Weekly Horoscope: ಕನ್ಯಾ ಸೇರಿದಂತೆ ಈ ರಾಶಿಗಳಿಗೆ ಅದೃಷ್ಟ ಕೈ ಹಿಡಿಯುವ ಸಮಯ..ಹಣವೋ ಹಣ..!
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಬಹುಳ ತದಿಗೆಯಿಂದ ನವಮಿಯವರೆಗೆ
ಈ ವಾರದ ಚಂದ್ರನ ಸಂಚಾರ ಪೂರ್ವಾಷಾಢ ನಕ್ಷತ್ರದಿಂದ ರೇವತಿ ವರೆಗೆ
23/06/2024-29/06/2024ರ ವಾರ ಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೂನ್ 23 ರಿಂದ ಜೂನ್ 29ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ಸೂರ್ಯ, ಬುಧ, ಶುಕ್ರರು ಇದ್ದು ಸಮಯ ಬಹಳ ಚೆನ್ನಾಗಿ ಇದೆ. ಹನ್ನೊಂದರ ಶನಿ ಕೂಡ ನಿಮಗೆ ಅಧಿಕ ಧನಲಾಭ ಕೊಡುತ್ತಾನೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ಶುಭ ಸಂಗತಿಗಳು ನಿಮ್ಮನ್ನು ಅರಸಿ ಬರುವ ಸಮಯ. ಅದೃಷ್ಟದ ವಾರ.

ವೃಷಭ ರಾಶಿಯ ವಾರ ಭವಿಷ್ಯ
ಈಗ ನಿಮ್ಮ ರಾಶಿಯಲ್ಲೇ ಗುರು ಶುಭಕಾರ್ಯಕ್ಕೆ ಖರ್ಚು ಮಾಡಿಸುತ್ತಾನೆ. ಆದರೆ ಲಾಭ ಸ್ಥಾನದ ರಾಹು ಅನಿರೀಕ್ಷಿತ ಹಣ ಕೊಡಿಸುತ್ತಾನೆ. ಎರಡನೇ ಮನೆಯಲ್ಲಿ ಸೂರ್ಯ ಶುಕ್ರ ಬುಧ ಕುಟುಂಬದಲ್ಲಿ ಸಂತೋಷ ಸೌಖ್ಯಗಳನ್ನು ಹೆಚ್ಚಿಸುತ್ತಾರೆ. ಮನಸ್ಸಿಗೆ ಮುದ ನೀಡುವಂತೆ ನಿರಾಳವಾಗುವಂತ ಸಂಗತಿಗಳು ನಿಮ್ಮ ಅರಿವಿಗೆ ಬರುತ್ತದೆ.

ಮಿಥುನ ರಾಶಿಯ ವಾರ ಭವಿಷ್ಯ
ಈ ವಾರ ಪೂರ್ತಿ ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಸೂರ್ಯ ಇರುತ್ತಾರೆ ಇದೊಂದು ರಾಜಯೋಗ. ಬಹಳ ಅದೃಷ್ಟ ತರುತ್ತದೆ. ಹನ್ನರಡನೇ ಮನೆಯ ಗುರುವಿನ ತೊಂದರೆಗಳನ್ನು ಅಲ್ಪಮಟ್ಟಿಗೆ ನಿವಾರಣೆ ಮಾಡುತ್ತದೆ. ಲಾಭಸ್ಥಾನದಲ್ಲಿ ಕುಜ ಸ್ವಂತ ಮನೆಯಲ್ಲಿ ಇದ್ದಾನೆ. ಇದು ಸಹ ನಿಮ್ಮ ಧನಯೋಗವನ್ನು ಹೆಚ್ಚು ಮಾಡುತ್ತದೆ. ಸುಮಾರು ದಿನಗಳ ನಂತರ ಕೊಂಚ ಅದೃಷ್ಟದ ಯೋಗ ಈವಾರದಲ್ಲಿ ಅನುಭವಿಸುತ್ತೀರಿ.

ಕಟಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ. ಯಾವುದೇ ಸಮಸ್ಯೆ ಎದುರಾದರೂ ಪರಿಹಾರ ತಕ್ಷಣ ಕಾಣುತ್ತದೆ. ಯೋಚಿಸಿ ಭಯಪಡುವ ಅಗತ್ಯ ಇಲ್ಲ. ಗುರು ಒಂಬತ್ತನೇ ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುತ್ತಾನೆ. ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಇದೆ. ಪವಿತ್ರ ತೀರ್ಥ ಸ್ನಾನದ ಯೋಗ ಇದೆ. ಸಾಧು ಸನ್ಯಾಸಿ ಗುರುಗಳ ದರ್ಶನ ಭಾಗ್ಯ ಇದೆ. ಅವರ ಆಶೀರ್ವಾದ ಪಡೆಯುತ್ತೀರಿ.

ಸಿಂಹ ರಾಶಿಯ ವಾರ ಭವಿಷ್ಯ
ಕೊಂಚ ಒತ್ತಡದ ಜೀವನ. ಸಮಸ್ಯೆಗಳು ಎದುರಾಗುತ್ತದೆ ಆದರೆ ಪರಿಹಾರ ತಕ್ಷಣ ಗೋಚರಿಸುವುದಿಲ್ಲ. ಪರಿಹಾರದ ಹುಡುಕಾಟದಲ್ಲಿ ನಿಮ್ಮ ಶಕ್ತಿ ವ್ಯಯವಾಗಿರುತ್ತದೆ. ಹಣಕಾಸಿನ ಅಡಚಣೆ ಸ್ವಲ್ಪ ಮಟ್ಟಿಗೆ ತೋರಬಹುದು. ಯಾವುದೇ ದೊಡ್ಡ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತದೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ.

ಕನ್ಯಾ ರಾಶಿಯ ವಾರ ಭವಿಷ್ಯ
ಗುರುಬಲ ಶನಿಬಲ ಇದೆ. ಇದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ಬಹುದಿನಗಳಿಂದ ನಿರೀಕ್ಷಿಸಿದ್ದ ಯೋಜನೆಯೊಂದು ಈಗ ಕಾರ್ಯಗತವಾಗಿ ಮನಸ್ಸಿಗೆ ನೆಮ್ಮದಿ ಮತ್ತು ಹರ್ಷ ತಂದುಕೊಡುತ್ತದೆ. ಹಣದ ಹರಿವು ಉತ್ತಮವಾಗಿದೆ. ಹತ್ತನೇ ಮನೆಯಲ್ಲಿ ಶುಕ್ರ ಬುಧ ಸೂರ್ಯ ಇದ್ದು ವೃತ್ತಿಯಲ್ಲಿ ಯಶಸ್ಸು, ವಾಹನದಿಂದ ಲಾಭ, ಬಂಧುಗಳಲ್ಲಿ ಹಿರಿಮೆ ಮುಂತಾದ ಶುಭಸಂಗತಿಗಳು ಇವೆ.

ತುಲಾ ರಾಶಿಯ ವಾರ ಭವಿಷ್ಯ
ಈಗ ರಾಹುಬಲ ನಿಮ್ಮ ಕಾಪಾಡುತ್ತದೆ. ಗುರು ಎಂಟನೇ ಮನೆಯಲ್ಲಿ ಕೊಂಚ ಅನಾರೋಗ್ಯ ಕೊಡುತ್ತಾನೆ. ಜಾಗ್ರತೆಯಿಂದ ಇರಿ. ಹಣದ ಹರಿವು ಉತ್ತಮವಾಗಿದೆ. ಕೆಲವೇ ತಿಂಗಳುಗಳಲ್ಲಿ ಶನಿ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಧನಲಾಭ, ವೃತ್ತಿಯಲ್ಲಿ ಯಶಸ್ಸು, ಸಾಮಾಜಿಕ ಗೌರವ ಎಲ್ಲವೂ ಸಿಗುತ್ತದೆ. ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗುತ್ತೀರಿ. ಆಧ್ಯಾತ್ಮಿಕ ಒಲವು ಮೂಡುತ್ತದೆ. ಸಾಧುಸಂತರ ಭೇಟಿ ಆಶೀರ್ವಾದ ಲಭಿಸುತ್ತದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಗುರುಬಲ ಇರುವುದರಿಂದ ಬೇರೆ ಏನೂ ತಲೆಕೆಡಿಸಿಕೊಳ್ಳ ಬೇಕಿಲ್ಲ. ಆದರೆ ಎಂಟನೇ ಮನೆಯಲ್ಲಿ ಶುಕ್ರ ಸೂರ್ಯ ಬುಧ ಇದ್ದಾರೆ. ಸೂರ್ಯ ಕಟಕರಾಶಿ ಗೆ ಪ್ರವೇಶವಾಗುವವರೆಗೂ ವೃತ್ತಿಯಲ್ಲಿ ಒತ್ತಡ ಇರುತ್ತದೆ. ಆಯುಷ್ಯ ಸ್ಥಾನದಲ್ಲಿ ಬುಧ ಶುಕ್ರರು ಇದ್ದು ಆಪತ್ತಿನಿಂದ ಪಾರು ಮಾಡುತ್ತಾರೆ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ವಾಹನಗಳಿಂದ ನಷ್ಟ ಇದೆ. ಐದನೇ ಮನೆಯಲ್ಲಿ ರಾಹು ಇರುವುದರಿಂದ ಗಂಡು ಮಕ್ಕಳು ಇರುವವರಿಗೆ ಕೊಂಚ ಮನಸ್ತಾಪ ಬರಬಹುದು ಅಭಿಪ್ರಾಯ ಬೇಧ ಕಂಡುಬರುತ್ತದೆ. ಹಣದ ಹರಿವು ಉತ್ತಮವಾಗಿದೆ. ಕೆಲವು ಶುಭಸಂಗತಿಗಳು ಅರಿವಿಗೆ ಬರುತ್ತದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಶನಿ ಮೂರನೇ ಮನೆಯಲ್ಲಿ ಅತಿ ಹೆಚ್ವಿನ ಧನಲಾಭ ಕೊಡುತ್ತಾನೆ. ನೀವು ಊಹಿಸದೆ ಇದ್ದ ರೀತಿಯಲ್ಲಿ ಒಂದು ದೊಡ್ಡ ಮೊತ್ತದ ಹಣ ನಿಮ್ಮ ಕೈಸೇರುತ್ತದೆ. ತಂದೆಯಿಂದ ಲಾಭ ಇದೆ. ತವರಿನಿಂದ ಸಹಾಯ ಇದೆ. ಮೂರನೇ ಮನೆಯ ಶನಿ ನಿಮ್ಮ ಜೀವನದ ಅಡೆತಡೆಗಳನ್ನು ದೂರ ಮಾಡುತ್ತಾನೆ. ಷಷ್ಠದಲ್ಲಿ ಗುರು ಇರುವುದರಿಂದ ಮಾನಸಿಕ ಚಿಂತೆ ಇರುತ್ತದೆ.ನಂಬಿಕೆ ದ್ರೋಹ ಅಪಮಾನ ಮೊದಲಾದ ಕಹಿ ಅನುಭವ ಆಗುತ್ತದೆ.

ಮಕರ ರಾಶಿಯ ವಾರ ಭವಿಷ್ಯ
ಈಗ ರಾಹುಬಲ ಗುರುಬಲ ಇದ್ದು ನಿಮಗೆ ಒತ್ತಾಸೆ ನೀಡುತ್ತದೆ. ಹಣದ ಹರಿವು ಸ್ವಲ್ಪ ಸ್ವಲ್ಪವಾಗಿ ಸುಧಾರಿಸುತ್ತದೆ. ಕೆಲವು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಹಣ ಸಂಪಾದನೆಯ ಹೊಸ ಯೋಜನೆಗಳು ನಿಮಗೆ ಹೊಳೆಯುತ್ತದೆ. ಮನೆಯಲ್ಲಿ ಮಂಗಳ ಕಾರ್ಯದ ವಾತಾವರಣ ಇರುತ್ತದೆ. ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ಮನಸ್ಸಿಗೆ ಮುದ ನೀಡುವ ಸಂಗತಿಗಳು ನಿಮಗೆ ಗೋಚರಿಸುವ ಅವಕಾಶಗಳು ಇವೆ

ಕುಂಭ ರಾಶಿಯ ವಾರ ಭವಿಷ್ಯ
ಈಗ ಐದನೇ ಮನೆಯಲ್ಲಿ ಶುಕ್ರ ಬುಧ ಸೂರ್ಯ ಇರುವುದು ನಿಮಗೆ ಈಗ ಸ್ವಲ್ಪಮಟ್ಟಿಗೆ ಸಹಾಯವಾಗುತ್ತದೆ. ಗುರುಬಲ ಇಲ್ಲವಾದರೂ ಕೆಲವು ಯೋಗಗಳು ನಿಮ್ಮನ್ನು ಕಾಪಾಡುತ್ತದೆ. ಸಾಲ ತೀರಿಸಲು ಅನುಕೂಲ ಒದಗಿ ಬರುತ್ತದೆ. ಕೆಲವೇ ತಿಂಗಳಲ್ಲಿ ಶನಿ ನಿಮ್ಮ ರಾಶಿ ಬಿಟ್ಟು ಮುಂದಕ್ಕೆ ಹೋದಾಗ ನಿಮಗೆ ಇನ್ನಷ್ಟು ಶುಭಫಲಗಳು ಸಿಗುತ್ತದೆ.

ಮೀನ ರಾಶಿಯ ವಾರ ಭವಿಷ್ಯ
ಈಗ ಗಂಭೀರ ಸಮಯವಾಗಿದ್ದರೂ ಶುಕ್ರ ಬುಧ ನಾಲ್ಕನೇ ಮನೆಯಲ್ಲಿ ಇದ್ದಾರೆ. ಒಡವೆ ವಸ್ತ್ರ ಖರೀದಿ, ವಾಹನ ಖರೀದಿ ಮೊದಲಾದ ಶುಭ ಸಂಗತಿಗಳು ಜರುಗುತ್ತದೆ. ವಾಹನದಿಂದ ಲಾಭ ಇದೆ. ಮನೆಯಲ್ಲಿ ಕೊಂಚ ಅಶಾಂತಿಯ ವಾತಾವರಣ ಇರುತ್ತದೆ. ಇದನ್ನು ದೇವರ ಧ್ಯಾನ ಪೂಜೆಯಿಂದ ನೀವೇ ಸಂಭಾಳಿಸಬಹುದು. ಯಾರಿಗೂ ಸಾಲ ಕೊಡಬೇಡಿ. ವಸೂಲಾಗುವುದು ಕಷ್ಟ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ. ಫಲಾಫಲ ದೇವರಿಗೆ ಬಿಡಿ.












Click it and Unblock the Notifications