ರಷ್ಯಾ - ಉಕ್ರೇನ್ ಸಮರ: ನಾಸ್ಟ್ರಾಡಾಮಸ್ ಭವ್ವಿಷ್ಯದಲ್ಲಿ ಉಲ್ಲೇಖ
ಈ ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದಲ್ಲಿ ಭಾರೀ ಪ್ರಮಾಣದಲ್ಲಿ ಸಾವುನೋವು ಸಂಭವಿಸಿದೆ. ನ್ಯಾಟೋ ಮತ್ತು ಅಮೆರಿಕಾ ಪಡೆಗಳ ಬೆಂಬಲ ನಿರೀಕ್ಷಿಸಿದ್ದ ಉಕ್ರೇನಿಗೆ ಹಿನ್ನಡೆಯಾಗಿದೆ.
ಇದರಿಂದಾಗಿ, ಯುದ್ದ ಆರಂಭವಾದ ಕೆಲವೇ ದಿನಗಳಲ್ಲಿ ಸಂಧಾನದ ಪ್ರಸ್ತಾವನೆಯನ್ನು ಉಕ್ರೇನ್ ಮುಂದಿಟ್ಟಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ರಷ್ಯಾದ ನಡೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದರೂ, ವ್ಲಾಡಿಮಿರ್ ಪುಟಿನ್ ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ.
ವಿಶ್ವದ ಈ ಅಶಾಂತಿಯ ಸನ್ನಿವೇಶ ಮತ್ತು ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರದ ಬಗ್ಗೆ ನಾಸ್ಟ್ರಾಡಾಮಸ್ ತಮ್ಮ ಭವಿಷ್ಯದಲ್ಲಿ (ಇಸವಿ 1555) ಉಲ್ಲೇಖಿಸಿದ್ದರು ಎನ್ನುವ ಮಾತು ಚಾಲ್ತಿಯಲ್ಲಿದೆ. ಕೋಡಿಮಠದ ಶ್ರೀಗಳು ಎರಡು ವರ್ಷದ ಹಿಂದೆ ನುಡಿದಿದ್ದ ಭವಿಷ್ಯವನ್ನೂ ಇದಕ್ಕೆ ತಾಳೆ ಹಾಕಲಾಗುತ್ತಿದೆ.
ಈ ಹಿಂದೆ ವಿಶ್ವದಲ್ಲಿ ನಡೆದ ಹಲವು ದುರ್ಘಟನೆಗಳನ್ನು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯದಲ್ಲಿ ಹೇಳಿದ್ದರು ಎನ್ನುವ ಮಾತು ಘಟನೆ ಸಂಭವಿಸಿದ ನಂತರ ಕೇಳಿ ಬರುತ್ತಿತ್ತು. ಈಗ, ರಷ್ಯಾ ಮತ್ತು ಉಕ್ರೇನ್ ಭೀಕರ ಸಮರದ ಸರದಿ.

ಫ್ರೆಂಚ್ ಪ್ರಾಚೀನ ಔಷಧ ವ್ಯಾಪಾರಿ ನಾಸ್ಟ್ರಾಡಾಮಸ್
ಮೈಕೆಲ್-ಡೆ- ನಾಸ್ಟ್ರೆಡೇಮ್ ಹೆಸರಿನ ಮತ್ತು ಸಾಮಾನ್ಯವಾಗಿ ಲ್ಯಾಟಿನಾ ನಾಸ್ಟ್ರಡಮಸ್ ಒಬ್ಬ ಫ್ರೆಂಚ್ ಪ್ರಾಚೀನ ಔಷಧ ವ್ಯಾಪಾರಿ ಮತ್ತು ಹೆಸರಾಂತ ಕಾಲಜ್ಞಾನಿ. ಈತನ ಹಲವು ಸಿದ್ದಾಂತ ಮತ್ತು ಭವಿಷ್ಯವನ್ನು ನಂಬುವವರ ವಿಶ್ವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ವಿಶ್ವದ ಪ್ರಸಿದ್ದ ಘಟನೆ ಮತ್ತು ಆಗುಹೋಗುಗಳ ಬಗ್ಗೆ ಜನರು ಆಕರ್ಷಿತರಾಗಿರುವದರಿಂದ ಇವರ ಭವಿಷ್ಯವು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪದ್ಯದ ಸಾಲುಗಳ ಮೂಲಕ ನಾಸ್ಟ್ರಾಡಾಮಸ್ ಭವಿಷ್ಯವನ್ನು ಉಲ್ಲೇಖಿಸುತ್ತಾರೆ ಎಂದು ಹೇಳಲಾಗುತ್ತಿದೆ.

ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ, ಲಂಡನ್ ನಲ್ಲಿ ಭಾರೀ ದುರಂತ
1566ರಲ್ಲಿ ಇಹಲೋಕ ತ್ಯಜಿಸಿದ್ದ ನಾಸ್ಟ್ರಾಡಾಮಸ್ ಇವರ ಭವಿಷ್ಯವನ್ನು ಜಗತ್ತಿನ ಪ್ರಮುಖ ಆಗುಹೋಗುಗಳಿಗೆ ತಾಳೆ ಹಾಕಲಾಗುತ್ತದೆ. ಈ ಹಿಂದೆ, ಅಡಾಲ್ಫ್ ಹಿಟ್ಲರ್, ನೆಪೋಲಿಯನ್ ಜನನ, ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ, ಲಂಡನ್ ನಲ್ಲಿ ಭಾರೀ ಅಗ್ನಿ ದುರಂತ,ಜಾನ್ ಎಫ್ ಕೆನಡಿ ಸಾವಿನ ಬಗ್ಗೆಯೂ ನಾಸ್ಟ್ರಾಡಾಮಸ್ ತಮ್ಮ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತಿತ್ತು. ಸುಮಾರು 450 ವರ್ಷಗಳ ಹಿಂದಿನ ಭವಿಷ್ಯ ಇದಾಗಿದೆ.

ಯುಕ್ರೇನ್-ರಷ್ಯಾ ಯುದ್ದದ ಬಗ್ಗೆ ಪುಸ್ತಕದಲ್ಲಿ ಹೇಳಲಾಗಿದೆ
ಯುರೋಪ್ ಭಾಗದಲ್ಲಿ ಅಶಾಂತಿ ಎದುರಾಗಲಿದೆ ಎಂದು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯದಲ್ಲಿ ಉಲ್ಲೇಖಿಸಿದ್ದಾರೆ. ಯುದ್ದದ ಪರಿಸ್ಥಿತಿ ಅ ಭಾಗದಲ್ಲಿ ಎದುರಾಗಲಿದೆ ಎಂದು ಭವಿಷ್ಯದಲ್ಲಿ ಹೇಳಲಾಗಿದೆ. 942 ಮುನ್ಸೂಚನೆಯ ಒಳಗೊಂಡ ಲೆಸ್ ಪ್ರೊಫೆಟೀಸ್ ಎನ್ನುವ ಪುಸ್ತಕದಲ್ಲಿ ಯುಕ್ರೇನ್-ರಷ್ಯಾ ಯುದ್ದದ ಬಗ್ಗೆ ಪುಸ್ತಕದಲ್ಲಿ ಹೇಳಲಾಗಿದೆ ಎನ್ನುವ ಸುದ್ದಿ ಈಗ ಭರ್ಜರಿಯಾಗಿ ಹರಿದಾಡುತ್ತಿದೆ.

ಭೂಮಿ ನಾಶವಾಗಲು 37972 ಇಸವಿ ಆಗಬಹುದು
ಮೂರನೇ ಮಹಾಯುದ್ದ, ವಿಶ್ವದ ಇತರ ಭಾಗಗಳಲ್ಲಿ ಭೂಕಂಪ, ಆಂಟಿಕ್ರೈಸ್ಟ್ ಬಗ್ಗೆಯೂ ಭವಿಷ್ಯದಲ್ಲಿ ಉಲ್ಲೇಖವಾಗಿದೆ. ಭೂಮಿ ನಾಶವಾಗಲು 37972 ಇಸವಿ ಆಗಬಹುದು, ಯೆಲ್ಲೋಸ್ಟೋನ್ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಪೋಟ ಸೇರಿದಂತೆ ಹಲವು ವಿಚಾರವನ್ನು ನಾಸ್ಟ್ರಾಡಾಮಸ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಒಟ್ಟಿನಲ್ಲಿ ವಿಶ್ವದ ಪ್ರಮುಖ ಘಟನೆಯ ನಂತರ ನಾಸ್ಟ್ರಾಡಾಮಸ್ ಭವಿಷ್ಯ ಮುನ್ನಲೆಗೆ ಬರುತ್ತಿದೆ.












Click it and Unblock the Notifications