ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರಿಲ್ಲದ ಜಗತ್ತಿನಲ್ಲಿ ದೇವರೂ ಇರಲಿ ಕ್ಕಿಲ್ಲ ಬಿಡಿ !

By Super
|
Google Oneindia Kannada News

ತೀ. ನಂ. ಶ್ರೀಕಂಠಯ್ಯ ಅವರ ಕಂಠ, ಉಪನ್ಯಾಸಕ್ಕೆ ಸೊಗಸಾಗಿ ಹೊಂದುವುದಾದರೂ ಗಾನಕ್ಕೆ ಹೊಂದುವಂಥದಲ್ಲ. ಅದನ್ನು ಕುರಿತ ಹಾಸ್ಯವೆಷ್ಟೊ ! ಒಂದು ದಿನ ಕಾಮನ್‌ ರೂಮಿನಲ್ಲಿ ತಾವು ಆ ದಿನ ಅಪರೂಪಕ್ಕೆ ಕವನವೊಂದನ್ನು ಕಟ್ಟಿದ ವಿಚಾರವನ್ನು ತೀ.ನಂ. ಶ್ರೀಕಂಠಯ್ಯ ತಿಳಿಸಿದರು. ಆ ಮೇಲೆ ಮಾತು ಹೆಚ್ಚು ಕಡಮೆ ಹೀಗೆ ನಡೆಯಿತು:-

ಎ. ಎನ್‌. ಮೂರ್ತಿರಾವ್‌: ಮೌನವ್ರತಾಚಾರಿಯಾದ ಕೋಗಿಲೆಯಿಂದು ಮೌನವಂ ಬಿಟ್ಟುಲಿಯತೊಡಗಿಹುದು.

ನಾ. ಕಸ್ತೂರಿ: ಕೋಗಿಲೇನ ಯಾಕೆ insult ಮಾಡುತ್ತೀರಪ್ಪ ? ಅದೇನು ಅಪರಾಧ ಮಾಡಿತಯ್ಯ?

ನಾರಾಯಣಶಾಸ್ತ್ರಿ : ಈ ಕೋಗಿಲೆ ಗಂಟಲಿನಿಂದ ಹಾಡೊಲ್ಲ. ಲೇಖನಿಯಿಂದ ಹಾಡುತ್ತೆ.

ಶಿವರಾಮಶಾಸ್ತ್ರಿ : ನಾವು ಬದುಕಿದೆವು. ದೇವರ ದಯ!

ತೀನಂಶ್ರೀ : ಹೀಗೆಲ್ಲ ಮಾತಾಡಿದರೆ ನಾನು ಗಂಟಲಿಂದಲೇ ಹಾಡಿಬಿಡುತೀನಿ. ಹುಷಾರ್‌!

ಎಲ್ಲರೂ: (ಭಯದಿಂದ ನಡುಗುವ ಅಭಿನಯ ಮಾಡಿ) ನಿಮ್ಮ ದಮ್ಮಯ್ಯ.

ತೀನಂಶ್ರೀ: ದಮ್ಮಯ್ಯ ಗಿಮ್ಮಯ್ಯ ನಾನು ಲೆಕ್ಕಕ್ಕಿಡುತಾ ಇರಲಿಲ್ಲ . ಆದರೆ.. (ತಾವೂ ಹೆದರಿದವರಂತೆ) ನನ್ನ ಸಂಗೀತ ನನ್ನ ಕಿವಿಗೂ ಬೀಳುತ್ತಲ್ಲ ! ಅದೇ ಹೆದರಿಕೆ !

ಇದು ಎ. ಎನ್‌.ಮೂರ್ತಿರಾಯರ ಹಾಸ್ಯಪ್ರವೃತ್ತಿಗೊಂದು ಸಾಕ್ಷಿ. ಹಾಗೇ ಅವರ ಸುತ್ತಲೂ ಇದ್ದ ಗೆಳೆಯರ ಬಳಗ ಎಂಥದ್ದು ಅನ್ನುವುದನ್ನೂ ತೋರಿಸುತ್ತದೆ. ಮೈಸೂರಿನಲ್ಲಿ ಜೊತೆಗಿದ್ದ ಈ ಗೆಳೆಯರೆಲ್ಲ ಸೇರಿ ಒಬ್ಬರನ್ನೊಬ್ಬರು ಗೇಲಿ ಮಾಡುತ್ತಲೇ ಗೆಳೆತನ ಉಳಿಸಿಕೊಂಡವರಾಗಿದ್ದರು. ಒಬ್ಬರನ್ನೊಬ್ಬರು ‘ಕನ್ನಡಿಗರಡಿಯಾಳು' ಎಂದೂ, ಸಿರಿಗನ್ನಡದ ಡಿಂಗರಿಗ ಎಂದೂ, ಕನ್ನಡತಾಯ ಸಿರಿಮಕ್ಕಳು ಎಂದೂ ಪರಸ್ಪರ ಹಾಸ್ಯ ಮಾಡಿಕೊಂಡು ಜೊತೆಗಿರುತ್ತಿದ್ದವರು. ಒಂದೇ ವಿಚಾರದ ಬಗ್ಗೆ ಮತ್ತೆ ಮತ್ತೆ ಭಾಷಣ ಮಾಡುವವರಿಗೆ ನಾ. ಕಸ್ತೂರಿಯವರು ‘ತಟ್ಟೆ' ಎಂದು ಹೆಸರಿಟ್ಟಿದ್ದರಂತೆ. ಗ್ರಾಮಫೋನ್‌ ರೆಕಾರ್ಡಿನಂತೆ ಹೇಳಿದ್ದನ್ನೇ ಹೇಳುತ್ತಾರೆ ಅನ್ನುವುದು ಆ ಪದದ ಭಾವಾರ್ಥ. ಇಂಥ ಗೆಳೆಯರ ನಡುವೆ ಇದ್ದ ಮೂರ್ತಿರಾಯರು ಹಾಸ್ಯವುಕ್ಕಿಸುವ ಪ್ರಬಂಧಗಳನ್ನು ಬರೆದದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

*

ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು ಕನ್ನಡ ಸಾಹಿತ್ಯ ಜಗತ್ತು ಕಂಡ ಅಪರೂಪದ ಪ್ರತಿಭೆ. ಅವರು ಪ್ರಬಂಧಗಳನ್ನು ಬರೆದರು, ನಾಟಕಗಳನ್ನು ಅನುವಾದಿಸಿದರು, ವಿಮರ್ಶೆ ಬರೆದರು. ಆದರೆ ಅವರು ಜನಪ್ರಿಯರಾದದ್ದು ಸಾಹಿತ್ಯಿಕ ಸಾಧನೆಗಳಿಂದ ಅಲ್ಲ. ಶತಾಯುಷಿಯಾಗಿದ್ದರಿಂದಲೂ ಅಲ್ಲ. ಎ. ಎನ್‌.ಮೂರ್ತಿರಾಯರನ್ನು ಮೆಚ್ಚುವ ಮಂದಿ ಅವರನ್ನು ಮಾನವೀಯತೆಯ ಸಾಕಾರ ಎಂದೇ ಭಾವಿಸಿದ್ದರು. ಮೂರ್ತಿರಾಯರ ಓರಗೆಯ ಲೇಖಕರು ಈಗ ಬದುಕಿಲ್ಲ. ಅವರಿಗಿಂತ ಕಿರಿಯ ಲೇಖಕರ ಪಾಲಿಗೆ ಅವರೇನಿದ್ದರೂ ಗೌರವಾರ್ಹ ಹಿರಿಯ ಲೇಖಕರು. ಹೀಗಾಗಿ ಅವರು ತಮ್ಮ ಸಮಕಾಲೀನರನ್ನು ಬಿಟ್ಟರೆ ಮತ್ತೊಂದು ತಲೆಮಾರಿನ ಲೇಖಕರ ಜೊತೆ ಅಂಥ ತಾದಾತ್ಯ್ಮ ಹೊಂದಿರಲಿಲ್ಲ. ಅದು ಅವರ ಕುರಿತ ಗೌರವ ಮತ್ತು ಪ್ರೀತಿ ಇಮ್ಮಡಿಸುವುದಕ್ಕೂ ಕಾರಣವಾಗಿರಬೇಕು.

ಮೂರ್ತಿರಾಯರ ಕುರಿತು ಬರೆಯುವುದು ಈ ಕಾರಣದಿಂದಲೇ ಕಷ್ಟದ ಕೆಲಸ. ನವ್ಯ ಸಾಹಿತ್ಯದ ಗಾಳಿ ತಮ್ಮತ್ತ ಬೀಸಿಯೇ ಇಲ್ಲ ಎಂಬಷ್ಟು ಶ್ರದ್ಧೆಯಿಂದ ತಮಗೆ ಅನ್ನಿಸಿದ್ದನ್ನು ಬರೆದವರು ಅವರು. ಹೀಗಾಗಿ ಒಂದು ತಲೆಮಾರಿನ ಲೇಖಕರ ಪಾಲಿಗೆ ಮೂರ್ತಿರಾಯರು ಪ್ರಭಾವ ಬೀರಬಲ್ಲ ಪ್ರಮುಖ ಸಾಹಿತಿಯಾಗಿ ಗೋಚರಿಸಲೇ ಇಲ್ಲ. ಹೀಗಾಗಿ ಅವರಿಗೆ ಒಲಿದ ಗರಿಗರಿಯಾದ ಕನ್ನಡ ಭಾಷೆ ಅವರದಷ್ಟೇ ಸೊತ್ತಾಗಿಬಿಟ್ಟಿತು. ಅಂಥ ಕನ್ನಡವನ್ನು ಅವರಿಂದ ಕಲಿತು ಬರೆಯುವುದಕ್ಕೂ ಯಾರೂ ಯತ್ನಿಸಲಿಲ್ಲ. ಮೂರ್ತಿರಾಯರ ಭಾಷೆಗೊಂದು ಉದಾಹರಣೆ ತಗೊಳ್ಳಿ:

‘ಯಾರಾದರೂ ತರ್ಜನಿಯಿಂದ ನನ್ನನ್ನು ತಿವಿದು ‘ನೀನು ಒಂದೆರಡು ಪುಸ್ತಕಗಳನ್ನು ಅಚ್ಚುಹಾಕಿಸಿದ್ದುಂಟೋ ಇಲ್ಲವೋ ? ಸತ್ಯವಾಗಿ ಹೇಳು ?' ಎಂದು ಗದರಿಸಿದರೆ ‘ಮಾಡಿದ್ದುಂಟು, ಅಪರಾಧವಾಯಿತು' ಎಂದು ಒಪ್ಪಬೇಕಾಗುತ್ತದೆ. ಆದರೂ ಸಾಹಿತಿ ಎಂಬ ಹೆಸರಿಗೆ ಬೇಕಾದ ಅರ್ಹತೆ ಪಡೆದಿದ್ದೇನೆ ಎಂದು ಹೇಳಲಾರೆ. ತೀರ ಹೆಚ್ಚೆಂದರೆ, ಸಾಹಿತಿಗಳು ಬರೆದ ಸೂತ್ರಗಳಿಗೆ ನಾನು ವ್ಯಾಖ್ಯಾನ ಹೇಳುವ ಪ್ರಾಣಿ ಎಂದುಕೊಳ್ಳಬಹುದೇನೋ- ಆ ವ್ಯಾಖ್ಯಾನಗಳನ್ನೂ ಬರೆದಿಡುವ ಸಾಹಸಕ್ಕೆ ಹೋದವನಲ್ಲ . ಸಾಹಿತ್ಯಕ್ಕೆ ಉಚಿತವಾದ ಅಲಂಕಾರಿಕ ಭಾಷೆಯನ್ನು ಉಪಯೋಗಿಸಬಹುದಾದರೆ, ನಾನು ಸರಸ್ವತೀಪುತ್ರರೆಂದು ಹೆಸರು ಪಡೆದಿರುವವರ ಹಿಂದೆ ಓಡಾಡುವ ಓಲೆಕಾರ. ಸಾಹಿತ್ಯ ಕಲ್ಪ ವೃಕ್ಷದ ಮೇಲೆ ಆಶ್ರಯ ಪಡೆದು ಬೆಳೆಯುತ್ತಿರುವ ಬಂದಳಿಕೆ; ಸಾಹಿತ್ಯ ಚಕ್ರವರ್ತಿಯ ಒಡ್ಡೋಲಗದ ದ್ವಾರಪ್ರದೇಶದಲ್ಲಿ ನಿಂತಿರುವ ಚಪ್ರಾಸಿ.'

ಈ ಭಾಷೆ ಎಷ್ಟು ಮಧುರವಾಗಿದೆ ಮತ್ತು ಇವತ್ತಿಗೂ ಎಷ್ಟೊಂದು ತಾಜಾ ಆಗಿದೆ ನೋಡಿ. ಬಹುಶಃ ಮೂರ್ತಿರಾಯರು ಇದನ್ನು ಬರೆದು ಐವತ್ತು ವರುಷಗಳಾದರೂ ಕಳೆದಿರಬೇಕು. ಐವತ್ತು ವರುಷಗಳ ನಂತರವೂ ನಮ್ಮ ಅನೇಕ ಸಾಹಿತಿಗಳು ಬಳಸುತ್ತಿರುವ ಭಾಷೆಯಲ್ಲಿ ಈ ಬರಹದಲ್ಲಿರುವಷ್ಟು ಸ್ಪಷ್ಟತೆ ಇಲ್ಲ.

ಮೂರ್ತಿರಾಯರನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೆಲುಕುಹಾಕಬೇಕು. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಮುಂತಾದ ಸಾಹಿತ್ಯಿಕ ಚಳವಳಿಗಳನ್ನು ಒಳಗೊಂಡು ಬೆಳೆದುಬಂದ ಸಾಹಿತ್ಯ ಪ್ರಕಾರಗಳನ್ನು ನಾವು ಸುಲಭವಾಗಿ ಗುರುತಿಸಬಹುದು. ಕತೆಯಲ್ಲಿ , ಕಾವ್ಯದಲ್ಲಿ , ಸ್ವಲ್ಪ ಮಟ್ಟಿಗೆ ಕಾದಂಬರಿಗಳಲ್ಲಿ , ಬಹುಮಟ್ಟಿಗೆ ವಿಮರ್ಶೆಯಲ್ಲಿ ಈ ಸಾಹಿತ್ಯಿಕ ಪ್ರಬೇಧದ ಕುರುಹುಗಳು ಅಚ್ಚೊತ್ತಿವೆ. ಅಸಂಗತ, ನವ್ಯ, ಏಕಾಂಕ ಮುಂತಾದ ಪರಿಭಾಷೆಯಲ್ಲಿ ನಾಟಕ ಕೂಡ ಬದಲಾವಣೆಯ ಹಾದಿ ಹಿಡಿದಿದ್ದನ್ನು ನಾವು ನೋಡಬಹುದು.

ಆದರೆ ಆರಂಭದಿಂದ ಇಂದಿನ ತನಕ ಯಾವ ಸಾಹಿತ್ಯ ಚಳವಳಿಯನ್ನೂ ಮೈಗೂಡಿಸಿಕೊಳ್ಳದೇ ಉಳಿದ ಏಕೈಕ ಪ್ರಕಾರ- ಪ್ರಬಂಧ. ಮಂಜೇಶ್ವರ ಗೋವಿಂದ ಪೈಗಳ ‘ಬರಹಗಾರನ ಹಣೆಬರಹ'ದಿಂದ ಆರಂಭಿಸಿ, ಪಂಜೆ ಮಂಗೇಶರಾಯರ ‘ಹಳೆಯ ಸಬ್‌ ಎಸಿಸ್ತಾಂಟನ ಡೈರಿಯಿಂದ' ಓದಿ, ಕುವೆಂಪು ಬರೆದ ‘ತೋಟದಾಚೆಯ ಭೂತ'ವನ್ನು ದಾಟಿಕೊಂಡು ತೇಜಸ್ವಿಯವರ ಪರಿಸರದ ಕತೆಗಳತ್ತ ಬಂದರೂ ಪ್ರಬಂಧದ ಧಾಟಿಯೂ ಅದೇ. ಶೈಲಿಯೂ ಅದೇ. ಕೆ. ಸತ್ಯನಾರಾಯಣರ ನಮ್ಮ ಪ್ರೀತಿಯ ಕ್ರಿಕೆಟ್‌ನಲ್ಲೂ ಪ್ರಭುಶಂಕರರ ಪ್ರಬಂಧಗಳಲ್ಲೂ ರಾಕು ಬರೆದ ಧಾಟಿಯ ಮೇಲೆ ಧಾಳಿಯಲ್ಲೂ ಅದೇ ತಿಳಿಹಾಸ್ಯ. ಹೀಗಾಗಿ ಲಲಿತ ಪ್ರಬಂಧವನ್ನು ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಮತ್ತುಯಾವುದನ್ನೂ ನಿರಾಕರಿಸಬಲ್ಲ ಛಾತಿ ಎರಡನ್ನೂ ಹೊಂದಿರುವ ಪ್ರಕಾರ ಎನ್ನಬಹುದೇನೋ? ಯಾಕೆಂದರೆ ಕಾಲದ ತುರ್ತುಗಳಿಗೆ ಇದೊಂದು ಪ್ರಕಾರ ಸ್ಪಂದಿಸುವುದಕ್ಕೇ ಹೋಗಲಿಲ್ಲ . ವೈದೇಹಿಯವರ ಪ್ರಬಂಧಗಳಲ್ಲೂ ಮಹಿಳಾವಾದ ಹಣಿಕಿಹಾಕಲಿಲ್ಲ. ಲಂಕೇಶರ ಪ್ರಬಂಧಗಳಲ್ಲಿ ಟೀಕೆಯ ಸುಳಿವಿಲ್ಲ. ಹಾಮಾ ನಾಯಕರ ಎಸ್ಸ್ಯೇಗಳಲ್ಲಿ ಮಿಡಿಯಾಕ್ರಿಟಿ ಇಲ್ಲ.

ಇಂಥದ್ದೊಂದು ಪ್ರಕಾರವನ್ನೇ ಮಾಧ್ಯಮವಾಗಿಸಿಕೊಂಡ ಮೂರ್ತಿರಾಯರು ಕೂಡ ಸಹಜವಾಗಿಯೇ ತಮ್ಮ ಪ್ರಖರ ಚಿಂತನೆಯ ಮೂಲಕ ಪ್ರಕಟಗೊಂಡವರಲ್ಲ . ಅವರ ವಿಚಾರಗಳಲ್ಲಿ ಪ್ರಖರತೆಯಿತ್ತು. ಪಾಂಡಿತ್ಯದಲ್ಲಿ ಆಳವೂ ವಿಸ್ತಾರವೂ ಇತ್ತು. ಆದರೆ ಅದು ಅವರ ಬರಹಗಳಲ್ಲಿ ಪ್ರಭಾವಿಸುವಷ್ಟರ ಮಟ್ಟಿಗೆ ದಾಖಲಾಗಲಿಲ್ಲ. ಆ ಕಾರಣಕ್ಕೇ ಅವರ ಎಲ್ಲ ಪ್ರಬಂಧಗಳೂ ಎಲ್ಲ ವಯೋಮಾನದ ಮನೋಧರ್ಮದ ಓದುಗರಿಗೆ ಇಷ್ಟವಾಗುವಂಥವು.

*

ಮೈಸೂರು ಮಹಾರಾಜ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ, ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಮೈಸೂರು ಆಕಾಶವಾಣಿಯ ನಿಲಯ ನಿದೇಶಕರಾಗಿ ಮೂರ್ತಿರಾವ್‌ ಸಾಕಷ್ಟು ಸಾರ್ವಜನಿಕವಾಗಿಯೇ ಕಾಣಿಸಿಕೊಂಡಿದ್ದಾರೆ. ಅಕಾಡೆಮಿ, ರಾಜ್ಯೋತ್ಸವ, ಪಂಪ, ಮಾಸ್ತಿ ಮುಂತಾದ ಪ್ರಶಸ್ತಿ ಪಡಕೊಂಡಿದ್ದಾರೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಇಂಥದ್ದೇ ಹಲವು ಸಂಘ ಸಂಸ್ಥೆಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲಿಷಿನಲ್ಲಿ ಏಳೆಂಟು, ಕನ್ನಡದಲ್ಲಿ ಹತ್ತಿಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ನಾಲ್ಕೈದು ವಿಮರ್ಶಾಗ್ರಂಥಗಳನ್ನು ಹೊರತಂದಿದ್ದಾರೆ. ಆತ್ಮಚರಿತ್ರೆ ಬರೆದಿದ್ದಾರೆ. ವಿಚಾರಪ್ರದ ಲೇಖನಗಳನ್ನು ಸಂಗ್ರಹಿಸಿದ್ದಾರೆ.

ಹಾಗಿದ್ದರೂ ಮೂರ್ತಿರಾಯರನ್ನು ಗುರುತಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇವತ್ತಿಗೂ ಸಾಹಿತ್ಯದಲ್ಲಿ ಅಂಥ ಆಸಕ್ತಿಯಿಲ್ಲದ, ಪತ್ರಿಕೆಗಳಲ್ಲಿ ಪ್ರಕಟವಾಗುವ ಕತೆ, ಕಾದಂಬರಿ ಮತ್ತು ಪ್ರಬಂಧಗಳನ್ನು ಓದುವವರಿಗೆ ಮೂರ್ತಿರಾಯರು ಏನು ಬರೆದಿದ್ದಾರೆ ಅನ್ನುವುದು ಗೊತ್ತಿಲ್ಲ. ಪ್ರಬಂಧಕ್ಕೂ ಕತೆಗೂ ಇರುವ ವ್ಯತ್ಯಾಸವೇ ಮರೆತುಹೋಗುವಂತೆ ಇವತ್ತಿನ ಅನೇಕ ಲೇಖಕರು ಬರೆಯುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಲಲಿತಪ್ರಬಂಧಗಳು ಹರಟೆಗಳೂ ಹಾಸ್ಯಲೇಖನಗಳೂ ಅನುಭವ ಕಥನಗಳೂ ಆಗುತ್ತಿವೆ. ವಿಮರ್ಶೆಯ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ವಾಲ್ಮೀಕಿಯಲ್ಲಿ , ಉತ್ತರಕಾಂಡದಲ್ಲಿ , ಕಾಳಿದಾಸನಲ್ಲಿ ಮತ್ತು ಭವಭೂತಿಯಲ್ಲಿ ಸೀತಾಪರಿತ್ಯಾಗದ ಸನ್ನಿವೇಶ ಹೇಗೆ ಮೂಡಿಬಂದಿದೆ ಎಂಬ ಬಗ್ಗೆ ನೀಡಿದ ಉಪನ್ಯಾಸಗಳ ಸಂಗ್ರಹ ‘ಪೂರ್ವಸೂರಿಗಳೊಡನೆ' ಇವತ್ತು ಓದುವವರು ಮೂಲ ಕೃತಿಗಳನ್ನು ಓದಿರುವುದಿಲ್ಲವಾದ್ದರಿಂದ ಅದರ ರಸಾನುಭವ ಆಗುವುದಿಲ್ಲ. ಸಿದ್ಧತೆ ಇಲ್ಲದ ಓದುಗನಿಗೆ ಮೂರ್ತಿರಾಯರು ದಕ್ಕುವವರಲ್ಲ. ಉತ್ತರ ಕಾಂಡದಲ್ಲಿರುವ ಸೀತಾಪರಿತ್ಯಾಗದ ಸನ್ನಿವೇಶದ ಬಗ್ಗೆ ಹೇಳುತ್ತಾ ಮೂರ್ತಿರಾಯರು- ‘ರಾಮನೇ ನನ್ನನ್ನು ನಂಬಲಿಲ್ಲ ಅಂದ ಮೇಲೆ ನನ್ನ ತಾಯಿ ನನಗೆ ತೋಳ್ತೆರೆದು ಆಶ್ರಯ ಕೊಡಲಿ' ಎನ್ನುವುದನ್ನು ವಿವರಿಸಿರುವ ಕ್ರಮವೇ ಅವರ ಸೂಕ್ಪ್ಮ ಗ್ರಹಿಕೆಗೆ ಸಾಕ್ಷಿ. ಸೀತೆ ತಾಯಿ ಆಶ್ರಯ ಕೊಡಲಿ ಎಂದು ಪರೋಕ್ಷವಾಗಿ ಹೇಳುತ್ತಾಳೆಯೇ ಅಥವಾ ತಾಯೇ ಆಶ್ರಯ ಕೊಡು ಎಂದು ನೇರವಾಗಿ ಕೇಳುತ್ತಾಳೆಯೇ ಎಂಬ ಬಗ್ಗೆ ಅವರು ಎತ್ತಿರುವ ಸಂದೇಹಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ತಕ್ಕ ಸಿದ್ಧತೆ ಬೇಕಾಗುತ್ತದೆ.

*

ಪ್ರಬಂಧಗಳು ಸಣ್ಣ ಕತೆಯಂತಲ್ಲ , ಕಾದಂಬರಿಯಂತಲ್ಲ . ಅವು ಒಂದು ಅರ್ಥದಲ್ಲಿ ಆತ್ಮಚರಿತ್ರೆಯ ತುಣುಕುಗಳಿದ್ದಂತೆ. ಆತ್ಮಚರಿತ್ರೆ ಒಂದು ಬದುಕಿನ ಪ್ರಜ್ಞಾಪೂರ್ವಕ ಗಳಿಗೆಗಳ ದಾಖಲೆಯಾದರೆ ಪ್ರಬಂಧ ಅಪ್ರಜ್ಞಾಪೂರ್ವಕ ಲಹರಿಯಿದ್ದಂತೆ. ಅದರಿಂದ ಪ್ರಬಂಧಕಾರನ ಜೀವನದ ಉಲ್ಲೇಖಾರ್ಹ ಘಟನೆಗಳು ತಿಳಿಯದೇ ಹೋಗಬಹುದು. ಆದರೆ ಅವನ ವ್ಯಕ್ತಿತ್ವದ ಗುರುತು ಸಿಗುತ್ತದೆ. ಅದಕ್ಕೆ ಉದಾಹರಣೆಯಾಗಿ ಮೂರ್ತಿರಾಯರ ‘ದೆವ್ವಗಳನ್ನು ಕುರಿತು' ಪ್ರಬಂಧದ ನಾಲ್ಕು ಸಾಲುಗಳನ್ನು ಓದಬಹುದು;

‘ದೆವ್ವಗಳಿವೆ ಎನ್ನುವುದಕ್ಕೆ ನನಗೆ ಇದುವರೆಗೆ ಯಾವ ಆಧಾರವೂ ದೊರೆತಿಲ್ಲ. ಎಷ್ಟೋ ವೇಳೆ ಹವೇಲಿಯಂತಿರುವ ದೊಡ್ಡ ಮನೆಗಳಲ್ಲಿ ಊರ ಹೊರಗಿನ ಪ್ರವಾಸಿಮಂದಿರಗಳಲ್ಲಿ ಒಂಟಿಯಾಗಿ ರಾತ್ರಿಯನ್ನು ಕಳೆದಿದ್ದೇನೆ. ಅಮಾವಾಸ್ಯೆಯ ಕತ್ತಲಿನ ಅವೇಳೆಯಲ್ಲಿ ಸ್ಮಶಾನಗಳ ಬಳಿ ತಿರುಗಾಡಿದ್ದೇನೆ. ದೆವ್ವಗಳಿಗೆ ಪ್ರಿಯವೆಂದು ಹೆಸರು ಪಡೆದಿರುವ ಹುಣಸೆಯ ತೋಪುಗಳಲ್ಲಿ ಹಾದುಹೋಗಿದ್ದೇನೆ. ಇಷ್ಟಾದರೂ ಒಂದೇ ಒಂದು ದೆವ್ವ ನನ್ನ ಕಣ್ಣಿಗೆ ಬಿದ್ದಿಲ್ಲ. ಇದನ್ನು ನೆನೆದು ನನಗೆ ಅವಮಾನವಾಗಿದೆ. ಈ ಲೋಕದಲ್ಲಿ ಸತ್ತವರ ಸಂಖ್ಯೆ ಎಣಿಸಲಾರದಷ್ಟು. ಅವರಲ್ಲಿ ಸಾವಿರಕ್ಕೆ ಒಂದರಷ್ಟು ಜನ ದೆವ್ವಗಳಾಗಿದ್ದಾರೆಂದರೂ ನನ್ನ ಸುತ್ತಮುತ್ತಲೂ ಸಾವಿರಗಟ್ಟಲೆ ದೆವ್ವಗಳು ಗಾಳಿಯಾಗಿ ಅಲೆಯುತ್ತಿರಬೇಕು. ಅವುಗಳಲ್ಲಿ ಯಾವುದಾದರೊಂದು ಅನಾಥ ಪ್ರೇತ ನನಗೆ ಕಾಣಿಸಿಕೊಂಡು ಕುಶಲಪ್ರಶ್ನೆ ಮಾಡಬೇಡವೇ? ಒಂದು ಮೋಹಿನಿ ಕೈನೀಡಿ ತಾಂಬೂಲ ಕೊಡಬೇಡವೇ ? ಅವುಗಳ ದೃಷ್ಟಿಯಲ್ಲಿ ನಾನು ಗಣನೆಗೇ ಬಾರದ ಮನುಷ್ಯ ಎಂದಂತಾಯಿತು.'

*

ಇಷ್ಟು ಸೊಗಸಾಗಿ ದೆವ್ವಗಳ ಕುರಿತು ಬರೆದಿದ್ದರೂ ಮೂರ್ತಿರಾಯರನ್ನು ಓದುಗರು ನೆನಪಿಸಿಕೊಳ್ಳುವುದು ದೇವರಿಲ್ಲ ಎಂದ ನಾಸ್ತಿಕವಾದಿಯಾಗಿಯೇ. ಅವರ ‘ದೇವರು' ಕೃತಿ ಇವತ್ತಿಗೂ ಮರುಮುದ್ರಣ ಕಾಣುತ್ತಿದೆ. ದೇವರಿಲ್ಲ ಎಂದು ವಾದಿಸುವವರು ಮೂರ್ತಿರಾಯರ ವಾದಗಳನ್ನೇ ಇವತ್ತಿಗೂ ಮುಂದಿಡುತ್ತಾರೆ.

ಹಾಗೆ ನೋಡಿದರೆ, ದೇವರು ಇಲ್ಲ ಎಂದು ಹೇಳುವ ಅರ್ಹತೆ ಇದ್ದ ವ್ಯಕ್ತಿ ಮೂರ್ತಿರಾಯರೊಬ್ಬರೇ. ಯಾಕೆಂದರೆ ಅವರು ದೇವರಿಗಿಂತ ದೊಡ್ಡ ಮಾನವತಾವಾದಿಯಾಗಿದ್ದರು. ದೈವ ಸಂಪನ್ನರಾಗಿದ್ದರು. ಒಳ್ಳೆಯತನದಲ್ಲಿ ದೇವರನ್ನು ಅವರು ಕಾಣುತ್ತಿದ್ದರು. ಪ್ರೇಮ ಸ್ವರೂಪನಾದ ದೇವರು ಬೇಕು ಅನ್ನು ತ್ತಿದ್ದರು. ಅಂಥವನೊಬ್ಬ ಇಲ್ಲ ವಲ್ಲ ಎಂದು ಬೇಸರ ಮಾಡಿಕೊಳ್ಳುತ್ತಿದ್ದರು.

ತೀನಂಶ್ರೀ ಕಣ್ಮರೆಯಾದಾಗ ಮೂರ್ತಿರಾಯರು ಬರೆದಿದ್ದರು- ಸಂಸಾರದಲ್ಲಿ , ಸಖ್ಯದಲ್ಲಿ , ಸಮಾಜದಲ್ಲಿ, ಸಾಹಿತ್ಯದಲ್ಲಿ ಸೌಖ್ಯವನ್ನು ಕಂಡು ಆಸ್ವಾದಿಸಿದ ಮತ್ತು ಹರಡಿದ ಜೀವ ಶ್ರೀಕಂಠಯ್ಯನವರದ್ದು. ಮೂರ್ತಿರಾಯರ ಕುರಿತೂ ಇದೇ ಮಾತನ್ನು ಹೇಳಬೇಕು. ಎಷ್ಟಾದರೂ ಅವರಿಬ್ಬರೂ ಮಿತ್ರರಲ್ಲವೇ.

*

ದೇವರು ಇಲ್ಲ ಎಂದು ನಂಬಿದ್ದ, ನಂಬಿ ನಡೆದ ಮೂರ್ತಿರಾಯರು ಮುಂದಕ್ಕೆ ಸಾಗಿದ್ದಾರೆ. ಈಗ ಮೂರ್ತಿರಾಯರಿಲ್ಲ.

ದೇವರು ಇಲ್ಲ ಅಂತ ಈಗ ಅನ್ನಿಸುತ್ತಿದೆ!

(ಸ್ನೇಹ ಸೇತು: ಹಾಯ್‌ ಬೆಂಗಳೂರು)

English summary
Thereda bagilu : Friday Column by Janaki, A. N. Murthy Rao and the belief of God
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X