Monsoon Rain: ಕೊನೆಗೂ ಕೇರಳ ಪ್ರವೇಶಿಸಿತು ಮುಂಗಾರು, ಕರ್ನಾಟಕಕ್ಕೆ ಧಾರಾಕಾರ ಮಳೆ ಮುನ್ಸೂಚನೆ: ಐಎಂಡಿ
ಬೆಂಗಳೂರು: ಕರ್ನಾಟಕ ಸೇರಿದಂತೆ ಭಾರತೀಯರು ಕಾಯುತ್ತಿದ್ದ ಮುಂಗಾರು ಮಳೆ (Monsoon Rain 2026) ಸುರಿಸುವ ಮಾರುತಗಳು ಕೊಂಚ ವಿಳಂಬ ಬಳಿಕ ಕೊನೆಗೂ ಕೇರಳವನ್ನು ಪ್ರವೇಶಿಸಿವೆ. ಈ ಮೂಲಕ ದೇಶಕ್ಕೆ ಅಧಿಕೃತ ಮುಂಗಾರು ಮಳೆ ಆಗಮಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಬೆಂಗಳೂರು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದರ ಬೆನ್ನಲ್ಲೆ ಕರ್ನಾಟಕ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಿಗೆ ಅಂದಾಜು 200 ಮಿಲಿ ಮೀಟರ್‍ನಷ್ಟು ಮಳೆ ಸುರಿಯಲಿದೆ. ಇಂದು ಗುರುವಾರವೇ ದಕ್ಷಿಣ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ.
ಕರ್ನಾಟಕದ ಒಂದು ಜಿಲ್ಲೆ ಪ್ರವೇಶಿಸಿದ ಮುಂಗಾರು
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ, ಅಂಡಮಾನ್ ನಿಕೋಬಾರ್ ಸೇರಿದಂತೆ ಸಮುದ್ರ ಮಟ್ಟದಲ್ಲಿ ವಾರಗಳಿಂದಲೂ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿ ಮುಂಗಾರು ಆಗಮನಕ್ಕೆ ವಾತಾವರಣ ಸೃಷ್ಟಿಯಾಗಿತ್ತು. ಐಎಂಡಿ ಈ ಹಿಂದೆ ತಿಳಿಸಿದಂತೆ ಮೇ 26ಕ್ಕೆ ಬದಲಾಗಿ ಜೂನ್ 4ರಂದು ಸ್ವಲ್ಪ ತಡವಾಗಿ ಮುಂಗಾರು ಆಗಮಿಸಿದೆ. ವಿಶೇಷವೆಂದರೆ ಆಗಮನದ ಮೊದಲ ದಿನವೇ ಕರ್ನಾಟಕದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಮಾರುತಗಳು ಸಕ್ರಿಯವಾಗಿವೆ. ಅಲ್ಲಿ ಭಾರೀ ಮಳೆ ಆಗುತ್ತಿದೆ ಎಂದು ಹವಾಮಾನ ತಜ್ಞ, ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು 'ಒನ್‌ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ಕರಾವಳಿಗೆ ಭರ್ಜರಿ ಮಳೆ, ಉತ್ತರ ಕರ್ನಾಟಕಕ್ಕೆ..?
ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ ಜೂನ್ 11ರವರೆಗೂ ಬಿರುಗಾಳಿ ಸಹಿತ ನಿರಂತರವಾಗಿ ಧಾರಾಕಾರ ಮಳೆ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಭಾರೀ ಮಳೆ ಆಗುತ್ತಿದ್ದು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಿಸುವ ಸಾಧ್ಯತೆ ಇದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ 115 ರಿಂದ 200 ಮಿಲಿ ಮೀಟರ್‍ವರೆಗೆ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಮುಂದಿನ 7 ದಿನ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.
ಉತ್ತರ ಕರ್ನಾಟಕಕ್ಕೆ ಮುಂದಿನ ಒಂದೆರಡು ದಿನಗಳಲ್ಲಿ ಮುಂಗಾರು ಮಳೆ ಚುರುಕಾಗಲಿದೆ. ಆದರೆ ಭಾರೀ ಮಳೆ ಆಗುವುದು ಸದ್ಯಕ್ಕೆ ಅನುಮಾನ ಎನ್ನಲಾಗಿದ್ದು, ಅಲ್ಲಲ್ಲಿ ಹಗುರದಿಂದ ಉತ್ತಮ ಮಳೆ ಬರಬಹುದು. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಹಾವೇರಿ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಇನ್ನೊಂದು ವಾರ ಸಾಧಾರಣ ಮಳೆ ಮತ್ತು ನಿರಂತರ ಮಬ್ಬು ವಾತಾವರಣ ನಿರೀಕ್ಷೆ ಇದೆ ಎಂದು ಪಾಟೀಲ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ತಂಪು ವಾತವರಣದ ಅನುಭವವಾಗುತ್ತಿದ್ದು, ತುಮಕೂರು, ರಾಮನಗರ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಕೊಡಗು ಇನ್ನಿತರ ಜಿಲ್ಲೆಗಳಿಗೆ ಉತ್ತಮ ನಿರೀಕ್ಷೆ ಇದೆ.
ಸಂತಸ ತರದ ಮುಂಗಾರು ಆಗಮನ!
ಐಎಂಡಿ ವಿಜ್ಞಾನಿಗಳ ಪ್ರಕಾರ, ಕೇರಳ ಮೂಲಕ ಭಾರತಕ್ಕೆ ಬಂದ ಮುಂಗಾರು ಮಳೆ ಆರಂಭದಲ್ಲೇ ದುರ್ಬಲವಾಗಿದೆ. ಈ ಮಳೆ ಈ ವರ್ಷ ನಿಧಾನವಾಗಿ ವಿಸ್ತರಣೆ ಆಗಲಿದೆ. ಇನ್ನೊಂದೆಡೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಮಳೆ ತರುವುದು ಸದ್ಯಕ್ಕೆ ಅನುಮಾನ. ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳು ಘಟಿಸಿದಲ್ಲಿ ರಾಜ್ಯವ್ಯಾಪಿ ಭಾರೀ ಮಳೆ ನಿರೀಕ್ಷೆ ಇದೆ. ಇನ್ನೂ ಹವಾಮಾನ ಇಲಾಖೆ ಮುಂಗಾರು ಪ್ರವೇಶಿಸಿದ ನಕ್ಷೆಯನ್ನು ಸಹ ಬಿಡುಗಡೆ ಮಾಡಿದ್ದು, ಇದು ಸುಮಾರು ಸರಾಸರಿ 30 ವರ್ಷಗಳ ಇತಿಹಾಸ ಆಧಾರಿಸಿ ಬಿಡುಗಡೆಗೊಂಡ ನಕ್ಷೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಜೂನ್ 15ಕ್ಕೆ ರಾಜಸ್ಥಾನಕ್ಕೆ ಮುಂಗಾರು ಎಂಟ್ರಿ
ಜೂನ್ 6ರ ಹೊತ್ತಿಗೆ ಉತ್ತರ ಕರ್ನಾಟಕ ಪ್ರವೇಶಿಸಲಿದೆ. ಜೂನ್ 15ರ ಹೊತ್ತಿಗೆ ರಾಜಸ್ಥಾನ ರಾಜ್ಯದವರೆಗೂ ಮುಂಗಾರು ಮಳೆ ವ್ಯಾಪಿಸಲಿದೆ. ಸದ್ಯ ಉತ್ತರ ಭಾರತದ ರಾಜ್ಯಗಳಲ್ಲಿ ಅಧಿಕ ತಾಪಮಾನ, ಒಣಹವೆಯ ವಾತಾವರಣ ಮುಂದುವರಿದಿದೆ.
ರೈತರಿಗೆ ನೆಮ್ಮದಿ ತಂದ ಮುಂಗಾರು
ಕರ್ನಾಟಕದ ರೈತರು ಈಗಾಗಲೇ ಮುಂಗಾರು ಹಂಗಾಮು ಬಿತ್ತನೆ ಮಾಡಿದ್ದಾರೆ. ಬೀಜ ಮೊಳಕೆ ಬಂದ ಬೆನ್ನಲ್ಲೆ ಮಳೆ ಮಾಯವಾಗಿತ್ತು. ಆಕಾಶದತ್ತ ನೋಡುತ್ತಿದ್ದ ಮಳೆ ಆಶ್ರಿತ ಭೂಮಿಯ ಹೊಂದಿರುವ ರೈತರಿಗೆ ಮುಂಗಾರು ಆಗಮನ ಹರ್ಷ ತಂದಿದೆ. ಎರಡೆಲೆಯ ಎತ್ತರದ ಪೈರಿಗೆ ನೀರಿನ ಅಗತ್ಯವಿದ್ದು, ಈ ಸಮಯಕ್ಕೆ ಮುಂಗಾರು ಮಳೆ ಆಗುತ್ತಿರುವುದು ಅನ್ನದಾತ ಸಂತಸಕ್ಕೆ ಕಾರಣವಾಗಿದೆ.














Click it and Unblock the Notifications