• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!

By * ರವಿ ಬೆಳಗೆರೆ
|
ತೊಡೆಯ ಮೇಲೆ ಜಾಂಬವತಿಯನ್ನು ಕೂಡಿಸಿಕೊಂಡೇ ರಾಜ್ಯವಾಳುತ್ತೇನೆಂದು ಹೊರಟಿರುವ ಯಡಿಯೂರಪ್ಪ, ತಮ್ಮ ಸಂಪುಟದಲ್ಲಿ ಅದಿನ್ನೆಂತಹ ಸಾಚಾಗಳನ್ನಿಟ್ಟುಕೊಳ್ಳಲು ಸಾಧ್ಯ? ಒಂದು ಕಡೆ ನಾಗರಿಕತೆಗೇ ಅವಮಾನವಾಗುವಂತಹ ರೇಣುಕಾಚಾರ್ಯ ಎಂಬ ಅಸಹ್ಯವನ್ನು ಎಲ್ಲ ನಾಚಿಕೆ ಬಿಟ್ಟು ಅಬಕಾರಿ ಸಚಿವರನ್ನಾಗಿ ಮಾಡಿದರು ಯಡಿಯೂರಪ್ಪ.

ಶುದ್ಧ ಲಂಪಟನಾಗಿ, ಕುಡುಕನಾಗಿ, ರೌಡಿಯಾಗಿ, ಬ್ಲಾಕ್ ಮೇಲರ್ ಆಗಿ ವಿಧಾನಸೌಧದಲ್ಲಿ ಕಾಣಿಸಿಕೊಂಡ ಹೊನ್ನಾಳಿಯ ರೇಣುಕಾಚಾರ್ಯ ತನ್ನ ಅಕ್ಕಪಕ್ಕದಲ್ಲಿ ಶಾಸಕರನ್ನಿಟ್ಟುಕೊಂಡು ಮಂತ್ರಿ ಪದವಿಗಾಗಿ ಬಡಿದಾಡಿದ್ದಿದ್ದರೆ ಕಡೇ ಪಕ್ಷ, ಆ ಕಾರಣಕ್ಕಾಗಿಯಾದರೂ ಅವನನ್ನು ಅಹುದೆನ್ನಬಹುದಿತ್ತು. ಆದರೆ ರೇಣುಕಾ ಮೊದಲು ರೆಡ್ಡಿಗಳ ಹಣ ತಿಂದ. ನಂತರ ಯಡಿಯೂರಪ್ಪನವರನ್ನು ಕೆಡವಿಯೇ ಬಿಡುತ್ತೇನೆಂದು, ದೇವೇಗೌಡರ ಮಗ ಕುಮಾರಸ್ವಾಮಿಯೊಂದಿಗೆ ಮಾತನಾಡಿ ಎಂಟು ಕೋಟಿ ರುಪಾಯಿಗೆ ಸುಪಾರಿ ತೆಗೆದುಕೊಂಡ. ಅದು ಗೊತ್ತಾಗುತ್ತಿದ್ದಂತೆಯೇ ಕಂಗಾಲೆದ್ದ ಯಡಿಯೂರಪ್ಪ ಸಂಧಾನಕ್ಕೆ ಕರೆದರೆ ತನ್ನ ಅಕ್ಕಪಕ್ಕದಲ್ಲಿ ಸುತ್ತೂರು ಸ್ವಾಮಿ ಮತ್ತು ಸಿದ್ದಗಂಗೆಯ ಸ್ವಾಮಿಗಳನ್ನು ಕೂಡಿಸಿಕೊಂಡು ಮಂತ್ರಿ ಪದವಿ ಕೇಳಿದ. ಕೊಡಬೇಕೆಂದರೆ, ವ್ಯಭಿಚಾರಿ ಖಾತೆ ಅಂತ ಒಂದಿರಲಿಲ್ಲವಾದ್ದರಿಂದ ಯಡಿಯೂರಪ್ಪನವರು ಇವನಿಗೆ ಅಬಕಾರಿ ಖಾತೆಯನ್ನು ಕೊಟ್ಟರು.

ಇಂಥ ರಾಜ್ಯದಲ್ಲಿ ಆಹಾರ ಮಂತ್ರಿಯಾಗಿದ್ದ ಹರತಾಳು ಹಾಲಪ್ಪ ಈಗ ಫಕ್ಕನೆ ಬೆತ್ತಲಾಗಿದ್ದಾನೆ. ಹಾಗಂತ, ಇದು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಸೆಕ್ಸ್ ಸ್ಕ್ಯಾಂಡಲ್ ಏನಲ್ಲ. ಹರತಾಳು ಹಾಲಪ್ಪನ ಲೀಲಾವಿನೋದಗಳು ಮೊದಲಿನಿಂದಲೂ ಜನಜನಿತವೇ. ಹೋದಲ್ಲೆಲ್ಲ ಸ್ನೇಹತರ, ಕೈಕೆಳಗಿನ ಅಧಿಕಾರಿಗಳ, ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಮಗಲುತ್ತಿದ್ದ ಹಾಲಪ್ಪ, ಆ ಕುಟುಂಬದಲ್ಲಿ ಸುಳಿಗಾಳಿಯೆಬ್ಬಿಸುತ್ತಿದ್ದ. ಅಕ್ಕಪಕ್ಕದ ಜನ ಆ ಕುಟುಂಬದವರ ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಲಾರಂಭಿಸುತ್ತಿದ್ದರು. ಇಂಥದೊಂದು ಅಪಖ್ಯಾತಿಗೆ ಒಳಗಾದ ರಾಜಕಾರಣಿಗಳಲ್ಲಿ ಹರತಾಳು ಹಾಲಪ್ಪ ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ಹಿಂದೆ ಹಿರೀಸಾವೆ ಅಣ್ಣಯ್ಯ, ಬಂಗಾರಪ್ಪ, ತಿಮ್ಮಪ್ಪ ಮುಂತಾದವರೆಲ್ಲ ಮನೆಯಲ್ಲಿ ಹಾಸುಂಡು ಬೀಸಿ ಬಗೆಯ ಮಹಾಮಹಿಮರೇ.

ರಾಜಕಾರಣಿಗಳ ಬುಡಕಟ್ಟು ಅಂದರೇನೇ ಅದು. ಕಂಡ ಕಂಡಲ್ಲಿ ಆಸ್ತಿ ಕೊಳ್ಳತೊಡಗುತ್ತ, ರಿಯಲ್ ಎಸ್ಟೇಟ್ ಮೇಲೆ ಅಧಿಪತ್ಯ ಸ್ಥಾಪಿಸಿಬಿಡುತ್ತಾರೆ. ಅದರ ನಂತರದ ಹಂತವೇ-ಹೆಣ್ಣು. ಕಣ್ಣಿಗೆ ಬಿದ್ದ, ಕೈಯಳೆತೆಯಲ್ಲಿನ ಪ್ರತಿ ಹೆಂಗಸರನ್ನೂ ತಮ್ಮ ಭೋಗಕ್ಕೆ ಬಳಸಿಕೊಳ್ಳಲಾರಂಭಿಸುತ್ತಾರೆ. ಪ್ರಮೋದ್ ಮಹಾಜನ್ ನಂತಹ ರಾಜಕೀಯ ನಾಯಕನ ಬಗ್ಗೆ ಓದುತ್ತ ಹೋದಂತೆಲ್ಲ ಈ ಮಾತು ಸತ್ಯವೆನಿಸುತ್ತದೆ. ಅಕ್ಷರಶಃ ಕೈಯಳತೆಯಲ್ಲಿನ ಕಣ್ಣಳತೆಯಲ್ಲಿನ ಪ್ರತಿ ಹೆಂಗಸರನ್ನೂ ತಮ್ಮ ವೈಯಕ್ತಿಕ ಆಸ್ತಿಯೆಂಬಂತೆ ಇವರು ಅನುಭವಿಸಿ ಬಿಡುತ್ತಾರೆ. ಇವತ್ತಿನ ಈ ಗಲೀಜು ಮಂತ್ರಿ ಹಾಲಪ್ಪ, ರೇಣುಕನ ಮಾತು ಒತ್ತಟ್ಟಿಗಿರಲಿ, ಅವತ್ತು ಸ್ವಾತಂತ್ರ್ಯದ ಮಹಾಸಂಗ್ರಾಮ ನಡೆಯುತ್ತಿದ್ದ ಕಾಲದಲ್ಲಿ ಅಂಥ ಜವಾಹರ್ ಲಾಲ್ ನೆಹರೂ ಅವರೇ ಮೌಂಟ್ ಬ್ಯಾಟನ್ ನ ಪತ್ನಿಯೊಂದಿಗೆ ಸರಸವಾಡುತ್ತಿದ್ದರು ಅಂದರೆ, ನಿಮಗೆ ರಾಜಕಾರಣಿಗಳ ಮನಸ್ಥಿತಿ, ಅಧಿಕಾರ ಉಂಟು ಮಾಡುವ ಡಿಸೈರ್ ಇತ್ಯಾದಿಗಳು ಹೇಗಿರುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.

ಮತ್ತೆ ಯಡಿಯೂರಪ್ಪನವರ ವಿಷಯಕ್ಕೇ ಬರೋಣ. ಎಲ್ಲೋ ಪುತ್ತೂರಿನ ಮೂಲೆಯಲ್ಲಿದ್ದ ಶೋಭಾ ಕರಂದ್ಲಾಜೆಯನ್ನು ತಂದು ಊರೂರು ತಿರುಗಿಸಿ ಮೆರೆಸಿದವರು ಯಡಿಯೂರಪ್ಪ. ಕಡೆಗೆ ಆಕೆಯನ್ನು ಮಂತ್ರಿಯನ್ನಾಗಿ ಮಾಡಿ ಮೈಸೂರಿನಂತಹ ಪ್ರೆಸ್ಟೀಜಿಯಸ್ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿಬಿಟ್ಟರು. ಸಂಪುಟ ಸಭೆಯಲ್ಲಿ 'ಕೂತ್ಕೋ ಶೋಭಾ, ಬಿಸ್ಕತ್ ತಿನ್ನು ಶೋಭಾ, ಸೆಖೆಯಾಗುತ್ತಾ ಶೋಭಾ' ಅಂತ ಎಷ್ಟು ಬಾಲಿಶವಾಗಿ ಆಡತೊಡಗಿದರೆಂದರೆ, ಅದನ್ನು ಕಂಡು ರೋಸಿ ಹೋದ ಭಿನ್ನಮತೀಯ ಸಚಿವರೊಬ್ಬರು ರಾಜನಾಥ್ ಸಿಂಗ್ ಮುಂದೆ ಕುಳಿತು, 'ಮುಖ್ಯಮಂತ್ರಿಗಳಿಗೆ ಆಕೆಯನ್ನು ಮದುವೆಯಾಗಲು ಹೇಳಿಬಿಡಿ. ಮುಖ್ಯಮಂತ್ರಿಯ ಪತ್ನಿ ಅಂತಲಾದರೂ ಗೌರವಿಸುತ್ತೇವೆ. ಇದೇನು ಅಸಹ್ಯ?' ಎಂದು ಗುಡುಗಿಬಿಟ್ಟಿದ್ದರು.

ಕಡೆಗೆ ಶೋಭಾಳನ್ನು ಇಳಿಸಲೆಂದೇ ಸುಮಾರು ಅರವತ್ತು ಶಾಸಕರು ಬಂಡಾಯವೆದ್ದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಯಡಿಯೂರಪ್ಪ ಶೋಭಾ ಕರಂದ್ಲಾಜೆಯನ್ನು ಮಂತ್ರಿಮಂಡಲದಿಂದ ಕೈಬಿಟ್ಟರು. ಅದಕ್ಕಾಗಿ ಹೈಸ್ಕೂಲು ಹುಡುಗನಂತೆ ಟೀವಿಗಳ ಮುಂದೆ ಗೋಳಾಡಿದರು. ಇಷ್ಟೆಲ್ಲ ಆಗಿ ರೆಡ್ಡಿಗಳು ಐವತ್ತೇಳು ಶಾಸಕರೊಂದಿಗೆ ಹೈದರಾಬಾದಿನಿಂದ ಹಿಂತಿರುಗಿ ಏರ್ಪೋರ್ಟಿನಿಂದ ಯಡಿಯೂರಪ್ಪನವರ ಮನೆಗೆ ಔಪಚಾರಿಕವಾಗಿ ಮಾತುಕತೆಗೆ ಅಂತ ಹೋದರಲ್ಲ, ಆಗ ಯಡಿಯೂರಪ್ಪ ಅಂದದ್ದೇನು ಗೊತ್ತೆ? 'ಆ ಹುಡುಗಿ ನಂಗೆ ಮಗಳ ಸಮಾನ ರೆಡ್ಡಿಯವರೆ!'

ಇದನ್ನು ನಿರ್ಲಜ್ಜೆ ಅನ್ನುತ್ತೀರಾ? ರಾಜಕಾರಣದ ವರಸೆ ಅನ್ನುತ್ತೀರಾ? ಅಧಿಕಾರದಲ್ಲಿದ್ದವನ ಮನಸ್ಥಿತಿ ಅನ್ನುತ್ತೀರಾ? ನೀವೇ ಹೇಳಿ. ಅಧಿಕಾರ ಸಿಕ್ಕಿದ ಕೂಡಲೆ ಮನುಷ್ಯನಿಗೆ ಏನು ಮಾಡಲಿ, ಏನು ಬಿಡಲಿ, ಎಲ್ಲಿ ಸುಖಪಡಲಿ ಎಂಬ ಹಂಬಲ ಆರಂಭವಾಗಿ ಬಿಡುತ್ತದೆ. ಇಲ್ಲದಿದ್ದರೆ, ಚಟ್ಟಹತ್ತಲು ಸಿದ್ಧರಾಗಿರುವ ಹಣ್ಣಣ್ಣು ಮುದುಕ - ಆಂಧ್ರ ರಾಜ್ಯವಾಲ ಎನ್ ಡಿ ತಿವಾರಿ ಹಾಗೆ ಮೂರು ಮೂರು ಜನ ಹೆಂಗಸರೊಂದಿಗೆ ಮಂಚಕ್ಕೆ ಬಿದ್ದು ನೀರು ನೀರಾಗುತ್ತಿದ್ದನೆ?

ಹರತಾಳು ಹಾಲಪ್ಪ ಮಾಡಿಕೊಂಡಿರುವುದೂ ಇದೇ ಫಜೀತಿಯನ್ನ. ಅವನದಿನ್ನೂ ಚಿಕ್ಕವಯಸ್ಸು. ಒಂದರ್ಥದಲ್ಲಿ ಗೆಳೆಯನೂ, ಸಂಬಂಧಿಕನೂ ಆದ ವ್ಯಕ್ತಿಯ ಮನೆಗೆ ಪದೇ ಪದೇ ಹೋಗಿದ್ದಾನೆ. ಆ ಗೆಳೆಯನ ಎರಡನೇ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಗೆಳೆಯನಿಲ್ಲದಾಗ ಮನೆಗೆ ಹೋಗುವುದು, ಅವನನ್ನು ಏನಾದರೂ ನೆಪ ಹೇಳಿ ಮನೆಯಿಂದ ಹೊರಕ್ಕೆ ಕಳಿಸುವುದು, ಹಾಗೆ ಆತ ಹೋದ ಮೇಲೆ ಆತನ ಪತ್ನಿಯೊಂದಿಗೆ ಇರುವುದು - ಇವೆಲ್ಲ ಕೆಲವು ತಿಂಗಳಿನಿಂದ ನಡೆದಿದೆ. ಆ ಗೆಳೆಯನಾದರೂ ಎಂಥ ಧೂರ್ತನೆಂದರೆ, ವಿಷಯ ಹೀಗೆ ಅಂತ ಗೊತ್ತಾದ ಮೇಲೆ ಅದನ್ನು ಪ್ರತಿಭಟಿಸಲು ಹೋಗದೆ- ಹರತಾಳು ಹಾಲಪ್ಪ ಮತ್ತು ತನ್ನ ಹೆಂಡತಿ ಒಟ್ಟಿಗಿರುವ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಅದನ್ನಿಟ್ಟುಕೊಂಡು ಹಾಲಪ್ಪನನ್ನು ದುಡ್ಡಿಗಾಗಿ ಬೆದರಿಸಿದ್ದಾನೆ. ರಾಜ್ಯ ಬಿಜೆಪಿಯ ಘಟಾನುಘಟಿಗಳಿಗೆಲ್ಲ ವಿಡಿಯೋ ತೋರಿಸಿ 'ನಂಗೇನಾದರೂ ಕೊಡಿಸಿ' ಅಂತ ಗೋಗರೆದಿದ್ದಾನೆ. ಯಾವುದೂ ಗಿಟ್ಟದೆ ಇದ್ದಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಆದರೆ ಹೊರಬಿದ್ದ ವಿಷಯ ಹಾಲಪ್ಪನ ಮಂತ್ರಿಗಿರಿಯನ್ನು ಸರಾಗವಾಗಿ ಆಪೋಶನ ತೆಗೆದುಕೊಂಡಿದೆ. ತಮ್ಮ ಖಾಸಾ ಶಿಷ್ಯನೇ ಆಗಿದ್ದರೂ ಯಡಿಯೂರಪ್ಪನವರು ಹಾಲಪ್ಪನನ್ನು ರಕ್ಷಿಸಿಕೊಳ್ಳಲಾಗದೆ ರಾಜೀನಾಮೆ ಕೊಡು ಮುಂದೆ ನೋಡೋಣ ಅಂದಿದ್ದಾರೆ.

ಈ ಮಧ್ಯೆ ಆದ ಮತ್ತೊಂದು ಬೆಳವಣಿಗೆಯೆಂದರೆ, ಮುಖ್ಯಮಂತ್ರಿಗಳ ಶೋಭಾ ಯಾತ್ರೆ! ಕಾಲೇಜು ಪ್ರೇಮಿಗಳಂತೆ ಕದ್ದು ಮಲೇಶಿಯಾಕ್ಕೆ ಹೋಗಿ ಬಂದದ್ದೇ ಅಲ್ಲದೆ ದಿನ ಬೆಳಗಾದರೆ ಸಾಕು ನಗರ ಸಂಚಾರ ಹೊರಡುವ ಯಡಿಯೂರಪ್ಪ ಯಥಾಪ್ರಕಾರ ಶೋಭಾ ಕರಂದ್ಲಾಜೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಹೊರಡುತ್ತಾರೆ. ಕೆಲವು ದಿನ ಅವರಿಬ್ಬರೂ ಒಟ್ಟೊಟ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗ ರೆಡ್ಡಿಗಳು ಗಣಿ ರಗಳೆಯಲ್ಲಿ ಸಿಲುಕಿಕೊಂಡರೋ, ಆ ವೃದ್ಧ ಪ್ರೇಮಿಗೆ ಧೈರ್ಯ ಚಿಗಿತುಬಿಟ್ಟಿದೆ. ನೀವು ನೋಡುತ್ತಿರಿ, ಇನ್ನು ಕೆಲವೇ ದಿನಗಳಲ್ಲಿ ಈಶ್ವರಪ್ಪನವರು ಖಾಲಿ ಬಿಟ್ಟು ಹೋದ ಖಾತೆಗೆ ಶೋಭಾಳನ್ನು ತಂದು ಕೂಡಿಸುತ್ತಾರೆ. ತಪ್ಪಿದರೆ, ಅರವಿಂದ ಲಿಂಬಾವಳಿಯನ್ನು ಹದ ಹಾಕಿ ಅವರ ಜಾಗಕ್ಕೆ ಶೋಭಾಳನ್ನು ಕೂಡಿಸಿಬಿಡುತ್ತಾರೆ. ಒಟ್ಟಿನಲ್ಲಿ ಸಖಿಯನ್ನು ಬಿಟ್ಟಿರಲಾರರು ಯಡಿಯೂರಪ್ಪ.

ಕರ್ನಾಟಕದ ದುರಂತವೆಂದರೆ, ಅಪಾರವಾದ ಪ್ರಗತಿಯನ್ನು ಕಾಣಬೇಕಾದ ಕಾಲದಲ್ಲಿ ನಾವು ಮುಖ್ಯಮಂತ್ರಿಗಳ, ಸಚಿವರ ವಿಡಿಯೋ ಕ್ಲಿಪ್ಪಿಂಗ್ ನೋಡುತ್ತ ಕೂಡಬೇಕಾಗಿ ಬಂದಿದೆ. ಇದಕ್ಕೆ ಧಿಕ್ಕಾರವಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more