Weekly Horoscope: ಜು.21- 27ರ ವಾರ ಭವಿಷ್ಯ: ಕನ್ಯಾ ಸೇರಿದಂತೆ ಈ ರಾಶಿಯವರ ಮೇಲೆ ಹಣದ ಮಹಾ ಮಳೆ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಹುಣ್ಣಿಮೆಯಿಂದ ಬಹುಳ ಅಷ್ಠಮಿಯವರೆಗೆ.
ಈ ವಾರದ ಚಂದ್ರನ ಸಂಚಾರ ಉತ್ತರಾಷಾಢ ನಕ್ಷತ್ರದಿಂದ ಅಶ್ವಿನಿಯವರೆಗೆ.
21/06/2024-27/07/2024ರ ವಾರ ಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜುಲೈ 21 ರಿಂದ ಜುಲೈ 27 ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಗುರುಮಂಗಳಯೋಗ, ನಾಲ್ಕರಲ್ಲಿ ಶುಕ್ರ, ಐದರಲ್ಲಿ ಬುಧ, ಆರರಲ್ಲಿ ಕೇತು ಹನ್ನೊಂದರಲ್ಲಿ ಶನಿ ಸಮಯ ಬಹಳ ಚೆನ್ನಾಗಿದೆ. ಅಧಿಕ ಧನಲಾಭ ಯೋಗ. ಸರ್ವವಿಧದಲ್ಲೂ ಅನುಕೂಲ, ವೃತ್ತಿಯಲ್ಲಿ ಯಶಸ್ಸು, ಮನೆಯಲ್ಲಿ ಶುಭ ಸಮಾರಂಭದ ಸೂಚನೆ. ನಿಮ್ಮ ಅದೃಷ್ಟದ ಬಾಗಿಲು ತೆರೆದಿದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ನೀವು ಅಂದುಕೊಂಡ ಕೆಲಸಗಳೆಲ್ಲ ಸಲೀಸಾಗಿ ಅಡೆತಡೆಗಳು ಇಲ್ಲದೆ ನಡೆಯುತ್ತದೆ.

ವೃಷಭ ರಾಶಿಯ ವಾರ ಭವಿಷ್ಯ
ಮೂರರಲ್ಲಿ ಸೂರ್ಯ, ಶುಕ್ರ ಸಹೋದರರಿಂದ ಲಾಭ ಸಹಾಯ ಲಭಿಸುತ್ತದೆ. ನಾಲ್ಕರಲ್ಲಿ ಬುಧ ಲಾಭಸ್ಥಾನದಲ್ಲಿ ರಾಹು ನಿಮಗೂ ಸಮಯ ಈಗ ಬಹಳ ಪ್ರಶಸ್ತವಾಗಿದೆ. ಹಣದ ಹರಿವು ಉತ್ತಮವಾಗಿದೆ. ನೌಕರಿಯಲ್ಲಿ ಬಡ್ತಿ, ಉನ್ನತ ವೇತನ ಸಿಗುವ ಯೋಗ ಇದೆ. ವಾಹನದಿಂದ ಲಾಭ ಇದೆ. ತಾಯಿಯಿಂದ ಅಥವಾ ತವರಿನಿಂದ ಲಾಭ ಇದೆ. ಮೂರನೇ ಮನೆಯಲ್ಲಿ ಸೂರ್ಯ ನಿಮಗೆ ಶಕ್ತಿ ಪರಾಕ್ರಮ ವನ್ನು ಕೊಡುತ್ತಾನೆ. ಕಷ್ಟಕರವಾದ ಸಮಸ್ಯೆಗಳನ್ನು ಸುಲಭವಾಗಿ ಜಯಿಸುವಂತೆ ಮಾಡುತ್ತಾನೆ.

ಮಿಥುನ ರಾಶಿಯ ವಾರ ಭವಿಷ್ಯ
ಗುರುಬಲ ಇಲ್ಲವಾದರೂ ಎರಡನೇ ಮನೆಯ ಶುಕ್ರ, ಮೂರನೇ ಮನೆಯ ಬುಧ ನಿಮ್ಮಕೈ ಹಿಡಿಯುತ್ತಾರೆ. ಸಹೋದರಿಯಿಂದ ಸಹಾಯ ಸಹಕಾರ ಲಭಿಸುತ್ತದೆ. ಎರಡನೇ ಮನೆಯಲ್ಲಿ ಶುಕ್ರ ಇರುವುದರಿಂದ ಹಣದ ಹರಿವು ಉತ್ತಮವಾಗಿದೆ. ಈಗ ನಿಮ್ಮದು ಕೊಂಚ ಹೋರಾಟದ ಜೀವನ. ಯಾವುದೇ ಕೆಲಸಕ್ಕೂ ಅರ್ಧಫಲ. ಹಣಕಾಸಿನ ಖರ್ಚು ಇದೆ. ನಿಮಗೆ ಈಗ ಸಹನೆ ಅಗತ್ಯ ಮಂತ್ರ. ಮುಂದೆ ಒಳ್ಳೆಯ ಕಾಲ ಇದೆ. ಕಾಯಬೇಕು.

ಕಟಕ ರಾಶಿಯ ವಾರ ಭವಿಷ್ಯ
ಭಾಗ್ಯಸ್ಥಾನದಲ್ಲಿ ಗುರುಮಂಗಳ ಯೋಗ ನಿಮಗೆ ಅದೃಷ್ಟವನ್ನು ತರುತ್ತದೆ. ವಿದೇಶ ಪ್ರಯಾಣ, ಧನಾಗಮನ, ಭೂಮಿ ಕೊಳ್ಳುವುದು ಮುಂತಾದ ಶುಭ ಸಂಗತಿಗಳು ಜರುಗುತ್ತವೆ. ನಿಮ್ಮ ರಾಶಿಯಲ್ಲೇ ಶುಕ್ರ ಇರುವುದು ನಿಮ್ಮ ಮನಸ್ಸಿಗೆ ಉತ್ಸಾಹ ಆನಂದವನ್ನು ತರುತ್ತದೆ. ಎರಡನೇ ಮನೆಯಲ್ಲಿ ಬುಧ ಸಹ ನಿಮಗೆ ಅನುಕೂಲ ಮಾಡಿಕೊಡುತ್ತಾನೆ. ಒಟ್ಟಾರೆಯಾಗಿ ನಿಮಗೆ ಈವಾರ ಶುಭಫಲಗಳು ಹೆಚ್ಚು ಇವೆ.

ಸಿಂಹ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಸಂಕಷ್ಟ ಕಾಲ. ಯಾವುದೋ ಸಮಯದಿಂದ ಹೊಂಚು ಹಾಕಿ ಕಾದಿದ್ದ ತೊಂದರೆಗಳೆಲ್ಲ ಈಗ ಧುತ್ತನೆ ಎದ್ದು ನಿಲ್ಲುತ್ತದೆ. ನೀವು ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ವಹಿಸಬೇಕು. ನೀವು ಯಾವ ನಿರ್ಧಾರ ತೆಗೆದುಕೊಂಡರೂ ಅದು ತಿರುಗು ಮುರುಗಾಗುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಒತ್ತಡಗಳು ಇವೆ. ಹಣಕಾಸಿನ ಸಂಕಷ್ಟ ಎದುರಾಗುತ್ತದೆ. ನೀವು ಈಗ ವಿವೇಚನೆ ಮತ್ತು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು.

ಕನ್ಯಾ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಬಹಳ ಅನುಕೂಲಕರ ಸಮಯ. ನೀವು ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ ಯಶಸ್ಸು ನಿಮ್ಮದಾಗುತ್ತದೆ. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ನೀವು ಹೂಡಿದ್ದ ಹೂಡಿಕೆಗಳಲ್ಲಿ ಲಾಭ ಪಡೆಯುತ್ತೀರಿ. ಉನ್ನತ ಅಧಿಕಾರ ಪ್ರಾಪ್ತಿ ಇದೆ. ನೌಕರಿಯಲ್ಲಿ ಬಡ್ತಿ ಪಡೆಯುತ್ತೀರಿ. ಹಣಕಾಸಿನ ಸ್ಥಿತಿ ಸುಗಮವಾಗಿದೆ. ಸಾಮಾಜಿಕ ಮನ್ನಣೆ ಗೌರವ ಸಿಗುತ್ತದೆ.

ತುಲಾ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇಲ್ಲದಿದ್ದರೂ ರಾಹು ಬಲ ಇದೆ. ಒಂದೆರಡು ತಿಂಗಳಲ್ಲಿ ಶನಿಸಹ ಆರನೇ ಮನೆಗೆ ಬಂದು ನಿಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸುತ್ತಾನೆ. ಈಗ ಯಾವುದೇ ವ್ಯತಿರಿಕ್ತ ಸಂಗತಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈಗ ನಿಮಗೆ ಒತ್ತಡಗಳು ಎದುರಾದರೂ ಮುಂದಿನ ದಿನಗಳಲ್ಲಿ ಎಲ್ಲವೂ ನಿಮ್ಮ ಪಾಲಿಗೆ ಅನುಕೂಲ ಆಗಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ತೆಗೆದುಕೊಳ್ಳಿ. ನಿಮ್ಮ ಸಮಸ್ಯೆಗಳು ದೂರವಾಗುವ ಕಾಲ ಹತ್ತಿರದಲ್ಲೇ ಇದೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ ನೀವು ಯಾವುದಕ್ಕೂ ಯೋಚಿಸಬೇಕಿಲ್ಲ. ಏಳನೇ ಮನೆಯಲ್ಲಿ ಮಂಗಳ ಗುರು ಇದ್ದು ಇದು ನಿಮ್ಮ ವೈಯಕ್ತಿಕ ಜೀವನದ ಹಾಗೂ ವೃತ್ತಿಜೀವನಕ್ಕೆ ಬಹಳ ಸಹಕಾರಿ ಆಗಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ಹಣದ ಹರಿವು ಉತ್ತಮವಾಗಿದೆ. ನೀವು ಬಯಸಿದ್ದ ಸಂಗತಿಗಳು ಈಗ ಈಡೇರುವ ಸಮಯ. ಅವಕಾಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿ ಉಪಯೋಗಿಸಿಕೊಳ್ಳಿ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ನಿಮಗೆ ತಣ್ಣೀರನ್ನೂ ತಣಿಸಿ ಕುಡಿಯುವ ಕಾಲ. ಕೊಂಚ ಎಚ್ಚರಿಕೆಯಿಂದ ಇರಿ.ಯಾರೊಂದಿಗೂ ವಾದವಿವಾದ ಬೇಡ. ಅದೇ ಉರುಳಾಗಿ ನಿಮ್ಮ ಕೊರಳಿಗೆ ಸುತ್ತಿಕೊಳ್ಳಬಹುದು. ಹಣಕಾಸಿಗೆ ಕೊರತೆ ಇಲ್ಲದಿದ್ದರೂ ಏನೋ ಅಸಮಾಧಾನ ಕಿರಿಕಿರಿ ಇರುತ್ತದೆ. ಆರರಲ್ಲಿ ಕುಜ ಇರುವುದು ಧೈರ್ಯ ಪರಾಕ್ರಮ ತೋರಿಸುತ್ತದೆ. ಒಂಬತ್ತರಲ್ಲಿ ಬುಧ ಇದ್ದಾನೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೊಂದುತ್ತೀರಿ. ತಾಯಿಯೊಂದಿಗೆ ಮನಸ್ತಾಪ ಇರುತ್ತದೆ. ಅಥವಾ ತಾಯಿಯಿಂದ ದೂರ ಇರುತ್ತೀರಿ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಗುರುಬಲ ರಾಹುಬಲ ಎರಡೂ ಇದೆ. ಅವಕಾಶಗಳು ನಿಮ್ಮನ್ನು ಹುಡುಕಿ ಬರುವ ಕಾಲ. ಏಳನೇ ಮನೆಯಲ್ಲಿ ಶುಕ್ರ ಸೂರ್ಯ ಇರುವುದು ಪ್ರೀತಿಪಾತ್ರ ರೊಂದಿಗೆ ಅಸಮಾಧಾನ ತೋರಿಸುತ್ತದೆ. ಆದರೂ ನೀವೂ ಕೂಡ ಕೊಂಚ ಸೋಲಬೇಕು. ನಿಮ್ಮ ಪ್ರೀತಿ ಪಾತ್ರರಿಗೆ ಸಮಯ ಕೊಡಬೇಕು. ಹಣದ ಹರಿವು ಉತ್ತಮವಾಗಿದೆ. ಹೊಸ ಕೆಲಸ, ಬಡ್ತಿ ಅರ್ಹರಿಗೆ ವಿವಾಹಯೋಗ ಮುಂತಾದ ಶುಭಫಲಗಳು ಇವೆ.

ಕುಂಭ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಹೂವೂ ಹಾವಾಗುವ ಕಾಲ. ಯಾರನ್ನೂ ಅತಿಯಾಗಿ ನಂಬಬೇಡಿ. ಯಾರಲ್ಲೂ ನಿಮ್ಮ ವೈಯುಕ್ತಿಕ ರಹಸ್ಯಗಳನ್ನು ಹೇಳಿಕೊಳ್ಳಬೇಡಿ. ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಜನ ಇದ್ದಾರೆ. ನಿಮ್ಮ ಮಾತೇ ನಿಮಗೆ ವಿರೋಧವಾಗಬಹುದು. ಯಾರೊಂದಿಗೂ ಅನಗತ್ಯ ಚರ್ಚೆ ಬೇಡ. ಹಣದ ಹರಿವು ಮಧ್ಯಮವಾಗಿದೆ. ನಾನಾರೀತಿಯ ಸಿಕ್ಕುಗಳು ನಿಮ್ಮ ಮುಂದೆ ಇದೆ. ದಾರಿ ಕಾಣದಂತ ಪರಿಸ್ಥಿತಿ. ತಾಳ್ಮೆಯಿಂದ ಸಿಕ್ಕುಗಳನ್ನು ಬಿಡಿಸಿಕೊಂಡು ಮುಂದಡಿ ಇಡಿ.

ಮೀನ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ರಾಹು ಇದ್ದಾನೆ ಆರೊಗ್ಯದ ಬಗ್ಗೆ ಹೆಚ್ಚಿನ ಕಾಳಜಿಇರಲಿ. ಮೂರನೇ ಮನೆಯಲ್ಲಿ ಕುಜ ಇರುವುದು ನಿಮಗೆ ಶಕ್ತಿ ಸಾಮರ್ಥ್ಯ ವನ್ನು ಕೊಡುತ್ತದೆ. ಮೂರನೇ ಮನೆಯ ಗುರುವಿನಿಂದ ಅರ್ಧ ಬಲ. ಸಾಡೆಸಾತಿ ಶನಿಯ ಪ್ರಭಾವ ಇರುವುದರಿಂದ ಎಲ್ಲ ಕೆಲಸಗಳೂ ನಿಧಾನ. ಪ್ರಯತ್ನ ಜಾಸ್ತಿ ಫಲ ಕಡಿಮೆ. ಹಣದ ಹರಿವೂ ಕೂಡ ನೀವು ಬಯಸಿದ ಪ್ರಮಾಣದಲ್ಲಿ ಇಲ್ಲ. ಸಹನೆ ಈಗ ಬಹಳ ಮುಖ್ಯ. ಯಾರ ಉಸಾಬರಿ ಈಗ ನಿಮಗೆ ಬೇಡ. ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಿ. ದತ್ತಾತ್ರೇಯ ಸ್ತೋತ್ರ ಹೇಳಿಕೊಳ್ಳಿ.












Click it and Unblock the Notifications