‘ಚೈತ್ರೋಲ್ಲಾಸ’ಕೆ ನೀವೂ ಬನ್ನಿ, ಎಲ್ಲರೂ ಬನ್ನಿ !
*ಎಸ್.ಕೆ.ಹರಿಹರೇಶ್ವರ, ಸ್ಟಾಕ್‌ಟನ್, ಕ್ಯಾಲಿಫೋರ್ನಿಯಾ
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಇದೇ ಮೇ ನಾಲ್ಕನೇ ತಾರೀಖು ಶನಿವಾರ ಸಂಜೆ ಸನ್ನಿವೇಲ್ ಹಿಂದೂ ಮಂದಿರದ ಸಭಾಂಗಣದಲ್ಲಿ ಯುಗಾದಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ; ಅದಕ್ಕೆ ಇದು ಆಹ್ವಾನ ಮತ್ತು ಅಲ್ಲಿ ನಡೆವುದರ ಇಣುಕು ನೋಟ!)
ನೀವಿರುವ ಎಡೆಯಲ್ಲಿ ಇದ್ದೀತು ಊಹಿಸುವೆ-
ಕನ್ನಡದ ವೃಂದ, ಸಂಘ, ಕೂಟ, ಬಳಗ ;
ಒಂದೆ ಭಾಷೆಯ ಉಲಿಯ ಚಿಲಿಪಿಲಿಯ ಹಕ್ಕಿಗಳು
ಎಲ್ಲಿಂದಲೋ ಬಂದಿಲ್ಲಿ ಕೂಡುವ ಸೊಬಗ ;
ಆಡುತ್ತ , ಹಾಡುತ್ತ , ಇರವನ್ನೇ ಮರೆಸುತ್ತ ,
ಮನಸನ್ನ ಕುಣಿಸುತ್ತ , ತಣಿಸುವ ಕರಗ! ।।1।।
ಹಾಗೆಯೇ ಅಂಥದೇ ನಮ್ಮದೂ ಒಂದಿದೆ, ಕೇಳಿ,
ಈ ಅಮೆರಿಕದ ಪಶ್ಚಿಮದ ದಂಡೆಯಲ್ಲಿ ,
ಹೊನ್ನನರಸಿ ಧಾವಿಸಿದವರ ಬೆನ್ನಹತ್ತಿದ ನಾಡ
ನಡುವೆ ಈ ಕ್ಯಾಲಿಫೋರ್ನಿಯಾದ ಕೊಲ್ಲಿಯಲ್ಲಿ ;
ನಂಬಿದರೆ ನಂಬುವಿರಿ ; ಬಿಟ್ಟಿರೋ ಕೆಟ್ಟೀರಿ-
ಹೆಪ್ಪುಗಟ್ಟಿದೆ ಕೆನೆಯ ತೆನೆ ತುಂಬು ಪ್ರತಿಭೆಯಿಲ್ಲಿ ! ।।2।।
ಆಕಾಶ ನೋಡಲಿಕೆ ನೂಕು ನುಗ್ಗಲು ಇಲ್ಲ ;
ಕನ್ನಡದ ರಥ ಎಳೆವ ಕೈಂಕರ್ಯವೇ ಮುಖ್ಯ!
ಅಗೋ ನೋಡಿ, ಈ ಬಾರಿ ಉತ್ಸಾಹಿಗಳು ಸೇರಿ,
ಸಿದ್ಧರಾಗಿದ್ದಾರೆ, ಎಲ್ಲಕ್ಕೂ ಮಿಗಿಲು ನಿಜವಾದ ಸಖ್ಯ!
ಬನ್ನಿ , ನೀವು ಅವರು ಅವರೂ ಬನ್ನಿ , ಗೆಳೆಯರನು ಕರೆತನ್ನಿ ,
ಸೆರೆ ಹಿಡಿಯೆ, ಚಿತ್ತ ಭಿತ್ತಿಯ ಮೇಲೆ ಮಾಸದೀ ದೃಶ್ಯ ! ।।3।।
‘ವಿಷು’ ಕಳೆದು, ದಿನ ಹೊಳೆದು, ಮೂಡಿತು ನೋಡಿ-
‘ಚಿತ್ರಭಾನು’ವಿನಂಕಿತದ ಹೊಸತು ವರುಷ ;
ಋತುರಾಜ ಅಡಿಯಿಟ್ಟ , ಹೊಸ ‘ಯುಗ’ವು ಮೊದಲಾಯ್ತು ;
ಬೋಳು ಮರ ಚಿಗುರಿ ಮತ್ತೆ ತೀಡಿತು ಹರುಷ ;
ಎಲ್ಲ ಅಳಿಯಿತು ಎಂಬ ಭಾಸ ಸುಳ್ಳಾಗಿಸಿ ಮರಳಿ,
ಇನ್ನೊಂದು ಯುಗ ಹುಟ್ಟಿ ತುಂಬುತಿದೆ ಕಲಶ! ।।4।।
ಕೂಡೋಣ, ನೋಡೋಣ, ಸೇರಿ ಮಾತಾಡೋಣ
ಗೆಳೆಯರೊಡನಾಟದಿ ಸುಖಿಸಿ, ಬನ್ನಿ ನಲಿಯೋಣ;
ನೆಪ ಬೇಡ, ಕಾರಣವೂ ಬೇಡ, ಹೊರಡಿ, ಏಳಿ ಎದ್ದೇಳಿ-
ಈ ಚೈತ್ರೋಲ್ಲಾಸದ ಹಬ್ಬಕ್ಕೆ, ಬನ್ನಿ , ಹೋಗೋಣ!
ಕೊನೆ ಮೊದಲ ಕಾಣದ ಬೆಳಕ ಮನದರಕೆಗಳ ನುತಿಯ
ಬಿನ್ನಹವ ಕೇಳೋಣ, ಮಳೆ ಬೆಳೆಯ ತಿಳಿಯೋಣ. ।।5।।
ಕಾವ್ಯವಾಚನವುಂಟು ಈ ವಸಂತೋದಯದಲ್ಲಿ ,
‘ಅದಲು ಬದಲಾ’ದೀತು ನಗೆ ಬುಗ್ಗೆ ಸವಿಯೋಣ,
ಕವಿಚೂತವನಚೈತ್ರ ಮೀರಿಸುವ ನಾಚಿಸುವ
ಬಣ್ಣಿಸುವ ರೇಗಿಸುವ ಛೇಡಿಸುವುದೇನೇನ, ಜಾಣ?
ಮರಿಕಂತಿ ಹೊನ್ನಮ್ಮ ವಿಜ್ಝಿಕೆ ಅಕ್ಕ ಆ ಲಲನೆಯರು
ನಿಮ್ಮನ್ನ ನಮ್ಮನ್ನ ಕೆಣಕುವುದ, ನಗಿಸುವುದ ಕೇಳೋಣ! ।।6।।
ಹಡಗ ನಡೆಸಲು ನಿಂತ ಚುಕ್ಕಾಣಿ ಹಿಡಿದವರ
ಪರಿಚಯಿಸಿದರೆ, ಬೆನ್ನ ತಟ್ಟುವ ; ಚಪ್ಪಾಳೆ ಅತ್ಯಗತ್ಯ!
‘ಇಂಚರ’ದ ಗುಂಜಾರವದಲ್ಲಿ ಮೊಳಗೀತು ಹಾಸ್ಯ;
ಬಗೆ ಬಗೆಯ ತಿಂಡಿ ತಿನಿಸುಗಳ ವಿಜಯ ಭೋಜ್ಯ-
ನೀರೂರಿಸೀತು ನಿಮ್ಮ ನಾಲಗೆಯಲ್ಲಿ ಪರಿಪರಿಯ ಲಾಸ್ಯ
ಬಿರುದು ಬಾವಲಿಯಂತು ಪ್ರಶಸ್ತ ಸನ್ಮಾನ ಕಾರ್ಯ! ।।7।।
ಮುಂದೆ ಕಾದಿದೆ ಒಂದು ನಗೆ ಹೊನಲ ಪ್ರಹಸನ,
ಬಂದಾನ, ನಿಂದಾನ ಮುಂದೆ ಆ ಕೋಣನೇರಿದವ ;
‘ಯಮ’ನೆಲ್ಲಿ ಇದ್ದಾನೆಂದು, ಛೆ, ಕೇಳಿ, ಹುಡುಕದಿರಿ-
ಇಲ್ಲಿ ಎದೆಯಲೆ ಕುಳಿತು ಎಲ್ಲವನೂ ನೋಡುವವ ;
ಕೊನೆಗೆ ನಾಡಗೀತೆಗೆ ನಿಂತು, ಮಂಗಳವ ಹಾಡಿ
ಮನೆಗೆ ಮರಳುವಾ ಚಪ್ಪರಿಸುತ್ತ ನೆನಪ ಸವಿಯ ।।8।।












Click it and Unblock the Notifications