ಮಳೆಗಾಗಿ ಪೂಜೆ ಮಾಡಿಸಿದ್ದ ಡಿಕೆಶಿ, ಪಾಟೀಲರನ್ನು ಬೆಂಡೆತ್ತಿದ ಸಿದ್ದರಾಮಯ್ಯ

Posted By:
Subscribe to Oneindia Kannada

(ಕಾಲ್ಪನಿಕ ಲೇಖನ) ಅಲ್ಲ ಕಣಯ್ಯಾ.. ಬೇಡ ಬೇಡ ಎಂದರೂ ಮಳೆಗಾಗಿ ಪೂಜೆ ಮಾಡಿಸಿದ್ದೀಯಾ, ಈಗ ನೋಡು.. ಬೇಡ ಬೇಡ ಎಂದ್ರೂ ಮಳೆ ಉಯ್ತಾಇದೆ.. ರೋಡಾ.. ಕೆರೆನಾ ಗೊತ್ತಾಗದಂಗೆ ಕೋಡಿ ಹರಿತಾ ಇದೆ.. ಜನ್ರಿಗೆ ಯಾವನಯ್ಯಾ ಉತ್ತರ ಕೊಡೋದು, ಇದು ಸಚಿವ ಎಂ ಬಿ ಪಾಟೀಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಪರಿ..

ಬುಧವಾರ (ಅ 11) ಬೆಂಗಳೂರಿನಲ್ಲಿ ಮತ್ತೆ ಮಳೆ ಆವಾಂತರ ಮುಂದುವರಿದ ನಂತರ, ಮಂಡೆಬಿಸಿ ಮಾಡಿಕೊಂಡ ಮುಖ್ಯಮಂತ್ರಿಗಳು, ಸಚಿವ ಪಾಟೀಲರನ್ನು ತುರ್ತಾಗಿ ತನ್ನ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು, ನಿಂಗೂ ಮತ್ತು ಶಿವಕುಮಾರಿಗೂ ಗಿಣಿಗೆ ಹೇಳ್ದಂಗೆ ಹೇಳ್ದೆ, ಪೂಜೆ ಮಾಡ್ಸಬೇಡ್ರಯ್ಯಾ ಅಂತಾ, ಕೇಳಿದ್ರಾ ನನ್ನ ಮಾತನ್ನಾ ಎಂದು ಸಿಎಂ, ಪಾಟೀಲರ ಮೇಲೆ ಮುಗಿಬಿದ್ದಿದ್ದಾರೆ.

 Spoof article: CM Siddaramaiah scolded Minister M B Patil, for his pooja for good rains

ವಯಸ್ಸಾಗಿದೆ..ರಾಜಕೀಯ ಅನುಭವವಿದೆ ಹೇಳಿದ ಮಾತು ಕೇಳ್ಬೇಕ್ ಆನ್ನೋದು ಗೊತ್ತಾಗಲ್ವೇನಪ್ಪಾ ಎಂದು ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಆ ಡಿಕೆಶಿ ಕಿಗ್ಗಾಗೆ ಹೋಗಿ ಪೂಜೆ ಬೇರೆ ಮಾಡಿಸ್ತಾರೆ,.ನೀವು ಭಾಗಮಂಡಲಕ್ಕೆ ಹೋಗ್ತೀರಾ..ಪರ್ಜನ್ಯ ಜಪ ಮಾಡಿಸ್ತೀರಾ, ಹೋಮ ಮಾಡಿಸ್ತೀರಾ ಎಂದು ಸಿಎಂ ಬೇಸರ ವ್ಯಕ್ತ ಪಡಿಸಿದ್ದಾರೆ.

ಅಲ್ಲೇ ಪಕ್ಕದಲ್ಲಿ ಕೂತಿದ್ದ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ಕಡೆ ಕೈತೋರಿಸಿ ತರಾಟೆ ಮುಂದುವರಿಸಿದ ಸಿಎಂ, ನೋಡಯ್ಯಾ ಈವಯ್ಯಾನ ಮುಖನ್ನಾ.. ಅಯ್ಯೋ ಅನಿಸಲ್ವೇನಪ್ಪಾ.. ಅದು ಬೇರೆ ರಸ್ತೆಗುಂಡಿಗೆ ಜೀವಹಾನಿ ಬೇರೆ ಆಗ್ತಾ ಇದೆ.. ಎಲ್ಲಾ ಇವ್ನ ಮೇಲೆ ಗೂಬೆ ಕೂರಿಸ್ತಾವ್ರೆ.. ರಾಜಕೀಯ ಯಾವತ್ತಯ್ಯಾ ನಿಮಗೆಲ್ಲಾ ಅರ್ಥ ಆಗೋದು ಎಂದು ಸಿಎಂ ಗದರಿದ್ದಾರೆ..

ಇವತ್ತು ನಿಯತ್ತಾಗಿ ಗುಂಡಿ ಮುಚ್ಚೋಣ ಅಂದ್ರೂ ಮಳೆ ಬಿಡ್ತಾ ಇಲ್ಲಾ. ಇದೆಲ್ಲಾ ನಿನ್ನ ಮತ್ತು ಡಿ ಕೆ ಶಿವಕುಮಾರ್ ಪೂಜೆಯಿಂದ ಆಗಿರೋದು, ಚುನಾವಣೆಯ ವರ್ಷದಲ್ಲಿ ಯಾಕಯ್ಯಾ ತಲೆಬಿಸಿ ಮಾಡ್ತೀರಾ ಎಂದು ಸಿಎಂ, ಸಚಿವ ಪಾಟೀಲರಿಗೆ ಬೆಂಡೆತ್ತಿದ್ದಾರೆ.

ಅಲ್ಲಾ ಸಾರ್.. ನೀವು ಇದನ್ನೆಲ್ಲಾ ನಂಬೋಲ್ಲಾ ಅಂದ್ರಲ್ಲಾ ಸಾರ್ ಎನ್ನುವ ಪಾಟೀಲರ ಪ್ರಶ್ನೆಗೆ ಮತ್ತೆ ಕೆಂಡಾಮಂಡಲವಾದ ಸಿದ್ದರಾಮಯ್ಯ, ಪೇಪರ್ನವ್ರು ಏನೋ ಕೇಳ್ದ್ರು, ಏನೋ ಹೇಳ್ದೆ.. ಅದನ್ನೆಲ್ಲಾ ವಿಷಯಕ್ಕೆ ತರಬೇಡ. ನನ್ ಜೊತೆ ಆರ್ಗ್ಯುಮೆಂಟ್ ಮಾಡಬೇಡ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಮೋಡಬಿತ್ತನಿಂದ ಮಳೆ ಆಗ್ತಾ ಇರ್ಬದು ಸರ್ ..ಎಂದು ಪಾಟೀಲರು ಸಮಜಾಯಿಷಿ ನೀಡಲು ಬಂದಾಗ, ಮೋಡ ಬಿತ್ತನೆ ಮಾಡಿರೋದು ಎಲ್ಲಿ..ಮಳೆ ಬರ್ತಾ ಇರೋದು ಎಲ್ಲಿ? ಚುನಾವಣೆಯ ವೇಳೆ ಜಾಗೃತೆಯಿಂದ ಇರಬೇಕು.

ಸರಕಾರಕ್ಕೂ ಪೂಜೆಗೂ ಸಂಬಂಧವಿಲ್ಲ ಎಂದು ನೀವೇ ಹೇಳಿದ್ದೀರಲ್ಲಾ ಸಾರ್..ಹೋಗ್ಲಿ ಬಿಡಿ ಸಾರ್.. ಅನ್ನೋ ಪಾಟೀಲರ ಮನವಿಗೆ, ಒಳ್ಳೆ ಆಕ್ಟೀವ್ ಮಿನಿಸ್ಟರ್ ನೀನು..ಇನ್ನು ಮುಂದೆಯಾದರೂ ಹೇಳಿದ ಮಾತು ಕೇಳು, ಆ ಶಿವಕುಮಾರನಿಗೂ ಹೇಳು ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಪಾಟೀಲರಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ ಎನ್ನುವುದು ದೊಡ್ಡ ಸುಳ್ ಸುದ್ದಿ. (ಕಾಲ್ಪನಿಕ ಲೇಖನ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Minister M B Patil offered pooja for good rain. Chief Minister Siddaramaiah scolded Minister Pati, a spoof article.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ