• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ

By Staff
|

ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಆ ಮಾತುಗಳಂತೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಹೋಗಿ ಬರುತ್ತೇನೆ ಎಂದು ನಮ್ಮ ಅಂಕಣಕಾರರು ಹೇಳುತ್ತಿದ್ದಾರೆ. ದಟ್ಸ್ ಕನ್ನಡದ ಓದುಗ ವೃಂದದ ಪರವಾಗಿ ಮತ್ತು ಪತ್ರಿಕೆಯ ಸಂಪಾದಕೀಯ ಬಳಗದ ಪರವಾಗಿ ಶಿಕಾರಿಪುರ ಹರಿಹರೇಶ್ವರ ಅವರಿಗೆ ಹೃತ್ಪೂರ್ವಕ ಶುಭಪ್ರಯಾಣ ಕೋರುತ್ತಿದ್ದೇವೆ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ಮನಸ್ಸಿಗೆ ಹತ್ತಿರವಾದವರೊಬ್ಬರು ಆಸ್ಪತ್ರೆಯ ತೀವ್ರ ಚಿಕಿತ್ಸಾಘಟಕದಲ್ಲಿ ಶುಶ್ರೂಷೆ ಪಡೆಯುತ್ತಿದ್ದರು; ಹೋಗಿ ನೋಡಿ ಬಂದೆ. ಆಗ ಅಪ್ಪಳಿಸಿದ ಯೋಚನಾಲಹರಿಗಳು ದಟ್ಟವಾಗಿ ಕಾಡುತ್ತಿವೆ.

ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದುಹುದೇ? ಎನ್ನುತ್ತದೆ ಒಂದು ಜನಪ್ರಿಯ ಚಿತ್ರಗೀತೆ. ಹೌದು, ಕೊನೆಯ ಅಂಕದ ತೆರೆ ಬಿದ್ದ ಬಳಿಕ ನಾಟಕ ಮುಗಿದಂತೆ; ರಂಗಕರ್ಮಿಗಳು ಕಾಲ್ತೆಗೆಯಲು ಅದು ಹಸಿರು ನಿಶಾನೆ ತೋರಿಸಿದಂತೆ. ನಾಟ್ಯಶಾಸ್ತ್ರದ ಭರತನ ಪ್ರಕಾರ 'ಅ೦ಕ' ಎನ್ನುವುದು ಹತ್ತು ಬಗೆಯ ನಾಟಕಪ್ರಭೇದಗಳಲ್ಲಿ ಒಂದರ ಹೆಸರೂ ಹೌದು. ಬಣ್ಣ ಹಚ್ಚಿಕೊಂಡು ಒಂದು ಭ್ರಾಮಕ ಪ್ರಪಂಚವನ್ನು ಹುಟ್ಟು ಹಾಕಿ ಕುಣಿಯುತ್ತಲೋ ಕುಣಿಸುತ್ತಲೋ ನೋಡುಗರನ್ನ ತಣಿಸುತ್ತ, ಅಥವಾ ಹಾಗೆ ತಣಿಸುತ್ತಿದ್ದೇವೆಂಬ ಹುಸಿ ಹಸಿ ನಂಬುಗೆಯ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ಮೈಮರೆತ ಕಲಾವಿದರು ಈಗ ನೇಪಥ್ಯಕ್ಕೆ ಸರಿಯಲೇ ಬೇಕು.

ಆದರೆ, ಈ ಕೊನೆಯ ತೆರೆ ಬೀಳುವುದು ಯಾವಾಗ? ಯಾವಾಗ ಬೇಕಾದರೂ ಬೀಳಬಹುದು. ನಾಟಕ ಬರೆದವರು 'ಅದು ಹೀಗೇ ಇಲ್ಲಿಗೆ ಮುಗಿಯಲಿ' ಎಂದು ಆಶಿಸಿರಬಹುದು. ಜನರಿಗೆ ಏನು ಬೇಕು, ಹೇಗೆ ಬೇಕು, ಎಷ್ಟು ಬೇಕು ಎಂಬುವುಗಳು ತನಗಿಂತ ಬೇರೆ ಯಾರಿಗೆ ಗೊತ್ತು? ಎಂದುಕೊಂಡ ನಿರ್ದೇಶಕ ಕವಿಕಲ್ಪನೆಗೆ ಒಂದು ಹೊಸ ಆಯಾಮವನ್ನು ಕಾಣಿಸುವ ತವಕದಲ್ಲಿ ಇಲ್ಲಿಯೋ ಅಲ್ಲಿಯೋ ಎಲ್ಲಿಯೋ ತುಂಡರಿಸಿ ಬೇಕೆಂದಲ್ಲಿ ಈ ದೃಶ್ಯಕಾವ್ಯವನ್ನ ನಿಲ್ಲಿಸಿಯೂ ಬಿಡಬಹುದು. ಭೋಂಕನೆ ರಂಗವನ್ನೂ, ಜನಾಂತರಂಗವನ್ನೂ, ನಮ್ಮ ಕನ್ನಡದ ಪಂಪಕವಿಯ ಆದಿಪುರಾಣದ ನೀಲಾಂಜನೆ ಮಾಡಿದಂತೆ, ಪ್ರವೇಶಿಸಿ ಅಲೆಯೆಬ್ಬಿಸಿ ಅಲ್ಲೋಲ ಕಲ್ಲೋಲ ಮಾಡಿರುವ ಕಲಾವತಂಸರಿದ್ದಾರೆ.

ಅಭಿಮಾನಿಗಳು ಇನ್ನೂ ಬೇಕು, ಇನ್ನಷ್ಟು ಬೇಕು- ಎಂದು ತಹತಹಿಸುತ್ತಿರುವಾಗಲೇ ಹೂಡಿದ ಹಣದ ನವಿಲುಗರಿಗಳ ಮರಿಗಳ ಸುರಿಮಳೆಯ ಕನಸು ಕಾಣುತ್ತಿರುವ ನಿರ್ಮಾಪಕರ ನಿದ್ದೆಗೆಡೆಸಿ, ಆ ನವಿರುಹಾಸ್ಯದ ಸರಸ ನಟ ಸೈನ್‌ಫೀಲ್ಡ್ ಮಾಡಿದಂತೆ, ಕಲಾವಿದ ತಾನೇ ಸ್ವಯಂ ನಿವೃತ್ತಿ ಘೋಷಿಸಿಕೊಂಡು, ಮೆಲ್ಲಗೆ ರಂಗಮಂಚದಿಂದ ಅಂತರ್ಧಾನನಾಗಲೂಬಹುದು. ಕಿಂಕಾಪಿನ ರಂಗುರಂಗಿನ ವರ್ಣಪಟಲ ತೆರೆ ಮರೆಗೊಂದು ಕಿರುಸಾಧನವೂ ಹೌದು, ಅಪ್ಪಳಿಸಿ ಬರುವ ಅಲೆಯೂ ಹೌದು. ಖುಷಿಯಿಂದ ತಟ್ಟುತ್ತಿದ್ದ ಚಪ್ಪಾಳೆಯ ಕೈಗಳೇ ಕೊಳೆತ ಕಳಿತ ಹಣ್ಣು ಮೊಟ್ಟೆಗಳ ಕ್ಷಿಪಣಿಗಳನ್ನ ವೇದಿಕೆಯತ್ತ ತೂರಿ ಎಸೆಯತೊಡಗಿ ಹಠಾತ್ತನೆ ಅಂಕದ ಪರದೆ ಬಿದ್ದಿತೆಂದರೆ ಅದು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಅಭಿನೇತೃಗಳ ಆತ್ಮರಕ್ಷಣೆಗಾಗಿ. ಹೀಗೆ, ತೆರೆ ಯಾವಾಗ ಬೇಕಾದರೂ ಬೀಳಬಹುದು.

ಕುಳಿತಿದ್ದವರು ಎದ್ದು ಹೋಗತೊಡಗಿದಾಗ ಸಭಾಂಗಣದ ಖಾಲಿ ಕುರ್ಚಿಗಳು ಮುಲುಗಿದಾಗ. ಮೂಕವೇದನೆಯಿಂದ ರಂಗಸಜ್ಜಿಕೆ ಗದ್ಗದಿಸಿದಾಗ ಕಣ್ಣೊರೆಸಲು ಇಳಿಬಿಟ್ಟ ಪರದೆಯ ಸೆರಗಿಗಿಂತ ಬೇರೆ ನೆರವು ಇನ್ನೇನು ಬೇಕು? ಅಡಗಿಕೊಳ್ಳಲು ತೆರೆಯ ಮರೆಯ ಮಡಿಲಿಗಿಂತ ಸುರಕ್ಷಿತ ಬಿಲ ಇನ್ನೆಲ್ಲಿ ಸಿಕ್ಕೀತು? ನಿತ್ಯಜವ್ವನೆ ರಂಗರಮಣಿಯ ಮುಖಾರವಿಂದಕ್ಕೆ ಈ ಸಮಯದಲ್ಲಿ ಮುಸುಕೆನ್ನಿ, ಅವಗುಂಠನವೆನ್ನಿ, ಬುರ್‌ಖಾ ಎನ್ನಿ- ಯವನಿಕೆ ಪರದೆ ಕೆಳಗಿಳಿದು ಬೀಳುತ್ತದೆ. 'ಪರದೇ ಮೇರಹನೇ ದೋ, ಪರದಾ ನ ಉಠಾವೋ' ಎಂದು ಗೋಗರೆಯುವುದು ಈ ಸನ್ನಿವೇಶದಲ್ಲೇ. ಹಿಂದೆಲ್ಲ ಪಾಶ್ಚಾತ್ಯ ರಂಗಭೂಮಿಯಲ್ಲಿ ನಾಟಕಕ್ಕೆ ಮಂಗಳ ಹಾಡುವಾಗ ಸಾಮಾನ್ಯವಾಗಿ ಯಾರಾದರೂ ಒಬ್ಬರು ನಟೀಮಣಿ ವೇದಿಕೆಯ ಮೇಲೆ ಬಂದು ಹಾಡಿಹೋಗುತ್ತಿದ್ದರಂತೆ. ನಮ್ಮ ಕೆಲವು ಸಂಘಗಳಲ್ಲಿ ಖಾಯಂ ಕಾರ್ಯದರ್ಶಿ, ಖಾಯಂ ಅಧ್ಯಕ್ಷರು ಇದ್ದ ಹಾಗೆ. ಬಹುಶಃ ಯಾರೋ ಪ್ರಖ್ಯಾತ ಗಾಯಕಿಯೊಬ್ಬರು ನಿರಂತರವಾಗಿ ಈ ಪಾತ್ರ ವಹಿಸುತ್ತಿದ್ದರೇನೋ. ದಿನ ಕಳೆದಂತೆ, ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳಾದರೂ ಈಕೆಯ ಕಂಠಶ್ರೀಗೆ ಜನ ಮುಗಿಬಿದ್ದಿದ್ದರೇನೋ. ಜನರ ಮೆಚ್ಚುಗೆಯ ಕಡಾಯಿ ತುಂಬುತಿದ್ದಂತೆಯೇ ಈ ಮಹಾಮಾತೆಯ ಗಾತ್ರವೂ ವರ್ಧಿಸುತ್ತಲೇ ಇತ್ತೇನೋ. ಅದಕ್ಕೇ ಬಂದಿರಬೇಕು ಈ ಉದ್ಘೋಷ- ಗುಂಡಮ್ಮನವರು ಬಂದು ಹಾಡಿಹೋಗುವವರೆಗೂ ನಾಟಕ ಮುಗಿಸುವಂತಿಲ್ಲ. (ದ ಷೋ ಈಸ್ ನಾಟ್ ಓವರ್, ಅಂಟಿಲ್ ದ ಫ್ಯಾಟ್ ಲೇಡಿ ಸಿಂಗ್ಸ್!)

ಸಿನೆಮಾ ಮುಗಿದಮೇಲೆಯೂ, ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯಲ್ಲಿಯೂ 'ಜನಗಣಮನ' ಕಡ್ಡಾಯವಾಗಿದ್ದ ಕಾಲ ಒಂದಿತ್ತು; ಈಗ ರಾಷ್ಟ್ರಪತಿ/ರಾಜ್ಯಪಾಲರಿಗೆ ಆ ಗೌರವ ಮೀಸಲು. 'ನಾಂದ್ಯಂತೇ ಪ್ರವಿಶತಿ ಸೂತ್ರಧಾರಃ' ಎಂದು ಭಾಸ ಮೊದಲಾದ ನಮ್ಮ ಸಂಸ್ಕೃತ ನಾಟಕಕಾರರು ಪ್ರಾರಂಭದಲ್ಲಿ ಶ್ರೀಗಣೇಶ ಮಾಡುವ ರೀತಿಯಲ್ಲೇ, ಆ ನಾಟಕಗಳ ಸೂತ್ರಧಾರನೋ, ನಿರ್ದೇಶಕನೋ, ಕಂಪನಿ ಮಾಲೀಕನೋ ಕೊನೆಯಲ್ಲಿ ಇತಿಶ್ರೀ ಹೇಳಲು ರಂಗದ ಮೇಲೆ ಕಾಣಿಸಿಕೊಳ್ಳುತ್ತಾನೆ; ಸಾವಧಾನದಿಂದ ನಾಟಕವನ್ನ ನೋಡಿದುದಕ್ಕೆ ಸಭಿಕರಿಗೆ ಥ್ಯಾಂಕ್ಸ್ ಹೇಳುತ್ತಾನೆ. ಈಗ ನಮ್ಮ ಕಾರ್ಯಕ್ರಮಗಳಲ್ಲಿ ಶಾಸ್ತ್ರಕ್ಕಾಗಿಯೋ ಏನೋ ಎನ್ನುವಂತೆ ಮಾಡುತ್ತಿರುವ ವಂದನಾರ್ಪಣೆಯ ಮೂಲ ರೂಪ ಅದು. "ನಮ್ಮ ಈ ಪ್ರಯೋಗಕ್ಕೆ ಆಶ್ರಯವಿತ್ತ ರಾಜ, ಪಾಳೇಗಾರ, ಊರ ಪಟೇಲ ಸುಖವಾಗಿರಲಿ, ಅವನು ಕೈಹಿಡಿದವಳು, ಅವನ ಕೈಯನ್ನು ಹಿಡಿದವಳೂ, ಅವರ ಮಕ್ಕಳು ಮರಿಗಳ ಹೊಟ್ಟೆ ತಣ್ಣಗಿರಲಿ, ಅವನನ್ನೇ ನಂಬಿರುವ ಪ್ರಜೆಗಳಾದ ನಿಮ್ಮ ಮೇಲೆ ಸದಾ ನೆಮ್ಮದಿಯ ಮಳೆಗರೆಯುತ್ತಿರಲಿ" ಎಂದೆಲ್ಲ ಹಾಡುತ್ತಾನೆ. ಇದೇ ಭರತ ವಾಕ್ಯ. ಪಾತ್ರಧಾರಿಗಳೆಲ್ಲರೂ ಒಟ್ಟಿಗೇ ಅರ್ಧಚಂದ್ರಾಕಾರವಾಗಿ ನಿಂತು ಒಟ್ಟಿಗೇ ತಲೆಬಾಗಿ ಸಭಿಕರಿಗೆ ನಮಸ್ಕರಿಸುತ್ತಾರೆ. ಸಭಿಕರು ಕರತಾಡನ ಮಾಡುತ್ತಾರೆ. ಈ ಪರಿಯ ತೆರೆಯ ಕರೆ (ಕರ್ಟನ್ ಕಾಲ್) ಮರುಕಳಿಸುವುದೇ ಒಂದು ಸೊಗಸು. ಅಭಿನಯ ತುಂಬಾ ಖುಷಿತಂದುಕೊಟ್ಟಿತ್ತೆಂದರೆ ನೋಡುಗರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟುವುದೂ ಉಂಟು.

ಎಲ್ಲಾ ಕಲಾವಿದರೂ ಸಮಾನವಾಗಿ ಮಿಂಚುತ್ತಾರೆಂದೇನಲ್ಲ. ಒಬ್ಬರು ಮಿಂಚಿದರೆಂದರೂ ಎಲ್ಲಾ ದೃಶ್ಯಗಳಲ್ಲೂ ಅವರು ಒಂದೇ ಪ್ರಮಾಣದಲ್ಲಿ ಮೆರೆದರು ಎನ್ನುವಂತಿಲ್ಲ. ಅಭಿನೇತೃವು ಪ್ರತಿಭಾವಂತನಾದರೂ, ಆ ಪ್ರತಿಭೆ ಕ್ಷಣಕ್ಷಣಕ್ಕೂ ನಿಚ್ಚಂಪೊಸತಾಗಿ ನವನವೋನ್ಮೇಷಶಾಲಿನಿಯಾಗಿ ಬೆಳಗಿದರೂ, ತುತ್ತತುದಿಯ ಪರಾಕಾಷ್ಠೆಗೆ ಮುಟ್ಟಿದ ಆ ಕಿಡಿ ಕೊನೆಗೊಮ್ಮೆ ಆರಲೇಬೇಕು. ಆದಿ ಇದ್ದುದಕ್ಕೆಲ್ಲ ಅಂತ್ಯ ಬಂದೊದಗಲೇಬೇಕು. ಅವತಾರಕ್ಕೂ ಸಹ ಒಂದು ಮಹಾಪ್ರಸ್ಥಾನದ ಅವಕಾಶ ಪುರಾಣಕಾರರು ಒದಗಿಸಿಟ್ಟಿದ್ದಾರೆ. ಸಂದರ್ಶನಕ್ಕೆಂದು ಬಂದ ಜೀವಾತ್ಮ ತನ್ನ ಕೆಲಸ ಮುಗಿದ ಮೇಲೆ ದೇಹವೆಂಬ ಕೊಠಡಿಯಿಂದ ಮೆಲ್ಲಗೆ ಹೊರ ಜಾರಲೇ ಬೇಕು. ಈಗ ಇದ್ದವರು ನಮ್ಮನಗಲಿ ಇನ್ನಿಲ್ಲವಾಗಿ ಹೋದರು- ಎಂದು ತಿಳಿಸಿ ಚರಮಗೀತೆ ಹಾಡುವಾಗ ಅಸುನೀಗಿದರು, ಕೊನೆಯುಸಿರೆಳೆದರು, ನಿಧನರಾದರು, ಪ್ರಾಣಬಿಟ್ಟರು, ತೀರಿಹೋದರು, ಮರಣಹೊಂದಿದರು ಅಥವಾ ನೇರವಾಗಿ ಅವರು ಸತ್ತುಹೋದರು ಎಂದು ಹೇಳಿಬಿಡುತ್ತೇವೆ. ಅಥವಾ ಈ ನೋವಿನ ಕಾರ್ಮುಗಿಲಲ್ಲೂ ಏನೋ ಒಂದು ಬೆಳಕಿನ ಕಿರಣವನ್ನ ಕಾಣುತ್ತಾ ದೈವಾಧೀನರಾದರು, ಸ್ವರ್ಗಸ್ಥರಾದರು, ವೈಕುಂಠವಾಸಿಗಳಾದರು, ಶಿವೈಕ್ಯರಾದರು ಎಂದು ಹೇಳುವುಂದುಟು. ಈ ಬಿಡುಗಡೆಯನ್ನ ಮೋಕ್ಷ, ಮುಕ್ತಿ, ಕೈವಲ್ಯ, ನಿರ್ವಾಣ, ಲಿಂಗೈಕ್ಯತೆ, ಬಯಲಾಗುವುದು, ಸಮಾಧಿ, ಅವನಲ್ಲಿ ಲೀನವಾಗುವುದು- ಹೀಗೆ ಬಣ್ಣಿಸುವುದುಂಟು.

ಹಾಡುಗಾರರು ಪ್ರವಚನಕಾರರು ಮಂಗಳ ಹಾಡದೆ ಕಾರ್ಯಕ್ರಮ ಮುಗಿಸರು. ಬ್ರಹ್ಮರ್ಷಿಗಳು ಶಾಂತಿಮಂತ್ರ ಪಠಿಸಿದರೆಂದರೆ ಜಗತ್ತಿನಲ್ಲೆಲ್ಲ ನೆಮ್ಮದಿಯ ಮಾವಿನಕಾಯಿಗಳು ಉದುರುತ್ತಿದ್ದ ಒಂದು ಕಾಲವೂ ಹಿಂದೆ ಇತ್ತಂತೆ. ಸಂಗೀತದ ಕಛೇರಿಗಳಲ್ಲಿ ಪವಮಾನ ಹಾಡಿದರೆಂದರೆ ಸಂಗೀತವಿದ್ವಾಂಸರು ಕೊನೆಯ ಘಟ್ಟ ಮುಟ್ಟಿದರೆಂದೇ ಅರ್ಥ. ಬೆಳ್ಳಿತೆರೆಯ ಕಿರುತೆರೆಯ ದೃಶ್ಯಾವಳಿಗಳು ಮುಕ್ತಾಯಗೊಳ್ಳುವಾಗ ಮಂಗಳ, ಶುಭಂ- ಹೇಳಿ ಬೀಳ್ಕೊಡುವುದು ಈಗಲೂ ನಮ್ಮ ಸಂಪ್ರದಾಯ. ಪಾಶಾತ್ಯರಲ್ಲಿ 'ಕೊನೆಗೊಂಡಿತು' ಎನ್ನುವುದನ್ನ ಫಿನಿಸ್, ದ ಎಂಡ್- ಎಂದು, ಫಿನಲೆಯೊಂದಿಗೆ ಸೂಚಿಸುತ್ತಾರೆ. ಪಾಶ್ಚಾತ್ಯ ಭಾಷೆಗಳಲ್ಲಿ ಹಿ೦ದೆ ಇದೇ ಪದ್ಧತಿ ಗ್ರಂಥಗಳ ಮುಗಿವಿಗೂ ಬಳಸುತ್ತಿದ್ದರು.

ಮುದ್ರಾಂಕಿತಗಳು ಗೋಚರಿಸಿದವೆಂದರೆ ವಚನಗಳು, ಕೀರ್ತನೆಗಳು, ಮುಕ್ತಕಗಳು ಇನ್ನೇನು ಮುಕ್ತಾಯಗೊಂಡವು ಎನ್ನುವುದರ ಖಚಿತ ಸೂಚನೆ; ಆಕಾಶವಾಣಿಯವರು ಕಾಪಿರೈಟ್ ಯಾರಿಗೆ ಸೇರಿದ್ದು ಎಂದು ಹುಡುಕಿಕೊಂಡು ಹೋಗಬೇಕಿಲ್ಲ. ಹಿಂದಿನ ಕಾಲದಲ್ಲಿ ಸಂಸ್ಕೃತ ಗ್ರಂಥಗಳನ್ನ ಬರೆಯುತ್ತಿದ್ದವರು 'ಪಠ್ಯಭಾಗವು ಮುಕ್ತಾಯಗೊಂಡಿತು' ಎಂಬುದನ್ನ ಇನ್ನೊಂದು ರೀತಿ ಸೂಚಿಸುತ್ತಿದ್ದರು. ಪುಸ್ತಿಕೆಯ ಕೊನೆ ವಾಕ್ಯವನ್ನು ಅಥವಾ ಕೊನೆಯ ಶ್ಲೋಕವನ್ನು ಮೂರುಬಾರಿ ಹೇಳಿದರೆಂದರೆ ಅಲ್ಲಿಗೆ ಗ್ರಂಥ ಮುಗಿಯಿತೆಂದು ಸಂಕೇತ. ಅಲ್ಲಿಂದ ಮುಂದೆ, ಸಾಮಾನ್ಯವಾಗಿ, ಅಭಿಮಾನಿಗಳು ಲಗತ್ತಿಸಿರಬಹುದಾದ 'ವೇದಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಫಲ'ಗಳೆಲ್ಲ ಫಲಶ್ರುತಿಯ ಬಾಲಂಗೋಚಿಗಳು. ಮಹಾಭಾರತ ಭೀಷ್ಮಪರ್ವಾಂತರ್ಗತ ವಿಷ್ಣುಸಹಸ್ರನಾಮ ಸ್ತೋತ್ರದ ಕೊನೆಯಲ್ಲಿ, 'ವನಮಾಲೀ, ಗದೀ, ಶಾಙ್ಗ, ಶಂಖೀ, ಚಕ್ರೀ, ಚ ನಂದಕೀ....' ಎಂದು ಮೂರು ಬಾರಿ ಪುನರಾವರ್ತನೆ ಮಾಡಿರುವುದು ಅದಕ್ಕಾಗಿಯೇ.

ಯಾವುದನ್ನಾದರೂ ಮೂರು ಬಾರಿ ಹೇಳಿದರೆ ಅದು ದೇವರಿಗೆ ತೃಪ್ತಿ ತಂದುಕೊಡುತ್ತದೆ ಎಂದು ಋಗ್ವೇದದಲ್ಲಿ ಹೇಳಿದೆ. ಓಂ ಶಾಂತಿಃ ಶಾಂತಿಃ ಶಾಂತಿಃ ಎನ್ನುವುದಿಲ್ಲವೆ, ಹಾಗೆ. (ತೌರಿಗೆ ಹೋದ ಹೆಂಡತಿ ಬೇಗ ಬರಲೆಂದು "ಹೊರಟು ಬಾ, ಹೊರಟು ಬಾ, ಹೊರಟು ಬಾ" ಎಂದು ಟೆಲಿಗ್ರಾಂ ಕಳುಹಿಸಿದ ಕಥೆ ನೆನಪಿಗೆ ಬರುತ್ತದೆಯೆ? ಅಲ್ಲಿ, ಮೂರು ಸಾರಿ ಹೇಳಿದರೇನೇ ಅವಳು ತನ್ನ ಮಾತು ಕೇಳುವವಳು ಎಂದುಕೊಂಡ ಬಡಪಾಯಿ ಗಂಡ ತೆಗೆದುಕೊಂಡ ಮುಂಜಾಗರೂಕತೆ ಕ್ರಮ ಅದು ಅಷ್ಟೆ.) ಮುಸ್ಲಿಮರಲ್ಲಿ ವಿಚ್ಛೇದನ ಸಿಂಧುವಾಗಬೇಕಾದರೆ 'ತಲಾಕ್ ತಲಾಕ್ ತಲಾಕ್' ಎಂದು ಮೂರು ಬಾರಿ ಹೇಳಬೇಕಂತೆ. ಅಲ್ಲಿಗೆ ಕಳಚಿತು ಅವನ-ಅವಳ ಸಂಬಂಧದ ಮೂರ್ಕಾಲೋಟ.

ಶಬ್ದಮಣಿದರ್ಪಣದ ಸಮಾಪ್ತಿ ವಾಕ್ಯವಾಗಿ ಕೇಶಿರಾಜ ಹೇಳುತ್ತಾನೆ: ತಾನು ನಡೆದುದೆ ಮಾರ್ಗಂ, ಪದವಿಡಲ್ ಒಡರಿಸಿದುದೆ ಭಂಗಿ; ಲೋಕದೊಳ್ [ಈ ಕವಿ]ಗಿದಿರುಂಟೇ? [ತಾನು] ತೊಡಗಿದ ಕೃತಿಗಳೊಳ್ ಆನೆಯ ನಡು ಬಡವೇ? ||338|| ಆನೆಯ ನಡು ಬಡವಾದುದದನ್ನ ಕಂಡವರಿದ್ದಾರೆಯೇ? ಈ ಆನೆ ನಡೆದಿದ್ದೇ ದಾರಿ, ಒಮ್ಮೆ ಇಟ್ಟ ಪದವನ್ನ ಅಳುಹದ ಹೆಗ್ಗಳಿಕೆ, ನಾನೇರುವೆತ್ತರಕೆ ನೀನೆರಬಲ್ಲೆಯಾ? ಇತ್ಯಾದಿ ಆತ್ಮವಿಶ್ವಾಸದ ಪರಾಕಾಷ್ಠತೆಯ ಮಾತುಗಳನ್ನ ಆಡುವ ದಾರ್ಷ್ಟ್ಯ ಉಳ್ಳವರೂ ಇದ್ದಾರೆ. ಅವಧರಿಪುದು ವಿಬುಧರ್ ದೋಷವಿದರೊಳ್ ಏನಾನುಂ ಉಳ್ಳೊಡಂ ಪ್ರಿಯದಿಂ ತಿರ್ದುವುದು; ಗುಣಯುಕ್ತಮುಂ ದೋಷವಿದೂರಮುಂ ಆಗೆ ಮೆಚ್ಚಿ ಕೈಕೊಳ್ವುದಿದಂ||1:4|| ಎಂದು ಕೇಶಿರಾಜನೇ ಇನ್ನೊಂದೆಡೆ ಹೇಳುವಂತೆ, ಸಮರ್ಪಿಸಿದುದನ್ನು ಹಂಸ-ಕ್ಷೀರ ನ್ಯಾಯದಂತೆ ಸ್ವೀಕರಿಸಬೇಕೆಂದು ಗುಣಗ್ರಾಹಿಗಳಲ್ಲಿ ಕೊನೆಯಲ್ಲಿ ವಿನಂತಿಸಿಕೊಳ್ಳುವವರೂ ಇದ್ದಾರೆ. ಮಂಗಳ ಹಾಡುವಾಗ ಈ ಬಗೆಯ ವಿನಯದ ಮಾತುಗಳು ಯಾವ ಕವಿಗಾದರೂ ಶೋಭೆ ತರುವ ವಿಚಾರವೇ ಸರಿ.

'ವಾಚಕ ಮಹಾಶಯರೇ' ಎಂದು ಆರಂಭವಾಗುತ್ತಿದ್ದ ಆ ಕಾಲದ ಕಥನಗಳನ್ನು ಜ್ಞಾಪಿಸಿಕೊಳ್ಳಿ 'ಇಂತು ಎಂಬಲ್ಲಿಗೆ ಇದು ಸಂಪೂರ್ಣಂ' ಎಂದೆಲ್ಲ ಅವು ಕೊನೆಗಾಣುತ್ತಿದ್ದ ಬರೆಹಗಳು. ತಾವು ಹೇಳುವ ಕಾಗಕ್ಕ ಗುಬ್ಬಕ್ಕನ ಕತೆಗೆ ಅನಾಮಕವೆಂದಾದರೂ ಸರಿ, ಮಾನ್ಯತೇ ಸಿಗಲಿ ಎಂಬ ಹಂಬಲವಿದ್ದವರು ಸ್ಕಾಂದಪುರಾಣದ ರೇವಾಖಂಡದಲ್ಲಿ ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಇದನ್ನು ಹೇಳಿದರು ಎಂಬ ಮುಕ್ತಾಯಮುದ್ರೆ(ಕಾಲ್‌ಫನ್) ಅಥವಾ ಮುದ್ರಾಂಕಿತ ಸಮಾಪ್ತಿ ವಚನ ನಮೂದಿಸಿದ್ದರೆ ಸಾಕಿತ್ತು; ಏಕೆಂದರೆ ಅದರಲ್ಲಿ ಇಲ್ಲದ ವ್ರತಕತೆಯಿಲ್ಲ. ಹೀಗೆ 'ಶ್ರೀರಸ್ತು' ಎನ್ನುವಾಗ ತಮಗೆ ಯಾರೋ ಕೊಟ್ಟ ಅಥವಾ ಕೊಟ್ಟರೆ ಚೆನ್ನಾಗಿತ್ತು ಎಂದುಕೊಂಡ ಬಿರುದುಬಾವಲಿ, ಕಾವ್ಯನಾಮಾವಳಿಗಳನ್ನ ಓದುಗರಿಗೆ ನೆನಪಿಸಲು ಇದೊಂದು ಸದಾವಕಾಶ. 'ಅಭಿನವ ಕಪಿಕುಲತಿಲಕನೂ, ಪ್ಲವಂಗ ಕುಲೋತ್ಪನ್ನನೂ, ಅಆಕಖಗಘಹಳ ಬಿರುದಾಂಕಿತನೂ ಆದ ತನ್ನಿಂದ ಶಕವರ್ಷ ಇಷ್ಟಿಷ್ಟರಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಅಮುಕ ಸಂವತ್ಸರದಲ್ಲಿ ವಿರಚಿತಮಪ್ಪ ಈ ಕೃತಿಗೆ ಮಂಗಳಂ'- ಎಂದು ಹೇಳುತ್ತ, ಗ್ರಂಥದ ಒಟ್ಟು ಅಧ್ಯಾಯಗಳು ಪ್ರಕರಣಗಳು, ಪದ್ಯ ಸಂಖ್ಯೆಗಳು ಎಷ್ಟಿವೆ ಎಂಬುದನ್ನ ತಿಳಿಸುವುದು ಒಂದು ಪದ್ಧತಿಯಾಗಿತ್ತು. ಇನ್ನ್ನು ಕೆಲವರು ತಾವೇ ಬರೆದರೂ, ಆಶ್ರಯ ಕೊಟ್ಟ ಛತ್ರಪತಿಯ ಹೆಸರನ್ನ ಠಂಕಿಸಿ ನಮ್ಮ ಶ್ರೀವಿಜಯ ಶತಮಾನಗಳ ನಂತರ ಉದಯಿಸಿದ ಸಂಶೋಧಕರಲ್ಲಿ ಗೊಂದಲವೆಬ್ಬಿಸಿದಂತೆ, ಇಂತು ಪರಮ ಸರಸ್ವತೀ ತೀರ್ಥಾವತಾರ ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗದೊಳ್ ತೃತೀಯ [ಅಂತಿಮ] ಪರಿಚ್ಛೇದಂ ಸಂಪೂರ್ಣಮ್||- ಎಂದು ಕೊನೆಮುಟ್ಟಿಸುತ್ತಾರೆ.

"ಕೊನೆಯಲ್ಲಿ ಹೇಳುವುದೇನೆಂದರೆ" ಎನ್ನುತ್ತಾ ಭಾಷಣದ ಕೊರೆತವನ್ನು ಮುಂದುವರಿಸುವವರ ಮಾತು ಅತ್ತ ಇರಲಿ, ಮುಕ್ತಾಯದ ಬಗ್ಗೆ ಇಂಗ್ಲಿಷಿನಲ್ಲಿ ಇರುವ ಈ ಎರಡು ಸಾರ್ವಕಾಲಿಕ ಸದುಕ್ತಿಗಳನ್ನು ಕೇಳಿ: ಒಂದು: ಸರಿಯಾಗಿ ಕೊನೆಗೊಂಡಿತು ಎಂದರೆ ಅದರ ಒಳಹೊರಗು ಎಲ್ಲಾ ಚೆನ್ನಾಗಿದೆ ಅನ್ನುವುದರ ಲಕ್ಷಣ (ಆಲ್ ಈಸ್ ವೆಲ್ ದಟ್ ಎಂಡ್ಸ್ ವೆಲ್). ಇನ್ನೊಂದು: ಚೆನ್ನಾಗಿರುವುದೆಲ್ಲ ಒಂದಲ್ಲಾ ಒಂದು ದಿನ ಕೊನೆಗೊಳ್ಳಲೇ ಬೇಕು (ಆಲ್ ಗುಡ್ ಥಿಂಗ್ಸ್ ಶುಡ್ ಕಂ ಟು ಆನ್ ಎಂಡ್).

ನಾನಿನ್ನು ಹೋಗಿಬರಲೇ?

ಲೇಖಕರ ವಿಳಾಸ : ನಂ. 4, 3ನೇ ಮುಖ್ಯರಸ್ತೆ, 5ನೇ ಅಡ್ದರಸ್ತೆ, ಸರಸ್ವತೀಪುರಂ, ಮೈಸೂರು-570 009; ಫೋನ್: 0821-2544841

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X