ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart
ಬೆಂಗಳೂರು: ಆನ್‌ಲೈನ್ ಶಾಪಿಂಗ್ ದೈತ್ಯ ಫ್ಲಿಪ್‌ಕಾರ್ಟ್ (Flipkart) ತನ್ನ ತ್ವರಿತ ವಿತರಣಾ ವೇದಿಕೆಯಾದ 'ಫ್ಲಿಪ್‌ಕಾರ್ಟ್ ಮಿನಿಟ್ಸ್'ನಲ್ಲಿ (Flipkart Minutes) ಕೇವಲ 1 ರೂಪಾಯಿಗೆ 1 ಲೀಟರ್ ಹಾಲು ಮಾರಾಟ ಮಾಡಲು ಮುಂದಾಗಿರುವುದು ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಕೊಡುಗೆಯು ಡೇರಿ ಉದ್ಯಮ ಹಾಗೂ ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ (BAMUL) ಅಧ್ಯಕ್ಷ ಡಿ.ಕೆ. ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದದ ಕುರಿತು ಮೌನ ಮುರಿದಿರುವ ಫ್ಲಿಪ್‌ಕಾರ್ಟ್ ಆಡಳಿತ ಮಂಡಳಿಯು, ತನ್ನ ಈ ಪ್ರಚಾರ ಅಭಿಯಾನದಿಂದ ರೈತರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ ಎಂದು ಅಧಿಕೃತ ಸ್ಪಷ್ಟನೆ ನೀಡಿದೆ.
ಫ್ಲಿಪ್‌ಕಾರ್ಟ್ ವಕ್ತಾರರ ಸ್ಪಷ್ಟನೆ ಏನು?
ಫ್ಲಿಪ್‌ಕಾರ್ಟ್ ಸಂಸ್ಥೆಯ ವಕ್ತಾರರು ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ರೈತರ ಹಿತಾಸಕ್ತಿ ಕಾಯಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. "ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ದೃಷ್ಟಿಯಿಂದ, ನಿಯತಕಾಲಿಕವಾಗಿ ತನ್ನ ಬ್ಯಾಂಕಿಂಗ್ ಪಾಲುದಾರರ ಸಹಯೋಗದೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಸೀಮಿತ ಅವಧಿಯ ಪ್ರಚಾರ ಅಭಿಯಾನಗಳನ್ನು (Promotional Campaigns) ಕೈಗೊಳ್ಳುತ್ತದೆ. 1 ರೂಪಾಯಿಗೆ ಹಾಲು ನೀಡುವ ಕೊಡುಗೆ ಕೂಡ ಇಂತಹದ್ದೇ ಒಂದು ಸೀಮಿತ ಅವಧಿಯ ಆಫರ್ ಆಗಿದೆ. ಇದರಿಂದ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಯಾವುದೇ ತೊಂದರೆಯಾಗುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಫ್ಲಿಪ್‌ಕಾರ್ಟ್ ಕೇವಲ ಒಂದು ಮಾರುಕಟ್ಟೆ ವೇದಿಕೆಯಾಗಿದೆ (Marketplace). ಇಲ್ಲಿ ಮಾರಾಟಗಾರರು ತಮ್ಮ ವೈಯಕ್ತಿಕ ದರಗಳನ್ನು ತಾವೇ ಸ್ವತಂತ್ರವಾಗಿ ನಿರ್ಧರಿಸುತ್ತಾರೆ. ನಮ್ಮ ಪ್ಲಾಟ್‌ಫಾರ್ಮ್ ಮೂಲಕ ಉತ್ಪನ್ನಗಳನ್ನು ಪೂರೈಸುವ ಎಲ್ಲಾ ಡೈರಿ ಪಾಲುದಾರರು ಮತ್ತು ಮಾರಾಟಗಾರರು, ತಾವು ನಿಗದಿಪಡಿಸಿದ ಪೂರ್ಣ ದರವನ್ನೇ ಪಡೆಯುತ್ತಲೇ ಇರುತ್ತಾರೆ. ಗ್ರಾಹಕರಿಗೆ ನೀಡುವ ಈ ರಿಯಾಯಿತಿ ದರಗಳು ಕೇವಲ ಪ್ರಚಾರದ ಭಾಗವಾಗಿದ್ದು, ರೈತರಿಂದ ಹಾಲು ಖರೀದಿಸುವ ಮೂಲ ದರಗಳ ಮೇಲೆ ಇದು ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ರಿಯಾಯಿತಿಯ ಹೊರೆಯನ್ನು ನಾವು ರೈತರ ಮೇಲೆ ಹಾಕುವುದಿಲ್ಲ" ಎಂದು ಸಂಸ್ಥೆ ಅಭಯ ನೀಡಿದೆ.
ರೈತರ ಬೆಂಬಲಕ್ಕೆ ಸಂಸ್ಥೆ ಬದ್ಧ
"ದೇಶಾದ್ಯಂತ ಇರುವ ರೈತರು, ಸಹಕಾರಿ ಸಂಸ್ಥೆಗಳು (Cooperatives) ಮತ್ತು ಮಾರಾಟಗಾರರ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಫ್ಲಿಪ್‌ಕಾರ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ಅವರ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಗ್ರಾಹಕರಿಗೆ ಸುಲಭವಾಗಿ ಹಾಗೂ ವೇಗವಾಗಿ ಉತ್ಪನ್ನಗಳನ್ನು ತಲುಪಿಸಲು ನಾವು ರೈತರೊಂದಿಗೆ ಸದಾ ಕೈಜೋಡಿಸಿ ಕೆಲಸ ಮಾಡಲು ಬದ್ಧರಾಗಿದ್ದೇವೆ" ಎಂದು ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿವಾದದ ಹಿನ್ನೆಲೆ ಏನು?
ಇತ್ತೀಚೆಗಷ್ಟೇ ತ್ವರಿತ ವಿತರಣಾ (Quick Commerce) ಕ್ಷೇತ್ರಕ್ಕೆ ಕಾಲಿಟ್ಟಿರುವ ಫ್ಲಿಪ್‌ಕಾರ್ಟ್, ಹೊಸ ಗ್ರಾಹಕರನ್ನು ಸೆಳೆಯಲು 1 ರೂ.ಗೆ 1 ಲೀಟರ್ ಹಾಲು ನೀಡುವ ಭರ್ಜರಿ ಆಫರ್ ಪ್ರಕಟಿಸಿತ್ತು. ಇದರ ವಿರುದ್ಧ ಸಿಡಿದೆದ್ದಿದ್ದ ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್, "ಹಣ ಮಾಡುವ ಭರದಲ್ಲಿ ಫ್ಲಿಪ್‌ಕಾರ್ಟ್ ರೈತ ಸಮುದಾಯವನ್ನು ಮತ್ತು ದಶಕಗಳಿಂದ ಬೆಳೆದುಬಂದಿರುವ ಸಹಕಾರಿ ಹಾಲು ಒಕ್ಕೂಟಗಳನ್ನು ನಾಶ ಮಾಡುವ ಕೃತ್ಯಕ್ಕೆ ಕೈಹಾಕಿದೆ. ಈ ಪ್ರಿಡೇಟರಿ ಪ್ರೈಸಿಂಗ್ (Predatory Pricing) ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ (CCI) ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ದಂಗೆ ಏಳಬೇಕಾಗುತ್ತದೆ" ಎಂದು ಎಚ್ಚರಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೂ ಇ-ಮೇಲ್ ಮೂಲಕ ದೂರು ನೀಡಿದ್ದರು.
ಸಾಮಾನ್ಯವಾಗಿ ಇ-ಕಾಮರ್ಸ್ ಸಂಸ್ಥೆಗಳು ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಇಂತಹ ತಂತ್ರಗಳನ್ನು ಅನುಸರಿಸುವುದು ಸಾಮಾನ್ಯ. ಅಂದರೆ, ದಿನನಿತ್ಯದ ಅಗತ್ಯ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ನೀಡಿ ಗ್ರಾಹಕರ ಗಮನ ಸೆಳೆಯುತ್ತವೆ. ಆದರೆ, ಈ ರಿಯಾಯಿತಿಯ ಆರ್ಥಿಕ ಹೊರೆ ಅಥವಾ ನಷ್ಟವನ್ನು ಸಂಸ್ಥೆಗಳು ಮತ್ತು ಅವುಗಳ ಪಾಲುದಾರರೇ ಭರಿಸುತ್ತಾರೆಯೇ ವಿನಃ, ಉತ್ಪನ್ನಗಳನ್ನು ಬೆಳೆದ ರೈತರಲ್ಲ ಎಂಬುದು ಫ್ಲಿಪ್‌ಕಾರ್ಟ್ ನೀಡಿರುವ ವಿವರಣೆಯ ಸಾರಾಂಶ. ಒಟ್ಟಿನಲ್ಲಿ, ಬಮೂಲ್ ಆರೋಪದಿಂದ ಆತಂಕಗೊಂಡಿದ್ದ ಹೈನುಗಾರರಿಗೆ ಸಂಸ್ಥೆಯ ಈ ತ್ವರಿತ ಸ್ಪಷ್ಟನೆ ಕೊಂಚ ನಿರಾಳತೆ ತಂದಿದೆ.












Click it and Unblock the Notifications