Spies Story: ಉಕ್ರೇನ್-ರಷ್ಯಾ ಯುದ್ಧ ತಡೆಯಲು ಪ್ರಯತ್ನಿಸಿದ ಗೂಢಚಾರಿಗಳ ರೋಚಕ ಕಥೆ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಅನೇಕರು ನಿಬ್ಬೆರಗಾಗಿದ್ದರು. ಅಲ್ಲದೇ, ಇಷ್ಟು ದಿನಗಳಾದರೂ ಯುದ್ಧ ಸಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಒಂದೇ ವಾರದಲ್ಲಿ, ಅಥವಾ ಹೆಚ್ಚೆಂದರೆ ಎರಡು ವಾರದಲ್ಲಿ ಉಕ್ರೇನ್ ದೇಶವನ್ನು ರಷ್ಯಾ ಸಂಪೂರ್ಣವಾಗಿ ವಶಪಡಿಸಿಕೊಳ್ಳುತ್ತದೆ ಎಂದು ಎಣಿಸಿದವರೇ ಹೆಚ್ಚು. ಆದರೆ, ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಉಕ್ರೇನ್ ದೇಶದ ವೀರ ಸೈನಿಕರು ಮತ್ತು ಜನಸಾಮಾನ್ಯರು ತಮ್ಮ ಜೀವ ಲೆಕ್ಕಿಸದೆ ರಷ್ಯನ್ನರನ್ನ ಇದಿರುಗೊಂಡು ಹೋರಾಡುತ್ತಿದ್ದಾರೆ.

ಇದರ ಮಧ್ಯೆ, ಉಕ್ರೇನ್ ದೇಶವನ್ನು ರಷ್ಯಾ ಆಕ್ರಮಿಸುವ ಸುಳಿವನ್ನು ಅಮೆರಿಕ ಮತ್ತು ಬ್ರಿಟನ್ ದೇಶದ ಗುಪ್ತಚರರು ನೀಡಿದ್ದರು. ಆದರೆ, ಗೂಢಚಾರಿಗಳ ಮಾತನ್ನು ಸಂಪೂರ್ಣವಾಗಿ ನಂಬುವ ಪರಿಸ್ಥಿತಿಯಲ್ಲಿ ಇದ್ದವರು ಕಡಿಮೆಯೇ. ಯುದ್ಧ ರಹಸ್ಯವನ್ನು ಜತನದಿಂದ ಕಾಪಾಡಬೇಕಾದ ಗೂಢಚಾರಿಗಳು ಯುದ್ಧವನ್ನು ತಡೆಯುವ ಸಲುವಾಗಿ ರಹಸ್ಯ ವರದಿಗಳನ್ನ ಸೋರಿಕೆ ಮಾಡುವ ಪ್ರಸಂಗ ಬಂದಿದ್ದು ಬಹಳ ರೋಚಕ ಕಥೆಯಾಗಿದೆ.

ಗುಪ್ತಚರರ ಮಾತುಗಳನ್ನು ನಂಬುವ ಸ್ಥಿತಿ ಇರಲಿಲ್ಲ:
ಕೆಲ ತಿಂಗಳ ಹಿಂದೆಯೇ ಅಮೆರಿಕ ಮತ್ತು ಬ್ರಿಟನ್ ದೇಶದ ಗೂಢಚಾರಿಗಳು ರಷ್ಯಾದ ಸಮರ ತಯಾರಿ ಬಗ್ಗೆ ಸುಳಿವುಗಳನ್ನು ನೀಡುತ್ತಲೇ ಬಂದಿದ್ದರು. ಆದರೆ, ಅವರ ಈ ಮಾತನ್ನು ಯಾರೂ ನಂಬುವ ಗೋಜಿಗೆ ಹೋಗಲಿಲ್ಲವಂತೆ. ಫೆಬ್ರವರಿ 24ರಂದು ಬೆಳ್ಳಂಬೆಳಗ್ಗೆಯೇ ರಷ್ಯಾವನ್ನು ಉಕ್ರೇನ್ ಮೇಲೆ ಆಕ್ರಮಣ ಮಾಡಿತು. ಈ ಘಟನೆಗೆ ಕೆಲ ದಿನಗಳ ಹಿಂದಿನಿಂದಲೂ ಗುಪ್ತಚರ ಸಿಬ್ಬಂದಿತೆ ತಳಮಳ. ರಷ್ಯನ್ ಸೇನೆ ಬೆಳಗ್ಗೆಯೇ ಆಕ್ರಮಣ ಮಾಡುತ್ತದೆ ಎಂಬ ವರ್ತಮಾನ ಅವರಿಗೆ ಸಿಕ್ಕಿತ್ತು. ಹೀಗಾಗಿ, ದಿನ ರಾತ್ರಿ ಬಹಳ ಬೇಗ ಮಲಗಿ ಬೆಳಗ್ಗೆ ಬೇಗ ಏಳುತ್ತಿದ್ದರು ಈ ಗೂಢಚಾರಿಗಳು. ಫೆಬ್ರವರಿ 24ರಂದ ರಷ್ಯಾದಿಂದ ಆಕ್ರಮಣ ನಡೆದೇ ಹೋಗಿತ್ತು.

American and Britain Spies Attempts to Stop Russian Aggression on Ukraine

ಅಮೆರಿಕನ್ ಗುಪ್ತಚರರ ಮಾತನ್ನ ಯಾಕೆ ನಂಬಲಿಲ್ಲ?
ಅಮೆರಿಕ ಮತ್ತು ಬ್ರಿಟನ್ ದೇಶಗಳ ಗುಪ್ತಚರರು ಸೇರಿ ಒಟ್ಟಿಗೆ ಗೂಢಚಾರಿಕೆ ಕಾರ್ಯಾಚರಣೆ ನಡೆಸುತ್ತಾರೆ. ತಿಂಗಳು ಮೊದಲೇ ಇವರಿಗೆ ರಷ್ಯನ್ ಆಕ್ರಮಣದ ಬಗ್ಗೆ ಮಾಹಿತಿ ಬಂದಿತ್ತಾದರೂ ಅದನ್ನು ನಂಬುವ ಸ್ಥಿತಿಯಲ್ಲಿ ಇತರ ಮಿತ್ರ ದೇಶಗಳು ಇರಲಿಲ್ಲ. ಇದಕ್ಕೆ ಕಾರಣ ಇರಾಕ್ ಯುದ್ಧದ ಕರಿನೆರಳು. ಇರಾಕ್ ದೇಶದ ಮೇಲೆ ಅಮೆರಿಕ ಆಕ್ರಮಣ ಮಾಡಿತ್ತು. ಆ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ಗುಪ್ತಚರರನ್ನು ರಾಜಕೀಯವಾಗಿ ಬಳಕೆ ಮಾಡಲಾಯಿತು. ಅಂದರೆ, ಇರಾಕ್ ದೇಶದಲ್ಲಿ ರಾಸಾಯನಿಕದಂಥ ಅಪಾಯಕಾರಿ ಶಸ್ತ್ರಾಸ್ತ್ರಗಳಿವೆ ಎಂದು ಗುಪ್ತಚರರು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಇರಾಕ್ ಮೇಲೆ ಆಕ್ರಮಣ ಮಾಡಲಾಯಿತು ಎಂಬುದು ಅಮೆರಿಕದ ಸಮರ್ಥನೆಯಾಗಿತ್ತು. ಆದರೆ, ಇರಾಕ್‌ನಲ್ಲಿ ಅಂಥ ರಾಸಾಯನಿಕ ಅಸ್ತ್ರಗಳು ಸಿಗಲಿಲ್ಲ. ಈ ಬೆಳವಣಿಗೆ ಬಳಿಕ ಅಮೆರಿಕ ಮತ್ತು ಬ್ರಿಟನ್ ದೇಶಗಳ ಗುಪ್ತಚರ ವರದಿಗಳ ವಿಶ್ವಾಸಾರ್ಹತೆ ಕಡಿಮೆ ಆಯಿತು ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಬಹುದು ಎಂದು ಗುಪ್ತಚರರ ಹೇಳಿದ್ದರೂ ಫ್ರಾನ್ಸ್ ಮೊದಲಾದ ದೇಶಗಳ ಅಧಿಕಾರಿಗಳು ನಂಬುವುದು ಕಷ್ಟವಾಯಿತು.

ಇದಷ್ಟೇ ಅಲ್ಲ, ಯೂರೋಪ್ ಖಂಡದಲ್ಲಿ ಈ 21ನೇ ಶತಮಾನದಲ್ಲಿ ಒಂದು ಯುದ್ಧ ಸಂಭವಿಸಬಹುದು ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಆರ್ಥಿಕವಾಗಿ ಬೆಳವಣಿಗೆ ಮೇಲೆ ಗಮನ ಹರಿಸುವ ದೇಶಗಳು ಯುದ್ಧಕ್ಕೆ ಮನಸು ಮಾಡುವುದಿಲ್ಲ ಎಂದೇ ಯೂರೋಪಿಯನ್ನರು ಭಾವಿಸಿದ್ದರು. ಹೀಗಾಗಿ, ರಷ್ಯನ್ ಆಕ್ರಮಣದ ಸಾಧ್ಯತೆಯನ್ನ ಬಹುತೇಕರು ಹೆಚ್ಚು ಗಂಭೀರವಾಗಿ ಯೋಚಿಸದೇ ಹೋಗಿದ್ದಿರಬಹುದು ಎಂಬ ಅಭಿಪ್ರಾಯ ಇದೆ.

American and Britain Spies Attempts to Stop Russian Aggression on Ukraine

ವರ್ಷದ ಹಿಂದೆಯೇ ಸುಳಿವು:
ಒಂದು ವರ್ಷದ ಹಿಂದೆ ಉಕ್ರೇನ್ ಬಳಿ ರಷ್ಯಾ ಸೇನಾ ನಿಯೋಜನೆ ಮಾಡಲು ಆರಂಭಿಸಿತು. ಸೆಟಿಲೈಟ್ ಇಮೇಜ್ ಮೂಲಕ ಇದು ಗೋಚರಿಸಿತು. ಆದರೆ, ಸೇನಾ ನಿಯೋಜನೆ ಹಿಂದೆ ರಷ್ಯಾದ ಉದ್ದೇಶ ಏನೆಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಕಾಲ ಕಳೆದಂತೆ ಇದು ಸ್ಪಷ್ಟ ರೂಪ ಪಡೆಯತೊಡಗಿತು. ಈ ಹಂತದಲ್ಲಿ ಗುಪ್ತಚರರು ಮತ್ತು ಅಮೆರಿಕ ಸರಕಾರ ಯುದ್ಧ ತಡೆಯುವ ವಿವಿಧ ಪ್ರಯತ್ನಗಳನ್ನು ಆರಂಭಿಸಿದ್ದರು.

ಉದ್ದೇಶಪೂರ್ವಕವಾಗಿ ರಹಸ್ಯ ಸೋರಿಕೆ:
ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡುವುದು ಸನ್ನಿಹಿತವಾಗುತ್ತಿರುವಂತೆಯೇ ಅದನ್ನ ತಡೆಯಲು ಗುಪ್ತಚರರು ತಮ್ಮದೇ ಪ್ರಯತ್ನ ಮಾಡಿದರು. ರಹಸ್ಯ ಮಾಹಿತಿಯನ್ನ ಎಷ್ಟು ಬೇಕೋ ಅಷ್ಟು ಸಾರ್ವತ್ರಿಕಗೊಳಿಸಿದರೆ ರಷ್ಯಾದ ದುಃಸ್ಸಾಹಸವನ್ನು ತಡೆಯಬಹುದು ಎಂಬ ಎಣಿಕೆ ಇತ್ತು.

American and Britain Spies Attempts to Stop Russian Aggression on Ukraine

ಅದರಂತೆ ವಿವಿಧ ದೇಶಗಳಿಗೆ ಗುಪ್ತಚರರ ರಹಸ್ಯ ಮಾಹಿತಿಯನ್ನು ಡೀಕ್ಲಾಸಿಫೈ ಮಾಡಲಾಯಿತು. ಮಾಧ್ಯಮಗಳಲ್ಲಿ ಗುಪ್ತಚರ ಮಾಹಿತಿ ಅನುಸಾರ ವರದಿಗಳು ಪ್ರಕಟವಾದವು. ರಷ್ಯಾದ 1,75,000 ಸಂಖ್ಯೆಯ ಸೈನಿಕರು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಸಜ್ಜಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಉಕ್ರೇನ್ ದೇಶದಲ್ಲಿ ತನ್ನ ಪರವಾದ ಸರಕಾರವನ್ನು ಸ್ಥಾಪಿಸುವುದು ರಷ್ಯಾದ ಉದ್ದೇಶವಾಗಿತ್ತು. ಹೀಗಾಗಿ, ಉಕ್ರೇನ್‌ನಲ್ಲಿ ಝೆಲೆನ್‌ಸ್ಕೀ ಸರಕಾರವನ್ನು ಇಳಿಸಿ ತನ್ನ ಕೈಗೊಂಬೆಯಾಗಿ ಕಾರ್ಯನಿರ್ವಹಿಸುವ ನಿರ್ದಿಷ್ಟ ವ್ಯಕ್ತಿಗಳನ್ನು ಅಧಿಕಾರಕ್ಕೆ ಸ್ಥಾಪಿಸುವ ಯೋಜನೆಯನ್ನ ರಷ್ಯಾ ಹಾಕಿಕೊಂಡಿತ್ತು ಎಂದು ಹೇಳುವ ವರದಿ ಬಹಿರಂಗವಾಯಿತು. ಉಕ್ರೇನ್ ದೇಶದಲ್ಲಿ ಉಕ್ರೇನಿಗರಿಂದ ನರಮೇಧ ನಡೆದಿದೆ ಎಂದು ರಷ್ಯಾ ಹೇಳುವುದು ಕಟ್ಟುಕಥೆ. ಅಂಥ ಯಾವುದೇ ಘಟನೆ ಆಗಿಲ್ಲ ಎಂಬ ವಿಚಾರವನ್ನು ಸಾರ್ವತ್ರಿಕಗೊಳಿಸಲಾಯತು.

ಹೀಗೆ ರಷ್ಯಾದ ಉದ್ದೇಶವನ್ನು ಅನಾವರಣಗೊಳಿಸುವ ವರದಿಗಳಿಂದಾಗಿ ರಷ್ಯಾದ ಆಕ್ರಮಣಕ್ಕೆ ಜನಬೆಂಬಲ ಮತ್ತು ದೇಶಗಳ ಬೆಂಬಲ ಸಿಗುವ ಸಾಧ್ಯತೆ ಕಡಿಮೆ ಎಂದು ನಂಬಲಾಗಿತ್ತು.

ಕಳೆದ ನವೆಂಬರ್ ತಿಂಗಳಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಅವರು ಮಾಸ್ಕೋಗೆ ತೆರಳಿದ್ದರು. ರಷ್ಯಾದ ಯುದ್ಧೋದ್ದೇಶ ತನಗೆ ಗೊತ್ತಿದೆ ಎಂದು ರಷ್ಯಾಗೆ ಮನದಟ್ಟು ಮಾಡಿ ಎಚ್ಚರಿಸಿದ್ದರು. ಇದರಿಂದಲಾದರೂ ರಷ್ಯಾ ತನ್ನ ಆಕ್ರಮಣಕಾರಿ ನಡೆಯನ್ನ ಕೈಬಿಡಬಹುದು ಎಂಬ ಎಣಿಕೆ ಇತ್ತು. ಆದರೆ ಕೊನೆಗೆ ಆಗಬೇಕಾದ್ದೇ ಆಗಿದ್ದು.

American and Britain Spies Attempts to Stop Russian Aggression on Ukraine

ರಷ್ಯಾಗೆ ಯುದ್ಧ ಅನಿವಾರ್ಯವಾಗಿತ್ತಾ?
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುವುದನ್ನು ಬಹಳ ರಹಸ್ಯವಾಗಿ ಇಟ್ಟುಕೊಂಡಿತ್ತು. ಉಕ್ರೇನ್ ದೇಶವನ್ನು ರಷ್ಯಾ ಹಿಡಿತಕ್ಕೆ ತಂದಿಟ್ಟುಕೊಳ್ಳುವುದು ಪುಟಿನ್ ಉದ್ದೇಶವಾಗಿತ್ತು. ಬಹಳ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸುವುದು ಅನಿವಾರ್ಯ ಎಂಬುದು ಪುಟಿನ್ ಎಣಿಕೆ. ಉಕ್ರೇನ್ ಅನ್ನು ಹಿಡಿತಕ್ಕೆ ತರಲು ಮಾತುಕತೆಯಿಂದ ಸಾಧ್ಯವಿಲ್ಲ, ಬಲ ಪ್ರಯೋಗದಿಂದ ಮಾತ್ರ ಸಾಧ್ಯ ಎಂದು ರಷ್ಯಾ ನಂಬಿತ್ತು. ಈಗ ವಿಳಂಬ ಮಾಡಿದಷ್ಟೂ ಕಷ್ಟವಾಗುತ್ತದೆ. ಇದೇ ಸರಿಯಾದ ಸಂದರ್ಭ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾವಿಸಿದ್ದರು.

ಹೀಗಾಗಿ, ತನ್ನ ಆಕ್ರಮಣದ ವಿಚಾರದ ಬಗ್ಗೆ ಶತ್ರುದೇಶಗಳ ಗುಪ್ತಚರರು ಸುಳಿವು ಹಿಡಿದರೂ ರಷ್ಯಾ ತನ್ನ ಆಕ್ರಮಣ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ ಎನ್ನಲಾಗಿದೆ.

ಉಕ್ರೇನ್ ಪ್ರತಿರೋಧ ಅನಿರೀಕ್ಷಿತ:
ಉಕ್ರೇನ್ ಮೇಲೆ ತಾನು ನುಗ್ಗಿದಾಗ ಹೆಚ್ಚು ಪ್ರತಿರೋಧ ಎದುರಾಗುವುದಿಲ್ಲ. ಬದಲಾಗಿ ಭರ್ಜರಿ ಸ್ವಾಗತ ಸಿಗುತ್ತದೆ ಎಂದು ರಷ್ಯಾ ಲೆಕ್ಕ ಹಾಕಿತ್ತು. ವಿಪರ್ಯಾಸ ಎಂದರೆ ಅಮೆರಿಕ ಮತ್ತು ಬ್ರಿಟನ್ ಗುಪ್ತಚರರೂ ಕೂಡ ಉಕ್ರೇನ್ ಒಂದೆರಡು ವಾರದಲ್ಲಿ ರಷ್ಯಾದ ವಶವಾಗಿಬಿಡಬಹುದು ಎಂದು ಅಂದಾಜಿಸಿದ್ದರು. ಆದರೆ, ಉಕ್ರೇನ್ ದೇಶದ ವೀರ ಯೋಧರು ಮತ್ತು ಜನಸಾಮಾನ್ಯರು ಅಸಾಮಾನ್ಯವೆನಿಸುವ ಪ್ರತಿರೋಧವನ್ನು ರಷ್ಯನ್ ಸೈನಿಕರ ಮುಂದೊಡ್ಡಿದ್ದಾರೆ. ಆರೇಳು ವಾರಗಳಾದರೂ ರಷ್ಯಾ ಪರದಾಟ ನಡೆಸಿದೆ. ಉಕ್ರೇನ್ ಮಿಲಿಟರಿ ನಿರೀಕ್ಷೆ ಮೀರಿದ ಯಶಸ್ಸು ಗಳಿಸಿದರೆ, ರಷ್ಯಾದ ಸೇನೆಗೆ ಒಂದು ರೀತಿಯಲ್ಲಿ ದೊಡ್ಡ ಹಿನ್ನಡೆಯೂ ಆಗಿದೆ.

ಗುಪ್ತಚರರು ಎಷ್ಟೇ ಬಲವಾಗಿದ್ದರೂ ಎಲ್ಲವನ್ನೂ ಸರಿಯಾಗಿ ಅಂದಾಜು ಮಾಡಲು ಸಾಧ್ಯವಿಲ್ಲ ಎಂಬುದು ಇದರಿಂದ ವೇದ್ಯವಾಗುವ ಅಂಶ. ಕುತೂಹಲವೆಂದರೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಗುಪ್ತಚರರು ಅಂದಾಜು ಮಾಡುವುದನ್ನೂ ಬಿಟ್ಟಿದ್ದಾರೆ.

ಮಾಹಿತಿ ಕೃಪೆ: ಬಿಬಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+