• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭುವಿ ಮೇಲಿನ ಸ್ವರ್ಗವೀ ಕಾಶ್ಮೀರ ವಿಶ್ವದ ಮೇಲುಪ್ಪರಿಗೆ !

By ಶಿಕಾರಿಪುರ ಹರಿಹರೇಶ್ವರ
|

ಕಾಶ್ಮೀರದ ಹೆಸರು ಕೇಳಿದೊಡನೆ ಪ್ರತಿಯಾಬ್ಬ ಭಾರತೀಯನಿಗೂ ಮೈ ರೋಮಾಂಚನಗೊಳ್ಳುವುದು ಸಹಜವಾದದ್ದು. ಶಾಲೆಯಲ್ಲಿ ಓದುವಾಗ, ಭಾರತದ ಚರಿತ್ರೆಯಲ್ಲಿ ಭೂಗೋಳದ ಪಾಠಗಳಲ್ಲಿ ಬಂದು ಹೋಗುವ ಒಂದು ಪ್ರಮುಖ ಹೆಸರು, ಕಾಶ್ಮೀರ. ಚಿಕ್ಕವರಿಗೆ ಆಗ ಅದು ಮಂಜು, ಹಿಮ, ಹಿಮಾಲಯ ಇವುಗಳೊಂದಿಗೆ ಕೇಳಿ ಬರುವ ದೂರದ ಒಂದು ವಿಶೇಷ ಪ್ರದೇಶ. ಅತಿ ಸುಂದರವಾದ ಪ್ರದೇಶವಂತೆ ; ಗಿರಿಗಳ, ಝರಿಗಳ, ಮನಸೆಳೆವ ಜಲಪಾತಗಳ, ಕಣಿವೆಗಳ, ಸರೋವರಗಳ, ಬಗೆ ಬಗೆ ಹೂಗಿಡಮರಬಳ್ಳಿಗಳ ಚಿತ್ತಾಕರ್ಷಕ ಕಾಡುಗಳ ಮನಮೋಹಕ ತಾಣವಂತೆ ; ಪ್ರಕೃತಿ ಸೌಂದರ್ಯಕ್ಕೆ ಕೇಂದ್ರವಂತೆ. ಭೂಮಿಯ ಮೇಲಣ ಸ್ವರ್ಗವೆಂದರೆ ಅದೇ ಅಂತೆ ! ನಮ್ಮ ವಿದ್ಯಾಭಿಮಾನೀ ದೇವತೆ ಶಾರದೆ ಅದಕ್ಕೇನೇ ಆ ಪ್ರಶಾಂತ ರಮಣೀಯ ಕಾಶ್ಮೀರವನ್ನೇ ಆರಿಸಿಕೊಂಡು, ಅಲ್ಲಿ ನೆಲಸಿಬಿಟ್ಟಿದ್ದಾಳಂತೆ:

‘ನಮಸ್ತೇ ಶಾರದಾದೇವಿ, ಕಾಶ್ಮೀರ-ಪುರ-ವಾಸಿನಿ;

ತ್ವಾಂ ಅಹಂ ಪ್ರಾರ್ಥಯೇ ನಿತ್ಯಂ, ವಿದ್ಯಾ-ದಾನಂ ಚ ದೇಹಿ ಮೇ ।।’

- ಎಂದು ಅಡಿಗಡಿಗೆ ಬೇಡುವಾಗಲೆಲ್ಲಾ, ಅವಳು ಆ ಪ್ರದೇಶವನ್ನು ನಿವಾಸಸ್ಥಾನವನ್ನಾಗಿ ಆರಿಸಿಕೊಂಡಿರುವುದಕ್ಕೆ ಏನೋ ವಿಶೇಷ ಕಾರಣ ಇರಲೇಬೇಕು - ಎಂದು ಚಿಕ್ಕಂದಿನಲ್ಲಿ ನಾವೆಲ್ಲಾ ಯೋಚಿಸುತ್ತಿದ್ದುದು ನೆನಪಿದೆ !

ನಮ್ಮದು ಸಾಂಸ್ಕೃತಿಕವಾಗಿ ಒಂದು ಅಖಂಡ ರಾಷ್ಟ್ರ, ಆಚಾರ ವಿಚಾರ ವ್ಯವಹಾರ ಪದ್ಧತಿ ನಡವಳಿಕೆಗಳಲ್ಲಿ ನಾವೆಲ್ಲ ಒಂದೇ ಎನ್ನುವಾಗಲೆಲ್ಲ ನಮ್ಮ ಗುರು ಹಿರಿಯರೂ, ಆಮೇಲೆ ನಾವೂನೂ, ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ’- ಎಂದೇ ಹೇಳುತ್ತಿದ್ದೆವು, ಈಗಲೂ ಹೇಳುತ್ತೇವೆ.

ಹಾಲುಗೆನ್ನೆಯ ಚೆಲುವೆಯರು, ಎತ್ತರದ ದೃಢಕಾಯದ ಆಕರ್ಷಕ ಕಾಂತಿಯುತ ಮುಖದ ಅಲ್ಲಿನ ಯುವಕರು, ಉಣ್ಣೆಯ ಬಣ್ಣ ಬಣ್ಣದ ಶಾಲುಗಳು, ಕಸೂತಿಯ ಕರವಸ್ತ್ರಗಳು , ವಿವಿಧ ವಿನ್ಯಾಸಗಳ ಚಿತ್ರಮಯ ರತ್ನಗಂಬಳಿಗಳು, ಸುಗಂಧ ಪಸರಿಸುವ ಕೇಸರಿ- ಇವೆಲ್ಲ ದಾಕ್ಷಿಣಾತ್ಯರಾದ ನಮ್ಮ ಮೇಲೆ ಕಾಶ್ಮೀರ ಹಾಕಿದ ಇನ್ನು ಕೆಲವು ಮೋಡಿಯ ಮಂತ್ರಗಳು !

ಸೌಂದರ್ಯಾನುಭವವನ್ನು ಕವಿ ಅಭಿವ್ಯಕ್ತಿಸುವಾಗ ಕಾಶ್ಮೀರ ಸೊಗಸಾದ ಸಂಕೇತದ ಸಾಧನವಾಯಿತು ; ‘ಪ್ರೇಮ ಕಾಶ್ಮೀರ’ ವಾಯಿತು. ‘ನಿರಿ ನಿರಿ ಮೆರೆದುದು ನೀಲಿಯ ಸೀರೆ ; ಶರಧಿಯನುಟ್ಟಳೆ ಭೂಮಿಯ ಸೀರೆ’, ‘ಧರೆ ಶಶಿವನೆಳೆವಂತೆ, ನಾನಿನ್ನ ಸೆಳೆವೆ; ರವಿ ಧರೆಯನೆಳೆವಂತೆ, ನೀನೆನ್ನನೆಳೆವೆ !’ , ‘ಪ್ರಣಯ ರಸವನು ಎರೆದು ಕಾದಿಹೆನು ತುಟಿ ತೆರೆದು, ಪಾನಗೈ, ಓ ನನ್ನ ಭ್ರಮರ ಬಂಧು !’(ಕುವೆಂಪು, ‘ಪ್ರೇಮ ಕಾಶ್ಮೀರ’)- ಮೊದಲಾದ ಜೇನ್ನುಡಿಯ ಉದ್ಗಾರಗಳು ಪ್ರಣಯದ ಬಂಧುರ ಚಿತ್ರಣಕ್ಕೆ ಕಾಶ್ಮೀರವೂ ರಮ್ಯಕವಿಗಳ ಕನಸುದಾಣವಾಯಿತು. ಚಿತ್ರಕಾರರಿಗೆ ರೂಪದರ್ಶಿಯಾಯಿತು. ಹಾಡುಗಾರರ ಕೂಜನವಾಯಿತು. ಕಾಲಕ್ರಮೇಣ, ದೃಶ್ಯಮಾಧ್ಯಮಕ್ಕೆ ಬೆಳ್ಳಿ ತೆರೆಗೆ ಸಾಧನಸಂಪತ್ತಾಯಿತು ! ಜಗತ್ತೇ ಇದರತ್ತ ಹಸಿದ ಕಣ್ಣುಗಳಿಂದ ಮತ್ತೆ ಮತ್ತೆ ನೋಡುವಂತೆ ಆಯಿತು !

ಕೆಲವು ಅಂಕಿ ಅಂಶಗಳು : ಭಾರತದ ಕಿರೀಟಪ್ರಾಯವಾದ ‘ಜಮ್ಮು ಮತ್ತು ಕಾಶ್ಮೀರ’ ರಾಜ್ಯದ ವಿಸ್ತೀರ್ಣ 222.236 ಚದುರ ಕಿಲೋಮೀಟರ್‌ಗಳು(ಕರ್ನಾಟಕದ್ದು 191.773 ಚಕಿಮೀ); 1971ರ ಜನಗಣತಿಯ ಪ್ರಕಾರ ಅಲ್ಲಿನ ಜನಸಂಖ್ಯೆ 4,616, 632 (ಕರ್ನಾಟಕದ ಜನಸಂಖ್ಯೆ ಅದರ ಸುಮಾರು ಐದರಷ್ಟು !) ಈ ಪ್ರಾಂತ್ಯದ ರಾಜಧಾನಿ : ಶ್ರೀನಗರ. ಭಾರತ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ ನಮೂದಿತವಾದ ರಾಷ್ಟ್ರಭಾಷೆಗಳಲ್ಲಿ ‘ಕಾಶ್ಮೀರಿ’ಯೂ ಒಂದು. ಇದೂ ಮತ್ತು ‘ಜಮ್ಮು’ವಿನಲ್ಲಿ ಹೆಚ್ಚು ಪ್ರಚಲಿತವಿರುವ ‘ಡೊಗ್ರಿ’ ಎಂಬ ಇನ್ನೊಂದು ಆಡುನುಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುಮೋದಿತ ಭಾಷೆ.

‘ಕಾಶ್ಮೀರ’ ಎಂಬುದಕ್ಕೆ ‘ಭಾರತ’ದ ಒಂದು ಪ್ರಾಂತ್ಯ ಎಂಬುದೊಂದೇ ಅಲ್ಲದೆ, ಬೇರೆ ಬೇರೆ ಅರ್ಥಗಳನ್ನೂ ಕೋಶಗಳು ಕೊಡುತ್ತವೆ. ‘ಕುಂಕುಮ’ ಎಂದು ಸೂಚಿಸುತ್ತಾ, ‘ಜಯಲಕ್ಷ್ಮಿಗೆ ತದ್ಗಜ ವಕ್ತ್ರ ರಕ್ತ ಕಾಶ್ಮೀರ ವಿಲೇಪವಂ ನೆರಪಿ...’- ಎನ್ನುವ ಶಿಲಾಶಾಸನ (ಹಾಸನ, 116-13, ಕ್ರಿಸ್ತ ಶಕ 1122) ಇದೆ. ‘ಕುಂಕುಮ- ಕೇಸರಿ’ ಎಂಬ ಅರ್ಥದಿಂದ, ಆಚಾರ್ಯ ಶಂಕರಾಚಾರ್ಯರು ‘ಅನ್ನಪೂರ್ಣಾಷ್ಟಕ’ದಲ್ಲಿ ದೇವಿಯನ್ನು ‘ಕಾಶ್ಮೀರಾ’(ಶ್ಲೋಕ 7) - ಎಂದರೆ ಆ ಕುಂಕುಮ ಕೇಸರಿ ಬಣ್ಣದವಳು - ಎಂದು ಬಣ್ಣಿಸುತ್ತಾರೆ. ಅದು ‘ಕುಂಕುಮ ಬಣ್ಣದ ಹೂವು ’ಎಂಬ ಅರ್ಥದಲ್ಲಿ ‘ಲಲನಾ ಮುಖೇಂದು ಲಾವಣ್ಯ ಲೀಲೆಯ ಪಡೆದ ಬಣ್ಣದಿಂ ಕಂಪಿಂದ, ಏನ್‌ ಅಲೆದುದೋ ಬಯ್ತುಗದಂತೆ ಇರೆ, ತಲೆಗೇರುವ ಕುಸುಮ-ನಿಚಯಮಂ ಕಾಶ್ಮೀರಂ’ (ಆದಿ ಪುರಾಣ, 11: 128, ಕ್ರಿ.ಶ. 941) - ಎನ್ನುತ್ತಾನೆ, ಮಹಾಕವಿ ಪಂಪ. ‘ಅಗರು’ ಎಂದರೆ ಸುವಾಸನೆಯುಳ್ಳ ಒಂದು ವೃಕ್ಷವಿಶೇಷ ತಾನೆ; ‘ಕಾಶ್ಮೀರ’ಕ್ಕೆ ಈ ಅರ್ಥವೂ ಉಂಟು. ‘ಅನ್ನಪೂರ್ಣಾಷ್ಟಕ’ದಲ್ಲಿ (ಶ್ಲೋಕ 2) ‘ಕಾಶ್ಮೀರ-ಅಗರು-ವಾಸಿತಾ...’- ಎಂಬ ಪದಪ್ರಯೋಗವಿದೆ. ‘ಕಾಶ್ಮೀರರಾಗ’ವೆಂದರೆ ಕುಂಕುಮ ಲೇಪ; ನೋಡಿ: ‘ಪೂಸಿದ ಕಾಶ್ಮೀರರಾಗಮುಂ ಉಟ್ಟ, ಕೌಸುಂಭ-ಅಂಬರವಂ ತೊಟ್ಟ...’(ಆದಿಪುರಾಣ 12:1 ವಚನ).

‘ಕಾಶ್ಮೀರ’ದ ಪ್ರಸ್ತಾಪ ವರಾಹಮಿಹಿರನ (ಕ್ರಿ.ಶ.6ನೇ ಶತಮಾನ) ವಿಶ್ವಕೋಶ ರೂಪದ ‘ಬೃಹತ್‌ ಸಂಹಿತೆಯಲ್ಲಿ (5 :70,77,78; 9.18; 10:12 ಇತ್ಯಾದಿ ಕಡೆ) ಬರುತ್ತದೆ. ಸಾಮಾನ್ಯವಾಗಿ‘ ಛಪ್ಪನ್ನೈವತ್ತಾರು ದೇಶಗಳು’ ಎಂದು ಪ್ರಾಚೀನ ಭಾರತದ ರಾಜ್ಯಗಳನ್ನು ನಮ್ಮ ಕವಿಗಳು ಹೆಸರಿಸಿದಾಗ ಅವುಗಳಲ್ಲಿ ಕಾಶ್ಮೀರವೂ ಒಂದು. ವ್ಯಾಸ ಮಹಾಭಾರತದ ಭೀಷ್ಮ ಪರ್ವದಲ್ಲಿ (9.53) ಭಾರತವರ್ಷದ ನದಿಗಳನ್ನ ಹಾಗೂ ರಾಜ್ಯಗಳನ್ನ ಪಟ್ಟಿ ಮಾಡುತ್ತಾ , ಮಧ್ಯದಲ್ಲಿ , ಸಂಜಯ ಧೃತರಾಷ್ಟ್ರನಿಗೆ ‘‘... ಕಾಶ್ಮೀರಾ: ಸಿಂಧು ಸೌವೀರಾ: ಗಾನ್ಧಾರಾ ದರ್ಶಕಾಸ್‌ ತಥಾ।।’’- ಎಂದು ಹೇಳುತ್ತಾನೆ. ಸಭಾಪರ್ವದಲ್ಲಿ (ಅಧ್ಯಾಯ 27, ದಿಗ್ವಿಜಯ ಪರ್ವ) ಅರ್ಜುನ ಹೋಗಿ ಗೆದ್ದ ಪ್ರದೇಶ ಇದು; ಆಮೇಲೆ, ಕಾಶ್ಮೀರದ ಸುತ್ತ ಮುತ್ತ ಇದ್ದ ಹತ್ತು ಮಂದಿ ಪಾಳೆಯಗಾರರನ್ನೂ ಮತ್ತು ಲೋಹಿತರನ್ನೂ ಸೋಲಿಸಿ ತನ್ನ ಆಶ್ರಿತರನ್ನಾಗಿ ಮಾಡಿಕೊಂಡನಂತೆ. ಕಾಶ್ಮೀರದ ಕವಿ ಕ್ಷೇಮೇಂದ್ರ (ಕ್ರಿ.ಶ.1037) ತನ್ನ ‘ಭಾರತ ಮಂಜರಿ’ಯಲ್ಲಿ (ಸಭಾಪರ್ವ 2.117) ಅದನ್ನು ಸಂಗ್ರಹಿಸಿ ಹೇಳುವುದು ಹೀಗೆ:

ಸ ಕುಲೂತಾಪತಿಂ ಜಿತ್ವಾ ಬೃಹನ್ತಂ ಪಾಂಡುನಂದನ:।

ಕಾಶ್ಮೀರಾನ್‌ ಅಜಯದ್‌ ವೀರೋ ದಶಭಿರ್‌ ಮಂಡಲೈ: ಸಹ।।

ಯುಧಿಷ್ಟಿರನ ರಾಜಸೂಯ ಯಾಗಕ್ಕೆ ಕಪ್ಪ ಕಾಣಿಕೆಗಳನ್ನೂ ಉಡುಗೊರೆಗಳನ್ನೂ ಈ ದೇಶದ ಜನ ತಂದು ಕೊಟ್ಟರಂತೆ! (ಅಧ್ಯಾಯ 34, ವ್ಯಾಸ ಭಾ. ರಾಜಸೂಯ ಪರ್ವ).

ಚೋಳ ಸಿಂಹಳ ಪಾಂಡ್ಯ ಕೇರಳ

ಮಾಳವಾಂಧ್ರ ಕರೂಷ ಬರ್ಬರ

ಗೌಳ ಕೋಸಲ ಮಗಧ ಕೇಕಯ ಹೂಣ ಸೌವೀರ।

ಲಾಳ ಜೋನೆಗ ಜೀನ ಕುರು ನೇ

ಪಾಳ ಶಿಖಿ ಕಾಶ್ಮೀರ ಬೋಟ ವ

ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲಿ

- ಎನ್ನುತ್ತಾನೆ, ಗದುಗಿನ ನಾರಣಪ್ಪ (ಸಭಾಪರ್ವ, 7:2). ಶ್ರೀಕೃಷ್ಣ ದಂಡೆತ್ತಿ ಹೋಗಿ ಕಾಶ್ಮೀರದ ರಾಜನನ್ನು ಸೋಲಿಸಿದ ಪ್ರಸ್ತಾಪ ದ್ರೋಣಪರ್ವದಲ್ಲಿ (ವ್ಯಾಸ ಭಾ. 11.16, ದ್ರೋಣಾಭಿಷೇಕ ಪರ್ವ) ಬರುತ್ತದೆ. ಒಮ್ಮೆ ಪರಶುರಾಮನೂ ಇಲ್ಲಿನ ರಾಜನನ್ನು ಪರಾಭವಗೊಳಿಸಿದನೆಂದು (ವ್ಯಾಸ ಭಾ. ದ್ರೋಣ ಪರ್ವ, 70:11, ಅಭಿಮನ್ಯು ವಧಾ ಪರ್ವ) ನಾವು ಅಲ್ಲಿ ಓದುತ್ತೇವೆ.

ಕಾಳಿದಾಸ (ಕ್ರಿಸ್ತ ಪೂರ್ವ 1ನೇ ಶತಮಾನ) ತನ್ನ ರಘುವಂಶದಲ್ಲಿ (4: 67-78) ರಘು ಚಕ್ರವರ್ತಿಯ ದಿಗ್ವಿಜಯ ಯಾತ್ರೆಯ ಸಂದರ್ಭದಲ್ಲಿ ಅವನನ್ನು ಕಾಶ್ಮೀರಕ್ಕೆ ಕರೆತರುತ್ತಾನೆ. ಅಲ್ಲಿ ಸಿಂಧೂ ನದಿಯ ಪ್ರಸ್ತಾಪ ಬರುತ್ತದೆ; ಕುಂಕುಮಕೇಸರಗಳು ಕುದುರೆಗಳ ಹೆಗಲಿಗೆ ಹಚ್ಚಿದ ಮಾತು ಬರುತ್ತದೆ. ಹೇಳುತ್ತಾನೆ : ‘‘ಶರೈರ್‌ ಉತ್ಸವಸಂಕೇತಾನ್‌ ಕೃತ್ವಾ ವಿರತ- ಉತ್ಸವಾನ್‌...।। (4:78)’’. ಇಲ್ಲಿ ಮತ್ತು ವ್ಯಾಸ ಭಾರತದಲ್ಲಿ (ಸಭಾಪರ್ವ ಅಧ್ಯಾಯ 27) ಬರುವ, ರಘು ನಿರಸ್ತ್ರ ಮಾಡಿ ಗೆದ್ದ, ‘ಉತ್ಸವ-ಸಂಕೇತ’ ಪ್ರದೇಶವನ್ನು ಈಗಿನ ‘ಲಡಾಖ್‌’ ಎಂದು ವ್ಯಾಖ್ಯಾನಕಾರರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ‘ಹಾಶಕ’ ಎಂಬ ಸಂಸ್ಕೃತದ ಹೆಸರೂ ಇದೆಯಂತೆ!

ರಾಮಾಯಣದಲ್ಲಿ ಕಾಶ್ಮೀರದ ಪ್ರಸ್ತಾಪ ಬಂದಂತಿಲ್ಲ ! ಕಾಶ್ಮೀರದ ಇನ್ನೂ ಆಚೆಯ ಪಶ್ಚಿಮದ ‘ಗಾಂಧಾರ’ದ (ಈಗಿನ ಆಫ್‌ಘಾನಿಸ್ತಾನದ ಕಾಂದಹಾರ್‌) ಪ್ರಸ್ತಾಪ ಛಾಂದೋಗ್ಯ ಉಪ. 6.14.2, ಐತರೇಯ ಬ್ರಾಹ್ಮಣ 7.34, ಶತಪಥ ಬ್ರಾಹ್ಮಣ 8.1.4.10ಗಳಲ್ಲಿ ಇವೆ; ಕಾಶ್ಮೀರದಲ್ಲಿ ಹರಿವ ನದಿಗಳು ಇವೆ, ಆದರೆ ‘ಕಾಶ್ಮೀರ’ ದ ಉಲ್ಲೇಖ ವೇದವಾಙ್ಮಯದಲ್ಲಿ ಇಲ್ಲ !

******

‘ಕಾಶ್ಮೀರ’ದ ಬಗ್ಗೆ ಚರ್ಚೆ ಈಗ ಗಾಳಿಯಲ್ಲಿ ದಟ್ಟವಾಗಿ ಹಬ್ಬಿರುವಾಗ, ಸಾಹಿತ್ಯದ ದೃಷ್ಟಿಯಿಂದ ‘ಕಾಶ್ಮೀರ’ವನ್ನು ಅಭ್ಯಸಿಸುವ ಒಂದು ಪ್ರಯತ್ನವನ್ನು ನಾನು ಮಾಡಹೊರಟಿದ್ದೇನೆ. ಕಾಶ್ಮೀರದಲ್ಲಿದ್ದ, ಕಾಶ್ಮೀರಕ್ಕೆ ಸಂಬಂಧಿಸಿದ, ಕಾಶ್ಮೀರದ ಬಗ್ಗೆ ಅಕ್ಕರೆ ತಳೆದ ಪೂರ್ವಸೂರಿಗಳನ್ನು ಅವರ ಕೃತಿಗಳ ವಿಹಂಗಮ ನೋಟದ ಮೂಲಕ ನೆನಸಿಕೊಳ್ಳುವುದು ಮುಖ್ಯ ಉದ್ದೇಶ. ಕನ್ನಡಕ್ಕೂ ಕಾಶ್ಮೀರಕ್ಕೂ ಅಪೂರ್ವವಾದ ಒಂದು ಸ್ವಲ್ಪ ನಂಟು ಉಂಟು; ಉಲ್ಲೇಖ, ಸಾಮ್ಯ, ಸಾದೃಶ್ಯ, ವೈಷಮ್ಯಗಳ ಮೂಸೆಯಲ್ಲಿ ಸಮೀಕ್ಷಿಸಿ, ಅದನ್ನು ಸಾಧ್ಯವಾದಷ್ಟು ಮನಗಾಣುವುದೂ ಸಹ ಈ ಲೇಖನ ಮಾಲಿಕೆಯ ಇನ್ನೊಂದು ಉದ್ದೇಶ !

English summary
Shikaripura Harihareshwara takes a journey through the beautiful Kashmir Valley
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X