ಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿ

Posted By: ಸ ರಘುನಾಥ
Subscribe to Oneindia Kannada

ಮೋಡ ನೆಲ ಮುಗಿಲ ಜೀವಫಲ. ಇದು ಮಾಗುವುದು ಆಕಾಶದಲ್ಲಿ. ಮಾಗಿ ಕಳಚುವುದು ಭೂಮಿಗೆ. ಕಳಚುವುದೆಂದರೆ ಹಣ್ಣಿನಂತೆ ಒಂದು ನಿರ್ದಿಷ್ಟ ಜಾಗದಲ್ಲಲ್ಲ. ಅದು ಹೇಗೆ ರಸವಾಗುತ್ತೊ ಹಾಗೆ, ಗಾಳಿ ಯಾವ ವಾಟ ಕೊಡುತ್ತೊ ಆ ವಾಟದಲ್ಲಿ, ಅಷ್ಟು ಅವಧಿಯಲ್ಲಿ ಇಳಿದಷ್ಟು ವಿಸ್ತಾರದಲ್ಲಿ ನೆಲವನ್ನು ರಸಮಯವಾಗಿಸುತ್ತದೆ.

ಇದು ಮಳೆ. ಮಳೆ ಹನಿಯನ್ನು ಜನಪದರು ಮಳೆ ಗುಬ್ಬಿ ಎಂದು ಕರೆದಿದ್ದಾರೆ. ಗಾಳಿಯಲ್ಲಿ ತೇಲಿ ಬರುವ ಮಳೆಹನಿ ನೆಲದ ಮೇಲೆ ಇಳಿಯುವಾಗಿನ ಆಟ ಗುಬ್ಬಿಯನ್ನು ಹೋಲುತ್ತದೆ. ನೆಲಕ್ಕಿಳಿಯುವ ಹನಿಹನಿ ಮಳೆಗೆ ಜನಪದರ ಈ ರೂಪಕ ಅನನ್ಯ ಸೊಗಸಿನದು.

ಶೃಂಗಾರ ಭಾವದ ಮಾಲೆ ಕಟ್ಟಿದ ಮಲ್ಲಿಗೆ, ಹಿತ ಚೆಲ್ಲುವ ಬೆಳದಿಂಗಳು

ಮೋಡ ಬೇಸಾಯಗಾರರ, ಬೇಸಾಯದ ಕೂಲಿಕಾರರ ಆಸೆಯ ಬೆಳಸು. ಮಳೆ ಅವರ ಬಯಕೆಯ ಫಸಲು. ಈ ವರ್ಷ ಮಳೆ ಹೇಗಾದೀತು ಎಂದು ಈ ಅನುಭವಿ ಹವಾಮಾನ ತಜ್ಞ ಜನ ಗ್ರೀಷ್ಮ ಮುಗಿವ ಮುನ್ನವೆ ಲೆಕ್ಕ ಹಾಕಬಲ್ಲರು.

ಬೇಸಗೆಯ ನಡು ಪ್ರಾಯ ಇಳಿಯುತ್ತಿರುವಾಗ ಬಾನಂಗಣದಲ್ಲಿ ಕವಿದುಕೊಳ್ಳುವ ಮೇಘ ದಟ್ಟಣೆಯನ್ನು ಹಳ್ಳಿಗರು ಮೋಘ ಗರ್ಭ ಕಟ್ಟುವುದು ಎಂದು ಹೇಳುತ್ತಾರೆ. ಇದರ ಕಪ್ಪಿನ ಸಾಂದ್ರತೆ ಮುಂದಿನ ಮಳೆಯ ಪ್ರಮಾಣದ ಅಂದಾಜಿಕೆ.

ಕರಿ ಮೋಡ ಮದಗಜದಂತೆ ಮಲೆಯಬೇಕು

ಕರಿ ಮೋಡ ಮದಗಜದಂತೆ ಮಲೆಯಬೇಕು

ಮೋಡ ಮಳೆದೇವಿಯ ಗುಡಿ. ಇವಳು ಗುಡಿಬಿಟ್ಟರೆ ಮಳೆ. ಇವಳು ಗುಡಿಬಿಡಲೆಂದೇ ಜನ ಪ್ರಾರ್ಥಿಸುತ್ತಾರೆ. ಬಿಳಿಮೋಡ ಕಂಡರೆ ಕರಿಯಾಗು ಎಂದು ಹೃದಯದಲ್ಲಿ ಕರೆ ಕೊಡುತ್ತಾರೆ. ಕರಿ ಮೋಡ ಮದಗಜದಂತೆ ಮಲೆಯಬೇಕು. ಹೀಗೆ ಮಲೆತದ್ದೆ ಮಳೆ ಮುಗಿಲು. ಮೋಡ ಮಳೆಯ ಬಿತ್ತಿದ ಮೇಲೆ ರೈತ ನೇಗಿಲು ಹಿಡಿಯುತ್ತಾನೆ. ನೇಗಿಲು ನೆಲವನ್ನು ಹೂ ಮಾಡುವುದರೊಂದಿಗೆ ಆರಂಬ ಆರಂಭವಾಗುತ್ತದೆ.

ಸ್ತ್ರೀ- ಪುರುಷರಿಬ್ಬರ ಬಯಕೆಗಳಿಗೆ ರಾಗ ತುಂಬುವವಳು ಮಲ್ಲಿಗಮ್ಮ

ಸ್ತ್ರೀ- ಪುರುಷರಿಬ್ಬರ ಬಯಕೆಗಳಿಗೆ ರಾಗ ತುಂಬುವವಳು ಮಲ್ಲಿಗಮ್ಮ

ಪರಿಮಳದ ರಾಣಿ ಮಲ್ಲಿಗಮ್ಮ ಬರುವುದು ಬೇಸಗೆಯಲ್ಲಿ. ಬೇಸಗೆಯಲ್ಲಿ ಮಳೆಯಾದರೆ ಇವಳ ವೈಭವ, ಸಮೃದ್ಧಿ ಇಮ್ಮಡಿ. ಸ್ತ್ರೀ- ಪುರುಷರಿಬ್ಬರ ಬಯಕೆಗಳಿಗೆ ರಾಗ ತುಂಬುವವಳು ಮಲ್ಲಿಗಮ್ಮ. ಇವಳ ಪರಿಮಳ ಮುಡಿದವರತ್ತ ಕಣ್ಮನಗಳನ್ನು ಸೆಳೆಯುತ್ತದೆ. ಮುಡಿದವರಲ್ಲಿ ಆತ್ಮೀಯತೆ ಹುಟ್ಟಿಸುವ ಹುವ್ವೆಂದರೆ ಮಲ್ಲಿಗೆಯೆ.

ಪರಿಮಳದಲ್ಲಿ ತೊಯ್ದು ತಣಿಯುವ ಮಳೆ

ಪರಿಮಳದಲ್ಲಿ ತೊಯ್ದು ತಣಿಯುವ ಮಳೆ

ಮಲ್ಲಿಗೆ ಹುವ್ವಿನ ಮೇಲೆ ಬಿದ್ದ ಮಳೆ ಹನಿಯೂ ಈ ಪರಿಮಳದಲ್ಲಿ ತೊಯ್ದು ತಣಿಯುತ್ತದೆ. ಮಲ್ಲಿಗೆ ಪ್ರಕೃತಿ ಕೊಟ್ಟ ಮಧುರ ಪರಿಮಳದ ವರ. ಈ ವರವನ್ನು ಪಡೆಯಲು ಬಡವಿ ಸಿರಿವಂತೆಯರೂ ಹಂಬಲಿಸುತ್ತಾರೆ. ಹಾಗೆಯೆ ಸಂಪ್ರದಾಯ ನಿಷ್ಠ ವಿಧವೆಯರೂ ಇದರ ಆಕರ್ಷಣೆಯನ್ನು ಕಳೆದುಕೊಂಡಿರುವುದಿಲ್ಲ.

ಮುಡಿದಂತೆ ಸಂಭ್ರಮಿಸಿ, ಥಟ್ಟನೆ ತೆಗೆದು ಬಿಡುತ್ತಾರೆ

ಮುಡಿದಂತೆ ಸಂಭ್ರಮಿಸಿ, ಥಟ್ಟನೆ ತೆಗೆದು ಬಿಡುತ್ತಾರೆ

ಇಂಥವರು ಮಾಲೆ, ದಂಡೆ ಕಟ್ಟುವಾಗ ಮುಡಿಯದಿದ್ದರೂ ಅತ್ತಿತ್ತ ನೋಡಿ ಗಮನಿಸುವವರು ಯಾರೂ ಇಲ್ಲವೆಂದು ಖಾತ್ರಿಯಾಗುತ್ತಲೆ ಅದನ್ನು ಮುಡಿಯವರೆಗೆ ಒಯ್ದು, ಮುಡಿದಂತೆ ಸಂಭ್ರಮಿಸಿ, ಥಟ್ಟನೆ ತೆಗೆದು ಬಿಡುತ್ತಾರೆ. ವಿಧವೆಯರಿಗೂ ಇಂಥ ಮರೆಯ ಸುಖ ಕೊಡುವ ಏಕೈಕ ಹುವ್ವೆಂದರೆ ಮಲ್ಲಿಗೆಯೇ.

ಹೊಂಬಿಸಿಲಿನ ಸಂಜೆ ರಾಗರತಿಯ ಭಾವಗೀತೆ

ಹೊಂಬಿಸಿಲಿನ ಸಂಜೆ ರಾಗರತಿಯ ಭಾವಗೀತೆ

ಭರಣಿ ಮಳೆಯಾದರೆ ಅರಳುವ ಮಣ್ಣಿನ ವಾಸನೆಯೊಂದಿಗೆ ಇಳಿಯುವ ತಂಪಿಗೆ ಮಲ್ಲಿಗೆ ಕಂಪು ಕೊಡುತ್ತದೆ. ಇಂಥ ಹೊಂಬಿಸಿಲಿನ ಸಂಜೆ ರಾಗರತಿಯ ಭಾವಗೀತೆ. ಈ ಭಾವಗೀತೆಯನ್ನು ಎದೆಯ ಕಿವಿಯಿಂದ ಆಲಿಸಬೇಕು. ಆಲಿಸುವ ಹೃದಯ ಮೋಡ, ಮಳೆ, ಮಲ್ಲಿಗೆ, ಮಣ್ಣುಗಳನ್ನು ಆರಾಧಿಸತೊಡಗುತ್ತದೆ. ಆಗ ಉರಿಬಿಸಿಲ ಬೇಸಗೆ ಹಿತವಾಗುವುದು.

ಬೇಸಗೆ ಮಳೆಯಿಂದ ಬಿಸಿಲ ಹೊಳೆ ತಂಪಾಗುತ್ತದೆ. ಈ ತಂಪಿನಲ್ಲಿ ಬೆಳೆ ಸಮೃದ್ಧಿಯ ಕನಸುಗಳು ಮೂಡುತ್ತವೆ. ಪ್ರೇಮಿಗಳ ಮುನಿಸನ್ನು ಮಲ್ಲಿಗೆ ಪರಿಮಳ ತೊಳೆಯುತ್ತದೆ.

ಸ್ವರ್ಗ ಬಾರೆಂದರೂ ಯಾರೂ ಹೋಗಲಾರರು

ಸ್ವರ್ಗ ಬಾರೆಂದರೂ ಯಾರೂ ಹೋಗಲಾರರು

ಸಂಜೆ ಅಂಗಳಕ್ಕೆ ನೀರು ಚುಮುಕಿಸಿ, ಅದರ ಹಸಿ ಆರುವ ಮೊದಲೆ ಚಾಪೆ ಹಾಸಿ ಮಲ್ಲಿಗೆ ಮೊಗ್ಗು ಸುರುವಿಕೊಂಡು ಮಾಲೆ ಕಟ್ಟುತ್ತ ಕೂರುವ ಹೆಂಗೆಳೆಯರು, ತಾವೂ ಕಟ್ಟುತ್ತೇವೆಂದು ಬರುವ ಮಕ್ಕಳಿಗೆ ಕಾಯಿ ಮೊಗ್ಗುಗಳನ್ನು ಆರಿಸಿಕೊಟ್ಟು, ತುಂಡು ದಾರವನ್ನು ಕೈಗಿತ್ತು ಅವು ಹಾಕುವ ತಪ್ಪು ಗಂಟುಗಳನ್ನು ನೋಡುತ್ತ, ಅವು ಮಾಡುವ ವ್ಯರ್ಥ ಸಾಹಸಗಳಿಗೆ ಮುದಗೊಳ್ಳುತ್ತ ಹಗಲಿನ ಶ್ರಮವನ್ನು ಮರೆಯುವ ಸಮಯದಲ್ಲಿ ಸ್ವರ್ಗ ಬಾರೆಂದರೂ ಯಾರೂ ಹೋಗಲಾರರು.

ದ್ವೇಷ, ಹಿಂಸೆಗಳ ಹುಟ್ಟನ್ನಡಗಿಸುತ್ತದೆ

ದ್ವೇಷ, ಹಿಂಸೆಗಳ ಹುಟ್ಟನ್ನಡಗಿಸುತ್ತದೆ

ಮೋಡ, ಮಳೆ, ನೆಲ, ಜನಜೀವನ ಒಂದೊಂದು ಒಂದೊಂದು ಲೋಕವಲ್ಲ. ಒಂದೇ ಬದುಕಿನ ಜಾಲ. ನಿಸರ್ಗ ಇವುಗಳನ್ನು ಸಿಂಗರಿಸಿರುತ್ತದೆ. ಇಲ್ಲಿ ಪ್ರೀತಿ ಘಮಘಮಾಡಿಸುತ್ತಿರುತ್ತದೆ. ಈ ಘಮಲನ್ನು ಅನುಭವಿಸಿ, ಸ್ಮೃತಿಯಲ್ಲಿ ಉಳಿಸಿಕೊಂಡರೆ ಅಕಾರಣ ಪ್ರೀತಿ ಆವಿರ್ಭವಿಸಿ ದ್ವೇಷ, ಹಿಂಸೆಗಳ ಹುಟ್ಟನ್ನಡಗಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How Jasmine and rain how close to one another, here is an article by Oneindia Kannada columnist Sa Raghunatha, he narrates the beauty of jasmine flower and rain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X