• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಲ್‌ಫ್ರೆಡೋ ಕ್ವಿನಾನ್ಸ್

By * ಎಆರ್ ಮಣಿಕಾಂತ್
|
(ಮುಂದುವರಿದಿದೆ)

ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು

ಮರುದಿನವೇ ಮೆಕ್ಸಿಕೋಗೆ ಮರಳಿದ ಕ್ವಿನಾನ್ಸ್ ಶಾಲೆಗೆ ಸೇರಿಕೊಂಡ. ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣ ಮುಗಿಸಿದ. ಪ್ರೌಢಶಾಲಾ ಶಿಕ್ಷಣ ಮುಗಿಸಲು ಹಣದ ತೊಂದರೆ ಎದುರಾಯಿತು. ಆಗ ಒಂದು ವರ್ಷ ಸ್ಕೂಲು ಬಿಡಲು ಕ್ವಿನಾನ್ಸ್ ನಿರ್ಧರಿಸಿದ. ಹಾಗೆ ಶಾಲೆ ಬಿಟ್ಟವನು ಸೀದಾ ಅಮೆರಿಕಾದ ಫಾರ್ಮ್ ಹೌಸ್‌ಗೆ ಬಂದ. ತೋಟದ ಮಾಲಿ ಕೆಲಸಕ್ಕೆ ಸೇರಿಕೊಂಡ. ಊಟ ಮಾಡಿದರೆ ದುಡ್ಡು ಖರ್ಚಾಗಿ ಹೋಗುತ್ತದೆ ಎಂದುಕೊಂಡು ಒಂದಿಡೀ ವರ್ಷ (ತೋಟದ ಮಾಲೀಕರಿಗೆ ಗೊತ್ತಾಗದಂತೆ) ಟೊಮೆಟೋ, ಮೂಲಂಗಿ, ಕೋಸು, ಬೀನ್ಸ್ ತಿಂದುಕೊಂಡೇ ಬದುಕಿಬಿಟ್ಟ.

ಹೀಗೆ, ಒಂದು ವರ್ಷ ದುಡಿದ ಹಣವನ್ನು ಜತೆಗಿಟ್ಟುಕೊಂಡು ಮೆಕ್ಸಿಕೋಗೆ ಮರಳಿ, ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡನಲ್ಲ ಆಗ ಕ್ವಿನಾನ್ಸ್‌ನ ದಾರಿ ಸುಗಮವಿರಲಿಲ್ಲ. ಆತ ವಾಸವಿದ್ದ ಊರಿನಿಂದ ಶಾಲೆ ತುಂಬಾ ದೂರವಿತ್ತು. ಪರಿಣಾಮವಾಗಿ, ಬೆಳಗ್ಗೆ ನಾಲ್ಕು ಗಂಟೆಗೇ ಆತ ಏಳಬೇಕಿತ್ತು. ಅವಸರದಿಂದಲೇ ಬಸ್ಸು ಹಿಡಿಯಬೇಕಿತ್ತು. ಮಧ್ಯಾಹ್ನ ಮನೆಗೆ ವಾಪಸಾಗಲು ಬಸ್ ಇರಲಿಲ್ಲ. ಹಾಗಾಗಿ ಭರ್ತಿ ಎಂಟು ಮೈಲಿ ದೂರವನ್ನು ಆತ ನಡೆದೇ ಬರಬೇಕಿತ್ತು. ವರ್ಷವಿಡೀ ಬಿರುಬಿಸಿಲು ಅಥವಾ ಜಡಿ ಮಳೆ ಯಾವುದಾದರೊಂದು ಸದಾ ಕ್ವಿನಾನ್ಸ್‌ಗೆ ಕಾಟ ಕೊಡುತ್ತಲೇ ಇತ್ತು.

ಈ ಸಂಕಟದ ಮಧ್ಯೆಯೂ ಕ್ವಿನಾನ್ಸ್ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ. ಈ ಸಂದರ್ಭದಲ್ಲಿಯೇ-ಮೆಕ್ಸಿಕೋದಲ್ಲಿಯೇ ಉಳಿದರೆ, ಯಾವುದಾದರೂ ಕಂಪನಿಯಲ್ಲಿ ಗುಮಾಸ್ತನಾಗಬಹುದೇ ಹೊರತು ಅದಕ್ಕಿಂತ ದೊಡ್ಡ ಹುದ್ದೆಗೆ ಹೋಗುವುದು ಸಾಧ್ಯವಿಲ್ಲ ಎಂದು ಕ್ವಿನಾನ್ಸ್‌ಗೆ ಅರ್ಥವಾಗಿ ಹೋಯಿತು. ಆತ ತಕ್ಷಣವೇ ಅಮೆರಿಕದ ಹಾದಿ ಹಿಡಿದ. ಅಮೆರಿಕದಲ್ಲಿ ಬದುಕಬೇಕೆಂದರೆ ಅಲ್ಲಿನ ಇಂಗ್ಲಿಷ್ ಕಲೀಬೇಕು ಅನ್ನಿಸಿದಾಗ ಒಂದಿಷ್ಟು ಡಿಕ್ಷನರಿ ಜತೆಗಿಟ್ಟುಕೊಂಡು ಕೆಲವೇ ದಿನಗಳಲ್ಲಿ ಅಮೆರಿಕನ್ ಇಂಗ್ಲಿಷು ಕಲಿತೇಬಿಟ್ಟ. ನಂತರ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡ. ಈ ಸಂದರ್ಭದಲ್ಲಿ ಕ್ವಿನಾನ್ಸ್ ಮಾಡಿದ ಜಾಣತನದ ಕೆಲಸವೆಂದರೆ, ಸಂಜೆ ಕಾಲೇಜಿಗೆ ಸೇರಿಕೊಂಡದ್ದು.

ವಿಜ್ಞಾನದ ವಿಷಯ ಆಯ್ದುಕೊಂಡ ಕ್ವಿನಾನ್ಸ್, ಕಾಲೇಜು ಮುಗಿದ ತಕ್ಷಣ ಲೈಬ್ರರಿ ಸೇರಿಕೊಳ್ಳುತ್ತಿದ್ದ. ಆತನ ಕಣ್ಮುಂದಿನ ಗುರಿ ನಿಚ್ಚಳವಿತ್ತು. ಇವತ್ತಲ್ಲ ನಾಳೆ, ಇಡೀ ಅಮೆರಿಕದ ಜನ ತನ್ನತ್ತ ಬೆರಗಿನಿಂದ ನೋಡುವಂಥ ಸಾಧನೆ ಮಾಡಬೇಕೆಂಬ ಮಹದಾಸೆ ಅವನೊಳಗಿತ್ತು. ಈ ಹಠದಿಂದಲೇ ಓದಲು ಕೂರುತ್ತಿದ್ದ. ಕಡೆಗೊಂದು ದಿನ, ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು. ಪರಿಣಾಮ, ಉನ್ನತ ದರ್ಜೆಯಲ್ಲಿ ಆತ ಡಿಗ್ರಿ ಪಡೆದ. ನಂತರ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸದಿಂದ ಸಿಗುವ ಸಂಬಳದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಅನ್ನಿಸಿದಾಗ, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಖಾಸಗಿಯಾಗಿ ಟ್ಯೂಶನ್ ಹೇಳುವುದಕ್ಕೂ ಮುಂದಾದ.

ಹೀಗೆ, ಪೈಸೆಗೆ ಪೈಸೆ ಸೇರಿಸಿಕೊಂಡು ಕನಸಿನ ಹಿಂದೆ ಬಿದ್ದಿದ್ದಾಗಲೇ ಅಮೆರಿಕದ ಸಾವಿರಾರು ವಿದ್ಯಾರ್ಥಿಗಳು ಡ್ರಗ್ಸ್‌ನ ದಾಸರಾಗಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತಕ್ಷಣವೇ, ಡ್ರಗ್ಸ್ ಸೇವನೆಯಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು ಎಂಬ ವಿಷಯವಾಗಿ ಕ್ವಿನಾನ್ಸ್ ಒಂದು ಪ್ರಬಂಧ ಬರೆದು ಪ್ರಕಟಿಸಿದ. ಈ ಸಂಶೋಧನೆಗೆ ಪ್ರೊ. ಹೋಗೋ ಮೋರಾ ಎಂಬಾತ ಗೈಡ್ ಆಗಿದ್ದರು. ಕ್ವಿನಾನ್ಸ್‌ನ ಪ್ರಬಂಧವನ್ನು ಕಂಡ ಅವರು, ಇದಕ್ಕಿಂತ ಚೆನ್ನಾಗಿ ಬರೆಯಲು ನನ್ನಿಂದ ಕೂಡ ಸಾಧ್ಯವಿಲ್ಲ. ಮಾನವ ದೇಹದ ಅತಿ ಸೂಕ್ಷ್ಮ ಅಂಗವೆಂದರೆ ಮೆದುಳು. ಅದರ ಬಗ್ಗೆ, ಅದರ ಕಾರ್ಯ ಚಟುವಟಿಕೆ, ಅದಕ್ಕೆ ಬರುವ ಕಾಯಿಲೆ, ಅದಕ್ಕೆ ಪರಿಹಾರ... ಮುಂತಾದ ವಿಷಯದ ಬಗ್ಗೆ ಅಕಾರಯುತವಾಗಿ ಮಾತಾಡಲು ತುಂಬ ತಿಳಿವಳಿಕೆ ಇರಬೇಕು. ಅಂಥ ಬುದ್ಧಿ ನಿನಗಿದೆ. ನೀನು ಯಾಕೆ ಡಾಕ್ಟರಾಗಬಾರದು? ನೀನೇಕೆ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಗಬಾರದು? ಎಂದರು. ಅಷ್ಟಕ್ಕೇ ಸುಮ್ಮನಾಗದೆ ಹಾರ್ವರ್ಡ್‌ನ ಮೆಡಿಕಲ್ ಕಾಲೇಜಿಗೆ ಶಿಷ್ಯನ ಪ್ರಬಂಧವನ್ನು ಕಳಿಸಿಕೊಟ್ಟರು. ಅವನಿಗೆ ವೈದ್ಯ ಶಿಕ್ಷಣಕ್ಕೆ ಸೀಟು ಕೊಡುವಂತೆಯೂ ಆಗ್ರಹಿಸಿದರು. ಕ್ವಿನಾನ್ಸ್‌ನ ಪ್ರಬಂಧ ಕಂಡದ್ದೇ ಹಾರ್ವರ್ಡ್ ವಿವಿಯ ಎಲ್ಲರೂ ಬೆರಗಾದರು. ಆತನಿಗೆ ರತ್ನಗಂಬಳಿಯ ಸ್ವಾಗತ ಕೊಟ್ಟರು. ಕೆಲವೇ ವರ್ಷಗಳ ಹಿಂದೆ ಕ್ವಿನಾನ್ಸ್‌ನಿಂದ ಜೀತ ಮಾಡಿಸಿಕೊಂಡಿದ್ದ ಅಮೆರಿಕ ಸರಕಾರ, ತಾನೇ ಮುಂದಾಗಿ ಅವನಿಗೆ ಅಮೆರಿಕನ್ ಪೌರತ್ವ ನೀಡಿತು. ಸ್ಕಾಲರ್‌ಶಿಪ್ ನೀಡಿತು. ವಾಸಕ್ಕೆ ಮನೆ ಕೊಟ್ಟಿತು. ಷರತ್ತಿಲ್ಲದೆ ಸಾವಿರಾರು ಡಾಲರ್ ಸಾಲ ನೀಡಿತು.

ಹಳೆಯ ಗಾಯ, ಹಳೆಯ ಅವಮಾನ- ಈ ಎರಡನ್ನೂ ನೆನಪಿಟ್ಟುಕೊಂಡೇ ಕ್ವಿನಾನ್ಸ್ ಓದು ಮುಂದುವರಿಸಿದ. ಈ ಅಮೆರಿಕನ್ನರಿಂದ ಗೌರವ ಪಡೆಯಲೇಬೇಕು ಎಂಬ ಹಠದಿಂದಲೇ ಅಧ್ಯಯನಕ್ಕೆ ತೊಡಗಿಸಿಕೊಂಡ. ಕಡೆಗೂ ಅವನ ಛಲವೇ ಗೆದ್ದಿತು. ನರರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕ್ವಿನಾನ್ಸ್ ನಂತರದ ಎರಡೇ ವರ್ಷದಲ್ಲಿ ಅಮೆರಿಕದ ಅತ್ಯುತ್ತಮ ಮೆದುಳು ಶಸ್ತ್ರ ಚಿಕಿತ್ಸಾ ತಜ್ಞ' ಎಂದು ಹೆಸರು ಮಾಡಿದ.

***

ಈಗ, ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಜಾನ್ಸ್‌ಹಾಫ್‌ಕಿನ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾನೆ ಕ್ವಿನಾನ್ಸ್. ಮೆದುಳು ಕ್ಯಾನ್ಸರ್‌ಗೆ ತುತ್ತಾದವರನ್ನು ಬದುಕಿಸುವ ಮಹಾವೈದ್ಯ ಎಂದೇ ಅವನಿಗೆ ಹೆಸರಿದೆ. ಬದುಕುವುದೇ ಇಲ್ಲ ಎಂಬ ಹಂತಕ್ಕೆ ಹೋಗಿದ್ದ ರೋಗಿಗಳೆಲ್ಲ ಕ್ವಿನಾನ್ಸ್‌ನ ಕೈ ಚಳಕದಿಂದ ಹೊಸ ಬದುಕು ಕಂಡಿದ್ದಾರೆ. ಅಮೆರಿಕ ಸರಕಾರ, ಅವನಿಗೆ ಎಲ್ಲ ಅತ್ಯುನ್ನತ ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಆ ಮೂಲಕ ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದೆ.

ಇವತ್ತು, ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದರೂ 40ರ ಹರೆಯದ ಕ್ವಿನಾನ್ಸ್ ಬದಲಾಗಿಲ್ಲ. ಮೈಮರೆತಿಲ್ಲ. ಅಹಮಿಕೆಗೆ ಬಲಿಯಾಗಿಲ್ಲ. ಆತ ಹೇಳುತ್ತಾನೆ: ಒಂದು ಕಾಲದಲ್ಲಿ ಇದೇ ಅಮೆರಿಕದಲ್ಲಿ ಭಿಕ್ಷುಕನಂತೆ ಬದುಕಿದೆ. ಈ ಊರಲ್ಲಿ ತಲೆಎತ್ತಿಕೊಂಡು, ಅಮೆರಿಕನ್ನರಿಗೆ ಸರಿಸಮನಾಗಿ ಬದುಕಬೇಕೆಂಬ ಆಸೆಯಿತ್ತು. ಅದೀಗ ನನಸಾಗಿದೆ. ಅಮೆರಿಕದ ಹುಡುಗಿಯನ್ನೇ ಮದುವೆಯಾಗಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ. ಇವತ್ತೇ ಕಡೆಯ ದಿನ ಅಂದುಕೊಂಡೇ ಕೆಲಸ ಶುರುಮಾಡ್ತೀನಿ. ಮೆದುಳಿನ ಶಸ್ತ್ರಚಿಕಿತ್ಸೆ ಅಂದರೆ ಸಾವಿನೊಂದಿಗೆ ಸರಸ ಇದ್ದಂತೆ. ಅದು ದೇವರ ಜತೆಗಿನ ಹೋರಾಟ. ನನ್ನ ಕೈ ಚಳಕದ ಸತ್ವ ಪರೀಕ್ಷೆ. ಅದರಲ್ಲಿ ಗೆಲ್ಲಲೇಬೇಕು ಅಂದುಕೊಂಡೇ ಕೆಲಸ ಶುರು ಮಾಡ್ತೀನಿ. ಜೀಸಸ್, ನಿನ್ನ ವಿರುದ್ಧವೇ ಹೋರಾಡ್ತಾ ಇದೀನಿ. ನನಗೆ ಗೆಲುವಾಗುವಂತೆ ಆಶೀರ್ವದಿಸು ಎಂದು ಪ್ರಾರ್ಥಿಸಿದ ನಂತರವೇ ಆಪರೇಷನ್ ಥಿಯೇಟರಿಗೆ ನಡೆದುಹೋಗ್ತೀನಿ. ಮುದ್ದೆ ಮುದ್ದೆಯಂಥ, ಅಮೀಬಾದ ಚಿತ್ರದಂಥ ಮೆದುಳನ್ನು ಕಂಡಾಗ, ಅದರಲ್ಲಿ ಅತಿ ಸೂಕ್ಷ್ಮ ಭಾಗವೊಂದನ್ನು ಕತ್ತರಿಸಿ ತೆಗೆಯಬೇಕಾಗಿ ಬಂದಾಗ ನನಗೂ ಜೀವ ಝಲ್ ಅನ್ನುತ್ತೆ ನಿಜ. ಆದರೆ, ಆಗೆಲ್ಲ ನನಗೆ ನಾನೇ ಧೈರ್ಯ ಹೇಳಿಕೊಂಡು ಕೆಲಸ ಮಾಡ್ತೀನಿ. ಅದೃಷ್ಟ, ಸ್ವಪ್ರಯತ್ನ, ರೋಗಿಯ ಮನೋಸ್ಥೈರ್ಯ ಹಾಗೂ ಜೀಸಸ್‌ನ ಕರುಣೆಯಿಂದ ಪ್ರತಿ ಸಂದರ್ಭದಲ್ಲೂ ನಾನು ಗೆದ್ದಿದೀನಿ ಎನ್ನುತ್ತಾನೆ ಕ್ವಿನಾನ್ಸ್.

****

ಒಂದು ಕಾಲದಲ್ಲಿ ನಿನ್ನ ಮೆದುಳೇ ಖಾಲಿ ಕಣೋ ಎಂದು ಅಣಕಿಸಿದ್ದ ಅಮೆರಿಕದ ಜನರಿಂದಲೇ ಶ್ರೇಷ್ಠ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಕರೆಸಿಕೊಂಡನಲ್ಲ ಕ್ವಿನಾನ್ಸ್? ಅವನಿಗೆ ಲಾಲ್‌ಸಲಾಮ್ ಎನ್ನುವ ಆಸೆಯಾಗುತ್ತದೆ. ಹಿಂದೆಯೇ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಚೀರಿ ಹೇಳಬೇಕೆನಿಸುತ್ತದೆ. ಅಲ್ಲವೇ?

« ಲೇಖನದ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more