ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಢಾಣೂಕರ್ ಕಾಲೇಜಿನ ನೆನಪುಗಳು - ಭಾಗ 5

By * ಡಾ. 'ಜೀವಿ' ಕುಲಕರ್ಣಿ, ಮುಂಬೈ
|
Google Oneindia Kannada News

Dr. GV Kulkarni
ಪ್ರಜಾಪ್ರಭುತ್ವ ನಾಟಕ ಬರೆದು ಮತ್ತು ಆಡಿಸಿದ ಅನುಭವ, ಮೊದಲನೆಯ ವರ್ಷ ಪ್ರಯೋಗಿಸಿದ ಗೃಹಿಣೀ ಗೃಹಮುಚ್ಯತೇ ನಾಟಕದೊಂದಿಗೆ ಹೋಲಿಸಿದಾಗ, ಹೆಚ್ಚು ತೃಪ್ತಿದಾಯಕವಾಗಿತ್ತು. ಮೊದಲ ನಾಟಕಕ್ಕೆ ರಂಗತಾಲೀಮು (ರಿಹರ್ಸಲ್) ಮಾಡಲು ಅವಕಾಶ ಕಡಿಮೆ ಇತ್ತು. ಈ ಸಲ ಸಾಕಷ್ಟು ಸಮಯ ದೊರೆತಿತ್ತು. ಮೊದಲನೆಯದು ಪ್ರಹಸನವಾಗಿದ್ದರೆ, ಇದು ನಾಟವಾಗಿತ್ತು. ಮೊದಲನೆಯ ನಾಟಕದ ವಸ್ತುವನ್ನು ಹೋಲಿಸಿದಾಗ ಎರಡನೆಯ ನಾಟಕದ ವಸ್ತು ವಿಸ್ತಾರ ಪಡೆದಿತ್ತು. ಮುಂಬೈ ರಂಗಭೂಮಿಯಲ್ಲಿ ಆ ಕಾಲದಲ್ಲಿ ಬಹಳೇ ಪ್ರಸಿದ್ಧಿ ಪಡೆದಿದ್ದ ಆರ್.ಡಿ.ಕಾಮತರ ಹೆಚ್ಚಿನ ಸ್ನೇಹ ನನಗಾಗಿದ್ದರಿಂದ, ನಾಟಕದ ಪ್ರಯೋಗದ ಸಮಯದಲ್ಲಿ ಅವರಿಂದ ವಿಶೇಷ ಸಹಾಯ ಸಹಕಾರಗಳು ದೊರೆತವು. ಅವರೇ ಈ ನಾಟಕವನ್ನು ದಿಗ್ದರ್ಶಿಸಿದರು. ಪ್ರತಿ ದೃಶದ ಮೊದಲು ನಿವೇದಕನ ಮಾತು, ಅಂದರೆ ಕಮೆಂಟರಿ ಇತ್ತು. ಕಾಲೇಜಿನ ವಿಭಿನ್ನ ಭಾಷೆಯ ಮಿಶ್ರ-ಪ್ರೇಕ್ಷಕರಿಗಾಗಿ ಆ ಕಮೆಂಟರಿಯನ್ನು ಇಂಗ್ಲಿಷಿನಲ್ಲಿ ಅನುವಾದಿಸಬೇಕಾಗಿತ್ತು.

ಆಗ ಮಿತ್ರ ಗಿರೀಶ ಕಾರ್ನಾಡರ ನೆನಪಾಯ್ತು. ಅವರು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನ ಮೆನೆಜರ್ ಆಗಿ ಮುಂಬೈಗೆ ಆಗ ತಾನೇ ಬಂದಿದ್ದರು. ಅವರ ಆಫೀಸು ಗೇಟ್‌ವೇ ಆಫ್ ಇಂಡಿಯಾದ ಬಳಿಯಲ್ಲಿತ್ತು. ಆಗಾಗ ನಾನು ಗಿರೀಶರ ಭೆಟ್ಟಿಗೆ ಅಲ್ಲಿಗೆ ಹೋಗುತ್ತಿದ್ದೆ. ಕನ್ನಡ ಸಂಘದ ಉದ್ಘಾಟನೆಗೆ ಬರಲು ಆಮಂತ್ರಿಸಿದ್ದೆ. ಕಾಲೇಜಿಗೆ ಬಂದು ಪ್ರಾರಂಭದಲ್ಲಿ ಕನ್ನಡದಲ್ಲಿ ಹಾಗೂ ಇಂಗ್ಲಿಷಿನಲ್ಲಿ ಮಾತಾಡಿದ್ದರು. ಅವರು ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಜೀವನದ ತಮ್ಮ ಅನುಭವಗಳ ಬಗ್ಗೆ ರೋಚಕವಾಗಿ ನೆನೆದಿದ್ದರು. ನಾಟದಲ್ಲಿಯ ನಿವೇದಕನ ನಿರೂಪಣೆಯನ್ನು, ಇಂಗ್ಲಿಷ್‌ಗೆ ಅನುವಾದಿಸಲು ಗಿರೀಶ ಕಾರ್ನಾಡರಿಗೆ ಕೇಳಿಕೊಂಡೆ. ಇಂಗ್ಲಿಷ್ ಕಮೆಂಟರಿ ಬಹಳೇ ಆಕರ್ಷಕವಾಗಿ ರೂಪಗೊಂಡಿತು. ಇನ್ನು ನಾಟಕದಲ್ಲಿಯ ಪಾತ್ರಗಳನ್ನು ಆಯ್ಕೆ ಮಾಡುವಾಗ ಆರ್.ಡಿ.ಕಾಮತರೇ ನನಗೆ ಭಟ್ಟನ ಪಾತ್ರ ವಹಿಸಲು ಸೂಚಿಸಿದರು. ವಿದ್ಯಾರ್ಥಿಗಳನ್ನು ಆ ಪಾತ್ರಕ್ಕಾಗಿ ಮೊದಲು ಆಮಂತ್ರಿಸಿದ್ದೆವು. ಅವರಲ್ಲಿ ಯಾರೂ ಕಾಮತರು ಅಪೇಕ್ಷಿಸಿದ ಮಟ್ಟಕ್ಕೆ ಬರಲಿಲ್ಲವೆಂದು ನನಗೇ ಆ ಪಾತ್ರ ನೀಡಲಾಗಿತು. ಆ ವರ್ಷ ಶ್ರೇಷ್ಠ ನಟ ಬಹುಮಾನವನ್ನು ನನಗೆ ಕೊಡಲಾಗಿತ್ತು. ಈ ನಾಟಕದ ಯಶದಿಂದಾಗಿ ನಮ್ಮ ಸ್ಟಾಫ್-ರೂಮಿನಲ್ಲಿ ನಾನೊಬ್ಬ ಗಣ್ಯ ವ್ಯಕ್ತಿಯಾಗಿಬಿಟ್ಟೆ.

ನಾಟಕದ ಪ್ರಯೋಗ ಅತ್ಯಂತ ಯಶಸ್ವಿಯಾಯಿತು. ಎಲ್ಲ ಭಾಷೆಯ ನಾಟಕಗಳಲ್ಲಿ ನಮ್ಮ ನಾಟಕಕ್ಕೇ ಹೆಚ್ಚಿನ ಮನ್ನಣೆ ದೊರೆತಿತ್ತು. ಕಾಮರ್ಸ್ ಕಾಲೇಜಿನಲ್ಲಿ ದೇಶೀಯ ಭಾಷೆಗಳಿಗೆ ಅಷ್ಟು ಮಹತ್ವವಿರಲಿಲ್ಲ. (ಕಾಮರ್ಸ್, ಅಕೌಂಟನ್ಸೀ ಮುಂತಾದ ವಿಷಯಗಳಿಗೆ ಇದ್ದಷ್ಟು ಮಹತ್ವವಿರಲಿಲ್ಲ.) ಈ ನಾಟಕದ ಯಶದಿಂದಾಗಿ ನಮಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿತ್ತು.

ಕೆಲವು ವರ್ಷಗಳ ನಂತರದ ಮಾತು. ನಾನು ಲೋಕಲ್ ಟ್ರೇನ್‌ನಲ್ಲಿ ಸಂಚರಿಸುತ್ತಿರುವಾಗ ಒಬ್ಬ ಸೂಟುಧಾರಿ ಗುಜರಾತಿ ವ್ಯಕ್ತಿ ನನಗೆ ಕೇಳಿದ, ತಾವು ಪ್ರೊ. ಕುಲಕರ್ಣಿ ಅಲ್ಲವೇ? ಎಂದು. ಆಗ ತನ್ನನ್ನು ಢಾಣೂಕರ್ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಪರಿಚಯಿಸಿಕೊಳ್ಳುತ್ತ ನಮ್ಮ ಪ್ರಜಾಪ್ರಭುತ್ವ ನಾಟಕವನ್ನು ವಿದ್ಯಾರ್ಥಿಗಳು ಬಹಳವಾಗಿ ಮೆಚ್ಚಿದ ವಿಷಯ ತಿಳಿಸಿದ. ಸರ್, ನನಗೆ ರಸ್ತೆಯಲ್ಲಿ ನಾಯಿ ಬಿದ್ದ ದೃಶ್ಯ ಕಂಡಾಗೊಮ್ಮೆ ನಿಮ್ಮ ನಾಟಕದ ನೆನಪು ಆಗುತ್ತದೆ ಎಂದಿದ್ದ.

ನೆನಪುಗಳ ಸಾಲು ಸಾಲು

* ನನ್ನ ನಾಲ್ಕು ಏಕಾಂಕ ನಾಟಕಗಳ ಒಂದು ಸಂಗ್ರಹವನ್ನು ಧಾರವಾಡದ ದ.ಬಾ.ಕು. ಅವರು ತಮ್ಮ ಲಲಿತ ಸಾಹಿತ್ಯ ಮಾಲೆಯಲ್ಲಿ(1964) ಪ್ರಕಟಿಸಿದಾಗ ಆ ಸಂಗ್ರಹದ ಶೀರ್ಷಿಕೆ ಪ್ರಜಾಪ್ರಭುತ್ವ ಮತ್ತು ಇತರ ನಾಟಕಗಳು ಎಂದು ಕರೆದರು.

* ನಾನು ನಂತರ ಢಾಣೂಕರ್ ಕಾಲೇಜು ಬಿಟ್ಟ ಮೇಲೆ, ಚೀನಾಯ್ ಕಾಲೇಜು ಸೇರಿದಾಗ, ಪ್ರಜಾಪ್ರಭುತ್ವ ನಾಟಕವನ್ನು ಅಲ್ಲಿಯ ವಿದ್ಯಾರ್ಥಿಗಳಿಂದ ಪ್ರಯೋಗ ಮಾಡಿಸಿದ್ದೆ. ಅದಕ್ಕೆ ಭಾರತೀಯ ವಿದ್ಯಾಭವನದಲ್ಲಿ ಶ್ರೇಷ್ಠನಾಟಕವೆಂದು ನಿರ್ಣಿತವಾಗಿತ್ತು, ಅದಕ್ಕೆ ರಜತ ಸರಸ್ವತಿಯ ಮೂರ್ತಿಯುಳ್ಳ ಶೀಲ್ಡ್ ದೊರೆತಿತ್ತು. ಪ್ರೇಕ್ಷಕರಲ್ಲಿ ನನ್ನ ಗುರುಗಳಾದ ವರಕವಿ ಬೇಂದ್ರೆಯವರೂ ಇದ್ದರು. ಯೋಗಾಯೋಗವೆಂಬಂತೆ ಅವರು ಆಗ ಮುಂಬೈಯಲ್ಲಿದ್ದರು. ನಾನು ಅವರನ್ನು ಆಮಂತ್ರಿಸಿದ್ದೆ. ನನ್ನ ನಾಟಕವನ್ನು ನೋಡಿ ಬಹಳ ಮೆಚ್ಚಿದರು, ನನ್ನನ್ನು ಹರಸಿದರು.

* ಆ ಕಾಲದಲ್ಲಿ ದೆಹಲಿಯ ಹಿಂದೀ ಮಾಸ ಪತ್ರಿಕೆ ಆಜಕಲ್ನಲ್ಲಿ ಕನ್ನಡ ಏಕಾಂಕ ನಾಟಕಗಳ ಬಗ್ಗೆ ಒಂದು ಸುದೀರ್ಘ ಸಂಶೋಧನಪರ ಲೇಖನವನ್ನು ಹಿಂದಿಯಲ್ಲಿ ಡಾ| ವಾಸೂ ಪುತ್ರನ್ ಬರೆದಿದ್ದರು. ಉದಾಹರಣೆಗೆ ಒಂದು ಉತ್ತಮ ಏಕಾಂಕ ಅನುವಾದಿಸಲು ಹೊರಟಿದ್ದರು. ಅವರಿಗೆ ನನ್ನ ನಾಟಕ ಪ್ರಜಾಪ್ರಭುತ್ವ ಬಹಳ ಹಿಡಿಸಿತ್ತೆಂದು ಅದನ್ನು ಅವರು ಅನುವಾದಿಸಿ ಜೊತೆಯಲ್ಲಿ ಪ್ರಕಟಿಸಿದ್ದರು.

* ಧಾರವಾಡದ ಪ್ರಕಾಶಕ ಭಾಲಚಂದ್ರ ಘಾಣೇಕರರು ನನ್ನ ನಾಟಕಗಳನ್ನು ಬಿಡಿಯಾಗಿ ಪ್ರಕಟಿಸಿದರು. ಹಾಗೂ ಇಡಿಯಾಗಿ ಗುಂಡನ ಮದುವೆ ಮತ್ತು ಇತರ ನಾಟಕಗಳು ಎಂಬ ಅರು ಏಕಾಂಕ ನಾಟಕಗಳ ಸಂಗ್ರಹ ಪ್ರಕಾಶಿಸಿದರು. ಆಗ ಪ್ರಜಾಪ್ರಭುತ್ವ ನಾಟಕ ಕರ್ನಾಟಕದಲ್ಲಿ ಬಹಳ ಕಡೆ ಪ್ರಸಿದ್ಧಿ ಪಡೆಯಿತು.

* ಒಮ್ಮೆ ಧಾರವಾಡದಲ್ಲಿಯ ಬೇಂದ್ರೆ ಪುತ್ಥಳಿಗೆ ಅವರ ಜನ್ಮ ದಿನದಂದು ಪುಷ್ಪಹಾರ ಹಾಕಲು ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಬಂದಿದ್ದ ಧಾರವಾಡ-ಹುಬ್ಬಳ್ಳಿಯ ಮೇಯರ್ ಡಾ| ಪಾಂಡುರಂಗ ಪಾಟೀಲರು ನನ್ನನ್ನು ಪ್ರಥಮ ಸಲ ಕಂಡದ್ದಾಗಿ ಹೇಳುತ್ತ ಆನಂದವನ್ನು ವ್ಯಕ್ತಪಡಿಸಿದರು. ತಾವು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಪ್ರಜಾಪ್ರಭುತ್ವ ನಾಟಕವನ್ನು ಹತ್ತಾರು ಕಡೆಗಳಲ್ಲಿ ಪ್ರಯೋಗಿಸಿದ್ದನ್ನು ನೆನಪಿಸಿಕೊಂಡರು. ಮೆಡಿಕಲ್ ವಿದ್ಯಾರ್ಥಿಗಳು ನನ್ನ ನಾಟಕವನ್ನು ಪ್ರಯೋಗಿಸಿದ್ದನ್ನು ತಿಳಿದಾಗ ನನ್ನ ಹಿಗ್ಗು ಹೆಚ್ಚಾಗಿತ್ತು.

English summary
Memories of ML Dahalunkar College by Kannada columnist GV Kulkarni, Mumbai. GV Kulkarni also remembers his association with play write Girish Karnad in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X