• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರು ಹಿತವರು ನಿನಗೆ? ದೇವರೋ ದೇಶವೋ?

By * ಡಾ. ಮೈಶ್ರೀ ನಟರಾಜ್
|

ಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ ಮತ್ತು ಅದರ ಹಿನ್ನೆಲೆ ಹೀಗಿದೆ.

ಇಸವಿ 2000ದಲ್ಲಿ ರಾಯ್‌ ಮೂರ್‌ ಅಲಬಾಮಾದ ನ್ಯಾಯಾಲಯ ಒಂದರ ಮುಖ್ಯನ್ಯಾಯಾಧೀಶನಾಗಿ ಚುನಾಯಿತನಾದ (ಹೌದು, ಅಮೇರಿಕದಲ್ಲಿ ಅನೇಕ ನ್ಯಾಯಾಧೀಶರು ಮತದಾನದ ಮೂಲಕ ಚುನಾಯಿತರಾದವರೇ!). ಚುನಾಯಿತನಾದ ಕೂಡಲೇ ಅವನ ಇಚ್ಚೆಯ ಮೇರೆಗೆ ಸುಮಾರು 5000 ಪೌಂಡ್‌ ತೂಕದ ಕಲ್ಲಿನ ಒಂದು ಸ್ಮಾರಕವನ್ನು ಪ್ರಾಂತೀಯ ನ್ಯಾಯಾಲಯದ ಕಟ್ಟಡದಲ್ಲಿ ತಂದಿರಿಸಲಾಯಿತು. ಆ ಸ್ಮಾರಕದಲ್ಲಿ ಭಗವಂತನೇ (ಯೆಹೂದ್ಯನಾಯಕ ಮೋಸೆಸ್‌ ಮೂಲಕ) ಮನುಷ್ಯ ಮಾತ್ರದವರಿಗೆ ಕೊಟ್ಟನೆನ್ನಲಾದ 'ಹತ್ತಾಣತಿ" (Ten Commandments) ಗಳನ್ನು ಕೆತ್ತಲಾಗಿತ್ತು.

ರಿಚರ್ಡ್‌ ಕೋಹೆನ್‌ ಎಂಬ ವಕೀಲ (ಈತ 'ದಾಕ್ಷಿಣಾತ್ಯ ಬಡವರ ಬಂಧು") ಅನೇಕ ಸಂಸ್ಥೆಗಳ ಸಹಾಯದಿಂದ ರಾಯ್‌ ಮೂರ್‌ ವಿರುದ್ಧ ದಾವೆ ಹೂಡಿ 'ಯಾವುದೇ ಸರ್ಕಾರದ ಪ್ರತಿನಿಧಿ ಧಾರ್ಮಿಕ ಪಕ್ಷಪಾತಿಯಾಗಕೂಡದು, ಕ್ರೈಸ್ತ ಧರ್ಮದ ನಂಬಿಕೆಗಳಿಗೆ ಮೂಲಾಧಾರವಾದ 'ಹತ್ತಾಣತಿ"ಗಳನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸುವುದು ಸಮಂಜಸವಲ್ಲ" ಎಂದು ವಾದಿಸಿದ. ಕೇಂದ್ರ ಸರ್ಕಾರದ ನ್ಯಾಯಾಧೀಶರಲ್ಲೊಬ್ಬನಾದ ಮೈರನ್‌ ಥಾಂಸನ್‌ ಎಂಬಾತ ಈ ಪ್ರಕರಣದಲ್ಲಿ ವಾದ-ಪ್ರತಿವಾದಗಳನ್ನು ಕೇಳಿ, 'ಕ್ರೈಸ್ತಧರ್ಮದ ಪ್ರತೀಕವಾದ ಈ ಕಲ್ಲಿನ ಸ್ಮಾರಕವನ್ನು ಸರ್ಕಾರೀ ಕಟ್ಟಡದಲ್ಲಿ ಪ್ರದರ್ಶಿಸುವುದು ಅಮೇರಿಕದ ಜಾತ್ಯತೀತ ಸಂವಿಧಾನದ ಮೂಲಭೂತ ನಂಬಿಕೆಗೆ ವಿರುದ್ಧವಾಗಿದೆ ಎಂದು ತೀರ್ಪಿತ್ತನು. ಆಷ್ಟೇ ಅಲ್ಲದೇ 2.6 ಟನ್‌ಗಳಷ್ಟು ತೂಕದ ಈ ಗ್ರಾನೈಟ್‌ ಕಲ್ಲಿನ ಸ್ಮಾರಕವನ್ನು ಸರ್ಕಾರೀ ಭವನದ ಗುಂಬಸ್‌ ಕೆಳಗಿಂದ ತೆಗೆದು ಹಾಕಬೇಕೆಂದು ಆಜ್ಞೆ ಹೊರಡಿಸಿದನು. ಆದರೆ ರಾಯ್‌ ಮೂರ್‌ ಈ ತೀರ್ಪನ್ನು ತಿರಸ್ಕರಿಸಿ, ಸ್ಮಾರಕವನ್ನು ತೆಗೆಯುವುದಿಲ್ಲವೆಂದು ಹಟ ಮಾಡಿದಾಗ ಅವನ ಎಂಟು ಸಹೋದ್ಯೋಗಿ ನ್ಯಾಯಮೂರ್ತಿಗಳು ಅವನ ಅವಿಧೇಯತೆಯನ್ನು ಖಂಡಿಸಿದರು. ಉನ್ನತ ನ್ಯಾಯಾಲಯವು ರಾಯ್‌ ಮೂರ್‌ನನ್ನು ನ್ಯಾಯಾಧೀಶನಾಗಿರಲು ನಾಲಾಯಕ್ಕೆಂದು ತೀರ್ಮಾನಿಸಿ ಅವನನ್ನು ಕೆಲಸದಿಂದ ವಜಾ ಮಾಡಲಾಯಿತು.

ಈ ಪ್ರಕರಣ ನಡೆದ ಕೂಡಲೇ ರಾಯ್‌ ಮೂರ್‌ನ ಪ್ರಸಿದ್ಧಿ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಅನೇಕ ಕ್ರೆೃಸ್ತ ಸಂಸ್ಥೆಗಳು ಅವನ ಪರ ವಹಿಸಿ ಹೋರಾಟ ಪ್ರಾರಂಭಿಸಿವೆ. ಈಗ ಈತ, ಧರ್ಮ, ದೇವರು, ದೇಶ ಇತ್ಯಾದಿಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ನಿರರ್ಗಳವಾಗಿ ಹಂಚಿಕೊಳ್ಳುತ್ತಿದ್ದಾನೆ. ಅವನಂತೆಯೇ ಚಿಂತಿಸುವ ಅನೇಕ ದಾಕ್ಷಿಣಾತ್ಯರಿಗೆ ಅವನು ಒಬ್ಬ ದೇವದೂತನಂತೆ ಕಾಣುತ್ತಿದ್ದಾನೆ. 'ನಮ್ಮ ನ್ಯಾಯಾಲಗಳನ್ನು ಮತ್ತು ನಮ್ಮ ದೇಶವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು, ಭಗವಂತ, ಈ ಕ್ಷಣವನ್ನ, ಈ ಸ್ಥಳವನ್ನ, ಆಯ್ದುಕೊಂಡಿದ್ದಾನೆ," ಎಂದು ಘೋಷಿಸಿ, 'ದೇಶದ ಕಾನೂನಿಗಿಂತ ದೇವರ ಕಾಯಿದೆಗೇ ನಾನು ಹೆಚ್ಚು ಬೆಲೆಕೊಡುತ್ತೇನೆ," ಎಂದಿದ್ದಾನಲ್ಲದೇ ತನ್ನ ಕೃತ್ಯಕ್ಕಾಗಿ ಸ್ವಲ್ಪವೂ ಪಶ್ಚಾತ್ತಾಪವಿಲ್ಲವೆಂದು ಘಂಟಾಘೋಷವಾಗಿ ಸಾರಿದ್ದಾನೆ.

ಈತ ಸಾಧಾರಣನಲ್ಲ . ಒಳ್ಳೆಯ ವಿದ್ಯಾವಂತ, ಬುದ್ಧಿವಂತ, ಹಾಗೂ ದೇಶಕ್ಕಾಗಿ ಸೈನ್ಯದಲ್ಲಿ ದುಡಿದವ, ಅನೇಕ ಸೇವಾ ಸಂಸ್ಥೆಗಳಿಂದ ಪದಕ, ಪಾರಿತೋಷಕಗಳನ್ನು ಪಡೆದವ. ಅವನ ಇತ್ತೀಚಿನ ಹೇಳಿಕೆಯ ಪ್ರಕಾರ, 'ಈ ವಿವಾದ ನನ್ನ ಬಗ್ಗೆಯೂ ಅಲ್ಲ, 'ಹತ್ತಾಣತಿಯ" ಬಗ್ಗೆಯೂ ಅಲ್ಲ, ಧರ್ಮದ ಬಗ್ಗೆ ಮೊದಲೇ ಅಲ್ಲ" ಎನ್ನುತ್ತಾನೆ. 'ಕ್ರೈಸ್ತರೆಲ್ಲ ಒಂದಾಗಿ ನಿಂತು ಭಗವಂತ ನಮ್ಮಲ್ಲಿಟ್ಟಿರುವ ಜ್ಯೋತಿಗನುಗುಣವಾಗಿ ವರ್ತಿಸಬೇಕಾದ ಕಾಲವಿದು" ಎಂದು ಗುಡುಗುತ್ತಾನೆ.

ರಾಯ್‌ ಮೂರ್‌ನ ಚಿಂತನೆಗಳ ಬಗ್ಗೆ ಸಹಾನುಭೂತಿಯುಳ್ಳವರ ಸಂಖ್ಯೆ ಅಮೇರಿಕದಲ್ಲಿ ದಿನೇದಿನೇ ಬೆಳೆಯುತ್ತಿದೆ. ಜಾರ್ಜ್‌ ಡಬ್ಲ್ಯುಬುಷ್‌ ಮೊದಲ್ಗೊಂಡು ಅನೇಕ ಬಲಪಂಥೀಯರಿಗೆ ಅಮೇರಿಕವನ್ನು ಮೂಲತಃ ಕ್ರೈಸ್ತ ಮೌಲ್ಯಗಳ ರಾಜ್ಯವನ್ನಾಗಿಸಬೇಕೆಂಬ ಉತ್ಕಟೇಚ್ಛೆ ಇದ್ದಂತಿದೆ. ಸೆಪ್ಟೆಂಬರ್‌ 11ರ ದುರಂತವನ್ನು ಇಂಥಾ ಬಲಪಂಥೀಯರು ದುರುಪಯೋಗಪಡಿಸಿಕೊಂಡು ಉಗ್ರವಾದಿಗಳನ್ನು ನಿರ್ಮೂಲ ಮಾಡುವೆವೆಂಬ ಸಬೂಬಿನಲ್ಲಿ ತಮ್ಮದೇ ಆದ ಪ್ರತ್ಯುಗ್ರವಾದಿಗಳನ್ನು ಹುಟ್ಟುಹಾಕುತ್ತಿರುವಂತೆ ತೋರುತ್ತಿದೆ. ಈ ಮೇಲಿನ ಹಿನ್ನೆಲೆಯಲ್ಲಿ ಪ್ರಪಂಚದ ಇತರ ಕೆಲವು ಭಾಗಗಳನ್ನೊಮ್ಮೆ ನೋಡುವ.

ಅರಬ್‌ ದೇಶಗಳನ್ನೇ ತೆಗೆದುಕೊಳ್ಳೋಣ. ಅವರ ನಂಬಿಕೆ ಈಗ ಹೇಗಿದೆ ಎಂದರೆ, ಅಮೇರಿಕಾ ಇಡೀ ಮುಸಲ್ಮಾನ ದೇಶಗಳ ಮೇಲೆಲ್ಲ ಯುದ್ಧ ಸಾರಿದೆ. ಅಮೇರಿಕಾ-ಇರಾಕ್‌ ವಿವಾದ ಒಂದು ಮುಸ್ಲಿಮ್‌-ಕ್ರೈಸ್ತ ವಿವಾದ. ಇರಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುಧ್ಧ, ಕ್ರೈಸ್ತ ಮತ್ತು ಮುಸಲ್ಮಾನರ ನಡುವಿನ ಯುದ್ಧ ಎಂದೇ ಅವರು ನಂಬಿಕೊಂಡಂತಿದೆ. ಮುಸಲ್ಮಾನ ಧರ್ಮದ ಅನೇಕ ಉಗ್ರವಾದಿಗಳು ದೇಶಗಳ ಎಲ್ಲೆಗಳ ಬಗ್ಗೆ ಅಥವಾ ದೇಶಗಳ ಸಂವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರು ಹೆದರುವುದು ತಮ್ಮ ದೇವರಾದ 'ಅಲ್ಲಾ"ನಿಗೆ ಮಾತ್ರ. ಮುಂದೆಂದೋ ಎಲ್ಲರೂ ಒಟ್ಟಾಗಿ ಸೇರಿದಾಗ ಅಲ್ಲಾ ಕೇಳುವ ಪ್ರಶ್ನೆಗಳಿಗೆ ಜವಾಬು ಕೊಡಬೇಕಾಗುವುದಷ್ಟೇ? ಹೀಗಾಗಿ, ಅವರು ಭೂಲೋಕದ ನ್ಯಾಯಾಲಯ, ಸಂವಿಧಾನ ಇದಾವುದಕ್ಕೂ ಹೆದರುವುದಿಲ್ಲ. ಅಂದರೆ, ಅಮೇರಿಕದಲ್ಲಿ ರಾಯ್‌ ಮೂರ್‌ ಇರುವಂತೆ, ಅಲ್ಲಿ ಮುಲ್ಲಾ ಓಮರ್‌ಗಳು ಇರುತ್ತಾರೆ. ಈ ಎರಡು ಜಾತಿಯ ಜನರೂ ಮನುಷ್ಯ ಮಾಡಿದ ಕಾನೂನಿಗೆ ಒಳಪಟ್ಟವರಲ್ಲ ಎಂದಂತಾಯಿತು.

ಸೌದೀಅರೇಬಿಯಾದಂಥ ಮುಸ್ಲಿಮ್‌ ದೇಶಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ. ಆ ದೇಶದಲ್ಲಿ ಇತರ ಧರ್ಮಗಳಿಗೆ ಸ್ಥಾನವೇ ಇಲ್ಲ. ಅವರು ಹಣ ಕೊಟ್ಟು ಅನೇಕ ದೇಶಗಳಲ್ಲಿ ಮಸೀದಿಗಳನ್ನು ಕಟ್ಟುವುದಕ್ಕೆ ಉತ್ತೇಜನ ಕೊಡುತ್ತಾರಾದರೂ, ತಮ್ಮ ದೇಶದಲ್ಲಿ ಚರ್ಚ್‌ ಅಥವಾ ದೇವಾಲಯವನ್ನು ಕಟ್ಟುವುದನ್ನು ನಿಷೇಧಿಸುತ್ತಾರೆ. ಆಷ್ಟೇ ಏಕೆ, ಅಲ್ಲಿ ಹೊಟ್ಟೇಪಾಡಿಗಾಗಿ ಅಥವಾ ಹಣ ಸಂಪಾದನೆಗಾಗಿ ಹೋಗಿ ತಾತ್ಕಾಲಿಕವಾಗಿ ನೆಲೆಸಿರುವ ಅನೇಕ ಹಿಂದೂಗಳು ಮನೆಯಲ್ಲಿ ತಮ್ಮಪಾಡಿಗೆ ತಾವು ಮೂರ್ತಿಪೂಜೆ ಮಾಡುವುದಕ್ಕೂ ಅವಕಾಶವಿಲ್ಲ. ಓಸಾಮಾ ಬಿನ್‌ ಲಾಡೆನ್‌ ಗುಂಪಿನ ರಕ್ತಬೀಜರನ್ನು ತಯಾರಿಸುವ ಕಾರ್ಖಾನೆಯಂತಿರುವ ಆ ದೇಶ ಸೆಪ್ಟೆಂಬರ್‌ 11ರ ದುರಂತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾತಕರನ್ನು ಕಳುಹಿಸಿತು. ಆದರೆ ಅಮೇರಿಕಾ ಬಡಿಯುತ್ತಿರುವುದು ಇರಾಕಿಗಳನ್ನ, ಆಫ್ಘನಿಗಳನ್ನ. ಇದು ವಿಶ್ವರಾಜಕೀಯದ ಅರ್ಥಮಾಡಿಕೊಳ್ಳಲಾಗದ ವೈಚಿತ್ರಗಳಲ್ಲಿ ಒಂದು!

ಇನ್ನು ಇಸ್ರೈಲ್‌ ಮತ್ತು ಪ್ಯಾಲಸ್ಟೈನ್‌ನತ್ತ ನೋಡಿದರೆ, ಯೆಹೂದ್ಯರೋ, ತಮ್ಮ ದೇಶವಾದ ಇಸ್ರೈಲ್‌ನ ಉಳಿವಿಗಾಗಿ ಇಡೀ ಪ್ಯಾಲಸ್ಟೈನ್‌ ಜನಾಂಗವನ್ನೇ ನಿರ್ಮೂಲ ಮಾಡಲೂ ಹೇಸುವುದಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ನಿರ್ದಯಿಗಳಾಗುತ್ತಾರೆ. ಅರಬರೂ ಅಷ್ಟೆ, ಯೆಹೂದ್ಯರೊಂದಿಗೆ ಸ್ನೇಹದಿಂದ ಬಾಳಲಾರರು. ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಒಪ್ಪಂದ ಮಾಡಿಕೊಂಡರೂ ಮಾರನೆಯ ದಿನವೇ ಕದನ, ಸ್ಫೋಟ ಇತ್ಯಾದಿಗಳನ್ನು ನಡೆಸಿ ಮುಗ್ಧರನ್ನು ಕೊಲ್ಲುತ್ತಾರೆ, ತಾವೂ ನಿಷ್ಕಾರಣವಾಗಿ ಪ್ರಾಣ ಬಿಡುತ್ತಾರೆ. ಕೊಲ್ಲುವ ಉಗ್ರವಾದಿಗಳೂ, ಕೊಲ್ಲಲ್ಪಡುವ ಅಸಹಾಯಕ ನಿರಪರಾಧಿಗಳೂ, ಈ ಸಾವುನೋವುಗಳನ್ನು ನಿರ್ಧರಿಸುವ ಮುಲ್ಲಾಗಳೂ, ಮತ್ತು ಎಲ್ಲರ ವಿವಶತೆಯ ಲಾಭಪಡೆಯುವ ರಾಜಕಾರಣಿಗಳೂ, ಅವರೆಲ್ಲ ಬೇರೆ ಬೇರೆ ದೇವರ ಭಕ್ತರು. ಅವರು ಮಾಡುವ ಕೃತ್ಯಗಳೆಲ್ಲ ಧರ್ಮ ಮತ್ತು ದೇವರ ಹೆಸರಿನಲ್ಲೇ ಎಂಬುದನ್ನು ಮನವರಿಕೆ ಮಾಡಿಕೊಂಡಾಗ ಇದ್ಯಾವ ದೇವರಿಗೆ ಪ್ರೀತಿ ಎಂಬ ಪ್ರಶ್ನೆ ಏಳುತ್ತದೆಯಲ್ಲವೇ? ಈ ಸಮಸ್ಯೆಗಳಿಗೆ ಭೌಗೋಳಿಕ ಎಲ್ಲೆಗಳಿಲ್ಲ.

ಇನ್ನು ಧರ್ಮಾತೀತ, ಜಾತ್ಯತೀತ, ವರ್ಣಾತೀತ ರಾಮರಾಜ್ಯವೊಂದನ್ನು ಸ್ಥಾಪಿಸುವ ಆದರ್ಶದ ಕನಸುಕಂಡ ನಮ್ಮ ಭಾರತದ ಸ್ಥಿತಿಯಾದರೋ ಹೇಗಿದೆ? ಮಂದಿರ-ಮಸೀದಿಯ ಮುಗಿಯದ ಜಗಳ ಹಿಂದೂ-ಮುಸ್ಲಿಮರ ಮಧ್ಯೆ ಅಶಾಂತಿಯನ್ನು ತಂದಿದೆ. ಅಯೋಧ್ಯೆಯ ರಾಮಮಂದಿರದ ವಿವಾದವನ್ನು ನ್ಯಾಯಾಲಯ ತೀರ್ಮಾನಿಸಲು ಸಾಧ್ಯವಿಲ್ಲವೆಂದು ವಿಶ್ವಹಿಂದೂ ಪರಿಷತ್ತಿನವರು ಆಗಲೇ ಘೋಷಿಸಿದ್ದಾರೆ. ನೂರಾರು ಗುಡಿಗೋಪುರಗಳನ್ನು ಮುಸಲ್ಮಾನ ಆಕ್ರಮಣಕಾರರು ನಾಶಮಾಡಿದರೆಂಬುದು ನಿರ್ವಿವಾದ ಐತಿಹಾಸಿಕ ಸಂಗತಿಯಾಗಿದ್ದಾಗ್ಯೂ, ಮುಸ್ಲಿಮ್‌ ಸೋದರರು ಇದು ತಮಗೆ ಸಂಬಂಧಪಟ್ಟ ಸಮಸ್ಯೆಯೇ ಅಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಪ್ರಾಯಶಃ, ಬಹುಸಂಖ್ಯಾತ ಹಿಂದೂಗಳೊಂದಿಗೆ ಶಾಂತಿಯಿಂದ ಬಾಳುವ ಘನೋದ್ದೇಶದಿಂದ ಕೆಲವು ಬುದ್ಧಿಜೀವೀ ಮುಸಲ್ಮಾನರು ಉದಾರ ಮನೋಭಾವವನ್ನು ತೋರುವ ಇಚ್ಛೆ ವ್ಯಕ್ತಪಡಿಸಿದರೂ, ರಾಜಕಾರಣಿಗಳು ಬಿಡಬೇಕಲ್ಲ ?

ಭಾರತದಿಂದ ಬಂದ ಮತ್ತೊಂದು ಇತ್ತೀಚಿನ ಸುದ್ದಿ ಆತಂಕವನ್ನುಂಟು ಮಾಡಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೂರಾರು ಊರುಗಳಲ್ಲಿ ದೇವಸ್ಥಾನ ಕಟ್ಟಿಸುತ್ತಾರಂತೆ. ದೇವಸ್ಥಾನ/ಮಸೀದಿ/ಇಗರ್ಜಿ ಮುಂತಾದ ಪೂಜಾಮಂದಿರಗಳನ್ನು ಕಟ್ಟುವುದು ಭಕ್ತರ ಕೆಲಸ, ಜಾತ್ಯತೀತ ಸರ್ಕಾರದ ಕೆಲಸವಲ್ಲ. ಪ್ರತಿ ಶಾಲೆಯಲ್ಲೂ ಗಣಕಯಂತ್ರವನ್ನು ತಂದಿಡುವ ಕೆಲಸ ಸರ್ಕಾರಕ್ಕೆ ಸೇರಿದ್ದು, ಅದನ್ನು ಮಾಡುವುದು ಬಿಟ್ಟು ದೇವಸ್ಥಾನ ಕಟ್ಟಿಸುವ ಕೆಲಸಕ್ಕೆ ಈತ ಏಕೆ ಕೈ ಹಾಕಿದರೋ ತಿಳಿಯುತ್ತಿಲ್ಲ. ತಿರುಪತಿ ತಿಮ್ಮಪ್ಪ ಇವರಿಗೆ ಸದ್ಬುದ್ಧಿಯನ್ನು ಕೊಡಲೆಂದು ಪ್ರಾರ್ಥಿಸುವ.

'ನಿಮ್ಮ ದೇವರಿಗಿಂತ ನಮ್ಮ ದೇವರೇ ಮಿಗಿಲು" ಎಂದು ನಂಬಿರುವ ಕ್ರೈಸ್ತಮತ ಪ್ರಚಾರಕರು ಇಡೀ ಪ್ರಪಂಚವನ್ನೆಲ್ಲ ಕ್ರೈಸ್ತಧರ್ಮಕ್ಕೆ ಪರಿವರ್ತಿಸಿಕೊಳ್ಳಲು ಅನೇಕ ಚಟುವಟಿಕೆಗಳನ್ನೂ ಸನ್ನಾಹಗಳನ್ನೂ ಸದ್ದಿಲ್ಲದೇ ನಡೆಸುತ್ತಿದ್ದಾರೆ. ಕತ್ತಿಯನ್ನು ಬಳಸಿಯಾದರೂ ಮುಸಲ್ಮಾನರಲ್ಲದ 'ಕಾಫಿರ"ರನ್ನು ತಮ್ಮ ಆಳ್ವಿಕೆಗೆ ಮತ್ತು ತಮ್ಮ ನಂಬಿಕೆಗೆ ಒಳಪಡಿಸಿಕೊಳ್ಳಲು ಮುಸ್ಲಿಮ್‌ ಉಗ್ರವಾದಿಗಳ ತಂಡಗಳು ವಿಶ್ವದ ನಾನಾ ಭಾಗಗಳಲ್ಲಿ ಸನ್ನದ್ಧವಾಗಿವೆ. ಎರಡೋ ಮೂರೋ ಸಾವಿರ ವರ್ಷಗಳ ಹಿಂದಿನ ಚರಿತ್ರೆಯನ್ನೇ ಆಧಾರವಾಗಿಟ್ಟುಕೊಂಡು ನೆನ್ನೆನೆನ್ನೆಯವರೆಗೂ ವಾಸವಾಗಿದ್ದ ಪ್ಯಾಲೆಸ್ಟೈನ್‌ ಜನರನ್ನು ಹೊರಕ್ಕೆ ತಳ್ಳಿ ಅಮೇರಿಕದ ಸಹಾಯದಿಂದ ಇಸ್ರೈಲ್‌ನಲ್ಲಿ ತಮ್ಮ ನಿರಂಕುಶ ಅಧಿಕಾರ ಸ್ಥಾಪಿಸಲು ಯೆಹೂದ್ಯರು ಹವಣಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಮುಸ್ಲಿಮರೊಂದಿಗೆ ಸಹಬಾಳ್ವೆ ನಡೆಸುತ್ತಾ ಇದ್ದ ಹಿಂದೂ ಕಾಶ್ಮೀರೀ ಪಂಡಿತರನ್ನು ಅವರ ಜನ್ಮಭೂಮಿಯಿಂದ ಹೊರಹಾಕಿ ಅವರೆಲ್ಲ ಹೆಂಗಸರು ಮಕ್ಕಳೊಂದಿಗೆ ಡೇರೆಗಳಲ್ಲಿ ಜೀವನ ಸಾಗಿಸುವಂಥಾ ಕಠಿಣ ಪರಿಸ್ಥಿತಿಯನ್ನು ಧರ್ಮಾಂಧ ಉಗ್ರವಾದೀ ಮುಸ್ಲಿಮರು ಉಂಟುಮಾಡಿದ್ದಾರೆ. ಇವರೆಲ್ಲ ಭೌಗೋಳಿಕವಾಗಿ ಬೇರೆಬೇರೆ ದೇಶದ ಪ್ರಜೆಗಳು. ಇವರೆಲ್ಲರೂ ದೇವರ ಭಕ್ತರೇ, ಎಲ್ಲರೂ ಹೇಳುವುದು ದೇವರು ಒಬ್ಬನೇ ಅನ್ನುವ ಮಂತ್ರವನ್ನೇ. ಆದರೆ ಆ ಒಬ್ಬನೇ ದೇವರು ತಮ್ಮ ದೇವರು! ತಮ್ಮ ನಂಬಿಕೆಗಳಿಗೆ ಪೆಟ್ಟು ಬಿದ್ದಾಗ ಅವರು ಯಾವ ನ್ಯಾಯಾಲಯದ ಚೌಕಟ್ಟಿಗೂ ಒಳಪಡುವುದಿಲ್ಲ, ಯಾವ ದೇಶದ ಸಂವಿಧಾನಕ್ಕೂ ಸೊಪ್ಪು ಹಾಕುವುದಿಲ್ಲ. ಎಲ್ಲರೂ ದೇಶಕ್ಕಿಂತ ದೊಡ್ಡದೆನ್ನಲಾದ ದೇವರ ಮೊರೆಹೊಗುತ್ತಾರೆ, ಮನುಷ್ಯಮಾಡಿದ ಕಟ್ಟಳೆಗಿಂತ ದೊಡ್ಡ ಕಟ್ಟಳೆಯಾಂದಿದೆ ಎಂದು ತಮಗೆ ಅನುಕೂಲವಲ್ಲದ ಕಟ್ಟಳೆಗಳನ್ನು ಮುರಿಯುತ್ತಾರೆ. ತಮ್ಮ ವಾದವನ್ನು ಒಪ್ಪದವರನ್ನು ಕೊಲ್ಲುವುದೂ ತಮ್ಮ ದೇವರ, ತಮ್ಮ ಧರ್ಮದ ಕಟ್ಟಳೆ ಎಂದು ನಂಬುತ್ತಾರೆ, ಸಾರುತ್ತಾರೆ. ಹಾಗಾದರೆ ಮುಂದೇನು ಗತಿ? ಮುಂದಾರು ಗತಿ? ದೇವರೇ ಗತಿ ಎನ್ನೋಣವೆಂದರೆ, ಯಾವ ದೇವರಗತಿ, ಯಾರ ದೇವರ ಗತಿ ಎಂಬ ಪ್ರಶ್ನೆ ಹುಟ್ಟುತ್ತದಲ್ಲ ? ಎಲ್ಲರೂ ದೇವರ ಭಕ್ತರಾದರೆ ದೇಶದ ಭಕ್ತರು ಯಾರು? ಆರು ಹಿತವರು ನಿಮಗೆ, ದೇವರೋ, ದೇಶವೋ? ನೀವೇ ಹೇಳಿ! ಪುಟ್ಟ ಒಂದು ಕವನದೊಂದಿಗೆ ಈ ಲೇಖನವನ್ನು ಮುಗಿಸಿ ವಿರಮಿಸುವೆ, ಮುಂದಿನ ಕಂತಿನವರೆಗೆ.

***

ದೇಶ ಸೇವೆ-ಈಶ ಸೇವೆ

'ದೇಶ ಸೇವೆಯೇ ಈಶ ಸೇವೆ"

ಎಂಬೀ ಮಾತು ನಿಜವಲ್ಲ

ಒಬ್ಬನ ದೇವ ಈಶನು ಆದರೆ

ಇನ್ನೊಬ್ಬರ ದೇವನು 'ಅಲ್ಲ"

ತೀರ್ಪನು ಕೊಡುವ ನ್ಯಾಯವಾದಿಗಳೆ

ಕಟ್ಟಳೆ ಮುರಿಯುವರಲ್ಲ

ದೇವರ ಹೆಸರಲಿ ಉಗ್ರವಾದಿಗಳು

ಜಗವನೆ ಕೊಲ್ಲುವರಲ್ಲ

ದೇವರ ಭಕ್ತರು ದೇಶದ ಭಕ್ತರು

ಘೋಷಣೆ ಕೂಗುವರೆಲ್ಲ

ರಕ್ತವ ಕುಡಿಯುವ ರಕ್ಕಸರಿವರು

ಶಾಂತಿಯ ಭಕ್ತರು ಅಲ್ಲ !

ಓಂ ಶಾಂತಿಃ ಶಾಂತಿಃ ಶಾಂತಿಃ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more