• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಕಾಶ್ಮೀರ-1

By Super
|

ಮೋಳಿಗೆ ಮಾರಯ್ಯನವರ ಇತಿವೃತ್ತದ ಕಡೆ ಮರಳೋಣ: ಹಿಂದೆ ಅಷ್ಟೈಶ್ವರ್ಯಗಳ ನಡುವೆ ಸುಖವಾಗಿ ಬಾಳುತ್ತಿದ್ದ ಮಾರಯ್ಯನವರು, ಈಗ ಕಡು ಬಡತನದಲ್ಲಿ ಮೋಳಿಗೆಯ ಕಾಯಕಮಾಡಿಕೊಂಡು ಜೀವಿಸುತ್ತಿದ್ದರಷ್ಟೆ ; ಹೀಗಿರುವುದನ್ನು ಕಂಡು, ಅವರ ‘ಶ್ರೇಷ್ಠ ಚಿಂತನ, ಸರಳ ಜೀವನ’ದ ಆದರ್ಶವನ್ನು ಮೆಚ್ಚಿದರೂ, ಏನಾದರೂ ಸ್ವಲ್ಪ ಹಣ ಸಹಾಯ ಮಾಡಿದರೆ ಮಾರಯ್ಯನವರಿಗೆ ಅನುಕೂಲವಾದೀತೇನೋ ಎಂಬ ಒಳ್ಳೆಯ ಉದ್ದೇಶದಿಂದ, ಕನಿಕರದಿಂದ ಬಸವಣ್ಣನವರು ಒಮ್ಮೆ ಹೀಗೆ ಮಾಡಿದರು. ಬಡಪೆಟ್ಟಿಗೆಗೆ ಮಾರಯ್ಯನವರು ತಮ್ಮಿಂದ ಏನೂ ಹಣದ ಸಹಾಯವನ್ನು ಸ್ವೀಕರಿಸುವುದಿಲ್ಲ ಎಂಬುದನ್ನ ತಿಳಿದಿದ್ದ ಅವರು, ಮಾರಯ್ಯನವರು ಮನೆಯಲ್ಲಿ ಇರದೆ, ಸೌದೆ ತರಲು ಕಾಡಿಗೆ ಹೋಗಿದ್ದ ಸಮಯದಲ್ಲಿ, ಅವರ ಮನೆಗೆ ಹೋದರು. ಮಾರಯ್ಯನವರ ಹೆಂಡತಿ (ರಾಣಿ ಗಂಗಾದೇವಿಯವರ ಈಗಿನ ಹೆಸರು) ಮಹಾದೇವಮ್ಮ ಅವರನ್ನು ಆದರಿಸಿ ಸತ್ಕರಿಸಿದಳು. ತಾವು ಅಲ್ಲಿಗೆ ಹೋಗುವಾಗ ಮೊದಲೇ ಎರಡು ಕೈಚೀಲಗಳಲ್ಲಿ ಚಿನ್ನದ ನಾಣ್ಯಗಳನ್ನು ತುಂಬಿಸಿ ತೆಗೆದುಕೊಂಡು ಹೋಗಿದ್ದರು; ಅವುಗಳನ್ನು ಶಿವ ಪೂಜೆಯ ಅಭಿಷೇಕದ ಪಾತ್ರೆಯ ಮರೆಯಲ್ಲಿ ಇರಿಸಿ ಬಂದುಬಿಟ್ಟರು. ಇದು ಮನೆಯಾಕೆಗೂ ತಿಳಿಯಲಿಲ್ಲ. ಕಾಡಿನಿಂದ ಮನೆಗೆ ಬಂದು ಮಾರಯ್ಯನವರು ಪೂಜೆಗೆ ಕುಳಿತಾಗ ನೋಡುತ್ತಾರೆ, ಚಿನ್ನದ ಹಣದ ಗಂಟು! ಇದು ತಾವಿಲ್ಲದಿದ್ದಾಗ ಈಗತಾನೇ ಬಂದು ಹೋದ ಬಸವಣ್ಣನವರ ಕೈವಾಡವೇ ಎಂದು ಊಹಿಸಿದರು.

ಬಸವಣ್ಣನವರನ್ನು ಕಂಡರೆ ಮಾರಯ್ಯನವರಿಗೆ ತುಂಬ ಗೌರವ, ಅತಿಯಾದ ಭಕ್ತಿ. ಕಾಶ್ಮೀರದಲ್ಲಿದ್ದಾಗ ಮಹದೇವರಾಯನಿಗೆ ಸರಿಯಾದ ಗುರು ಸಿಕ್ಕಿರಲಿಲ್ಲ ; ಗುರೂಪದೇಶ ಲಭ್ಯವಾಗಿರಲಿಲ್ಲ. ಅದಕ್ಕಾಗಿ ತಹತಹಿಸಿ ಅವರು ಕಾತುರಪಟ್ಟಿದ್ದುಂಟು (ಇಲ್ಲಿ ‘ಬಟ್ಟೆ’ಯೆಂದರೆ, ದಾರಿ, ಮಾರ್ಗ ಎಂದು ಅರ್ಥ):

‘‘...ಎನಗೆ ಇಷ್ಟವ ಕೊಟ್ಟ ಗುರುವು ಬಟ್ಟೆಯ ಹೇಳಿದುದಿಲ್ಲ;

ಇದು ಪೃಥ್ವಿಯಾಳಗಣ ಮುಕ್ತರದ ಅಚ್ಛಿಗವು, ಇದ ಬಿಡಿಸಾ...

ಲಿಂಗಕ್ಕೆ ಮಜ್ಜನ ಮಾಡುವಲ್ಲಿ ಮಂಡೆಯ ಕುರುಹನರಿಯೆ;

ಲಿಂಗಕ್ಕೆ ಬಡಿಸಬಲ್ಲಡೆ ಬಾಯ ನೆಪ್ಪ ಕಾಣೆ; ಇದಕಿನ್ನೇವೇ?

ಇನ್ನರಿಗೆ ಹೇಳುವೆ? ಕೊಟ್ಟ ಗುರುವು ಬಟ್ಟೆಯ ಹೇಳಿದುದಿಲ್ಲ !....

(ವಚನಗಳು 625, 615)

ಕಲ್ಯಾಣಕ್ಕೆ ಬಂದಮೇಲೆ ಒಬ್ಬರಿಗಿಂತ ಒಬ್ಬರು ಮಹಾ ಜ್ಞಾನಿಗಳೂ, ಭಕ್ತಿಯೇ ಮೈವೆತ್ತಿ ಬಂದಂಥವರೂ, ಆಡುವುದನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿರುವರನ್ನೂ ಕಂಡು, ಅವರೊಂದಿಗೆ ಇರುವ ಭಾಗ್ಯವ ನೆನೆದು, ಮಾರಯ್ಯನವರಿಗೆ ಆಗುತ್ತಿದ್ದ ಸಂತೋಷ ಅಪರಿಮಿತ. ಆಗಾಗ್ಗೆ ಭಾವೋದ್ರೇಕದಿಂದ ನುಡಿಯುತ್ತಿದ್ದುದೂ ಉಂಟು:

‘‘...ಜಗ ಹಿತಾರ್ಥವಾಗಿ ಭಕ್ತನಾದೆ.

ಭಕ್ತಿ ತದರ್ಥವಾಗಿ ಮಹೇಶ್ವರನಾದೆ;

ಮಹೇಶ್ವರ ತದರ್ಥವಾಗಿ ಪ್ರಸಾದಿಯಾದೆ;

ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ;

ಪ್ರಾಣಲಿಂಗಿ ತದರ್ಥವಾಗಿ ಶರಣನಾದೆ;

ಶರಣ ತದರ್ಥವಾಗಿ ಐಕ್ಯನಾದೆ;

ಇಂತೀ ಷಡುಸ್ಥಲ ಮೂರ್ತಿಯಾಗಿ ಸಂಗನ ಬಸವಣ್ಣ, ಚೆನ್ನ ಬಸವಣ್ಣ !

ನಿಮ್ಮ ಸುಖ ದುಃಖದ ಪ್ರಮಥರು ಸಹಿತವಾಗಿ

ಏಳನೂರ ಎಪ್ಪತ್ತು ಅಮರಗಣಂಗಳು

ಗಂಗೆ ವಾಳುಕಸಮಾರುದ್ರರು

ಮತ್ತೆ ಅವಧಿಗಳಗೊಲ್ಲದ ಸಕಲ ಪ್ರಮಥರು ಬಂದರಲ್ಲ-

ಬಂದುದ ಕಂಡು, ಎನ್ನ ಸಿರಿಯಾಳಿಗಾಯಿತ್ತು;

ಎನ್ನ ಭಾವದ ಉರಿಯ ಬಿಡಿಸು, ನಿ:ಕಳಂಕ ಮಲ್ಲಿಕಾರ್ಜುನಾ !

(ವಚನ 445)

ಹೀಗೆ, ಯಾವ ಗುರುವು ತನ್ನ ಜ್ಞಾನಾಂಜನ ಶಲಾಕೆಯಿಂದ ಅಜ್ಞಾನ ತಿಮಿರಾಂಧದಿಂದ ಆವೃತವಾದ ಕಣ್ಣುಗಳನ್ನು ಬಿಡಿಸಿದರೋ, ಆ ಗುರುಗಳೇ ತನ್ನ ಶಿಷ್ಯ ಸಮಾನನಾದ ಈ ಮಾರಯ್ಯನ ಮನದಿಂಗಿತವನ್ನು, ಕಾಂಚನವನ್ನು ಕಾಷ್ಟಸಮವಾಗಿ ಕಾಣುವ ಮನೋಭಾವವನ್ನು ಅರಿಯದೇ ಹೋದರಲ್ಲಾ- ಎಂಬ ವ್ಯಥೆ ಕಾಡಿತು; ದುಃಖ ಉಮ್ಮಳಿಸಿತು. ಹೇಳಿಕೊಂಡರು :

ಇನ್ನು ಲಿಂಗಯ್ಯನಿತ್ತ ಕಾಯಕ ನಮಗಿರಲು

ಈ ಹೊಲೆ ಕೊನ್ನು, ಹಣಹದ್ದು ನಮಗೇಕೆ ?

ಅಣ್ಣನವರಿಗೆ ಇಷ್ಟೂ ತಿಳಿಯಬಾರದೇ ?

ಬಡತನ, ಒಡೆತನಗಳ ಭ್ರಾಂತಿ ಬಸವಣ್ಣನವರಿಗೂ ಬಿಡಬಾರದೆ ?

ಯಾರು ಬಡವರು ? ಯಾರು ಒಡೆಯರು ?

ದುಡಿಯಲಾಗದವರು, ಒಡೆಯರಾಗಿದ್ದರೂ ಬಡವರೇ !

ದುಡಿಯುವವರು

ಬಡವರಾಗಿದ್ದರೂ ಒಡೆಯರೇ !

ಇದು ಕಾಯಕತತ್ವ !

- (ಉಲ್ಲೇಖ : ಸಿ. ಬಿ. ಚಂದ್ರಶೇಖರ್‌, ‘ದಲಿತ ಶಿವ’(1998) ಪುಟ 15, 28)

ತಿಳಿದೂ ತಿಳಿದೂ ಗುರು ಸಮಾನರೇ ಹೀಗೆ ಮಾಡಿದರೆ ಹೇಗೆ ?(‘ಮಹಾಲಿಂಗಲೀಲೆ’, 14 : 14ರಲ್ಲಿ ಹೇಳಿದಂತೆ) ‘ಅಸಮ ಕಾಶ್ಮೀರದೇಶವನೆಲ್ಲ ಜಂಗಮ ವಿರಸಕ್ಕೆ ಕೊಟ್ಟು, (ಈ) ಮಾರವಿಭು ಬಸವನಂಘ್ರಿದರ್ಶನವಾಂತು ಕಲ್ಯಾಣ ನಗರದೊಳು ಸಂತಸದೊಳು’ ನಾನಿದ್ದೆ; ನಾನೇಕೆ ಬಂದೆ (ಆ ಎಲ್ಲ) ಸುಖವ ಬಿಟ್ಟು (ಹಾಗೆ)ಬಂದುದಕ್ಕೆ ಒಂದೂ ಆದುದಿಲ್ಲ; ಸಂಸಾರದಲ್ಲಿ ಸುಖಿಯಲ್ಲ...’(ವಚನ, 150); ಅಲ್ಲಿಂದ ಹೊತ್ತು ತಂದಿದ್ದ ಎಲ್ಲಾ ಧನಕನಕವಸ್ತು ವಾಹನಗಳನ್ನೂ ದಾನ ಮಾಡಿ ಬರಿಗೈ ಮಾಡಿಕೊಂಡಿದ್ದೇಕೆ ? ‘...ಬಂದೆ, ನಾ ಬಸವಣ್ಣನ ಕಥನದಿಂದ ನಾ ತಂದ ಪದಾರ್ಥವನೆಲ್ಲ ನಿಮಗಿತ್ತೆ...’ (ವಚನ 249) ‘ಕಾಯಕವೇ ಕೈಲಾಸ’ವೆಂದು ಬಗೆದು, ಆ ಮೋಳಿಗೆಯ ಕಾಯಕದಲ್ಲೇ ಸುಖಿಯಾಗಿರುವವನಿಗ ಏಕೀ ಸತ್ವ ಪರೀಕ್ಷೆ ? - ಎನಿಸಿತು ಮಾರಯ್ಯನವರಿಗೆ. ಯೋಚಿಸಿದರು:

‘ಬಯಲು ಬತ್ತಲೆಯಾದಡೆ

ಹೊದ್ದಿಸುವವರು ಇನ್ನಾರೋ ?

ಎರಿ ನೀರು ಕುಡಿದರೆ,

ಬಿಡಿಸುವವರಿನ್ನಾರೋ ?

ಮಹಾಮೇರು ನಡೆವಡೆ,

ಪಥಕ್ಕೆ ಇಂಬುಗೊಡುವವರಿನ್ನಾರೋ ?

ಅರಿದವ ಮೆರೆದವನಾದರೆ

ಅರಿವ ಹೇಳುವವನಿನ್ನಾರೋ?

ನಿಮ್ಮ ನಿಜವ ನೀವೇ ಬಲ್ಲಿರಿ-

ನಿ:ಕಳಂಕ ಮಲ್ಲಿಕಾರ್ಜುನ !’

(‘ದಲಿತ ಶಿವ’,ಪುಟ 29)

ಮರುದಿನ ತನ್ನ ಮನೆಗೆ ಆ ಊರಲ್ಲಿದ್ದ ಜಂಗಮರನ್ನೆಲ್ಲ ದಾಸೋಹಕ್ಕಾಗಿ ಮಾರಯ್ಯನವರು ಆಹ್ವಾನಿಸಿದರು. ಅವರೆಲ್ಲ ಬರುವ ಮುನ್ನ ಆ ‘ಹೆಸರಿಲ್ಲದ ಮರ’ದ ಬಳಿ ಹೋಗಿ, ಆ ಮರದ ರೆಂಬೆಗಳನ್ನು ಕಡಿದು ತುಂಡು ತುಂಡು ಮಾಡಿ ಕಟ್ಟು ಕಟ್ಟಿಕೊಂಡು ಮನೆಗೆ ತಂದರು. ಜಂಗಮರೆಲ್ಲ ತಾವು ಉಣಬಡಿಸಿದ ಅಂಬಲಿಯನ್ನು ಸ್ವೀಕರಿಸಿದ ಮೇಲೆ, ಒಂದೊಂದು ಕಟ್ಟಿಗೆಯ ತುಂಡನ್ನು ಆ ಜಂಗಮರ ಕೈಯಲ್ಲಿ ಇಡಲು ಪ್ರಾರಂಭಿಸಿದರು. ಏನಾಶ್ಚರ್ಯ !, ಮಾರಯ್ಯನವರು ಜಂಗಮರ ಕೈಯಲ್ಲಿ ಇಡುತ್ತಿದ್ದಂತೇ ಆ ಮರದ ತುಂಡುಗಳೆಲ್ಲ ಚಿನ್ನದ ತುಂಡುಗಳಾಗ ತೊಡಗಿದವು ! ಸಂತಸದಿಂದ ಮನೆಗೆ ಹಿಂತಿರುಗಿದ ಜಂಗಮರು ಈ ಪವಾಡವನ್ನು ಬಸವಣ್ಣನವರಿಗೆ ಅರುಹಿದರು. ಕೇಳಿ, ಬಸವಣ್ಣನವರಿಗೆ ತಾವು ಹಾಗೆ ಮಾಡಿದ್ದಕ್ಕೆ ನಾಚಿಕೆಯಾಯಿತು, ಮಾರಯ್ಯನವರಲ್ಲಿ ಬಂದು ಕ್ಷಮಾಪಣೆ ಬೇಡುತ್ತಾರೆ. ಗುರು ಈ ಕಾರಣಕ್ಕಾಗಿಯಾದರೂ ಮತ್ತೆ ತನ್ನ ಮನೆಗೆ ಬಂದರಲ್ಲ ಎಂದು ಮಹದೇವಮ್ಮನಿಗೆ ಸಂತೋಷವೋ ಸಂತೋಷ. ಎದುರುಗೊಂಡಾಗ, ಅವರ ಪಾದಪದ್ಮಗಳಲ್ಲಿ ತಲೆ ಬಾಗಿ, ತನ್ನ ಗಂಡನನ್ನೂ ಅವನಿಗೆ ಬೆಳಕಿತ್ತವರನ್ನೂ ಒಟ್ಟಿಗೇ ಉದ್ದೇಶಿಸಿ ನುಡಿದಿರಬೇಕು:

‘ಅದೇಕಯ್ಯ ಶಿವನೊಳಗೆ ಕೂಠಸ್ಥನಾದಹೆನೆಂಬ ಹಲುಬಾಟ ?

ಇದು ಭಕ್ತಿ ಸತ್ಯದ ಆಟವಲ್ಲ;

ಇನ್ನಾರ ಕೇಳಿ, ಮತ್ತಿನ್ನಾರಿಗೆ ಹೇಳಿ ಮಾಡುವ ಮಾಟ ?

ಮುನ್ನ ನೀನಾರೆಂದಿದ್ದೆ ಹೇಳ ?

ಆ ಭಾವವನರಿದು ನಿನ್ನ ನೀನೇ ತಿಳಿ

ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನಾ!...

ಕಾಯವಿದ್ದಂತೆ ತಲೆ ನಡೆದುದುಂಟೆ, ಅಯ್ಯಾ ?

ಕಣ್ಣಿದ್ದಂತೆ ಕರ್ಣ ನೋಡಿದುದುಂಟೇ, ಅಯ್ಯಾ ?

ಬಾಯಿ ಇದ್ದಂತೆ ನಾಸಿಕ ಉಂಡುದುಂಟೇ, ಅಯ್ಯಾ ?

ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ !

ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ ?

ಪಟದೊಳಗಣ ಬಾಲಸರಕ್ಕೆ ಪ್ರತಿ ಸೂತ್ರ ನೇಣುಂಟೆ ?

ನಿಮ್ಮಲ್ಲಿ ಎನ್ನ ಭಾವ ಲೇಪ,.

ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನನಲ್ಲಿಯೆ !’

- ಮಹಾದೇವಮ್ಮನ ವಚನ (ಡಾ. ಸಾ ಶಿ ಮ, ‘ಸಂಶೋಧನೆ, 2001)

ಮಾರಯ್ಯನವರೂ ಗುರುವಿಗೆ ಅಡ್ಡ ಬೀಳುತ್ತಾರೆ. ಮೂವರೂ ಕಣ್ಣೀರ್ಗರೆಯುತ್ತಾರೆ; ಬಸವಣ್ಣನವರು ಇತ್ತ ಬಂದ ಸುದ್ದಿ ಕೇಳಿ ಅಭಿಮಾನಿಗಳು ದಂಡೆ ದಂಡೆಯಾಗಿ ಬಂದು ಸೇರತೊಡಗುತ್ತಾರೆ. ತಂಗಿ(ಕಾಶ್ಮೀರದಲ್ಲಿ ‘ನಿಜದೇವಿ’ಯಾಗಿದ್ದವಳು ಈಗ) ಬೊಂತಾದೇವಿಯೂ ಬಂದು ಜೊತೆಗೂಡುತ್ತಾಳೆ. ‘ಅರಿವರತು ಕುರುಹಿಲ್ಲದಾತ ನೀನೇ ಬಿಡಾಡಿ’(ಅರಿವು ಎಂಬುದನ್ನೇ ಕಳೆದುಕೊಂಡು, ಗುರುತು ಎಂಬುದೇ ಬೇಡವಾದಾಗ, ನಾಮ-ರೂಪ ವಿವರ್ಜಿತ ಅನಿರ್ವಚನೀಯನೇ ಪರಮ ಶಿವ)- ಎನ್ನುವ ಬೊಂತಾಯಕ್ಕನಿಗೆ ಈ ಸಮ್ಮಿಳನದಲ್ಲಿ ಪಾಲುಗೊಳ್ಳುವ ಮನಸ್ಸು. ಇಲ್ಲಿ ಮನಸ್ಸು ಮನಸ್ಸು ಸ್ಪಂದಿಸುತ್ತಿರುವಾಗ ಮಾತು ಹೊಲ್ಲ, ಸಲ್ಲ; ಆದರೂ ತಡೆಯಲಾರದೆ ಮಾರಯ್ಯನವರು ನುಡಿದಿರಬೇಕು:

‘ಎನಗೆ ಮರ್ತ್ಯದ ಮಣಿಹ ಕೃತ್ಯವಿನ್ನೆಷ್ಟು ದಿನ ಹೇಳಾ !

ಎನಗೆ ಕಟ್ಟುಗುತ್ತಿಗೆಯೇ ?

ನಾ ಕಟ್ಟಿಗೆಯ ಹೊತ್ತು

ಶಿವ ಭಕ್ತರ ಮನೆಗೆ ನೀವು ಕೊಟ್ಟ ಕಾಯಕದ ಕೃತ್ಯ

ಇನ್ನೆಷ್ಟು ದಿನ ಹೇಳಾ,

ನಿ:ಕಳಂಕ ಮಲ್ಲಿಕಾರ್ಜುನಾ !...

ಆತ್ಮ-ತೇಜವ ಬಿಟ್ಟಾತನೆ ಗುರುವನರಿದವ

ಮನವಿಕಾರವ ಬಿಟ್ಟಾತನೇ ಲಿಂಗವನರಿದವ

ಧನವಿಕಾರವ ಬಿಟ್ಟಾತನೇ ಜಂಗಮವನೈದವ

ಇಂತೀ ತ್ರಿವಿಧ ನಾಸ್ತಿಯಾದಂಗಲ್ಲದೆ

ನಿ:ಕಳಂಕ ಮಲ್ಲಿಕಾರ್ಜುನನಲ್ಲಿ ಸಹಜ ಭಕ್ತನಲ್ಲ ! ....

ಹಲವು ಬಹುರೂಪ ಬರೆವ ಕರದ ಕಡ್ಡಿಯ ಭೇದದಂತೆ,

ಮನವರಿದು ಕಣ್ಣು ನೋಡಿ ಕೈಯ್ಯ ಕಡ್ಡಿಯ ಹಿಡಿದು ಲಕ್ಷಿಸುವಂತೆ,

ಸ್ಥಲದಲಿ ನಿಂದು,

ಅರಿವಿನಲ್ಲಿ ಆಶ್ರಯಿಸಿ,

ಇದ್ದ ವಿನ್ಯಾಸ ಭಕ್ತಿಯಾಳಡಗಿ,

ಭಕ್ತಿ ವಸ್ತುವಿನಲ್ಲಿ ಲೇಪವಾದಲ್ಲಿ-

ನಿ:ಕಳಂಕ ಮಲ್ಲಿಕಾರ್ಜುನನ ಲಿಂಗವು ನಿರ್ಲೇಪವಯಾತ್ತು ! ’

(-‘ಶೂನ್ಯ ಸಂಪಾದನೆಗೊಂದು ಮುನ್ನುಡಿ’ ಡಾ. ಸಾ ಶಿ ಮ, ‘ಸಂಶೋಧನೆ’)

ಕಾಶ್ಮೀರ ಕೇಸರಿಯ ಕಂಪು ಹೀಗೆ ಕನ್ನಡದ ಗಾಳಿಯಲ್ಲಿ ದಟ್ಟವಾಗಿ ಹರಡಿ, ಚಿರಕಾಲ ಉಳಿಯುತ್ತದೆ !

ನಮ್ಮ ಕಾಶ್ಮೀರ-1 : ಭುವಿ ಮೇಲಿನ ಸ್ವರ್ಗವೀ ವಿಶ್ವದ ಮೇಲುಪ್ಪರಿಗೆ !

ನಮ್ಮ ಕಾಶ್ಮೀರ-2 : ಕಾಶ್ಮೀರದ ಹುಟ್ಟಿನ ಕತೆ

ನಮ್ಮ ಕಾಶ್ಮೀರ-2 : ಕಾಶ್ಮೀರದ ಬಿಲ್ಹಣ ಬರೆದ ‘ಚೌರ-ಪಂಚಾಶಿಕಾ’ದಿಂದ ಆಯ್ದ ಪದ್ಯಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Celestial view of Kashmir, Shikaripura harihareshwara attempts an appreciation of poetry of Bilhana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more