• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿಗೆ ಹಣಮಪ್ಪನ ಹುಂಡಿಗೆ ಒಂಬತ್ತು ರುಪಾಯಿ

By Prasad
|

ಜೋಡಿ ಕಬ್ಬಿಗೆ ಎಂಬತ್ತು ರುಪಾಯಿ ತೆತ್ತು ಸಣ್ಣದಾಗಿ ಕತ್ತರಿಸಿದ ಕಬ್ಬಿನ ಜಲ್ಲೆಗಳನ್ನು ತುಂಬಿದ್ದ ಪಿಶಿವಿವನ್ನು ಹಿಡಿದುಕೊಂಡು ಅಪಾರ್ಟ್ಮೆಂಟಿನ ಮೆಟ್ಟಿಲೇರುತ್ತಿದ್ದಾಗ ನೈಟಿ ಹಾಕಿಕೊಂಡಿದ್ದ ಹೆಂಗಸರ ದಂಡಿನ ಸಡಗರವೋ ಸಡಗರ. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ, ಅವರ ಮನೆಯಿಂದ ಇವರ ಮನೆಗೆ, ಇವರ ಮನೆಯಿಂದ ಅವರ ಮನೆಗೆ ದುಡುದುಡನೆ ಓಡಾಡುತ್ತಿದ್ದರು. ಒಂದು ರುಪಾಯಿ, ಹನುಮಪ್ಪ, ಸಂಕ್ರಾಂತಿ... ಏನೇನೋ ಗುಸುಗುಸು ಮಾತು ಕೇಳಿಬರುತ್ತಿತ್ತು.

ಮನೆಗೆ ಬಂದವನೇ ಮನೆಯವರನ್ನು ಕೇಳಿದೆ. "ಏನು ನಡೀಲಿಕತ್ತದ ಇಲ್ಲೆ? ಯಾಕ್ಹಿಂಗ ಅತ್ತಿಂದಿತ್ತ ಓಡಾಡಲಿಕತ್ತಾರ?" ಅಂತ. ಅದಕ್ಕೆ ನನ್ನ ಅರ್ಧಾಂಗಿ, "ಯಾಕ ನಿಮಗ ಗೊತ್ತಿಲ್ಲಾ? ಟೀವಿದಾಗೆಲ್ಲಾ ಇದರ ಸುದ್ದಿ ಬಂದದಂತ. ಯಾರ ಮನ್ಯಾಗ ಒಬ್ಬನ ಗಂಡು ಮಗಾ ಇರ್ತಾನೋ, ಅವರು ಒಬ್ಬ ಗಂಡು ಮಗಾ ಇರೋ ಮತ್ತೊಬ್ಬರ ಮನ್ಯಾಗಿಂದ ಒಂದು ರುಪಾಯಿ ಇಸ್ಕೊಂಡು, ಆ ಕಾಯ್ನಗಳನ್ನ ಸಂಕ್ರಾಂತಿ ದಿನ ಪರ್ವ ಕಾಲದಾಗ ಹಣಮಪ್ಪನ ಹುಂಡಿಗೆ ಹಾಕಬೇಕಂತ..." ಅಂತ ಒಂದೇ ಸವನೆ ಹೇಳಿದಳು.

"ವಾಟ್ ವಾಟ್ ವಾಟ್ ಮತ್ತ ಹೇಳು" ಅಂದೆ. ಆಕೆ ದೀರ್ಘ ಉಸಿರೆಳೆದುಕೊಂಡು, ತಾಳ್ಮೆ ತಳೆದುಕೊಂಡು ಏನು ನಡೀತಿದೆ ಅಂತ ಬಿಡಿಬಿಡಿಸಿ ಹೇಳಿದಳು. "ಬರೇ ಒಂದು ರುಪಾಯಿನ ಕೊಡಬೇಕು, ಮತ್ತ ಇಸ್ಕೋಬೇಕು. ಅವನ್ನ ತಗೊಂಡು ಹಣಮಪ್ಪನ ಹುಂಡಿಗೆ ಹಾಕಬೇಕು. ಹಿಂಗ್ ಮಾಡಿದ್ರ ಆ ಗಂಡು ಮಕ್ಕಳಿಗೆ ಛೋಲೋ ಆಗತದಂತ. ನೋಡ್ರಿ ಆರು ಕಾಯ್ನ ಕಲೆಕ್ಟ್ ಮಾಡೇನಿ. ಇನ್ನೂ ಮೂರು ಮನೀಗೆ ಹೋಗಬೇಕು" ಅಂತ ಮಗನನ್ನ ಎಳೆದುಕೊಂಡು ಹೊರಟೇಬಿಟ್ಟಳು. ಹಿಂದಿಂದೆ ಲಂಗಬ್ಲೌಸು ತೊಟ್ಟಿದ್ದ ಮಗಳು.

ಈ ಸುದ್ದಿ ಬಂದಿದ್ದಾದರೂ ಯಾವ ಚಾನಲ್ಲಿನಲ್ಲಿ? ಇದನ್ನು ಹಬ್ಬಿಸಿದವರಾದರೂ ಯಾರು? ಒಂದು ರುಪಾಯಿ ಬದಲು ಎರಡು ರುಪಾಯಿ ಕೊಟ್ಟರೆ ಏನಾಗತ್ತೆ? ಇದಕ್ಕೆ ವಯಸ್ಸಿನ ಲಿಮಿಟೇಷನ್ ಏನಾದರೂ ಇದೆಯಾ? ಮನೆಯಲ್ಲಿ ಗಂಡುಮಗನೇ ಇಲ್ಲದವರು ಏನು ಮಾಡಬೇಕು? ಒಬ್ಬನೇ ಮಗ ಇದ್ದರೂ ನಾಣ್ಯ ಕಲೆಕ್ಟ್ ಮಾಡದಿದ್ದರೆ ಏನಾಗುತ್ತದೆ? ಅಥವಾ ಇಬ್ಬಿಬ್ಬರು ಮೂರ್ನಾಲ್ಕು ಗಂಡುಮಕ್ಕಳೇ ಇದ್ದವರು ಏನು ಮಾಡಬೇಕು? ಗಂಡು ಹೆಣ್ಣಿನ ನಡುವೆ ಯಾಕೀ ತಾರತಮ್ಯ? ಇತ್ಯಾದಿ ಕ್ವೆಶ್ಚನ್ ಗಳು ತಲೆ ಕೊರೆಯಲು ಆರಂಭಿಸಿದವು.

ಇವಕ್ಕೆಲ್ಲಾ ಉತ್ತರ ಕಂಡುಕೊಳ್ಳಲೇಬೇಕು, ಇದರ ಹಿಂದಿನ ಮರ್ಮ ಏನು ಅಂತ ತಿಳಿಯಲೇಬೇಕು ಅಂತ ತೀರ್ಮಾನಿಸಿದೆ. ಅಷ್ಟರಲ್ಲಿ ಮೂಲಿಮನಿ ಎಂಕ್ಯಾ ಚಡ್ಡಿ ಏರಿಸಿಕೋತ ಬಂದು ಬಾಗಿಲು ಬಡಿದಿದ್ದ. "ಮಾಮಾರ ಒಂದು ರುಪಾಯಿ ಐತೇನ್ರೀ?" ಅಂತ ಕೇಳಿದ. ಇದರ ಹಿನ್ನೆಲೆ ಈಗಾಗಲೆ ತಿಳಿದಿದ್ದರಿಂದ, ಖುಷಿಯಿಂದಲೇ ಅಡುಗೆಮನೆ ಕಟ್ಟೆಯ ಮೇಲಿದ್ದ ಒಂದು ರುಪಾಯಿ ಕೊಟ್ಟು ಕಳಿಸಿದೆ.

ಅಷ್ಟರಲ್ಲಿ ಹೆಂಡತಿಯ ಆಗಮನವಾಯಿತು. ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಲು ಶುರು ಮಾಡಿದೆ. "ಈ ಸುದ್ದಿ ನಿನಗೆ ಹೇಳಿದವರು ಯಾರು?" "ಪಕ್ಕದ ಮನೆ ವೆಂಕಟಲಕ್ಷ್ಮಮ್ಮ" "ಅವರಿಗೆ ಹೇಳಿದವರು ಯಾರು?" "ಕೆಳಗಿನ ಮನೆ ಪದ್ಮಾ" "ಅವರಿಗೆ ಹೇಳಿದವರು ಯಾರು?" "ಐದನೇ ಬ್ಲಾಕಿನ ಸೋನಿಕಾ" "ಅವರಿಗೆ ಹೇಳಿದವರು ಯಾರು?" "ಯಾರೋ ನೆಂಟರಂತೆ ಗೌರಿಬಿದನೂರಿನಲ್ಲಿ ಇರ್ತಾರಂತೆ" "ಅವರಿಗೆ ಹೇಳಿದವರು ಯಾರು?" "ಏ ಯಾರಾದ್ರೂ ಹೇಳಿಬಿಡ್ರೀ, ನಿಮ್ಮೂ ಅತೀ ಆತು. ದೇವರ ಹುಂಡಿಗೆ ರೊಕ್ಕ ಹಾಕಲಿಕ್ಕೇನೀಗ..." ಅಂತ ಸಿಟ್ಟಿಗೆದ್ದು ನನ್ನ ಬಾಯಿ ಮುಚ್ಚಿಸಿದಳು.

ವಿಷಯ ತೀರ ಕಾಂಪ್ಲಿಕೇಟೆಡ್ ಅಂತ ಅನ್ನಿಸಲು ಶುರುವಾಯಿತು. ಮತ್ತೆ ಮನೆಯೊಳಗೆ ಬಂದ ಹೆಂಡತಿಗೆ ಪ್ರಶ್ನೆ ಕೇಳಬೇಕೆನ್ನುವಷ್ಟರಲ್ಲಿ... "ಅದೇನು ಗೊತ್ತದೇನ್ರಿ, ಸಂಕ್ರಾಂತಿ ದಿನ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ವಾಲುವ ಸೂರ್ಯ ಮಕರ ರಾಶಿ ಪ್ರವೇಶಿಸ್ತಾನ. ಸೂರ್ಯ ದೇವರ ಮಗ ಶನಿ. ಈ ಸಂದರ್ಭದಾಗ ಮಕ್ಕಳ ಮ್ಯಾಲ ಶನಿ ಪ್ರಭಾವ ಬೀಳದಿರಲಿ ಅಂತ, ಪರ್ವ ಕಾಲದಾಗ ಹಣಮಂತನ ಗುಡಿಗೆ ಹೋಗಿ ಈ ಕಾಯ್ನ ಹಾಕಿ ಬರಬೇಕಂತ..." ಅಂತ ಮತ್ತಷ್ಟು ವಿವರಣೆ ಕೊಟ್ಟಳು. ಉತ್ತರಕ್ಕೂ ಕಾಯದೆ ಅಡುಗೆಮನೆ ಹೊಕ್ಕು ಎಷ್ಟು ನಾಣ್ಯ ಸೇರಿವೆ ಅಂತ ಎಣಿಸಲು ಪ್ರಾರಂಭಿಸಿದಳು.

"ಅಯ್ಯ, ಆರಿದ್ದುವಲ್ಲ ಐದ ಕಾಣಲಿಕತ್ತಾವ?" ಅಂತ ಹುಬ್ಬು ಗಂಟು ಹಾಕಿ ನನ್ನ ಮುಂದೆ ನಿಂತಿದ್ದಳು. "ನೀ ಅತ್ತಾಗ ಹೋಗಿದ್ದಾಗ ಮೂಲಿಮನಿ ಎಂಕ್ಯಾ ಬಂದಿದ್ದ. ಒಂದು ರುಪಾಯಿ ಕೊಡ್ರಿ ಅಂದ, ಕೊಟ್ಟು ಕಳಿಸಿದೆ." "ಅದರಾಗಿಂದು ಯಾಕ ಕೊಟ್ಟು ಕಳಿಸಿದ್ರೀ.... ಅದರಾಗಿಂದು ಯಾಕ ಕೊಟ್ರಿ? ಒಬ್ರು ಕೊಟ್ಟಿದ್ದನ್ನ ಕೊಡಬಾರದಂತ. ಬ್ಯಾರೇದ ಕೊಡಬೇಕಂತ... ನಿಮನಿಮನಿಮ..." ಅಂತ ಸಿಡಿಮಿಡಿಸುತ್ತ ರುಪಾಯಿ ಮತ್ತೆ ಎಣಿಸಲು ಆರಂಭಿಸಿದಳು. "ಅಡ್ಡಿಯಿಲ್ಲ ಬಿಡ್ರಿ ಹತ್ತವ" ಅಂತ ತನಗೆ ತಾನೇ ಸಮಾಧಾನ ಮಾಡಿಕೊಂಡಳು. ನನಗೆ, ಕೆಟ್ಟ ನಗುವ ಚಳಿಯಲ್ಲಿ ಮೋಡಗಳಿಲ್ಲದಿದ್ದರೂ ಗುಡುಗಿದಂತೆ ಭಾಸವಾಗಿತ್ತು. ನನಗೆ ಆಕೆಗಿಂತ ಈ ಸುದ್ದಿಯನ್ನು ಹಬ್ಬಿಸಿದವರ ಮೇಲೆ ಕೆಂಡಾಮಂಡಲ ಕೋಪ ಬಂದಿತ್ತು. ಯಾರಿರಬಹುದು ಅಂತ ಮತ್ತೆ ಥಿಂಕ್ ಮಾಡಲು ಶುರು ಮಾಡಿದೆ. ನಿಮಗೇನಾದರೂ ಗೊತ್ತಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hello, all women in Karnataka who believe in whatever said, did you collect one rupee coin for the well being of your son? All you need to do is to collect one rupee coin who has only one son and offer the collections to Lord Hanuman. Wish you all Happy Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more