬರುವ ಖಾರವೇ ಇಲ್ಲದ, ವಿಮರ್ಶೆಯೇ ಅಲ್ಲದ ಕಾಲಂಗಳ ಸೋಶಿಯಲ್ ಮಾಸ್ಕಿಂಗ್ ಅಪಾಯವನ್ನು ಪತ್ರಕರ್ತರು ಗ್ರಹಿಸಬೇಕು. ವರ್ಣನೆ, ಭ್ರಮೆ ಹುಟ್ಟಿಸುವುದು, ರಮ್ಯವಾಗಿ ಮಾತಾಡುವುದು – ಇದರಿಂದ ಪತ್ರಕರ್ತರೂ ಸುಧಾರಿಸುವುದಿಲ್ಲ; ಪತ್ರಿಕೋದ್ಯಮವೂ ಸರಿಯಾಗುವುದಿಲ್ಲ. ಕಿಲ್ಲಿಂಗ್ ದಿ ಸ್ಟೋರಿ ಎಂಬಂತೆ ಏನೋ ಬರೆದು ವಿಮರ್ಶೆಯ ನಿಜ ಮಾತುಗಳನ್ನೇ ಮರೆಸುವುದು ಇಂದಿನ ಮುಖವಾಡಧಾರಿಗಳ ಸಂಚು.

ಪತ್ರಕರ್ತರು ತಮ್ಮ ಸ್ನೇಹಿತರೊಂದಿಗೆ ದಿನಾಲೂ ತಮ್ಮ ಸುದ್ದಿಗಳ ಬಗ್ಗೆ ವಿಮರ್ಶೆ ಮಾಡಿಕೊಂಡು, ಎಲ್ಲಿ ತಪ್ಪಾಯಿತು ಎಂದು ಅರಿತುಕೊಂಡು ಸೆಲ್ಫ್ ಕರೆಕ್ಷನ್ ಮಾಡಿಕೊಂಡರೆ ಅದಕ್ಕಿಂತ ಒಳ್ಳೆಯ ವಿಧಾನ ಇನ್ನೊಂದಿಲ್ಲ. ಆದರೆ ಅದನ್ನು ಬೆಳೆಸಿಕೊಳ್ಳಲು ಮೊದಲು ಒಳ್ಳೆಯ ಮಾನಸಿಕತೆಯನ್ನು ರೂಢಿಸಿಕೊಳ್ಳಬೇಕು.

ಭಾಷಣ ಬಿಗಿಯುವ ಸಮಯ ಇದಲ್ಲ. ಇಲ್ಲಿಗೇ ಈ ಅನಿರ್ದಿಷ್ಟ ಕಾಲಾವಧಿಯ ವಿರಾಮಕ್ಕೆ ಪೂರ್ಣವಿರಾಮ.

ವಿಮರ್ಶಕಿಯ ಸಂಪಾದಕೀಯ: ಇರೋದನ್ನು ಅಂಗೇ ಏಳೋದಕ್ಕೂ ರೆಸ್ಟ್ ಬ್ಯಾಡ್ವ? April 25, 2010

English summary
Karnataka blog Breaking news: Kannada media blog Vimarshaki takes an indefinite break from the web space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X