Ramalinga Reddy: ಡಿಕೆಶಿ ಸಂಪುಟದಲ್ಲಿ ಕೇಳಿದ್ದು ನಗರಾಭಿವೃದ್ಧಿ, ಸಿಗದಿದ್ದರೆ ರಾಜೀನಾಮೆ ಕೊಡ್ತೀನಿ ಅಂದ್ರಾ ರಾಮಲಿಂಗಾ ರೆಡ್ಡಿ?
Ramalinga Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆಯು ತೀವ್ರ ಕಸರತ್ತಿಗೆ ಕಾರಣವಾಗಿದೆ. ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಮುಖ ಸಚಿವರು ತಮಗೆ ಇಷ್ಟವಾದ ಖಾತೆಗಳಿಗಾಗಿ ಪಟ್ಟು ಹಿಡಿದಿರುವುದು ಹೈಕಮಾಂಡ್ ಮತ್ತು ಸಿಎಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ರಾಮಲಿಂಗಾ ರೆಡ್ಡಿಯವರು ಇದೇ ಹಾದಿ ಹಿಡಿದಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಪಕ್ಷದ ವತಿಯಿಂದ ಅವರಿಗೆ ಜಲಸಂಪನ್ಮೂಲ ಇಲಾಖೆ ನೀಡಲು ನಿರ್ಧರಿಸಲಾಗಿತ್ತು. ಆದರೂ ಅದನ್ನು ನಿಭಾಯಿಸುವುದು ಮತ್ತು ರಾಜ್ಯಾದ್ಯಂತ ಪ್ರವಾಸ ಮಾಡುವುದು ಈ ವಯಸ್ಸಿನಲ್ಲಿ ಕಷ್ಟ ಎಂದು ಅವರು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಮ್ಮಿಷ್ಟದ ಖಾತೆ ನೀಡುವಂತೆ ರೆಡ್ಡಿ ಬೇಡಿಕೆ
2023ರಲ್ಲೇ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಭರವಸೆ ಸಿಕ್ಕಿತ್ತು ಎಂದು ನೆನಪಿಸಿರುವ ರಾಮಲಿಂಗಾರೆಡ್ಡಿ ಅವರು, ಈ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅವರೊಂದಿಗೆ ತುರ್ತು ಮಾತುಕತೆ ನಡೆಸಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಹುತೇಕ ಸಚಿವರಿಂದ ಹಳೆಯ ಖಾತೆಗೆ ಬೇಡಿಕೆ
ಮತ್ತೊಂದೆಡೆ, ಬಹುತೇಕ ಸಚಿವರು ಈ ಹಿಂದಿನ ಸರ್ಕಾರದಲ್ಲಿದ್ದ ತಮ್ಮ ಹಳೆಯ ಖಾತೆಗಳನ್ನೇ ಮುಂದುವರಿಸಲು ಆಸಕ್ತಿ ತೋರುತ್ತಿದ್ದಾರೆ. ಮತ್ತೆ ಕೆಲವರು ಬದಲಾವಣೆ ಮಾಡುವಂತೆ ಪಟ್ಟುಹಿಡಿರುವುದಾಗಿ ತಿಳಿದುಬಂದಿದೆ. ಈ ಹಿಂದಿನ ಗೃಹ ಇಲಾಖೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಈ ಬಾರಿ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಮನವೊಲಿಕೆಗೂ ಸಿಎಂ ಕಸರತ್ತು ನಡೆಸುತ್ತಿದ್ದಾರೆ.
ಕೃಷ್ಣ ಬೈರೇಗೌಡರಿಗೆ ಹೈಕಮಾಂಡ್ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ನೀಡಲು ನಿರ್ಧರಿಸಿತ್ತು. ಆದರೂ ತಾವು ಈ ಹಿಂದೆ ಕಂದಾಯ ಸಚಿವರಾಗಿ ತಂದಿದ್ದ ಡಿಜಿಟಲೀಕರಣ ಮತ್ತು ಸುಧಾರಣಾ ಕ್ರಮಗಳನ್ನು ಮುಂದುವರಿಸಲು ಅದೇ ಕಂದಾಯ ಖಾತೆಯನ್ನು ಕೇಳುತ್ತಿದ್ದಾರೆ. ಅದೇ ರೀತಿಯಲ್ಲಿ ಕೆ.ಹೆಚ್. ಮುನಿಯಪ್ಪ ಆಹಾರ ಇಲಾಖೆ, ಈಶ್ವರ್ ಖಂಡ್ರೆ ಅರಣ್ಯ ಇಲಾಖೆ ಹಾಗೂ ಯು.ಟಿ.ಖಾದರ್ ಅವರು ಆರೋಗ್ಯ ಇಲಾಖೆಯನ್ನು ತಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಜೊತೆ ಡಿ.ಕೆ.ಶಿ ಚರ್ಚೆ
ಇಂದು ಒಟ್ಟು 13 ಸಚಿವರಿಗೆ ಅಧಿಕೃತವಾಗಿ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಆದರೆ ಸಚಿವರೊಳಗಿನ ಆಂತರಿಕ ಅಸಮಾಧಾನ ಮತ್ತು ಪಟ್ಟುಗಳಿಂದಾಗಿ ಈ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಖಾತೆ ಹಂಚಿಕೆಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಸಭೆ ನಡೆಸಿ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications