ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು

By ಪ್ರಸಾದ ನಾಯಿಕ
|
Google Oneindia Kannada News

ಗರ್ಭದಲ್ಲಿದ್ದ ಭ್ರೂಣ ನಾಲ್ಕು ತಿಂಗಳು ಮುಗಿಯುತ್ತಿದ್ದಂತೆ ಪುಟ್ಟ ಕಾಲಗಳಿಂದ ಒದೆಯಲು ಶುರು ಮಾಡಿದ ಕೂಡಲೆ 'ಅಮ್ಮ'ನ ಚಿತ್ರಣವೇ ಬದಲಾಗುತ್ತದೆ. ಕನಸುಗಳು ಕುಡಿಯೊಡೆಯಲು ಪ್ರಾರಂಭಿಸುತ್ತವೆ. ಗಂಡಾ, ಹೆಣ್ಣಾ? 'ಅಮ್ಮ' ಅಂತ ತೊದಲು ನುಡಿಯಲು ಯಾವಾಗ ಶುರು ಮಾಡುತ್ತೋ? ಎಂಥ ಬಟ್ಟೆ ತೊಡಿಸುವುದು, ಯಾವ ಶಾಲೆಗೆ ಸೇರಿಸುವುದು? ಎಂಥ ಆಟಿಕೆ ತರುವುದು?

ಐದೇಐದು ದಿನಗಳ ಹಿಂದೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಯಲಹಂಕಾ ನಿವಾಸಿ ಅಪರ್ಣಾ ಕೂಡ ಮಗುವಿನ ಹುಟ್ಟಿನ ಸಂತಸದಲ್ಲಿ ಜಗತ್ತನ್ನೇ ಮರೆಯುತ್ತಿದ್ದರು. ಒಂಬತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲಿ ಹೊತ್ತ ಒಂದೊಂದು ಕ್ಷಣವೂ ಅತ್ಯದ್ಭುತವಾಗಿತ್ತು. ನವರಾತ್ರಿಯ ಸಂದರ್ಭದಲ್ಲಿ ಗಂಡ ಮತ್ತು ತವರು ಮನೆಯಲ್ಲಿ ಹೊಸ ನಿರೀಕ್ಷೆಗಳ ಹಸಿರು ತೋರಣ ತಾನಾಗಿಯೇ ಕಟ್ಟಿಕೊಂಡಿತ್ತು, ಇಡೀ ಮನೆಯಲ್ಲಿ ಹೊಸಕಳೆ ತಂದಿತ್ತು. ಮಗುವಿನ ಬರುವಿಕೆಗಾಗಿ ಜೋಳಿಗೆ ಕಾದಿತ್ತು.

Aparna's soul will not rest in peace if culprits not punished

ಅಪರ್ಣಾ ಇನ್ನಿಲ್ಲ!

ಆ ಸಂತಸದ ಕಣಗಳಿಂದ ತುಂಬಿದ ಬಲೂನಿಗೆ ಹೈಟೆಕ್ ಆಸ್ಪತ್ರೆಯ ವೈದ್ಯರ ತಂಡ ಇಷ್ಟು ಬೇಗನೆ ಸೂಚಿಮೊನೆಯನ್ನು ಚುಚ್ಚುತ್ತದೆಂದು ಯಾರೂ ಎಣಿಸಿರಲಿಲ್ಲ. ಅಕ್ಟೋಬರ್ 21ರ ಬೆಳಿಗ್ಗೆ ನರ್ಸ್ ಬಾಯಿಯಿಂದ ಕೇಳಿಬಂದ ವಾರ್ತೆ ಇಡೀ ಕುಟುಂಬದ ಜಂಘಾಬಲವೇ ಉಡುಗುವಂತೆ ಮಾಡಿತ್ತು. "ಅಪರ್ಣಾ ಇನ್ನಿಲ್ಲ!" ಆಪರೇಷನ್ ಟೇಬಲ್ಲಿನ ಮೇಲೆ ಅಪರ್ಣಾ ಹೆಣವಾಗಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರೂ ನೂರು ವರ್ಷಗಳ ಸ್ನೇಹಿತರಂತಿದ್ದ ಚೇತನ್, ಅಪರ್ಣಾ ಕಟ್ಟಿಕೊಂಡಿದ್ದ ಕನಸಿನ ಗೋಪುರ ಕುಸಿದುಬಿದ್ದಿತ್ತು.

ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ಅವರ ಅಳಿಯ ಸೈಯದ್ ರೆಹಾನ್ ಅವರಿಗೆ ಸೇರಿದ ಬೆಂಗಳೂರಿನ ಸಹಕಾರ ನಗರದಲ್ಲಿರುವ 'ಸ್ಟೇಟ್ ಆಫ್ ದಿ ಆರ್ಟ್' ಸೂಪರ್ ಸ್ಪೆಷಾಲಿಟಿ ಮದರ್‌ಹುಡ್ ಆಸ್ಪತ್ರೆ, ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ, 28 ವರ್ಷದ ಬ್ಯಾಂಕ್ ಉದ್ಯೋಗಿ, ಮೂರುಮೂರು ಡಿಗ್ರಿ ಪಡೆದ ವಿದ್ಯಾವಂತೆ ಅಪರ್ಣಾ ಮತ್ತು ಆಕೆಯ ಮಗುವಿನ ಪಾಲಿನ ಯಮವಾಗಿ ಪರಿಣಮಿಸುತ್ತದೆಂದು, ಚೇತನ್ ಅವರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.

ವೈದ್ಯೋ ನಾರಾಯಣೋ ಹರಿಃ. ಆಸ್ಪತ್ರೆ ಪ್ರವೇಶಿಸುವವರ ಪಾಲಿಗೆ ವೈದ್ಯರೇ ಸಾಕ್ಷಾತ್ ದೇವರು. ತಿರುಪತಿಯಲ್ಲಿ ಎಂಬಿಬಿಎಸ್ ಮಾಡಿ, ದೆಹಲಿಯ ಎಐಐಎಂಎಸ್‌ನಲ್ಲಿ ಎಂಡಿ ಮಾಡಿ, ಯುನೈಟೆಡ್ ಕಿಂಗಡಂನಲ್ಲಿ ಉನ್ನತ ಅಧ್ಯಯನ ಮಾಡಿರುವ ಡಾ. ಶಿರೀಶಾ ರೆಡ್ಡಿ ಬಳಿ ಗರ್ಭ ಧರಿಸಿದಾಗಲಿಂದ ಹೆರಿಗೆಯ ಹಂತದವರೆಗೆ ಚೇತನ್ ದಂಪತಿಗಳು ಚೆಕಪ್ಪಿಗಾಗಿ ಬರುತ್ತಿದ್ದರು. ಡಾ. ಶಿರೀಶಾ ಅವರು ಚೇತನ್ ದಂಪತಿಗಳ ಪಾಲಿನ ದೇವರೇ ಆಗಿದ್ದರು.

Aparna's soul will not rest in peace if culprits not punished

'ದೇವರ' ಎದುರಿನಲ್ಲೇ ಆಗಿದ್ದಾದರೂ ಏನು?

ಅಂದಿನ ಕ್ಷಣಗಳನ್ನು ನೆನೆದು ಭಾವುಕರಾಗುವ ಚೇತನ್, "ಡೆಲಿವರಿಗೆಂದು ಆಸ್ಪತ್ರೆಗೆ ಕರೆತಂದಾಗ ಯಾವುದೂ ವ್ಯವಸ್ಥಿತವಾಗಿ ನಡೆಯಲಿಲ್ಲ. ಡ್ಯೂಟಿ ಡಾಕ್ಟರ್ ಇದ್ದರೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಅಪರ್ಣಾಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಯಾವ ಕ್ಷಣದಲ್ಲಿಯೂ ಹೇಳಲಿಲ್ಲ. ಅಲ್ಲಿ ಏನಾಗುತ್ತಿದೆಯೆಂದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ" ಎಂದು ಅಂದಿನ ಘಟನಾವಳಿಗಳನ್ನು ಬಿಚ್ಚಿಟ್ಟರು.

ಆಘಾತಕಾರಿ ಸಂಗತಿಯೆಂದರೆ, ಅಪರ್ಣಾರ ಆರೋಗ್ಯ ಏರುಪೇರಾಗುತ್ತಿದ್ದಾಗ ಪ್ರಧಾನ ವೈದ್ಯರಾದ ಡಾ. ಶಿರೀಶಾ ಅವರು ಸ್ಥಳದಲ್ಲಿಯೇ ಇರಲಿಲ್ಲ. ಅವರಿಗೆ ಅಪರ್ಣಾರ ಆರೋಗ್ಯದ ಸ್ಥಿತಿಗತಿಯೂ ತಿಳಿಸಿರಲಿಲ್ಲ. ಅಪರ್ಣಾರಿಗೆ ಆಕ್ಸಿಜನ್ ಕೊಡಬೇಕಾದ ಸಂದರ್ಭದಲ್ಲಿ ಅಲ್ಲಿ ಆಕ್ಸಿಜನ್ ಸಿಲಿಂಡರೂ ಇರಲಿಲ್ಲ. 'ಅಪರ್ಣಾಗೆ ಏನಾಯ್ತು, ಅಪರ್ಣಾ ಏಳು ಏಳು' ಎಂದು ವೈದ್ಯೆ ಶಿರೀಶಾ ಅವರು ಕಿರುಚಾಡುವ ಹೊತ್ತಿಗೆ ಎಲ್ಲ ಫಿನಿಷ್!

ತಾಯಿಯಂತೂ ಉಳಿಯಲಿಲ್ಲ, ಮಗುವನ್ನಾದರೂ ಉಳಿಸಿಕೊಳ್ಳೋಣವೆಂದರೆ, 'ಬ್ರೇನ್ ಡೆಡ್' ಮಗುವನ್ನು ತಂದು ಬೇರೆ ಯಾವುದಾದರೂ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಳಿಸಿಕೊಳ್ಳಿ ಎಂದು ಕೈಗಿತ್ತರು. ಮಗುವನ್ನು ರೈನ್‌ಬೋ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಬದುಕುವ ಚಾನ್ಸ್ ತುಂಬ ಕಡಿಮೆ ಇದ್ದಿದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅನಿವಾರ್ಯವಾಗಿ ತೆಗೆಯಲೇಬೇಕಾಯಿತು. ಹುಟ್ಟಿದಾಕ್ಷಣವೇ ಮಗುವೂ ಹೋಗಿ ತಾಯಿಯನ್ನು ಪರಲೋಕದಲ್ಲಿ ಕೂಡಿಕೊಂಡಿದ್ದು ವಿಪರ್ಯಾಸವೇ ಸರಿ.

Aparna's soul will not rest in peace if culprits not punished

ಹೆಸರಿಗೆ ಮಾತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಫೈವ್ ಸ್ಟಾರ್ ಹೋಟೆಲಿನಂತಿದ್ದರೂ ಸರಿಯಾದ ವ್ಯವಸ್ಥೆ ಇಲ್ಲ ಎಂಬುದು ಚೇತನ್ ಅವರ ಆರೋಪ. ಪ್ರತಿಯೊಂದು ಪರೀಕ್ಷೆಯ ರಿಪೋರ್ಟ್ ಬರಲು ಕೂಡ ವಾರಗಟ್ಟಲೆ ಹಿಡಿಯುತ್ತಿತ್ತು. ನಾರ್ಮಲ್ ಡೆಲಿವರಿಗೆ ಪ್ರಯತ್ನ ಮಾಡಿದರೂ ಸಿಜೇರಿಯನ್ ಮಾಡುವಾಗ ಗಂಡನ ಅನುಮತಿ ಪಡೆಯಲಿಲ್ಲ. ಅಪರ್ಣಾ ಆರೋಗ್ಯ ವಿಷಮಿಸಿದರೂ ಒಂದು ಮಾತನ್ನು ಕೂಡ ತಿಳಿಸಲಿಲ್ಲ. ಅಪರ್ಣಾರನ್ನು ಲೇಬರ್ ವಾರ್ಡಿಗೆ ಶಿಫ್ಟ್ ಮಾಡಿದರೂ ಅನಸ್ತೀಶಿಯಾ ತಜ್ಞ, ಮಕ್ಕಳ ತಜ್ಞರು ಬಂದಿರಲಿಲ್ಲ. ಬಂದಿದ್ದವರು ಜ್ಯೂನಿಯರ್ ಡಾಕ್ಟರುಗಳು ಮಾತ್ರ.

ಅಪರ್ಣಾ ಸತ್ತು ಸ್ವರ್ಗ ಸೇರಿದ್ದರೂ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನೂ ಬಂದಿಲ್ಲ. ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದರೂ ಯಾವ ವಿವರಣೆಯೂ ಸಿಗುತ್ತಿಲ್ಲ. ನ್ಯಾಯಕ್ಕಾಗಿ ನಡೆಸುತ್ತಿರುವ ಬಡಿದಾಟದಲ್ಲಿ ಸೋಲುತ್ತೇನೆಂಬ ಹತಾಶೆ ಎಲ್ಲೋ ಮೂಡಿದ್ದರೂ ಹೋರಾಟವನ್ನು ಚೇತನ್ ಬಿಟ್ಟಿಲ್ಲ. ಪೊಲೀಸು, ಮಾಧ್ಯಮಗಳ ಕದ ತಟ್ಟುತ್ತಿದ್ದಾರೆ. ಅಪರ್ಣಾ ಸತ್ತಿದ್ದು ವೈದ್ಯರ ನಿರ್ಲಕ್ಷ್ಯದಿಂದಲೇ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಚೇತನ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೋದ ಪ್ರಾಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ, ಇಂಥ ನರಕದ ಅನುಭವ ಯಾರಿಗೂ ಆಗಬಾರದು. ಎಲ್ಲ ಅನುಕೂಲಗಳು ಇರುವಂಥ ಸಿಟಿಯಲ್ಲಿ ಇದ್ದಿದ್ದರೂ ಹೆರಿಗೆಯನ್ನು ಇಷ್ಟು ಸಂಕೀರ್ಣವಾಗಿಸಿ ತಾಯಿ ಮಗುವಿನ ಪ್ರಾಣವನ್ನು ತೆಗೆದ ವೈದ್ಯರು ಮತ್ತು ಅವರ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಲೇಬೇಕು. ಆಗ ಮಾತ್ರ ಉತ್ಸಾಹದ ಬುಗ್ಗೆಯಂತಿದ್ದ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಚೇತನ್ ಹೋರಾಟ ಮುಂದುವರಿಸಿದ್ದಾರೆ.

ಆಸ್ಪತ್ರೆಯ ಜಾರಿಕೆಯ ಉತ್ತರ

ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡಿಸುವಂಥ ದುರ್ಘಟನೆ ನಡೆದಿದ್ದರೂ, ತಮ್ಮಿಂದ ಆಗಿರುವ ತಪ್ಪನ್ನು ಒಪ್ಪಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಸಿದ್ಧರಿಲ್ಲ. ಅಪರ್ಣಾ ಎಂಥ ಸ್ಥಿತಿ ತಲುಪಿದ್ದರೆಂದರೆ, ಬೆಂಗಳೂರಿನ ಯಾವ ವೈದ್ಯರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಪೊಲೀಸರಿಂದ ನಿಷ್ಪಕ್ಷಪಾತ ತನಿಖೆಯಾಗದ ಹೊರತು ಸತ್ಯಸಂಗತಿ ಹೊರಬರುವುದು ತುಂಬಾ ಕಷ್ಟ.

ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು? ಈ ದೇವರ ಆಟವೇನೇ ಇರಲಿ, ಅಪರ್ಣಾ ಆತ್ಮಕ್ಕೆ ಶಾಂತಿ ಸಿಗಬೇಕಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆತ್ಮೀಯ ಬಾಳಸಂಗಾತಿಯನ್ನು ಕಳೆದುಕೊಂಡರೂ ಎದೆಗುಂದದೆ ಗಟ್ಟಿ ಹೃದಯದಿಂದ ಹೋರಾಟ ನಡೆಸಿರುವ ಚೇತನ್ ಅವರಿಗೆ ಸಿಗುವುದೆ ನ್ಯಾಯ?

English summary
It is sad story of a healthy mother to be die on the operation table of Motherhood hospital in Bengaluru due to negligence of doctors. The child also could not be saved. So, it is double murder. Chethan, husband of Aparna, has waged legal war against the culprits. Aparna's soul will not rest in peace if culprits not punished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X