ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಬಿಲ್ಹಣ ಬರೆದ ‘ಚೌರ-ಪಂಚಾಶಿಕಾ’ದಿಂದ ಆಯ್ದ ಪದ್ಯಗಳು

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ಭಾರತೀಯರ ಅತಿದೊಡ್ಡ ರಮ್ಯ ಕನಸು'ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್‌ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು . ಆದರೆ ಹೇಗಿತ್ತು ಗೊತ್ತಾ ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.

ಹನ್ನೊಂದನೆಯ ಶತಮಾನದಲ್ಲಿ (ಸುಮಾರು 1041 ರಿಂದ 1088) ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಳುಕ್ಯರ ಹೆಸರಾಂತ ದೊರೆ, ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ರಾಜಪೂಜಿತನಾಗಿದ್ದ ಸಂಸ್ಕೃತ ಕವಿ ಬಿಲ್ಹಣ ತನ್ನ ಐತಿಹಾಸಿಕ ಕಾವ್ಯ 'ವಿಕ್ರಮಾಂಕದೇವ-ಚರಿತ’ದಿಂದ ಹೆಸರು ಮಾಡಿರುವ ಕವಿ. ಹದಿನೆಂಟು ಸರ್ಗಗಳ ಆ ಮಹಾಕಾವ್ಯವಲ್ಲದೆ, 'ಕರ್ಣಸುಂದರಿ’ ಎಂಬ ನಾಲ್ಕಂಕಗಳ ನಾಟಕವೊಂದನ್ನೂ, 'ಬಿಲ್ಹಣ ಚರಿತ’ ಎಂಬ ಆತ್ಮಕಥನವೊಂದನ್ನೂ ಬರೆದಿರುವನೆಂಬ ಮಾತಿದೆ. ಇವೆಲ್ಲಕ್ಕೂ ಮಿಗಿಲಾಗಿ, ಬಿಲ್ಹಣನನ್ನು ದೇಶಿ-ವಿದೇಶೀಯರು ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ವಿಧಗಳಲ್ಲಿ ನೆನೆಸಿಕೊಳ್ಳುವಂತೆ ಮಾಡಿರುವುದು ಅವನ ಹೆಸರಿನಲ್ಲಿ ಇನ್ನೊಂದು ಖಂಡಕಾವ್ಯವೊಂದಿದೆ : ಅದೇ 'ಚೌರ-ಪಂಚಾಶಿಕಾ’ ಎಂಬ ಶೃಂಗಾರ ಕಾವ್ಯ.

ರಸಿಕರು ಕೇಳಿ, ಓದಿ, ಬಾಯಿ ಚಪ್ಪರಿಸುವ ಇದನ್ನು 'ಚೌರೀ-ಸುರತ-ಪಂಚಾಶಿಕಾ’ ಎನ್ನುವುದೂ ಉಂಟು. (ಸಂಸ್ಕೃತದಲ್ಲಿ 'ಪಂಚಾಶತ್‌’ ಎಂದರೆ ಐವತ್ತು ; 'ಪಂಚಾಶಿನ್‌’ ಎಂದರೆ ಎಂದರೆ ಐವತ್ತರಿಂದ ಕೂಡಿರುವ- ಎಂಬ ಅರ್ಥ ಇದೆ.) ಐವತ್ತು ಪದ್ಯಗಳ ಈ 'ಬಿಲ್ಹಣ ಕಾವ್ಯ’ಕ್ಕೆ ಕಾಶ್ಮೀರದ ಮತ್ತು ದಾಕ್ಷಿಣಾತ್ಯ ಎಂಬ ಎರಡು ಪಾಠಾಂತರಗಳಿವೆ; ಹೇರಳವಾಗಿ ಭಾಷ್ಯಗಳೂ ಇವೆ. ಇದು ದೇಶ-ವಿದೇಶದ ಹಲವಾರು ಭಾಷೆಗಳಿಗೆ ಅನುವಾದವಾಗಿದೆ; ಕಾವ್ಯದ ಬಗ್ಗೆ ಊಹಾಪೋಹೆಗೆ ಕಡಿವಾಣ ಕಾಣದೆ, ಹುಟ್ಟಿಕೊಂಡ ಹತ್ತಾರು ದಂತಕಥೆಗಳು ಇವೆ.

ಈ ಕಾವ್ಯ, ಒಬ್ಬ ರಾಜಕುವರಿಯನ್ನು ಕವಿ ಮನಸಾರೆ ಪ್ರೀತಿಸಿ, ಒಳಮನೆಯಲ್ಲಿ ತಾನು ಅವಳೊಡನೆ ಕಳೆದ ರಸನಿಮಿಷಗಳನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಸವಿವರ ಬಣ್ಣಿಸುವ ಸಾಕ್ಷ್ಯಚಿತ್ರ. ಸ್ವರ್ಗಕ್ಕೆ ಕಿಚ್ಚು ಹಚ್ಚುವ ಆ ಬೆಚ್ಚನೆಯ ಕ್ಷಣಗಳು ಕವಿಯ ಮನಸ್ಸಿನ ಮೇಲೆ ಅಚ್ಚೊತ್ತಿದಂತೆ ಇವೆಯಂತೆ; ಅವುಗಳನ್ನು 'ಇಂದಿಗೂ ಮರೆಯಲಾರೆ’ ಎನ್ನುತ್ತ ಮತ್ತೆ ಮತ್ತೆ ಮೆಲುಕು ಹಾಕುತ್ತಾನೆ, ಆದರೆ ಓದುಗರಿಗೆ ಕೇಳಿಸುವಂತೆ ಸ್ವಲ್ಪ ಜೋರಾಗಿಯೇ ! ವಾತ್ಸ್ಯಾಯನ ಹೇಳಿದ್ದೆಲ್ಲ ಓದದೇ ಮಾಡಿದೆ- ಎಂದ ಹಾಗೆ ; 'ಅಮರುಶತಕ’ದ ಅಮರು ಕವಿ, 'ಶೃಂಗಾರ ಶತಕ’ದ ಭರ್ತೃಹರಿ, 'ಗೀತಗೋವಿಂದ’ದ ಜಯದೇವ, 'ಭಾಮಿನೀ ವಿಲಾಸ’ದ ಜಗನ್ನಾಥ ಪಂಡಿತರುಗಳೊಂದಿಗೆ ಸಹಪಂಕ್ತಿ ಭೂರಿ ಭೋಜನಕ್ಕೆ ಕುಳಿತ ಹಾಗೆ !

ಕವಿಯ ಕಲ್ಪನಾ ವಿಲಾಸವೇ ಈ ಕಾವ್ಯದ ವಸ್ತು ಏಕೆ ಆಗಿರಬಾರದು - ಎಂಬ ಮಾತನ್ನು ಒಪ್ಪದ ಜನ, ಇಂಥ ಸೂಕ್ಷ್ಮಾತಿ ಸೂಕ್ಷ್ಮ ವಿಚಾರ ತಿಳಿಸಲು, ಹಿನ್ನೆಲೆಯಾಗಿ ಕವಿಯ ಸ್ವ-ಅನುಭವವೇ ಇರಬೇಕು, ಹಾಗಲ್ಲದೇ ಬೇರೆ ಹೇಗೆ ಸಾಧ್ಯ- ಎಂದು ಅವರು ವಾದಿಸುತ್ತಾರೆ. ಕವಿ ರಾಜಪುತ್ರಿಯಾಬ್ಬಳನ್ನು ಕದ್ದು ಕದ್ದು ಪ್ರೇಮಿಸಿದ್ದ ; ರಾಜನಿಗೆ ಅದು ತಿಳಿಯಿತು ; ಕೋಪಗೊಂಡ ರಾಜ ಕವಿಯನ್ನು ಸೆರೆಮನೆಗೆ ತಳ್ಳಿದ; ಮರಣದಂಡನೆಯನ್ನೂ ವಿಧಿಸಿದ ! ಪ್ರೇಯಸಿಯಾಂದಿಗೆ ತಾನು ಕಳೆದ ಸುರತಕ್ರೀಡೆಯ ಆ ಎಲ್ಲ ಕ್ಷಣಗಳನ್ನು ನೆನೆಸಿಕೊಂಡು 'ಇಂದಿಗೂ’(ಅದ್ಯಾಪಿ) ಮರೆಯಲಾರೆ, ಮರೆಯಲಾರೆ- ಎಂದು ಐವತ್ತು ಪದ್ಯಗಳನ್ನು ರಚಿಸಿ, ತನ್ನ ಕೊನೆಯ ನಿಮಿಷಗಳನ್ನು ಎದುರು ನೋಡುತ್ತಿರುತ್ತಾನೆ. ವಿಷಯ ತಿಳಿದು, ಪದ್ಯಗಳನ್ನು ತಾನೂ ಓದಿ ರಾಜನ ಮನಃ ಪರಿವರ್ತನೆ ಆಗುತ್ತದೆ; ಬಿಡುಗಡೆಯಾಗುತ್ತದೆ; ಪ್ರಣಯಿಗಳು ಮತ್ತೆ ಕೂಡುತ್ತಾರೆ-ಇದು, ತಲತಲಾಂತರದಿಂದ ಊರುದ್ದಕ್ಕೂ ಪ್ರಚಲಿತವಿರುವ, ಬಿಲ್ಹಣನ ಈ 'ಕಳ್ಳನ ಪ್ರಣಯದ ಕಲ್ಪನಾ ವಿಲಾಸ’ ಗಾಥೆಯ ಸುತ್ತ ಹೆಣೆದ ಜನಪ್ರಿಯ ದಂತಕತೆ !

'ಕಳ್ಳ ಪ್ರಣಯಿಯ ಕಲ್ಪನಾ ವಿಲಾಸ’! ವಿಶ್ವವಿದ್ಯಾಲಯವೊಂದರಲ್ಲಿ ಪಠ್ಯ ಪುಸ್ತಕವಾಗಿರುವ, ಪ್ರೊಫೆಸರ್‌ ಬಾರ್ಬರಾ ಸ್ಟೋಲರ್‌ ಮಿಲ್ಲರ್‌ ಅವರ ಸಮರ್ಥ ಭಾವಾನುವಾದದ, ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌ (1977) ಪ್ರಕಾಶಿತ, ಯುನೆಸ್ಕೋ ಪುರಸ್ಕೃತ ಪುಸ್ತಕದ ಉಪ-ಶೀರ್ಷಿಕೆಯೂ ಅದೇ. 'ಫ್ಯಾನ್ಟಸೀಸ್‌ ಆಫ್‌ ಎ ಲವ್‌ ಥೀಫ್‌’! ಇ ಪೊವೈಸ್‌ ಮ್ಯಾಥೆರ್ಸ್‌ ಮತ್ತು ಇನ್ನಿತರರ ಭಾವಾನುವಾದಗಳು ಅಂತರ್ಜಾಲ ತಾಣದಲ್ಲಿವೆ. 'ಸಂಸ್ಕೃತ ಸಾಹಿತ್ಯದ ಇತಿಹಾಸ’ (1961) ಗ್ರಂಥದಲ್ಲಿ (ಪುಟ 188-190) ಪ್ರೊಫೆಸರ್‌ ಎ.ಬೆರ್ರಿಡೇಲ್‌ ಕೀತ್‌ ಅವರ ಪ್ರಕಾರ, ಕಾವ್ಯದ ಕಾಶ್ಮೀರದ ಪಾಠದಲ್ಲಿ ಮಹಿಲಾಪಟ್ಟಣದ ರಾಜ ವೀರಸಿಂಹನ ಮಗಳು ಚಂದ್ರಲೇಖೆ ಕಾವ್ಯದ ನಾಯಿಕೆ; ದಾಕ್ಷಿಣಾತ್ಯ ಪಾಠದಲ್ಲಿ ಪಂಚಾಲದ ರಾಜ ಮದನಾಭಿರಾಮನ ಮಗಳು ಯಾಮಿನೀ ಪೂರ್ಣ ತಿಲಕ ಎಂಬವಳು ಕವಿಯ ಪ್ರಣಯಿನಿ. ಹದಿನೆಂಟನೇ ಶತಮಾನದ ಭಾಷ್ಯಕಾರರು ರಾಮತರ್ಕವಾಗಿಕಾ ಮತ್ತು ಭಾರತಚಂದ್ರರ ಪ್ರಕಾರ ಕಾವ್ಯಕನ್ನಿಕೆಯ ಹೆಸರು 'ವಿದ್ಯಾ’ ಮತ್ತು ಕವಿಯ ಹೆಸರು 'ಚೌರ’! ಬಿಲ್ಹಣನ ಈ ಕಾವ್ಯದಿಂದ ಪ್ರಭಾವಿತರಾಗಿ ಎಷ್ಟೋ ಜನ ಚಿತ್ರಕಾರರು ಕಾಗದ, ಬಟ್ಟೆಗಳ ಮೇಲೆ ತೈಲ ಚಿತ್ರಗಳನ್ನ ಆಪದ್ಯಗಳ ಸಂದರ್ಭಕ್ಕೆ ಅನುಗುಣವಾಗಿ ಕುಂಚವಾಡಿಸಿದ್ದಾರೆ !

'ಅನುಭವವು ಸವಿ ; ಅದರ ನೆನಪು ಇನ್ನಷ್ಟು ಸವಿ’ ಎನ್ನುತ್ತ, ಕವಿ ಏನನ್ನು ಮೆಲುಕು ಹಾಕುತ್ತಿದ್ದಾನೆ ಎಂಬುದರ ಸ್ಥೂಲ ಪರಿಚಯಕ್ಕಾಗಿ, ಅವನ ಐವತ್ತರಲ್ಲಿ ಅಷ್ಟು 'ವಾಚ್ಯ’ವಲ್ಲದ ಏಳು ಪದ್ಯಗಳನ್ನು ಇಲ್ಲಿ ಕನ್ನಡಿಸಲು ಪ್ರಯತ್ನಿಸುತ್ತಿದ್ದೇನೆ ; ಮೂಲದ ಸೊಬಗನ್ನು ಸವಿಯಬೇಕೆನ್ನಿಸುವವರಿಗಾಗಿ ಸಂಸ್ಕೃತಮೂಲವನ್ನು ಕೊನೆಯಲ್ಲಿ ಇರಿಸಿದ್ದೇನೆ, ಪರಾಂಬರಿಸಿ:

ಬಿಲ್ಹಣನ 'ಚೌರ-ಪಂಚಾಶಿಕಾ’ದಿಂದ ಆಯ್ದ ಪದ್ಯಗಳು:

ಇಂದಿಗೂ ನಾನವಳಾಡಿದುದ ಮತ್ತೆ ಮತ್ತೆ ಜ್ಞಾಪಿಸಿಕೊಳುವೆ:
'ನನ್ನದೇ ತಪ್ಪಾಯ್ತು, ಅದನೊಪ್ಪಿಕೊಳ್ಳೆ’ನುತ್ತ, ಕಾಡುತ್ತ,
ಅವಳ ಪಾದದಡಿ ಬಿದ್ದು ಬೇಡಿದ್ದೆನು, ಅಂದು, ಮಂಡಿಯೂರಿ;
ಸೆರಗ ತುದಿಯಿಂದವಳು ನನ್ನ ಕೈಗಳನತ್ತ ದೂರಕೆ ತಳ್ಳಿ,
ಕಡು ಮುನಿದು, ಗುಡುಗಿದಳೆ: 'ಹೋಗಿ ಹೋಗಿರೆ’ಂದು ! ।। 1 ।।

ಇಂದಿಗೂ ನಾನವಳ ಇಲ್ಲಿಯೇ ಕಂಡು, ಕಾಣುತಲಿರುವೆ :
ಕದ್ದೇ ಕನ್ನಡಿಯಲ್ಲಿ ಇಣುಕಿಣುಕಿ ನೋಡುತ್ತಿದ್ದಳು ಅಂದು,
ನಾನಿದ್ದೆ ಮರೆಯಲ್ಲಿ ಅಡಗಿ ಅವಳ ಹಿಂದೆ ಹಿಂದೆ;
ನಾನದನು ಗಮನಿಸಿದೆ- ಎಂದು ತಿಳಿದಳು; ಆಗ ಒಡನೆ,
ನಸು ನಡುಗಿದಳು, ಗಡಿಬಿಡಿಗೊಂಡು ನಾಚಿದಳೆ, ಮದನೆ! ।।2।।

ಇಂದಿಗೂ ನಾನವಳ ನನ್ನೆದುರೆ ನೋಡಿ, ನೋಡುತಲಿರುವೆ:
ನಾ ಬರುವ ದಾರಿಯನೆ ತನ್ನೆಲ್ಲ ಕಣ್ಣಾಗಿಸಿಕೊಂಡು,
ಆ ಕಣ್ಣುಗಳ ಮೇಲೇನೆ ಕೈಯಿರಿಸಿ, ಹಂಬಲಿಸಿ, ಕಾಯುತಿಹಳ;
ನನ್ನನೇಕೋ ಗಮನಿಸಲಿಲ್ಲ, ಬಾಗಿಲಾಚೆಯ ಮರೆಯಲೇ ಇದ್ದೆ !
ನನ್ನ ಹೆಸರಿನ ಹಾಡೊಂದ, ಆಹಾ, ಮೆಲ್ಲ ಮೆಲ್ಲ ಗುನುಗುತಿಹಳಲ್ಲ ! ।। 3 ।।

ಇಂದಿಗೂ ನಾ ನೆನೆ ನೆನೆ ನೆನೆವೆ, ಆ ಮುತ್ತನಿತ್ತವಳನ್ನ :
ನನ್ನ ಕತ್ತನು ಬಳಸಿ ಸುತ್ತಿದ್ದ ಕೈ ಬಳ್ಳಿಯವಳನ್ನ,
ತಬ್ಬಿ, ಉಬ್ಬಿದ ಎದೆಗೆ ನನ್ನನಪ್ಪಿ ಮುದ್ದಾಗಿ ನಿಂದವಳನ್ನ,
ಅರೆ ಬಿರಿದ ಕಣ್ಣುಗಳಿಂದ ಆನಂದ ತುಳುಕಿಸುತ್ತಿದ್ದವಳನ್ನ,
ಹಸಿದ ತುಟಿಗೆ ತುಟಿರಸವಿತ್ತ ಆ ಮಗುದೆಯನ್ನ ! ।। 4 ।।

ಇಂದಿಗೂ ಮಾರ್ದನಿಗೊಳುತ ಎದೆಯ ಮೂಲೆ ಮೂಲೆಯಲ್ಲಿಹವು-
ಸುಂದರಾಂಗಿಯ ಜೇನಿನ ಸವಿಯ ಆ ಮಧುರ ಸೊಲ್ಲು ;
ಸ್ಪಷ್ಟ ? ಯಾರಿಗೆ ಬೇಕು ? ಎದೆ ಮಿಡಿತ ಎದೆಗೆ ತೀಡಿದರಾಯ್ತು;
ಒಂದಾಗಿ ಕೂಡಿರುವಾಗ, ಮನಸೆಲ್ಲೋ, ಕಣ್ಣರೆ ತೆರೆದಿರುವಾಗ,
ಉಸಿರು ಬಿಸಿ, ಮಾತು ಹಸಿ, ನುಡಿಗೆ ಅರ್ಥವೆಲ್ಲೋ ! ।। 5 ।।

ಇಂದಿಗೂ ನಾನದ ಮನಸಲ್ಲೇ ಮೆಲು ಮೆಲುಕು ಹಾಕುತ್ತಿರುವೆ:
ಆ ರಾತ್ರಿ ಅವಳ ಜೊತೆಯಲಿ ಇದ್ದೆ, ನಾ ಸೀನಿದೆನು ಒಮ್ಮೆ ;
'ಚಿರಕಾಲ ಬಾಳೆ’ಂದು ಹರಸಿದಳೆ, ಆ ಅರಸುಗುವರಿ, ಚೆನ್ನೆ ?
ಉಹ್ಞು, ಚಿನ್ನದೊಡವೆಯನೊಂದ ನನ್ನ ಕಿವಿಗಿರಿಸಿದಳಲ್ಲ !
ಹೊನ್ನು ಶಾಶ್ವತ ಬಾಳ್ವೆಯ ಕುರುಹು, ಸೂಚಿಸಿದಳದೇನು ಜಾಣೆ ? ।। 6 ।।

ಇಂದಿಗೂ ನನಗವಳು, ನನ್ನವಳು, ಎಲ್ಲ ಎಲ್ಲಕ್ಕೂ ಮಿಗಿಲು !
ಜಿಂಕೆ ಮರಿಗಣ್ಣಿನ ಪ್ರಣಯಿ, ಓ ಎನ್ನ ಒಲವೆ, ಮನದನ್ನೆ !
ಹಾಲು ಬಣ್ಣದ ಕೊಡಗಳ ಹೊತ್ತ ಎದೆಯ ಹೆಣ್ಣೆ,
ದಿನ ಕಳೆಯೆ, ಮತ್ತೊಮ್ಮೆ ನೀನೆನ್ನ ಬಳಿ ಸಾರಿ ಬರುವೆಯಾ ಮನ್ನೆ ?
ಬೇಡ, ಮೂಲೋಕ ಸ್ವರ್ಗ- ಸುಖ, ಇನ್ನದೇತಕೆ ? ಇರಲು ನೀನು ನೀನೆ ! ।।7।।

ಮೂಲ :
(ಅದ್ಯಾಪಿ ತಂ ಅವಿಗಣಯ್ಯಾ ಕೃತಾಪರಾಧಂ,
ಮಾಂ ಪಾದಮೂಲ- ಪತಿತಂ ಸಹಸಾ ಗಲನ್ತೀಮ್‌ ।
ವಸ್ತ್ರಾಂಚಲಂ ಮಮ ಕರಾನ್‌ ನಿಜ ಆಕ್ಷಿಪನ್ತೀಂ,
'ಮಾ ಮಾ’ ಇತಿ ರೋಷ- ಪರುಷಂ ಬ್ರುವನ್ತೀಂ- ಸ್ಮರಾಮಿ ।। 1 ।।

ಅದ್ಯಾಪಿ ತಂ ರಹಸಿ ದರ್ಪಣಂ ಈಕ್ಷಮಾನಾಂ,
ಸಂಕ್ರಾನ್ತಮತ್‌ ಪ್ರತಿನಿಭಂ ಮಯಿ ಪೃಷ್ಠಲೀನೇ।
ಪಶ್ಯಾಮಿ, ವೇಪಥುಮತಿಂ ಚ ಸ-ಸಂಭ್ರಮಾಂ ಚ,
ಲಜ್ಜಾ ಕುಲಾಂ ಸಮದನಾಂ ಚ ಸ-ವಿಭ್ರಮಾಂ ಚ ।। 2 ।।

ಅದ್ಯಾಪಿ ತಂ ಮಯಿ ಸಮೀಪ-ಕವಾಟ- ಲೀನೆ,
ಮನ್‌- ಮಾರ್ಗ- ಮುಕ್ತ-ದೃಶ-ಆನನ-ದತ್ತ-ಹಸ್ತಾಮ್‌।
ಮದ-ಗೋತ್ರ-ಲಿಂಗಿತ-ಪದಂ ಮೃದು-ಕಾಕಲೀಭಿ:,
ಕಿಂಚಿತ್‌ ಚ ಗಾತು-ಮನಸಂ ಮನಸಾ ಸ್ಮರಾಮಿ ।।3।।

ಅದ್ಯಾಪಿ ತಂ ಭುಜ-ಲತಾರ್ಪಿತ-ಕಂಠ-ಪಾಶಾಂ,
ವಕ್ಷಸ್ಥಲಂ ಮಮ ಪಿಧಾಯ ಪಯೋಧರಾಭ್ಯಾಮ್‌।
ಈಶನ್‌ ನಿಮೀಲಿತ ಸಲೀಲ-ವಿಲೋಚನಾಭ್ಯಾಂ,
ಪಶ್ಯಾಮಿ, ಮುಗ್ಧವದನಾಂ ವದನಂ ಪಿಬನ್ತೀಮ್‌।।4।।

ಅದ್ಯಾಪಿ ಮೇ ವರತನೋರ್‌ ಮಧುರಾಣಿ ತಸ್ಯಾ:,
ಯಾನಿ ಅರ್ಥವನ್ತೀ ನ ಚ ಯಾನಿ ನಿರರ್ಥಕಾನಿ।
ನಿದ್ರಾ-ನಿಮೀಲಿತ-ದೃಶೋ ಮದಂ ಅನ್ತರಾಯಾಸ್‌,
ತಾನಿ ಅಕ್ಷರಾಣಿ ಹೃದಯೇ ಕಿಂ ಅಪಿ ಧ್ವನನ್ತಿ ।।5।।

ಅದ್ಯಾಪಿ ತನ್‌ ಮನಸಿ ಸಂ-ಪರಿವರ್ತತೇ ಮೇ,
ರಾತ್ರೌ ಮಯಿ ಕ್ಷುತವತೀ ಕ್ಷಿತಿಪಾಲ-ಪುತ್ರ್ಯಾ।
'ಜೀವ’-ಇತಿ ಮಂಗಲವಚ: ಪರಿಹೃತ್ಯ ಕೋಪಾತ್‌,
ಕರ್ಣೇ ಕೃತಂ ಕನಕ-ಪತ್ರಂ ಅನಾಲಪತ್ಯಾ।।6।।

ಅದ್ಯಾಪಿ ತಂ ಪ್ರಣಯಿನಿಂ, ಮೃಗ-ಶಾಬಕಾಕ್ಷೀಂ,
ಪೀಯೂಷ-ವರ್ಣ-ಕುಚ-ಕುಂಭ-ಯುಗಂ ವಹನ್ತೀಮ್‌।
ಪಶ್ಯಾಮಿ ಅಹಂ ಯದಿ ಪುನರ್‌ ದಿವಸಾವಸಾನೇ,
ಸ್ವರ್ಗ-ಅಪವರ್ಗ-ವರರಾಜ್ಯ-ಸುಖಂ ತ್ಯಜಾಮಿ।।7।।)

English summary
Celestial view of Kashmir, Shikaripura harihareshwara attempts an appreciation of poetry of Bilhana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X