Copra price: ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ದಿಢೀರ್ ಕುಸಿತ
Copra Price: ಅರಸೀಕೆರೆ ಮರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಭರ್ಜರಿ ಏರಿಕೆಯತ್ತ ಹೊರಟಿದ್ದ ಕೊಬ್ಬರಿ ಧಾರಣೆಯಲ್ಲಿ ಇದೀಗ ದಿಢೀರ್ ಕುಸಿತವಾಗಿದೆ. ಇದರಿಂದ ತೆಂಗು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾದ್ರೆ ಎಷ್ಟಕ್ಕೆ ಇಳಿಕೆಯಾಗಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ನಿರಂತರವಾಗಿ ಏರಿಳಿತ ಕಾಣುತ್ತಿರುವುದು ಸ್ಥಳೀಯ ರೈತರು ಮತ್ತು ರವಾನೆ ಮಾಡುವವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಈ ಬದಲಾಗುತ್ತಿರುವ ದರಗಳಿಂದಾಗಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿದ್ದು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೆಳೆಗಾರರು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಬ್ಬರಿ ಧಾರಣೆ ದಿಢೀರ್ ಕುಸಿತ
ಕೆಲವೇ ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿ ದರವು 38,500 ರೂಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಪ್ರಸ್ತುತ ಈ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಬೆಲೆಯು 30,600 ರೂಪಾಯಿಗಳಿಗೆ ಬಂದು ನಿಂತಿದೆ. ಇದರಿಂದಾಗಿ ಪ್ರತಿ ಕ್ವಿಂಟಾಲ್‌ಗೆ ಬರೋಬ್ಬರಿ 8,000 ರೂಪಾಯಿಗಳಷ್ಟು ನಷ್ಟ ಉಂಟಾಗುತ್ತಿದ್ದು, ರವಾನೆದಾರರು ಮತ್ತು ವರ್ತಕರು ಕಂಗಾಲಾಗಿದ್ದಾರೆ. ಈಗಾಗಲೇ ತೆಂಗಿನ ಮರಗಳಿಗೆ ತಗುಲುತ್ತಿರುವ ವಿವಿಧ ರೋಗಗಳಿಂದಾಗಿ ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಈ ದರ ಕುಸಿತವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೂ ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಕೊಬ್ಬರಿ ಬೆಲೆ ಇಳಿಕೆಯಾಗಿದೆ. ಇಲ್ಲಿ ಪ್ರಸ್ತುತ ಗರಿಷ್ಠ ಧಾರಣೆ 31,500 ರೂಪಾಯಿ ಇದ್ದು, ,ಮಾದರಿ ಬೆಲೆ 30,000 ರೂಪಾಯಿ ಇದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು
* ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತೆಂಗಿನಕಾಯಿಯನ್ನು ಅರ್ಧ ಸೀಳಿ ಬಿಸಿಲಿನಲ್ಲಿ ಒಣಗಿಸಿ ಸಿದ್ಧಪಡಿಸುವ ಒಣ ತೆಂಗು ಪ್ರತಿ ಕೆ.ಜಿ.ಗೆ ಕೇವಲ 200 ರೂಪಾಯಿಗಳ ದರದಲ್ಲಿ ಲಭ್ಯವಾಗುತ್ತಿದೆ. ಈ ಕಡಿಮೆ ಬೆಲೆಯ ಪರ್ಯಾಯ ಉತ್ಪನ್ನಗಳತ್ತ ದೇಶದ ಪ್ರಮುಖ ವ್ಯಾಪಾರಿಗಳು ಮುಖ ಮಾಡುತ್ತಿರುವುದರಿಂದ ಸ್ಥಳೀಯ ಕೊಬ್ಬರಿಗೆ ಬೇಡಿಕೆ ಕಡಿಯಾಗಿದೆ. ಇದರಿಂದ ಬೆಲೆ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
* ಕೊಬ್ಬರಿ ದರವು ಏರಿಕೆಯ ಹಂತದಲ್ಲಿದ್ದಾಗ ರೈತರು ಕಮಿಷನ್ ಅಂಗಡಿಗಳಿಗೆ ಭಾರಿ ಪ್ರಮಾಣದಲ್ಲಿ ಕೊಬ್ಬರಿ ಮಾರಾಟ ಮಾಡಿದ್ದರು. ಆ ಸಮಯದಲ್ಲಿ ಖರೀದಿಸಿದ ಕೊಬ್ಬರಿ ಇನ್ನೂ ರವಾನೆದಾರರ ಗೋದಾಮುಗಳಲ್ಲೇ ಉಳಿದಿದೆ. ಪ್ರಸ್ತುತ ಮಾರುಕಟ್ಟೆ ದರ ಇಳಿಕೆಯಾಗಿರುವುದರಿಂದ ವರ್ತಕರು ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ.
ಜಿಎಸ್‌ಟಿ ಅಧಿಕಾರಿಗಳ ವಿರುದ್ಧ ಆರೋಪ
ಮಾರುಕಟ್ಟೆಯಲ್ಲಿ ವ್ಯಾಪಾರ ಕುಂಠಿತಗೊಳ್ಳಲು ಜಿಎಸ್‌ಟಿ ಅಧಿಕಾರಿಗಳ ಕಠಿಣ ಕ್ರಮಗಳೂ ಕಾರಣ ಎಂಬ ಆರೋಪ ಕೇಳಿಬಂದಿದೆ. ಎಪಿಎಂಸಿಯಲ್ಲಿ ವಾರಕ್ಕೆ ಎರಡು ದಿನ ನಡೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಖರೀದಿಸಿದ ಕೊಬ್ಬರಿಯನ್ನು ಗುಣಮಟ್ಟದ ಆಧಾರದ ಮೇಲೆ ವಿಂಗಡಣೆ ಮಾಡಲು ಎಪಿಎಂಸಿ ಆವರಣದಲ್ಲಿರುವ ತಮ್ಮದೇ ಅಂಗಡಿಗಳಿಗೆ ಸಾಗಿಸುವಾಗ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಕೇವಲ ಆವರಣದೊಳಗಿನ ಸಾಗಾಟಕ್ಕೂ ಜಿಎಸ್‌ಟಿ ಕಾಯ್ದೆಯಡಿ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಿರುಕುಳದಿಂದ ಬೇಸತ್ತ ಹಲವು ರವಾನೆದಾರರು ವ್ಯಾಪಾರದಿಂದಲೇ ದೂರ ಸರಿಯುತ್ತಿದ್ದಾರೆ. ಈ ಕುರಿತು ವರ್ತಕರ ನಿಯೋಗವು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಪಾರದರ್ಶಕ ವ್ಯವಸ್ಥೆಗೆ ಆಗ್ರಹ
ಪ್ರಸ್ತುತ ಬಿಕ್ಕಟ್ಟಿನ ಪರಿಹಾರವಾಗಿ ಎಪಿಎಂಸಿ ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ. ರೈತರು ತಮ್ಮ ಕೊಬ್ಬರಿಯನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಎಪಿಎಂಸಿ ಜಾಗಕ್ಕೆ ತರಬೇಕು. ಅಲ್ಲಿ ರವಾನೆದಾರರು ಕೊಬ್ಬರಿಯ ಗುಣಮಟ್ಟವನ್ನು ಮುಕ್ತವಾಗಿ ಪರಿಶೀಲಿಸಿ, ತಮಗೆ ಸಾಧ್ಯವಿರುವ ಗರಿಷ್ಠ ದರವನ್ನು ನಮೂದಿಸುವಂತಾಗಬೇಕು. ಇಂತಹ ಸಂಪೂರ್ಣ ಪಾರದರ್ಶಕ ಮುಕ್ತ ಟೆಂಡರ್ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ರೈತರಿಗೆ ಸೂಕ್ತ ಬೆಲೆ ಸಿಗಲು ಮತ್ತು ಮಾರುಕಟ್ಟೆ ಸುಧಾರಿಸಲು ಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.












Click it and Unblock the Notifications