• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣರಾಜ್ಯೋತ್ಸವದ ಬೆನ್ನಲ್ಲೊಂದು ಆತ್ಮಾವಲೋಕನ!

By Staff
|

ಇಲ್ಲಿರುವ ನಾವುಗಳೆಲ್ಲ ಗಾಡ್‌ ಬ್ಲೆಸ್‌ ಮಾಡುವ ಅಮೆರಿಕಾ ದೇಶದ ಪರವೊ? ಜನ್ಮ ನೀಡಿದ ಸಾರೆ ಜಹಾಂ ಸೆ ಅಚ್ಛಾ ಎ ಹಿಂದು ಸಿತಾ ಹಮಾರಾ ಭಾರತದ ಪರವೊ ಅಥವಾ ಅಲ್ಲಿಯೂ ಸಲ್ಲುವ ಇಲ್ಲಿಯೂ ಸಲ್ಲುವವರೋ ಅಥವಾ ಎಲ್ಲಿಯೂ ಸಲ್ಲದವರೋ? ಅಂತರ್‌-ಮುಖಿಗಳಾಗುವುದಕ್ಕೆ ಮುಕ್ತ ಆಹ್ವಾನ!!

ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್‌, ಮೇರೀಲ್ಯಾಂಡ್‌

Republicday celebrationಆಗಸ್ಟ್‌ ಹದಿನೈದು ಬಂದರೆ ಸ್ವಾತಂತ್ರ್ಯ ದಿನಾಚರಣೆ, ಜನವರಿ ಇಪ್ಪತ್ತಾರು ಬಂದರೆ ಗಣರಾಜ್ಯ ದಿನಾಚರಣೆ. ಇದು ಎಲ್ಲರಿಗೂ ಗೊತ್ತಿರುವುದೇ. ಶಾಲಾ ಬಾಲಕರಾಗಿದ್ದಾಗ ಸ್ಕೌಟ್‌ ದಳ, ಎನ್‌.ಸಿ.ಸಿ ಮುಂತಾದ ಸಂಸ್ಥೆಗಳ ಸದಸ್ಯರಾಗಿದ್ದವರು ಮೆರವಣಿಗೆ ಮತ್ತು ಕವಾಯ್ತುಗಳಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಳ್ಳಬಹುದು. ದೇಶವನ್ನು ಬಿಟ್ಟು ಬಂದಮೇಲೆ ಮೊದ ಮೊದಲು ಆ ತಾರೀಖುಗಳು ಬಂದಾಗ ಊರಿನ ನೆನಪು ಮರುಕಳಿಸುತ್ತಿತ್ತು.

ನಾನು ನನ್ನ ಮಡದಿಯಾಂದಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟದ್ದು ಆಗಸ್ಟ್‌ ಹದಿನೈದನೇ ತಾರೀಖು. ದೇಶ ಸ್ವತಂತ್ರವಾದ ದಿನವೇ ನಾನು ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಎಂಬುದನ್ನು ಪ್ರತಿವರ್ಷವೂ ನೆನಪು ಮಾಡಿಕೊಳ್ಳುವುದರ ಜೊತೆಗೆ, ಆ ದಿನವನ್ನು ಮದುವೆಯ ವಾರ್ಷಿಕೋತ್ಸವವಾಗಿ ಆಚರಿಸುವ ಸಂಪ್ರದಾಯವೂ ಬೆಳೆದುಬಂದಿದೆ. ಹೀಗಾಗಿ, ಅಂದು ನಡೆಯುವ ಸಾರ್ವಜನಿಕ ಸಭೆಗಳಿಗೆ ಹೋಗುವುದು ತಪ್ಪಿದೆ. ಆದರೆ, ಅಮೆರಿಕದಲ್ಲಿ ಎಲ್ಲ ಭಾರತೀಯ ಸಮಾರಂಭಗಳಿಗೂ ವಾರಾಂತ್ಯವೇ ಗತಿ ಆದ್ದರಿಂದ ಸಾರ್ವಜನಿಕ ಸಮಾರಂಭ ನಡೆಯುವ ದಿನ ಆ ತಾರೀಖಿಗೆ ಹತ್ತಿರವಾದ ಶನಿವಾರ ಅಥವಾ ಭಾನುವಾರ ಆಗಿರುತ್ತದೆ.

ಭಾಷಾವಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡಮೇಲೆ ಸ್ವಾತಂತ್ರ್ಯದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ಹೋಗುವವರ ಸಂಖ್ಯೆಯೂ ಕಮ್ಮಿಯಾಗಿದೆ ಎಂದು ಖೇದದಿಂದ ಹೇಳಬೇಕಾಗಿದೆ. ಹಾಗೆಂದಮಾತ್ರಕ್ಕೆ ಯಾರೂ ಹೋಗುವುದಿಲ್ಲವೆಂದಲ್ಲ.

ನಮ್ಮ ರಾಜಧಾನಿಯಲ್ಲಿ (ವಾಷಿಂಗ್‌ಟ-ನ್‌) ನಡೆಯುವ ಭಾರತೀಯ ದಿನಾಚರಣೆಗಳಲ್ಲಿ ಎರಡು ವಿಧ. ಒಂದು, ಭಾರತೀಯ ರಾಯಭಾರಿಗಳ ಕಛೇರಿಯ ಜನ ಏರ್ಪಡಿಸುವ ದಿನಾಚರಣೆ. ಅದು, ಅಲ್ಪಸಂಖ್ಯೆಯಲ್ಲಿ ಆಹ್ವಾನಿತ ಅತಿಥಿಗಳು ರಾಯಭಾರಿಗಳ ಕಛೇರಿಯಲ್ಲಿ ಭಾಗವಹಿಸುವ ಸಮಾರಂಭ. ಬಾವುಟ ಹಾರಿಸಿ, ರಾಷ್ಟ್ರಗೀತೆ ಹಾಡಿ, ಸಮೋಸ ತಿನ್ನುವ ಕಾರ್ಯಕ್ರಮ. ಇದನ್ನು ಆಯಾ ತಾರೀಖಿನ ದಿನವೇ ಆಚರಿಸುವುದು ಪದ್ಧತಿಯಾಗಿದೆ.

ಮತ್ತೊಂದು, ಪ್ರತಿಯಾಂದು ಭಾರತೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳೂ ಸೇರಿಕೊಂಡು ಕಟ್ಟಿಕೊಂಡಿರುವ 'ಛತ್ರಿ-ಸಂಸ್ಥೆ " (ಅಂಬ್ರೆಲ್ಲಾ ಆರ್ಗನೈಸೇಷನ್‌) ವಾರಾಂತ್ಯದಲ್ಲಿ ಆಚರಿಸುವ ದಿನಾಚರಣೆ. ರಾಜಧಾನಿಯಲ್ಲಿ ಹುಟ್ಟಿಕೊಂಡ ಎರಡು ಸಂಸ್ಥೆಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ನಾ ಮುಂದು ತಾ ಮುಂದು ಎಂದು ಸ್ಪರ್ಧಿಸಿ ಬಡಿದಾಡುತ್ತಿದ್ದ ದಿನಗಳೂ ಇದ್ದವು. ಈ ಎರಡು ಸಂಘಗಳ ಸ್ಪರ್ಧೆ ಕೊಂಚ ಮಿತಿಮೀರಿ ವಿಪರೀತವಾದ ಸಮಯದಲ್ಲಿ ನಾನು ಕಾವೇರಿ ಕನ್ನಡ ಸಂಘದ ಅಧ್ಯಕ್ಷನಾಗಿದ್ದೆ, ಹಾಗಾಗಿ ಆ ಸಮಯದಲ್ಲಿ ಜನನಾಯಕರಾಗಲು ಮುನ್ನುಗ್ಗುತ್ತಿದ್ದ ಹಲವು ಹತ್ತು ಧುರೀಣರನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಒದಗಿತ್ತು.

1985ರಲ್ಲಿ ಭಾರತದಿಂದ ಅಮೆರಿಕಾ ಭೇಟಿಗೆ ಆಗಮಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸ್ವಾಗತ ಬಯಸಲು ಅಗತ್ಯಕ್ಕಿಂತ ಹೆಚ್ಚು ಕಾತುರರಾಗಿದ್ದ ಹಲವಾರು ಧುರೀಣರನ್ನು ಭಾರತದ ರಾಯಭಾರಿಗಳ ಕಛೇರಿ ಚೆನ್ನಾಗಿ ಉಪಯೋಗಿಸಿಕೊಂಡಿದ್ದ ಪ್ರಸಂಗ ಈಗಲೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ತಮಗೂ ಪ್ರಾತಿನಿಧ್ಯ ಸಿಕ್ಕಲಿ, ಪ್ರಧಾನಿಯವರೊಂದಿಗೆ ಒಂದಾದರೂ ಫೋಟೋದಲ್ಲಿ ತಾವೂ ಬಿದ್ದು, ಆ ಚಿತ್ರ ಭಾರತದ ಸಮಾಚಾರಪತ್ರಿಕೆಯಲ್ಲಿ ಅಚ್ಚಾಗಿ, ಅದನ್ನು ತಮ್ಮ ಮನೆಮಂದಿಯೆಲ್ಲಾ ನೋಡಿ, ಆ ಪತ್ರಿಕೆಯ ಹತ್ತಾರು ಪ್ರತಿಗಳನ್ನು ಕೊಂಡು ಬಂಧುಮಿತ್ರರಿಗೆಲ್ಲಾ ಹಂಚಿ ಹೆಮ್ಮೆಪಟ್ಟ ವಿಷಯ ತಮಗೆ ಪತ್ರಮುಖೇನ ತಿಳಿದು -ಇತ್ಯಾದಿ, ಇತ್ಯಾದಿ ಕನಸು ಕಾಣುತ್ತಿದ್ದ ಹಲವಾರು ದಿಢೀರ್‌ ರಾಷ್ಟ್ರಭಕ್ತರು ಜನ್ಮತಾಳಿದ ದಿನಗಳವು.

ರಾಯಭಾರಿಗಳ ಕಛೇರಿಯ ಆಹ್ವಾನ ಪತ್ರಿಕೆಯನ್ನು ಹೇಗಾದರೂ ದಕ್ಕಿಸಿಕೊಳ್ಳಲೇಬೇಕೆಂಬ ಛಲದಿಂದ ಹಲವರು ಹೊಸ ಸಂಘಗಳನ್ನು ನೋಂದಾಯಿಸಿಕೊಂಡಿದ್ದು, ಇಂದಿರಾ ಗಾಂಧಿಯವರು ಹಿಂದಿರುಗಿದ ಮರುದಿನವೇ ಆ ಸಂಘಗಳು ಮಾಯವಾಗಿದ್ದು ಬೇರೆ ವಿಷಯ! ಎರಡು ಛತ್ರಿ-ಸಂಘಗಳ ನಡುವೆ ನಡೆಯುತ್ತಿದ್ದ ಸ್ಪರ್ಧೆಯು ಈಗ ಸ್ವಲ್ಪಮಟ್ಟಿಗೆ ಕಮ್ಮಿಯಾಗಿದೆಯಂತೆ. ಇತ್ತೀಚೆಗೆ, ಒಂದು ಸಂಘ ಆಗಸ್ಟ್‌ ಹದಿನೈದನ್ನೂ ಮತ್ತೊಂದು ಸಂಘ ಜನವರಿ ಇಪ್ಪತ್ತಾರನ್ನೂ ಆಚರಿಸುತ್ತ ವಾತಾವರಣವನ್ನು ತಿಳಿಗೊಳಿಸಿದ್ದಾರೆಂದು ಕೇಳಿಬಲ್ಲೆ.

ಇದೆಲ್ಲ ಇದ್ದಕ್ಕಿದ್ದಂತೆ ಕಣ್ಮುಂದೆ ಸುಳಿದು ಮಾಯವಾದದ್ದು ಮೊನ್ನೆ (ಜನವರಿ 27ರಂದು) ರಾಜಧಾನಿಯ ಛತ್ರಿ-ಸಂಸ್ಥೆಯಾಂದು (ನ್ಯಾಷನಲ್‌ ಕೌಂಸಿಲ್‌ ಆಫ್‌ ಏಷಿಯನ್‌ ಇಂಡಿಯನ್‌ ಅಸೋಸಿಯೇಷನ್ಸ್‌) ನಡೆಸಿದ ಗಣರಾಜ್ಯೋತ್ಸವದಲ್ಲಿ ಪಾಲುಗೊಂಡಿದ್ದರಿಂದ. ಅನೇಕ ವರ್ಷಗಳ ನಂತರ ನಾನು ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶೇಷ ಕಾರಣವೂ ಇತ್ತು. ಅದರ ಬಗ್ಗೆ ಕೊನೆಯಲ್ಲಿ ತಿಳಿಸುವೆ.

ರಾಜಧಾನಿಯ ಹಲವಾರು ಸಂಸ್ಥೆಗಳನ್ನು ಪ್ರತಿನಿಧಿಸಿದ ಅನೇಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿದ್ದವು. ಭರತನಾತ್ಯ, ಕೂಚಿಪುಡಿ ಮುಂತಾದ ಶಾಸ್ತ್ರೀಯ ನೃತ್ಯಗಳೇ ಅಲ್ಲದೇ ಭಾಂಗಡಾ ಮುಂತಾದ ಜಾನಪದಶೈಲಿಯ ನೃತ್ಯಗಳು ಮತ್ತು 'ಬೆಸಗೆ" ನೃತ್ಯಗಳೂ (ಫ್ಯೂಷನ್‌ ಡ್ಯಾನ್ಸ್‌) ಇದ್ದವು. ಅನೇಕ ಪುಟ್ಟ ಮಕ್ಕಳು ತಮ್ಮ ಉತ್ಸಾಹ ಮತ್ತು ಪ್ರತಿಭೆಗಳಿಂದ ಸಭಿಕರ ಮನಸ್ಸನ್ನು ಸೂರೆಗೊಂಡರು. ಭಾರತದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆ ಜಗತ್ಪ್ರಸಿದ್ಧ. ಅದನ್ನು ಸಣ್ಣ ಪ್ರಮಾಣದಲ್ಲಿ ಪ್ರದರ್ಶಿಸಿದ ಪುಟ್ಟ ಮಕ್ಕಳು ಹಿಂದಿ ಮುಂತಾದ ಭಾರತೀಯ ಭಾಷೆಗಳಲ್ಲಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಮನರಂಜನೆಯ ಎರಡು ಅಧ್ಯಾಯಗಳ ನಡುವೆ ಮತ್ತೊಂದು ಮನರಂಜನೆಯ ವಿಭಾಗವಿತ್ತು. ಇದೇ ಭಾಷಣಗಳ ಸುರಿಮಳೆ. ಮನರಂಜನೆಗಾಗಿ ಬಂದವರು ಈ ಭಾಷಣಗಳ ಸಂದರ್ಭವನ್ನು ತಮಗೆ ದೊರೆತ ಇಂಟರ್ವೆಲ್‌ ಎಂದು ಭಾವಿಸಿ ಎದ್ದು ಹೋಗಿದ್ದನ್ನು ಗಮನಿಸದೇ ಇರಲು ಸಾಧ್ಯವಿರಲಿಲ್ಲ. ಅಮೆರಿಕದ ರಾಷ್ಟ್ರ ಮಟ್ಟದ, ಪ್ರದೇಶ ಮಟ್ಟದ ಮತ್ತು ಸ್ಥಳೀಯ ಮಟ್ಟದ ಹಲವು ಚುನಾಯಿತ ರಾಜಕಾರಿಣಿಗಳು ಆಹ್ವಾನಿತರಾಗಿ ಬಂದಿದ್ದರು. ಆಹ್ವಾನಿತ ಭಾಷಣಕಾರರು ಚಿಕ್ಕದಾಗಿ, ಚೊಕ್ಕವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದರು. ಆದರೆ, ಅವರನ್ನು ಪರಿಚಯಮಾಡಿಕೊಟ್ಟ ಹಲವರು ಅನಗತ್ಯವಾಗಿ ಉದ್ದುದ್ದನೆಯ ಭಾಷಣಗಳನ್ನು ಬಿಗಿದರು. ರಾಜಕಾರಿಣಿಗಳೊಂದಿಗೆ ಬಂದಿದ್ದ ಚೇಲಗಳಿಗೆ ಇದೊಂದು ಒಳ್ಳೆಯ ಅವಕಾಶವೆಂದು ಬೇರೆ ಹೇಳಬೇಕಿಲ್ಲ.

ಸೆನೇಟರ್‌ ಪರವಾಗಿ, ಕಾಂಗ್ರೆಸ್‌ಮನ್‌ ಪರವಾಗಿ ಕೌಂಟಿ ಕೌಂಸಿಲ್‌ ಪರವಾಗಿ ಬಂದಿದ್ದ ರಾಜಕಾರಿಣಿಗಳು ಅಥವಾ ಅವರ ಪ್ರತಿನಿಧಿಗಳು ಭಾರತದ ಬಗ್ಗೆ ಅಭಿಮಾನದಿಂದ ಮಾತನಾಡಿ ನಮಗೆಲ್ಲ ಹೆಮ್ಮೆ ಉಂಟಾಗುವಂತೆ ಮಾಡಿದರು. ಇದ್ದಕ್ಕಿದ್ದಂತೆ, ಒಮ್ಮೆ ಬಡದೇಶವೆಂದೆನಿಸಿಕೊಳ್ಳುತ್ತಿದ್ದ ನಮ್ಮ ಭಾರತಕ್ಕೆ ಇದೀಗ ಹೊಸದೊಂದು 'ಸ್ಟೇಟಸ್‌" ಸಿಕ್ಕಿರುವುದು ಸ್ಪಷ್ಟವಾಗುವಂತಿತ್ತು ಅವರ ಮಾತಿನ ವರಸೆ. ಭಾರತದ ಬಗ್ಗೆ ಇದ್ದಕ್ಕಿದ್ದಂತೆ ವಿಶ್ವದ ಶಕ್ತ ಮತ್ತು ಶ್ರೀಮಂತ ರಾಷ್ಟ್ರಗಳು ತೋರುತ್ತಿರುವ ಪ್ರಾಮುಖ್ಯತೆಯಿಂದ ನನಗೆ ಸುಭಾಷಿತವೊಂದರ ನೆನಪಾಯಿತು :

ಯಸ್ಯಾಸ್ತಿ ವಿತ್ತಂ ಸನರಃ ಕುಲೀನಃ ಸ ಪಂಡಿತಃ ಸಃ ಶ್ರುತವಾನ್‌ ಗುಣಜ್ಞಃ

ಸ ಏವ ವಕ್ತಾ ಸಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಮಾಶ್ರಯಂತೇ

(ಯಾರಲ್ಲಿ ಹಣ ಉಂಟೋ, ಅವನೇ ಒಳ್ಳೆಯ ಕುಲದವನು, ಅವನೇ ಪಂಡಿತನು, ಅವನ ಮಾತುಗಳೇ ಕೇಳಲು ಯೋಗ್ಯವಾದವು, ಅವನೇ ಸರ್ವಗುಣಸಂಪನ್ನನು, ಅವನೇ ವಾಗ್ಮಿ, ಅವನೇ ದರ್ಶನಕ್ಕೆ ಯೋಗ್ಯನು. ಮನುಷ್ಯನ ಪ್ರತಿಯಾಂದು ಗುಣವೂ ಅವನ ಶ್ರೀಮಂತಿಕೆಯನ್ನೇ ಅವಲಂಬಿಸಿರುತ್ತದೆ.)

ಈ ಮಾತನ್ನು ಭಾರತೀಯರು ಅರಿತುಕೊಳ್ಳಲು ಐವತ್ತೆಂಟನೇ ಗಣರಾಜ್ಯೋತ್ಸವ ಬರಬೇಕಾಯಿತಲ್ಲ ಎಂಬುದೆ ವಿಷಾದದ ಸಂಗತಿ. ಮತ್ತೊಂದು ನಾನು ಗಮನಿಸಿದ ಸಂಗತಿ ಏನೆಂದರೆ, ಆಹ್ವಾನಿತ ಭಾಷಣಕಾರರಲ್ಲಿ ಅನೇಕರು ಸಮಯದ ಅಭಾವದಿಂದ ಅಥವಾ ಇತರ ಅನಿವಾರ್ಯತೆಯಿಂದ ತಮ್ಮ ಭಾಷಣ ಮುಗಿದಕೂಡಲೇ ಹೊರಟು ಹೋದದ್ದು. ಇದು ನನಗೆ ಅಚ್ಚರಿಯನ್ನುಂಟುಮಾಡದಿದ್ದರೂ, ಭಾರತೀಯ ರಾಯಭಾರಿಗಳ ಕಛೇರಿಯಿಂದ ಬಂದಿದ್ದ ಅತಿಥಿಗಳೂ ಆ ರೀತಿ ಮಾಡಿದ್ದನ್ನು ಕಂಡು ನನ್ನ ಮನಸ್ಸಿಗೆ ಕೊಂಚ (ಕೊಂಚ ಏನು ಸ್ವಲ್ಪ ಹೆಚ್ಚಾಗೇ) ಅಸಮಾಧಾನವನ್ನುಂಟುಮಾಡಿತು. ಭಾರತೀಯರೆಲ್ಲ ಒಟ್ಟುಗೂಡಿ ಆಚರಿಸುತ್ತಿರುವ ಗಣರಾಜ್ಯೋತ್ಸವಕ್ಕಿಂತ ಮುಖ್ಯವಾದ ಕೆಲಸ ರಾಯಭಾರಿಗಳ ಕಛೇರಿಯ ಸಿಬ್ಬಂದಿವರ್ಗಕ್ಕೆ ಏನಿರುತ್ತದೆ? ಅದೂ ಶನಿವಾರ ಸಂಜೆ?

ಇಂಥಾ ಸಮಾರಂಭಕ್ಕೆ ಬರುವವರಲ್ಲಿ ಮೊದಲನೆಯ ಗುಂಪು - ಕಾರ್ಯಕರ್ತರು ಮತ್ತು ಇತರ ಸ್ವಯಂಸೇವಕರ ದಂಡು. ಇವರು ಇಡೀ ಕಾರ್ಯಕ್ರಮಕ್ಕೆ ಹೊಣೆಗಾರರಾದ್ದರಿಂದ ಅವರು ಬಂದೇ ಬರುತ್ತಾರೆ. ಎರಡನೆಯ ಗುಂಪು - ಸಾಂಸ್ಕೃತಿಕ ಕಲಾಪಗಳಲ್ಲಿ ಭಾಗವಹಿಸುವ ಮಕ್ಕಳು, ಆ ಮಕ್ಕಳನ್ನು ಕರೆತರುವ ತಂದೆತಾಯಿಗಳು. ಇವರೂ ಬರಲೇಬೇಕು. ಮೂರನೆಯ ಗುಂಪು, ಆಹ್ವಾನಿತ ಅತಿಥಿಗಳು ಮತ್ತು ಭಾಷಣಕಾರರು. ಇವರಲ್ಲಿ ಎಲ್ಲರೂ ಬರಲೇಬೇಕೆಂಬ ನಿರಿಕ್ಷೆಯಿದ್ದರೂ ಕೆಲವರು ಬರುವುದಿಲ್ಲ, ಇನ್ನು ಕೆಲವರು ತಮ್ಮ ಪ್ರತಿನಿಧಿಗಳನ್ನು ಕಳಿಸಿ ಕೈತೊಳೆದುಕೊಳ್ಳುತ್ತಾರೆ. ನಾಲ್ಕನೆಯ ಗುಂಪು, ಯಾವ ಬಲವಂತವೂ ಇಲ್ಲದೆ, ಯಾರ ದಾಕ್ಷಿಣ್ಯಕ್ಕೂ ಕಟ್ಟು ಬೀಳದೆ ಬರುವ ದೇಶಭಕ್ತರೂ ಕೆಲವರಾದರೂ ಇರುತ್ತಾರಾದರೂ, ಅವರು ಅಲ್ಪ ಸಂಖ್ಯಾತರು. ನಾನು ಮೇಲಿನ ಎಲ್ಲಾ ಪ್ರಕಾರಕ್ಕೂ ಸೇರಿದವನಾಗಿ ನಮ್ಮ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಅನೇಕ ವರ್ಷಗಳು ಭಾಗವಹಿಸಿದ್ದೇನೆ.

ಆದರೆ, ಈ ಬಾರಿ ಗಣರಾಜ್ಯೋತ್ಸವದಲ್ಲಿ ಹೋಗಿ ಭಾಗವಹಿಸಿದ ಕಾರಣ, ಕೌಂಸಿಲ್‌ ಆಫ್‌ ಇಂಡಿಯನ್‌ ಅಸೋಸಿಯೇಷನ್ನಿನ ಪದಾಧಿಕಾರಿಗಳು ನನ್ನನ್ನು ಗೌರವಿಸಲು ಆಹ್ವಾನಿಸಿದ್ದು. ನಾನು ಕನ್ನಡ ಸಾಹಿತ್ಯಕ್ಕಾಗಿ ಮಾಡಿದ ಕೆಲಸ ಮತ್ತು ಹಿಂದೆ ಮಾಡಿದ ಸಾರ್ವಜನಿಕಸೇವೆಯನ್ನು ಗುರುತಿಸಿ ನನಗೆ ಒಂದು ಫಲಕವನ್ನು ಕೊಟ್ಟು ಗೌರವಿಸಿದರು. ನನ್ನ ಹೆಸರನ್ನು ಸೂಚಿಸುವ ಅಭಿಮಾನಿಗಳು ಯಾರೋ ಹಿಂಬದಿಯಲ್ಲಿ ಇದ್ದಿರಬೇಕು. ಮತ್ತು, ಆ ಸೂಚನೆಯನ್ನು ಅನುಮೋದಿಸುವ ಸಜ್ಜನರೂ ಇದ್ದಿರಲೇ ಬೇಕು. ಅವರಿಗೆಲ್ಲ ನನ್ನ ಕೃತಜ್ಞತೆಗಳು. ಅಂಥ ಅಭಿಮಾನಿಗಳು ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ. ಈ ಲೇಖನವನ್ನು ಮುಗಿಸುವ ಮುನ್ನ ಕಾರ್ಯಕ್ರಮದ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಸುಳಿದುಹೋದ ಒಂದೆರಡು ಮುಖ್ಯ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು.

 1. 'ಜನಗಣಮನ" ಹಾಡುವಾಗ ಎಲ್ಲರೂ ದನಿಗೂಡಿಸುವಂತೆ 'ಓ ಸೇ ಕ್ಯಾನ್‌ ಯೂ ಸೀ"ಯನ್ನು ನಾವೆಲ್ಲ ಹಾಡುವುದು ಯಾವಾಗ? ಶಬ್ದಗಳನ್ನು ಘಟ್ಟುಮಾಡಿ ಸರಿಯಾದ ಶ್ರುತಿಯಲ್ಲಿ ಹಾಡಲು ಅನೇಕ ವರ್ಷಗಳಿಂದ ಈ ದೇಶದ ಪ್ರಜೆಗಳಾಗಿರುವ ನಮಗೆ ಏಕೆ ಸಾಧ್ಯವಾಗುವುದಿಲ್ಲ? ಇದು ಅಸಡ್ಡೆಯೇ, ಅಥವಾ ನಾವು ನಿಜವಾಗಿ ಅಮೆರಿಕವನ್ನು ಪ್ರೀತಿಸುವುದಿಲ್ಲವೇ, ಅಥವಾ 'ಕಾನೂನಿನ ದೃಷ್ಟಿಯಲ್ಲಿ ನಾವು ಅಮೆರಿಕನ್‌ ಆಗಿದ್ದರೂ ಹೃದಯಾಂತರಾಳದಲ್ಲಿ ಇನ್ನೂ ಭಾರತೀಯರಾಗೇ ಇದ್ದೀವಾ?" ಎಂಬ ಪ್ರಶ್ನೆ ನನ್ನನ್ನು ಬಾಧಿಸಿತು.
 • ಅಮೆರಿಕನ್ನರು ಭಾರತೀಯರ ಬಗ್ಗೆ ಒಳ್ಳೆ ಮಾತುಗಳನ್ನಾಡಿದಾಗ, ಉದಾಹರಣೆಗೆ, 'ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ," 'ಅಮೆರಿಕಾ, ಚೈನಾಗಳನ್ನು ಬಿಟ್ಟರೆ ಭಾರತದ ವಾರ್ಷಿಕ-ಆರ್ಥಿಕ-ಬೆಳವಣಿಗೆ ಮಿಕ್ಕೆಲ್ಲ ದೇಶಗಳಿಗಿಂತ ದೊಡ್ಡದು" ಮುಂತಾಗಿ ಹೊಗಳಿದಾಗ ನಮಗಾಗುವ ಪುಳಕ, 'ಅಮೆರಿಕ ಜಗತ್ತಿನ ಅತಿ ಪುರಾತನ ಮತ್ತು ಅತಿ ಶಕ್ತಿಶಾಲಿ ಪ್ರಜಾಪ್ರಭುತ್ವ" ಎಂದಾಗ ಏಕೆ ಆಗುವುದಿಲ್ಲ?
 • ಅಮೆರಿಕದ ಪೌರರಾದ ನಮ್ಮಂಥ ಭಾರತೀಯರು, ನಾವು, ನಮ್ಮದು ಎಂದಾಗ ನಿಜವಾಗಿ ಭಾರತೀಯರು ಭಾರತದ್ದು, ಎಂಬರ್ಥದಲ್ಲಿ ಮಾತಾಡುತ್ತೇವೋ, ಅಥವಾ ಅಮೆರಿಕನ್ನರು, ಮತ್ತು ಅಮೆರಿಕನ್ನರದ್ದು ಎಂಬರ್ಥದಲ್ಲಿ ಮಾತಾಡುತ್ತೇವೋ?
 • ಇಲ್ಲೇ ಹುಟ್ಟಿ ಬೆಳೆದ ನಮ್ಮ ಮಕ್ಕಳು ನಮ್ಮಂತೆಯೇ ಚಿಂತಿಸುತ್ತಾರೆಯೇ ಅಥವಾ ಅವರಿಗೆ ನಮಗಿರುವ ದ್ವಂದ್ವ, ತ್ರಿಶಂಕುತನ, ಮತ್ತು ಧರ್ಮಸಂಕಟಗಳ ಕಾಟವಿಲ್ಲವೇ?
 • ಹುಟ್ಟಾ ಅಮೆರಿಕನ್ನರಾದ ನಮ್ಮ ಮಕ್ಕಳಿಗೆ ಮನೆಯಲ್ಲಿ ಭಾರತೀಯ ಪರಿಸರ, ಹೊರಗೆ ಅಮೆರಿಕದ ಸ್ವಚ್ಛಂದ ವಾತಾವರಣ ಇರುವುದರಿಂದ ಅವರು ಎಡಬಿಡಂಗಿಗಳಾಗುತ್ತಾರೆಯೇ? ಅವರು ಭಾರತೀಯತೆಯನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬೇಕು? ಒಂದೆರಡು ತಲೆಮಾರುಗಳು ಕಳೆದಮೇಲೆ ಪರಿಸ್ಥಿತಿ ಏನಾಗಬಹುದು?
 • ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತ ನಿಮ್ಮಬಳಿ ಒಳ್ಳೆಯ ಉತ್ತರಗಳಿದ್ದರೆ ಅವುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿರಿ ಎನ್ನುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more