• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಲ್‌ಫ್ರೆಡೋ ಕ್ವಿನಾನ್ಸ್

By Staff
|
ಒಂದು ಕಾಲದಲ್ಲಿ ಅವನನ್ನು' ಅಮೆರಿಕದ ಜನ ತಲೆಯೊಳಗೆ ಸಗಣಿ ತುಂಬಿಕೊಂಡ ಪೆಕರಾ ಅಂದಿದ್ದರು. ಅಂಥ ಅಮೆರಿಕನ್ನರ ಮುಂದೆಯೇ ಆತ' ನಂಬರ್ ಒನ್ ಮೆದುಳು ಶಸ್ತ್ರಚಿಕಿತ್ಸಾ ತಜ್ಞನಾಗಿ ಬೆಳೆದು ನಿಂತ! ಆತನೇ ನಮ್ಮ ಕಥಾನಾಯಕ ಆಲ್‌ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಅಮೆರಿಕದಲ್ಲಿ ಈಗ ನಂ.1 ಮೆದುಳು ಶಸ್ತ್ರಚಿಕಿತ್ಸಾ ತಜ್ಞ.

ವೈದ್ಯರೊಬ್ಬರ ಮಗ ವೈದ್ಯನಾಗುವುದು, ತಹಸೀಲ್ದಾರರ ಮಗ ಡಿ.ಸಿ. ಆಗುವುದು, ಇನ್‌ಸ್ಪೆಕ್ಟರ್ ಮಗ ಡಿವೈಎಸ್ಪಿ ಆಗುವುದು, ಶಾಸಕನ ಮಗ ಶಾಸಕನೇ ಆಗುವುದು, ಶಿಕ್ಷಕರ ಮಗ ಲೆಕ್ಚರರ್ ಆಗುವುದು... ಉಹುಂ, ಇದ್ಯಾವುದೂ ಸುದ್ದಿಯಲ್ಲ. ಆದರೆ, ಕಳ್ಳನೊಬ್ಬನ ಮಗ ಐಎಎಸ್ ಮಾಡಿಬಿಟ್ಟರೆ-ಅದು ಸುದ್ದಿ. ತಿರುಪೆ ಎತ್ತುತ್ತಿದ್ದವನು ಚಿತ್ರ ನಟನಾದರೆ- ಅದು ಸುದ್ದಿ. ಕೊಳೆಗೇರಿಯ ಹುಡುಗನೊಬ್ಬ ಕೋಟ್ಯಾಪತಿಯಾದರೆ, ಅದೂ ಸುದ್ದಿ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯೊಬ್ಬಳು ವಿಶ್ವಸುಂದರಿಯಾಗಿಬಿಟ್ಟರೆ- ಅದಪ್ಪಾ ಸುದ್ದಿ.

ಇಂಥದೊಂದು ಪವಾಡ' ನಡೆಯಬೇಕಾದರೆ - ಗೆಲ್ಲಬೇಕೆಂಬ ಹಠವಿರಬೇಕು. ಗೆದ್ದೇ ತೀರುತ್ತೇನೆ ಎಂಬ ಛಲವಿರಬೇಕು. ಕಣ್ಮುಂದೆ ಗುರಿಯಿರಬೇಕು. ಸಮಸ್ಯೆಗಳನ್ನು ಎದುರಿಸುವ ಧೈರ್ಯವಿರಬೇಕು. ಒಂದು ಎತ್ತರ ತಲುಪಿಕೊಂಡ ನಂತರವೂ ಹೊಸದನ್ನು ಕಲಿಯುವ ಆಸೆಯಿರಬೇಕು, ಆಸಕ್ತಿಯಿರಬೇಕು. ಶ್ರದ್ಧೆ ಇರಬೇಕು. ಆಗ ಮಾತ್ರ ಅಸಾಧ್ಯ' ಎಂಬುದೆಲ್ಲಾ ಸಾಧ್ಯ'ವಾಗಿಬಿಡುತ್ತದೆ. ಗೌರಿ ಶಂಕರದ ಎತ್ತರ ಕೂಡ ಬರೀ ಇನ್ನೂರು ಮೆಟ್ಟಿಲಿನ ಬೆಟ್ಟದಂತೆ ಕಾಣುತ್ತದೆ.

ಒಂದು ಕಾಲದಲ್ಲಿ ಅಮೆರಿಕದಲ್ಲಿ ಕೂಲಿ ಮಾಡುತ್ತಿದ್ದ; ಡರ್ಟಿ ಮೆಕ್ಸಿಕನ್ ಎಂದು ಅಮೆರಿಕನ್ನರಿಂದ ಉಗಿಸಿಕೊಂಡ; ಬೀದಿಯಲ್ಲಿ ಭಿಕ್ಷುಕನಂತೆ ಬಾಲ್ಯ ಕಳೆದ ಹುಡುಗನೊಬ್ಬ ಅದೇ ಅಮೆರಿಕದಲ್ಲಿ ಈಗ ನಂ.1 ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಹೆಸರಾಗಿದ್ದಾನೆ. ಅವನ ಯಶೋಗಾಥೆಯನ್ನು ವಿವರಿಸುವ ನೆಪದಲ್ಲಿ, ಮೇಲಿನ ಮಾತುಗಳನ್ನು ಹೇಳಬೇಕಾಯಿತು.

***

ನಮ್ಮ ಕಥಾನಾಯಕನ ಹೆಸರು ಆಲ್‌ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಈತ ಮೆಕ್ಸಿಕೋ ದೇಶದವನು. ಇವನ ತಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಸಣ್ಣ ನೌಕರಿಯಲ್ಲಿದ್ದ. ಮನೆಯಲ್ಲಿ ಅವನ ದುಡಿಮೆಯನ್ನೇ ನಂಬಿಕೊಂಡು ಹೆಂಡತಿ ಹಾಗೂ ಐವರು ಮಕ್ಕಳಿದ್ದರು. ಬರುತ್ತಿರುವ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಅನಿವಾರ್ಯವಾಗಿ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಕಳುಹಿಸಲಾಯಿತು. ಆದರೆ, ಮಕ್ಕಳೆಲ್ಲ ಚಿಕ್ಕವರಿದ್ದರಲ್ಲ? ಆ ಕಾರಣಕ್ಕೆ ಅವರಿಗೆ ಯಾವೊಂದು ಕೆಲಸವೂ ಸಿಗಲಿಲ್ಲ. ಪರಿಣಾಮ, ಮನೆಯಲ್ಲಿ ಮಧ್ಯಾಹ್ನದ ಬಡತನ. ಈ ಸಂದರ್ಭದಲ್ಲಿಯೇ ಮೆಕ್ಸಿಕೋದಲ್ಲಿ ಆಂತರಿಕ ಗಲಭೆ ಶುರುವಾಯಿತು. ಅದೊಂದು ದಿನ ಆಲ್‌ಫ್ರೆಡೋ ಕ್ವಿನಾನ್ಸ್‌ನ ಮನೆಗೇ ನುಗ್ಗಿದ ಪುಂಡರು, ಮನೆಯಲ್ಲಿದ್ದ ಅಷ್ಟೂ ವಸ್ತುಗಳನ್ನು ಹೊತ್ತೊಯ್ದರು. ಆ ನಂತರದಲ್ಲಿಯೂ ಗಲಭೆಕೋರರ ಕಾಟ ಮುಂದುವರಿದಾಗ, ಕ್ವಿನಾನ್ಸ್‌ನ ತಂದೆ ಊರು ಬಿಡುವ ನಿರ್ಧಾರಕ್ಕೆ ಬಂದ.

ಊರನ್ನೇನೋ ಬಿಟ್ಟಿದ್ದಾಯಿತು. ಮುಂದಿನ ಬದುಕು ಹೇಗೆ? ಎಂದು ಕ್ವಿನಾನ್ಸ್‌ನ ಕುಟುಂಬದವರು ದಿಕ್ಕುಗಾಣದೆ ನಿಂತಿದ್ದಾಗ, ಅವನ ಬಂಧುಗಳು ನೆರವಿಗೆ ಬಂದರು. ಅಮೆರಿಕಾದ ತೋಟಗಳಲ್ಲಿ ಕೂಲಿ ಕೆಲಸ ಸಿಗುತ್ತದೆ. ಬಂದುಬಿಡು' ಎಂದರು. ಕ್ವಿನಾನ್ಸ್‌ನ ತಂದೆ ಹಿಂದೆ ಮುಂದೆ ಯೋಚಿಸದೆ ಸಂಸಾರ ಸಮೇತ ಬಂದೇ ಬಿಟ್ಟ. ಅಮೆರಿಕದ ಶ್ರೀಮಂತರ ತೋಟದಲ್ಲಿ ಮಾಲಿಯಾಗಿ, ಕೂಲಿಯವನಾಗಿ ಕೆಲಸಕ್ಕೆ ಸೇರಿಕೊಂಡ. ತನ್ನ ಸಂಪಾದನೆ ಯಾವ ಮೂಲೆಗೂ ಸಾಲುವುದಿಲ್ಲ ಎನ್ನಿಸಿದಾಗ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಸೇರಿಸಿದ.

ಕ್ವಿನಾನ್ಸ್ ಮತ್ತು ಅವನ ತಂದೆ ಕೆಲಸ ಮಾಡುತ್ತಿದ್ದುದು ಹತ್ತು ಎಕರೆ ವಿಶಾಲದ ಜಮೀನಿನಲ್ಲಿ. ಅಲ್ಲಿ ಟೊಮೆಟೋ, ಕೋಸು, ಬೀನ್ಸ್, ಆಲೂಗಡ್ಡೆ ಸೇರಿದಂತೆ ತರಹೇವಾರಿಯ ತರಕಾರಿ ಬೆಳೆಯುತ್ತಿದ್ದರು. ತೋಟದ ಒಂದು ಮೂಲೆಯಲ್ಲಿ ಸಣ್ಣದೊಂದು ರೂಮನ್ನು ಕ್ವಿನಾನ್ಸ್‌ನ ಕುಟುಂಬಕ್ಕೆ ಬಿಟ್ಟುಕೊಡಲಾಗಿತ್ತು. ಕ್ವಿನಾನ್ಸ್‌ನ ಅಪ್ಪ ಬೆಳಗಿನಿಂದ ಸಂಜೆಯವರೆಗೂ ಬಿರುಬಿಸಿಲಿನಲ್ಲಿ ತೋಟದ ಈ ಬದಿಯಿಂದ ಆ ಬದಿಯವರೆಗೂ ಪಹರೆ ತಿರುಗುತ್ತಿದ್ದ. ಮಧ್ಯಾಹ್ನ ಊಟಕ್ಕೆಂದು ಬಂದವನು, ಆಕಸ್ಮಿಕವಾಗಿ ಮಾಲೀಕರು ಬಂದರೆ, ಅರ್ಧಕ್ಕೇ ಊಟಬಿಟ್ಟು ಓಡಿಹೋಗಿ ಅವರ ಮುಂದೆ ನಡುಬಾಗಿಸಿ ನಿಲ್ಲುತ್ತಿದ್ದ. ಅವನನ್ನು ಕಂಡ ಮಾಲೀಕರು-ಡರ್ಟಿ ಮೆಕ್ಸಿಕನ್ ಎಂದೇ ಮಾತು ಶುರು ಮಾಡುತ್ತಿದ್ದರು. ಚಿಕ್ಕದೊಂದು ತಪ್ಪಿಗೂ ಡರ್ಟಿ ಬಾಸ್ಟರ್ಡ್ ಎಂದು ಬಯ್ಯುತ್ತಿದ್ದರು. ಸಿಟ್ಟು ಬಂದರೆ ಒದ್ದೇ ಬಿಡುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಿರುಗಿ ಮಾತಾಡುವ, ಉತ್ತರ ಹೇಳುವ ಅವಕಾಶ ಕ್ವಿನಾನ್ಸ್‌ನ ತಂದೆಗೆ ಇರಲೇ ಇಲ್ಲ. ಹಾಗೇನಾದರೂ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಿತ್ತು. ಅಮೆರಿಕನ್ನರನ್ನು ಅವರ ದೇಶದಲ್ಲಿಯೇ ನಿಂದಿಸಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಹಾಗಾಗಿ ಕ್ವಿನಾನ್ಸ್‌ನ ತಂದೆ ಎಲ್ಲ ಅವಮಾನವನ್ನೂ ಹಲ್ಲುಕಚ್ಚಿ ಸಹಿಸಿಕೊಂಡ.

ಅಪ್ಪ ಕೂಲಿ ಮಾಡುತ್ತಿದ್ದನಲ್ಲ? ಅದೇ ತೋಟದಲ್ಲಿ ಕ್ವಿನಾನ್ಸ್ ಕೂಡ ಕೆಲಸಕ್ಕಿದ್ದ-ತೋಟದಲ್ಲಿ ಬೆಳೆದ ತರಕಾರಿಗಳನ್ನು ಆಯ್ದು ತಂದು ಟ್ರಕ್‌ಗೆ ತುಂಬುವುದು, ಅವಾಗವಾಗ ತೋಟದಲ್ಲಿ ಕಳೆ ಕೀಳುವುದು ಅವನ ಕೆಲಸವಾಗಿತ್ತು. ಹೀಗೆ ತರಕಾರಿ ತುಂಬುತ್ತಿದ್ದ ಹುಡುಗನನ್ನು ಶ್ರೀಮಂತ ಅಮೆರಿಕನ್ನರು ಅಣಕಿಸುತ್ತಿದ್ದರು. ಗೇಲಿ ಮಾಡುತ್ತಿದ್ದರು. ನಿನಗೆ ಇಂಗ್ಲಿಷೇ ಬರಲ್ವಲ್ಲೋ ಮೆಕ್ಸಿಕನ್ ಎಂದು ಅಪಹಾಸ್ಯ ಮಾಡುತ್ತಿದ್ದರು. ನಿಮ್ಮ ತಲೆಯೊಳಗೆ ಬರೀ ಸಗಣಿ ತುಂಬಿದೆ ಕಣ್ರೋ. ನಿಮ್ಮಂಥೋರು ಏನಿದ್ರೂ ಜೀತ ಮಾಡೋಕೇ ಸೈ. ನಿಮಗೆ ಯಾವತ್ತೂ ತಲೆ ಓಡಲ್ಲ ಕಣ್ರೋ' ಎಂದೆಲ್ಲ ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ಮುಂದೊಂದು ದಿನ ಇದನ್ನೆಲ್ಲ ನೆನಪು ಮಾಡಿಕೊಂಡು ಕ್ವಿನಾನ್ಸ್ ಹೀಗೆ ಹೇಳಿದ್ದ:

ಅಮೆರಿಕಾದ ಜನ ಹೀಗೆಲ್ಲ ಮಾತಾಡಿದಾಗ ಸಂಕಟವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಅವರಿಗೆ ತಿರುಗಿ ಉತ್ತರ ಕೊಡುವ ಆಸೆಯಾಗುತ್ತಿತ್ತು. ಆದರೆ, ನನಗೆ ಚಂದದ ಇಂಗ್ಲಿಷು ಗೊತ್ತಿರಲಿಲ್ಲ. ಅವರಿಗಿಂತ ಚೆನ್ನಾಗಿ ಬದುಕಬೇಕೆಂಬ ಆಸೆಯಿತ್ತು. ಆದರೆ ಹಣವಿರಲಿಲ್ಲ. ಊಟಕ್ಕೂ ಗತಿಯಿರಲಿಲ್ಲ. ಅಷ್ಟೇ ಅಲ್ಲ, ಹಾಕಿಕೊಳ್ಳಲು ಚೆಂದದ ಬಟ್ಟೆಗಳೂ ಇರಲಿಲ್ಲ. ಇಡೀ ವರ್ಷ ಒಂದು ಜೀನ್ಸ್ ಪ್ಯಾಂಟ್‌ನಲ್ಲಿಯೇ ಬದುಕಿದೆ. ಕೊಳೆಯಾದಾಗೆಲ್ಲ ರಾತ್ರಿ ಒಗೆದು, ಬೆಳಗ್ಗೆ ಮತ್ತೆ ಅದನ್ನೇ ಧರಿಸುತ್ತಿದ್ದೆ. ಈ ಸಂಕಟದ ಮಧ್ಯೆಯೇ ನನಗೊಂದು ಹಟ ಬಂದುಬಿಟ್ಟಿತ್ತು. ಡರ್ಟಿ ಮೆಕ್ಸಿಕನ್, ನಿಂಗೆ ಇಂಗ್ಲಿಷು ಬರಲ್ಲ ಕಣೋ ಎಂದಿದ್ದರಲ್ಲ? ಅದೇ ಅಮೆರಿಕನ್ನರ ಮುಂದೆ ತಲೆ ಎತ್ತಿ ತಿರುಗಬೇಕು. ನಿಮ್ಮ ತಲೆಯೊಳಗೆ ಏನೂ ಇಲ್ಲ ಅಂದರಲ್ಲ? ನಿಮ್ಮ ಮೆದುಳು ಪೂರ್ತಾ ಖಾಲಿ ಎಂದು ಹಂಗಿಸಿದ್ದರಲ್ಲ? ಅದೇ ಅಮೆರಿಕನ್ನರು ನನ್ನೆದುರು ತಲೆಬಾಗಿ ನಿಲ್ಲುವಂತೆ ಮಾಡಬೇಕು ಎಂಬ ಹಟ ಜತೆಯಾಗಿಬಿಟ್ಟಿತ್ತು...

ಇಂಥದೊಂದು ನಿರ್ಧಾರವನ್ನು ಅಂಗೈಲಿ ಹಿಡಿದುಕೊಂಡೇ ಕ್ವಿನಾನ್ಸ್ ಮನೆಗೆ ಬಂದಾಗ, ಮೂಲೆಯಲ್ಲಿ ನಡುಗುತ್ತಾ ಕೂತಿದ್ದ ಅವನ ತಂದೆ, ಮಗನ ಕೈಹಿಡಿದು ಬಿಕ್ಕಳಿಸುತ್ತಾ ಹೇಳಿದನಂತೆ: ಮಗಾ, ನನ್ನ ಥರಾನೇ ಕಣ್ಣೀರಿನಲ್ಲೇ ಕೈ ತೊಳೆಯಬೇಕು ಅನ್ನೋದಾದ್ರೆ ಈ ಕೆಲಸವನ್ನೇ ಮುಂದುವರಿಸು. ದೊಡ್ಡ ಮನುಷ್ಯ ಆಗಬೇಕು ಅನ್ನೋ ಆಸೆ ಇದ್ರೆ ನಾಳೆಯಿಂದಲೇ ಸ್ಕೂಲಿಗೆ ಹೋಗು...'

ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more