ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು

By Staff
|
Google Oneindia Kannada News

Dr. Da Ra Bendre
'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ ಸುದೀರ್ಘ ಮುನ್ನುಡಿ ಬರೆದಿದ್ದಾರೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

"ಕವಿವರ್ಯ ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು" ಎಂಬ ಗ್ರಂಥವನ್ನು ಎರಡು ವರ್ಷಗಳ ಹಿಂದೆ ಡಾ|| ಕೆ.ಎಸ್. ನಾರಾಯಣಾಚಾರ್ಯರು ಬರೆದರು. ಅದು ಈಗ ಬಿಡುಗಡೆ ಪಡೆಯುತ್ತಿರುವ ವಿಚಾರ ಬೇಂದ್ರೆ ಕಾವ್ಯಾಭ್ಯಾಸಿಗಳಿಗೆ ಸಂತಸವನ್ನುಂಟು ಮಾಡಿದೆ. ಹಾಗೆ ನೋಡಿದರೆ ನಾರಾಯಣಾಚಾರ್ಯರು ಬರೆದ ಎರಡನೆಯ ಗ್ರಂಥವಿದು. (ಮೊದಲನೆಯ ಪುಸ್ತಕ: ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ) "ಅಂಬಿಕಾತನಯ ಹಾಡಿದನೆಂದರೆ ಹೂವುಗಳು ಅರಳುವವು, ಕಲಿಯುಗ ಕೃತಯುಗವಾಗುವುದು", "ಕಲ್ಲರಳಿ ಹೂವಾಗಿ... ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ" ಎಂಬ ಸರ್ವಜ್ಞನ ವಚನ ನನಪಿಗೆ ಬರುತ್ತದೆ. ಬೇಂದ್ರೆಯವರ ವಿಮರ್ಶಾಭಾಷೆ ಸೂತ್ರಪ್ರಾಯವಾದದು, ವಜ್ರದ ಕಡಲೆಯಂತಿರುವದು. ಅವುಗಳ ಸೋಮರಸ ತೆಗೆಯಲು ನೃಸಿಂಹಶಕ್ತಿ ಬೇಕು, ಭೀಮ ಬಲಬೇಕು". ಋಗ್ವೇದ ಮಂತ್ರ ಪಠಿಸುತ್ತ, ಬಲದ ಉಪಾಸನೆ ಮಾಡಿದ ನಾರಾಯಣಾಚಾರ್ಯರು ಕಬ್ಬಿಣ ಕಡಲೆಗಳೆಂಬ 32 ಸೂತ್ರಗಳಿಂದ ಚಿಮ್ಮಿಸಿದ ದ್ರಾಕ್ಷಾರಸ ಪಾಕವಾಗಿದೆ ಈ ಗ್ರಂಥವೆಂದು ಡಾ||ವಾಮನ ಬೇಂದ್ರೆಯವರು ಈ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.

ಈ ಗ್ರಂಥದ ವಿಮರ್ಶೆ ಮಾಡುವುದೆಂದರೆ, "ರತ್ನ ಪರೀಕ್ಷೆ" ಮಾಡಿದಂತೆ. ರನ್ನ ತನ್ನ ಕಾವ್ಯವನ್ನು ಪರೀಕ್ಷಿಸುವವನಿಗೆ ಎಂಟು ಎದೆ ಬೇಕು ಎಂದಿದ್ದು ಪ್ರಸ್ತುತದಲ್ಲಿ ನೆನಪಿಗೆ ಬರುತ್ತದೆ. ನಾನು ಇಲ್ಲಿ ಈ ಗ್ರಂಥದ ಪರಿಚಯವನ್ನು ಮಾತ್ರ ಮಾಡುವೆ. ಬೇಂದ್ರೆಯವರ ಗದ್ಯ ಬರವಣಿಗೆ ವಿರಾಟ್ ಸ್ವರೂಪದ್ದು. "ಸಾಹಿತ್ಯದ ವಿರಾಟ್ ಸ್ವರೂಪ" ಎಂಬ ಪ್ರಬಂಧವು ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ವರಕವಿ ಬೇಂದ್ರೆಯವರು ಮಾಡಿದ ಅಧ್ಯಕ್ಷೀಯ ಭಾಷಣ. ಅದರ ಹಿರಿಮೆ - ಗರಿಮೆಯ ಬಗ್ಗೆ ಸಮನ್ವಾಚಾರ್ಯ ವಿನಾಯಕ ಕೃಷ್ಣ ಗೋಕಾಕರು ತಮ್ಮ ಬಳ್ಳಾರಿ ಸಾಹಿತ್ಯ ಸಮ್ಮೇಲನದ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿದ್ದನ್ನು ಇಲ್ಲಿ ನೆನೆಯಬಹುದು. "ಸಾಹಿತ್ಯದ ವಿರಾಟ್ ಸ್ವರೂಪ" ಶೀರ್ಷಿಕೆಯನ್ನು ಬೇಂದ್ರೆಯವರ ಸಮಗ್ರ ಗದ್ಯ ಬರವಣಿಗೆಗೆ ಇಟ್ಟದ್ದು ಸಾರ್ಥಕ ಅಷ್ಟೇ ಅಲ್ಲ ಅನ್ವರ್ಥಕವೂ ಆಗಿದೆ. ಬೇಂದ್ರೆಯವರ ಗದ್ಯ ಬರವಣಿಗೆಯ ಸಾಗರದಿಂದ ವಿಮರ್ಶಾಸೂತ್ರದ 32 ಅಣಿಮುತ್ತುಗಳನ್ನು ಹೆಕ್ಕಿ ತೆಗೆದು ಪ್ರಸ್ತುತಪಡಿಸಿ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ.

240 ಪುಟಗಳ ಈ ಪುಸ್ತಕದಲ್ಲಿ ಎಂಟು ಅಧ್ಯಾಯಗಳು ಇವೆ. 50 ಪುಟಗಳ ಸುದೀರ್ಘ ಮುನ್ನುಡಿಯನು ಡಾ|| ವಾಮನ ಬೇಂದ್ರೆಯವರು ಬರೆದಿದ್ದಾರೆ. ಸಾಮಾನ್ಯವಾಗಿ ಯಾವುದೇ ಪುಸ್ತಕಗಳ ಮುನ್ನುಡಿಗೆ ಶೀರ್ಷಿಕೆ ಇರುವುದಿಲ್ಲ. ಈ ಮುನ್ನುಡಿಗೆ ಇದೆ. ಇದು ಅದರ ವೈಷಿಷ್ಟ್ಯ. "ಸಾಹಿತ್ಯ ಶ್ರುತಿಗೆ ಬೇಂದ್ರೆ ಸಂಗೀತ ಠೇಕಾ: ತ್ರಿತಾಲ್". ಬೇಂದ್ರೆ ಸಾಹಿತ್ಯದ ಬಗ್ಗೆ ಬರೆದ ಒಂದು ಸಂಗೀತಮಯ ಪುಸ್ತಕಕ್ಕೆ ತಾವು ಹೇಗೆ ಠೇಕಾ ನೀಡುತ್ತಾರೆ, ತ್ರಿತಾಲ್ ಸಾಥ ನೀಡುತ್ತಾರೆ ಎಂಬುದನ್ನು ಇಲ್ಲಿ ಅವರು ಸೂಚಿಸಿದ್ದಾರೆ. ಒಂದೆಡೆ "ಹೃದಯಾರವಿಂದದಲ್ಲಿರುವ ನಾರಾಯಣನೆ ತಾನಾಗಿ ದತ್ತನರನು" ಆಗಿರುವ ಬೇಂದ್ರೆಯವರ ಕೃತಿ ಇದ್ದರೆ, ಇನ್ನೊಂದೆಡೆಗೆ ಅಂತಃಕರಣದ ವೈದಿಕ ವೀಣೆ ನುಡಿಸುವ ನಾರಾಯಣಾಚಾರ್ಯ ಇದ್ದಾರೆ. "ಇವರಿಬ್ಬರಲ್ಲಿ ನಡೆದ ಧ್ವನಿ ಹಾಗೂ ಪ್ರತಿಧ್ವನಿಗಳ ನುಡಿ ಈ ಗ್ರಂಥ" ಎಂದು ವಾಮನ ಬೇಂದ್ರೆ ಮಾರ್ಮಿಕವಾಗಿ ನುಡಿಯುತ್ತಾರೆ.

ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ ಸಾಹಿತ್ಯದ ವಿರಾಟ ಸ್ವರೂಪ" ಅಧ್ಯಯನಮಾಡಿ 32 ಸೂತ್ರಗಳನ್ನು ಆಯ್ಕೆಮಾಡಿದ್ದರ ಹಿನ್ನೆಲೆಯನ್ನು ಹಿಂಜುತ್ತ, ಆ ಸಂಖ್ಯೆ 32 ಆದ ಬಗೆಯನ್ನು ನಿರೂಪಿಸುತ್ತಾರೆ. "ಆಯಿ ದಲದರವಿಂದ ಸ್ಯಂದಮಾನಮ್ ಮರಂದಮ್| ತಪಕಿಮಪಿಲಿಹಂತೋ ಮಂಜ ಗುಂಜ್ಯತು ಭೃಂಗಾಃ| ದಿಶಿದಿಶಿ ನಿರಾಪೇಕ್ಷಃ ತಾವಕೀನಂ ವಿವೃಣ್‌ವನ್| ಪರಿಮಲವಯಮನ್ಯೋ ಬಾಂಧವೋ ಗಂಧವಾಹಃ" ಎಂಬ ಜಗನ್ನಾಥ ಪಂಡಿತನ ಸಾಲುಗಳನ್ನು ಬೇಂದ್ರೆಯವರು ಸದಾ ಸ್ಮರಿಸುತ್ತಿದ್ದರು. ಅದರ ಹಿನ್ನೆಲೆಯಲ್ಲಿ ಭೃಂಗವು ಬೇಂದ್ರೆಯವರ ಕಾವ್ಯದ ರೂಪಕವಾಗಿ ಬಂದ ವಿಚಾರವನ್ನು ತಿಳಿಸುತ್ತಾರೆ. (ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಬಾ ಭೃಂಗವೆ ಬಾ, ಕಂಪಿನ ಕರೆ ಮೊದಲಾದ ಕವನಗಳಲ್ಲಿ ಭೃಂಗ, ಬೇಂದ್ರೆಯವರ ಸಮಗ್ರ ಕಾವ್ಯದ ಪ್ರತಿಮೆ, ರೂಪಕ, ಧ್ವನಿಯಾಗಿರುವುದನ್ನು ಕಾಣಬಹುದು).

ಭಾರತೀಯ ಕಾವ್ಯ ಮೀಮಾಂಸೆಯ ಲಕ್ಷಣಕಾರರು - ರೂಪಕಕ್ಕೆ ಅಲಂಕಾರ ಸಂಪ್ರದಾಯದಲ್ಲಿ ವಿಶಿಷ್ಟ ಮಹತ್ವ ಕೊಡುತ್ತಾರೆ. ಬೇಂದ್ರೆಯವರು ರೂಪಕ = ಪ್ರತಿಮೆ= ಪ್ರತೀತ ಎಂಬ ನಿರ್ಣಯಕ್ಕೆ ತಲುಪಿದ್ದರು. ಮಹಾಕವಿ ಕುಮಾರವ್ಯಾಸನು ರೂಪಕ ಸಾಮ್ರಾಜ್ಯದ ಚಕ್ರವರ್ತಿ. ಆ ಪರಂಪರೆಯಲ್ಲಿಯೆ ಬೆಳೆದ ಅತ್ಯಂತ ಮಹತ್ವದ ಕವಿ ಬೇಂದ್ರೆ ಎಂಬ ಮಾತನ್ನು ಅನೇಕ ವಿಮರ್ಶಕರು ಆಡಿದ್ದಾರೆ. ಈ ಸಂದರ್ಭ ನೆನೆಯುತ್ತಾ ವಾಮನ ಬೇಂದ್ರೆಯವರು "ಇದು ನಭೋವಾಣಿ" ಸಂಗ್ರಹದ "ನವವಿಸರ್ಗ" ಎಂಬ ಕವನದ ಮಹತ್ವದ ಸಾಲುಗಳನ್ನು ಉದ್ಧರಿಸುತ್ತಾರೆ:

"ಭಾಷೆ ಏಕೆ ಬರಿ ಧ್ವನಿಯು ಸಾಕು; ಆ ಅಲಂಕಾರ ನೂಕು
ರೀತಿಗೀತಿ ಕೊಂಡಾಟ ಬೇಡ, ಗುಣಗಣದ ಷೋಕಿ ಝೋಕು
ಭಾವವೇನು ಎಣಿಸಾಟ ಉಂಟೆ? ಆ ಛಂದ ಗತ್ತುಗಿತ್ತು|
ಒಂದೆ ನಾಮದಲಿ ಪ್ರಣವಧಾಮ ಅಡಗಿತ್ತು, ಇಲ್ಲಾ; ಇತ್ತು".

ಅಂಬಿಕಾತನಯದತ್ತರದು ಉದ್ಭವಕಾವ್ಯ. ಬೇಂದ್ರೆ ಪಾಶ್ಚಿಮಾತ್ಯ ಕಾವ್ಯ ಮೀಮಾಂಸಾ ಲಕ್ಷಣಕಾರರನ್ನು ಬೆಂಬಲಿಸುವುದಿಲ್ಲ; ಭಾರತೀಯ ಸಂಸ್ಕೃತ ಕಾವ್ಯಲಕ್ಷಣಕಾರರ ದರ್ಶನಗಳನ್ನು ಹೊಸ ರೀತಿಯಲ್ಲಿ ಕಾಣುತ್ತಾರೆ.

ವೇದದ ಷಡಂಗಗಳಾದ ಶಿಕ್ಷಾ, ವ್ಯಾಕರಣ, ನಿರುಕ್ತ, ಛಂದಸ್ಸು, ಕಲ್ಪ, ಜ್ಯೋತಿಷ್ಯ- ಇವುಗಳ ಸೆಲೆಯಿಂದ ಬೇಂದ್ರೆ ಕಾವ್ಯ ಹರಿದುಬಂದಿದೆ ಎನ್ನುತ್ತಾರೆ. ಬೇಂದ್ರೆಯವರಿಂದ ಲಿಪಿಬದ್ಧವಾಗಿರುವಂತೆ ಬೇಂದ್ರೆ ತಮ್ಮ ಸಾಮವೇದದ ಛಂದಸ್ಸಿನಲ್ಲಿ ಕವನ ರಚಿಸಿದ್ದು ಹೆಮ್ಮೆಯ ವಿಷಯ ಬೇಂದ್ರೆ ಕಾವ್ಯದ ಆತ್ಮ-ಧ್ವನಿ. ಈ ಧ್ವನಿಯನ್ನು ಅವರು ತಮ್ಮ ಗಂಧರ್ವ ಕಂಠದಿಂದ ಹಾಡುತ್ತ ಜನಪ್ರಿಯರಾದುದು ಪ್ರಖ್ಯಾತ. ಇದಕ್ಕೇ ಡಾ||ಶಿವರುದ್ರಪ್ಪನವರು "ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ" ಎಂದು ಸಾರಿದ್ದು ಗಮನಾರ್ಹ ಎನ್ನುತ್ತಾರೆ.

ಮನುಷ್ಯನಿಗೆ ಸಾಮಾನ್ಯ ಅವಸ್ಥೆ - ಜಾಗ್ರತೆ ಮತ್ತು ಸ್ವಪ್ನ. ಈ ಎರಡರ ಅಭ್ಯಾಸದಿಂದ ನಾರಾಯಣಾಚಾರ್ಯರು ಅನುಭವಿಸಿದ್ದು ಸುಷುಪ್ತಿ, ತುರೀಯ ಹಾಗೂ ತುರೀಯಾತೀತ. ಒಟ್ಟು ಪಂಚ ಅವಸ್ಥೆಗಳು. ಯಾವ ಕವಿಯ ಕಾರ್ಯ ತುರೀಯಾತೀತ ಅವಸ್ಥೆಯಿಂದ ನಡೆಯುತ್ತದೋ ಅವನು ಮಾತ್ರ ಋಷಿಕವಿ. ಬೇಂದ್ರೆ ನಿರ್ಮಿತ ಸಾಹಿತ್ಯ ವಿಮರ್ಶಾಸೂತ್ರ = 32. ಅರವಿಂದರು ಹಾಗೂ ಬೇಂದ್ರೆಯವರು ಅವತಾರಿ ಪುರುಷರಲ್ಲ, ಸಾಧಕ ಸಂತಪುರುಷರು. ಬೇಂದ್ರೆ, ಮೂಲದಲ್ಲಿ ಸಾಧಕ ತಪಸ್ವಿಕವಿ. ಅನಂತರ ಋಷಿ, ಅರವಿಂದರು ಮೂಲದಲ್ಲಿ ಋಷಿ, ಅನಂತರ ಕವಿ ಎಂದು ವಿನಾಯಕರು ಬರೆದಿದ್ದಾರೆ.

ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳನ್ನು ನಿರ್ಮಿಸುವಾಗ, ಬೇಂದ್ರೆಯವರ ಚಿಂತನಮನೋಭೂಮಿಕೆಯ ನೆಲೆಗಳೂ ಹಾಗೂ ಪ್ರಶ್ನೆಗಳೂ ಮೂವತ್ತೆರಡೇ ಇದ್ದುದರ ಔಚಿತ್ಯದ ಬಗ್ಗೆ ಬರೆಯುತ್ತಾರೆ. ಕೊನೆಗೆ ಕಾವ್ಯ ಎಂಬ ಲೋಹ ಚುಂಬಕಕ್ಕೆ ಕವಿ ಮತ್ತು ಸಹೃದಯ ವಿಮರ್ಶಕ ಎಂಬ ಎರಡೇ ಧ್ರುವಗಳು. ಈ ದ್ವೈತವನ್ನು ಮೀರಿದ ಸಮರಸತೆಯ ಅದ್ವೈತ ಆನಂದ ಹಾಗೂ ಜೀವನ ಇವುಗಳ ಮಹತಿ ಎಂತಹದು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ದೊರೆತ ಸೂತ್ರಗಳು 32 ಎನ್ನುತ್ತಾರೆ. ನಂತರ ನಾರಾಯಣಾಚಾರ್ಯರು ಬರೆದ ಎರಡು ಅಧ್ಯಾಯಗಳ 32 ಸೂತ್ರಗಳ ಸಾರವನ್ನು ಸಂಗ್ರಹಿಸುತ್ತಾರೆ.

ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರು ಅವರಿಗೆ ಕೊಟ್ಟ ಸಪ್ನಾದೇಶವನ್ನು ಆಧರಿಸಿ ಈ ವಿಮರ್ಶಾಗ್ರಂಥವನ್ನು ಬರೆದಿದ್ದಾರೆ ಎಂಬ ಮಹತ್ವದ ಮಾತನ್ನು ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X