ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಆಪ್ತಮಿತ್ರನ ಭೇಟಿ ಆಯಿತು!

By * ಡಾ. ಮೈ.ಶ್ರೀ. ನಟರಾಜ
|
Google Oneindia Kannada News

ಹಲವಾರು ವಾರಗಳ ಹಿಂದೆ ಈ ಅಂಕಣದಲ್ಲಿ ಕನ್ನಡ ಸಿನಿಮಾ ಬಗ್ಗೆ ಬರೆದು- ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ನಿಸ್ಸಂದೇಹವಾಗಿ- ಅನೇಕ ಜನರನ್ನು ಉದ್ರೇಕಗೊಳಿಸಿದ್ದೆ. ಜಾಲತರಂಗವನ್ನು ತಪ್ಪದೇ ಓದುವವರಲ್ಲದೇ ಇನ್ನೂ ಅನೇಕರು ನನ್ನ ' ನೋಡಲಾರೆ ಕನ್ನಡ ಚಿತ್ರ ’ ಲೇಖನವನ್ನೋದಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು. ಆ ಪ್ರತಿಕ್ರಿಯೆಗಳಲ್ಲಿ ಆಯ್ದ ಮುಖ್ಯಾಂಶಗಳೂ ಅವಕ್ಕೆ ನಾನು ಕೊಟ್ಟ ಸಮಾಧಾನಗಳೂ/ವಿವರಣೆಗಳೂ ಸಹ 'ದುವೆ ಕನ್ನಡ’ ಓದುಗರಿಗೆ ಲಭಿಸಿದ್ದವು. ನನಗೆ ಬಂದ ಲೆಕ್ಕವಿಲ್ಲದಷ್ಟು ಈ-ಮೈಲುಗಳಲ್ಲಿ ಅನೇಕರು ನನ್ನ ವಾದಗಳನ್ನು ಒಪ್ಪಿ ಬರೆದಿದ್ದರು, ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಸಿಟ್ಟಿಗೆದ್ದಿದ್ದರು. 'ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ (ಅಂ)ಕಣಕ್ಕೆ ಇಳಿದಮೇಲೆ ಗುದ್ದಿಸಿಕೊಳ್ಳುವುದಕ್ಕೂ ತಯಾರಿರಬೇಕು’ ಎಂಬ ಸತ್ಯವನ್ನು ಚೆನ್ನಾಗಿ ಬಲ್ಲೆನಾಗಿ, ನಾನು ಘಾಸಿಗೊಳ್ಳದೇ ಕಣದಿಂದ ಹೊರಬಂದಿದ್ದೆ. ಹಾಗೆ ಒಮ್ಮೊಮ್ಮೆ ಓದುಗರಿಂದ ಗುದ್ದಿಸಿಕೊಂಡಾಗ ಬರಹಗಾರನ ವ್ಯಕ್ತಿತ್ವಕ್ಕೆ ಒಂದು ರೀತಿಯ ಸಂಸ್ಕಾರ ಉಂಟಾಗುತ್ತದೆ ಎಂಬ ವಿಚಾರವನ್ನೂ ಜಾಲತರಂಗದ ಓದುಗ-ಬಂಧುಗಳೊಂದಿಗೆ ಹಿಂದೆಯೇ ಹಂಚಿಕೊಂಡಿದ್ದೇನೆ. (ಅಳಿಸಿ ಹೋಗುತ್ತಿರುವ ಸಂಖ್ಯೆಗಳನ್ನು ಮತ್ತೆ ಮೈಲುಗಲ್ಲಿನ ಮೇಲೆ ತಿದ್ದುವ 'ರೀ ಕ್ಯಾಲಿಬ್ರೇಷನ್‌’ ಎಂಬ ಕ್ರಿಯೆ ಅದು.)

'ಕಹಿ ಸತ್ಯಗಳ ನಡುವೆಯೂ ಕನ್ನಡ ಪ್ರೀತಿಯನ್ನು ಉಳಿಸಿಕೊಳ್ಳುವ’ ಸಂದೇಶಗಳ ನಡುವೆ ಹತ್ತಾರು ಓದುಗ ಮಿತ್ರರು ಉತ್ತಮ ಕನ್ನಡಚಿತ್ರಗಳ ಪಟ್ಟಿಯನ್ನೇ ಒದಗಿಸಿದ್ದರು. ಅವುಗಳ ಪೈಕಿ ಎಲ್ಲ ಚಿತ್ರಗಳೂ ವಾಷಿಂಗ್‌ಟನ್ನಿ ಗೆ ಬಂದಿಲ್ಲ. ಅನೇಕರ ಮೆಚ್ಚುಗೆಯನ್ನು ಪಡೆದ ಎರಡೋ ಮೂರೋ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಅವುಗಳಲ್ಲಿ ನನಗೆ ನೋಡಲಾಗಿದ್ದು,'ಜೋಕ್‌ ಫಾಲ್ಸ್‌’ ಮತ್ತು 'ಆಪ್ತಮಿತ್ರ’. ಜೋಕ್‌ ಫಾಲ್ಸ್‌ ಪರವಾಗಿಲ್ಲ, ತಮಾಷೆಯಾಗಿತ್ತು. ಅದರ ಬಗ್ಗೆ ಬರೆಯಲೇಬೇಕೆಂಬ ಒತ್ತಡ ಬರಲಿಲ್ಲ.

ಮೊನ್ನೆ ಕಾವೇರಿ ಕನ್ನಡ ಸಂಘದವರು ಏರ್ಪಡಿಸಿದ್ದ 'ಆಪ್ತಮಿತ್ರ’ ಚಿತ್ರ ಪ್ರದರ್ಶನದಲ್ಲಿ ನಿರ್ಮಾಪಕ ದ್ವಾರಕೀಶ ಅವರನ್ನು ಪ್ರತ್ಯಕ್ಷವಾಗಿ ನೋಡುವ, ಕೈಕುಲುಕುವ ಮತ್ತು ಅವರ ನಾಲ್ಕು ಸಿಹಿ ಕನ್ನಡ ಮಾತುಗಳನ್ನು ಕೇಳುವ ಸುಯೋಗ ಸಹ ದೊರಕಿತು. ಸುಮಾರು ಮೂರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ನೋಡಿದ್ದಾಗ ಹೇಗಿದ್ದರೋ ಈಗಲೂ ಹಾಗೇ ಇರುವುದನ್ನು ಕಂಡು ಮನಸಾರೆ ಅಚ್ಚರಿ ಪಟ್ಟೆ. ಅಂದು ಸಿನಿಮಾಕ್ಕೆ ಬಂದಿದ್ದ ಅನೇಕ ಸ್ನೇಹಿತರು ಸಹಜವಾಗೇ ಹಲವು ಸವಾಲುಗಳನ್ನು ಎಸೆದರು. 'ಏನಪ್ಪ ಜಾಲತರಂಗದಲ್ಲಿ ಮುಂದಿನ ಲೇಖನ ಆಪ್ತಮಿತ್ರನ ಬಗ್ಗೇ ತಾನೆ? ಕೆಟ್ಟ ಸಿನಿಮಾ ನೋಡಿ ಬರೀ ನೆಗೆಟಿವ್‌ ಕಾಮೆಂಟ್ಸ್‌ ಮಾತ್ರ ಬರೆದು, ಒಳ್ಳೆಯದನ್ನು ನೋಡಿದಾಗ ಪಾಸಿಟಿವ್‌ ಕಾಮೆಂಟ್ಸ್‌ ಬರೀದೇ ಹೋದ್ರೆ ಸುಮ್ಮನೇ ಬಿಡ್ತೀವಾ?’ ಅಂತ ಬೇರೆ ಕೆಲವರು ಹೆದರಿಸಿದರು! ಮತ್ತೆ ಕೆಲವರು ಕೈಜೋಡಿಸಿ ದಯವಿಟ್ಟು ಕನ್ನಡ ಚಿತ್ರಗಳು ಕೆಟ್ಟವೆಂಬಂತೆ ಬರೆಯಬೇಡಿ ಎಂದು ಕಳಕಳಿಯಿಂದ ಪ್ರಾರ್ಥಿಸಿದರು. ನನಗೆ ಯಾರ ಮೇಲೂ ಕೊಡಲೀ ಮಸೆಯುವ ಅಗತ್ಯವಾಗಲೀ ಅಭ್ಯಾಸವಾಗಲೀ ಇಲ್ಲ. 'ಜಾಲತರಂಗ’ ಸಿನಿಮಾ ವಿಮರ್ಶೆಯ ಅಂಕಣವಂತೂ ಅಲ್ಲ. ಆದರೂ, 'ಆಪ್ತಮಿತ್ರ’ ಚಿತ್ರದ ಬಗ್ಗೆ ನಾಲ್ಕು ಮಾತುಗಳನ್ನು ಬರೆಯುವುದೇ ಸಮಂಜಸವೆಂದು ನಿರ್ಧರಿಸಿಕೊಂಡೆ. 'ತುಂಟಾಟ’ದಲ್ಲಿ ಪ್ರಾರಂಭವಾದ ಚರ್ಚೆಗೆ 'ಆಪ್ತಮಿತ್ರನಿಂದ’ ಪರಿಸಮಾಪ್ತಿ ದೊರಕಲಿ.

'ಆಪ್ತಮಿತ್ರ’ ಚಿತ್ರದ ಬಗ್ಗೆ ಅನೇಕರು ಹೇಳಿದ್ದ ಮಾತುಗಳನ್ನು ಬಿಟ್ಟರೆ ನಾನು ಯಾವ ವಿಮರ್ಶೆಗಳನ್ನೂ ಓದಿರಲಿಲ್ಲ. ಅದು ದೆವ್ವ-ಭೂತಗಳ ಕಥಾವಸ್ತು ಹೊಂದಿದೆ ಎಂಬ ವಿಷಯ ಸಹ ನನ್ನ ಪಾಲಿಗೆ ಒಂದು 'ಸಸ್ಪೆನ್ಸ್‌’ ಆಗಿದ್ದು ಒಂದುರೀತಿಯಲ್ಲಿ ಒಳ್ಳೆಯದೇ ಆಯಿತು. ' ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ತೆರೆದ ಮನಸ್ಸಿನಿಂದ ಸಿನಿಮಾ ನೋಡಿ ಖುಷಿಪಡಿ’ ಎಂದು ಒಬ್ಬ ಓದುಗರು ಕೊಟ್ಟಿದ್ದ ಸಲಹೆಯ ಮೇರೆಗೆ ಹೋಗಿ ಕೂತರೂ, ಅಷ್ಟೊಂದು ಜನ ಹೇಳಿದ ಮೇಲೆ ಚಿತ್ರ ಚೆನ್ನಾಗಿರಲೇಬೇಕೆಂಬ ನಿರೀಕ್ಷೆ ಮನಸ್ಸಿನಲ್ಲಿ ಬೇರೂರಿ ಆಗಿತ್ತು. ಹೀಗಾಗಿ, ಚಿತ್ರ ಚೆನ್ನಾಗಿರದೇ ಹೋಗಿದ್ದರೆ ಮನಸ್ಸಿಗೆ ತುಂಬಾ ನಿರಾಸೆಯಾಗುವ ಸಾಧ್ಯತೆ ಇತ್ತು. ಹಾಗಾಗದೇ ಇರಲಿ ಎಂದು ದೇವರಲ್ಲಿ ಮೊರೆ ಇಟ್ಟೆ. ಈ ಬಾರಿ, ಚಿತ್ರ ನೋಡಲು ಮಕ್ಕಳು ಬರಲಿಲ್ಲ, ಅರ್ಧಾಂಗಿ ಬಂದಳು. ದೆವ್ವ-ಭೂತದ ಮಾತು ಶುರುವಾದದ್ದೇ ತಡ, ನನಗೆ ಸ್ವಲ್ಪ ಆತಂಕ ಶುರುವಾಯಿತು, ಅರ್ಧಾಂಗಿ ಏನೇನೆನ್ನುವಳೋ ಎಂಬ ಅಳುಕನ್ನು ಅನುಭವಿಸುತ್ತಿರುವಾಗಲೇ ಕುತೂಹಲ ಹುಟ್ಟಿಸುವ ಕಥಾವಸ್ತು ಮನಸ್ಸನ್ನು ಆವರಿಸಿಕೊಂಡಿತು.

A still from Apthamitraಚಿತ್ರ ನೋಡುತ್ತ ನೋಡುತ್ತ, ಕ್ರಮೇಣ ಆತಂಕ ಕಮ್ಮಿಯಾಯಿತು. ನಟ ನಟಿಯರ ಅಭಿನಯ ಉತ್ತಮವಾಗಿತ್ತು, ಕೇವಲ ಮುಖ್ಯಪಾತ್ರಗಳದ್ದು ಮಾತ್ರ ಅಲ್ಲ, ಎಲ್ಲ ಪಾತ್ರಗಳದ್ದೂ! ಇದು ಒಂದು ವಿಶೇಷವೇ ಸರಿ. ಸಂಗೀತ ನೃತ್ಯಗಳೂ ಉತ್ತಮ ಮಟ್ಟದವಾಗಿದ್ದವು, ಇದೂ ಮತ್ತೊಂದು ವಿಶೇಷ. ಕಥೆ 'ಅನಯೂಷಯಲ’ ಅನ್ನಬೇಕು. ಅತಿಮಾನುಷ ಕ್ರಿಯೆಗಳಿಂದ ಕೂಡಿದ ಕಥಾವಸ್ತುವಿನ ಕಾರಣದಿಂದ ಅಲ್ಲಿನ ಸನ್ನಿವೇಶಗಳನ್ನು ಯಾವ ತರ್ಕಕ್ಕೂ ಒಡ್ಡುವುದು ಸಾಧ್ಯವಿಲ್ಲ. ಅದರಿಂದ ವಿಮರ್ಶಕ ಮನಸ್ಸಿಗೆ ವಿದಾಯ ಹೇಳಿ ಹಗುರವಾದ ಮನಸ್ಸಿನಿಂದ ಸಿನಿಮಾ ನೋಡಬಹುದು. ಆದರೆ, ಮನೋವಿಜ್ಞಾನಿಯು ಪರೇಙ್ಗಿತ-ಜ್ಞಾನಿಯಾದಾಗ (ಅಂದರೆ, ಇತರರ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಅರಿತಿರುವ 'ಮೈಂಡ್‌ ರೀಡರ್‌’ ಆದಾಗ) ಅದನ್ನು ತಮಾಷೆ ಎಂದು ಪರಿಗಣಿಸಿ ಮುಂದೆ ಸಾಗಬೇಕಷ್ಟೇ. ಚಿತ್ರ ತಾಂತ್ರಿಕವಾಗಿ ಪ್ರಶಸ್ತವಾಗಿತ್ತು. ವಿಷ್ಣು ಈಗಲೂ ಚೆನ್ನಾಗಿ ಕುಣಿಯುವುದು ಬಡಿದಾಡುವುದೂ ಮುಂತಾದ ಸಾಹಸಗಳನ್ನು ಮಾಡುವುದನ್ನು ಕಂಡರೆ ಸ್ವಲ್ಪ ಆಶ್ಚರ್ಯವೇ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಮಾತುಗಳು ಮತ್ತು ನಡವಳಿಕೆಗಳಲ್ಲಿ ಅಶ್ಲೀಲವಿಲ್ಲದಿರುವುದು ತುಂಬಾ ಸಮಾಧಾನದ ವಿಷಯ.

ಮನೆಮಂದಿಯಾಂದಿಗೆ ಸಿನಿಮಾ ನೋಡುವಾಗ ಮುಜುಗರವಾಗದಂತೆ ನಿರ್ದೇಶಕರು ಶ್ರಮವಹಿಸಿರುವುದು ಪ್ರಶಂಸನೀಯ. ಮಾಟ-ಮಂತ್ರ, ದೆವ್ವ ಬಿಡಿಸುವ ದೃಶ್ಯಗಳು ಒಳ್ಳೇ ಆಥೆಂಟಿಕ ಆಗಿದ್ದವು. ಅದರಲ್ಲೂ ಮಂತ್ರವಾದಿಯ ವೇಷದಲ್ಲಿ ಮುಖ್ಯ ಪೂಜಾರಿಯ ಕಳೆ ಹೇಗಿತ್ತೆಂದರೆ ದೆವ್ವ ನಡುಗಿ ಓಡಬೇಕು! ಬೇರೆ-ಬೇರೆ ಪಾತ್ರಗಳ ಮೇಲೆ ಗುಮಾನಿ ಬರುವಂತೆ ಜಾಣ್ಮೆಯಿಂದ ಹೆಣೆದ ಕಥೆ ಕೊನೆಯವರೆಗೂ ಕುತೂಹಲವನ್ನು ಕಳೆದುಕೊಳ್ಳದಂತೆ ಕಥೆಯ ಓಟ ಸ್ವಾರಸ್ಯಕರವಾಗಿತ್ತು. ಒಟ್ಟಾರೆ ಮನರಂಜನೆಯ ದೃಷ್ಟಿಯಿಂದ ನಿರ್ಮಿಸಿದ ಈ ಚಿತ್ರ ಯಶಸ್ವಿಯಾಗಿರುವುದಕ್ಕೆ, ಬೆಂಗಳೂರಿನಲ್ಲಿ ಒಂದು ವರ್ಷ ತೆರೆಯ ಮೇಲೆ ನಿರಂತರ ಪ್ರದರ್ಶನ ಕಂಡಿರುವುದೇ ಸಾಕ್ಷಿ.

ವಿರಾಮದ ವೇಳೆಯಲ್ಲಿ ಮಾತಾಡಿದ ನಿರ್ಮಾಪಕ ದ್ವಾರಕೀಶರ ಹೇಳಿಕೆ, 'ಎಲ್ಲಾ ಚಿತ್ರಗಳೂ ಚೆನ್ನಾಗಿರುವುದು ಸಾಧ್ಯವಿಲ್ಲ’ ಎಂಬುದು ಸತ್ಯ. ಹಾಗಿರಲೆಂದು ನಿರೀಕ್ಷಿಸುವುದೂ ತಪ್ಪು. ಆದರೆ, ವರ್ಷಕ್ಕೆ ನೂರು ಸಿನಿಮಾ ತೆಗೆದರೆ, ಹತ್ತಿಪ್ಪತ್ತು ಉತ್ಕೃಷ್ಠ ವಾಗಿರಲೆಂದು ಬಯಸುವುದು ತಪ್ಪಲ್ಲ. ಸುಮಾರು ಅರ್ಧದಷ್ಟು ಸರಾಸರಿಯಾಗಿರಲೆಂದು ಬಯಸುವುದೂ ಅಷ್ಟೇನೂ ಅನ್‌ರಿಯಲಿಸ್ಟಿಕ್‌ ಅಲ್ಲ. (ಶಾಲೆಯ ಮಕ್ಕಳೆಲ್ಲಾ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಬೇಕೆಂದು ಬಯಸಿದರೆ ನಿರಾಸೆ ಖಂಡಿತ, ಆದರೆ ಶೇಕಡಾ 50ರಷ್ಟು ಸರಾಸರೀ ಅಂಕಗಳನ್ನು ಪಡೆದು ತೇರ್ಗಡೆಯಾಗಲೆಂದು ಬಯಸುವುದು ತಪ್ಪಲ್ಲ.) ಅಂತೂ ಅಂಥ ಹತ್ತಿಪ್ಪತ್ತು ಉತ್ಕೃಷ್ಠ ಚಿತ್ರಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಿದರೆ ಸಾಕು (ಮಿಕ್ಕವನ್ನು ದೊಡ್ಡ ತೆರೆಗೆ ಬೇಡ, ಡಿವಿಡಿ ಮಾಡಿ ಕಳಿಸಿ ಬಿಡಿ, ನೋಡುವವರು ತಮ್ಮ ಅನುಕೂಲ ಮತ್ತು ಸಮಯಕ್ಕೆ ತಕ್ಕಂತೆ ನೋಡಲಿ ಅದಕ್ಕೆ ಯಾರದೂ ಅಡ್ಡಿಯಿಲ್ಲ, ಇರಕೂಡದು) .

ಮುಗಿಸುವ ಮುನ್ನ ಒಂದು ಮುಖ್ಯ ಮಾತು ಹೇಳದಿದ್ದರೆ ಲೋಪವಾದೀತು. ಚಿತ್ರದ ಪರಾಕಾಷ್ಠೆಯಲ್ಲಿ ನರ್ತಕಿಯ ಭೂತ ಮೆಟ್ಟಿದಾಗ ಸೌಂದರ್ಯಳ ನಟನೆ ಶ್ಲಾಘನೀಯವಾಗಿತ್ತು. ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರಪ್ರೇಮಿಗಳ ಮನಸ್ಸನ್ನು ಸೂರೆಗೊಂಡ, ಹೆಸರಿಗೆ ತಕ್ಕಂತೆ ಅನ್ವರ್ಥನಾಮಳಾಗಿದ್ದ 'ಸೌಂದರ್ಯ’ ಅಪಘಾತಕ್ಕೀಡಾದದ್ದು ಕನ್ನಡ ಚಿತ್ರರಂಗಕ್ಕಾದ ತುಂಬಲಾಗದ ನಷ್ಟ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನ ವರೆಗೆ.

English summary
Aptamitra, a Kannada movie is really a mass entertainer and the performance of artistes in the movie is excellent. Jalataranga columnist writes about Apthamitra shown in US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X