Get Updates
Get notified of breaking news, exclusive insights, and must-see stories!

ಪುಸ್ತಕ ಪರಿಚಯ: ಇತಿಹಾಸ ಮರೆತ ಹೆಣ್ಣಿನ ಬದುಕು ಶೋಧಿಸುವ ಕಾದಂಬರಿ -ರೂಮಿಯ ಮಗಳು

ಸೂಫಿ ಪರಂಪರೆಯ ಮಹಾನ್ ಕವಿ ಜಲಾಲುದ್ದೀನ್ ಮಹಮ್ಮದ್ ರೂಮಿ ಜಗತ್ತಿನ ಸಾಹಿತ್ಯದಲ್ಲಿ ಪ್ರೇಮ, ಆಧ್ಯಾತ್ಮ ಮತ್ತು ಮಾನವೀಯತೆಯ ಸಂಕೇತವಾಗಿ ಗುರುತಿಸಲ್ಪಟ್ಟ ವ್ಯಕ್ತಿ. ಆದರೆ ಮಹಾನ್ ವ್ಯಕ್ತಿಗಳ ಜೀವನದ ಹಿಂದೆ ಮೌನವಾಗಿದ್ದ ಅನೇಕ ಕಥೆಗಳು ಇತಿಹಾಸದ ಪುಟಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆ ಮೌನದ ಹಿಂದಿರುವ ಒಂದು ಹೆಣ್ಣಿನ ಬದುಕನ್ನು ಸಾಹಿತ್ಯದ ರೂಪದಲ್ಲಿ ಅನಾವರಣಗೊಳಿಸುವ ಪ್ರಯತ್ನವೇ ಚೇತನಾ ತೀರ್ಥಹಳ್ಳಿ ಅವರ ಕಾದಂಬರಿ 'ರೂಮಿಯ ಮಗಳು'. (ಬರಹ: ವಿಶ್ವನಾಥ್ ಬಿ.)

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಈ ಕೃತಿಯು ಐತಿಹಾಸಿಕ ಹಿನ್ನೆಲೆಯನ್ನು ಆಧಾರವಾಗಿಸಿಕೊಂಡು ಬರೆದಿರುವ ಕಾಲ್ಪನಿಕ ಕಾದಂಬರಿ. ಸುಮಾರು 148 ಪುಟಗಳ ಈ ಕೃತಿಯಲ್ಲಿ ಲೇಖಕಿ ರೂಮಿಯ ಜೀವನದ ಸುತ್ತಲಿನ ಮಾನವೀಯ ಸಂಬಂಧಗಳು, ಅದರೊಳಗಿನ ಅಂತರಂಗದ ಸಂಘರ್ಷಗಳು ಮತ್ತು ಹೇಳಿಕೊಳ್ಳದೇ ಉಳಿದುಹೋದ ನೋವುಗಳನ್ನು ಕಥೆಯ ರೂಪದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

Rumiya Magalu

ಜಗತ್ತಿನ ಸಾಹಿತ್ಯದ ಇತಿಹಾಸದಲ್ಲಿ ಕಾಲವನ್ನು ಮೀರಿ ಜೀವಂತವಾಗಿರುವ ಕೆಲ ಅಪರೂಪದ ವ್ಯಕ್ತಿತ್ವಗಳಿವೆ. ಶತಮಾನಗಳು ಕಳೆದರೂ ಅವರ ಕವಿತೆಗಳು ಮತ್ತು ಆಲೋಚನೆಗಳು ಹೊಸ ತಲೆಮಾರಿನವರನ್ನು ಆಕರ್ಷಿಸುತ್ತವೆ. ಅಂತಹ ವ್ಯಕ್ತಿತ್ವಗಳಲ್ಲಿ ಪ್ರಮುಖರು ಜಲಾಲುದ್ದೀನ್ ಮಹಮ್ಮದ್ ರೂಮಿ. ಪ್ರೀತಿ, ಆಧ್ಯಾತ್ಮ ಮತ್ತು ಮಾನವೀಯತೆಯ ಸಂದೇಶಗಳನ್ನು ಕಾವ್ಯದ ಮೂಲಕ ವಿಶ್ವಕ್ಕೆ ನೀಡಿದ ರೂಮಿ ಇಂದಿಗೂ ಅನೇಕ ಭಾಷೆಗಳ ಓದುಗರ ಮನಸ್ಸಿನಲ್ಲಿ ನೆಲೆಗೊಂಡಿರುವ ಕವಿ.

ಇಂದಿನ ಅಫ್ಘಾನಿಸ್ತಾನದ ಬಾಲ್ಖ್ ಪ್ರದೇಶದಲ್ಲಿ ಜನಿಸಿದ ರೂಮಿ 13ನೇ ಶತಮಾನದಲ್ಲಿ ಸೂಫಿ ಪರಂಪರೆಯ ಪ್ರಮುಖ ವ್ಯಕ್ತಿತ್ವವಾಗಿ ಬೆಳೆದರು. ಅವರ ಕಾವ್ಯಗಳಲ್ಲಿ ಆಧ್ಯಾತ್ಮಿಕತೆ, ಪ್ರೀತಿ ಮತ್ತು ಬದುಕಿನ ತಾತ್ವಿಕ ಅರ್ಥಗಳ ಹುಡುಕಾಟ ಸ್ಪಷ್ಟವಾಗಿ ಕಾಣುತ್ತದೆ.

ಕಾದಂಬರಿಯ ಕೇಂದ್ರ ಬಿಂದುವೇ ಕೀಮಿಯಾ. ರೂಮಿಯ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ ಸೂಫಿ ರಹಸ್ಯದರ್ಶಿ ಶಮ್ಸ್ ತಬ್ರೀಜಿ ಅವರ ಉಪಸ್ಥಿತಿಯಲ್ಲಿ ಕೀಮಿಯಾ ಬದುಕು ಹೇಗೆ ಬದಲಾಗುತ್ತದೆ ಎಂಬುದು ಕಥೆಯ ಮುಖ್ಯ ಧಾರೆ. ಅವಳ ಕನಸುಗಳು, ಆಕಾಂಕ್ಷೆಗಳು ಮತ್ತು ಅವಳ ಜೀವನದ ದುರಂತ ತಿರುವುಗಳು ಓದುಗರ ಮನಸ್ಸಿಗೆ ಸ್ಪರ್ಶಿಸುವಂತೆ ನಿರೂಪಿಸಲ್ಪಟ್ಟಿವೆ.

ಈ ಕೃತಿ ಕೇವಲ ರೂಮಿಯ ಮಹಿಮೆಯನ್ನು ವರ್ಣಿಸುವುದಕ್ಕೆ ಸೀಮಿತವಾಗಿಲ್ಲ. ರೂಮಿಯ ಬಗ್ಗೆ ಆ ರೀತಿಯ ಹಲವು ಕೃತಿಗಳು ಈಗಾಗಲೇ ಪ್ರಕಟವಾಗಿವೆ. ಈ ಕಾದಂಬರಿಯು ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದೆ ನಿಂತಿರುವ ಒಂದು ಹೆಣ್ಣು ಮಗಳ ಬದುಕಿನ ಮೇಲೆ ಅದರ ಪರಿಣಾಮ ಹೇಗಿರುತ್ತದೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡುತ್ತದೆ. ವಿಶೇಷವಾಗಿ, ರೂಮಿಯ ಇತಿಹಾಸದ ದಾಖಲೆಗಳಲ್ಲಿ ಕೀಮಿಯಾ ಎಂಬ ಹೆಣ್ಣು ಮಗಳ ಧ್ವನಿ ಹೇಗೆ ಮರೆಯಾಗಿದೆ ಎಂಬ ವಿಚಾರವನ್ನು ಲೇಖಕಿ ಸೂಕ್ಷ್ಮವಾಗಿ ಚರ್ಚೆಗೆ ತರುತ್ತಾರೆ.

ರೂಮಿಯ ಮಗ ಅಲಾವುದ್ದೀನ್ ಮತ್ತು ಶಮ್ಸ್ ತಬ್ರೀಜಿ ನಡುವಿನ ಸಂಘರ್ಷದ ನೆರಳಿನಲ್ಲಿ ಹೆಣ್ಣಿನ ನೋವು ವ್ಯಕ್ತವಾಗುತ್ತದೆ. ಶಮ್ಸ್ ಅವರ ರಹಸ್ಯಮಯ ಅಂತರ್ಧಾನದ ಕುರಿತು ಇತಿಹಾಸದಲ್ಲಿ ಹಲವಾರು ಕಥೆಗಳು ಮತ್ತು ಊಹಾಪೋಹಗಳಿವೆ. ಆದರೂ ಅವುಗಳನ್ನು ಹೆಚ್ಚಾಗಿ ಚರ್ಚಿಸದೇ, ಒಂದು ಹೆಣ್ಣಿನ ಅಂತರಂಗವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾದಂಬರಿ ಮೂಡಿ ಬಂದಿದೆ.

ಚೇತನಾ ತೀರ್ಥಹಳ್ಳಿ ಅವರ ಬರವಣಿಗೆಯಲ್ಲಿರುವ ಸಂವೇದನಾಶೀಲತೆ ಈ ಕೃತಿಯ ಪ್ರಮುಖ ಶಕ್ತಿ. ಕಥೆಯ ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ, ಒಂದು ಹೆಣ್ಣು ಮಾತ್ರ ಮತ್ತೊಂದು ಹೆಣ್ಣಿನ ನೋವನ್ನು ಅರ್ಥಮಾಡಿಕೊಳ್ಳಬಲ್ಲಳು. ಸರಳವಾದ ಭಾಷೆ, ಮನಸ್ಸನ್ನು ತಟ್ಟುವ ನಿರೂಪಣೆ ಮತ್ತು ಇತಿಹಾಸದ ಹಿನ್ನೆಲೆಯೊಂದಿಗೆ ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು ಹಿಡಿಯುವ ಅವರ ಪ್ರಯತ್ನ ಗಮನ ಸೆಳೆಯುತ್ತದೆ.

ರೂಮಿಯ ಆಧ್ಯಾತ್ಮಿಕ ಲೋಕವನ್ನು ತಿಳಿದಿರುವ ಓದುಗರಿಗಷ್ಟೇ ಅಲ್ಲ, ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಅರಿಯಲು ಬಯಸುವ ಓದುಗರಿಗೂ 'ರೂಮಿಯ ಮಗಳು' ಹೊಸ ಓದು ಅನುಭವವನ್ನು ನೀಡುವ ಕೃತಿ.

ಪುಸ್ತಕದ ವಿವರ
ಪುಸ್ತಕದ ಹೆಸರು: ರೂಮಿಯ ಮಗಳು
ಲೇಖಕಿ: ಚೇತನಾ ತೀರ್ಥಹಳ್ಳಿ
ಪುಟಗಳು: 148, ಬೆಲೆ: ₹200
ಪ್ರಕಾಶಕರು: ಸಾವಣ್ಣ ಪ್ರಕಾಶನ
ಸಂಪರ್ಕ: www.sawannabooks.com

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+