ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವಸೂರಿಗಳು ಕಂಡ ಕಾಶ್ಮೀರ

By Super
|
Google Oneindia Kannada News

ಕಾಶ್ಮೀರದ ಹುಟ್ಟಿನ ಕತೆ

ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಕಾಶ್ಮೀರದ ಭೂಮಿಯೆಂದರೆ ಸಾಕ್ಷಾತ್‌ ಪಾರ್ವತಿಯೇ !
(ಕಾಶ್ಮೀರಾ : ಪಾರ್ವತೀ, ತತ್ರ ರಾಜಾ ಜ್ಞೇಯೋ ಹರಾಂಶಜ: ।। - ಕಲ್ಹಣ, 'ರಾಜತರಂಗಿಣೀ", 1 : 72)

ಎಲ್ಲಾ ಪ್ರದೇಶ, ದೇಶ, ನಗರ, ಊರು, ಹಳ್ಳಿಗಳಿಗೂ, ಬೆಟ್ಟ ಗುಡ್ಡಗಳಿಗೂ, ನದಿಯ ದಡದ ಕ್ಷೇತ್ರಗಳಿಗೂ ಒಂದೊಂದು ಪರಂಪರಾನುಗತ ಇತಿಹಾಸ, ಒಂದು 'ಕತೆ" ಇರುವಂತೆ, ಕಾಶ್ಮೀರದ ಬಗ್ಗೆಯೂ ಅಲ್ಲಿರುವ ಜನರನ್ನು ಕೇಳಿದರೆ 'ಕಾಶ್ಮೀರ" ಹೇಗೆ ಜನ್ಮತಾಳಿತು- ಎಂಬುದಕ್ಕೆ ಐತಿಹ್ಯವೊಂದನ್ನು ಹೇಳುತ್ತಾರೆ :

ಬಹಳ ಬಹಳ ಹಿಂದೆ, ಒಂದಾನೊಂದು ಕಾಲದಲ್ಲಿ ನಮ್ಮ ಜಮ್ಮು ಕಾಶ್ಮೀರದ ಈ ಭೂಗಭಾಗವೆಲ್ಲ ನೀರಿನಿಂದಲೇ ತುಂಬಿ ಹೋಗಿತ್ತಂತೆ. ಒಂದು ಸರೋವರದ ಮಾದರಿಯಲ್ಲಿ ಇತ್ತಂತೆ. ಅತಿ ದೊಡ್ಡ ಸರೋವರ. ಹೆಸರು 'ಸತೀಸರಸ್‌(ಸತಿಸರ)". ನಿರ್ಜನ ಪ್ರದೇಶ ; ಅಂತಹ ಜಾಗಗಳಲ್ಲೇ ಅಲ್ಲವೇ, ದೈತ್ಯರೂ ಪಿಶಾಚಿಗಳು ಇರುವುದು ? ಇದ್ದವು. ಅವುಗಳ ಮುಖಂಡನ ಹೆಸರು, ಜಲಧರ ಅಥವಾ ಜಲದೇವ. ದೈತ್ಯರು ಸರೋವರದ ಬಳಿ ಯಾರನ್ನೂ ಬರಲೂ ಬಿಡುತ್ತಿರಲಿಲ್ಲ, ದಡದ ಮೇಲೆ ನೆಲಸಲೂ ಬಿಡುತ್ತಿರಲಿಲ್ಲ. ತಪಸ್ಸಿಗೆ ಒಂದು ಒಳ್ಳೆಯ ಪ್ರದೇಶವೆಂದು ಬಗೆದು, ಸಾಧು ಜನರು ಅಲ್ಲಿಗೆ ಬಂದರೆ ಆ ಸಂತರಿಗೆ ಅವನೂ ಅವನ ಕಡೆಯವರೂ ಕೊಡುತ್ತಿದ್ದ ಉಪಟಳಕ್ಕೆ ಇತಿ-ಮಿತಿಯೇ ಇರಲಿಲ್ಲ.

ಇದನ್ನೆಲ್ಲಾ ಕೇಳಿ ಬಲ್ಲ ಕಾಶ್ಯಪ ಋಷಿ ಅತ್ತ ಬಂದನಂತೆ. (ಕಶ್ಯಪ- ಕಾಶ್ಯಪ- ಎರಡೂ ಉಂಟು !) ಅವನ ಮೂಲ ಉದ್ದೇಶ ಈ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವುದೇ ಆಗಿತ್ತು. ಅವನ ತಪಸ್ಸಿಗೆ ಮೆಚ್ಚಿ, ಅವನನ್ನು ಅನುಗ್ರಹಿಸಲು ಒಂದು ಮೈನಾ ಹಕ್ಕಿಯ ರೂಪದಲ್ಲಿ 'ಶಾರಿಕಾ" ದೇವತೆ ಬಂದಳಂತೆ. ವಿಧಿ ಇಚ್ಛಿಸಿದರೆ ಒಂದು ಹುಲ್ಲು ಕಡ್ಡಿಯೂ ಸಾಕಲ್ಲವೇ ಸರ್ವ ನಾಶಕ್ಕೆ. ಕೊಕ್ಕಿನಲ್ಲಿ ಒಂದು ಚಿಕ್ಕ ಕಲ್ಲನ್ನು ಕಚ್ಚಿಕೊಂಡು ಬಂದು ಆ ಪುಟ್ಟ ಹಕ್ಕಿ ಸರೋವರದೊಳಗೆ ಬಿಸುಡಿತಂತೆ! ಅದೇ ಕಲ್ಲು ದೊಡ್ಡ ಪರ್ವತವಾಗಿ ಬೆಳೆದು, ಅದರಡಿ ಸಿಕ್ಕು ಜಲಧರ ಮತ್ತು ಅವನ ಸಂಗಡಿಗ ದೈತ್ಯರೆಲ್ಲ ನುಚ್ಚು ನೂರಾದರಂತೆ. ಅದೇ ಈಗ 'ಹರಿಪರ್ವತ (ಹರಿ-ಪರ್ಬತ್‌)"ವಾಗಿದೆ ! ಸರೋವರದ ನೀರನ್ನೆಲ್ಲ ಕಾಶ್ಯಪ ಮುನಿ 'ಬಾರಾಮುಲಾ" ದ ಮೂಲಕ ಹೊರದೂಡಿದನಂತೆ. ನೆಲೆಸಲು ತಕ್ಕದಾದ ನೆಲವನ್ನಾಗಿ ಸರೋವರವನ್ನು ಮಾಡಿದ ನೆನಪಿನಲ್ಲಿ, ಆ ಜಾಗಕ್ಕೆ 'ಕಾಶ್ಯಪಮಾರ್‌" ಎಂದು ಜನ ಕರೆದರು. ಕ್ರಮೇಣ ಅದು 'ಕಾಶ್ಯಪ್‌ ಪಾರ್‌"ಆಯಿತು. ಕೊನೆಗೆ ಕಾಶ್ಮೀರ ಎಂಬ ಹೆಸರನ್ನು ತಾಳಿತು !

ಇಷ್ಟು ರಮಣೀಯ ನಿಸರ್ಗ ಸೌಂದರ್ಯ ಯಾರನ್ನು ತಾನೇ ಆಕರ್ಷಿಸದಿರದು ? ಸುದ್ದಿ ಕೇಳಿದ ಸುತ್ತ ಮುತ್ತಣ ಜನರೆಲ್ಲ ಬರತೊಡಗಿದರು. ಹೆಚ್ಚಾಗಿ ಬಂದವರು ಧ್ಯಾನಾಸಕ್ತ ಪಂಡಿತ ಜನಾಂಗ ! ಆದರೆ, ಇವರು ಬೇಸಗೆಯಲ್ಲಿ ಇತ್ತ ಬಂದು, ಚಳಿಗಾಲದಲ್ಲಿ ಇಲ್ಲಿಂದ ಕಾಲ್ತೆಗೆಯುತ್ತಿದ್ದರು. ಕಾರಣ, ಇನ್ನೂ ಇದ್ದ ಮೂಲನಿವಾಸೀ 'ದೈತ್ಯ"ರ ಕಾಟ, ಸಹಿಸಲಾರದ ಮೈ ಕೊರೆವ ಚಳಿ ಮತ್ತು ದುರ್ಭರ ಹಿಮಪಾತ !

ಕಶ್ಯಪ ಋಷಿಗೆ 'ನೀಲನಾಗ" ನೆಂಬ ಒಬ್ಬ ಬುದ್ಧಿವಂತ ಮಗ ಇದ್ದ. ಹೆಪ್ಪುಗಟ್ಟುವ ಚಳಿಯ ಹೊಡೆತಕ್ಕೆ ಚರ್ಮದ, ಉಣ್ಣೆಯ ಉಡುಪುಗಳ ತಡೆತ ಜನರಿಗೆ ಮನಗಾಣಿಸಿದ. ಜೊತೆಗೆ, ಈ ಮೂಲನಿವಾಸೀ 'ದೈತ್ಯ"ರೊಂದಿಗೆ ಸಂಧಾನ ನಡೆಸಿ ಒಂದು ಒಪ್ಪಂದಕ್ಕೆ ಅವರನ್ನು ಒಡಂಬಡಿಸಿದ. ಮಹಾಭಾರತದಲ್ಲಿ , ಏಕಚಕ್ರ ನಗರದಲ್ಲಿ ತಲೆಮರೆಸಿಕೊಂಡು ಪಾಂಡವರಿದ್ದಾಗ, ಬಕಾಸುರನಿಗೆ ದಿನವೂ ಗಾಡಿಯಲ್ಲಿ ತುಂಬಿ ಆಹಾರವನ್ನು ಕಳಿಸುತ್ತಿದ್ದರಲ್ಲ, ಹಾಗೆ, ವರ್ಷದ ಮೂರು- ನಾಲ್ಕು ಬೇರೆ ಬೇರೆ ದಿನ ಈ 'ದೈತ್ಯ"ರಿಗಾಗಿಯೇ ವಿಶೇಷ ಭೋಜನವನ್ನೂ, ಅವರಿಷ್ಟ ಪಡುವ ಉಡುಗೊರೆಗಳನ್ನೂ ಕೊಟ್ಟು ತೃಪ್ತಿ ಪಡಿಸುವ ಪದ್ಧತಿಯನ್ನು ಜಾರಿಗೆ ತಂದ, ನೀಲ ನಾಗ. ಕಾಶ್ಮೀರದಲ್ಲಿ ಈಗಲೂ 'ಗಾಡಿಬಾಟಿ"( ಅಥವಾ ಗಾಡ್‌ ಬತ್‌), 'ಖೇತ್ಸಿಮವಾಸ್‌", 'ಕಾವಿಪೂನಮ್‌" ಮುಂತಾದ ವರ್ಷದ ಕೆಲವು ವಿಶೇಷ ದಿನಗಳಲ್ಲಿ ಸಂಪ್ರದಾಯಸ್ಥರು ಈ ಪದ್ಧತಿಯನ್ನು ಆಚರಿಸುತ್ತಾರೆ.

(ಎಲ್ಲ ಹಳೆಯ ಕತೆಯ 'ಮಿಥ್‌" ಹಕ್ಕಿಗಳಿಗೆ ಹೊಸ ಹೊಸ ರೆಕ್ಕೆ ಪುಕ್ಕ ಬಂದು ಎತ್ತೆತ್ತಲೋ ಹಾರಾಡುವುದು ಸಹಜ. ಬೇರೆ ಬೇರೆಯವರು ಹೇಳುವ ಆ ಕತೆಗಳನ್ನೆಲ್ಲಾ ನಾನು ಕೇಳಿ, ಓದಿ, ಮೇಲಿನ ಸಾರಾಂಶಕ್ಕೆ ಬ್ರಜ್‌. ಬಿ. ಕಚ್ರೂ ಅವರ 'ಆಡು ನುಡಿ ಕಾಶ್ಮೀರಿಯ ಒಂದು ಪರಿಚಯ" (2000) ಎಂಬ ಇಂಗ್ಲಿಷ್‌ ಗ್ರಂಥವನ್ನು ಆಧರಿಸಿದ್ದೇನೆ.

***

ಸುಮಾರು ಆರನೆಯ (ಅಥವಾ ಎಂಟನೆಯ) ಶತಮಾನದ 'ನೀಲಮತ ಪುರಾಣ" ಎಂಬ ಒಂದು ಸಂಸ್ಕೃತ ಗ್ರಂಥಕ್ಕೆ ಕಾಶ್ಮೀರಿಗಳು ತುಂಬಾ ಗೌರವ ಸೂಚಿಸುತ್ತಾರೆ. ಅದು ಇನ್ನೂ ಹಳೆಯದೆಂಬ ಚರ್ಚೆಯೂ ಇದೆ. ಇದರ ಬಗ್ಗೆ ವಿವರವಾಗಿ ಮುಂದೆ ಒಂದು ಲೇಖನದಲ್ಲಿ ಬರೆಯುವೆ. ಕಾಶ್ಮೀರದ ಪ್ರಾಚೀನ ಇತಿಹಾಸಕ್ಕೆ ಬೆಳಕಿಂಡಿಯಾಗಿರುವ, 1453 ಶ್ಲೋಕಗಳ ಈ ಉದ್ಗ್ರಂಥ ಕಾಶ್ಮೀರದ ಹುಟ್ಟು ಬೆಳವಣಿಗೆ ಮಹತ್ವದ ಸ್ಥಳಗಳು ಜನ ಜೀವನ- ಇತ್ಯಾದಿಗಳನ್ನು 'ಪುರಾಣ"ಗಳ ಮಾದರಿಯಲ್ಲಿ ವಿವರಿಸುತ್ತದೆ. ಮುಂದೆ ಬರೆದ ಚಾರಿತ್ರಿಕ ಗ್ರಂಥಗಳಿಗೆ (ಉದಾಹರಣೆಗೆ ಹನ್ನೆರಡನೆಯ ಶತಮಾನದ ಕಲ್ಹಣ ಕವಿಯ 'ರಾಜತರಂಗಿಣಿ"ಗೆ) ಈ ನೀಲಮತವೂ ಒಂದು ಆಕರ ಗ್ರಂಥವಾಗಿದೆ.

'ನೀಲಮತ ಪುರಾಣ" ದ ಪ್ರಕಾರ ಕಾಶ್ಮೀರದ ಮೊದಲ ಮೂಲ ನಿವಾಸಿಗಳು 'ನಾಗ"ರು. ಆಮೇಲೆ ಬಂದವರು 'ಪಿಶಾಚ"ರು. ಕೊನೆಗೆ ಬಂದು ನೆಲೆಸಿದವರು ನಾವು 'ಮಾನವ"ರು ! 'ನೀಲಮತ ಪುರಾಣ"ದಲ್ಲೂ ಕಾಶ್ಮೀರ ಒಂದು ಬೋಗುಣಿಯಾಗಿತ್ತೆಂದೇ ಸೂಚನೆಯಿದೆ. (ಶ್ಲೋಕ 210-222). ಶಿವನ ಅರ್ಧಾಂಗಿ, 'ಸತಿ ದೇವಿ" ನಾವೆಯ ರೂಪದ ದೇಹ ಧರಿಸಿ, ಭೂಮಿಯಾಗುತ್ತಾಳೆ, ಆ ಭೂಮಿಯ ಮೇಲೆ ತಿಳಿನೀರಿನ, ವಿಸ್ತಾರವಾದ ಸರೋವರ ಸೃಷ್ಟಿಸುತ್ತಾಳೆ. ಇದೇ 'ಸತೀ ದೇಶ", 'ಸತೀ ಸರೋವರ" ಅಥವಾ 'ಸತಿಸರ"(ಶ್ಲೋಕ 45-46). ಗರುಡನಂಥ ಯಾರ ಭಾದೆಯೂ ಇಲ್ಲದ, ಈ ಪವಿತ್ರ ಸಂಜೀವಿನಿಯಂಥ ಸತೀ ದೇಶದಲ್ಲಿ ನಿರಾತಂಕವಾಗಿ ಇರಲು ನಾಗರುಗಳಿಗೆ ವಿಷ್ಣುವೇ ಸೂಚಿಸುತ್ತಾನೆ. (ಶ್ಲೋಕ 61-71). ಈ ನಾಗರುಗಳ ಮುಖಂಡ 'ನೀಲ" ಕಶ್ಯಪನ ಮಗ. 'ಮಾನವ"ರೊಂದಿಗೆ ನಾವು 'ನಾಗ"ರು ಇರಬಲ್ಲೆವಾದರೂ ಪಿಶಾಚ ದೈತ್ಯರೊಂದಿಗೆ ಬಾಳಲಾರೆವು - ಎಂದು ಬಿನ್ನವಿಸುವ ನೀಲನಿಗೆ ಸಹನೆಯಿಂದಿರಲು ಶ್ರೀ ವಿಷ್ಣುವು ಸಲಹೆ ಮಾಡುತ್ತಾನೆ. ಮುಂದೆ, ಅವರನ್ನೆಲ್ಲಾ ಬದಿಗೊತ್ತಿ ಜನರು ಅಲ್ಲಿ ನೆಲಸಿದ ನಿಮ್ಮನ್ನು , 'ನಾಗ"ರನ್ನು ಆ ಜನರೆಲ್ಲಾ ಶ್ರದ್ಧಾ ಭಕ್ತಿಯಿಂದ ಪೂಜಿಸಿ, ಗೌರವಿಸುತ್ತಾರೆ ; ನೆನೆಯುತ್ತಾರೆ (ಶ್ಲೋಕ 223-225)- ಎಂದೂ ವಿಷ್ಣು ಅಪ್ಪಣೆ ಕೊಡಿಸುತ್ತಾನೆ !

' ಕ "ಎಂದರೆ ಪ್ರಜಾಪತಿ ; (ಋಗ್ವೇದದ 'ಕ"ಸ್ಮೈ ದೇವಾಯ ಹವಿಷಾ ವಿಧೇಮ ?-10.121 ನೆನಪಿಗೆ ಬರುತ್ತದೆಯೇ ?) ಹಾಗೆ ನೋಡಿದರೆ, ಎಲ್ಲ ದೇವ ದಾನವರೂ ಕಶ್ಯಪನ ಮಕ್ಕಳೇ; ಆ ಕಾರಣಕ್ಕೇ ಕಶ್ಯಪ ಋಷಿಯೇ ಪ್ರಜಾಪತಿ. 'ಕ" ಎಂಬುದು 'ಕಶ್ಯಪ" ಎಂಬುದರ ಸಂಕೇತ ಬೀಜಾಕ್ಷರ. ಆ ಕಶ್ಯಪ ಋಷಿಯಿಂದ ನಿರ್ಮಿಸಲ್ಪಟ್ಟ ಈ ದೇಶಕ್ಕೆ 'ಕಾಶ್ಮೀರ" ಎಂದು ಹೆಸರಾಗುತ್ತದೆ ! (ಶ್ಲೋಕ 226). 'ಕ" ಎಂದರೆ 'ನೀರು" ಎಂದೂ ಸಹ ಅರ್ಥ ; ಮೊದಲು ನೀರೇ ನೀರಾಗಿದ್ದ ಪ್ರದೇಶ (ಮುಂದೆ ನೇಗಿಲ-ಯೋಗಿ ಬಲರಾಮನು ಈ ಪ್ರದೇಶದಲ್ಲಿನ ನೀರನ್ನೆಲ್ಲಾ ಹೊರಚೆಲ್ಲಿ ಜನರಿಗೆ ಅನುಕೂಲ ಮಾಡಿಕೊಡುತ್ತಾನೆ ! ) (ಶ್ಲೋಕ 227)- ಈ ಎಲ್ಲ ಕಾರಣಗಳಿಗಾಗಿ , ಓ ನಾಗದೇವತೆ ನೀಲನೇ, ಈ ಪ್ರದೇಶವು 'ಕಾಶ್ಮೀರ" ಎಂದು ಪ್ರಪಂಚದಲ್ಲೆಲ್ಲಾ ಪ್ರಖ್ಯಾತವಾಗುತ್ತದೆ- ಎನ್ನುತ್ತದೆ 'ನೀಲಮತ ಪುರಾಣ".

***

ಇನ್ನೊಂದು ಬಗೆಯಲ್ಲೂ 'ಕಾಶ್ಮೀರ" ಪದದ ನಿಷ್ಪತ್ತಿಯನ್ನು ಹೇಳುತ್ತಾರೆ : ಕಾಶ್ಯಪ + ಮೀರ = ಕಾಶ್ಮೀರ - ಎಂದು ಆ ಭಾಷಾಶಾಸ್ತ್ರಿಗಳ ಅಭಿಪ್ರಾಯ. ಅಲ್ಲದೆ ಅವರದೇ ಆದ 'ಕಾಶ್ಮೀರಿ" ಭಾಷೆಯಲ್ಲಿ ಇದನ್ನು 'ಕಶೀರ್‌" ಎಂದು ಹೇಳುತ್ತಾರಲ್ಲ , ಅದಕ್ಕೂ ಒಂದು ಸಮಜಾಯಿಷಿ ಇದೆ. ಸಂಸ್ಕೃತದಿಂದ ಕಾಶ್ಮೀರಿ ಭಾಷೆಗೆ ತದ್ಭವವಾದಾಗ ಆ ಪದಗಳಲ್ಲಿ 'ಮ"ಕಾರ ಮಾಯವಾಗಿ ಬಿಡುತ್ತಂತೆ ! ಸಂಸ್ಕೃತ 'ಸಮುದ್ರ"ವು ಮೊದಲು 'ಸಮುದರ್‌"ಆಗಿ, ಕೊನೆಗೆ ಕಾಶ್ಮೀರಿಯಲ್ಲಿ 'ಸದುರ್‌" ಆಗಿಬಿಡುತ್ತೆ ! - ಎನ್ನುತ್ತಾರೆ, ಡಾ. ಬಿ.ಎನ್‌. ಕಲ್ಲಾ ಅವರು.

ಕಾಶ್ಮೀರದಲ್ಲಿನ ಪುಣ್ಯಕ್ಷೇತ್ರಗಳ ಬಗ್ಗೆ ಬಹಳಷ್ಟು (ಸುಮಾರು ಐವತ್ತೊಂದು) 'ಮಹಾತ್ಮ್ಯ" ಗ್ರಂಥಗಳು ಇದ್ದು, ಅವು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟಿತವಾಗಿವೆ. ಅವುಗಳಲ್ಲಿ ಸಹ ಕಾಶ್ಮೀರದ ಹುಟ್ಟಿನ ಬಗ್ಗೆ ಪಂಡಿತರು ಉಲ್ಲೇಖಿಸುವುದು ಸಾಮಾನ್ಯ. ಹೆಚ್ಚೂ ಕಡಿಮೆ 'ಕಾಶ್ಮೀರದ ಇದೇ ಕಥೆ ಎಲ್ಲ ಕಡೆಯೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ನೋಡುತ್ತೇವೆ.

ಮೇಲೆ ಉಲ್ಲೇಖಿಸಿದ ಹನ್ನೆರಡನೆಯ ಶತಮಾನದ, ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ 'ರಾಜತರಂಗಿಣಿ"ಯಲ್ಲಿ ಕಾಶ್ಮೀರದ ಹುಟ್ಟು ಕೊಂಚ ಭಿನ್ನವಾಗಿದೆ. (ಮುಂದೆ ಈ ಲೇಖನ ಮಾಲೆಯಲ್ಲಿ 'ರಾಜತರಂಗಿಣಿ"ಯ ಬಗ್ಗೆಯೇ ಪ್ರಬಂಧ ಓದಲಿದ್ದೀರಿ). ಕಲ್ಹಣ ಹೇಳುತ್ತಾನೆ: ಹಿಂದೆ, ಈ 'ಕಲ್ಪ"ದ ಪ್ರಾರಂಭದಲ್ಲಿ , ಮೊದಲ ಆರು 'ಮನು"ಗಳ ಕಾಲದಲ್ಲಿ ಹಿಮಾಲಯದ ಗರ್ಭದಲ್ಲಿದ್ದ ಈ ನೆಲವೆಲ್ಲ ಜಲಮಯವಾಗಿತ್ತು ಮತ್ತು ಎಲ್ಲವೂ ಸತಿಯ ಸರೋವರವೇ ('ಸತೀಸರಸ್‌" ಎಂಬುದೇ) ಆಗಿತ್ತು. ಆಮೇಲೆ, ಈಗ ನಡೆಯುತ್ತಿರುವ ಏಳನೆಯ ವೈವಸ್ವತ ಮನ್ವಂತರ ಆರಂಭವಾದಾಗ, ದ್ರುಹಿಣ, ಉಪೇಂದ್ರ ಮತ್ತು ರುದ್ರರೇ ಮೊದಲಾದ ದೇವತೆಗಳು ಇಲ್ಲಿ ಅವತರಿಸಲು ಪ್ರಜಾಪ್ರತಿಯಾದ ಕಶ್ಯಪನು ಕಾರಣನಾದ. ಈ ಸರೋವರದಲ್ಲಿ ಇದ್ದ 'ಜಲೋದ್ಭವ"ನೆಂಬ ರಾಕ್ಷಸನನ್ನು ಅವನು ಹೊಡೆದೋಡಿಸಿದನು. ಅಲ್ಲಿ 'ಕಶ್ಮೀರಾ" ಎಂಬ ಭೂಮಿಯನ್ನು ನಿರ್ಮಿಸಿದನು. (ಪುರಾ ಸತೀಸರ : ಕಲ್ಪ ಆರಂಭಾತ್‌ ಪ್ರಭೃತಿ ಭೂರ್‌ ಅಭೂತ್‌ । ಕುಕ್ಷೌ ಹಿಮಾದ್ರೇರ್‌ ಅರ್ಣೇಭಿ : ಪೂರ್ಣಾ ಮನ್ವನ್ತರಾಣಿ ಷಟ್‌ ।। ಅಥ ವೈವಸ್ವತೀಯೇಸ್ಮಿನ್‌ ಪ್ರಾಪ್ತೇ ಮನ್ವನ್ತರೇ ಸುರಾನ್‌ । ದ್ರುಹಿಣ- ಉಪೇಂನ್ದ್ರ-ರುದ್ರಾದೀನ್‌ ಅವತಾರ್ಯ ಪ್ರಜಾಸೃಜಾ ।। ಕಶ್ಯಪೇನ ತದ್‌ ಅನ್ತಸ್ಥಂ ಘಾತಯಿತ್ವಾ ಜಲೋದ್ಭವಮ್‌। ನಿರ್ಮಮೇ ತತ್‌ ಸರೋ ಭೂಮೌ ಕಶ್ಮೀರಾ ಇತಿ ಮಂಡಲಮ್‌ ।। - ಕಲ್ಹಣ, 'ರಾಜತರಂಗಿಣೀ", 1 : 25-27)

'ಈ ನೆಲ, ಕಾಶ್ಮೀರ, 'ನಾಗ" ರೆಲ್ಲರ ಪ್ರಭು 'ನೀಲ"ನ ರಕ್ಷಿತ ಪ್ರದೇಶ ! ಈ ನೀಲಕುಂಡ ಒಂದು ವೃತ್ತಾಕಾರದ ಮಹಾ ಸರೋವರ, ಅವನ ರಾಜಲಾಂಛನ ಶ್ವೇತ ಛತ್ರ; ವಿತಸ್ತಾ ನದಿಯೆಂದರೆ ಆ ರಾಜಲಾಂಛನದ ದಂಡ ! ( ' ರಾಜತರಂಗಿಣೀ, 1 :28).

ಇದಲ್ಲದೆ, ಬೌದ್ಧಗ್ರಂಥ, ಮೂಲ ಸರ್ವಾಸ್ತಿವಾದಿನ್‌ ಪಂಥದ 'ವಿನಯ"ದ ಚೀನಿ ಭಾಷೆಯ ಆವೃತ್ತಿ 'ಮಹಾವಂಶ"ದಲ್ಲೂ ಕಾಶ್ಮೀರದ ಆವಿರ್ಭಾವ ಬೇರೆಯೇ ಇದೆಯಂತೆ. ಪ್ರಖ್ಯಾತ ಪ್ರಯಾಣಿಕ ಹ್ಯುಯೆನತ್‌ಸಾಂಗ್‌ ಅವನ ಪ್ರವಾಸ ಕಥನಗಳಲ್ಲೂ ಕಾಶ್ಮೀರದ ಜನನ ಸ್ವಲ್ಪ ಬದಲಾವಣೆಯಾಂದಿಗೆ ಬೇರೊಂದು ಬಗೆಯಲ್ಲೇ ಇದೆ ಎನ್ನುತ್ತಾರೆ. 'ನೀಲಮತ ಪುರಾಣ"ದ ಬಗ್ಗೆ ವಿಫುಲ ಅಧ್ಯಯನ ಮಾಡಿದ ಡಾ. ವೇದಕುಮಾರಿ ಘಾಯ್‌ ಅವರು.

ಇವೆಲ್ಲ ಏನೇ ಇರಲಿ, ಇದು ಮೊಟ್ಟ ಮೊದಲ ನೀರಿನ ತಾಣವಾಗಿತ್ತೆಂಬುದು ವೈಜ್ಞಾನಿಕವಾಗಿಯೂ ಸಿದ್ಧವಾಗಿರುವ ಅಂಶ. ಸುತ್ತಲೂ ಎತ್ತರದ ಗಗನ ಚುಂಬೀ ಪರ್ವತದ ಗೋಡೆಗಳ ನಡುವಣ ಕಾಶ್ಮೀರದ ಕಣಿವೆಯಲ್ಲಿ ಅತಿ ತಗ್ಗಿನ ಕೆಳಗಿನ ಪ್ರದೇಶವೂ ಸಹ ಸಮುದ್ರಮಟ್ಟಕ್ಕಿಂತ 5,200 ಅಡಿ ಎತ್ತರದಲ್ಲಿ ಇದೆ. ಹೊರವಲಯದಲ್ಲಿನ ತಗ್ಗು ಪ್ರದೇಶ ಸಮುದ್ರ ಮಟ್ಟಕ್ಕಿಂತ ಸುಮಾರು ಮೂರು ಸಾವಿರ ಅಡಿಗಳಷ್ಟು. ನೀರು ಹರಿದು ಹೋಗಲಿರುವ ಒಂದೇ ದಾರಿಯೆಂದರೆ ಬಾರಾಮೂಲಾ. ಸುಮಾರು ಅರ್ಧದಷ್ಟು ಜಾಗ ಒಂದು ಬೋಗಿಣಿಯ ತರಹವೇ. ಅಲ್ಲಿನ ಮಣ್ಣು ಭೂ ವಿಜ್ಞಾನಿ ಡಾ. ಡಿ.ಎನ್‌. ವಾಡಿಯಾ ಹೇಳುವಂತೆ, ಜೌಗು ಮಣ್ಣು , ಜೇಡಿ ಮಣ್ಣು ಜೊತೆಗೆ ತೆಳುವಾದ ಪದರಗಳ ಹಸುರು ಮರಳು. ಒಂದು ಕಡೆಯಿಂದ ಇನ್ನೊಂದು ತುದಿಯವರೆಗೆ ಈ ಜಾಗ ಸರೋವರದ ತಳವಾಗಿತ್ತೆಂದು ನೆಲವೇ ತನ್ನ ಕತೆ ಹೇಳುತ್ತದೆ !

English summary
Shikaripura Harihareshwara writes on Celestial view of Kashmir : The birth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X