• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಎಸ್ಎಮ್ಎಸ್ ಅವನ ಜೀವ ಉಳಿಸಿತು

|
ಕರ್ರಗೆ, ಕಪ್ಪಗೆ, ಉದ್ದಕ್ಕಿದ್ದ ಆ ನೀಗ್ರೊ ಹುಡುಗನ ಹೆಸರು ಜಾನ್. ಅವನು ಲಂಡನ್‌ನ ಅಧಿಪತ್ಯಕ್ಕೆ ಒಳಪಟ್ಟಿದ್ದ ಒಂದು ಹಳ್ಳಿಯಲ್ಲಿದ್ದ. ಅವನ ತಂದೆ-ತಾಯಿ, ಶ್ರೀಮಂತರ ತೋಟದಲ್ಲಿ ಕೂಲಿ ಮಾಡುತ್ತಿದ್ದರು. ಜಾನ್ ಕೂಡ ಕೆಲಸಕ್ಕೆ ಹೋಗುತ್ತಿದ್ದ. ಬಿಡುವಿನ ದಿನಗಳಲ್ಲಿ ಸಮೀಪದ ಕಾಡಿಗೆ ಹೋಗುವುದು, ಅಲ್ಲಿ ಸಿಗುವ ಹಣ್ಣು ತಿಂದು ಖುಷಿ ಪಡುವುದು, ಮರದ ಮರೆಯಲ್ಲಿ ಅವಿತು ನಿಂತು ಬೆರಗಿನಿಂದಲೇ ಕಾಡು ಪ್ರಾಣಿಗಳನ್ನು ನೋಡಿ ಸಂಭ್ರಮಿಸುವುದು ಅವನ ದಿನಚರಿಯಾಗಿತ್ತು.

ಇಂಥ ಹಿನ್ನೆಲೆಯ ಜಾನ್, ಅದೊಂದು ದಿನ ಯಥಾಪ್ರಕಾರ ಕಾಡಿಗೆ ಹೊರಟ. ಜತೆಯಲ್ಲಿ ಅವನ ಸೋದರನೂ ಇದ್ದ. ಇಬ್ಬರೂ ಹದಿನಾರು-ಹದಿನೆಂಟು ವರ್ಷದ ಆಜುಬಾಜಿನವರೇ. ಅದೂ ಇದೂ ಮಾತಾಡಿಕೊಂಡೇ ಕಾಡು ತಲುಪಿಕೊಂಡರು. ಅವಾಗವಾಗ ಬರುತ್ತಿದ್ದ ಜಾಗ ತಾನೆ? ಹಾಗಾಗಿ ಇಬ್ಬರಿಗೂ ಕಾಡಿನ ಪರಿಚಯ ಚನ್ನಾಗಿತ್ತು. ಅವತ್ತೂ ಎಂದಿನಂತೆಯೇ ಹತ್ತು ಹೆಜ್ಜೆ ಮುಂದೆ ಹೋಗಿ, ಬಲಕ್ಕೆ ತಿರುಗಿ ತರಹೇವಾರಿ ಹಣ್ಣುಗಳನ್ನು ಹುಡುಕಬೇಕು ಎಂದು ಮಾತಾಡಿಕೊಂಡರು ನೋಡಿ- ಆಗ ಕೇಳಿಸಿತು ಗುಂಡಿನ ಸದ್ದು!

ಏನಾಯಿತು, ಯಾಕೆ? ಗುಂಡುಗಳು ಎಲ್ಲಿಂದ ಹಾರಿ ಬರುತ್ತಿವೆ? ಗುಂಡು ಹಾರಿಸುತ್ತಿರುವ ಜನರ ಗುರಿ ಯಾರು? ಅವರ ಉದ್ದೇಶವಾದರೂ ಏನು ಎಂದು ಜಾನ್ ಹಾಗೂ ಅವನ ಸೋದರ ಯೋಚಿಸುವ ವೇಳೆಗೆ, ಎದುರಿಂದ ಬಂದ ಕಾಡತೂಸೊಂದು ರಾಕೆಟ್‌ನಂತೆ ಹೋಗಿ ಜಾನ್‌ನ ಎಡಭುಜದೊಳಗೆ ಸೇರಿ ಹೋಯಿತು. ಕೊತಕೊತನೆ ಕುದಿಯುತ್ತಿರುವ ಎಣ್ಣೆ ನಾಲಿಗೆಯ ಮೇಲೆ ಬಿದ್ದಾಗ ಆಗುತ್ತದಲ್ಲ? ಅದಕ್ಕಿಂತ ಸಾವಿರ ಪಟ್ಟು ಹೆಚ್ಚಿನ ನೋವಾಯಿತು ಜಾನ್‌ಗೆ. ಆತ ಕಾಡೆಂಬ ಕಾಡೂ ನಡುಗುವಂತೆ ಚೀರಿಕೊಂಡ. ಎರಡೂ ದಿಕ್ಕಿನಿಂದ ಏಕಾಏಕಿ ಹಾರಿಬಂದ ಕಾಡತೂಸುಗಳ ಅಬ್ಬರ; ಜತೆಗೇ ಗುಂಡೊಂದು ಮೈ ಸೇರಿಕೊಂಡಾಗ ಆದ ನೋವೂ ಸೇರಿಕೊಂಡು ಎರಡೇ ನಿಮಿಷದಲ್ಲಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ.

ಮತ್ತೆ ಕಣ್ತೆರೆದಾಗ, ತಾನೀಗ ಒಂದು ಆಸ್ಪತ್ರೆಯಲ್ಲಿದ್ದೇನೆ ಎಂದು ಜಾನ್‌ಗೆ ಅರ್ಥವಾಯಿತು. ಎಲ್ಲ ಕಡೆಯಿಂದಲೂ ನುಗ್ಗಿ ಬರುತ್ತಿದ್ದ ಡೆಟಾಲ್‌ನ ಕಮಟು ವಾಸನೆ ಮೂಗಿಗೆ ರಾಚುತ್ತಿತ್ತು. ಜತೆಯಲ್ಲಿ ಯಾರ್‍ಯಾರಿದ್ದಾರೆ ಎಂದು ನೋಡಿದರೆ ಅಪ್ಪ-ಅಮ್ಮ, ಬಂಧುಗಳು, ಕಾಡಿಗೆ ತನ್ನೊಟ್ಟಿಗೇ ಬಂದಿದ್ದ ಸೋದರನ ಮುಖಗಳು ಅಸ್ಪಷ್ಟವಾಗಿ ಕಾಣಿಸಿದವು. ಎಲ್ಲರ ಕಂಗಳಲ್ಲೂ ನೀರ ಪೊರೆ. ಆ ಕಾಡಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಾನ್‌ನ ದೇಹಕ್ಕೆ ಆಕಸ್ಮಿಕವಾಗಿ ಒಂದು ಗುಂಡು ಹೊಕ್ಕಿತ್ತು. ಗುಂಡು ಭುಜದ ಮೂಳೆಗಳ ಮಧ್ಯೆ, ಆಯಕಟ್ಟಿನ ಜಾಗದಲ್ಲಿ ಕೂತುಬಿಟ್ಟಿರುವುದರಿಂದ ಕೈ ಕತ್ತರಿಸದೇ ಗುಂಡು ತೆಗೆಯುವುದು ಕಷ್ಟ. ಆಪರೇಷನ್ ಮಾಡುವುದು ಇನ್ನೂ ಕಷ್ಟ... ಇದಿಷ್ಟೂ, ಜಾನ್ ಹಾಗೂ ಅವನ ಕುಟುಂಬದವರಿಗೆ ಅರಣ್ಯ ಇಲಾಖೆಗೆ ಸೇರಿದ್ದ ಆಸ್ಪತ್ರೆಯಲ್ಲಿ ಸಿಕ್ಕ ಮಾಹಿತಿ. ಅತ್ಯುತ್ತಮ ಚಿಕಿತ್ಸೆ ನೀಡಲು ಜಾನ್ ಏನು ಶ್ರೀಮಂತರ ಮಗನೆ? ಅಲ್ಲವಲ್ಲ. ಆ ಕಾರಣದಿಂದಲೇ ಗುಂಡೇಟು ಬಿದ್ದಿದ್ದ ಜಾಗಕ್ಕೆ ಎಂಥದೋ ಮುಲಾಮು ಸವರಿ, ಒಂದಿಷ್ಟು ಪುಡಿ ಪುಡಿ ಔಷ ಹಾಕಿ, ಬ್ಯಾಂಡೇಜ್ ಬಿಗಿದ ವೈದ್ಯರು- ಸರಿ, ನೀವಿನ್ನು ಹೋಗಬಹುದು. ಎರಡು ಮೂರು ವಾರದಲ್ಲಿ ಗಾಯ ವಾಸಿಯಾಗುತ್ತೆ' ಎಂದರು.

ಹಾಂ ಹೂಂ ಅನ್ನುವುದರೊಳಗೆ ಮೂರು ವಾರ ಕೇಳದೇ ಹೋಯಿತು. ಗಾಯ ವಾಸಿಯಾಗಲಿಲ್ಲ. ಬದಲಿಗೆ ಎಂಥದೋ ದುರ್ವಾಸನೆ ಬ್ಯಾಂಡೇಜ್ ಇದ್ದ ಜಾಗದಿಂದ ಬರತೊಡಗಿತು. ಜತೆಗೆ ವಿಪರೀತ ಎಂಬಂಥ ನೋವು. ಜಾನ್‌ನ ನರಳಾಟ, ಚೀರಾಟ ನೋಡಲಾಗದ ಅವನ ಪೋಷಕರು ಅವರಿವರ ಕಾಲು ಹಿಡಿದು, ಒಂದಿಷ್ಟು ದುಡ್ಡು ಜೋಡಿಸಿಕೊಂಡು ಲಂಡನ್‌ನ ಚೇರಿಂಗ್ ಕ್ರಾಸ್ ಆಸ್ಪತ್ರೆಗೇ ಹೋದರು. ಅಲ್ಲಿದ್ದ ಡೇವಿಡ್ ನಾಟ್ ಎಂಬ ಅಮ್ಮನಂಥ ಮನಸ್ಸಿನ, ರಿಸ್ಕ್ ತಗೊಳ್ಳೋದೇ ಬದುಕು ಎಂದು ನಂಬಿದ್ದ ವೈದ್ಯನೊಬ್ಬ ಜಾನ್‌ನನ್ನು ಕೂಲಂಕಷವಾಗಿ ಪರೀಕ್ಷಿಸಿದ. ಹೆಸರಾಂತ ಶಸ್ತ್ರಚಿಕಿತ್ಸಕನೂ ಆಗಿದ್ದ ನಾಟ್‌ಗೆ, ಬ್ಯಾಂಡೇಜ್ ಜಾಗದಲ್ಲಿ ಹಾಗೇ ಸುಮ್ಮನೆ ಮುಟ್ಟಿದಾಗಲೇ, ಹೊಟ್ಟೆ ತೊಳೆಸುವಂಥ ದುರ್ಗಂಧ ಮೂಗು ತಾಕಿದಾಗಲೇ- ಗುಂಡೇಟು ಬಿದ್ದಿರುವ ಜಾಗವನ್ನು ಆಗಲೇ ಗ್ಯಾಂಗ್ರಿನ್ ಆಕ್ರಮಿಸಿಕೊಂಡಿದೆ ಎಂದು ಅರ್ಥವಾಗಿ ಹೋಯಿತು. ಇರಲಿ, ಏನಾಗಿದೆಯೋ ನೋಡೇ ಬಿಡೋಣ ಎಂದು ಬ್ಯಾಂಡೇಜ್ ಬಿಚ್ಚಿಸಿದ ಡಾ. ಡೇವಿಡ್ ನಾಟ್‌ನಂಥ ಪಳಗಿದ ವೈದ್ಯ ಕೂಡ ಆ ಕ್ಷಣಕ್ಕೆ ಬೆಚ್ಚಿಬಿದ್ದ. ಏಕೆಂದರೆ, ಜಾನ್‌ನ ಎಡತೋಳಿನ ಭಾಗವನ್ನು ಗ್ಯಾಂಗ್ರಿನ್ ಆವರಿಸಿಕೊಂಡಿತ್ತು. ಆ ಭಾಗವನ್ನೇ ತೆಗೆದು ಹಾಕಿದರೆ, ದೇಹದ ಒಂದು ಭಾಗವೇ ಹೋದ ಹಾಗೆ. ಎಡಭುಜದ ಭಾಗವನ್ನು ಇಡಿಯಾಗಿ ಕತ್ತರಿಸುವಾಗ ಚೂರೇ ಚೂರು ಎಡವಟ್ಟಾದರೂ ಬೆನ್ನು ಮೂಳೆಗೂ ತೊಂದರೆಯಾಗುತ್ತದೆ. ಹಾಗಾಗಿಬಿಟ್ಟರೆ, ನಂತರದ ಕೆಲವೇ ಕ್ಷಣದಲ್ಲಿ ರೋಗಿ ಸತ್ತೇ ಹೋಗಬಹುದು...

ಇಂಥದೊಂದು ಯೊಚನೆ ಬಂದಾಗ, ಮುಂದೇನು ಮಾಡಬೇಕೋ ತೋಚದೆ ಡಾ. ಡೇವಿಡ್ ನಾಟ್ ನಿಂತಲ್ಲೇ ಯೋಚನೆಗೆ ಬಿದ್ದ. ಅವನ ಸಹೋದ್ಯೋಗಿಗಳೆಲ್ಲ- ಸರ್, ನೀವೀಗ ಆಪರೇಷನ್ ಮಾಡ್ತೀರ ಅಂದುಕೊಳ್ಳಿ. ಆನಂತರವೂ ಈ ಹುಡುಗ ಹೆಚ್ಚೆಂದರೆ ಮೂರು ತಿಂಗಳು ಬದುಕಬಹುದು, ಅಷ್ಟೆ. ಏಕೆಂದರೆ, ಎಡಭುಜಕ್ಕೇ ಗ್ಯಾಂಗ್ರಿನ್ ಅಂದಿರುವುದರಿಂದ ಅದು ಯಾವಾಗ ಬೇಕಾದರೂ ದೇಹದ ಇತರ ಕಡೆಗೂ ಹರಡಬಹುದು ತಾನೆ? ಆಪರೇಷನ್ ಯಶಸ್ವಿಯಾದರೂ, ಆ ನಂತರದಲ್ಲಿ ಚಿಕ್ಕದೊಂದು ಸೆಪ್ಟಿಕ್ ಕೂಡ ಆಗದಂತೆ ನೋಡಿಕೊಳ್ಳಲು ಸಾವಿರಾರು ರೂಪಾಯಿಗಳ ಔಷಧಿ ಖರೀದಿಸಬೇಕಾಗುತ್ತದೆ. ಈ ಬಡವರ ಮನೆಯ ಹುಡುಗ ಅದನ್ನೆಲ್ಲ ಹೇಗೆ ಹೊಂದಿಸಬಲ್ಲ? ಸುಮ್ಮನೆ ರಿಸ್ಕು ತಗೋಬೇಡಿ. ಈ ಹುಡುಗನಿಗೆ ಒಂದು ಟ್ರೀಟ್‌ಮೆಂಟ್ ಅಂತ ಕೊಟ್ಟು ಮನೆಗೆ ಕಳಿಸಿಬಿಡಿ. ನಂತರದ ಒಂದೆರಡು ತಿಂಗಳು ಅಷ್ಟೆ. ಆಮೇಲೆ ಅವನಿಗೇ ಗೊತ್ತಾಗದ ಹಾಗೆ ಆ ಹುಡುಗ ಸತ್ತು ಹೋಗ್ತಾನೆ ಬಿಡಿ' ಅಂದುಬಿಟ್ಟರು. ಇನ್ನೊಂದು ಕಡೆಯಲ್ಲಿ, ಜಾನ್‌ಗೆ ಆಗಿರುವ ಪೆಟ್ಟು, ಅದಕ್ಕೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಅದಕ್ಕೆ ತಗಲುವ ಖರ್ಚಿನ ವಿವರಣೆ ಕೇಳಿದ ಜಾನ್‌ನ ಪೋಷಕರು ಕೂಡ ಮಗನ ಮೇಲಿನ ಆಸೆ ಬಿಟ್ಟುಬಿಟ್ಟರು.

ಆದರೆ, ಡಾ. ಡೇವಿಡ್ ನಾಟ್ ಮಾತ್ರ, ಒಂದು ರಿಸ್ಕ್‌ಗೆ ಕೈ ಹಾಕಿದರೆ ಹೇಗೆ? ಈ ಹುಡುಗನ ಎಡಭುಜದ ಭಾಗವನ್ನು ಕತ್ತರಿಸಿ ತೆಗೆದು ಇವನನ್ನು ಬದುಕಿಸಿಕೊಳ್ಳಬಾರದೇಕೆ? ಸಾವಿನೊಂದಿಗೆ ಮುಖಾಮುಖಿ ನಿಂತು ಒಂದು ಕುಸ್ತಿ ಮಾಡಬಾರದೇಕೆ ಎಂದೇ ಯೋಚಿಸುತ್ತಿದ್ದ. ಹೀಗೆ, ಜಾನ್‌ಗೆ ಆಪರೇಷನ್ ಮಾಡಬೇಕು ಎಂದುಕೊಂಡಾಗಲೇ, ಆಯಕಟ್ಟಿನ ಜಾಗದಲ್ಲಿ ಮಾಂಸ, ಮೂಳೆ ಹಾಗೂ ಅತಿ ಸೂಕ್ಷ್ಮ ನರಗಳ ಮಧ್ಯೆ ಗುಮ್ಮನಂತೆ ಅಡಗಿರುವ ಗುಂಡನ್ನು ಹೊರತೆಗೆಯುವುದು ಹೇಗೆ? ಆ ಜಾಗದಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸುವುದು ಹೇಗೆ ಎಂಬುದೂ ನಾಟ್‌ಗೆ ಅರ್ಥವಾಗಲಿಲ್ಲ. ಏನಾದರಾಗಲಿ, ಒಂದು ಛಾನ್ಸ್ ನೋಡಿಯೇ ಬಿಡೋಣ ಎಂಬ ಭಂಡ ಧೈರ್ಯದೊಂದಿಗೆ ತನಗಿಂತ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರ ಸಲಹೆ ಪಡೆಯಲು ನಾಟ್ ನಿರ್ಧರಿಸಿದ. ಅಂಥ ವೈದ್ಯರು ಯಾರಿದ್ದಾರೆ ಎಂದು ಡೈರೆಕ್ಟರಿ ತಿರುವಿ ಹಾಕಿದಾಗ ಅದೇ ಲಂಡನ್‌ನ ರಾಯಲ್ ಮಾರ್ಸ್‌ಡನ್ ಆಸ್ಪತ್ರೆಯಲ್ಲಿರುವ ಪ್ರೊ. ಮರಿಯನ್ ಥಾಮಸ್ ಅವರ ಹೆಸರು ಕಾಣಿಸಿತು. ಅವರ ಸಲಹೆ ಪಡೆಯಲು ಫೋನ್ ಮಾಡಿದರೆ, ನೆಟ್‌ವರ್ಕ್ ಸಮಸ್ಯೆ ಎದುರಾಯಿತು. ತಡಮಾಡಿದರೆ, ಆ ಹುಡುಗನ ಜೀವಕ್ಕೇ ಅಪಾಯ! ತಕ್ಷಣ ತಲೆ ಓಡಿಸಿದ ಡಾ. ಡೇವಿಡ್ ನಾಟ್- ತನ್ನ ಕಷ್ಟದ ಪರಿಸ್ಥಿತಿ ವಿವರಿಸಿ ಒಂದು ಎಸ್ಸೆಮ್ಮೆಸ್ ಕಳುಹಿಸಿದ. ದೇಹದ ಒಟ್ಟು ಭಾಗದಲ್ಲಿ ಕಾಲು ಭಾಗದಷ್ಟನ್ನು ಕತ್ತರಿಸಿ ಹಾಕಿದ ನಂತರವೂ ಒಬ್ಬ ರೋಗಿಯನ್ನು ಬದುಕಿಸಿಕೊಳ್ಳುವುದು ಹೇಗೆ? ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅಗತ್ಯವಾಗಿ ಅನುಸರಿಸಲೇಬೇಕಾದ ಮುನ್ನೆಚ್ಚರಿಕೆಗಳೇನು? ದಿಢೀರನೆ ಎದುರಾಗಬಹುದಾದ ತೊಂದರೆಗಳೇನು? ಅದಕ್ಕೆ ಇರುವ ಪರಿಹಾರವೇನು ಎಂದು ಪ್ರಶ್ನೆ ಕಳುಹಿಸಿದ್ದ. ನಿಮ್ಮಿಂದ ವಿವರವಾದ ಉತ್ತರ ಬಂದ ತಕ್ಷಣವೇ ಆಪರೇಷನ್ ಆರಂಭಿಸುವ ಯೋಚನೆಯಲ್ಲಿದ್ದೇನೆ' ಎಂದೂ ಸೇರಿಸಿದ್ದ.

ಮೂರು ಗಂಟೆಗಳ ನಂತರ, ಡೇವಿಡ್ ನಾಟ್‌ನ ಮೊಬೈಲ್ ಬೀಪ್ ಬೀಪ್ ಎಂದು ಸದ್ದು ಮಾಡಿತು. ಓಹ್, ಎಸ್ಸೆಮ್ಮೆಸ್ ಬಂತು ಎಂದುಕೊಂಡು ನಾಟ್ ಉದ್ವೇಗ, ಕುತೂಹಲದಿಂದ ಮೊಬೈಲು ಕೈಗೆತ್ತಿಕೊಂಡರೆ- ಅವನ ಊಹೆ ನಿಜವಾಗಿತ್ತು. ಆ ಕಡೆಯಿಂದ ಡಾ. ಮರಿಯನ್ ಥಾಮಸ್ ಉತ್ತರ ಕಳುಹಿಸಿದ್ದರು. ತೋಳಿನ ಇಡೀ ಭಾಗವನ್ನು ತೆಗೆದು ಹಾಕುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಹಾಗೂ ಅದಕ್ಕಿರುವ ಪರಿಹಾರದ ಬಗ್ಗೆ ಒಂದರ ಹಿಂದೊಂದು ಎಸ್ಸೆಮ್ಮೆಸ್ ಕಳುಹಿಸಿದ್ದ ಥಾಮಸ್-ಅದಕ್ಕೆ ಹತ್ತು ಅಂಶಗಳ ಸೂತ್ರ ಎಂಬ ಹೆಸರಿಟ್ಟಿದ್ದರು.

ಪ್ರೊ. ಥಾಮಸ್ ಅವರ ಸಂದೇಶವನ್ನು ಎರಡೆರಡು ಬಾರಿ ಓದಿಕೊಂಡ ನಾಟ್, ಕಡೆಗೂ ಬೇರೊಬ್ಬರ ಸಾವಿನೊಂದಿಗೆ ಸರಸವಾಡಲು ನಿರ್ಧರಿಸಿದ. ಆದದ್ದಾಗಲಿ, ಆಪರೇಷನ್ ಮಾಡೇಬಿಡ್ತೇನೆ ಎಂದು ಘೋಷಿಸಿದ. ನಂತರ ತರಾತುರಿಯಲ್ಲಿ ಒಂದಷ್ಟು ಕಡೆಗೆ ಫೋನ್ ಮಾಡಿಸಿದ. ಆಪರೇಷನ್ ಸಂದರ್ಭದಲ್ಲಿ ತುರ್ತಾಗಿ ಬೇಕಾಗುವ ರಕ್ತ, ವೈದ್ಯಕೀಯ ಖರ್ಚು ನೋಡಿಕೊಳ್ಳುವ ದಾನಿಗಳು, ಸಂಘಟನೆಗಳೊಂದಿಗೆ ಮಾತಾಡಿದ. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಆಪರೇಷನ್‌ಗೆ ಸಕಲ ಸಿದ್ಧತೆಗಳೂ ನಡೆದುಹೋದವು. ಜಾನ್‌ಗೆ ಅರಿವಳಿಕೆ ನೀಡಲು ವೈದ್ಯರ ಬದಲಿಗೆ ಒಬ್ಬರು ನರ್ಸ್ ಇದ್ದರು ಎಂಬುದನ್ನು ಬಿಟ್ಟರೆ, ಉಳಿದ ಎಲ್ಲಾ ತಯಾರಿ, ನಾಟ್‌ಗೆ ತೃಪ್ತಿ ನೀಡಿತ್ತು.

ಗ್ಲೌಸ್ ಧರಿಸಿ, ಕತ್ತರಿ ಹಿಡಿದು ಆಪರೇಷನ್ ಟೇಬಲ್‌ನ ಬಳಿ ಬಂದಾಗ, ತಾನು ಮಾಡಬೇಕಿರುವ ಕೆಲಸ ಅದೆಷ್ಟು ಕಠಿಣವಾದದ್ದು ಎಂದು ನಾಟ್‌ಗೆ ಮತ್ತೆ ನೆನಪಾಯಿತು. ಒಂದು ಕ್ಷಣದ ಮಟ್ಟಿಗೆ ಧ್ಯಾನಸ್ಥನಂತೆ ನಿಂತು, ಡಾ. ಮರಿಯನ್ ಥಾಮಸ್ ಕಳುಹಿಸಿದ್ದ ಹತ್ತಂಶದ ಎಸ್ಸೆಮ್ಮೆಸ್ಸನ್ನು ಮತ್ತೆ ನೆನಪು ಮಾಡಿಕೊಂಡ. ಆಪರೇಷನ್ ಆರಂಭಿಸಿದ ನಂತರ ದಿಢೀರನೆ ಒಂದು ಹೊಸ, ಅನಿರೀಕ್ಷಿತ ಸವಾಲು ಎದುರಾದರೆ, ಒಂದೇ ಒಂದು ಮಾತೂ ಆಡದೆ ಕೇವಲ ಕಣ್ಸನ್ನೆಯಿಂದಲೇ ಅದಕ್ಕೆ ಪರಿಹಾರದ ಮಾರ್ಗವನ್ನು ಜತೆಗಿರುವ ನರ್ಸ್‌ಗಳಿಗೆ ಹೇಗೆ ಹೇಳಬೇಕೆಂದು ಸ್ವಗತದಲ್ಲಿ ತನಗೆ ತಾನೇ ಹೇಳಿಕೊಂಡ. ಬೇರೆ ದಾರಿಯೇ ಇಲ್ಲ. ರೋಗಿಯ ಎಡಗೈಯನ್ನು ಭುಜದ ಸಮೇತ ತೆಗೆಯಲೇಬೇಕು. ಅದಾಗಲೇ ಗ್ಯಾಂಗ್ರಿನ್ ಆಗಿದೆ. ಆ ಭಾಗಕ್ಕೆ ವಾರಗಟ್ಟಲೆ ರಕ್ತದ ಪೂರೈಕೆಯಾಗಿಲ್ಲ. ಅಂಥ ಸಂದರ್ಭದಲ್ಲಿ ಇರುವ ಚೂರು ಪಾರು ರಕ್ತವೂ ಸೇರಿಹೋಗದಂತೆ ಮುಂಜಾಗ್ರತೆ ವಹಿಸಲೇಬೇಕಿತ್ತು...

ಇಂಥ ಸಂದರ್ಭದಲ್ಲಿ ಎಲ್ಲಿಗೆ ಮೊದಲು ಕತ್ತರಿ ಹಾಕುವುದು ಎಂಬುದೇ ತಲೆನೋವಿನ ವಿಷಯವಾಗಿತ್ತು. ನಾಟ್ ಗಟ್ಟಿ ಮನಸ್ಸು ಮಾಡಿದ. ಹೇಗೆ ಮಾಡಿದರೆ ಏನಾಗಬಹುದು ಎಂದು ಒಂದರೆಕ್ಷಣ ಮನದಲ್ಲಿಯೇ ಗುಣಾಕಾರ, ಭಾಗಾಕಾರ ಮಾಡಿದ. ಅದಕ್ಕೆ ಒಂದು ಅಂದಾಜಿನ ಉತ್ತರವನ್ನೂ ಕಂಡುಕೊಂಡ. ನಂತರ, ಮೊದಲೇ ನಿರ್ಧರಿಸಿದ್ದ ಜಾಗಕ್ಕೆ ಕತ್ತರಿ ಹಾಕಿ, ಭುಜದ ತಟ್ಟೆಯ ಭಾಗವನ್ನು ತೆಗೆದು, ಅದಕ್ಕೆ ಅಂಟಿಕೊಂಡಂತಿದ್ದ ಆಜುಬಾಜಿನ ಮೂಳೆಗಳನ್ನು ಅತ್ತಿತ್ತ ಸರಿಸಿದ. ತೊಟ್ಟು ರಕ್ತವೂ ಪೋಲಾಗದಂತೆ ನಾಳಗಳನ್ನು ಹೊಲಿದ. ನಂತರ, ಎದೆ ಭಾಗಕ್ಕೆ ಸಂಪರ್ಕ ಹೊಂದಿದ್ದ ಮಾಂಸ ಖಂಡಗಳನ್ನು ಹುಷಾರಾಗಿ ಬೇರ್ಪಡಿಸಿ, ಗುಂಡು ಬಿದ್ದ ಜಾಗವನ್ನು ಪತ್ತೆ ಹಚ್ಚಿದ. ಆ ಜಾಗದ ಮಾಂಸ ಖಂಡಗಳೆಲ್ಲ ಕೊಳೆತು ಹೋಗಿದ್ದವು. ಆ ಭಾಗದ ವ್ಯಾಪ್ತಿ ಎಷ್ಟೆಂದು ಒಂದು ಅಂದಾಜಿನಲ್ಲೇ ತಿಳಿದುಕೊಂಡು, ಒಂದು ಚಿಕ್ಕ ಗರಗಸದಿಂದ ಅದನ್ನು ತುಂಡರಿಸಿಯೇಬಿಟ್ಟ. ನಂತರ, ಒಂದೊಂದೇ ಭಾಗವನ್ನು ಹೊಲೆದು, ಆ ಭಾಗಕ್ಕೆ ರಕ್ತ ಸಂಚಾರ ಏರ್ಪಡುವಂತೆ ಮಾಡಿ ಕಡೆಯದಾಗಿ ಹೊಲಿಗೆ ಹಾಕಿ ಮುಗಿಸಿದಾಗ ಡೇವಿಡ್ ನಾಟ್‌ನ ಮುಖದಲ್ಲಿ ಹೆಮ್ಮೆಯಿತ್ತು. ಗರ್ವವಿತ್ತು. ಕಣ್ಣ ತುದಿಯಲ್ಲಿ ಸಂತೋಷದ ಕಂಬನಿಯಿತ್ತು. ಜಗತ್ತು ಗೆದ್ದವನ ಸಂಭ್ರಮವಿತ್ತು. ಆತ, ಬೇರೆಯವರ ಸಾವಿನೊಂದಿಗೆ ಸರಸವಾಡಿದ್ದ. ಅಷ್ಟೇ ಅಲ್ಲ, ಒಂದು ಎಸ್ಸೆಮ್ಮೆಸ್‌ನ ಸಂದೇಶವನ್ನು, ಅದರಲ್ಲಿದ್ದ ಎಚ್ಚರಿಕೆಯನ್ನು ಮೇಲಿಂದ ಮೇಲೆ ನೆನಪು ಮಾಡಿಕೊಂಡೇ ವೈದ್ಯಲೋಕಕ್ಕೆ ಸವಾಲು ಅನ್ನಿಸುವಂಥ ಒಂದು ಆಪರೇಷನ್ ಮಾಡಿ ಮುಗಿಸಿದ್ದ. ಅವನ ಶ್ರಮದ ಮುಂದೆ, ಸಾಹಸದ ಮುಂದೆ ಸಾವೆಂಬೋ ಸಾವು ಸೋತು ತಲೆತಗ್ಗಿಸಿ ನಿಂತಿತ್ತು.

ಸ್ವಾರಸ್ಯವೆಂದರೆ, ಕಷ್ಟದಲ್ಲಿ ಕಷ್ಟ ಎಂಬಂಥ ಈ ಶಸ್ತ್ರ ಚಿಕಿತ್ಸೆಗೆ ಜಾನ್‌ನ ದೇಹ ಕೂಡ ಸೂಕ್ತವಾಗಿ ಸ್ಪಂದಿಸಿತು. ಇಂಥದೊಂದು ಅಪರೂಪದ ಶಸ್ತ್ರ ಚಿಕಿತ್ಸೆಯಾದ ಸಂದರ್ಭದಲ್ಲಿ ಚೂರೇ ಚೂರು ಎಡವಟ್ಟಾದರೂ ಇನ್‌ಫೆಕ್ಷನ್ ಆಗಿಬಿಡುವ ಸಂಭವವಿರುತ್ತದೆ. ಪುಣ್ಯವಶಾತ್, ಜಾನ್‌ಗೆ ಅಂಥದೇನೂ ಆಗಲಿಲ್ಲ. ಆ ಹುಡುಗ ನಂತರದ ಕೆಲವೇ ತಿಂಗಳುಗಳಲ್ಲಿ ವೈದ್ಯರ ನಿರೀಕ್ಷೆ ಮೀರಿ ಚೇತರಿಸಿಕೊಂಡ. ವಿಪರ್‍ಯಾಸ ನೋಡಿ; ಸಾವನ್ನು ಗೆದ್ದ ಜಾನ್ ವಿಷಯದಲ್ಲಿ ನಂತರವಾದರೂ ಬದುಕು ಕರುಣೆ ತೋರಲಿಲ್ಲ. ಆತನ ಅಪ್ಪ ಒಂದು ಗುಂಪಿನ ಹೊಡೆದಾಟದಲ್ಲಿ ಕೊಲೆಯಾಗಿ ಹೋದ. ಅವನ ತಾಯಿ, ಮಕ್ಕಳನ್ನು ಮರೆತು ಇನ್ನೊಬ್ಬನೊಂದಿಗೆ ಬದುಕು ಆರಂಭಿಸಿದಳು. ಅಂಥ ಸಂದರ್ಭದಲ್ಲಿ, ಎಡಗೈನ ಭಾಗವನ್ನೇ ಹೊಂದಿರದ ಜಾನ್, ಇಡೀ ಕುಟುಂಬವನ್ನು ಸಾಕುವ ಹೊಣೆ ಹೊತ್ತಿದ್ದಾನೆ. ಈ ಹೊತ್ತಿನಲ್ಲೂ ತನ್ನ ಕುಟುಂಬ ಸಾಕಲು ದುಡಿಯುತ್ತಿದ್ದಾನೆ!

****

ಈ ದಿನಗಳಲ್ಲಿ ಎಲ್ಲರಿಗೂ ಗೊತ್ತಿರುವಂತೆ ಒಂದು ಎಸ್ಸೆಮ್ಮೆಸ್‌ನಿಂದ ಗೆಳೆತನ ಶುರುವಾಗಿದೆ. ಪ್ರೀತಿ ಹುಟ್ಟಿಕೊಂಡಿದೆ. ಜಗಳವಾಗಿದೆ. ಜಟಾಪಟಿ ನಡೆದಿದೆ. ಸಂಸಾರ ಛಿದ್ರವಾಗಿದೆ. ಮಧುರ ಪ್ರೇಮ ಮಣ್ಣು ಪಾಲಾಗಿದೆ. ಯಾರೋ, ಯಾವುದೋ ಸಂದರ್ಭದಲ್ಲಿ ತಮಾಷೆಗಾಗಿ ಕಳಿಸಿದ ಒಂದು ಬ್ಲಾಂಕ್ ಮೆಸೇಜ್ ಹಾಲು-ಜೇನಿನಂಥ ಸಂಸಾರದಲ್ಲಿ ಹುಳಿಹಿಂಡಿದೆ. ಈ ದಿನಗಳಲ್ಲಂತೂ ಎಸ್ಸೆಮ್ಮೆಸ್ ಮೂಲಕವೇ ಮತ ಯಾಚಿಸುವ, ಮದುವೆ/ನಾಮಕರಣಕ್ಕೆ ಕರೆಯುವ, ಹಬ್ಬಕ್ಕೆ ಆಹ್ವಾನಿಸುವ ಪ್ರಕ್ರಿಯೆಗಳು ತುಂಬ ಜೋರಾಗಿ ನಡೆದಿವೆ. ಸಾಫ್ಟ್‌ವೇರ್ ಕಂಪನಿಗಳಂತೂ ನಟ್ಟ ನಡುರಾತ್ರಿಯಲ್ಲಿ ಒಂದು ಎಸ್ಸೆಮ್ಮೆಸ್ ಕಳಿಸಿ- ನಾಳೆಯಿಂದ ನಿಮಗೆ ಕೆಲಸವಿಲ್ಲ ಎಂದು ಸಾರಿ ಹೇಳಿವೆ. ಒಂದು ಹುಡುಗಾಟದ ಎಸ್ಸೆಮ್ಮೆಸ್ ನೋಡಿ ಒಬ್ಬರಿಗೆ ಹಾರ್ಟ್ ಅಟ್ಯಾಕ್ ಆದ ಉದಾಹರಣೆ ಕೂಡ ಇದೆ. ಆದರೆ ಒಂದು ಎಸ್ಸೆಮ್ಮೆಸ್‌ನಿಂದ ಒಂದು ಜೀವ ಉಳಿದ ಉದಾಹರಣೆ ಬಹುಶಃ ಇದೇ ಮೊದಲಿರಬೇಕು. ರೀಡರ್ ಡೈಜೆಸ್ಟ್'ನಲ್ಲಿದ್ದ ಈ ಅಪರೂಪದ ಪ್ರಸಂಗವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more