ಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ

Subscribe to Oneindia Kannada
Viniv Inc Satry, Mazavaani Interview
ಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ.

ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು ಸ್ವಾರಸ್ಯ ಎರಡೂ ಹಳತಾದರೂ ನಿರ್ಭಿಡೆಯಿಂದ ವರದಿಮಾಡುವ ಮಜಾವಾಣಿ ಪತ್ರಿಕೆ ಈಗಲಾದರೂ ನನ್ನನ್ನು ಸಂಪರ್ಕಿಸಿರುವುದು ಶ್ಲಾಘನೀಯ. ಎಷ್ಟೋ ವರ್ಷಗಳ ಹೋರಾಟದ ನಂತರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದು ನಿಜಕ್ಕೂ ಒಂದು ಅತ್ಯಂತ ಸಂತಸದ ವಿಷಯ" ಎಂದರು.

"ಕನ್ನಡ ಪ್ರೇಮಿಗಳು, ಕವಿ-ಸಾಹಿತಿಗಳು ನನ್ನ ಬಗ್ಗೆ ಇಷ್ಟೊಂದು ಆದರ ಹೊಂದಿದ್ದಾರೆ ಎಂದರೆ ನನಗೆ ನಂಬುವುದಕ್ಕೆ ಸಾಧ್ಯ ಇಲ್ಲ. ಆದರೆ, ಈ ಪ್ರಪಂಚದಲ್ಲಿ ಎಷ್ಟೋ ಮಂದಿ ಶಾಸ್ತ್ರಿಗಳು ಇದ್ದಾರೆ. ಅವರೆಲ್ಲರೂ ಕನ್ನಡ ಭಾಷೆ ನನ್ನದು ಎಂದು ಜನ ಸಾಮಾನ್ಯರನ್ನು ಗಲಿಬಿಲಿಗೊಳಿಸಿ ವಂಚಿಸುವ ಸಾಧ್ಯತೆ ಇದೆ. ಅದರೆ ಬಗೆಗೆ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಗಮನ ಹರಿಸಬೇಕು" ಎಂದರು.

ಗಲಿಬಿಲಿಗೊಳ್ಳುವಲ್ಲಿ ಜನ ಸಾಮಾನ್ಯರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವ ಮಜಾವಾಣಿ ಪತ್ರಿಕೆ, ಕೆಲ ವರ್ಷಗಳ ಹಿಂದೆಯೇ ಈ ವಿಚಾರದಲ್ಲಿ ಗಲಿಬಿಲಿಗೊಂಡು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ರವಿ ಶಾಸ್ತ್ರಿಯವರನ್ನು ಸಂದರ್ಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಮಜಾವಾಣಿ ಬ್ಯೂರೋ ವರದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...