• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ!

By * ವಿಶ್ವೇಶ್ವರ ಭಟ್
|

"ನೀವು ಸಮಸ್ಯೆಯನ್ನು ಹೇಗೆ ನೋಡುತ್ತೀರಿ ಎಂಬುದು ಮುಖ್ಯ. ಸರಿಯಾಗಿ ನೋಡಿದರೆ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾಗುತ್ತದೆ. ಇದು ಕೇವಲ ಸಮಸ್ಯೆಗೆ ಸಂಬಂಧಿಸಿದ್ದಲ್ಲ. ಪ್ರತಿ ವಿಷಯಕ್ಕೂ ಅನ್ವಯ." ಹಾಗಂತ ಅಂದಿದ್ದರು ದೇಬಾಶಿಶ್ ಚಟರ್ಜಿ. ಇದೇ ಅವರ ಮ್ಯಾನೇಜ್‌ಮೆಂಟ್ ಪಾಲಿಸಿ. ಅವರು ಹೇಳುವುದು ಇದನ್ನೇ ಪಾಲಿಸಿ.'

ನಿಮಗೆ ಗೊತ್ತಿರಬಹುದು. ದೇಬಾಶಿಶ್ ಚಟರ್ಜಿ ಲಖನೌ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರು. ಹತ್ತಾರು ದೇಶಗಳನ್ನು ಸುತ್ತಿದ್ದಾರೆ. ಜಗತ್ತಿನ ಅನೇಕ ನಾಯಕರನ್ನು ಭೇಟಿ ಮಾಡಿದ್ದಾರೆ. ಸಾವಿರಾರು ಕೋಟ್ಯಧಿಪತಿಗಳಿಗೆ ಅವರ ದುಡ್ಡು, ವ್ಯವಹಾರ, ಸಿಬ್ಬಂದಿ ನಿರ್ವಹಣೆಗೆ ಸಂಬಂಧಿಸಿದಂತೆ ಪಾಠ ಹೇಳಿದ್ದಾರೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಿಗೆ ಹೇಳಬೇಕಾದವರಾಗಿದ್ದಾರೆ. ಮ್ಯಾನೇಜ್‌ಮೆಂಟ್ ಕುರಿತು ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಮಾತಿಗೆ ಕುಳಿತುಕೊಂಡರೆ ಇನ್ನೂ ಸ್ವಲ್ಪ ಹೊತ್ತು ಕಳೆಯಬೇಕಿತ್ತು ಎಂದೆನಿಸುವ ವ್ಯಕ್ತಿತ್ವ.

ಅಂದು ದೇಬಾಶಿಶ್ ಸಿಕ್ಕಾಗಲೂ ಹಾಗೇ ಅನಿಸಿತು. ಆಸ್ಟ್ರೇಲಿಯಾದಲ್ಲಿ ಹಡಗಿನ ಕಮಾಂಡರ್ ಸಿಕ್ಕಿದ್ದ" ಎಂದು ಕತೆ ಹೇಳಲು ಪ್ರಾರಂಭಿಸಿದರು. ಆ ಕಮಾಂಡರ್ ಹೇಳಿದ- ನನ್ನ ಪ್ರಕಾರ ಭಾರತ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ದೇಶ. ನೀವೆಷ್ಟು ಪುಣ್ಯವಂತರು, ಅದೃಷ್ಟಶಾಲಿಗಳು. ನಾವೆಷ್ಟೇ ಪ್ರಯತ್ನಪಟ್ಟರೂ ಶ್ರೀಮಂತಿಕೆಯಲ್ಲಿ ನಿಮ್ಮನ್ನು ಹಿಂದೆ ಹಾಕಲು ಸಾಧ್ಯವಿಲ್ಲ" ದೇಬಾಶಿಶ್ ಕೇಳಿದರು- ಅದು ಹೇಗೆ? ಯಾರೂ ಹೇಳದ ಸಂಗತಿಯನ್ನು ಹೇಳುತ್ತಿದ್ದೀಯಲ್ಲ ನೀನು. ಇದು ಹೇಗೆ ಸಾಧ್ಯ ಮಹಾರಾಯ?" ಅದಕ್ಕೆ ಕಮಾಂಡರ್ ಹೇಳಿದ- ಯಾವುದೇ ದೇಶದ ಕರೆನ್ಸಿ ಅಂದ್ರೆ ರೂಪಾಯಿ, ಡಾಲರ್, ಪೌಂಡ್, ಯೆನ್ ಅಲ್ಲ ಅಂತ ಭಾವಿಸಿ. ಆ ದೇಶದ ಜನರೇ ಕರೆನ್ಸಿ ಅಲ್ಲವಾ? ಜನರಿಗಿಂತ ಹಣ ಮುಖ್ಯವಲ್ಲ. ಹಣದ ಮೌಲ್ಯವನ್ನು ಅಳೆಯಬಹುದು. ಆದರೆ ಮನುಷ್ಯನಿಗೆ ಬೆಲೆ ಕಟ್ಟಲಾಗುವುದಿಲ್ಲ. ಚೀನಾ ಬಿಟ್ಟರೆ ನೂರು ಕೋಟಿ ಜನಸಂಖ್ಯೆ ಹೊಂದಿದ ದೇಶ ಭಾರತ. ಜನರೇ ಹಣ, ಕರೆನ್ಸಿ ಎಂದು ಭಾವಿಸಿದರೆ ಭಾರತದ ಮುಂದೆ ಅಮೆರಿಕ, ಇಂಗ್ಲೆಂಡ್, ಜಪಾನ್, ರಷ್ಯಾ, ಜರ್ಮನಿಯೆಲ್ಲ ಬಡದೇಶಗಳು. ಆದರೆ ನೀವು ಜನಸಂಖ್ಯೆ ನಿಮ್ಮ ಹೊರೆ, ಶಾಪ ಎಂದು ಭಾವಿಸಿದ್ದೀರಿ. ಯಾವುದು ನಿಮ್ಮ ಆಸ್ತಿಯೋ, ಸತ್ವವೋ ಅದನ್ನೇ ಸಮಸ್ಯೆಯೆಂದು ತಿಳಿದಿದ್ದೀರಿ."

ಎಂಥ ಮಾತು ನೋಡಿ. ಜನರೇ ನಮ್ಮ ಸಂಪನ್ಮೂಲ ಎಂದು ಒಂದು ಕ್ಷಣ ಯೋಚಿಸಿದರೆ ಭಾರತ ಅದೆಂಥ ಸಂಪದ್ಭರಿತ ದೇಶ? ಕರೆನ್ಸಿ ನೋಟಿಗಿಂತ ಮನುಷ್ಯರಿಗೆ ಹೆಚ್ಚಿನ ಬೆಲೆ ಇಲ್ಲವಾ? ದೇಶದ ನಿಜವಾದ ಸಂಪತ್ತು ಅಂದ್ರೆ ಮಾನವ ಸಂಪನ್ಮೂಲವೇ ಅಲ್ಲವಾ? ಮನುಷ್ಯರು ಹಣ ಮಾಡಬಹುದು ಆದರೆ ಹಣ ಮನುಷ್ಯರನ್ನು ಮಾಡದು. ಈ ಸತ್ಯ ಅರಿವಾಗುವುದಿಲ್ಲವಾ? ಅಷ್ಟಕ್ಕೇ ಕಮಾಂಡರ್ ಸುಮ್ಮನಾಗಲಿಲ್ಲ- ಮನುಷ್ಯನ ಮೆದುಳಿನ ತೂಕ ಒಂದೆರಡು ಕೆಜಿ ಇದ್ದೀತು. ಆದರೆ ಈ ಪುಟ್ಟ ಮೆದುಳಿಗೆ ಅದೆಂಥ ಶಕ್ತಿಯಿದೆ? ಇದನ್ನು ಯಾವ ಕಂಪ್ಯೂಟರ್‌ಗೂ ಹೋಲಿಸಲು ಸಾಧ್ಯವಿಲ್ಲ. ಮಾನವ ಮೆದುಳನ್ನು ಮೀರಿಸುವ ಯಂತ್ರವನ್ನು ಇಲ್ಲಿತನಕ ಕಂಡು ಹಿಡಿಯಲಾಗಿಲ್ಲ. ಮನುಷ್ಯನ ಹೃದಯವನ್ನು ಗಮನಿಸಿ. ಪ್ರತಿ ವರ್ಷ 350 ಲಕ್ಷ ಸಾರಿ ಬಡಿದುಕೊಳ್ಳುತ್ತದೆ. ಅಂದ್ರೆ ಪಂಪ್ ಮಾಡುತ್ತದೆ. ಮನುಷ್ಯನೇ ನಿರ್ಮಿಸಿದ ಪಂಪ್ ಕೂಡ ಅಷ್ಟೊಂದು ತಾಳಿಕೆ, ಬಾಳಿಕೆ ಬರುವುದಿಲ್ಲ. ಅದು ಎಂದೂ ಕೆಟ್ಟು ನಿಲ್ಲುವುದಿಲ್ಲ. ಈ ರೀತಿ ನಿಖರವಾಗಿ ಕೆಲಸ ಮಾಡುವ ಮತ್ತೊಂದು ವಸ್ತುವಿಲ್ಲ. ಮನುಷ್ಯನ ಕೈಗಳನ್ನು ನೋಡಿ. ಅಂಥ ಉಪಕರಣ ಮತ್ತೊಂದಿಲ್ಲ. ಕುಸುರಿ ಕೆತ್ತುವ ಕೈಗಳು ಸರ್ಜರಿ ಮಾಡಬಲ್ಲವು. ರಾಕೆಟ್ ಹಾರಿಸಬಲ್ಲವು. ಮನುಷ್ಯನಂಥ ಉಪಯುಕ್ತ ಪ್ರಾಣಿ ಮತ್ತೊಂದಿಲ್ಲ. ಇಷ್ಟಾಗಿಯೂ ಭಾರತ ಹಿಂದುಳಿದ ದೇಶಗಳ ಸಾಲಿಗೆ ಸೇರಿರುವುದು ದೌರ್ಭಾಗ್ಯ."

ನಾವು ನಮ್ಮ ಸಮಸ್ಯೆ, ಅನಿಷ್ಟಗಳಿಗೆ ಜನಸಂಖ್ಯೆಯೇ ಕಾರಣ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೇವೆ. ಯಾವುದು ನಮ್ಮ ಬಲವೋ ಅದು ನಮ್ಮ ಬಲಹೀನತೆಯಾಗಿದೆ. ಅಂದರೆ ನಾವು ನೋಡುವ ದೃಷ್ಟಿಕೋನ ಸರಿ ಇಲ್ಲ ಅಂತಾಯಿತು. ಪಾಶ್ಚಾತ್ಯ ದೇಶಗಳಲ್ಲಿ ಈ ಪರಿ ಜನಸಂಖ್ಯೆ ಇಲ್ಲ. ಹೀಗಾಗಿ ಅವರು ಯಂತ್ರ ಆಧರಿತ ಜೀವನ ವಿಧಾನಕ್ಕೆ ಹೊಂದಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಅಗ್ಗಕ್ಕೆ ಜನ ಸಿಗುತ್ತಾರೆ. ಇದೇ ಮಾನವ ಸಂಪನ್ಮೂಲವನ್ನು ಸರಿಯಾಗಿ ದುಡಿಸಿಕೊಂಡರೆ ಅದ್ಭುತ ಕ್ರಾಂತಿ ಸಾಧ್ಯ. ನಾವು ಹೊಂದಿರುವ ಮಹಾನ್ ಸಂಪನ್ಮೂಲವೆಂದರೆ ಜನರು ಎಂದು ಭಾವಿಸಿದರೆ ಎಲ್ಲವೂ ಸರಿ ಹೋಗುತ್ತದೆ.

ನಾವು ನೋಡುವ ದೃಷ್ಟಿಯನ್ನು ಸರಿಯಾಗಿ ಫೋಕಸ್ ಮಾಡಿದರೆ ಎಂಥ ಪರಿವರ್ತನೆ ಮಾಡಬಹುದೆಂಬುದಕ್ಕೆ ದೇಬಾಶಿಶ್ ಪುಟ್ಟ ನಿದರ್ಶನವೊಂದನ್ನು ಹೇಳಿದರು. ಒಂದು ಚರ್ಚ್‌ನಲ್ಲಿ ಪಾದ್ರಿಯೊಬ್ಬನಿದ್ದ. ಆತ ಒಂದು ದಿನ ಹೊಸ ನಿರ್ಧಾರಕ್ಕೆ ಬಂದ- ಪ್ರತಿ ಭಾನುವಾರ ಚರ್ಚ್‌ಗೆ ಬರುವ ಜನರಿಂದ ದಾನ ಅಥವಾ ಕಾಣಿಕೆ ಸ್ವೀಕರಿಸಬಾರದು. ಅದರ ಬದಲು ತಾನೇ ಪ್ರತಿಯೊಬ್ಬರಿಗೂ ಹತ್ತು ಡಾಲರ್ ನೀಡಬೇಕು. ಇದೆಂಥ ಯೋಚನೆ, ಎಲ್ಲಾದರೂ ಉಂಟಾ ಎಂದು ನಿಮಗೆ ಅನಿಸಬಹುದು. ಆದರೆ ಈ ಯೋಚನೆ ಅದೆಂಥ ಪವಾಡ ಸೃಷ್ಟಿಸಿತು ಅಂತೀರಿ. ಹತ್ತು ಡಾಲರ್ ಕೊಡುವಾಗ ಪಾದ್ರಿ ಹೇಳುತ್ತಿದ್ದ- ಈ ಹಣದಿಂದ ನಿಮ್ಮ ಸಂಪತ್ತು ವೃದ್ಧಿಸಲಿ. ನಿಮಗೆ ಒಳ್ಳೆಯದಾಗಲಿ. ಹಾಗೆ ನಿಮಗೆ ಒಳ್ಳೆಯದಾದಾಗ ದಯವಿಟ್ಟು ಅದರಲ್ಲಿ ನಿಮಗೆ ಅನಿಸಿದಷ್ಟನ್ನು ಚರ್ಚ್‌ಗೆ ದಾನ ಮಾಡಿ."

ಪಾದ್ರಿಗೆ ಚೆನ್ನಾಗಿ ಗೊತ್ತಿತ್ತು. ಜನರ ಮುಂದೆ ಬೊಗಸೆಯೊಡ್ಡಿದರೆ ತಪ್ಪಾಗಿ ಭಾವಿಸುತ್ತಾರೆ, ಭಿಕ್ಷೆ ಬೇಡುತ್ತಿದ್ದೇನೆ ಎನ್ನುವಷ್ಟು ನಿಕೃಷ್ಟವಾಗಿ ನೋಡುತ್ತಾರೆ. ಅಷ್ಟೇ ಅಲ್ಲ ಹಣವನ್ನೂ ಕೊಡುವುದಿಲ್ಲ. ಕೊಟ್ಟರೂ ಖುಷಿಯಿಂದ ಕೊಡುವುದಿಲ್ಲ. ಅದೇ ನಾನೇ ಜನರಿಗೆ ಹಣ ಕೊಟ್ಟರೆ ಖಂಡಿತವಾಗಿಯೂ ವಾಪಸ್ ಕೊಡುತ್ತಾರೆ. ನಾಲ್ಕು ಪಟ್ಟು ಜಾಸ್ತಿ ಕೊಡುತ್ತಾರೆ. ಪಾದ್ರಿ ಅಂದುಕೊಂಡಂತೇ ಆಯಿತು. ಪಾದ್ರಿಯಿಂದ ಪಡೆದ ಹಣವನ್ನು ಜನರು ದೇವರ ದುಡ್ಡು ಎಂದು ಭಾವಿಸಿದರು. ಅದನ್ನು ತಮ್ಮ ತಮ್ಮ ದಂಧೆಯಲ್ಲಿ ತೊಡಗಿಸುವುದರಿಂದ ಒಳ್ಳೆಯದಾಗುತ್ತದೆಂದು ಯೋಚಿಸಿದರು. ವ್ಯಾಪಾರದಲ್ಲಿ ಲಾಭವುಂಟಾದಾಗ ಅದಕ್ಕೆ ಪಾದ್ರಿ ಕೊಟ್ಟ ದೇವರ ದುಡ್ಡೇ ಕಾರಣವೆಂದು ಅಂದುಕೊಂಡರು. ತಮ್ಮ ಲಾಭದಲ್ಲಿ ಒಂದು ಪಾಲನ್ನಾದರೂ ಚರ್ಚ್‌ಗೆ ವಾಪಸ್ ನೀಡದಿದ್ದರೆ ಹೇಗೆ? ಇನ್ನು ಪಾದ್ರಿಯಿಂದ ಪಡೆದ ಹಣದಿಂದ ನಷ್ಟ ಅನುಭವಿಸಿದವರು ಬೇರೆ ರೀತಿಯಲ್ಲಿ ಯೋಚಿಸತೊಡಗಿದರು. ದೇವರ ದುಡ್ಡನ್ನು ಪಡೆದ ನಾವು ವಾಪಸ್ ದೇವರಿಗೆ ಏನನ್ನೂ ನೀಡದ್ದರಿಂದ ನಷ್ಟವುಂಟಾಗಿರಬೇಕು, ಹೀಗಾಗಿ ಪಡೆದದ್ದಕ್ಕಿಂತ ಜಾಸ್ತಿ ವಾಪಸ್ ನೀಡಬೇಕು.

ಪ್ರಾಯಶಃ ಪಾದ್ರಿ ಊಹಿಸಿರಲಿಕ್ಕಿಲ್ಲ. ಕೆಲವೇ ದಿನಗಳಲ್ಲಿ ಹತ್ತು ಡಾಲರ್ ಪಡೆದವರು ನೂರು, ಸಾವಿರ, ಲಕ್ಷ ಡಾಲರ್‌ಗಳನ್ನು ಕಾಣಿಕೆ, ದಾನರೂಪದಲ್ಲಿ ನೀಡಲಾರಂಭಿಸಿದರು. ಪಾದ್ರಿ ಅಲ್ಲಿಯ ತನಕ ಹತ್ತೆಂಟು ಸಾವಿರ ಡಾಲರ್ ಖರ್ಚು ಮಾಡಿದ್ದಿರಬಹುದು. ಆದರೆ ಆಗಲೇ ಆತ ಖರ್ಚು ಮಾಡಿದ ಹಣದ ಸಾವಿರಾರು ಪಟ್ಟು ಹೆಚ್ಚು ಹಣ ಹರಿದು ಬರಲಾರಂಭಿಸಿತು. ಪ್ರತಿದಿನ ಆತನಿಗೆ ಎಣಿಸಲು ಸಾಧ್ಯವಾಗದಷ್ಟು ಹಣ ಸಂಗ್ರಹವಾಗ ತೊಡಗಿತು. ಆತ ಕೈಗೊಂಡ ಒಂದು ಕ್ರಮದಿಂದ ಇಡೀ ಚರ್ಚ್ ಶೀಘ್ರ ಅಭಿವೃದ್ಧಿಯಾಯಿತು. ಬೇರೆ ಊರುಗಳಲ್ಲೂ ಚರ್ಚ್ ಸ್ಥಾಪಿಸಲು ಮುಂದಾಗುವಷ್ಟು ಹಣ ಶೇಖರವಾಯಿತು.

ಎಲ್ಲರೂ ಯೋಚಿಸುವುದಕ್ಕಿಂತ ಭಿನ್ನವಾಗಿ ಯೋಚಿಸುವವರು ಎಲ್ಲರಿಗಿಂತ ಬೇಗನೆ ಗಮನ ಸೆಳೆಯುತ್ತಾರೆ. ಬಹುಬೇಗನೆ ಜನಪ್ರಿಯರಾಗುತ್ತಾರೆ. ಜೀವನದಲ್ಲಿ ಯಶಸ್ವಿಯಾಗುತ್ತಾರೆ. ದೇಬಾಶಿಶ್ ಡೀ ಹೋಕ್‌ನ ಜೀವನ ಕೃತಿಯನ್ನು ಹೇಳಿದರು. ಡೀ ಹೋಕ್ ವಿಸಾ ಕಾರ್ಡ್' ಮುಖ್ಯಸ್ಥ. ಆತ ಬ್ಯಾಂಕಿಂಗ್ ಕಲ್ಪನೆ, ಸ್ವರೂಪ, ವ್ಯವಸ್ಥೆಯನ್ನೇ ಬದಲಿಸಿಬಿಟ್ಟ. ಬ್ಯಾಂಕು, ಅದರ ಕಾರ್ಯವಿಧಾನದ ಬಗ್ಗೆ ನಮ್ಮ ಅಭಿಪ್ರಾಯವೇ ಬೇರೆಯಾಗಿತ್ತು. ದುಡ್ಡಿನ ಬಗ್ಗೆ ಕಲ್ಪನೆ ಭಿನ್ನವಾಗಿತ್ತು. ಡೀ ಹೋಕ್ ಅವನ್ನೆಲ್ಲ ಬದಲಿಸಿದ. ಡೆಪಾಜಿಟ್, ಶಾಖೆ, ಸಾಲ, ಬಡ್ಡಿಯೇ ಬ್ಯಾಂಕಿನ ಮುಖ್ಯ ಕಸುಬು ಆಗಬೇಕಿಲ್ಲ. ಅವೇ ಬ್ಯಾಂಕ್ ಅಲ್ಲ ಎಂದು ತೋರಿಸಿಕೊಟ್ಟ. ಹಣ ಅಂದ್ರೆ ಏನು? ಹಣ ಕರೆನ್ಸಿ ನೋಟಿನ ಆಕಾರದಲ್ಲಿ, ರೂಪದಲ್ಲಿ ಮಾತ್ರ ಇರಬೇಕಾ? ಹಣವನ್ನು ಬಹೂಪಯೋಗಿಯಾಗಿ ಬೇರೆ ಸ್ವರೂಪದಲ್ಲಿ ಹೊಂದುವುದು ಹೇಗೆ? ಡೀ ಹೋಕ್‌ನ ಚಿಂತನೆಯ ಫಲವಾಗಿ ಕ್ರೆಡಿಟ್ ಕಾರ್ಡುಗಳು ಹುಟ್ಟಿಕೊಂಡವು. ಕರೆನ್ಸಿಯ ಮತ್ತೊಂದು ಅವತಾರ ಜನ್ಮತಾಳಿತು. ದೇಶ, ಭಾಷೆ, ಗಡಿ, ಕರೆನ್ಸಿ, ಧರ್ಮವನ್ನು ಮೀರಿ ಕ್ರೆಡಿಟ್ ಕಾರ್ಡ್ ಸಮ್ಮತಿ ಪಡೆಯಿತು. ಡೀ ಹೋಕ್‌ನ ವಿಸಾ ಕಾರ್ಡ್ 200 ದೇಶಗಳಲ್ಲಿ ಸುಮಾರು 20 ಸಾವಿರ ಹಣಕಾಸು ಸಂಸ್ಥೆಗಳಲ್ಲಿ ಚಲಾವಣೆಗೆ ಬಂತು. ಈಗ ಇದು 1.25 ಟ್ರಿಲಿಯನ್ ಡಾಲರ್ ವ್ಯವಹಾರ ಮಾಡುವ ಸಂಸ್ಥೆ!

1970ರಿಂದ ವಿಸಾ ಕಾರ್ಡ್ ಶೇ. 10 ಸಾವಿರದಷ್ಟು ಬೆಳೆದಿದೆ. ಪ್ರತಿವರ್ಷ ಶೇ.200ರಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದೆ. ಅರ್ಧ ಶತಕೋಟಿ ಮಂದಿ ವಿಸಾ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ವಿಸಾಕಾರ್ಡ್ ಹೆಸರನ್ನು ಕೇಳದವರೇ ಇಲ್ಲ. ಹಾಗೆಂದು ವಿಸಾ ಕಾರ್ಡ್‌ನ ಹೆಡ್‌ಕ್ವಾರ್ಟರ್ಸ್ ಎಲ್ಲಿದೆ, ಯಾರು ಅದನ್ನು ಆರಂಭಿಸಿದರು, ಅದನ್ನು ನಿಯಂತ್ರಿಸುವವರು ಯಾರು, ಅದರ ಷೇರುಗಳನ್ನು ಖರೀದಿಸುವುದು ಎಲ್ಲಿ, ಅದರ ಯಜಮಾನ ಯಾರು ಅಂತ ಕೇಳಿ. ಹೆಚ್ಚಿನ ಜನರಿಗೆ ಗೊತ್ತಿಲ್ಲ. ಡೀ ಹೋಕ್ ಹೇಳುವಂತೆ ವಿಸಾ ಒಂದು ಅಗೋಚರ ಸಂಸ್ಥೆ ಹಾಗೂ ಅದು ಹಾಗೇ ಇರಬೇಕು. ದುಡ್ಡೇ ಇಲ್ಲದೇ ಇದು ಕೋಟ್ಯಂತರ ರೂಪಾಯಿ ನಗದು ವ್ಯವಹಾರ ಮಾಡುವಂತಾಗಿದ್ದರೆ ಅದಕ್ಕೆ ಡೀ ಹೋಕ್‌ನ ವಿಸಾ ಕಾರ್ಡ್ ಕಲ್ಪನೆ ಕಾರಣವಾಗಿದೆ. ದುಡ್ಡಿಗೆ ಪ್ರತಿದುಡ್ಡು ಸೃಷ್ಟಿಸಿದ ಮಾಂತ್ರಿಕ. ದುಡ್ಡಿಗೆ ಪ್ರತಿಯಾಗಿ ಪ್ಲಾಸ್ಟಿಕ್‌ಹಣ ಕೊಟ್ಟ ಆಧುನಿಕ ಬ್ಯಾಂಕರ್. ಅದಕ್ಕಿಂತ ಮುಖ್ಯವಾಗಿ ಇಡೀ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸವನ್ನು ಮೂಡಿಸಿದವರು. ಇಂದು ಕಳ್ಳನೋಟು ತಯಾರಿಸಬಹುದು ಆದರೆ ಕಳ್ಳ ಕ್ರೆಡಿಟ್‌ಕಾರ್ಡ್ ತಯಾರಿಸಲಾಗದು. ಡೀ ಹೋಕ್‌ನ ದೃಷ್ಟಿ ಹೊಸ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಎಲ್ಲವನ್ನೂ ನಾವೇ ಮಾಡಬೇಕಿಲ್ಲ. ಮಾಡಲು ಕುಳಿತರೆ ಎಲ್ಲವನ್ನೂ ಮಾಡಿ ಮುಗಿಸಲಾಗುವುದಿಲ್ಲ. ಈ ಚಿಂತನೆ ಅದ್ಯಾವನಿಗೊ ಹೊಳೆಯಿತು. ಆತ ಕೆಲಸ ಮಾಡುವುದನ್ನು ಬಿಟ್ಟ. ಬರೀ ಯೋಚಿಸಲಾರಂಭಿಸಿದ. ಚಿಂತನೆಯಲ್ಲಿ ಮುಳುಗಿದ.

ನೈಕಿ ಹಾಗೂ ರೀಬಾಕ್ ಎಂಬ ಬೂಟು ತಯಾರಿಕೆ, ಕ್ರೀಡಾ ಸಾಮಗ್ರಿ ಹಾಗೂ ಸಿದ್ಧ ಉಡುಪುಗಳ ಕಂಪನಿಗಳ ಹೆಸರುಗಳನ್ನು ಕೇಳಿರಬಹುದು. ಈ ಕಂಪನಿಗಳ ಉತ್ಪನ್ನಗಳು ಮಾರಾಟವಾಗದ ದೇಶಗಳಿರಲಿಕ್ಕಿಲ್ಲ. ಇವುಗಳ ಲೋಗೊಗಳನ್ನು ಧರಿಸದ ಕ್ರೀಡಾಪಟುಗಳಿರಲಿಕ್ಕಿಲ್ಲ. ತಮಾಷೆಯೆಂದರೆ ಈ ಕಂಪನಿಗಳು ಎಲ್ಲಿಯೂ ಸಹ ಸ್ವಂತ ತಯಾರಿಕಾ ಘಟಕವನ್ನಾಗಲಿ, ಫ್ಯಾಕ್ಟರಿಯನ್ನಾಗಲಿ, ಮಾರಾಟ ಮಳಿಗೆಯನ್ನಾಗಲಿ ಹೊಂದಿಲ್ಲ. ಆದರೂ ಇವರೆಡರದೇ ಏಕಸ್ವಾಮ್ಯ'. ತಮ್ಮ ಉತ್ಪನ್ನಗಳ ವಿನ್ಯಾಸ ರೂಪಿಸುವುದಷ್ಟೇ ಕೆಲಸ. ತಯಾರಿಕೆಯ ಅನುಮತಿ, ಗುತ್ತಿಗೆಯನ್ನು ಬೇರೆ ಬೇರೆಯವರಿಗೆ ವಹಿಸಿಕೊಡುತ್ತವೆ. ಅವುಗಳದ್ದೇನಿದ್ದರೂ ಬೌದ್ಧಿಕ ಕಾರ್ಯ, ಭೌತಿಕವಲ್ಲ.

ಬಳಕುವ, ತೆಳ್ಳಗಿನ ಹುಡುಗಿಯ ಚಿತ್ರ ಬರೆಯಿರಿ ಎಂದು ಕಲಾವಿದರಿಗೆ ಹೇಳಿದರೆ, ಎಂದಿನ ಕ್ರಮದಲ್ಲಿ ಯೋಚಿಸುವವನು ಸಪೂರ ಕಡ್ಡಿಯಂಥ, ಸಣಕಲು ಶರೀರದ ಹುಡುಗಿ ಚಿತ್ರ ಬಿಡಿಸುತ್ತಾನೆ. ಅದೇ ಸೃಜನಶೀಲ ಕಲಾವಿದ ಒಂದು ಸಪೂರ ಗೆರೆ ಎಳೆದು ಸುಮ್ಮನಾಗುತ್ತಾನೆ. ಹುಡುಗಿ ಎಲ್ಲಿ ಎಂದು ಕೇಳಿದರೆ, ಆಕೆ ಗೆರೆಯ ಹಿಂಬದಿಯಲ್ಲಿ ಅವಿತಿದ್ದಾಳೆ. ಹೀಗಾಗಿ ಕಾಣಿಸುತ್ತಿಲ್ಲ. ಸಪೂರ ಗೆರೆಗಿಂತ ಸಪೂರದವಳು ಅಂತಾನೆ. ದೇಬಾಶಿಶ್ ಮಾತುಗಳನ್ನು ಕೇಳುತ್ತಿದ್ದರೆ ಅವರ ಬಗೆಗಿರುವ ದೃಷ್ಟಿಕೋನವೂ ಬದಲಾಗುತ್ತದೆ. ಹಾಗಂತ ಅನಿಸುವುದಿಲ್ಲವಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more