ಸನ್ನಿವೇಶ ಪ್ರಜ್ಞೆ ಇಲ್ಲದ ಮೇಲೆ...

SK Shama Sundara
ನಮ್ಮವರು ತಮ್ಮವರು ಎನಿಸಿಕೊಳ್ಳುವವರ ಜತೆ ಸಂತೋಷದಿಂದ ಕಾಲಕಳೆಯಲು, ಇಂಥ ಫಂಕ್ಷನ್‌ಗಳು ಒಳ್ಳೆ ಛಾನ್ಸು ಅಂದುಕೊಂಡರೂ ಎಲ್ಲೋ ಒಂದು ಕಡೆ ದೃಶ್ಯಮಾಲಿನ್ಯ, ಶಬ್ದಮಾಲಿನ್ಯ ಕಿವಿಗೆ ಬಿದ್ದರೆ ಮುಗಿದು ಹೋಯಿತು ಕತೆ.. ಇಷ್ಟಕ್ಕೂ ಮೊನ್ನೆ ಏನಾಯಿತು ಅಂದ್ರೆ..

ಹೊಸದುರ್ಗ(ಚಿತ್ರದುರ್ಗ ಜಿಲ್ಲೆ) : 21 ಜುಲೈ, 2006

ನಮ್ಮ ಸಮೀಪ ಬಂಧುವೊಬ್ಬರ ಮನೆಯಲ್ಲಿ ಒಂದು ಮಂಗಳ ಕಾರ್ಯಕ್ರಮ. 'ಯಾವಾಗ ನೋಡಿದ್ರೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೋತೀಯಾ ಶಾಮ.. ನೀನು ಈ ಸಲ ಬರಲೇಬೇಕು ಕಣೋ" ಎಂದು ನನ್ನ ತಂಗಿ ಪ್ರೀತಿಯಿಂದ ಎಚ್ಚರಿಸಿಬಿಟ್ಟಿದ್ದಳು. ಅವಳು ಈ ಬಾರಿ ಕರೆಯದಿದ್ದರೂ ನಾನೇ ಅವಳಿಗೆ ಮುಂಚಿತವಾಗಿ ಹೇಳದೆ ದುರ್ಗಕ್ಕೆ ಹೋಗಿ, ಅಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಬೇಕು ಎಂದುಕೊಂಡಿದ್ದ ನನ್ನ ಪ್ಲಾನು ಅಷ್ಟರಮಟ್ಟಿಗೆ ತಪ್ಪಿಹೋಯಿತು.

ಕರ್ನಾಟಕವನ್ನು ಆಳಿದ 17 ಮಂದಿ ಮುಖ್ಯಮಂತ್ರಿಗಳು ನಮ್ಮೆಲ್ಲರಿಗಾಗಿ ನಿರ್ಮಿಸಿಟ್ಟ ರಸ್ತೆಗಳಲ್ಲಿ ಬಸ್ಸು ಮೂಲಕ ಊರು ತಲಪುವಷ್ಟರಲ್ಲಿ ಹೆಣಬಿದ್ದುಹೋಯಿತು . ಪ್ರಯಾಣದ ಇಂಥ ನೋವುಗಳನ್ನು ಅಳಿಸುವ ಶಕ್ತಿ ಪ್ರೀತಿಯಿಂದ ಬರಮಾಡಿಕೊಳ್ಳುವ ಕೆಲವು ಮನೆಗಳಿಗೆ ಇರುತ್ತದೆ.

ನೆಂಟರಿಷ್ಟರು ತುಂಬಿ ತುಳುಕಿದ ಮನೆಮಟ್ಟಿನ ಆ ಕಾರ್ಯಕ್ರಮದಲ್ಲಿ ಮಾತೋಮಾತು, ಊಟೋಪಚಾರಗಳು, ಮಕ್ಕಳ ಆಟ, ಹದಿಹರೆಯದವರ ಕಲರವಗಳು, ದೊಡ್ಡವರ ಆತಂಕಗಳು, ಕುಳಿತಲ್ಲಿಂದಲೇ ವಯಸ್ಸಾದ ಅತ್ತೆ, ಮಾವ, ಚಿಕ್ಕಮ್ಮ ಬೀರುವ ನೋಟಗಳು, ಜರಿಸೀರೆ-ಕನಕಾಂಬರ ಮುಡಿದು ತುಂಬಾ ಕೆಲಸ ಇರುವವರಂತೆ ಅಲ್ಲಿಂದಿಲ್ಲಿಗೆ ಧಾವಿಸುವವರು, ಮೊಬೈಲ್‌ ಫೋನ್‌ ಸಂಗೀತಗಳು, ಬಂದುಹೋಗುವವರ ಸಂಭ್ರಮಗಳು, ಆಟೋ ಶಬ್ದ, ಒಳಗೆ ಪಾತ್ರೆ ಶಬ್ದಗಳು, ಸಿಗರೇಟು ನಿಷಿದ್ಧ ಪ್ರದೇಶದಲ್ಲಿ ಸ್ಟೀಲ್‌ ತಟ್ಟೆಯಲ್ಲಿ ಹೊರಟ ಕಾಫಿ ಲೋಟಗಳ ಮೆರವಣಿಗೆಗಳು.. ತುಂಬಾ ಚೆನ್ನಾಗಿತ್ತು.

'ಫಂಕ್ಷನ್‌ ಎಲ್ಲಾ ಮುಗೀಲಿ, ನಿನಗೆ ಎಣ್ಣೆ ಸ್ನಾನ ಮಾಡಿಸ್ತೀನಿ ಹಾಗೆ ಊರಿಗೆ ಹೋಗಬೇಡ" ಅಂತ ಸುದಿ ಪಿಸುಗುಟ್ಟುತ್ತಿದ್ದಳು. ನಾವೆಲ್ಲ ಬಣ್ಣದ ಕುರ್ಚಿಯ ಮೇಲೆ ಕಾಲು ನೀಡಿಕೊಂಡು ಲೋಕಾಭಿರಾಮ ಮಾಡುತ್ತಿರುವ ಸಮಯಕ್ಕೆ ಸರಿಯಾಗಿ ಒಂದು ಅಂಬಾಸಿಡರ್‌ ಕಾರು ಮನೆಮುಂದೆ ಬಂದು ನಿಂತಿತು.

ಮೇಲುನೋಟಕ್ಕೆ ನಮ್ಮವರು ತಮ್ಮವರು ಎನಿಸಿಕೊಳ್ಳುವವರ ಜತೆ ಸಂತೋಷದಿಂದ ಕಾಲಕಳೆಯಲು ಇಂಥ ಫಂಕ್ಷನ್‌ಗಳು ಒಳ್ಳೆ ಛಾನ್ಸು ಅಂದುಕೊಂಡರೂ ಎಲ್ಲೋ ಒಂದು ಕಡೆ ದೃಶ್ಯ ಮಾಲಿನ್ಯ, ಶಬ್ದಮಾಲಿನ್ಯ ಕಿವಿಗೆ ಬಿದ್ದರೆ ಮುಗಿದು ಹೋಯಿತು ಕತೆ.. ಪ್ಲಾಸ್ಟಿಕ್‌ ನೀರಿನ ಬಾಟಲ್‌ ಹಿಡಿದುಕೊಂಡು ನಮ್ಮ ಚಿಕ್ಕ ಅತ್ತೆ ಕಾರಿನಿಂದ ಇಳಿದರು. ಪಾಯಸದಲ್ಲಿ ಸಾಸಿವೆಕಾಳು ಕಂಡಂತಾಯಿತು.

ಆಕೆ ಒಳ್ಳೆಯ ಹೆಂಗಸು. ಗಂಟೆ ಹೊಡೆದಂತೆ ನೇರ ಮಾತು. ಆದರೆ, ಎಲ್ಲಿ ಏನು, ಯಾವ ವಿಷಯ ಎಷ್ಟು ಮಾತಾಡಬೇಕು ಎನ್ನುವ ಪ್ರಜ್ಞೆಯನ್ನು ಅಂದು ಅವರಪ್ಪ ಅಮ್ಮ ಆಕೆಗೆ ಹೇಳಿಕೊಟ್ಟಿಲ್ಲ. ಈಕೆ ಕಲಿತಿಲ್ಲ, ಗಂಡನಿಗೆ ಗೊತ್ತು ಆದರೆ ಹೇಳಿಕೊಡುವ ಜಾಣ್ಮೆ ಯನ್ನು ಅವರ ಅಪ್ಪ ಅಮ್ಮ ಅವನಿಗೆ ಕಲಿಸಿಲ್ಲ.

ನಾನು ಅಂದುಕೊಂಡತೆಯೇ ಆಯಿತು. ಆಕೆ ಬಂದು ಕೈಕಾಲು ತೊಳೆದುಕೊಂಡು ಇನ್ನೂ ಒಂದೆರಡು ಗಂಟೆ ಆಗಿಲ್ಲ. ಆಗಲೇ ಆಕೆಗೆ ನಾಲಗೆ ಕೆರೆಯಲು ಶುರುವಾಗುತ್ತಿದ್ದುದು ನಮ್ಮಲ್ಲಿ ಕೆಲವರಿಗೆ ಅರಿವಾಯಿತು. ಕಣ್ಣುಬಿಟ್ಟು ಕಣ್ಣು ತೆರೆಯುವಷ್ಟರಲ್ಲಿ ಹಿರಿಯೂರು ಕುಕ್ಕರ್‌ ಕೂಗಿತು.

'ನೀವೆಲ್ಲ ಎಲ್ಲೋ ಒಂದು ಕಡೆ ಸೆಟಲ್‌ ಆಗಿದೀರಾ. ನಮ್ಮ ಕಷ್ಟ ಕೇಳುವವರಿಲ್ಲ. ನೀವೆಲ್ಲ ಕೂತು ಆಸ್ತಿ ವಿಷಯ ಬಗೆ ಹರಿಸಿದರೆ ನನ್ನ ಮಗಳಿಗೂ ಒಂದು ದಾರಿ ಆಗತ್ತೆ" ಎಂಬ ವರಾತ ಶುರು ಆಯಿತು. 'ಮುುಂಜಿ ಮದುವೆ ಇದ್ದಾಗ ಎಲ್ಲ ಸೇರ್ತೀರಾ, ಮುಗೀತಿದ್ದಂತೆ ನಿಮ್‌ನಿಮ್‌ ಊರಿಗೆ ಹೊರಟ್‌ಬಿಡ್ತೀರಾ" ಎನ್ನುತ್ತಾ ರಾಮಾ ಸದ್ಗುರು ಅಂತ ದೇವರಿಗೂ ಕೇಳಿಸುವ ಹಾಗೆ ರಾಗ ಎಳೆದರು.

ಅಲ್ಲಿ ವಟುವಿಗೆ ಯಜ್ಞೋಪವೀತ ಧಾರಣೆ ಆಗುತ್ತಿದೆ. 70-80 ಸಾವಿರ ದುಡ್ಡು ಖರ್ಚು ಮಾಡಿ ಅವರಪ್ಪ ಅಲ್ಲಿ ಮಗನಿಗೆ ಕಿವಿಯಲ್ಲಿ ಗಾಯಿತ್ರಿ ಉಪದೇಶ ಮಾಡುತ್ತಿದ್ದರೆ, ಈಯಮ್ಮ ಏನೋ ಮಾತಾಡಿ ಎಲ್ಲರ ಮೂಡು ಕೆಡಿಸುತ್ತಿದ್ದಳು.

ಇಂಥವರು ಎಲ್ಲ ಕಡೆ ಇರುತ್ತಾರೆ. 'ಶಿವಪೂಜೆಯಲ್ಲಿ ಕರಡಿ ಬಿಟ್ಟಹಾಗೆ" ಎನ್ನುವ ಗಾದೆಯಂತೆ ಸಮಯ, ಜನ, ಸಂದರ್ಭ ಏನೊಂದೂ ಲೆಕ್ಕಹಾಕದೆ ತಮಗಿಷ್ಟಬಂದಹಾಗೆ ವರ್ತಿಸುತ್ತಾರೆ. ಉಪನಯನ, ಉಡಿ, ಊಟ, ಉಡುಗೊರೆ, ಉಭಯಕುಶಲೋಪರಿಗೆ ಮಾತ್ರ ಸೀಮಿತವಾಗಬೇಕಾಗಿದ್ದ ಕಾರ್ಯಕ್ರಮದ ಸೊಗಡು ಸೊರಗಿಸಿದ ಚಿಕ್ಕತ್ತೆಗೆ ಏನು ಹೇಳೋಣ?

Yes. ಆಸ್ತಿ ವಿಷಯ ಇತ್ಯರ್ಥ ಆಗಿಲ್ಲ. ನಂಗೂ ಗೊತ್ತು. ನಾವೆಲ್ಲ ಕೂತು ಮಾತಾಡಬೇಕು. ಎಲ್ಲರಿಗೂ ಒಳ್ಳೆಯದೇ. ಆದರೆ, ಅವರ ಮನೆ ಉಪನಯದಲ್ಲಿ ನಮ್ಮ ಮನೆ ವಿಷಯ ಯಾಕೆ ಎತ್ತಬೇಕು? ಬೇಕಿದ್ದರೆ ಫೋನು ಮಾಡಿ ಬೆಂಗಳೂರಿಗೆ ಬರಲಿ, ನಮ್ಮ ಮನೆಯಲ್ಲಿ ನಾಕು ದಿನ ಇರಲಿ. ನಿಧಾನವಾಗಿ ಮಾತನಾಡಬಹುದು. ಸಮಸ್ಯೆಗಳು ತಾವೇತಾನಾಗಿ ಬಗೆಹರಿಯತ್ತೆ. ಅಷ್ಟು ಯೋಚಿಸುವ ಸಂಯಮ ಈಕೆಗಿಲ್ಲ.

'ಆಯ್ತೂ ಅತ್ತೆ. ಮುಂಜಿ ಎಲ್ಲಾ ಮುಗೀಲಿ, ನೀವೂ ಊರಿಗೆ ಹೋಗುವಿರಂತೆ. ದಸರಾ ರಜಕ್ಕೆ ಬೆಂಗಳೂರಿಗೆ ಬನ್ನಿ. ಬಗೆಹರಿಸೋಣಂತೆ" ಎಂದು ಸಮಾಧಾನಪಡಿಸಲು ಪ್ರಯತ್ನಿಸಿದೆ. 'ಏನ್‌ ಮಾಡ್ತೀರೋ ಮಾಡೀಪ್ಪಾ " ಎನ್ನುತ್ತಾ ಕೊಬ್ರಿಸಕ್ಕರೆ ಬಾಯಿಗೆ ಹಾಕಿಕೊಂಡರು.

ಫಂಕ್ಷನ್ನು ಮನೆಯಲ್ಲಾಗಲೀ, ಹೊರಗಾಗಲೀ , ಎಲ್ಲಾದರೂ ಆಗಲಿ. ಒಂದು ಕಾರ್ಯಕ್ರಮಕ್ಕೆ ಒಂದು ಸ್ವರೂಪ, ಒಂದು ಚೊಕಟ್ಟು , ತನ್ನದೇ ಆದ ಅರ್ಥ ಇರುತ್ತದೆ. ಆ ಚೊಕಟ್ಟನ್ನು ಮೀರಿ ವರ್ತಿಸಿದರೆ ಆಭಾಸಗಳಾಗುತ್ತವೆ. ಅನುಭವಿಸುವವರು ಯಾರೋ. ಅದನ್ನು ತಪ್ಪಿಸುವುದು ಜಾಣ ಜಾಣೆಯರ ಲಕ್ಷಣ. ಇಲ್ಲದಿದ್ದರೆ ಕೈತೋರಿಸಿ ಅವಲಕ್ಷಣ ಆಗುತ್ತದೆ.

ಕೈತುಂಬಾ ರೂಪಾಯಿಗಳು ಪ್ರಾಪ್ತವಾಗುವ ಹಾಳಾದ್ದು ಆ ಆಸ್ತಿ ಯಾರಿಗೆ ಬೇಡ? ನನಗೂ ಬೇಕು. ಇಷ್ಟು ಹೊತ್ತಿಗೆ ಅದೆಲ್ಲ ಇತ್ಯರ್ಥವಾಗಿದ್ದರೆ ಬಾಲ್ಟಿಮೋರ್‌ಗೆ ಲುಫ್ತಾನ್‌ಸ ವಿಮಾನದಲ್ಲಿ ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ಟಿಕೆಟ್‌ ಬ್ಲಾಕ್‌ ಮಾಡ್ತಿದ್ದೆ. ನಾನು ಅಮೆರಿಕಾಗೆ ಹೋಗುವುದಿದೆ. ಅಲ್ಲೂ ಒಂದು ಮಂಗಳ ಕಾರ್ಯಕ್ರಮ ನನಗಾಗಿ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+