• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ವರ್ಷ ಭವಿಷ್ಯ; ತುಲಾ ರಾಶಿಯಿಂದ ಮೀನ ರಾಶಿವರೆಗೆ

By ದೈವಜ್ಞ ಲಕ್ಷ್ಮೀನಾರಾಯಣ ಭಟ್
|
Google Oneindia Kannada News

2019ನೇ ಇಸವಿಯು ನಿಮ್ಮ ಪಾಲಿಗೆ ಹೇಗಿರಲಿದೆ? ಅದನ್ನು ತಿಳಿಸುವ ಸಲುವಾಗಿ ದ್ವಾದಶ ರಾಶಿಗಳ ವರ್ಷ ಭವಿಷ್ಯವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಮೊದಲ ಕಂತಿನಲ್ಲಿ ಮೇಷದಿಂದ ಕನ್ಯಾ ರಾಶಿಯವರೆಗೆ ಈಗಾಗಲೇ ಪ್ರಕಟವಾಗಿದೆ. ಇದೀಗ ಎರಡನೇ ಕಂತಿನಲ್ಲಿ ತುಲಾದಿಂದ ಮೀನ ರಾಶಿಯವರೆಗಿನ ಭವಿಷ್ಯವನ್ನು ತಿಳಿಸಲಾಗುತ್ತಿದೆ.

ವರ್ಷ ಭವಿಷ್ಯ ಎಂದಾಕ್ಷಣ ಕೆಲವರು ತಕರಾರು ಆರಂಭಿಸುತ್ತಾರೆ. ಜನವರಿ ಎಂಬುದು ಕ್ರೈಸ್ತರ ಹೊಸ ವರ್ಷದ ಆರಂಭ. ಅದು ಹೇಗೆ ವರ್ಷ ಭವಿಷ್ಯ ಎಂದು ಬರೆಯುತ್ತೀರಿ ಎಂಬುದು ಅವರ ತಕರಾರು. ಅಂತಹವರು ತಮ್ಮ ನಿತ್ಯದ ವ್ಯವಹಾರದಲ್ಲೂ ಬ್ಯಾಂಕ್ ಮತ್ತಿತರ ಕಡೆ ಕೂಡ ಇಂತಹ ಸಂವತ್ಸರ, ಮಾಸದ, ಇಂತಹ ತಿಥಿಯಂದು ಎಂದು ಬರೆಯುತ್ತಾರಾ ಎಂದು ಪ್ರಶ್ಸ್ನಿಸಿದರೆ ಹ್ಹೆ ಹ್ಹೆ ಹ್ಹೆ ಅದು ಹೇಗೆ ಸಾಧ್ಯ ಎನ್ನುತ್ತಾರೆ.

ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!

ಜನವರಿ ತಿಂಗಳು ಹಿಂದೂ ಸಂಪ್ರದಾಯದ ಅನ್ವಯ ಹೊಸ ವರ್ಷ ಅಲ್ಲ. ಯುಗಾದಿಯನ್ನೇ ಹೊಸ ಸಂವತ್ಸರ ಎಂದು ಪರಿಗಣಿಸಲಾಗುತ್ತದೆ. ಆದರೆ ಲೋಕಾರೂಢಿಯ ಪ್ರಕಾರ ಜನವರಿ ತಿಂಗಳಿಂದಲೇ ಹೊಸ ವರ್ಷದ ಆಚರಣೆ ಹಾಗೂ ಅನುಷ್ಠಾನ ಜಾರಿಯಲ್ಲಿ ಇರುವುದರಿಂದ ಈ ವರ್ಷ ಭವಿಷ್ಯವನ್ನು ನೀಡಲಾಗುತ್ತಿದೆ.

ಉತ್ತಮವಾದ ಫಲಗಳಿದ್ದರೆ ಅವಕಾಶಗಳನ್ನು ಬಳಸಿಕೊಳ್ಳಿ. ಎಚ್ಚರಿಕೆಯ ಮಾತುಗಳಿದ್ದರೆ ಮುಂಜಾಗ್ರತೆಯನ್ನು ವಹಿಸಿ. ಒಟ್ಟಾರೆಯಾಗಿ ಎಲ್ಲರಿಗೂ ಶುಭವಾಗಲಿ.

ತುಲಾ: ಉದ್ಯೋಗದಲ್ಲಿ ಬಡ್ತಿ, ಆದಾಯದಲ್ಲಿ ಹೆಚ್ಚಳ ಸಾಧ್ಯತೆ

ತುಲಾ: ಉದ್ಯೋಗದಲ್ಲಿ ಬಡ್ತಿ, ಆದಾಯದಲ್ಲಿ ಹೆಚ್ಚಳ ಸಾಧ್ಯತೆ

ಏರಿಕೆ ಹಾಗೂ ಇಳಿಕೆ ಎರಡನ್ನೂ ಕಾಣುವಂತಾಗುತ್ತದೆ. ಸಾಮಾಜಿಕವಾಗಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಹಣಕಾಸು ಸ್ಥಿತಿ ಉತ್ತಮವಾದರೂ ಗಳಿಕೆ ಹಾದಿಯಲ್ಲಿ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಆಗುತ್ತದೆ. ಒತ್ತಡ ಹಾಗೂ ಉದ್ವಿಗ್ನತೆ ಎದುರಾಗುತ್ತದೆ. ಬಾಳಸಂಗಾತಿ ಜತೆಗಿನ ಸಂಬಂಧ ಕೂಡ ಆತಂಕಕ್ಕೆ ಕಾರಣವಾಗುತ್ತದೆ.


ಆದ್ದರಿಂದ ತಾಳ್ಮೆಯಿಂದ ಇರುವುದನ್ನು ರೂಢಿ ಮಾಡಿಕೊಳ್ಳಿ. ಸಣ್ಣ-ಪುಟ್ಟ ವಿಚಾರಕ್ಕೂ ಸಿಡುಕುವುದು ಒಳ್ಳೆಯದಲ್ಲ. ಒಂದು ಕಡೆ ಸಾಮಾಜಿಕವಾಗಿ ಮನ್ನಣೆ- ಗೌರವ ದೊರೆಯುತ್ತದೆ. ಮತ್ತೊಂದು ಕಡೆಯಿಂದ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ ಆಗುತ್ತದೆ. ಯಾವುದೇ ಅವಕಾಶ ಸಿಕ್ಕರೂ ಮಾನಸಿಕ ಸ್ಥಿರತೆಯಿಂದ ಅದನ್ನು ಬಳಸಿಕೊಳ್ಳಿ. ಯಾವುದೇ ಭಿನ್ನಾಭಿಪ್ರಾಯ, ವಾಗ್ವಾದ ಬೇಡ.

ನಿಮಗೆ ಬೇಕಾದ ಸ್ಥಳ, ಇಲಾಖೆಗೆ ವರ್ಗಾವಣೆ ಮಾಡುವ ಅವಕಾಶಗಳಿವೆ. ಇನ್ನು ಮನಸ್ಸಿನಲ್ಲಿ ವಿವರಿಸಲು ಸಾಧ್ಯವಿಲ್ಲದಂಥ ಆತಂಕವೊಂದು ಕಾಡುತ್ತಲೇ ಇರುತ್ತದೆ. ಉನ್ನತ ವ್ಯಾಸಂಗವೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಿದೇಶ ಪ್ರವಾಸ ಮಾಡುವ ಅವಕಾಶಗಳಿವೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಿ.

ನಿಮ್ಮ ಆದಾಯ ಮೂಲದಲ್ಲಿ ಅಂದರೆ ಉದ್ಯೋಗ ಮಾಡುತ್ತಿರುವವರಿಗೆ ಬಡ್ತಿ, ಆದಾಯದಲ್ಲಿ ಹೆಚ್ಚಳ ಸಂತಸ ತರಲಿದೆ. ಈ ಮುಂಚೆಗಿಂತ ಆರ್ಥಿಕವಾಗಿ ಹೆಚ್ಚು ದೃಢವಾಗುತ್ತೀರಿ. ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ. ಭವಿಷ್ಯದ ಸಾಧ್ಯತೆಗಳನ್ನು ಗುರುತಿಸಲು ಪ್ರಯತ್ನಿಸಿ, ಮುಂಜಾಗ್ರತೆಯಿಂದ ಕಾರ್ಯ ನಿರ್ವಹಿಸಿ.

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳದಿಂದ ಸಂತಸ

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳದಿಂದ ಸಂತಸ

ಈ ವರ್ಷ ನಿಮ್ಮದೇ ಆದ ಲಾಭ-ನಷ್ಟಗಳಿವೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಭಾರೀ ಅನುಕೂಲ ಆಗಲಿದೆ. ಬಡ್ತಿ, ವೇತನ ಹೆಚ್ಚಳ ಆಗಲಿದೆ. ವರ್ಷದ ಆರಂಭದಲ್ಲೇ ನಿಮ್ಮ ಶ್ರಮದ ಪ್ರತಿಫಲ ಸಿಗಲಿದೆ. ಆಹಾರ ಪಥ್ಯ ಹಾಗೂ ವ್ಯಾಯಾಮದ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು.


ಜೂನ್-ಜುಲೈನಲ್ಲಿ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದು ನಿಮಗೆ ಬಹಳ ಕಷ್ಟವಾಗುತ್ತದೆ. ಈ ಅವಧಿಯಲ್ಲಿ ಗೊಂದಲಗಳು ಹೆಚ್ಚಾಗುತ್ತವೆ. ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಇನ್ನು ವಿದೇಶ ಪ್ರಯಾಣದ ಯೋಗವಿದೆ. ನೀವಾಗಿಯೇ ತಪ್ಪಿಸಿಕೊಂಡರೆ ಅದಕ್ಕೆ ಬೇರೆಯವರು ಹೊಣೆ ಅಲ್ಲ.

ಧಾರ್ಮಿಕ ಕಾರ್ಯಕ್ರಮಗಳು, ದೇವತಾ ಕಾರ್ಯಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣ ಕೂಡ ಚಿಂತೆಗೆ ಕಾರಣ ಆಗಲಿದೆ. ಏನು ಸಮಸ್ಯೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತದೆ. ವ್ಯಾಪಾರಸ್ಥರಿಗೆ ವ್ಯವಹಾರ ವಿಸ್ತರಣೆಗೆ ಸೂಕ್ತ ಕಾಲ ಇದಾಗಲಿದೆ. ಹೊಸ ಗ್ರಾಹಕರು ಸೇರ್ಪಡೆ ಆಗಲಿದ್ದಾರೆ. ಹೊಸ ಆಲೋಚನೆಗಳು ಅನುಷ್ಠಾನಕ್ಕೆ ತರಬಹುದು.

ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದರ ಜತೆಗೆ ವೃತ್ತಿ ಬದುಕು ಮೇಲ್ಮಟ್ಟಕ್ಕೆ ಏರುತ್ತದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಿದ್ದಲ್ಲಿ ಬಗೆಹರಿಸಿಕೊಳ್ಳುತ್ತೀರಿ. ಕಾನೂನು ಸಮಸ್ಯೆಗಳು ಹಲವು ನಿವಾರಣೆಯಾಗಿ, ಮಾನಸಿಕ ನೆಮ್ಮದಿ ದೊರೆಯುತ್ತದೆ. ಯೋಗ-ಪ್ರಾಣಾಯಾಮ ರೂಢಿ ಮಾಡಿಕೊಳ್ಳಿ. ಸಂಬಂಧಿಕರು ಹಾಗೂ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯ ಉದ್ಭವಿಸುವ ಅವಕಾಶ ಇರುವುದರಿಂದ ಹಣಕಾಸು ವ್ಯವಹಾರ ಮಾಡುವಾಗ ಬಹಳ ಜಾಗ್ರತೆಯಿಂದ ಇರಬೇಕು.

ಧನುಸ್ಸು: ಪ್ರಯಾಣದ ವೇಳೆ ಜಾಗ್ರತೆಯಿಂದ ಇರಬೇಕು

ಧನುಸ್ಸು: ಪ್ರಯಾಣದ ವೇಳೆ ಜಾಗ್ರತೆಯಿಂದ ಇರಬೇಕು

ಅನಿರೀಕ್ಷಿತವಾದ ಅವಕಾಶಗಳು ಹಾಗೂ ಸನ್ನಿವೇಶಗಳನ್ನು ಎದುರುಗೊಳ್ಳುತ್ತೀರಿ. ಕಲಿಕೆಗೆ, ಗ್ರಹಿಕೆಗೆ, ಬೆಳವಣಿಗೆಗೆ ಹಾಗೂ ಕಾರ್ಯಗಳ ಅನುಷ್ಠಾನಕ್ಕೆ ಹಲವು ಅವಕಾಶ ದೊರೆಯುತ್ತದೆ. ತೀರ್ಥ ಕ್ಷೇತ್ರಗಳಿಗೆ ಹೆಚ್ಚು ಪ್ರಯಾಣ ಮಾಡಲಿದ್ದೀರಿ. ಆಧ್ಯಾತ್ಮಿಕ ವಿಚಾರಗಳ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆದರೆ ಏಪ್ರಿಲ್ ನಿಂದ ಆಗಸ್ಟ್ ತನಕ ಪ್ರಯಾಣದ ವೇಳೆ ಬಹಳ ಜಾಗ್ರತೆಯಿಂದ ಇರಬೇಕು.

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಾರಿಗಳು ಲಾಭ ನೋಡಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಸ್ಥಿರತೆ ಸಾಧಿಸಲು ಅವಕಾಶ ದೊರೆಯುತ್ತದೆ. ಸಂಪಾದನೆ ಮಾಡುವಷ್ಟು ಹಿರಿಯ ವಯಸ್ಸಿನ ಮಕ್ಕಳಿರುವವರಿಗೆ ಅವರಿಂದ ಹಣಕಾಸಿನ ನೆರವು ದೊರೆಯಲಿದೆ. ಅದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲವು ಕೆಲಸಗಳಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಅದರಲ್ಲೂ ಕಳೆದ ವರ್ಷ ಆರಂಭಿಸಿ, ನನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ.

ಕೌಟುಂಬಿಕ ಸಂಬಂಧದಲ್ಲಿ ಭಾರೀ ಒತ್ತಡ ಏರ್ಪಡುತ್ತದೆ. ಜಗಳ, ಕದನ, ವಾಗ್ವಾದಗಳು ನಡೆಯುತ್ತವೆ. ಹೇಗಾದರೂ ಸರಿ, ಇಂಥ ಸನ್ನಿವೇಶ ಎದುರಾಗದಂತೆ ನೋಡಿಕೊಂಡರೆ ದೀರ್ಘಾವಧಿಯಲ್ಲಿ ನೆಮ್ಮದಿಯಾಗಿರಬಹುದು. ನಿಮ್ಮ ತಿಳಿವಳಿಕೆ ಬಳಸಿಯೇ ತೀರ್ಮಾನಗಳನ್ನು ತೆಗೆದುಕೊಂಡರೆ ಸರಿಯಾದ ಫಲಿತಾಂಶವನ್ನು ಕಾಣಬಹುದು.

ನಿಮಗೆ ಸಂಬಂಧಪಡದ ವಿಚಾರದಲ್ಲಿ ತಲೆ ಹಾಕಲು ಹೋಗಬೇಡಿ. ಹಾಗೆ ಮಾಡಿದರೆ ಅವಮಾನಕ್ಕೆ ಗುರಿಯಾಗುತ್ತೀರಿ. ವಿವಾಹೇತರ ಸಂಬಂಧಗಳ ಕಡೆಗೆ ಆಕರ್ಷಿತರಾಗಬೇಡಿ. ನೈತಿಕವಾಗಿಯೂ ಅದು ತಪ್ಪು. ಜತೆಗೆ ಸದ್ಯದ ಸಂಬಂಧದಲ್ಲಿ ಭಾರೀ ವಿರಸ ತಂದಿಡಲಿದೆ. ಆದ್ದರಿಂದ ಯಾವುದೇ ಸಮರ್ಥನೆ ಕೊಟ್ಟುಕೊಳ್ಳದೆ ಇಂಥ ಸಂಬಂಧಗಳಿಂದ ದೂರವಿರಿ.

ಮಕರ: ಹಣಕಾಸು ಸ್ಥಿತಿ ಚೆನ್ನಾಗಿರುವಾಗಲೇ ಉಳಿತಾಯ ಮಾಡಿಟ್ಟುಕೊಳ್ಳಿ

ಮಕರ: ಹಣಕಾಸು ಸ್ಥಿತಿ ಚೆನ್ನಾಗಿರುವಾಗಲೇ ಉಳಿತಾಯ ಮಾಡಿಟ್ಟುಕೊಳ್ಳಿ

ನಿಮಗೆ ಪೂರಕವಾದ ವರ್ಷ ಇದು. ಹಣಕಾಸು ಅನುಕೂಲ, ವಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಏಳ್ಗೆ ಕಂಡುಬರುತ್ತದೆ. ಇದೇ ವೇಳೆ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಣಕಾಸು ಕೂಡಿಟ್ಟುಕೊಳ್ಳುವುದು ಬಹಳ ಮುಖ್ಯ. ಆದಷ್ಟು ಮಾತು ಕಡಿಮೆ ಮಾಡಿ, ಕೆಲಸದ ಕಡೆಗೆ ನಿಮ್ಮ ಗಮನ ಹರಿಸಿ. ತರ್ಕಬದ್ಧವಾಗಿ ಆಲೋಚಿಸಿ, ವಾಸ್ತವದ ಸನ್ನಿವೇಶಗಳ ಮೇಲೆ ಒಂದು ಕಣ್ಣಿರಿಸಿ.

ನಿಮ್ಮ ಹೂಡಿಕೆ ಹಾಗೂ ಉಳಿತಾಯದ ಬಗ್ಗೆ ಇಷ್ಟು ಸಮಯ ನಿಮಗಿದ್ದ ಆತಂಕ ದೂರ ಸರಿಯುತ್ತದೆ. ಅನಿರೀಕ್ಷಿತವಾದ ಲಾಭವಾಗುತ್ತದೆ. ಲಾಟರಿ ಬರಬಹುದು ಅಥವಾ ಬಡ್ತಿ ಸಿಗಬಹುದು ಅಥವಾ ನೀವು ಹೂಡಿಕೆ ಮಾಡಿದ್ದ ಷೇರಿನ ಬೆಲೆಯಲ್ಲಿ ದಿಢೀರ್ ಏರಿಕೆ ಆಗಬಹುದು.

ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ವಿಭಿನ್ನವಾದ ಆಲೋಚನೆ ಮೂಲಕ ಉದ್ಯೋಗ ಸ್ಥಳದಲ್ಲಿ ಎಲ್ಲರ ಮೆಚ್ಚುಗೆ ಪಡೆಯಿರಿ. ಅನಗತ್ಯ ವಸ್ತುಗಳ ಮೇಲೆ ವಿಪರೀತ ಖರ್ಚು ಮಾಡಬೇಡಿ. ವರ್ಷದ ಮಧ್ಯಭಾಗದಲ್ಲಿ ಖರ್ಚುವೆಚ್ಚ ಹೆಚ್ಚಾಗಲಿದೆ. ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ದೀರ್ಘಾವಧಿ ಯೋಜನೆ ಜಾರಿಗೆ ತರಲು ಸೂಕ್ತ ಸಮಯ. ರುಚಿಕಟ್ಟಾದ ಊಟ ವರ್ಷವಿಡೀ ಸವಿಯುತ್ತೀರಿ.

ಸಂಬಂಧದ ವಿಚಾರದಲ್ಲಿ ಅನಗತ್ಯ ಆತಂಕ, ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ಹೃದಯದೊಳಗಿನ ಆಸೆಯನ್ನು ಹೇಳಿಕೊಳ್ಳದೆ ಎದುರಿನವರಿಗೆ ಗೊತ್ತಾಗಬೇಕು ಅಂದುಕೊಂಡರೆ ಹೇಗೆ? ಆದ್ದರಿಂದ ನಿಮ್ಮ ಪ್ರೀತಿ ಪಾತ್ರರಿಗೆ ಸ್ಪಷ್ಟವಾದ ಮಾತುಗಳಲ್ಲಿ ವಿಚಾರವನ್ನು ದಾಟಿಸಿ. ಉಳಿದಂತೆ ಹಲವು ಬಗೆಯಿಂದ ಸಕಾರಾತ್ಮಕ ಫಲಿತಾಂಶ ನಿಮ್ಮ ಪಾಲಿಗಿದೆ.

ಕುಂಭ: ದೇಶ- ವಿದೇಶ ಸುತ್ತಾಡುವ ಯೋಗ ಇದೆ

ಕುಂಭ: ದೇಶ- ವಿದೇಶ ಸುತ್ತಾಡುವ ಯೋಗ ಇದೆ

ತಾಳ್ಮೆ ಈ ವರ್ಷ ಬಹಳ ಮುಖ್ಯವಾಗುತ್ತದೆ. ಈ ವರೆಗೆ ಸಂಯಮ ತೋರಿಸಿದ್ದೀರಿ. ಈಗ ಇನ್ನಷ್ಟು ಜಾಗರೂಕತೆಯಿಂದ ವರ್ತಿಸಬೇಕಿದೆ. ಯಾವುದೇ ಪರಿಸ್ಥಿತಿ-ಸನ್ನಿವೇಶದ ವಿಶ್ಲೇಷಣೆ ಮಾಡುವುದರಲ್ಲಿ ನೀವು ನಿಸ್ಸೀಮರು. ಆ ಗುಣವು ನಿಮಗೆ ವರವಾಗಿ ಪರಿಣಮಿಸಲಿದೆ. ಪ್ರಮುಖವಾದ ತೀರ್ಮಾನವನ್ನು ಸರಿಯಾಗಿ ತೆಗೆದುಕೊಳ್ಳುವ ಮೂಲಕ ವಿಷವನ್ನೂ ಔಷಧವಾಗಿ ಮಾರ್ಪಡಿಸುತ್ತೀರಿ.

ಇಷ್ಟು ಸಮಯ ನಂಬಿಕೆಯನ್ನೇ ಕಳೆದುಕೊಂಡಿದ್ದ ವಿಚಾರದ ಬಗ್ಗೆ ಮತ್ತೆ ಭರವಸೆ ಇಟ್ಟುಕೊಳ್ಳಬಹುದು. ನಿಮ್ಮ ಗುರಿಯನ್ನು ಪುನರ್ ಪರಿಶೀಲಿಸಿ, ಬದಲಾವಣೆ ಮಾಡಿಕೊಂಡು, ಅದನ್ನು ಸಾಧಿಸುವ ಕಡೆಗೆ ಹೆಜ್ಜೆಗಳನ್ನು ಇಡುತ್ತೀರಿ. ಆತ್ಮವಿಶ್ವಾಸ ಸಹಕಾರ ನೀಡುತ್ತದೆ. ದೇಶ-ವಿದೇಶಗಳನ್ನು ಸುತ್ತಾಡಲು ವರ್ಷದ ಆರಂಭದಿಂದಲೇ ಸಿದ್ಧರಾಗಿ. ವರ್ಷದ ಬಹು ಸಮಯ ಮನೆಯಿಂದ ಹೊರಗೇ ಇರಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ.

ಸ್ನೇಹಿತರ ಸಹಕಾರ ದೊಡ್ಡ ಮಟ್ಟದಲ್ಲಿ ದೊರೆಯುತ್ತದೆ. ಪ್ರಣಯ, ಪ್ರೀತಿ-ಪ್ರೇಮ, ವೈವಾಹಿಕ ಸಂಬಂಧಗಳಲ್ಲಿ ಸುಮಧುರವಾದ ಕ್ಷಣಗಳನ್ನು ಅನುಭವಿಸುತ್ತೀರಿ. ಹಲವು ಸನ್ನಿವೇಶಗಳಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಗಟ್ಟಿತನ ಹೆಚ್ಚಾಗುತ್ತದೆ. ಮನೆ ಅಥವಾ ಕಚೇರಿ ದುರಸ್ತಿಗಾಗಿ ಹಣ-ಕಾಸು ವ್ಯಯ ಮಾಡುವ ಸಾಧ್ಯತೆ ಇದೆ.

ಕುಟುಂಬದಲ್ಲಿನ ಸಂಬಂಧಗಳನ್ನು ಹೆಚ್ಚು ಆಸ್ಥೆಯಿಂದ ಕಾಪಾಡಿಕೊಳ್ಳಬೇಡ್ಕು. ಏಕೆಂದರೆ ನಿಮ್ಮ ಜತೆಗೆ ಹೇಳಿಕೊಳ್ಳಬೇಕಾದ ವಿಚಾರ ಸಾಕಷ್ಟಿರುವಾಗ ಕೆಲಸದ ನೆಪ ಹೇಳಿ ನಿಮ್ಮದೇ ಲೋಕದಲ್ಲಿ ಉಳಿದುಕೊಂಡರೆ ಅಸಮಾಧಾನಕ್ಕೆ ಕಾರಣರಾಗುತ್ತೀರಿ. ದುಡ್ಡು ಕೊಟ್ಟ ಮಾತ್ರಕ್ಕೆ ನನ್ನ ಜವಾಬ್ದಾರಿ ಪೂರ್ಣವಾಯಿತು ಎಂಬ ಧೋರಣೆ ಬೇಡ.

ಮೀನ: ಬುದ್ಧಿವಂತಿಕೆಗೆ ಶ್ಲಾಘನೆ ದೊರೆಯಲಿದೆ, ಅಹಂಕಾರ ಬೇಡ

ಮೀನ: ಬುದ್ಧಿವಂತಿಕೆಗೆ ಶ್ಲಾಘನೆ ದೊರೆಯಲಿದೆ, ಅಹಂಕಾರ ಬೇಡ

ನನ್ನ ಬುದ್ಧಿವಂತಿಕೆಯಿಂದ ಪ್ರಯೋಜನ ಏನು ಎಂದು ಹಲಬುತ್ತಿದ್ದವರಿಗೆ ಈ ವರ್ಷ ಅದರ ಫಲ ದೊರೆಯಲಿದೆ. ಹಾಗಂತ ನಿಮ್ಮ ತಿಳಿವಳಿಕೆ, ಜ್ಞಾನ, ಬುದ್ಧಿವಂತಿಕೆಗೆ ಸಿಕ್ಕ ಗೌರವದಿಂದ ಅಹಂಕಾರವನ್ನು ತಲೆಗೆ ಏರಿಸಿಕೊಳ್ಳಬೇಡಿ. ಅಹಂಕಾರ ತ್ಯಜಿಸಿ, ಆಗಬೇಕಾದ ಕೆಲಸದ ಕಡೆಗೆ ಮಾತ್ರ ಗಮನ ನೀಡಿ.

ಮನೆಯಲ್ಲಿ ನೀವೇ ಬಗೆಹರಿಸಬೇಕಾದ ಕೆಲವು ವಿಷಯಗಳಿವೆ. ಅದಕ್ಕಾಗಿ ಸಮಯ ಮೀಸಲಿಡಿ. ನಿಮ್ಮ ಸ್ನೇಹಿತರು-ಬಂಧುಗಳು ಸಲಹೆ ಕೇಳುತ್ತಾರೆ. ಸಾಧ್ಯವಾದ ಉತ್ತಮ ಆಯ್ಕೆಗಳನ್ನು ತಿಳಿಸಿ. ಆದರೆ ವಯಕ್ತಿಕವಾಗಿ ಕೆಲವು ಆಯ್ಕೆಗಳಲ್ಲಿ ನಿಮಗೆ ಗೊಂದಲ ಎದುರಾಗುತ್ತದೆ. ಅಂಥ ಸನ್ನಿವೇಶದಲ್ಲಿ ಪೂರ್ವಗ್ರಹರಾಗಿ ಯೋಚಿಸಬೇಡಿ.

ಬಹಳ ಕಾಲದಿಂದ ಪಟ್ಟ ಶ್ರಮ, ಗುರಿಯನ್ನು ಸಾಧಿಸಲು ಹಲವಾರು ಅವಕಾಶಗಳು ಒಟ್ಟಿಗೆ ತೆರೆದುಕೊಳ್ಳುತ್ತವೆ. ಯಾರು, ಏನು ಅಂದುಕೊಳ್ಳುತ್ತಾರೋ ಎಂದು ಮಾತನಾಡಲು ಹಿಂಜರಿಯುತ್ತಿದ್ದ ವಿಚಾರಗಳನ್ನೆಲ್ಲ ಮುಲಾಜಿಲ್ಲದೆ ತಿಳಿಸುತ್ತೀರಿ. ಆದರೆ ಕೆಲವು ವಿಷಯಗಳು ನಡೆಯಲು ಸಮಯ ಬೇಕಾಗುತ್ತದೆ. ಕೆಲವು ಏರಿಕೆ-ಇಳಿಕೆ ನೋಡಿದ ಮೇಲೆ ಅಂದುಕೊಂಡ ಫಲಿತಾಂಶ ಪಡೆಯುತ್ತೀರಿ.

ವಿದ್ಯಾರ್ಥಿಗಳು ಹೆಚ್ಚು ಗಮನ ಶಿಕ್ಷಣದ ಕಡೆ ನೀಡಲೇಬೇಕಾದ ವರ್ಷ ಇದು. ಏಕೆಂದರೆ ನಿಮ್ಮ ಏಕಾಗ್ರತೆ ಕಡಿಮೆ ಆಗುತ್ತದೆ. ಹೆಚ್ಚು ಶ್ರಮ ಬೇಡುತ್ತದೆ. ಪ್ರೀತಿ-ಪ್ರೇಮ ವಿಷಯಗಳ ಕಡೆಗೆ ವಾಲದಿರುವಂತೆ ಗಮನ ಹರಿಸಿ. ಈ ವರೆಗೆ ನಿಮಗೆ ದೊರೆಯದೆ ಉಳಿದಿದ್ದ ಸವಲತ್ತುಗಳು ಈಗ ದೊರೆಯಲಿವೆ.

English summary
Yearly prediction of 2019 Career, marriage, job, education, money, business etc... from Aries to Pisces zodiac sign. This is the second part. So, Libra to Pisces zodiac sign annual prediction by well known astrologer Lakshminarayan Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X