Gautam Adani: ಬಿಹಾರದಲ್ಲಿ 150 ಕೋಟಿ ರೂ. ಗ್ರಾಮೀಣ ದೃಷ್ಟಿ ಆರೈಕೆ ಯೋಜನೆ ಪ್ರಾರಂಭಿಸಿದ ಗೌತಮ್ ಅದಾನಿ
Gautam Adani: ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಶನಿವಾರ ಬಿಹಾರದಲ್ಲಿ 150 ಕೋಟಿ ರೂ. ಹೂಡಿಕೆಯಲ್ಲಿ ಮಹತ್ವದ ಗ್ರಾಮೀಣ ನೇತ್ರ ಆರೈಕೆ ಯೋಜನೆಗೆ ಚಾಲನೆ ನೀಡಿದೆ. ವಿಶ್ವದ ಅತಿದೊಡ್ಡ ಗ್ರಾಮೀಣ ಕಣ್ಣಿನ ಆರೈಕೆ ವ್ಯವಸ್ಥೆಗಳಲ್ಲೊಂದನ್ನು ನಿರ್ಮಿಸುವ ಗುರಿಯನ್ನು ಈ ಯೋಜನೆಯು ಒಳಗೊಂಡಿದೆ.
ಕಣ್ಣಿನ ಆರೈಕೆಯ ವಿಶೇಷ ಯೋಜನೆಗೆ ಅಡಿಪಾಯ ಹಾಕಲಾಗಿದೆ. ಪಾಟ್ನಾದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಮಾಸ್ಟಿಚಕ್‌ನಲ್ಲಿ ಪ್ರೀತಿ ಅದಾನಿ ಮತ್ತು ಮೃತ್ಯುಂಜಯ್ ತಿವಾರಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು. ಈ ಹೊಸ ಯೋಜನೆಯು ಅಖಂಡ ಜ್ಯೋತಿ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಅದಾನಿ ಸೆಂಟರ್ ಫಾರ್ ಐ (ACE) ಮತ್ತು ಅದಾನಿ ಟ್ರೈನಿಂಗ್ ಇನ್ ಆಪ್ತಾಲ್ಮಿಕ್ ಮೆಡಿಸಿನ್ (ATOM) ನಿರ್ಮಾಣ ಮಾಡಲಿದೆ. ಅಲ್ಲದೆ ಈ ಯೋಜನೆಯು ವಾರ್ಷಿಕವಾಗಿ 3.3 ಲಕ್ಷ ಕಣ್ಣಿನ ಶಸ್ತ್ರಚಿಕಿತ್ಸೆಗಳಿಗೆ ಸಾಮರ್ಥ್ಯವನ್ನು ಒದಗಿಸುವ ಮತ್ತು ಪ್ರತಿ ವರ್ಷ ಸುಮಾರು 1,000 ಕಣ್ಣಿನ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡುವ ಗುರಿಯನ್ನು ಹಾಕಿಕೊಂಡಿದೆ.

ಗೌತಮ್ ಅದಾನಿ ಬಿಹಾರದಲ್ಲಿ ಒಂದು ಪ್ರಮುಖ ಗ್ರಾಮೀಣ ಕಣ್ಣಿನ ಆರೈಕೆ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಇದು ACE ಮತ್ತು ATOM ಗೆ ಹಣಕಾಸು ಒದಗಿಸುತ್ತದೆ, ಅಲ್ಲದೆ ಕೈಗೆಟುಕುವ ಬೆಲೆಯಲ್ಲಿ ಕಣ್ಣಿನ ಚಿಕಿತ್ಸೆಯನ್ನು ನೀಡಲು, ವಾರ್ಷಿಕವಾಗಿ 1,000 ವೃತ್ತಿಪರರಿಗೆ ತರಬೇತಿ ನೀಡಲು ಮತ್ತು ಪ್ರತಿ ವರ್ಷ 3.3 ಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ಹೊಸ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡುವ ಯೋಜನೆ ರೂಪಿಸಿಕೊಳ್ಳಲಾಗಿದೆ.
ACE ಸಂಸ್ಥೆಯು ಕೈಗೆಟುಕುವ ಚಿಕಿತ್ಸಾ ಸೇವೆಗಳು, ಸಂಕೀರ್ಣ ಕಣ್ಣಿನ ಚಿಕಿತ್ಸಾ ವಿಧಾನಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕ ತಲುಪುವಿಕೆಗೆ ಒತ್ತು ನೀಡುವ ಅತ್ಯಾಧುನಿಕ ನೇತ್ರ ಚಿಕಿತ್ಸಾ ಮತ್ತು ಶಸ್ತ್ರಚಿಕಿತ್ಸಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದೇ ವೇಳೆ, ATOM ಯೋಜನೆಯು ಗ್ರಾಮೀಣ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಆಪ್ಟೊಮೆಟ್ರಿಸ್ಟ್‌ಗಳು, ನೇತ್ರ ಸಹಾಯಕರು ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಪರಿಣತಿ ಹೊಂದಿದ ಮಾನವ ಸಂಪನ್ಮೂಲವನ್ನು ತರಬೇತುಗೊಳಿಸುವತ್ತ ಗಮನಹರಿಸಲಿದೆ ಎಂದು ಹೇಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಿಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ದೂರದ ಗ್ರಾಮಗಳಲ್ಲಿರುವ ಜನರಿಗೆ ಕಣ್ಣಿನ ಆರೈಕೆಯ ದೃಷ್ಟಿಯಿಂದ ಹಾಗೂ ಅವರು ಸುಲಭವಾಗಿ ತಲುಪಬೇಕು ಎನ್ನುವ ಕಾರಣಕ್ಕೆ 10 ಸಾರಿಗೆ ಬಸ್‌ಗಳ ಸೇವೆಗೂ ಇದೇ ಸಮಯದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೌತಮ್ ಅದಾನಿ, ಈ ಉಪಕ್ರಮವು "ಸೇವಾ ಹಿ ಸಾಧನಾ ಹೈ" - ಸೇವೆಯೇ ಸಾಧನೆ ಎನ್ನುವ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಇದು ಸಮಾಜಕ್ಕೆ ಸಹಾನುಭೂತಿಯ ಸಂಸ್ಥೆಗಳನ್ನು ನಿರ್ಮಿಸುವ ಕಡೆಗೆ ಸೇವೆಯನ್ನು ದೀರ್ಘಕಾಲೀನ ಬದ್ಧತೆ ತೋರಿಸುತ್ತದೆ. ದೃಷ್ಟಿಯನ್ನು ಪುನಃಸ್ಥಾಪಿಸುವುದು ಕೇವಲ ವೈದ್ಯಕೀಯ ಚಿಕಿತ್ಸೆ ಮಾತ್ರವಲ್ಲ. ಘನತೆ, ವಿಶ್ವಾಸ ಮತ್ತು ಭರವಸೆಯನ್ನು ಪುನಃಸ್ಥಾಪಿಸುವ ಒಂದು ಮಾರ್ಗವಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಯ ವಿಸ್ತರಣೆಯ ಭಾಗವಾಗಿ, ಭಾರತದಲ್ಲಿ ಸೇವೆಗಳಿಂದ ವಂಚಿತ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ದೃಷ್ಟಿ ಆರೈಕೆ ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ವಿಸ್ತರಿಸುವ ಉದ್ದೇಶದಿಂದ ಗೌತಮ್ ಅದಾನಿ ಅವರು ಹೆಚ್ಚುವರಿಯಾಗಿ ₹500 ಕೋಟಿ ವೈಯಕ್ತಿಕ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಜೊತೆಗೆ, "Adani Akhand Jyoti Foundation" ಸ್ಥಾಪನೆಯನ್ನೂ ಪ್ರಕಟಿಸಿದರು.
ಕಾರ್ಯಾಚರಣೆಯ ವೆಚ್ಚ ಸೇರಿದಂತೆ ಒಟ್ಟು ಹೂಡಿಕೆ ವೆಚ್ಚವು ₹700 ಕೋಟಿ ಮೀರುವ ನಿರೀಕ್ಷೆಯಿದೆ. ಅದಾನಿ ಗ್ರೂಪ್‌ನ ಮುಂಬರುವ 2,400 ಮೆಗಾವ್ಯಾಟ್ ಅಲ್ಟ್ರಾ-ಸೂಪರ್‌ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ ಬಳಿ ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರ್‌ಪೈಂಟಿಯಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸುವ ಯೋಜನೆಯನ್ನು ಅದಾನಿ ಫೌಂಡೇಶನ್ ಪ್ರಕಟಿಸಿದೆ. ಪೂರ್ವ ಬಿಹಾರದಲ್ಲಿ ಆಸ್ಪತ್ರೆ ಆರೋಗ್ಯ ಸಂಪರ್ಕವನ್ನು ಬಲಪಡಿಸುವ ನಿರೀಕ್ಷೆಯಿದೆ.
ಅದಾನಿ ಗ್ರೂಪ್ ಸುಮಾರು 40,000 ಕೋಟಿ ರೂ. ಅಂದಾಜು ಸಂಚಿತ ಹೂಡಿಕೆಗಳು ಹಾಗೂ ಯೋಜಿತ ಬದ್ಧತೆಗಳೊಂದಿಗೆ ಬಿಹಾರದಲ್ಲಿ ತನ್ನ ಹೂಡಿಕೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಈ ಮಹತ್ವದ ಉಪಕ್ರಮ ಆರಂಭವಾಗಿದೆ. ಈ ಹೂಡಿಕೆಗಳಲ್ಲಿ ಪಿರ್‌ಪೈಂಟಿ ತಾಪ ವಿದ್ಯುತ್ ಯೋಜನೆ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಮೂಲಕ ಉತ್ತರ ಬಿಹಾರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ, ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಗಯಾ ಮತ್ತು ನಳಂದದಲ್ಲಿ ನಗರ ಅನಿಲ ವಿತರಣಾ ಜಾಲ ನಿರ್ಮಾಣ ಹಾಗೂ ನವಾಡಾ ಮತ್ತು ಮುಜಫರ್‌ಪುರ ಜಿಲ್ಲೆಗಳಲ್ಲಿ ಸಿಮೆಂಟ್ ಗ್ರೈಂಡಿಂಗ್ ಘಟಕಗಳ ಸ್ಥಾಪನೆ ಸೇರಿವೆ.
2005ರಲ್ಲಿ 30 ಹಾಸಿಗೆಗಳ ಸೌಲಭ್ಯದೊಂದಿಗೆ ಸ್ಥಾಪನೆಯಾದ ಅಖಂಡ ಜ್ಯೋತಿ ಕಣ್ಣಿನ ಆಸ್ಪತ್ರೆಯು ಪ್ರಮುಖ ಗ್ರಾಮೀಣ ಕಣ್ಣಿನ ಆರೈಕೆ ಸಂಸ್ಥೆಯಾಗಿ ಹೊರಹೊಮ್ಮಿದೆ ಮತ್ತು 14 ಲಕ್ಷಕ್ಕೂ ಹೆಚ್ಚು ದೃಷ್ಟಿ ಪುನಃಸ್ಥಾಪನೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ ಎಂದು ವರದಿಯಾಗಿದೆ.
ಈ ಉಪಕ್ರಮವು ಭಾರತ ಸರ್ಕಾರದ ಅಂಧತ್ವ ಮತ್ತು ದೃಷ್ಟಿಹೀನತೆ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಪೂರಕವಾಗಿದೆ. ಭಾರತ ಗ್ರಾಮೀಣ ಪ್ರದೇಶದಾದ್ಯಂತ ಕೈಗೆಟುಕುವ ಬೆಲೆಯಲ್ಲಿ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸಲು ವಿಸ್ತರಿಸಬಹುದಾದ ಸಮುದಾಯ ಆಧಾರಿತ ಮಾದರಿಯನ್ನು ರೂಪಿಸುವ ಗುರಿಯನ್ನು ಈ ಯೋಜನೆಯು ಒಳಗೊಂಡಿದೆ ಎಂದು ಅದಾನಿ ಗ್ರೂಪ್ ಹೇಳಿದೆ.












Click it and Unblock the Notifications