• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಗೋಕಾಕ ಜನ್ಮಶತಾಬ್ದಿ ಸಮಾರೋಪ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ನನ್ನ ಗುರುಗಳಾದ ಡಾ| ವಿ.ಕೃ.ಗೋಕಾಕರ ಜನ್ಮಶತಾಬ್ದಿಯ ನಿಮಿತ್ತ ಒಳನಾಡಿನಲ್ಲಿ, ಹೊರನಾಡಿನಲ್ಲಿ (ಮೈಸೂರು, ಧಾರವಾಡ, ಮುಂಬೈ) ಈ ಮೊದಲು ನಡೆದ ಮೂರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ, ಅವರನ್ನು ಸ್ಮರಿಸಿದ್ದೆ, ಅವರ ಬಗ್ಗೆ ಭಾಷಣ ಮಾಡಿದ್ದೆ. ನಾನು ಭಾಗವಹಿಸಿದ ನಾಲ್ಕನೆಯ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಅದಕ್ಕೆ ನನ್ನನ್ನು ಬೆಂಗಳೂರಿನ ಆಯೋಜಕರು ಆಮಂತ್ರಿಸಿದ್ದು ನನ್ನ ಸುಕೃತವೆಂದೇ ಭಾವಿಸಿರುವೆ. ಭಾರತೀಯ ವಿದ್ಯಾಭವನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಿಂಟಿ ಆಶ್ರಯದಲ್ಲಿ ನಡೆದ ಎರಡು ದಿನಗಳ ಸಮಾರಂಭ ಮನಸ್ಸಿಗೆ ಬಹಳ ನೆಮ್ಮದಿಯನ್ನೂ, ಸಂತೋಷವನ್ನೂ ತಂದಿತು. ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಎನ್.ರಾಮಾನುಜಂ ಅವರು ನನಗೆ ಎರಡು ತಿಂಗಳ ಕೆಳಗೆ ಫೋನ್ ಮಾಡಿ ಅಗಸ್ಟ್ ಮೊದಲ ವಾರ ಬೆಂಗಳೂರಿಗೆ ಬರಲು ಬಿಡುವು ಮಾಡಿಕೊಳ್ಳಿ ಎಂದಾಗ, ನಂತರ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ಆಮಂತ್ರಣವನ್ನು ಖಚಿತಪಡಿಸಿದಾಗ ನನಗೆ ಅಚ್ಚರಿಯೊಡನೆ ಆನಂದವೂ ಆಗಿತ್ತು.

ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದ ಹೆಚ್ಚಿನ ವಿವರ ಕೊಡದೆ ನಾನು ಆನಂದಿಸಿದ ಕೆಲವು ಸಂಗತಿಗಳ ಬಗ್ಗೆ ಆಪ್ತಶೈಲಿಯಲ್ಲಿ ಬರೆಯುವೆ.

ಭಾರತೀಯ ವಿದ್ಯಾಭವನದ ಆಕರ್ಷಕವಾದ ಸಭಾಂಗಣದಲ್ಲಿ ಎರಡು ದಿವಸದ ಕಾರ್ಯಕ್ರಮ ನಡೆಯಿತು. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನ ಪ್ರೇಕ್ಷಕರು ನೆರೆದಿದ್ದರು. ಪ್ರೇಕ್ಷಕರಲ್ಲಿ ಅವರ ಹಳೆಯ ವಿದ್ಯಾರ್ಥಿ ಗಿರೀಶ ಕಾರ್ನಾಡ ಕೂಡ ಇದ್ದರು. ಬದಿಯಲ್ಲಿರುವ ಹಾಲ್‌ನಲ್ಲಿ ಗೋಕಾಕರ ಜೀವನದ ಅಪೂರ್ವ ಘಟನೆಗಳನ್ನು ಸೆರೆಹಿಡಿದಿರುವ ನೂರಾರು ಭಾವಚಿತ್ರಗಳ ಅಪೂರ್ವ ಪ್ರದರ್ಶನವಿತ್ತು. ಈ ಫೋಟೋಗಳನ್ನು ಸಂಗ್ರಹಿಸುವಲ್ಲಿ ಅವರ ಪುತ್ರ ಅನಿಲ ಗೋಕಾಕ ಬಹಳ ಪರಿಶ್ರಮ ವಹಿಸಿದ್ದರು. ನಾನು ಅನಿಲ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದೆ. ಗೋಕಾಕ ಮನೆತನಕ್ಕೆ ನಿಕಟವರ್ತಿಯಾದ ನಾನು ಕೂಡ ಇಷ್ಟೊಂದು ಫೋಟೋ ಹಿಂದೆಂದೂ ಕಂಡಿರಲಿಲ್ಲ. ಇವುಗಳ ಅಲ್ಬಂ ತಯಾರಿಸಿ ಒಂದು ಪುಸ್ತಕರೂಪದಲ್ಲಿ ತಂದರೆ ಅದು ಸಾಹಿತ್ಯಾಸಕ್ತರ ಕಂಗಳಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬ ಹಿರಿಯ ವ್ಯಕ್ತಿಯ ಬಗ್ಗೆ ಅವನ ಜನ್ಮಶತಾಮಾನೋತ್ಸವದ ನಿಮಿತ್ತವಾಗಿಯಾದರೂ ಸಮಗ್ರ ಜೀವನ ಚಿತ್ರಿಸುವ ಒಂದು ಫೋಟೋ ಆಲ್ಬಂ ತಯಾರಿಸುವುದು ಅವಶ್ಯವಾಗಿದೆ. ವರಕವಿ ಬೇಂದ್ರೆಯವರ ಫೋಟೋ ಆಲ್ಬಂ ಸಿದ್ಧತೆಯಲ್ಲಿದೆ, ಇನ್ನೂ ಹೊರಬಂದಿಲ್ಲ. ಮಿತ್ರ ಸುರೇಶ ಕುಲಕರ್ಣಿಯವರು ಬಿಡಿಸಿದ ಬೇಂದ್ರೆಯವರ ಅಪೂರ್ವ ರೇಖಾಚಿತ್ರಗಳ ಆಲ್ಬಂ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ.

ಗೋಕಾಕ-ಬೇಂದ್ರೆಯವ ಬಹಳ ದೊಡ್ಡ ಅಭಿಮಾನಿಗಳಾದ ಭಾರತೀಯ ವಿದ್ಯಾಭವನದ ಜೀವನಾಡಿಯಂತಿರುವ ಡಾ| ಮತ್ತೂರು ಕೃಷ್ಣಮೂರ್ತಿಯವರು ಅನಾರೋಗ್ಯದಿಂದಾಗಿ ಉಪಸ್ಥಿತರಿರಲಿಲ್ಲ. ಅವರ ಕೊರತೆ ನಮ್ಮೆಲ್ಲರ ಅನುಭವಕ್ಕೆ ಬಂತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರಕವಿ ಡಾ| ಜಿ.ಎಸ್.ಶಿವರುದ್ರಪ್ಪ ಬಹಳ ಆತ್ಮೀಯವಾಗಿ ಗೋಕಾಕರ ಗುಣಗಾನ ಮಾಡಿದರು. ಗೋಕಾಕರ ಗದ್ಯ ಮೇರು ಕೃತಿ ಸಮರಸವೇ ಜೀವನ(The Agony and Glory)ದ ಸಂಗ್ರಹಾನುವಾದವನ್ನು ಅವರ ಪುತ್ರಿ ಡಾ| ಯಶೋದಾ ಭಟ್ ಮಾಡಿದ್ದಾರೆ. ಇದರ ಮರುಮುದ್ರಣವನ್ನು ಅವನಿ ರಸಿಕ ರಂಗ ಪ್ರಕಾಶನ, ನಾರಾಯಣಪುರ, ಧಾರವಾಡ-580 008, ಮಾಡಿದ್ದಾರೆ.(ಪು.28+489,ಬೆಲೆ ರೂ.300/-) ಇದರ ಲೋಕಾರ್ಪಣೆಯನ್ನು, ಜೊತೆಗೆ ಅನನ್ಯ ಸಂಗೀತ ಸಂಸ್ಥೆಯವರು ತಯಾರಿಸಿದ ಗೋಕಾಕರ ಗೀತಗಳ ಸಿ.ಡಿ.ಯ ಲೋಕಾರ್ಪಣೆಯನ್ನು ಡಾ| ಯು.ಆರ್. ಅನಂತಮೂರ್ತಿಯವರು ನೆರವೇರಿಸಿದರು. ಇನ್ನೊಂದು ಮಹತ್ವದ ಅಂಶವೆಂದರೆ ಅನಂತಮೂರ್ತಿಯವರು ಗೋಕಾಕರ ಪದ್ಯಗಳಿಗೆ ಕಾಮೆಂಟರಿ ನೀಡಿದ್ದಾರೆ. ಇದನ್ನು ಎಲ್ಲರೂ ಮೆಚ್ಚಿದರು. (ಕವಿಗೆ ಕವಿ ಮುನಿವ, ಇದು ಸಾಮಾನ್ಯ. ಇಲ್ಲಿ ಕವಿಗೆ ಕವಿ ಮಣಿವ ಎಂಬುದನ್ನು ತೋರಿದ್ದಾರೆ). ಗೋಕಾಕರ ಬಗ್ಗೆ ಪ್ರೊ.ಎಲ್.ಎಸ್.ಶೇಷಗಿರಿರಾವ್, ಮನು ಬಳೆಗಾರ, ನಿವೃತ್ತ ನಾಯಾಧೀಶ ರಾಮಾಜೋಯಿಸರು ಮಾತಾಡಿದರು.

ಪ್ರೊ.ಎಂ.ಎಚ್.ಕೃಷ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಒಂದು ವಿಚಾರ ಸಂಕಿರಣ ನಡೆಯಿತು. ಅದರಲ್ಲಿ ಭಾಗವಹಿಸಿದವರು ಡಾ| ಜಿ.ವಿ.ಕುಲಕರ್ಣಿ(ಗೋಕಾಕರ ಕಾದಂಬರಿ), ಅನಿಲ ಗೋಕಾಕ (ನಾ ಕಂಡಂತೆ ಗೋಕಾಕ), ಡಾ| ಪ್ರಧಾನ ಗುರುದತ್ (ಭಾರತ ಸಿಂಧುರಶ್ಮಿ), ಡಾ| ಗುರುಲಿಂಗ ಕಾಪಸೆ (ಗೋಕಾಕರ ಪ್ರಬಂಧ ಸಾಹಿತ್ಯ). ನಾನು ಗೋಕಾಕರ ಸಮರಸವೇ ಜೀವನ ಕಾದಂಬರಿಯ ಹಿರಿಮೆಯ ಬಗ್ಗೆ ಮಾತನಾಡಿದರೆ ಅವರ ಮಗ ಅನಿಲ ಗೋಕಾಕರು ತಮ್ಮ ತಂದೆಯ ಬಗ್ಗೆ ಒಂದು ಸ್ವಾರಸ್ಯಕರ ಘಟನೆಯನ್ನು ನಿರೂಪಿಸಿದರು. ಅವರು ಐಎಎಸ್ ಅಧಿಕಾರಿ. ನಿವೃತ್ತಿಪೂರ್ವದಲ್ಲಿ, ಭಾರತ ಸರಕಾರದ ಕೆಲಸದ ನಿಮಿತ್ತ ಇಂಗ್ಲಂಡಿಗೆ ಹೋಗಿದ್ದರು. ಒಂದು ರವಿವಾರ ಬಿಡುವಿತ್ತು. ಅವರಿಗೆ ತಮ್ಮ ತಂದೆಯವರು ಕಲಿತ ಕ್ರೈಸ್ಟ ಕಾಲೇಜು (ಆಕ್ಸ್‌ಫರ್ಡ್) ನೋಡುವ ಮನಸ್ಸಾಯಿತಂತೆ. ಬಾಗಿಲು ಮುಚ್ಚಿತ್ತು. ಆದರೆ ಅಲ್ಲಿಯ ವಾಚ್‌ಮನ್ ಇವರಿಗಾಗಿ ಬಾಗಿಲನ್ನು ತೆರೆದು ಕಾಲೇಜು ತೋರಿಸಿದನಂತೆ. ಇವರು ಅಲ್ಲಿಯ ಒಂದು ದಾಖಲೆಪುಸ್ತಕದಲ್ಲಿ ಆ ಕಾಲೇಜಿನ ಮೆರಿಟ್ ಲಿಸ್ಟ ನೋಡಿದರಂತೆ. 1938ರಲ್ಲಿ ಬಿಎ ಪದವೀಧರರ ಪಟ್ಟಿಯಲ್ಲಿ ವಿ.ಕೆ.ಗೋಕಾಕರ ಹೆಸರಿನ ಮುಂದೆ ಫರ್ಸ್ಟಕ್ಲಾಸ್ ಫರ್ಸ್ಟ್ ಎಂದು ಬರೆದದ್ದು ನೋಡಿ ಹರ್ಷ ಪುಲಕಿತರಾದರಂತೆ. ಈ ಅನುಭವವನ್ನು ಸಭೆಯಲ್ಲಿ ಅವರು ಹಂಚಿಕೊಂಡರು.

ಈ ಅಪೂರ್ವ ಘಟನೆಯ ಬಗ್ಗೆ ನನಗೆ ಹಿಂದೆಯೇ ಅನಿಲ್ ಹೇಳಿದ್ದರು. ಅದನ್ನು ನನ್ನ ಪುಸ್ತಕ ನಾ ಕಂಡ ಗೋಕಾಕದಲ್ಲಿ ದಾಖಲಿಸಿದ್ದೆ. ನನ್ನ ಪುಸ್ತಕದ ಕರಡುಪ್ರತಿ ನೋಡಿ ಈ ಘಟನೆಯ ವಿವರ ತೆಗೆದು ಹಾಕಲು ಹೇಳಿದ್ದರು. ಅದಕ್ಕೆ ಅವರು ಕೊಟ್ಟ ಕಾರಣ, ಈ ಸಂಗತಿಯನ್ನು ವಾಚಕರಿಗೆ ತಿಳಿಸುವ ಕ್ರೆಡಿಟ್ ನನಗೆ ಇರಲಿ ಎಂದು. ಅವರೂ ಒಂದು ಪುಸ್ತಕ ತಮ್ಮ ತಂದೆಯ ಬಗ್ಗೆ ಬರೆಯುವ ಹವಣಿಕೆಯಲ್ಲಿದ್ದರು. ಕೆಲಸದ ಒತ್ತಡದಲ್ಲಿ ಅವರಿಗೆ ಪುಸ್ತಕ ಬರೆಯುವುದಾಗಲಿಲ್ಲ. ಇನ್ನಾದರೂ ಅನಿಲರು ತಮ್ಮ ತಂದೆಯವರ ಬಗ್ಗೆ ಒಂದು ಪುಸ್ತಕ ಬರೆಯಲಿ ಎಂದು ಆಶಿಸೋಣ. ಈ ಘಟನೆ ನಮಗೆ ರೋಮ ಹರ್ಷವನ್ನು ತರುತ್ತದೆ. ಇದಕ್ಕೆ ಒಂದು ಕಾರಣವಿದೆ. ಗೋಕಾಕರು ಇಂಗ್ಲಂಡಿನಲ್ಲಿ ಪರೀಕ್ಷೆ ಮುಗಿದ ಮೇಲೆ ಲೇಕ್ ಡಿಸ್ಟ್ರಿಕ್ಟ್ ಟೂರ್ ಮಾಡುತ್ತ ಸ್ಕಾಟ್‌ಲೆಂಡಿಗೆ ಹೋಗಿದ್ದರು. ಅಲ್ಲಿ ಅವರಿಗೆ ಅಪೆಂಡಿಸೈಟಿಸ್ ಇದೆ ಎಂದು ತಿಳಿಯಿತು. ಶಸ್ತ್ರಚಿಕಿತ್ಸೆಯಾಯಿತು. ಆಗ ಅವರ ಮೌಖಿಕ ಪರೀಕ್ಷೆ ಬಾಕಿ ಇತ್ತು. ಒಂದು ವರ್ಷ ವ್ಯರ್ಥವಾಗುವುದೆಂಬ ಭಯ ಅವರನ್ನು ಆವರಿಸಿತ್ತು. ತಮ್ಮ ವೈವಾ ಪರೀಕ್ಷೆಯನ್ನು ಮುಂದೆಹಾಕಲು ಪತ್ರಬರೆದು ಆಸ್ಪತ್ರೆಯಿಂದ ಕಳಿಸಿದ್ದರು. ಆದರೆ ಅವರ ರಿಜಲ್ಟ್ ಬಂದೇಬಿಟ್ಟಿತು. ಅವರು ಫರ್ಸ್ಟ್‌ಕ್ಲಾಸಿನಲ್ಲಿ ಉತ್ತೀರ್ಣರಾದ ವಿಷಯ ತಂತಿಯ ಮುಖಾಂತರ ತೀಳಿದಿತ್ತು. ಈ ವಿವರ ಗೋಕಾಕರು ತಮ್ಮ ದೈವ ಎಂಬ ಪ್ರಬಂಧದಲ್ಲಿ ಬರೆದಿದ್ದಾರೆ. ಆದರೆ ಫರ್ಸ್ಟ್‌ಲ್ಕಾಸ್ ಫರ್ಸ್ಟ್ ಎಂಬ ವಿಷಯ ಎಲ್ಲಿಯೂ ಗೋಕಾಕರು ಬರೆದಿಲ್ಲ. ಗೋಕಾಕರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಅವರ ಶಿಷ್ಯರಾದ ನಮ್ಮಂಥರು ಅವರ ಬಗ್ಗೆ ಮಾತಾಡುವಾಗ ಎಲ್ಲೆಡೆ ಪ್ರಥಮ ಶ್ರೇಣಿಯಲ್ಲಿ ಪ್ರಥಮಸ್ಥಾನ ಎಂದೇ ಹೇಳುತ್ತೇವೆ. ಆಕ್ಸ್‌ಫರ್ಡ್‌ನಲ್ಲಿ ಅವರು ಮೌಖಿಕ ಪರೀಕ್ಷೆಗೆ ಕೂತಿರಲಿಲ್ಲ. ಆದರೂ ಪ್ರಥಮ ಸ್ಥಾನ ಗಳಿಸಿದ್ದು ನಮಗೆಲ್ಲ ರೋಮಾಂಚನ ಉಂಟುಮಾಡುವಂಥ ಸಂಗತಿ.

ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕೆಡೆಮಿಯವರು ಗೋಕಾಕರ ಸಮುದ್ರಗೀತಗಳನ್ನು ಅಧರಿಸಿದ ಗೀತ ಹಾಗೂ ನೃತ್ಯ ಕಾರ್ಯಕ್ರಮ ಸಾದರ ಪಡಿಸಿದರು. ಎರಡನೆಯ ದಿನದ ಆಕರ್ಷಣೆ ಎಂದರೆ ಕೇಂದ್ರ ಸಾಹಿತ್ಯ ಅಕಾಡೆಮಿಯದರು ತಯಾರಿಸಿದ ಪ್ರಸನ್ನ ನಿರ್ದೇಶಿಸಿದ ಪ್ರೊ.ಗೋಕಾಕರನ್ನು ಕುರಿತಾಗಿದ್ದ ಸಾಕ್ಷಿಚಿತ್ರ. ಗೋಕಾಕರು ಕೊನೆಯ ದಿನಗಳನ್ನು ಮುಂಬೈಯಲ್ಲಿ ಕಳೆದಾಗ ಇದರ ಚಿತ್ರೀಕರಣವಾಯಿತು. ಗೋಕಾಕರೊಡನೆ ಡಾ| ಶಾಂತಿನಾಥ ದೇಸಾಯಿಯವರು ಮಾತಾಡಿದ ಅಪೂರ್ವ ಕ್ಷಣಗಳನ್ನು ಇಲ್ಲಿ ಸೆರೆಹಿಡಿಯಲಾಗಿದೆ. ಗೋಕಾಕರು ತಮ್ಮ ಕಾವ್ಯವನ್ನು ವಾಚಿಸಿದ್ದಾರೆ.

ಎರಡನೆಯ ದಿನದ ಕಾರ್ಯಕ್ರಮದಲ್ಲಿ ಇನ್ನೊಂದು ಮಹತ್ವದ ಆಕರ್ಷಣೆ ಎಂದರೆ ಕರ್ಣಾಟಕ ನಾಟಕ ಅಕಾಡೆಮಿಯವರು ಪ್ರಸ್ತುತಪಡಿಸಿದ ಗೋಕಾಕರ ನಾಟಕ 'ಜನನಾಯಕ'. ಈ ನಾಟಕವನ್ನು ಗೋಕಾಕರು ಪುಣೆಯಲ್ಲಿದ್ದಾಗ ಬರೆದಿದ್ದರು, ಫರ್ಗ್ಯೂಸನ್ ಕಾಲೇಜಿನಲ್ಲಿ ಅವರು ಪ್ರಾಧ್ಯಾಪಕರಾಗಿದ್ದಾಗ ಇದರ ಪ್ರಯೋಗವಾಗಿತ್ತು. ಅದರಲ್ಲಿ ಗೋಕಾಕರೂ ಪಾತ್ರವಹಿಸಿದ್ದರೆಂದು ಕೇಳಿದ್ದೆವು. ನಂತರ ಇದರ ಪ್ರಯೋಗ ಆದ ಬಗ್ಗೆ ಎಲ್ಲಿಯೂ ಪ್ರಸ್ತಾಪ ಬರುವುದಿಲ್ಲ. ಇದರ ಪ್ರಥಮ ಪ್ರಯೋಗ ಬೆಂಗಳೂರಿನಲ್ಲಿ ನಡೆದದ್ದು ನಮಗೆ ಸಂತೋಷವನ್ನುಂಟುಮಾಡಿತ್ತು. ಇದನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ| ಬಿ.ವಿ.ಜಯರಾಂ ಅವರು ಶ್ರಮವಹಿಸಿ ಪ್ರಯೋಗಿಸಿದ್ದರು ಮತ್ತು ನಿರ್ದೇಶಿಸಿದ್ದರು. ನಾಟಕದ ಕೊನೆ ದುರಂತವಾಗಿದೆ. ಅದನ್ನು ಸುಖಾಂತವಾಗಿ ದಿಗ್ದರ್ಶಕರು ಬದಲಾಯಿಸಿದ್ದರು. ನಾಟಕದ ಪ್ರಯೋಗ ಚೆನ್ನಾಗಿತ್ತು. ನಾಟಕ ಮೂಲದಲ್ಲಿ ದುರಂತವಾಗಿದೆ, ಕೆಲವು ಕಾರಣಗಳಿಂದ ಇದರ ಕೊನೆಯನ್ನು ಸುಖಾಂತ ಮಾಡಲಾಗಿದೆ ಎಂದು ದಿಗ್ದರ್ಶಕರು ಸ್ಪಷ್ಟೀಕರಿಸಿದ್ದರೆ ಪ್ರೇಕ್ಷಕರಿಗೆ ಅನುಕೂಲವಾಗುತ್ತಿತ್ತು. ಎರಡು ದಿನ ಗುರುಗಳಾದ ಗೋಕಾಕರ ನೆನಪಿನಲ್ಲಿ ಬೆಂಗಳೂರಲ್ಲಿ ಕಾಲ ಕಳೆದೆ. ಇದೊಂದು ಅವಿಸ್ಮರಣೀಯ ಅನುಭವಾಗಿ ಉಳಿದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more