ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳ ಟೀಕಿಸುವುದನ್ನು ನಿಲ್ಲಿಸಿ

By Staff
|
Google Oneindia Kannada News

ಸ್ವಾರ್ಥ ಸಾಧಕ ರಾಜಕಾರಣಿಗಳನ್ನು ಬೈಯ್ದೂ ಬಯ್ದೂ ಬಾಯಿಗಳು ನೋಯುತ್ತಿಲ್ಲವೆ; ಅದೇ ವಾಕ್ಯಗಳನ್ನು ಬರೆದೂ ಬರೆದು ನಮ್ಮಗಳ ಕೀಬೋರ್ಡ್ ಒಂದೇ ಕಡೆ ಸವೆಯುತ್ತಿಲ್ಲವೆ; ನ್ಯಾಯಾಂಗಕ್ಕೆ ಶರಣು ಹೊಡೆದು, ಶಾಸಕಾಂಗವನ್ನು ಬದಿಗಿಟ್ಟು ಆಡಳಿತಾಂಗವನ್ನು ವಿಚಾರಿಸಿಕೊಳ್ಳುವುದರತ್ತ ನಾವುಗಳು ಗಮನ ಹರಿಸುವುದು ತರವಲ್ಲವೆ?

* ಶಾಮ್

ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳು ಹಲವಾರು. ಬಡತನ, ಸೋಮಾರಿತನ, ಬೆಲೆ ಏರಿಕೆ, ಜಾಗತೀಕರಣ, ಭಯೋತ್ಪಾದನೆ ಹಾಗೂ ಅನುತ್ಪಾದಕ ಕ್ಷೇತ್ರಗಳಲ್ಲಿ ಹಣ ತೊಡಗಿಸುವುದು ಇತ್ಯಾದಿ. ಸಾಮಾನ್ಯವಾಗಿ ದೇಶಕ್ಕೆ ಗಂಡಾಂತರ ಬಂದಾಗ ಅಥವಾ ದೈನಂದಿನ ಸಮಸ್ಯೆಗಳು ಉಲ್ಭಣಿಸಿದಾಗ ನಾವೆಲ್ಲ ಮೊದಲು ಮಾಡುವ ಕೆಲಸ ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಟೀಕಿಸುವುದು. ಪರಿಸ್ಥಿತಿ ತೀರಾ ಬಿಗಡಾಯಿಸಿದಾಗ ಮಾತ್ರ ಅವರ ಮುಖಕ್ಕೆ ಉಗಿಯುವುದು. ಉದಾಹರಣೆಗೆ, ಮೊನ್ನೆ ಗೃಹಮಂತ್ರಿ ಶಿವರಾಜ್ ಪಾಟೀಲ್ ಗೆ, ಇಂದು ಕೇರಳದ ಮಂತ್ರಿ ಅಚ್ಯುತಾನಂದನ್ ಅವರಿಗೆ.

ಅತ್ಯಂತ ಕರಾಳವಾದ ಮುಂಬೈ ಭಯೋತ್ಪಾದನೆಗೆ ದೇಶಕ್ಕೆ ದೇಶವೇ ನಡುಗಿತಲ್ಲ. ನಮ್ಮ ದೇಶದಲ್ಲಿ ನಾವು ಸುರಕ್ಷಿತರಲ್ಲ ಎಂದು ನಾಡಿಗೆ ನಾಡಿಗೇ ಚೀರಿತಲ್ಲ. ಭದ್ರತಾ ವ್ಯವಸ್ಥೆಗಳಲ್ಲಿನ ಲೋಪ, ರಾಜಕಾರಣಿಗಳ ಸ್ವಾರ್ಥಸಾಧನೆ ಮತ್ತು ಜನ ಸಾಯುತ್ತಿದ್ದರೂ ಒಳಜಗಳ ಮುಂದುವರೆಸುವ ಖಾದಿ ಪಂಚೆ ಜುಬ್ಬ ಧರಿಸಿದವರ ಮನೋಭಾವದ ಬಗ್ಗೆ ಮಾಧ್ಯಮಗಳಲ್ಲಿ ಲೇಖನಗಳೇನು, ಚಿತ್ರಗಳೇನು, ಕಾಮೆಂಟರಿಗಳೇನು, ವ್ಯೂ ಪಾಯಿಂಟುಗಳೇನು, ಸುದ್ದಿಪತಾಕೆಗಳಂತೂ ಧೀರೋದಾತ್ತವಾಗಿ ಹಾರಾಡಿದವು. ಎಲ್ಲರದೂ ಒಂದೇ ಮಂತ್ರ. ಎಲ್ಲರದೂ ಒಂದೇ ಕೋಪ. ಪಕ್ಷ ಬೇಧ ಮರೆತು ಇಡೀ ರಾಜಕಾರಣಿಗಳ ಕುಲಕ್ಕೆ ಶಾಪ ಹಾಕುವುದು ನಿರಂತರವಾಗಿ ನಡೆಯಿತು. ನಡೆಯತ್ತಲೇ ಇದೆ. ಯಾಕೆಂದರೆ ಇದು ನೇತಾರರನ್ನು ನಿಂದಿಸುವ ಸೀಸನ್ನು.

ಬೈಯ್ಯಿರಿ, ಅವರನ್ನು ಬೀದಿಯಲ್ಲಿ ನಿಲ್ಲಿಸಿ ಕೇಳಿರಿ, ಅಗತ್ಯ ಬಿದ್ದೆಡೆ ಎರಡು ಏಟು ಹಾಕಿದರೂ ತಪ್ಪೇನಿಲ್ಲ! ಆದರೆ, ರಾಜಕಾರಣಿಗಳನ್ನು ಬೈಯುವುದಕ್ಕೆ ಒಂದು ಅಲ್ಪ ವಿರಾಮ ಹಾಕಿ ನಮ್ಮ ಗಮನವನ್ನು ಬೇರೆ ಕಡೆಗೆ ಹರಿಸೋಣ. ಚುನಾವಣೆಯಲ್ಲಿ ಆರಿಸಿ ಬಂದು ಶಾಸನ ಮಾಡುವವರು ರಾಜಕಾರಣಿಗಳು. ಸರಿಯೆ. ಆದರೆ, ಈ ದೇಶದ ಚಕ್ರ ಓಡುವುದು ಆಡಳಿತಶಾಹಿಯಿಂದ ಅಲ್ಲವೆ? ಸರಕಾರದ ಎಲ್ಲ ಕೆಲಸಗಳೂ ನಮ್ಮ ಅಧಿಕಾರಿಗಳ ಇಷ್ಟಾನುಸಾರ, ಅವರ ಮೂಗಿನ ಕೆಳಗಿನಿಂದಲೇ ಸಾಗಬೇಕು ಅಲ್ಲವೆ? ಪ್ರಜೆಗಳು ಆಡಳಿತಾಂಗದ ಕಾರ್ಯವೈಖರಿಯಿಂದ ಬೇಸತ್ತು ಸತ್ತು ಹೋಗಿಲ್ಲವೆ.

ಆಡಳಿತಗಾರರ ಸೈನ್ಯ ಚಿಕ್ಕದೇನಲ್ಲ. ಸುಮಾರು 7500 ಮಂದಿ ಐಎಎಸ್ ಅಧಿಕಾರಿಗಳನ್ನು ಹೊಂದಿರುವ ದೇಶ ನಮ್ಮದು. ಭಾರತದ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಥವಾ ತಮಗೆ ಇಷ್ಟಬಂದಂತೆ ಕೆಲಸ ಮಾಡುವ ನೌಕರರ ಸಂಖ್ಯೆ 75 ಲಕ್ಷಕ್ಕೂ ಹೆಚ್ಚು. ಕರ್ನಾಟಕದಲ್ಲೂ ಅಷ್ಟೆ. ನಮ್ಮಲ್ಲಿ 7 ಲಕ್ಷ ರಾಜ್ಯ ಸರಕಾರಿ ನೌಕರರು ಇದ್ದಾರೆ. ಆರು ಕೋಟಿ ಪ್ರಜೆಗಳ ನಿತ್ಯ ಭವಿಷ್ಯವನ್ನು ಬರೆಯುವವರು ಅವರೇ ಅಲ್ಲವೆ?

ತಮಾಷೆ ಹೇಗಿದೆ ನೋಡಿ. ನಮಗೆ ಇಷ್ಟವಾಗದಿದ್ದರೆ ಒಬ್ಬ ರಾಜಕಾರಣಿಯನ್ನು ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯಬಹುದು. ಆದರೆ, ಒಬ್ಬ ಐಎಎಸ್ ಅಧಿಕಾರಿಯನ್ನೋ, ಒಬ್ಬ ಐಪಿಎಸ್ ಅಧಿಕಾರಿಯನ್ನೋ ಕಿತ್ತೆಸೆಯುವುದು ಸಾಧ್ಯವಾ? ಹಿರಿಯ ಅಧಿಕಾರಿಗಳು ಹಾಗಿರಲಿ, ಬೆಳಗ್ಗೆ 6 ಗಂಟೆಗೆ ನಿಮ್ಮ ಮನೆಗೆ ನೀರು ಹಾಯಿಸುವ ಮುಖ್ಯ ಕೊಳವೆಯ ತಿರುಗಣಿಯನ್ನು 7 ಗಂಟೆಗೆ ತಿರುಗಿಸುವ ಮುನ್ಸಿಪಾಲ್ಟಿ ಕೆಲಸಗಾರರನ್ನು ಪ್ರಶ್ನಿಸುವುದು ಇಲ್ಲಿ ಸಾಧ್ಯವಾ?

ದಕ್ಷತೆಯಿಂದ ತಮ್ಮತಮ್ಮ ಕೆಲಸಗಳನ್ನು ಮಾಡಲಾಗದೆ ಸರಕಾರಕ್ಕೆ, ತೆರಿಗೆದಾರರಿಗೆ ಹೊರೆಯಾಗಿರುವ ಸರಕಾರಿ ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸುವ ಕಾನೂನು ನಮ್ಮಲ್ಲಿ ಏಕೆ ಇಲ್ಲ? ಕಾಲಕಾಲಕ್ಕೆ ನೌಕರರ ದಕ್ಷತೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಅವರಿಗಿರುವ ಬದ್ಧತೆಯನ್ನು ಪುನರ್ ಪರಿಶೀಲಿಸಿ ದಕ್ಷರನ್ನು ಉಳಿಸಿಕೊಂಡು ಕೆಲಸಕ್ಕೆ ಬಾರದವರನ್ನು ಮನೆಗೆ ಕಳಿಸುವ ನಿಯಮಗಳನ್ನು ನಮ್ಮ ಸರಕಾರ ಜಾರಿಗೆ ತರಬೇಡವೆ?

ತಮ್ಮ ಸರಕಾರದ ನೌಕರರ ಸಾಮರ್ಥ್ಯ ಗೊತ್ತಿದ್ದೂ ಗೊತ್ತಿದ್ದೂ ಅವರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಸಿದ ಯಡಿಯೂರಪ್ಪನವರನ್ನು ಏನಂತ ಕರೀಬೇಕು? ಒಂದು ಸಣ್ಣ ಸರಕಾರಿ ಕೆಲಸಕ್ಕೆ ಇವತ್ತು ಬಾ, ನಾಳೆ ಬಾ ಎಂದು ಪ್ರಜೆಗಳನ್ನು ಅಲೆಸುವುದು ಮತ್ತು ನಿಂತರೆ ಕೂತರೆ ಲಂಚ ಕೇಳುವ ನಮ್ಮ ಮಧ್ಯನೇ ಇರುವ ಸರಕಾರಿ ನೌಕರರನ್ನು ನೌಕರಿಯಿಂದ ವಜಾ ಮಾಡುವ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ?ನಮ್ಮ ಮಂತ್ರಿಗಳು ಈ ದಿಕ್ಕಿನಲ್ಲಿ ಚಿಂತಿಸುವುದಿರಲಿ, ಯೋಚಿಸುವುದೂ ಇಲ್ಲ. ಏಕೆ?

ಬರೀ ರಾಜಕಾರಣಿಗಳನ್ನು ಹಳಿಯುತ್ತಾ ಕಾಲಹರಣ ಮಾಡುವುದಕ್ಕಿಂತ ಇಂಥ ಪ್ರಶ್ನೆಗಳನ್ನೂ ನಮ್ಮ ಜನ, ನಮ್ಮ ಮಾಧ್ಯಮ, ನಮ್ಮ ಚಿಂತಕರು ಕೇಳುವುಕ್ಕೆ ಶುರುಮಾಡುವುದಕ್ಕೆ ಇದು ಸಕಾಲವಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X