ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಗ ಐತಿ ನೋಡ್ರಪಾ ನಮ್ಮ ಕರಾಳ ಶುಕ್ರವಾರ!

By ನಾಗರಾಜ್ ಎಂ, ಕನೆಕ್ಟಿಕಟ್
|
Google Oneindia Kannada News

ಹೊಸದಾಗಿ ಅಮೆರಿಕಕ್ಕೆ ಬಂದಿದ್ದೆ... ಹೊಸ ಆಫೀಸ್ ಬೇರೆ... ಅದಕ್ಕೆ ಸಂಜೆ ಆರು ಆಗಿದ್ರೂ ಇನ್ನು ಕೆಲ್ಸಾ ಮಾಡ್ತಾ, ಊರಲ್ಲಿರೋ ಅಮ್ಮನಿಗೆ ಫೋನ್ ಮಾಡ್ತಾ ಇರುವಾಗ... ಪಕ್ಕದ ಡೆಸ್ಕ್ ನ ಮಾರ್ಕ್ "ಗುಡ್ ನೈಟ್ ನಾಗ್ಸ್... Have a ನೈಸ್ ಲಾಂಗ್ ವೀಕೆಂಡ್" ಅಂದಾಗ... ಗೊತ್ತಾಗದೆ... "ನೋ ಆಫೀಸ್ tomorrow?" ಅಂತ ನಾ ಕೇಳಿದ್ದೆ!

"ನೋ ಮ್ಯಾನ್... tomorrow ಬ್ಲಾಕ್ Friday" ಅಂತ ಅವಾ ಹೇಳಿ... ಭರಭರನೇ ಹೊರಟುಹೋಗಿದ್ದ.

"ಹಲೋ... ಹಲೋ... ಮಗಾ ಇದ್ದೀಯ"... ಅಂತ ಅಮ್ಮನ ಧ್ವನಿ ಫೋನಲ್ಲಿ ಕೇಳಿಬಂದಾಗ... "ಹಾ... ಮಾ.. ಇಲ್ಲೇ ಇದೀನಿ... !" ತೊದಲಿಸಿದ್ದೆ. "ನನ್ನ ಫ್ರೆಂಡ್ ಜೊತೆ ಮಾತಾಡ್ತಿದ್ದೆ... ನಾಳೆ ಕಪ್ಪು ಶುಕ್ರವಾರವಂತೆ... ಅದಕ್ಕೆ ರಜಾ ಇದೆಯಮ್ಮಾ ಇಲ್ಲಿ"... ಅಂತ ವರದಿ ಒಪ್ಪಿಸಿದ್ದೆ.

ಓ, ಅದೆಂತದೋ ಕಪ್ಪು (ಕರಾಳ) ಶುಕ್ರವಾರ? ಮೊನ್ನೆ ಇನ್ನು ಅಮಾವಾಸ್ಯೆ ಆಯ್ತು? ಎಂಗಾರಾ ಆಗ್ಲಿ ಮಗಾ ಹುಷಾರು... ನಾಳೆ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಬಾ... ಮೊದಲೇ ಹೊಸದಾಗಿ ಮದುವೆ ಆಗಿರೋನು!

ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!ನಾಯಿ ಬಾಲ ಡೊಂಕೆ, ಸರಿಮಾಡೋಕೆ ಹೋಗ್ಬೇಡ ಮಂಕೆ!

ಅಮ್ಮ ಹೇಳಿದ್ದ ಕೇಳಿ... ನಾನೂ ಸಹಾ ತಲೆ ಕೆರೆದುಕೊಂಡಿದ್ದೆ... "ಗುಡ್ ಫ್ರೈಡೆ, ಹ್ಯಾಪಿ ಫ್ರೈಡೆ ಅಂತ ಕೇಳಿದ್ದೆ... ಈ ಕರಾಳ ಫ್ರೈಡೆ ಯಾವದಪ್ಪಾ" ಅಂತ ಯೋಚಿಸ್ತಾ... ಮನೆಯಲ್ಲಿದ್ದ ಹೆಂಡ್ತಿ ನೆನಪಾಗಿ ಇದ್ದ-ಬದ್ದ ಎಲ್ಲ ಕೆಲಸ ಅಷ್ಟಕ್ಕೇ ಬಿಟ್ಟು ಮನೆಕಡೆ ಹೊರಟಿದ್ದೆ.

ಹೊರಗಡೆಯ ಚಳಿಗೆ ಗಡಗಡನೇ ನಡುಗುತ್ತಾ ಬಂದಿದ್ದನ್ನು ನೋಡಿ... ಬಿಸಿ ಬಿಸಿ ಕಾಫಿ ಹಿಡಿದು ಬಂದ ಹೆಂಡ್ತಿಯನ್ನು ನೋಡಿದ ಕೂಡಲೆ... ಒಂದು ಕೈಯಲ್ಲಿ ಕಾಫಿ, ಇನ್ನೊಂದು ಕೈಯಲ್ಲಿ ಅವಳನ್ನ ಬರಸೆಳೆದಿದ್ದೆ! (ಹೊಸದಾಗಿ ಮದುವೆಯಾಗಿ ಬಂದದ್ದಲ್ವಾ)

"ಹೇ, ನಾಳೆ ಬ್ಲಾಕ್ ಫ್ರೈಡೆ ಅಂತೇ ಕಣೆ, ಆಫೀಸಿಗೆ ರಜಾ! ಹೊರಗಡೆ ಅಲ್ಲಿ-ಇಲ್ಲಿ ಅಡ್ಡಾಡೋಕ್ಕೆ ಹೋಗ್ಬೇಡಿ... ದೇವಸ್ಥಾನಕ್ಕೆ ಹೋಗಿಬನ್ನಿ ಅಂತ ಅಮ್ಮ ಬೇರೆ ಹೇಳಿದ್ದಾರೆ" ಅಂತ ಹೇಳಿದಾಗ...

"ಹೂನ್ರಿ, ಪಕ್ಕದ ಮನೆ ಹೊಸ ಫ್ರೆಂಡ್ ಹೇಳಿದ್ಲು. ಆದ್ರೆ, ನೀವು ಅಂದುಕೊಂಡಂಗೆ... ಇದು ಕರಾಳ ಶುಕ್ರವಾರ ಅಲ್ಲ. ಇಲ್ಲಿ ಎಲ್ಲರೂ ಥ್ಯಾಂಕ್ಸ್ ಗಿವಿಂಗ್ ಆಚರಣೆ ಮಾಡಿ ಈ ದಿನ, ಬೆಳಿಗ್ಗಿನ ಜಾವನೇ ಶಾಪಿಂಗ್ಗೆ ಹೋಗ್ತಾರಂತೆ. ಈದಿನ ಬಹಳ ಸೋವಿಯಲ್ಲಿ ಸಿಗ್ತಾವಂತೆ ಎಲ್ಲ ಐಟಂಸ್" ಅಂತ ಅವಳು ಪಟಪಟನೆ ನುಡಿದಳು.

Black Friday and unwanted holiday

ಎಲಾ ಇವಳಾ? ಒಂದೇ ವಾರದಲ್ಲಿ ಫ್ರೆಂಡ್ಸ್ ಮಾಡಿಕೊಂಡು ಎಷ್ಟೊಂದು ತಿಳಿದುಕೊಂಡಾಳಲ್ಲ ಅಂತ ಬೆರಗಾಗಿದ್ದೆ.

"ಓಹ್ ಹೌದಾ? ನಾನೆಲ್ಲೋ... ಇದು ಒಂದು ರೀತಿ ನಮ್ಮ ಕಡೆ ಅಮಾವಾಸ್ಯೆ ಆಚರಿಸ್ತಿವಲ್ಲಾ, ಹಾಗೆ ಅಂದುಕೊಂಡಿದ್ದೆ" ಅಂದಾಗ... ಹೇ ನೀವೊಬ್ರು... ರೀ ನಾವೂ ಮಧ್ಯರಾತ್ರಿನಲ್ಲೆ ಹೋಗೋಣವಾ ಮಾಲ್ಗೆ? ಅಂತ ಹೇಳಿ... ಅವಳು ಕಿಸಕ್ಕನೆ ನಕ್ಕಾಗ, ಬಿದ್ದ ಆ ಕೆನ್ನೆಯ ಮೇಲಿನ ಗುಳಿಯ ಸುಳಿಗೆ... ನಾನೇ ಬೇಸ್ತು ಬಿದ್ದಿದ್ದೆ!

ಮೊದಲ ಹಿಮ, ಆಗದಿರುವುದೇ ಪ್ರಕೃತಿಯ ಮೇಲೆ ಪ್ರೇಮ!ಮೊದಲ ಹಿಮ, ಆಗದಿರುವುದೇ ಪ್ರಕೃತಿಯ ಮೇಲೆ ಪ್ರೇಮ!

"best buy" ಅನ್ನೋ ಇಲೆಕ್ಟ್ರಾನಿಕ್ ಶಾಪ್ ಮುಂದೆ ನಿಂತಿದ್ವಿ. ಹೊಸ ಮಾಡೆಲ್ ಟಿವಿ ಬಹಳ ಕಡಿಮೆ ಬೆಲೆಗೆ ಇದೆ ಅಂತ! (ಹೇಗೋ ಮನೆಯಲ್ಲಿ ಇನ್ನು ಟಿವಿ ಇಲ್ಲವಲ್ಲಾ)... ಆ ಚಳಿಯಲ್ಲಿ... ಎರಡು-ಮೂರು ಡ್ರೆಸ್ ಹಾಕೊಂಡು. ಆದ್ರೂ, ಸಿಕ್ಕಾಪಟ್ಟೆ ಚಳಿ... ಪಕ್ಕದಲ್ಲಿ ಅದು-ಇದು ಮಾತಾಡ್ತಾ ನಿಂತಿರೋ ಹೆಂಡ್ತಿಗೆ ಅಂಟಿಕೊಂಡೇ ನಿಂತಿದ್ದೆ... ಆ ಚಳಿ ತಡೆಯಲು... ಏನೋ ಒಂತರಾ ಮಜಾ!

ಹೀಗೆ ಶುರು ಆಗಿತ್ತು ಈ ಕರಾಳ ಶುಕ್ರವಾರದ ಆಚರಣೆ! ಮೊದಲೆರಡು ವರ್ಷ ಏನು ಒಂತರ ಮಜಾ, ಖುಷಿ.... ವರ್ಷಗಳು ಕಳೆದಂತೆ... ಯಾಕೋ ಈ ದಿನ ಹತ್ತಿರ ಬಂದಂಗೆಲ್ಲಾ... ಮನದೊಳಗೆ ಕಸಿವಿಸಿ.

"ರೀ, ನೋಡಿ, ಆಲ್ರೆಡಿ ಬ್ಲಾಕ್ ಫ್ರೈಡೆ ಡೀಲ್ಸ್ ಬಂದಿದಾವೆ. ಅದೇನೋ OLED 65 ಇಂಚ್ TV ಹೊಸ ಮಾಡೆಲ್ ಬಂದಿದಾವೆ. ಮೇಲೆ ಮಗನಿಗೆ ಹೊಸ ಐ-ಪ್ಯಾಡ್ ತೊಗೋಬೇಕು. ಎಲ್ಲಿ ಡೀಲ್ ಇದೆ ನೋಡಿಟ್ಟ್ಕೊಳ್ಳಿ. ಈವಾಗ ಮಧ್ಯರಾತ್ರಿ ಬದ್ಲು ಗುರುವಾರ ಸಂಜೆ 6 ಗಂಟೆಗೆ ಓಪನ್ ಮಾಡ್ತಾರೆ, ಒಳ್ಳೇದಲ್ವಾ?" ಅಂತ ಹೆಂಡ್ತಿ ಅಂದಾಗ,

ಮೊದಲೆಲ್ಲ ಅವಳ ಮಾತುಗಳು
ಅನ್ನಸ್ತಿದ್ದವು ಜೇನಿನಂತೆ ಸಿಹಿ!
ಈಗ ಹಾಗಲಕಾಯಿ ಕಹಿ!

"ಹೋದ ವರ್ಷ ತಾನೇ 55 ಇಂಚ್ ಟಿವಿ ತಂದೈತಲ್ಲೇ" ಅಂದಾಗ "ರೀ ಅದನ್ನ ಮೇಲ್ಗಡೆ ಫ್ಯಾಮಿಲಿ ರೂಮ್ ನಲ್ಲಿ ಹಾಕಿದ್ರಾಯ್ತು..." ಅಂತ ಉತ್ತರ ರಪ್ಪನೆ ರಾಚಿತ್ತು.

"ಇರೋ TVನಲ್ಲೆ ಪ್ರೋಗ್ರಾಮ್ ನೋಡಲ್ಲಾ... ಇನ್ನೊಂದು ಬೇರೆ ಕೇಡು ಅಂತ ಮನದಲ್ಲೇ ಗೊಣಗಿಕೊಂಡು... ನಂಗೆ ಆ ಉದ್ದದ ಲೈನಲ್ಲಿ ಬಹಳ ಹೊತ್ತು ನಿಲ್ಲೋಕಾಗಲ್ಲ... ನೀ ಬೇಕಾದ್ರೆ ಹೋಗು" ಅಂದೆ.

"ನಿಮಗಂತೂ ಸ್ವಲ್ಪಾನು patience ಇಲ್ಲ. ಸರಿ... ನನ್ನ ಆ ಶಾಪ್ ಹತ್ತಿರ ಬಿಡಿ... ಶಾಪಿಂಗ್ ಆದ್ಮೇಲೆ ಪಿಕಪ್ ಮಾಡಿ" ಅಂತ ಮಾಡಿದ್ದಳು ಆಣತಿ, ಮನೆ ಒಡತಿ.

ಛೆ! ಯಾಕಾರ ಬರುತ್ತೋ... ಈ ಕರಾಳ ಶುಕ್ರವಾರ ಅಂತ... ಸಿಡುಕುತ್ತಲೇ, ಒಲ್ಲದ ಮನಸಲ್ಲೇ ಅವಳನ್ನ - ಮಗನ್ನ ಡ್ರಾಪ್ ಮಾಡಿ... ಮನೆಗೋಗಿ ಏನು ಮಾಡೋದು ಅಂತ... ಅಲ್ಲೇ ಬಳಿಯಲ್ಲಿದ್ದ ದೇವಸ್ಥಾನಕ್ಕೆ ಹೋದೆವು.

"ಯಾಕೆ ಈ ಶುಕ್ರವಾರ, ಇಷ್ಟೊಂದು ಕರಾಳ? ದೇವರ ಸನ್ನಿಧಿಯಲ್ಲಿ ಕೂತಿದ್ದರೂ ಮನಸ್ಸಾಗಿಲ್ಲ ವಿರಾಳ" ಅಂತ ಯೋಚನೆ ಮಾಡ್ತಾ ಕೂತಿದ್ದಾಗ... ಒಂದು ಅಶರೀರ ವಾಣಿ ನುಡಿದಂಗೆ ಆಗಿತ್ತು...

"ಇಲ್ಲೇನು ಯೋಚನೆ ಮಾಡ್ತಾ ಕೂತಿದ್ದೀಯಾ, ಹೆಂಡ್ತಿ ಕೈಯಲ್ಲಿ ಕೊಟ್ಟು ಕ್ರೆಡಿಟ್ ಕಾರ್ಡ್ನ, ಓ ಮರುಳ" ಅದ ಕೇಳಿ... ದಡ್ಡನೇ ಎದ್ದು ಓಡಿದ್ದೆ ಆ ಶಾಪ್ ಬಳಿ... ಮತ್ತೆ... ಎರ್ರಾ ಬಿರ್ರಿ ಉಜ್ಜಿ ಬಿಟ್ಟಾಳು ಕ್ರೆಡಿಟ್ ಕಾರ್ಡ್ನಾ ಅಂತ!

ಹಿಂಗ ಐತಿ ನೋಡ್ರಪಾ ನಮ್ಮ ಈ ಕರಾಳ (ಕಪ್ಪು) ದಿನದ ಆಚರಣೆ.... ನಿಮ್ಮದು ಹಿಂಗೇನಾ?

English summary
Black Friday and unwanted holiday : A Kannada humorous write up on black friday, holiday and shopping by Nagaraja Maheswarappa, Connecticut, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X