ಶಿವರಾಮ ಕಾರಂತರ ಭೇಟಿ ಮಾಡಿದ ಆ ನೆನಪು ನಿಮ್ಮೊಂದಿಗಿಷ್ಟು

Posted By: ಸ ರಘುನಾಥ, ಕೋಲಾರ
Subscribe to Oneindia Kannada

ಕೋಲಾರ ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಏರ್ಪಡಿಸಿದ್ದ ಎಚ್.ಎಲ್.ನಾಗೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರ ದೊಡ್ಡ ಮನಸ್ಸು ಕುರಿತು ಹೇಳಿ ಕುಳಿತಾಗ ಹೇಳಬೇಕಾದುದನ್ನೇ ಹೇಳಲು ಆಗದ್ದು ನಿರಾಸೆ ತಂದಿತು. ಇಂತಹ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಅವರದೇ ಕಾರಣಗಳಲ್ಲಿ ತಡ ಮಾಡಿ, ಟೈಮಿಲ್ಲ. ಒಂದೆರಡು ಮಾತಾಡಿ ಮುಗಿಸಿ ಎಂದು ಒತ್ತಡ ಹೇರುತ್ತಾರೆ.

ಆಗ ನೆಪ ಮಾತ್ರದ ಕಾರ್ಯಕ್ರಮ ಅದಾಗಿಬಿಡುತ್ತದೆ. ಆಡಿದ್ದು ಒಗ್ಗರಣೆ ಮಾತಾಗಿರುತ್ತದೆ. ಸಂಘಟಕರಿಗೆ ಮಾಡಿದೆವಾ ಅನ್ನಿಸುವುದಷ್ಟೇ ಮುಖ್ಯವೂ ಆಗಿರುತ್ತದೆ. ಅಷ್ಟಿಷ್ಟಾದರೂ ಹೇಳಲಾಯಿತಲ್ಲ ಅನ್ನೋ ಸಮಾಧಾನ ನಮಗೆ. ನನಗೆ ಬೈಕೊತ್ತೂರಿನ ಜೋಂಕಿಣಿ ಮುನೆಪ್ಪನಿಗೆ ಗೌಡರು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದಾಗ ತೋರಿದ ಹೃದಯವಂತಿಕೆಯನ್ನು ಮಾದರಿಯಾಗಿ, ಆದರ್ಶವಾಗಿ ಇಂದಿನವರಿಗೆ ತಿಳಿಸಬೇಕಿತ್ತು.

ಹಾಗೆಯೆ ಅವರ 'ದೊಡ್ಡಮನೆ' ಕಾದಂಬರಿ ಕುರಿತು ಹೇಳಬೇಕಿತ್ತು. ಅವಕಾಶವಾಗಲಿಲ್ಲ. ಅದು ಬೇಕಿದ್ದವರೂ ಇರಲಿಲ್ಲ. ಅಂದು ರಾತ್ರಿ ನಾಗೇಗೌಡರ ನೆಪದಲ್ಲಿ ನಾನು ಮಾತನಾಡಿಸಿದ ಕಾರಂತ, ಮಾಸ್ತಿ, ಪುತಿನ, ಅಡಿಗ, ಸು.ರಂ.ಎಕ್ಕುಂಡಿ, ತೆಲುಗಿನ ರಾವೂರಿ ಭರದ್ವಾಜ, ಬಾಪು, ಗುಂಟೂರು ಶೇಷೇಂದ್ರಶರ್ಮ, ಅದ್ದೇಪಲಿ, ವೇಗುಂಟ ಮೋಹನ ಪ್ರಸಾದ್ ಮುಂತಾದವರು ಹೃದಯಕ್ಕೆ ಬಂದು ಮಾತಾಡಿದರು.

ಜೀವಗಳನ್ನು ಉಳಿಸುತ್ತಿದ್ದ ಎರಡು ಜೀವಗಳ ನೆನೆದು, ಶರಣು ಶರಣೆನ್ನುತ್ತಾ...

ನಾನು ಕಾರಂತರನ್ನು ಮೊದಲಿಗೆ ಕಂಡಿದ್ದು ಮೈಸೂರಿನಲ್ಲಿ. 1987ರ ಮಾರ್ಚ್ 2ರಿಂದ 11ರ ವರೆಗೆ ನಡೆದ ದ್ರಾವಿಡ ಭಾಷೆಗಳ ಆಧುನಿಕ ಸಣ್ಣ ಕತೆ ಅನುವಾದ ಕಮ್ಮಟದ ಸಮಾರೋಪ ಭಾಷಣ ಕಾರಂತರದು. ಅವರು ಹತ್ತು ನಿಮಿಷ ಮುಂಚಿತವಾಗಿ ಬಂದಿದ್ದರು. ವಾಹನದಲ್ಲಿ ಮೊದಲ ಟ್ರಿಪ್ ನಮ್ಮದು. ಕಮ್ಮಟದ 'ಮೇಷ್ಟ್ರು'ಗಳಲ್ಲಿ ಒಬ್ಬರಾಗಿದ್ದ, ನನಗೆ ಆಪ್ತರೂ ಆಗಿದ್ದ ರಾಮಚಂದ್ರಶರ್ಮರು ಜೊತೆಯಲ್ಲಿದ್ದರು.

Remembrance of Jnanapeetha awardee Shivaram Karanth

ನೇರ ನಮ್ಮನ್ನು ಕಾರಂತರ ಮುಂದೆ ನಿಲ್ಲಿಸಿ ಪರಿಚಯಿಸಿದರು. ಕಾರಂತರು ಕುಳಿತಿದ್ದಾಗ ಗುಂಪಿನಲ್ಲಿ ಮೊದಲಿಗನಾಗಿದ್ದ ನಾನು, ಅವರು ಎದ್ದು ನಿಲ್ಲುವಾಗ ಹಿಂದೆ ಸರಿದು ಕಡೆಯವನಾದೆ. ಅಳುಕಿನಲ್ಲೂ ನನ್ನಲ್ಲಿ ಸಂಭ್ರಮವಿತ್ತು. ನನ್ನ ಸರದಿ ಬಂತು. ಕೈ ಕುಲುಕಿದವರು ಹಾಗೆಯೇ ಕೈ ಹಿಡಿದಿದ್ದರು, ಮೃದುವಾದ ಕೈ ಸ್ಪರ್ಶದಲ್ಲಿ ಬೆಚ್ಚನೆಯ ಹಿತವಿತ್ತು. ಕಡೆಯವನಾಗಿ ನಿಂತುದು ಸಾರ್ಥಕವಾಯಿತು ಅನ್ನಿಸಿತು.

ಅನುವಾದಕನೋ ನೀನು ಅಂದರು. ಶರ್ಮರು, ಕನ್ನಡದಲ್ಲಿಯೂ ಕಥೆ, ಕವಿತೆ ಬರೀತಾನೆ ಅಂದರು. 'ನಾನು ಮರಾಠಿಯಿಂದ ಮಾಡಿದ ಹಾಗೋ?' ಅಂದರು. ಅರ್ಥವಾಗಲಿಲ್ಲ. ತಬ್ಬಿಬ್ಬಾದೆ. ಅದನ್ನು ಗ್ರಹಿಸಿದ ಆ ಹಿರಿಯ ಜೀವ, 'ನನಗೆ ಮರಾಠಿ ಬರುತ್ತಿರಲಿಲ್ಲ. ಆದರೂ ಒತ್ತಾಯಕ್ಕೆ ಒಪ್ಪಿದೆ. ಸಂಸ್ಕೃತ ಶಬ್ದಗಳನ್ನು ಅನುವಾದಿಸಬೇಕಿರಿರಲಿಲ್ಲ. ಮರಾಠಿಯಲ್ಲಿನ ಕ್ರಿಯಾಪದಗಳು, ಇತ್ಯಾದಿಗಳನ್ನು ನನ್ನ ಹೆಂಡತಿ ಲೀಲಾಳಿಂದ ತಿಳಿದುಕೊಂಡು ಅನುವಾದ ಮುಗಿಸಿದೆ. ನಿನ್ನ ಅನುವಾದ ಹೀಗಲ್ಲ ಅಲ್ಲವೋ' ಎಂದು ನಕ್ಕು, 'ಇದು ಸರಿಯಾದ ಅನುವಾದ ಅಲ್ಲ' ಎಂದರು.

ಇಷ್ಟು ಹೊತ್ತೂ ನನ್ನ ಕೈ ಹಿಡಿದೇ ಇದ್ದರು. ಕಾರಂತರ ಕೃತಿಗಳನ್ನು ನೋಡಿದಾಗ, ಓದಲು ಕೈಗೆತ್ತಿಕೊಂಡಾಗ ಆ ಸ್ಪರ್ಶದ ಬೆಚ್ಚಗಿನ ಪ್ರೀತಿ ಈಗಲೂ ಅನುಭವಕ್ಕೆ ಸಾಧ್ಯವಾಗುತ್ತದೆ. ವೇದಿಕೆಯ ತಮ್ಮ ಮಾತುಗಳಲ್ಲಿ ಕಾರಂತರು ಅನುವಾದ ಕುರಿತಾದ ಒಂದು ಒಳ್ಳೆಯ 'ಪಾಠ' ಮಾಡಿದರು. ಮುಂದೆ ನನ್ನ ಅನುವಾದ ಕಾರ್ಯಕ್ಕೆ ಅದು ಉಪಯುಕ್ತವಾಯಿತು.

ಬದುಕನ್ನು ಮುನ್ನಡೆಸುತ್ತಿರುವ ನಡೆದಾಡುವ ದೇವರ ಆಶ್ರಯದಲ್ಲಿ ಕಲಿತ ಪಾಠ

ನೆನಪು ಹುಡುಕಾಟದಲ್ಲಿ ನಿರತವಾಗಿದ್ದಾಗ ಕೋಲಾರದ ಗೆಳೆಯ ಕೆ.ರಾಜಕುಮಾರ ನೆನಪಿಗೆ ಬಂದ. ಈತನ ಬಚ್ಚಲು ಮನೆಯ 'ಸಾನು'ತನವನ್ನು ಹೇಳಲೇಬೇಕು. ಕೈ, ಕಾಲು- ಮುಖ ತೊಳೆಯಲು ಹೋದರೆ ಉಜ್ಜಿ ಉಜ್ಜಿ, ತಿಕ್ಕಿ- ತಿಕ್ಕಿ ತೊಳೆಯಲು ಅರ್ಧ ಗಂಟೆ ಸಾಲದು. ಇಂಥ, ಇವನಂಥ ಇನ್ನೊಬ್ಬ ಗೆಳೆಯ ಲಕ್ಷ್ಮೀಪತಿ ಕೋಲಾರ.

ಈ ಕಾರ್ಯದಲ್ಲಿ ಇವರಿಬ್ಬರ ನಡುವೆ ಸ್ಪರ್ಧೆ ಏರ್ಪಡಿಸಿದರೆ ಇಬ್ಬರಿಗೂ ಸಮನಾದ ಅಂಕಗಳು ಬಂದೇ ಬರಬೇಕು. ಅದಿರಲಿ. ರಾಜಕುಮಾರ ಪುಸ್ತಕವೊಂದರ ವಿಚಾರವಾಗಿ ಪ್ರಕಾಶಕ ಗೆಳೆಯರೊಬ್ಬರೊಂದಿಗೆ ಕಾರಂತರ ಮನೆಗೆ ಹೋಗಿದ್ದನಂತೆ. ಕಾರಂತರ ಉಪಚಾರದೊಂದಿಗೆ ಊಟವಾಯಿತು. ಕೈ ತೊಳೆಯಲು ನಮ್ಮೀ ರಾಜಕುಮಾರ ಬಚ್ಚಲಿಗೆ ಹೋದ. ತೊಳೆದು, ಬಾಯಿ ಮುಕ್ಕಳಿಸಿ, ಮತ್ತೆ ತೊಳೆದು ಬರುವ ವೇಳೆಗೆ ನಿಮಿಷಗಳೇ ಆಗಿದ್ದವು. ಹೊರಗೆ ಬಂದ. ಬಚ್ಚಲ ಬಾಗಿಲ್ಲಿ ಕಾರಂತರು ಟವೆಲ್ಲು ಹಿಡಿದು ಕಾದಿದ್ದಾರೆ!

ಬಹಳ ಹಿಂದೆ ಬೆಂಗಳೂರು ಆಕಾಶವಾಣಿ ಕೆಂದ್ರದವರು ಯುವಕರೊಂದಿಗೆ ಕಾರಂತರ ಮಾತುಕತೆ ನಡೆಸಿ ಪ್ರಸಾರ ಮಾಡಿದ್ದರು. ಯುವಕನೊಬ್ಬ ಕಾರಂತರನ್ನು 'ದೇವರಿದ್ದಾನೆಯೆ?' ಎಂದು ಪ್ರಶ್ನಿಸಿದ. ಕಾರಂತರು, 'ದೇವರಿದ್ದಾನೆ ಎಂದು ನೀನು ನಂಬುವಿಯೊ?' ಮರು ಪ್ರಶ್ನೆ ಮಾಡಿದರು. ಯುವಕ ನಂಬುವೆ ಅಂದ. 'ನಂಬಿಕೆ ಇದ್ದ ಮೇಲೆ ಪ್ರಶ್ನೆ ಎಂಥದು?' ಅಂದರು. ಯುವಕ ಗಪ್ ಚುಪ್.

ಮೂಕಜ್ಜಿಯ ರೂಪದಲ್ಲಿ ನನಗೆ ಕಾಣುವ ಕಾರಂತರು, ನಿರ್ಲಿಪ್ತ ಸಂನ್ಯಾಸಿ ಅನ್ನಿಸುವಾಗಲೇ ಜಗದ ಆಸಕ್ತ ಸಂಸಾರಿ ಆಗಿಯೂ ಕಂಡಿದ್ದಾರೆ. ಬದುಕು ಮತ್ತದರ ರೀತಿಯನ್ನು ಅದರೆಲ್ಲಾ ಆಳ ವಿಸ್ತಾರಗಳೊಂದಿಗೆ ತೆರೆದಿಟ್ಟ ಕಾರಂತರಂತಹ ಅನುಭವಿಗಳು ವಿರಳ. ಕನ್ನಡ ಇರುವವರೆಗೆ ಕಾರಂತರಿರುತ್ತಾರೆ ಎಂಬುದು ನಿಜವೇ.

ಕಾರಂತರ ಕೃತಿಗಳಿರುವವರೆಗೆ ಕನ್ನಡವೂ ಇರುತ್ತದೆ ಎಂಬುದೂ ಸತ್ಯವೇ. ಕನ್ನಡವನ್ನು 'ಬಯಲ' ಕನ್ನಡವಾಗಿಸಲು ನಾವು ಅವರ ಬರಹಗಳಿಂದ ಕಲಿಯಬೇಕು. ಮುದ್ದಣ, ಕಾರಂತ, ಬೇಂದ್ರೆ, ಕುವೆಂಪು, ಮಾಸ್ತಿ, ನರಸಿಂಹಸ್ವಾಮಿ ಇನ್ನೂ ಮುಂತಾದವರ 'ಭಾವಗನ್ನಡ'ಗಳನ್ನು ನಮ್ಮ ಅಧ್ಯಯನಕ್ಕೆ ತಂದುಕೊಂಡರೆ ನಮ್ಮ ಬರಹ, ಭಾಷೆಗಳಿಗೊಂದು 'ದಿಕ್ಕು' ಕಾಣುತ್ತದೆ.

ಹೇಗೆಂದರೆ ಇವರನ್ನು ಓದುವಾಗ ಇಡೀ ಕನ್ನಡ ಹಾಗೂ ಅದರ ದಾರಿ ದಿಕ್ಕುಗಳಲ್ಲಿ ನಮ್ಮ 'ತಿರುಗಾಟ' ಸಾಗಲೇಬೇಕು. ಉದಾಹರಣೆಗೆ: ಕುವೆಂಪು ಅವರ 'ಕುಮಾರವ್ಯಾಸನು ಹಾಡಿದನೆಂದರೆ ...' ಪದ್ಯವನ್ನು ಓದಿದಾಗ ಕುಮಾರವ್ಯಾಸ ಹೇಗೆ ಹಾಡಿದ್ದಾನೆಂದು ಅವನ 'ಗದುಗಿನ ಭಾರತ'ಕ್ಕೆ ಹೋಗುತ್ತೇವೆ. ಹೋಗಲೇ ಬೇಕು. ಹೀಗೆ ವಿವಿಧ ಕೃತಿಗಳ ಮೂಲಕ ಪಂಪನವರೆಗೆ ಹೋಗಬೇಕಾಗುತ್ತದೆ. ಹೋದರೇನೇ ನಮ್ಮ ಬೇಳೆ ಬೇಯುವುದು. ವಚನಕಾರರಾದಿಯಾಗಿ ಇವರೆಲ್ಲ ಕನ್ನಡವನ್ನು 'ಗುಡಿ'ಯಾಗಿಸದೆ ಬಯಲಾಗಿಸಿದವರು. ಆ ಬಯಲಿಗೆ ಬಂದರೇನೇ ಇಂಗ್ಲಿಷ್ ನ ಬಯಲನ್ನು ಒಡೆಯಲು ಸಾಧ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jnanapeetha awardee Shivaram Karanth great human being. One India Kannada columnist Sa Raghunatha remembering his interaction with Shivaram Karanth in his column hittu gojju.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ