• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪ್ತಮಿತ್ರ: ಅದೇ ಕಳ್ಳ ಇದೇ ಕುಳ್ಳ

By Staff
|
Ravi Belagere on Thatskannada.com ರವಿ ಬೆಳಗೆರೆ
ಕೊನೆಗೂ ಕುಳ್ಳ ಸೋಲಿನ ಸರಪಳಿಯಿಂದ ತಪ್ಪಿಸಿ ಕೊಂಡಿದ್ದಾನೆ. ಗೆಲ್ಲಿಸುವುದಕ್ಕೆ ಕೊನೆಗೂ ಹಳೇ ಕಳ್ಳನೇ ಬರಬೇಕಾಯಿತು ಅನ್ನುವುದು ವಿಪರ್ಯಾಸ. ಜೊತೆಗೆ ‘ರಾಜಾ ನರಸಿಂಹ’ ‘ಹೃದಯವಂತ’ ‘ಕದಂಬ’ ಮುಂತಾದ ಚಿತ್ರಗಳ ಸೋಲಿನ ಗಾಯ ನೆಕ್ಕಿಕೊಂಡು ಮಲಗಿದ್ದ ಕಳ್ಳನೂ ಕೊನೆಗೆ ಗೆದ್ದದ್ದು ಕುಳ್ಳನ ಸಹವಾಸದಿಂದಲೇ ಅನ್ನುವುದು ಮತ್ತೊಂದು ವಿಪರ್ಯಾಸ. ಅಲ್ಲಿಗೆ ಐತಿಹಾಸಿಕ ಜೋಡಿ ಇನ್ನೂ ಗ್ಲಾಮರ್‌ ಮತ್ತು ಖದರು ಉಳಿಸಿಕೊಂಡಿದೆ ಅನ್ನುವುದು ಸಾಬೀತಾಗಿದೆ.

ಹದಿನೆಂಟು ವರುಷಗಳ ನಂತರ ವಿಷ್ಣುವರ್ಧನ್‌ ಕಾಲ್‌ಶೀಟ್‌ ದ್ವಾರಕೀಶ್‌ಗೆ ಸಿಕ್ಕಿದ್ದೇ ಒಂದು ಅದೃಷ್ಟ. ಯಾಕೆಂದರೆ ವಿಷ್ಣು ಸೇವಾ ಕಾವಲು ಸಮಿತಿ, ಕಾವಲು ಅಷ್ಟು ಜೋರಾಗಿದೆ. ಅದರಲ್ಲಿ ವಿಷ್ಣು ವನ್ನು ಅತ್ತಿತ್ತ ನೋಡದಂತೆ ಕಟ್ಟಿಹಾಕಿರುವ ಸೂರಪ್ಪ ಬಾಬು, ವಿಜಯ ಕುಮಾರ್‌ ಮತ್ತು ಕೊಬ್ರಿ ಮಂಜ ಎಂಬ ತ್ರಿಮೂರ್ತಿಗಳಿದ್ದಾರೆ. ನಾವು ಮಾಡಿದ್ದೇ ಸರಿಯಾದ ಶ್ರೇಷ್ಠ ಚಿತ್ರ ಎಂದು ಈ ಮೂರೂ ಭಜಂತ್ರಿಗಳು ಗುಲ್ಲೆಬ್ಬಿಸುತ್ತಾರೆ. ಬೇರೆಯವರಿಗೆ ಕಾಲ್‌ಶೀಟ್‌ ಕೊಟ್ಟರೆ ಅದರ ಕತೆ ಚೆನ್ನಾಗಿಲ್ಲ ಅಂತ ದೂರುತ್ತಾರೆ. ಆ ಸಿನಿಮಾ ಹೇಗಾದರೂ ಸೋಲುವಂತೆ ಶತಪ್ರಯತ್ನ ಮಾಡುತ್ತಾರೆ. ವಿಷ್ಣುವನ್ನು ಹಾಳು ಮಾಡಿದ್ದೇ ಈ ತ್ರಿಮೂರ್ತಿಗಳು ಎಂದು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ.

Aapthamitraru ! Dwarakish and Vishnuvardhanಅಂಥದ್ದರಲ್ಲಿ ವಿಷ್ಣು ದ್ವಾರಕೀಶ್‌ಗೊಂದು ಕಾಲ್‌ಶೀಟ್‌ ಕೊಟ್ಟರು. ದಾನವೋ ಎಂಬಂತೆ ಕೊಟ್ಟರು. ದ್ವಾರಕೀಶ್‌ ಆಗಲೇ ಮೂಗಿನ ಮಟ್ಟ ಸಾಲ ಮಾಡಿ ಇನ್ನೇನು ಮುಳುಗುವುದರಲ್ಲಿದ್ದರು. ಆಪ್ತಮಿತ್ರವೂ ಕೈಯೆತ್ತಿದರೆ ಅಲ್ಲಿಗೆ ದ್ವಾರಕೀಶ್‌ ಕತೆ ಮುಗಿಯಿತು. ಒಂದು ಚಿತ್ರ ತಾನೇ ಮಾಡಿಕೊಳ್ಳಿಲಿ ಎಂದು ವಿಷ್ಣು ಸೇವಾ ಸಮಿತಿಯ ದಂಡ ಪಿಂಡಗಳು ಸುಮ್ಮನಾದವು.

ಆದರೆ ಅಪ್ತಮಿತ್ರವನ್ನು ಕೊಲ್ಲುವ ಸಂಚು ಆರಂಭದಿಂದಲೇ ಶುರುವಾಗಿತ್ತು. ಆ ಕತೆ ವಿಷ್ಣು ಇಮೇಜಿಗೆ ಗಿಟ್ಟೋಲ್ಲ ಕಣ್ರಯ್ಯಾ ಅನ್ನುವ ಮೂಹೂರ್ತ ದಿನದ ಪ್ರಚಾರದಿಂದ ಹಿಡಿದು ವಿಷ್ಣು ಸಾರ್‌ ಡಬ್ಬಿಂಗಿಗೆ ಹೋಗೋಲ್ಲ. ಯಾಕೆಂದರೆ ದ್ವಾರಕೀಶ್‌ ದುಡ್ಡು ಕೊಟ್ಟಿಲ್ಲ ಅನ್ನುವ ಅಂತಿಮ ಪ್ರಚಾರದ ತನಕ ವ್ಯವಸ್ಥಿತವಾಗಿಯೇ ಎಲ್ಲವೂ ನಡೆಯಿತು. ಆಪ್ತಮಿತ್ರದ ಹಾಡುಗಳು ಚೆನ್ನಾಗಿದ್ದರೂ ಅದು ಸುದ್ದಿಯಾಗಲಿಲ್ಲ. ಅಪ್ತಮಿತ್ರದ ಸ್ಟಿಲ್ಲುಗಳು ಪತ್ರಿಕೆಗಳನ್ನು ತಲುಪದಂತೆ ನೋಡಿಕೊಂಡರು. ಸಂತೋಷ್‌ ಚಿತ್ರಮಂದಿರದಲ್ಲಿ ದೊಡ್ಡ ಸಿನಿಮಾ ರಿಲೀಸ್‌ ಮಾಡಲು ಹೆದರುವ ತ್ರಿಮೂರ್ತಿಗಳು ಆಪ್ತಮಿತ್ರವನ್ನು ಅಲ್ಲೇ ರಿಲೀಸ್‌ ಮಾಡಬೇಕೆಂದು ಪಟ್ಟು ಹಿಡಿದರು.

ಈ ಎಲ್ಲಾ ರಗಳೆ ನಡುವೆಯೇ ಆಪ್ತಮಿತ್ರ ಗೆದ್ದು ಬಿಟ್ಟಿದೆ. ದ್ವಾರಕೀಶ್‌ ಏನಿಲ್ಲವೆಂದರೂ ಐವತ್ತು ಲಕ್ಷ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ಅವರ ಹಳೆಯ ಸಾಲ ತೀರದೇ ಇದ್ದರೂ ಸದ್ಯಕ್ಕಂತೂ ಉಸಿರಾಡುವುದಕ್ಕೆ ಅಡ್ಡಿಯಿಲ್ಲ.

ಅಷ್ಟಕ್ಕೂ ಆಪ್ತಮಿತ್ರನನ್ನು ಗೆಲ್ಲಿಸಿದ್ದು ಯಾರು? ನಿರ್ದೇಶಕ ಪಿ.ವಾಸು ಸರಿಯಿಲ್ಲ ಅನ್ನುವ ದೂರು ಆರಂಭದಿಂದಲೇ ಕೇಳಿಬರುತ್ತಿತ್ತು. ಆಪ್ತಮಿತ್ರದ ಮೂಲ ಚಿತ್ರವಾದ ಮಣಿಚಿತ್ರತ್ತಾಳ್‌ನಲ್ಲಿ ನಾಯಕನಾಗಿ ನಟಿಸಿದ್ದ ಮೋಹನ್‌ ಲಾಲ್‌, ಆ ಚಿತ್ರವನ್ನು ವಾಸು ರೀಮೇಕ್‌ ಮಾಡುತ್ತಾರೆ ಅನ್ನುವುದು ಗೊತ್ತಾದಾಗ ತಲೆ ಚಚ್ಚಿಕೊಂಡಿದ್ದರು. ಆದರೆ ಫಾಜಿಲ್‌ ಎಂಥ ಸೊಗಸಾದ ಚಿತ್ರಕಥೆ ಮಾಡಿದ್ದರು ಎಂದರೆ ವಾಸುವಿನಂಥ ವಾಸು ಕೂಡ ಅದನ್ನು ಕೆಡಿಸುವುದು ಸಾಧ್ಯವೇ ಇರಲಿಲ್ಲ. ಅದೂ ನಿಜವೇ. ಮಲಯಾಳಂನ ಮಣಿಚಿತ್ರತ್ತಾಳ್‌ ನೋಡಿದವರಿಗೆ ಆಪ್ತಮಿತ್ರ ಇಷ್ಟವಾಗಲಿಕ್ಕಿಲ್ಲ. ಮಣಿಚಿತ್ರತ್ತಾಳ್‌ ಎಂಬ ಹೆಸರಿನಲ್ಲೇ ಒಂದು ಮೋಹಕತೆಯಿದೆ. ಮಲಯಾಳಂನಲ್ಲಿ ಮಣಿಚಿತ್ರತ್ತಾಳ್‌ ಅಂದರೆ, ಗಂಟೆಯ ಸದ್ದು ಮಾಡುವ ಚಿತ್ರಚಿತ್ತಾರವಿರುವ ಬೀಗ ಎಂದರ್ಥ. ಅಲ್ಲಿ ಮೋಹನ್‌ಲಾಲ್‌ನಂಥ ನಟಯಿದ್ದಾಗಲೂ ಮುಖ್ಯವಾದದ್ದು ಒಂದು ಕೋಣೆಗೆ ಹಾಕಿದ್ದ ಚಿತ್ರಮಯ ಬೀಗ.

Soundarya in Aapthamitraಅದೇ ಇಲ್ಲಿಗೆ ಬರುವ ಹೊತ್ತಿಗೆ ಕಳ್ಳ ಕುಳ್ಳರ ಇಮೇಜಿಗೆ ಹೊಂದುವುದಕ್ಕೆ ಅಪ್ತಮಿತ್ರ ಅನ್ನಿಸಿಕೊಂಡಿತು. ದ್ವಾರಕೀಶ್‌ ಪಾತ್ರ ಅನಗತ್ಯವಾಗಿ ಬಂತು. ವಿಷ್ಣುವಿಗಾಗಿ ಒಂದು ಹೊಡೆದಾಟ ಕಾಲಿಟ್ಟಿತು. ಅಷ್ಟೆಲ್ಲ ಅಧ್ವಾನದ ನಡುವೆಯೂ ಪ್ರೇಕ್ಷಕರು ಆಪ್ತಮಿತ್ರನನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕೆ ಕಾರಣ ಬದಲಾದ ವಿಷ್ಣು ಇಮೇಜು. ಯಜಮಾನದ ನಂತರ ದೊಣ್ಣೆ ನಾಯಕನಾಗಿ ಹುರಿಮೀಸೆಯ ಗೌಡನಾಗಿ ಕಾಣಿಸಿಕೊಂಡಿದ್ದ ವಿಷ್ಣುವನ್ನು ನೋಡಿನೋಡಿ ಪ್ರೇಕ್ಷಕರು ಎಷ್ಟು ಬೇಸರಗೊಂಡಿದ್ದರೆಂದರೆ ಕದಂಬದಂಥ ವಿಭಿನ್ನ ಶೈಲಿಯ ಚಿತ್ರವನ್ನು ಅವರು ನಿರಾಕರಿಸಿದ್ದರು. ಬಹುಶಃ ಅದೇ ಮಾದರಿಯ ಮತ್ತೊಂದು ಚಿತ್ರ ಬಂದಿದ್ದರೆ ವಿಷ್ಣು ಆಭಿಮಾನಿಗಳು ಥಿಯೇಟರ್‌ ಕಡೆಗೆ ಸುಳಿಯುತ್ತಿರಲಿಲ್ಲ. ಆದರೆ ಆಪ್ತಮಿತ್ರದಲ್ಲಿ ವಿಷ್ಣು ಪ್ಲೆಸೆಂಟ್‌ ಸರ್‌ಪ್ರೆೃಸ್‌ ಕೊಟ್ಟರು. ಹಳೆಯ ಕಿಲಾಡಿ ಕಿಟ್ಟು , ಕಿಟ್ಟು ಪುಟ್ಟು , ಇಂದಿನ ರಾಮಾಯಣ ಶೈಲಿಯ ಪಾತ್ರವೊಂದರಲ್ಲಿ ಮಿಂಚಿಬಿಟ್ಟರು. ಆ ಪಾತ್ರ ಅವರಿಗೆ ಎಷ್ಟರಮಟ್ಟಿಗೆ ಸೂಟ್‌ ಆಗಿತ್ತು ಅಂದರೆ ಪಕ್ಕದಲ್ಲಿ ನಿಂತಿದ್ದ ರಮೇಶ್‌ ಕೂಡ ಮರೆಯಾಗಿಬಿಟ್ಟರು. ವಿಷ್ಣು ಅಭಿನಯ ಮತ್ತು ಲವಲವಿಕೆಗೆ ನಿಜಕ್ಕೂ ಸವಾಲಾಗಿ ನಿಂತವರು ಸೌಂದರ್ಯ.

ಸೌಂದರ್ಯ ಮತ್ತು ವಿಷ್ಣು ಕಾಂಬಿನೇಷನ್ನಿನ ಮೊದಲ ಚಿತ್ರ ಇದು. ಹಾಗೆ ನೋಡಿದರೆ ಸೌಂದರ್ಯ ಅಭಿನಯದ ಕಡೆಯಚಿತ್ರವೂ ಹೌದು. ಇನ್ನೂ ಬಿಡುಗಡೆಯಾಗಬೇಕಾಗಿರುವ ನವಶಕ್ತಿ ವೈಭವ ಎಂಬ ಚಿತ್ರ ನಾವು ಲೆಕ್ಕಕ್ಕೆ ತೆಗೆದು ಕೊಳ್ಳಬೇಕಾಗಿಲ್ಲ. ಆದರೆ ದ್ವಾರಕೀಶ್‌ ಅಷ್ಟರಮಟ್ಟಿಗೆ ಸಂಭಾವಿತರು. ಸೌಂದರ್ಯ ಸಾವನ್ನು ಅವರು ಕ್ಯಾಶ್‌ ಮಾಡುವುದಕ್ಕೆ ಹೋಗಲಿಲ್ಲ.

ಕತೆಯೇನು?

ಚಿತ್ರದ ಹೆಸರಿಗೂ ಕತೆಗೂ ಸಂಬಂಧವೇ ಇಲ್ಲ. ಓಬೀರಾಯನ ಕಾಲದ ಅರಮನೆಯಾಂದನ್ನು ರಮೇಶ್‌ ಖರೀದಿಸುತ್ತಾರೆ. ಹಾಗೆ ಖರೀದಿಸಿದ ಮನೆಗೆ ಮನೋ ವಿಜ್ಞಾನಿ ವಿಷ್ಣು ಕೂಡ ಬರುತ್ತಾರೆ. ಆ ಮನೆಯಲ್ಲಿರುವ ಕೋಣೆಯಾಂದರಲ್ಲಿ ನಾಗವಲ್ಲಿಯ ದೆವ್ವವನ್ನು ದಿಗ್ಬಂಧನ ಮಾಡಲಾಗಿದೆ. ಆ ಕೋಣೆಯ ಬಾಗಿಲನ್ನು ಸೌಂದರ್ಯ ತೆರೆಯುತ್ತಾರೆ. ದೆವ್ವ ಅವರನ್ನು ಮೆಟ್ಟಿಕೊಳ್ಳುತ್ತದೆ.

ಇದನ್ನು ಸಾಯಿಪ್ರಕಾಶ್‌ ಥರಾ ಮೂಢ ನಂಬಿಕೆಯ ಚಿತ್ರವನ್ನಾಗಿ ತಯಾರಿಸಿಲ್ಲ ಅನ್ನುವುದೇ ವಿಶೇಷ. ಮಲಯಾಳಂ ನಿರ್ದೇಶಕರು ಆ ವಿಚಾರದಲ್ಲಿ ಜಾಣರು. ದೆವ್ವ ಮೆಟ್ಟಿಕೊಳ್ಳುವುದನ್ನೇ ಅವರು ಡ್ಯುಯಲ್‌ ಪರ್ಸನಾಲಿಟಿ ಎಂದು ವಿವರಿಸುತ್ತಾರೆ. ಪ್ಯಾರಾ ಸೈಕಾಲಜಿಯ ಥಿಯರಿಯನ್ನು ತರುತ್ತಾರೆ. ಒಂದು ಕಡೆ ಶಾಸ್ತ್ರೀಯವಾದಿಯಾಗಿ ಭೂತೋಚ್ಛಾಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ವೈಜ್ಞಾನಿಕವಾಗಿ ಚಿಕಿತ್ಸೆಯೂ ನಡೆಯುತ್ತಿರುತ್ತದೆ. ಹಾಗೆ ನೋಡಿದರೆ ವಿಷ್ಣು ಒಪ್ಪಿಕೊಂಡು ನಟಿಸುವಂಥ ಚಿತ್ರ ಇದಲ್ಲವೇ ಅಲ್ಲ. ಶೂಟಿಂಗೂ ಶುರುವಾದಂದಿನಿಂದ ಇಂದಿನ ತನಕ ಈ ಚಿತ್ರದ ಬಗ್ಗೆ ವಿಷ್ಣು ಚಕಾರ ಎತ್ತಿಲ್ಲ. ಪತ್ರಿಕಾಗೋಷ್ಠಿಗೆ ಕರೆಸಿದಾಗೆಲ್ಲ ವಿಷ್ಣು ಹೊಗಳಿದ್ದು ಸೌಂದರ್ಯ ನಟನೆಯನ್ನು ಮಾತ್ರ!

ಅಂಥದ್ದೊಂದು ಚಿತ್ರ ಗೆದ್ದು ಬಿಟ್ಟಿದೆ. ಕಳ್ಳಕುಳ್ಳರ ಜೋಡಿ ಮತ್ತೆ ಚಾಲ್ತಿಗೆ ಬಂದಿದೆ. ಹದಿನೆಂಟು ವರುಷಗಳ ಅಂತರದ ನಂತರ ಒಂದಾದ ಜೋಡಿ ಜೊತೆಗೇ ಮುಂದುವರಿಯುತ್ತದೆಯಾ? ಚಿತ್ರದಲ್ಲೇ ಉತ್ತರ ಇದೆ. ದ್ವಾರಕೀಶ್‌ ಒಂದು ದೃಶ್ಯದಲ್ಲಿ ಕೇಳುತ್ತಾರೆ- ನೀನು ಇನ್ನು ಮೇಲೆ ನನ್ನ ಜೊತೆಗೆ ಇರಬೇಕು.

ವಿಷ್ಣು ಹೇಳುತ್ತಾರೆ- ಅದನ್ನು ಕಾಲವೇ ನಿರ್ಧರಿಸುತ್ತದೆ.

*

ವಿಷ್ಣುವರ್ಧನ್‌ ಯಾರ ಸ್ನೇಹ ಉಳಿಸಿಕೊಂಡಿದ್ದಾರೆ ಹೇಳಿ? ಹಾಗಂತ ಕೇಳುತ್ತದೆ ಚಿತ್ರರಂಗ. ಹಾಗೆ ನೋಡಿದರೆ, ಸ್ನೇಹದ ಬಗೆಗೆ ಉದ್ದುದ್ದ ಮಾತಾಡುವ ವಿಷ್ಣುವಿಗೆ ಚಿತ್ರರಂಗದಲ್ಲಿ ಸ್ನೇಹಿತರೇ ಇಲ್ಲ. ಆಪ್ತಮಿತ್ರ ಮುಹೂರ್ತದ ದಿನ ವಿಷ್ಣುವೇ ಹಾಗೆ ಹೇಳಿಕೊಂಡಿದ್ದರು. ಆಪ್ತಮಿತ್ರ ಆಂಬರೀಷ್‌ ಬಿಟ್ಟರೆ ಬೇರೆ ಯಾರೂ ವಿಷ್ಣುವನ್ನು ಫ್ರೆಂಡ್‌ ಅನ್ನುವುದಿಲ್ಲ. ಅನಂತ್‌ ಮುಂತಾದವರಿಗೆ ವಿಷ್ಣು ಬದ್ದ ವಿರೋಧಿ. ರಮೇಶ್‌ ಥರದವರಿಗೆ ವಿಷ್ಣು ಸಾರ್‌. ಉಳಿದವರಿಗೆ ದೇವರು.

ಅದಕ್ಕೆ ಕಾರಣವೂ ಉಂಟು. ವಿಷ್ಣು ಯಾವತ್ತೂ ಮಿಕ್ಕ ನಟರ ಹಾಗೆ ಗುಂಪಿನಲ್ಲಿ ಕುಳಿತು ಕುಡಿದವರಲ್ಲ. ಉಪೇಂದ್ರ, ಅಂಬರೀಷ್‌, ರವಿಚಂದ್ರನ್‌ ಎಲ್ಲಾ ಸೇರಿ ಇಸ್ಪೀಟು ಆಡುತ್ತಾರೆ. ಅಂಥ ಚಟಗಳು ವಿಷ್ಣುಗಿಲ್ಲ. ಅಶೋಕದಲ್ಲೋ ಮತ್ತೊಂದರಲ್ಲೋ ಟೆನ್ನಿಸ್‌ ಆಡಲು ಹೋದರೆ ಅಲ್ಲಿ ಸಿಗುವುದು ಅಭಿಮಾನಿಗಳೇ. ಸ್ನೇಹಲೋಕ ತಂಡದಲ್ಲಿ ಎಲ್ಲರೂ ಸ್ನೇಹಿತರೇ ಎಂದರೂ ಅವರವರ ಭಾವವೇ ಬೇರೆ, ಭಕುತಿಯೇ ಬೇರೆ.

ಹಾಗೆ ನೋಡಿದರೆ ಚಿತ್ರರಂಗದಲ್ಲಿ ವಿಷ್ಣು ಕೂಡ ಸ್ನೇಹದ ಋಣ ಸಲ್ಲಿಸುವ ಕೆಲಸವನ್ನು ಮಾಡಲೇಯಿಲ್ಲ. ಅವರು ಪುಟ್ಟಣ್ಣ ಕಣಗಾಲ್‌ಗೇ ಮತ್ತೊಮ್ಮೆ ಕಾಲ್‌ಶೀಟ್‌ ಕೊಡಲಿಲ್ಲ ಅನ್ನುವವರಿದ್ದಾರೆ. ವಿಷ್ಣು ಬೀಳುತ್ತಿರುವ ಕಾಲಕ್ಕೆ ಹೊಸ ಹೊಸ ಇಮೇಜುಗಳನ್ನು ಕೊಟ್ಟ ನಿರ್ದೇಶಕರನ್ನು ಅವರು ನೆನಪಲ್ಲಿ ಇಟ್ಟುಕೊಂಡವರಲ್ಲ. ಅಂಥ ಅನೇಕರ ಪಟ್ಟಿಯಿದೆ. ರಾಜೇಂದ್ರ ಸಿಂಗ್‌ ಬಾಬು ಬಂಧನದ ಮೂಲಕ ಹೊಸ ಇಮೇಜು ಕೊಟ್ಟು, ಮುತ್ತಿನಹಾರದಂಥ ಸಿನಿಮಾ ಮಾಡಿ ಕೋಟ್ಯಾಂತರ ಕಳಕೊಂಡವರು. ಅವರ ಜೊತೆ ವಿಷ್ಣು ಜಗಳ ಆಡಿದ್ದಾರೆ. ಭಾರ್ಗವನಂಥ ಹಿರಿಯ ನಿರ್ದೇಶಕರು ವಿಷ್ಣುವಿನ ಅತ್ಯುತ್ತಮ ಚಿತ್ರಗಳನ್ನು ಕೊಟ್ಟವರು. ಅವರು ನಲುವತ್ತೊಂಬತ್ತು ಚಿತ್ರ ಮುಗಿಸಿ ಐವತ್ತು ವಿಷ್ಣುವಿಗೆ ಅಂತ ಕಾಯುತ್ತಿದ್ದಾರೆ. ವಿಷ್ಣು ಆಸಕ್ತಿ ತೋರಿಸುತ್ತಿಲ್ಲ. ಸಾಹಸಸಿಂಹದಂಥ ಚಿತ್ರಗಳನ್ನು ಕೊಟ್ಟ ಜೋಸೈಮನ್‌ ಮೊನ್ನೆ ವಿಷ್ಣು ಕನ್ನಡ ದ್ರೋಹಿ ಅಂತ ಕರೆಯುವ ಮಟ್ಟಕ್ಕೆ ಹೋಗಿದ್ದರು. ದಿನೇಶ್‌ಬಾಬು ಸುಪ್ರಭಾತ, ಲಾಲಿ ಮುಂತಾದ ಚಿತ್ರಗಳ ಮೂಲಕ ವಿಷ್ಣುವಿಗೆ ಮರುಜನ್ಮ ಕೊಟ್ಟರೆ, ಮೊನ್ನೆ ಮೊನ್ನೆ ರಗಳೆಯಾದಾಗ ವಿಷ್ಣು ಅವರ ಪರವಾಗಿ ನಿಲ್ಲಲಿಲ್ಲ.

*

ಸಿಂಗಾಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಇಂದಿನ ರಾಮಾಯಣ-ಇಂಥ ಹಿಟ್‌ ಚಿತ್ರಗಳನ್ನು ಕೊಟ್ಟ ಜೋಡಿ ಇದ್ದಕ್ಕಿದ್ದಂತೆ ಮುರಿದು ಬಿದ್ದದ್ದು ಯಾಕೆ?

ಆದರ ಬಗ್ಗೆ ಕುತೂಹಲಕಾರಿ ಕತೆಗಳಿವೆ. ಬಹುಶಃ ಅವರಿಬ್ಬರ ಕೊನೆಯ ಚಿತ್ರ ‘ನೀ ತಂದ ಕಾಣಿಕೆ’ಯಿರಬೇಕು. ಹಿಂದಿಯ ಶರಾಬಿ ಚಿತ್ರದ ರೀಮೇಕ್‌ ಅದು. ಅದರಲ್ಲಿ ಗಿರೀಶ್‌ ಕಾರ್ನಾಡ್‌ ಎಂಬ ಹಾಲಿವುಡ್‌ ನಟರೂಯಿದ್ದರು. ಹಿಂದಿ ಚಿತ್ರದ ಹಾಡುಗಳನ್ನು ಯಥಾವತ್ತಾಗಿ ನಕಲು ಮಾಡಲಾಗಿತ್ತು. ನೀ ಬರೆದ ಕಾದಂಬರಿ ಎಂಬ ಚಿತ್ರದಿಂದ ಸಾಕಷ್ಟು ದುಡ್ಡು ಮಾಡಿದ ದ್ವಾರಕೀಶ್‌ ನೀ ತಂದ ಕಾಣಿಕೆ ಚಿತ್ರ ಸೋತಾಗ, ವಿಷ್ಣು ಬಗ್ಗೆ ಹಗುರವಾಗಿ ಮಾತನಾಡಿದ್ದರಂತೆ. ಅದು ನೆಪ ಮಾತ್ರ. ಅದಕ್ಕೂ ಮೊದಲೇ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ದ್ವಾರಕೀಶ್‌ ನಂಬಿಕೆಗೆ ಅರ್ಹನಲ್ಲ ಅಂತ ವಿಷ್ಣು ಎಲ್ಲೋ ಹೇಳಿದ್ದು ಸುದ್ದಿಯಾಗಿತ್ತು. ವಿಷ್ಣು ಚಿತ್ರ ಗೆದ್ದಿದ್ದು ನನ್ನಿಂದಲೇ ಅಂತ ದ್ವಾರಕೀಶ್‌ ಹೇಳಿಕೊಂಡು ತಿರುಗಾಡುತ್ತಿದ್ದರು. ಈ ಸಣ್ಣ ಜಗಳಗಳ ಜೊತೆಗೆ ವಿಷ್ಣುವರ್ಧನ್‌ ತುಂಬ ಬೇಜಾರು ಮಾಡಿಕೊಂಡಂಥ ಪ್ರಸಂಗಗಳೂ ನಡೆದವು.

ಹಿಂದಿ ಚಿತ್ರದಲ್ಲಿ ನಟಿಸಬೇಕು ಅನ್ನುವುದು ವಿಷ್ಣು ಆಸೆ. ಆ ಕಾಲಕ್ಕೆ ದ್ವಾರಕೀಶ್‌ ಹಿಂದಿ ಚಿತ್ರಗಳನ್ನು ನಿರ್ಮಾಣ ಮಾಡುವುದಕ್ಕೆ ಕೈಹಾಕಿದ್ದರು. ಅದಕ್ಕೂ ತಾನೇ ನಾಯಕ ಆಗಬೇಕು ಎಂಬ ಆಸೆ ವಿಷ್ಣುಗಿತ್ತು. ಆದರೆ ದ್ವಾರಕೀಶ್‌ ಪಕ್ಕಾ ವ್ಯಾಪಾರಿ. ಅವರು ಹಿಂದಿ ಚಿತ್ರದಲ್ಲಿ ವಿಷ್ಣುವಿಗೆ ಅವಕಾಶ ಕೊಡಲೇಯಿಲ್ಲ. ‘ಇವನ ಮುಖ ಹಿಂದೀಲಿ ಯಾರು ನೋಡ್ತಾರೆ’ ಅಂತ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು.

ಅಲ್ಲಿಗೆ ಯುದ್ಧ ಘೋಷಣೆಯಾಗಿಬಿಟ್ಟಿತು. ಇದು ಯಾವ ಮಟ್ಟಕ್ಕೆ ಬೆಳೆಯಿದೆಂದರೆ ದ್ವಾರಕೀಶ್‌ ಆವತ್ತೇ ಕನ್ನಡಪ್ರಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನು ಘೋಷಿಸಿದ್ದರು. ಹೀರೋನ ಮುಖದ ಪೆನ್ಸಿಲ್‌ ಸ್ಕೆಚ್‌ ಮಾಡಿ ಹಾಕಿದ್ದರು. ಅದು ವಿಷ್ಣುವರ್ಧನ್‌ರನ್ನು ಹೋಲುತ್ತಿತ್ತು. ಆ ಚಿತ್ರಕ್ಕೆ ಅವರು ಕೊಟ್ಟ ಹೆಸರು-ದ್ರೋಹಿ! ಆಮೇಲೆ ಸಂಬಂಧ ರಿಪೇರಿಯಾಗದಷ್ಟು ಕಿತ್ತು ಹೋಯಿತು.

*

ವಿಷ್ಣು ಪಾಳಯದಿಂದ ದೂರಾದರು ದ್ವಾರಕೀಶ್‌ ಸುಮ್ಮನಿರಲಿಲ್ಲ. ಅವರಿಗಾಗಲೇ ಕಿಂಗ್‌ ಮೇಕರ್‌ ನಾನೆಂಬ ಭ್ರಮೆ ನೆತ್ತಿಗೆ ಹತ್ತಿತ್ತು. ಎಂಥವನನ್ನು ಬೇಕಾದರೂ ಹೀರೋ ಮಾಡಬಲ್ಲೇ ಅನ್ನುವುದು ಗೊತ್ತಾಗಿಬಿಟ್ಟಿತ್ತು. ಈ ರಾಮಾಚಾರಿ ಯಾವ ತೊಪ್ಪಲು ಎಂಬ ಉಡಾಫೆ ಯಲ್ಲೇ ದ್ವಾರಕೀಶ್‌ ಹರ್ಷವರ್ಧನ ಎಂಬ ಹೀರೋನನ್ನು ಹುಟ್ಟು ಹಾಕಿದವರು. ಮತ್ತೆ ಕಳ್ಳ ಕುಳ್ಳ ಶಕೆ ಆರಂಭಿಸುತ್ತೇನೆಂದು ಶಶಿಕುಮಾರ್‌ನನ್ನು ಹಾಕಿಕೊಂಡು ‘ಹೊಸ ಕಳ್ಳ ಹಳೇ ಕುಳ್ಳ‘ ಎಂಬ ಚಿತ್ರ ತೆಗೆದರು. ಹೊಸ ಕಳ್ಳ ಅನ್ನುವ ಬಿರುದು ರಾಜಕೀಯದಲ್ಲಿ ಸಾರ್ಥಕತೆ ಕಂಡಿತು. ಶ್ರೀಧರ್‌ ಹಾಕಿದ ‘ಬ್ರಹ್ಮ ಗಂಟು’ ನಿಲ್ಲಲಿಲ್ಲ. ಪ್ರಭಾಕರ್‌ ಜೊತೆಗಿನ ‘ಒಂದೇ ಗೂಡಿನ ಹಕ್ಕಿಗಳು’ ಹಾರಿಹೋದವು.

ಕಡೆಗೂ ಹೊಸ ಹೀರೋ ಸೃಷ್ಟಿಸುವ ಪ್ರಯತ್ನವನ್ನು ಕುಳ್ಳ ಕೈಬಿಡಲಿಲ್ಲ. ಆ ಪ್ರಯತ್ನವಾಗಿಯೇ ‘ಡಾನ್ಸ್‌ ರಾಜ ಡಾನ್ಸ್‌’ ಚಿತ್ರದ ಮೂಲಕ ವಿನೋದ್‌ರಾಜ್‌ರನ್ನು ಪರಿಚಯಿಸಿದರು. ಆಮೇಲೆ ಅಂಬರೀಷ್‌ ಬೆನ್ನಿಗೆ ಬಿದ್ದ ಕುಳ್ಳ ‘ಮಿಸ್ಟರ್‌ ಇಂಡಿಯಾ’ ವನ್ನು ರಿಮೇಕು ಮಾಡಿ ‘ಜೈ ಕರ್ನಾಟಕ ’ ಅಂತ ತೆಗೆದ ಚಿತ್ರತೋಪಾಯಿತು. ವಿನೋದ್‌ ರಾಜ್‌ರನ್ನು ಹಾಕಿಕೊಂಡು ತೆಗೆದ ಮತ್ತೊಂದು ಚಿತ್ರವೂ ನಿಲ್ಲಲಿಲ್ಲ.

ಶ್ರುತಿಚಿತ್ರದ ಮೂಲಕ ಸುನೀಲ್‌ನನ್ನು ತರಲು ಯತ್ನಿಸಿದರೆ, ಚಿತ್ರಗೆದ್ದಿತು ಸುನಿಲ್‌ ಗೆಲ್ಲಲಿಲ್ಲ. ಮಕ್ಕಳನ್ನೇ ಹಾಕಿಕೊಂಡು ದ್ವಾರಕೀಶ್‌ ಮನಸ್ಸಿಟ್ಟು ಮಾಡಿದ ಕಡೆಯ ಸಾಹಸ -ಹೃದಯ ಕಳ್ಳರು. ಅಲ್ಲಿಂದಾಚೆ ನಡೆದದ್ದೆಲ್ಲ ಅವನತಿಯ ಹಾದಿಯೇ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more