ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದ ಗುರೂಜಿ ಇನ್ನಿಲ್ಲ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Ganachari (Guruji)
ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿಗಳ ಕೃಪಾಕಟಾಕ್ಷದಿಂದ ಫಲಜ್ಯೋತಿಷ್ಯದಲ್ಲಿ ಸಿದ್ಧಿ ಪಡೆದಿದ್ದ, ಗುರೂಜಿ ಎಂದೇ ಪ್ರಸಿದ್ಧಿಯಾಗಿದ್ದ, ಲಕ್ಷ್ಮಣರಾಮ ಭೀಮರಾವ ಗಣಾಚಾರಿಯವರು 86ನೆಯ ವಯಸ್ಸಿನಲ್ಲಿ, 24 ಜೂನ್ 2010ರಂದು ದಹಿಸರ್‌ದ(ಮುಂಬೈ)ತಮ್ಮ ಮನೆಯಲ್ಲಿ ಕೊನೆಯ ಉಸಿರೆಳೆದರು.

ಅಕ್ಟೊಬರ್ 31, 1924ರಂದು ಬೆಳಗಾವಿಯ ಸಮೀಪದಲ್ಲಿ (ಮುಗಟಖಾನ್-ಹುಬ್ಳಿಯಲ್ಲಿ) ಜನಿಸಿದ್ದ ಅವರು ಆಯುಷ್ಯದ ಹೆಚ್ಚಿನ ಕಾಲ ಮುಂಬೈಯಲ್ಲೇ ಕಳೆದರು. ಕೆಲವು ಕಾಲದಿಂದ ಅಸ್ವಸ್ಥರಾಗಿದ್ದರು. ಎರಡು ದಿನ ಮೊದಲೇ ತಮ್ಮ ಜಾತಕವನ್ನು ಬರೆದು ಮಗಳಿಗೆ(ಕಮಲಾ) ತೋರಿಸಿ, ತಾವು ಇನ್ನೆರಡು ದಿನ ಮಾತ್ರ ಈ ಲೋಕದಲ್ಲಿ ಇರುವುದು ಎಂದಿದ್ದರು. ರಾಯರ ಪರಮಭಕ್ತರಾದ ಇವರು ಗುರುವಾರ ಸಂಜೆ 7ಕ್ಕೆ ತಮ್ಮ ಹಾಸಿಗೆಯಿಂದ ಎದ್ದು ತಾವು ಕೂಡುವ ರೂಮಿಗೆ ಕರೆದೊಯ್ಯಲು ಹೇಳಿದರು. ಒಂದು ಮಂತ್ರಿಸಿದ ತೆಂಗಿನಕಾಯಿ ಮೈಮೇಲೆ ಇಳಿಸಿಕೊಂಡರು, ಗುರುಗಳ ಮಂತ್ರಾಕ್ಷತೆ ತಲೆಯಮೇಲೆ ಹಾಕಿಕೊಂಡರು, ಹಾಸಿಗೆಯಲ್ಲಿ ಮಲಗಿದರು. ಮುಂದೆ 9-15ಕ್ಕೆ ಚಿರನಿದ್ರೆಯಲ್ಲಿ ಲೀನರಾದರು.

ಗುರೂಜಿಗೆ 75 ವರ್ಷ ಆದಾಗ ನಾನು ಅವರ ಬಗ್ಗೆ 26 ಲೇಖನಗಳನ್ನು ಕರ್ನಾಟಕ ಮಲ್ಲದಲ್ಲಿ ಬರೆದಿದ್ದೆ. ಮುಂದೆ ಅದೇ ಸತ್ಯಕಥೆ ಕಲ್ಪನೆಗಿಂತಲೂ ವಿಚಿತ್ರ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಆ ಪುಸ್ತಕದಲ್ಲಿ ಪವಾಡ ಸದೃಶ ಘಟನೆಗಳ ಸತ್ಯಕಥೆಗಳು ಇವೆ. ಆ ಪುಸ್ತಕ ಓದಿದವರೆಲ್ಲ ಗುರೂಜಿಯವರನ್ನು ಕಾಣಲು ಮುಂಬೈಗೆ ಬರತೊಡಗಿದರು, ಅವರ ಮಾರ್ಗದರ್ಶನ ಪಡೆಯತೊಡಗಿದರು.

ನಾನು ಗಣಾಚಾರಿಯವರನ್ನು ಪ್ರಥಮ ಸಲ ಕಂಡದ್ದು ಖಾಲ್ಸಾ ಕಾಲೇಜಿನ ಕನ್ನಡ ಪ್ರೇಮಿ ಮಂಡಲಿಯ ಪ್ರಥಮ ವಾರ್ಷಿಕೋತ್ಸವದ ದಿನ (ಡಿಸೆಂಬರ್ 1960). ನಾನು ಪ್ರಯೋಗಿಸಿದ ನಾಟಕ ಗುಂಡನ ಮದುವೆ ನೋಡಲು ಬಂದಿದ್ದರು. ಅವರು ಖಾಲ್ಸಾ ಕಾಲೇಜ್ ಬದಿಯ ಬಿಐಟಿ ಬ್ಲಾಕ್‌ನಲ್ಲಿ ಇರುತ್ತಿದ್ದರು. ಪರಿಚಯ ಸ್ನೇಹವಾಯಿತು, ಬಾಂಧವ್ಯವಾಯಿತು. ನನ್ನ ಸಹವಾಸದಿಂದ ಎಸ್.ಎಸ್.ಸಿ. ಪಾಸಾದರು. ಆಫೀಸಿನಲ್ಲಿ ಜವಾನ್ ಆಗಿದ್ದವರು ಕ್ಲಾರ್ಕ್ ಆದರು. ಅವರಿಗೆ ಫಲಜ್ಯೋತಿಷ್ಯದಲ್ಲಿ ಸ್ವಲ್ಪ ಗತಿ ಇತ್ತು. ಅವರು ಹೇಳಿದ ದಿನಕ್ಕೆ ನನ್ನ ಮದುವೆಯಾಯಿತು (31-5-1964). ನನ್ನ ಮೊದಲ ಸಂತಾನ ಗಂಡುಮಗು ಎಂದು ಹೇಳಿದ್ದರಲ್ಲದೆ ಜನನ ತಾರೀಖು ಮೊದಲೇ ಬರೆದು ಕೊಟ್ಟಿದ್ದರು.

ಮುಂದೆ 1968ರಲ್ಲಿ ಗುರುರಾಯರ ವಿಶೇಷ ಅನುಗ್ರಹ ಅವರಿಗಾಯಿತು. ಅವರು ಭವಿಷ್ಯಕಥನ ಪವಾಡ ಸದೃಶವಾಗಿತ್ತು. ಸ್ಕಾಲರ್ ಡಾ.ಸಿ.ಎಂ ಡಾಕ್ಟರೇಟ್ ಪಡೆದದ್ದು, ಗಾಯಕ ಮಹೇಂದ್ರ ಕಪೂರ್ ಮಗಳ ಕಾಯಿಲೆ ವಾಸಿಯಾದದ್ದು, ಉದ್ಯಮಿ ದಿವಾಕರ ಶೆಟ್ಟಿ ಯಶಸ್ಸಿನ ದಾರಿ ತುಳಿದದ್ದು, ಮಗ ಎಂ.ಎಸ್. ಪಾಸಾದ ವರ್ಷ ತಂದೆ (ಡಾ| ಮೋಹನ ಹಿಂಡಲೇಕರ್) ತಮ್ಮ 60ನೆಯ ವರ್ಷದಲ್ಲಿ ಎಂ.ಡಿ. ಪಾಸಾದದ್ದು, ಅವರ ದೊಡ್ದ ಆಪರೇಶನ್ ಅಮೇರಿಕೆಯಲ್ಲಿ ಆಗುವುದು ತಪ್ಪಿ ಮುಂಬೈಯಲ್ಲೇ ಆದದ್ದು ಮುಂತಾದ 26 ಸತ್ಯ ಕಥೆಗಳು ನಂಬಲು ಕಷ್ಟಕರ. ಆ ಪುಸ್ತಕ ಯಾರೇ ಓದಲಿ ರೋಮಾಂಚನವಾಗುತ್ತದೆ. ಇವೆಲ್ಲ ಹೇಳುವುದು ಒಂದೇ ಕಥೆ, ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡ ಸದೃಶ ಅನುಗ್ರಹದ ಕಥೆ.

ಗುರೂಜಿ ಎಂದೇ ಖ್ಯಾತರಾಗಿದ್ದ ನನ್ನ ಮಿತ್ರ ಗಣಾಚಾರಿಯವರು ಇಂದು ಇಲ್ಲ. ಆದರೆ ಅವರನ್ನು ನಾವ್ಯಾರೂ ಮರೆಯುವಂತಿಲ್ಲ. ಅವರು ಹೇಳಿದ ಕೆಲವು ಸತ್ಯ ಸಂಗತಿಗಳ ಬಗ್ಗೆ ನಾನು ಹಿಂದೆ ಬರೆದಿರಲಿಲ್ಲ. ಈಗ ನೆನಪಾಗುತ್ತವೆ. ಮುಳುಂದದಲ್ಲಿರುವ ಸತ್ಯಧ್ಯಾನ ವಿದ್ಯಾಪೀಠದ ನೆಲದ ವಿವಾದ ಕೋರ್ಟಿನಲ್ಲಿತ್ತು, ಪಂ.ಗೋಪಾಲಾಚಾರ್ಯರು ನನಗೆ ಒಮ್ಮೆ ಕೇಳಿದ್ದರು, ನಿನ್ನ ಮಿತ್ರನನ್ನು ಕರೆದುಕೊಂಡು ಬಾ ಎಂದು. ಅವರು ಪ್ರಶ್ನೆ ಕೇಳಿದರು, ಮುಳುಂದ ಜಾಗೆ ದೊರೆಯುವದೇ? ಕೋರ್ಟ್ ಕೇಸು ಮುಗಿಯುವುದು ಯಾವಾಗ? ಎಂದು. ಪ್ರಶ್ನೆ ಕೇಳಿದ ಸಮಯದ ಕುಂಡಲಿ ಹಾಕಿ ನನ್ನ ಮಿತ್ರರು ಹೇಳಿದ್ದರು, ಗೆಲವು ನಿಮ್ಮದು ಎಂದು. ದಿನಾಂಕ ಬರೆದು ಕೊಟ್ಟಿದ್ದರು. ಅದೇ ದಿನ ಯಶ ದೊರೆತಾಗ ಆಚಾರ್ಯರು ಗಣಾಚಾರಿಯವರನ್ನು ಕರೆದು ಸತ್ಕರಿಸಿದ್ದರು. ಉತ್ತರಾದಿ ಮಠದ ಶ್ರೀಗಳಾದ ಶ್ರೀ ಸತ್ಯಾತ್ಮರು ಶ್ರೀಸತ್ಯಧ್ಯಾನ ವಿದ್ಯಾಪೀಠದಲ್ಲಿಯೇ ವಿದ್ಯಾಭಾಸವನ್ನು ಮಾಡಿದರು. ಬಾಲ್ಯದಿಂದಲೂ ಅವರು ಮತಾಮಹರಾದ ಪಂ.ಗೋಪಾಲಾಚಾರ್ಯರ ಬಳಿಯಲ್ಲಿಯೇ ಇದ್ದರು. ಬಾಲಕರೆಲ್ಲ ಗಣಾಚಾರಿ ಬಂದಾಗ ಸುತ್ತುವರಿದು ಕೈ ತೋರುಸುತ್ತಿದ್ದರು. ಒಬ್ಬ ಬಾಲಕನಿಗೆ ಮದುವೆಯ ಯೋಗವಿಲ್ಲ, ಸನ್ಯಾಸಿಯಾಗುತ್ತಾನೆ ಎಂದಿದ್ದರು. ಅದು ನಿಜವಾಯಿತು. ಅವರೇ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು. ಆ ಘಟನೆಯನ್ನು ಶ್ರೀಗಳು ಒಮ್ಮೆ ನೆನೆದಿದ್ದರು.

ಇನ್ನೊಂದು ಅದ್ಭುತ ಘಟನೆಯನ್ನು ನಾನೆಲ್ಲಿಯೂ ದಾಖಲಿಸಿಲ್ಲ. ಮಂತ್ರಾಲಯದ ಹಿಂದಿನ ಶ್ರೀಗಳಾದ ಸುಶಮೀಂದ್ರತೀರ್ಥರು ಪೂರ್ವಾಶ್ರಮದಲ್ಲಿ, ನಾವು ಮಂತ್ರಾಲಯದಲ್ಲಿ ಸೇವೆ ಮಾಡುತ್ತಿದ್ದಾಗ, ನಮ್ಮ ರೂಮಿಗೆ ಬಂದರು. ಅವರು ತಮ್ಮ ಕೈ ತೋರಿಸಿ, ಕೌಟುಂಬಿಕ ಪ್ರಶ್ನೆ ಕೇಳಲು ಪ್ರಯತ್ನಿಸಿದಾಗ, ಗಣಾಚಾರಿಯವರು ಅವರ ತೆರೆದ ಕೈಯನ್ನು ಮುಚ್ಚಿ, ಸಾಷ್ಟಾಂಗ ನಮಸ್ಕಾರ ಹಾಕಿದರು. ಇದೇನಿದು ಎಂದಾಗ, ಮುಂದಿನ ಪೀಠಾಧಿಪತಿಗಳು ನೀವೇ! ಎಂಬ ಉದ್ಗಾರ ತೆಗೆದಿದ್ದರು. ಅವರು ಪೀಠವನ್ನೇರಿದಾಗ ನಮ್ಮನ್ನು ಕರೆದು ಪ್ರೀತಿಯಿಂದ ಶಾಲು ಹೊದಿಸಿದ್ದರು.

ನಮ್ಮ ಕಾಲೇಜಿನಲ್ಲಿ ನನ್ನ ಪ್ರಿಯ ಪ್ರಿನ್ಸಿಪಾಲ್ ಫುಲ್-ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಅಮೇರಿಕೆಗೆ ತೆರಳಿದರು. ಇಂಗ್ಲೀಷ್ ಡಿಪಾರ್ಟ್‌ಮೆಂಟ್ ಹೆಡ್ ಆಗಿದ್ದ, ವೈಸ್ ಪ್ರಿನ್ಸಿಪಾಲ್ ಆಗಿದ್ದ ಒಬ್ಬ ಮಹಿಳೆಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಅವಳು ಪ್ರಿನ್ಸಿಪಾಲ್ ಆದಳು. ನನ್ನ ಸ್ಟಾಫ್-ಮಿತ್ರರೆಲ್ಲ, ಜೀವಿಯ ಕೆಟ್ಟ ಕಾಲ ಪ್ರಾರಂಭವಾಯಿತು ಎಂದು ಆಡಿಕೊಳ್ಳತೊಡಗಿದರು. ಕನ್ನಡ ವಿಷಯದಲ್ಲಿ ನನಗೆ ಕಡಿಮೆ ಪಾಠ ಇದ್ದವು. ನಾನು ಹತ್ತು ಕ್ಲಾಸ್ ಇಂಗ್ಲಿಷ್ ವಿಷಯ ಕಲಿಸಬೇಕಾಗಿತ್ತು. ಅವಳನ್ನು ಕಾಣಲು ನಾನು ಭಯಗೊಂಡೆ. ಏನು ಮಾಡಲಿ ಎಂದು ನಾನು ಗುರೂಜಿಯನ್ನು ಕೇಳಿದೆ. ಅವರೆಂದರು, ಗುರುಗಳ ಈ ಮಂತ್ರಾಕ್ಷತೆ ಜೊತೆಯಲ್ಲಿಟ್ಟುಕೊಂಡು ಅವಳನ್ನು ಭೆಟ್ಟಿಯಾಗು, ನೀನು ಅವಳ ರೈಟ್-ಹ್ಯಾಂಡ್ ಆಗುತ್ತಿ ಎಂದು. ನನಗೇ ಅಶ್ಚರ್ಯ ನಾನು ಅವಳ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿಬಿಟ್ಟೆ. ಕಾಲೇಜಿನ ಮ್ಯಾಗಜಿನ್ ಸಂಪಾದಿಸುವುದು ಇಂಗ್ಲಿಷ್ ವಿಭಾಗದ ಮುಖ್ಯಸ್ಥರ ಗೌರವ. ನನ್ನನ್ನು ಕರೆದು ಸಂಪಾದಕತ್ವ ನನಗೆ ವಹಿಸಿಕೊಟ್ಟಳು. ಮೊದಲ ಸಂಪಾದಕೀಯ ನಾನು ಪದ್ಯದಲ್ಲಿ ಬರೆದಾಗ ಬಹಳ ಮೆಚ್ಚಿದಳು. 15 ವರ್ಷ ನಾನು ಸಂಪಾದಕನಾಗಿದ್ದೆ.

ಗುರೂಜಿಯವರ ಒಂದೆರಡು ಅಶ್ಚರ್ಯಕಾರಕ ಪ್ರಿಡಿಕ್ಶನ್ ಬಗ್ಗೆ ಬರೆಯಬೇಕು. ಮೈಸೂರಿಂದ ಒಬ್ಬ ಡಾಕ್ಟರರು ಪತ್ರ ಬರೆದರು. ಅವರ ಎರಡನೆಯ ಮಗ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಎಂಟನೆಯ ವರ್ಷ ಕಾಲಿಡುತ್ತಿದ್ದ. ಆ ವರ್ಷ ಫೇಲಾದರೆ ಮುಂದೆ ಡಿಗ್ರಿ ಮರೆಯಬೇಕಾಗಿತ್ತು. ಗುರೂಜಿ ಮಗನಿಗೆ ಪೂಜೆ ಮಾಡಲು ತೆಂಗಿನಕಾಯಿ ಮಂತ್ರಿಸಿ ಕೊಟ್ಟರು. ಆ ಹುಡುಗ ಪ್ರಥಮ ದರ್ಜೆಯಲ್ಲಿ ಪಾಸಾದ. ಅವನನ್ನು ಪ್ರೀತಿಸಿದ ಹುಡುಗಿ ನಾಲ್ಕು ವರ್ಷಗಳಲ್ಲಿ ಇಂಜಿನಿಯರಿಂಗ ಡಿಗ್ರಿ ಪಡೆದು, ಮುಂದೆ ಎಂ.ಟೆಕ್.ಮಾಡಿ ಪ್ರಾಧ್ಯಾಪಕಿಯಾಗಿದ್ದಳು. ಅವನ ಯಶಕ್ಕಾಗಿ ಕಾಯುತ್ತಿದ್ದಳು. ಹುಡುಗನಿಗೆ ಕೆಲಸ ಸಿಕ್ಕೊಡನೆ ತಂದೆತಾಯಿ ಮದುವೆಯ ಬಗ್ಗೆ ಗುರೂಜಿಯನ್ನು ಕೇಳಲು ಬಂದಾಗ, ಅವರೆಂದರು, ನೀವು ಕನ್ಯೆ ಹುಡುಕಬೇಡಿ. ಅವನನ್ನು ಪ್ರೀತಿಸುವ ಹುಡುಗಿ ವರುಷಗಳಿಂದ ಕಾಯುತ್ತಿದ್ದಾಳೆ ಎಂದು. ಮದುವೆ ಆಯಿತು.

ಇಂಥ ನೂರು ಘಟನೆ ನನಗೆ ಗೊತ್ತಿದೆ. ಮಕ್ಕಳಾಗದವರಿಗೆ ಮಕ್ಕಳಾಗಿವೆ, ಅಸಾಧ್ಯ ಕಾಯಿಲೆ ವಾಸಿಯಾಗಿವೆ, ಕಳೆದ ವಸ್ತುಗಳು ಮರಳಿ ದೊರೆತಿವೆ. ಇದೆಲ್ಲವನ್ನು ಗುರೂಜಿ ಸಾಧಿಸಿದ್ದು ಶ್ರೀರಾಘವೇಂದ್ರಸ್ವಾಮಿಗಳ ಕೃಪಾಶೀರ್ವಾದ ಬಲದಿಂದ. ತಾವು ಗಳಿಸಿದ ಹಣವನ್ನು ದಾನರೂಪದಿಂದ ಮಠಗಳಿಗೆ, ಗುಡಿಗಳಿಗೆ ಕೊಟ್ಟಿದ್ದಾರೆ. ಇನ್ನು ಮುಂದೆ ನಮಗೆ ಗುರೂಜಿ ಸ್ಮರಣೆಯಾಗಿ, ಒಂದು ಮರೆಯಲಾಗದ ಕಥೆಯಾಗಿ ಉಳಿದುಬಿಟ್ಟಿದ್ದಾರೆ.

ಪುಸ್ತಕ : ಸತ್ಯಕತೆ ಕಲ್ಪನೆಗಿಂತಲೂ ವಿಚಿತ್ರ (ಪುಸ್ತಕ ಬೇಕಿದ್ದವರು ಲೇಖಕರನ್ನೂ ಈ ಈಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.)
ಪ್ರಕಾಶನ : ಹರ್ಷವರ್ಧನ ಪ್ರಕಾಶನ, 8-8/15, ಜವಾಹರ ಸೊಸೈಟಿ, ಬೊರಿವಲಿ, ಪಶ್ಚಿಮ, ಮುಂಬೈ-92

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X